ಪುಸ್ತಕದ ಶೀರ್ಷಿಕೆ : ಮಿಂಚಿನಿಂದಿಳಿದ ಮೋಹನಾಂಗಿ
ಲೇಖಕರು : ಹೆಚ್. ಜಿ. ರಾಧಾದೇವಿ
ಪ್ರಕಾಶಕರು : ಕೀರ್ತಿ ಪ್ರಕಾಶನ
ಪ್ರಥಮ ಮುದ್ರಣ : 2010
ಪುಟಗಳು : 112
ಬೆಲೆ : 60 ರೂ.
ಹೆಚ್. ಜಿ. ರಾಧಾದೇವಿಯವರ ಸಾಮಾಜಿಕ ಕಾದಂಬರಿಗಳನ್ನು ಮಾತ್ರ ಓದಿದ್ದ ನನಗೆ ಅವರ ಪೌರಾಣಿಕ ಕಾದಂಬರಿಗಳ ಕುರಿತು ಗೊತ್ತಿತ್ತು. ಆದರೆ, ಈ ಕಥಾ ಸಂಕಲನ ಬಹಳ ವಿಭಿನ್ನವಾಗಿ ಮನಸಲ್ಲಿಳಿಯಿತು. ಅವರು ಜಾನಪದ ಕಥೆಗಳ ಸಂಗ್ರಾಹಕಿಯಾಗಿ ಕೆಲಸ ಮಾಡಿದ್ದು.. ಆ ಕಥೆಗಳನ್ನು ಓದುಗರಿಗೆ ಚೆಂದವಾಗಿ ಕಟ್ಟಿಕೊಟ್ಟಿದ್ದಾರೆ. ಈ ಜಾನಪದ ಕಥೆಗಳಲ್ಲಿ ಬಹುತೇಕ ಕಥೆಗಳು ರಾಧಾದೇವಿಯವರು ತಮ್ಮ ಅಜ್ಜಿಯ ಬಾಯಿಂದ ಕೇಳಿದ ಹಾಗೂ ತಮ್ಮ ಸಮೀಪದಲ್ಲಿದ್ದ ಹಿರಿಯರ ಬಾಯಿಂದ ಕೇಳಿದ ಕಥೆಗಳು. ಕಥೆಗಳ ನಡುವಿನ ತ್ರಿಪದಿಗಳು ಹಾಗೂ ಪದ್ಯಗಳನ್ನು ಓದುತ್ತಿದ್ದರೆ ಅದರ ಸೊಗಸೇ ವಿಭಿನ್ನ.
ಅಜ್ಜಿಯರ ಬಾಯಿಂದ ಕೇಳಿದ ರಾಜಕುಮಾರ, ರಾಜಕುಮಾರಿಯರ ಕಥೆಗಳು ಹಾಗೂ ಅತ್ತೆ-ಸೊಸೆಯರ ಕಥೆಗಳು ಇಲ್ಲಿ ಕಂಡು ಬಂದರೂ ಅದರ ರೂಪ ವಿಭಿನ್ನವಾಗಿರುವುದರ ಜೊತೆಗೆ ತ್ರಿಪದಿಗಳು ಹಾಗೂ ಜಾನಪದ ಪದ್ಯಗಳು ಸೇರಿ ಅವುಗಳ ವಿಶೇಷತೆಯನ್ನು ಹೆಚ್ಚಿಸಿವೆ. ಈ ಕಥಾ ಸಂಕಲನದಲ್ಲಿ 20 ಚಂದದ ಕಥೆಗಳಿವೆ. ಜೊತೆಗೆ ಸೆಳೆಯುವ ಮುಖಪುಟದಂತೆಯೇ ವರ್ಣರಂಜಿತವಾದ ಒಳಪುಟದ ಚಿತ್ರಗಳಿವೆ.
ಗಣಪ ಬಂದಾನೆ.. ಗೌರಮ್ಮ ಬಾಗಿಲು ತೆಗೆಯೆ.. : ಮಗ ಆಡುವೆನೆಂದು ಅಮ್ಮನಿಗೆ ಹೇಳಿ ಹೋದಾಗ ನಾರದರು ಬಂದು ಆತನ ಮಹಿಮೆಯನ್ನು ಹೇಳುತ್ತಾರೆ. ನಂತರ, ಆಕೆಯ ಮನಸ್ಸಿನಲ್ಲಿ ಮಗ ಇಂತಹ ಮಹಿಮಾಶಾಲಿಯೇ ಎಂದು ಅಚ್ಚರಿಯಾಗುತ್ತದೆ. ಆತ ಸಿಂಧೂರ ರಾಕ್ಷಸನನ್ನು ಕೊಂದು ಬರುತ್ತಾನೆಂದೂ, ಆತನ ಮಹಿಮೆಗಳನ್ನು ತಿಳಿಯಲು ಅವನನ್ನೇ ಕೇಳು ಎಂದು ನಾರದರು ಹೇಳಿದರು. ಗಣೇಶ ಬಂದಾಗ ಮಗನ ಹಲ್ಲು ಮುರಿಯುವೆನೆಂದು ಹೊರಬಂದವರಿಗೆ ತನ್ನ ಕೋಪದ ಕಾರಣವೇ ಮರೆತು ಹೋಯಿತು. 'ಊರಿಗೆ ಅರಸನಾದರೂ ತಾಯಿಗೆ ಮಗ' ಎನ್ನುವ ಗಾದೆ ಮಾತೇ ಇಲ್ಲವೇ..?! ಮಗ ಎಷ್ಟೇ ದೊಡ್ಡವನಾಗಿದ್ದರೂ ತಾಯಿಗೆ ಮಗನೇ ಅಲ್ಲವೇ..!
ದೇವಲೋಕದ ಹೂವ ದೇವಿ ಬೇಡಿದಳಲ್ಲ! : ಈ ಕಥೆಯಲ್ಲಿ ಕೃಷ್ಣ ರುಕ್ಮಿಣಿ ಹಾಗೂ ಸತ್ಯಭಾಮೆಯರಿಗೆ ಪಾರಿಜಾತ ಹಾಗೂ ಪಾರಿಜಾತದ ಮರವನ್ನು ತಂದದ್ದು ಹಾಗೂ ದೇವಲೋಕದ ತರುವು ದೇವಲೋಕದಲ್ಲಿಯೇ ಇರಲಿ ಎಂದು ಸತ್ಯಭಾಮೆ ಅದನ್ನು ಮರಳಿಸಿ "ಹರಿ ಒಲಿದ ನನಗಿಂತಲೂ ಹರಿಯನ್ನೇ ಒಲಿದ ನೀನೆ ಹಿರಿಯಳು" ಎಂದು ರುಕ್ಮಿಣಿಗೆ ಶರಣಾಗುವ ಪರಿ ಸೊಗಸಾಗಿ ಚಿತ್ರಿತವಾಗಿದೆ.
ರತಿದೇವಿ ಕೂಡಿದಳೆ... ತನ್ನರಸ ಮನ್ಮಥನ : ಈ ಕಥೆಯಲ್ಲಿ ರತಿದೇವಿ ಹಾಗೂ ಮನ್ಮಥರ ಪುನರ್ಜನ್ಮದ ಅವತಾರವಾಗಿ ಆತ ಪ್ರದ್ಯುಮ್ನನ ಅವತಾರದಲ್ಲಿಯೂ.. ರತಿದೇವಿ ರತ್ನ ಸುಂದರಿಯಾಗಿ ಜನಿಸಿ ವಿವಾಹವಾದ ಕಥೆಯಿದೆ. ಇದನ್ನು ಪಾಂಚಾಲಿ ನಿಶ್ಚಯಿಸಿದ ಪರಿ ಹೇಗೆ ಓದಿ ನೋಡಿ.
ಒಂದು ತಪ್ಪಿಗೆ ಗಂಧರ್ವಲೋಕದಿಂದಿಳಿದು ಬಂದಾಳೆ : ಈ ಕಥೆಯಲ್ಲಿ ದ್ರೌಪದಿ ಅಜ್ಞಾತವಾಸವನ್ನು ಕಳೆಯಲು ವಿರಾಟರಾಜನ ಅರಮನೆಗೆ ಬರುವ ಸಂದರ್ಭದಲ್ಲಿ ತಾನು ಏಕೆ ಇಲ್ಲಿಗೆ ಬಂದದ್ದು ತನ್ನ ಶಾಪವೇನು..? ರೀತಿ-ನೀತಿಗಳೇನು ಎಂದು ಹೇಳುವ ಚಿತ್ರಣವಿದೆ. ಗಂಧರ್ವರ ನೀತಿ-ನಿಯಮಗಳು ನರರಿಗಲ್ಲ ಎನ್ನುವ ಕೀಚಕನ ವಧೆಯಾಗುವ ಹಾಗೂ ಅಜ್ಞಾತವಾಸ ಮುಗಿದ ಕ್ಷಣಗಳು ಕಾಣುತ್ತವೆ.
ಗೌರಿದೇವಿ ಹೊರಟಾಳೆ ತೌರೂರಿಗೇ... : ತವರಿಗೆ ಹೊರಟ ಗೌರಿದೇವಿ ವರ್ಷ ವರ್ಷ ಸ್ವಾಮಿಯೇ ತನ್ನನ್ನು ಕಳಿಸುತ್ತಿದ್ದವನು ಈಗ ಮರೆತನೇಕೆ ಎನ್ನುತ್ತಾ ಆತನನ್ನು ಪರಿಪರಿಯಾಗಿ ಬಿನ್ನವಿಸುವ ದೃಶ್ಯ ಇಲ್ಲಿದೆ. ಭಾದ್ರಪದ ತದಿಗೆಯಂದು ತನ್ನ ಹುಟ್ಟಿದ ಹಬ್ಬವನ್ನು ತವರಿನಲ್ಲಿ ಆಚರಿಸಿಕೊಳ್ಳುವ ಸಂಭ್ರಮಕ್ಕಾಗಿ ವರುಷ ವರುಷವೂ ಬರುವ ಅವಳ ಹರ್ಷ ಯಾವ ಹೆಣ್ಣು ಮಕ್ಕಳಿಗಿಂತಲೂ ಕಡಿಮೆಯಿಲ್ಲ. ಇಬ್ಬರ ಸರಸಸಲ್ಲಾಪಗಳು ಸೊಗಸಾಗಿ ಚಿತ್ರಿತವಾಗಿವೆ.
ಮಾವು ಮಲ್ಲಿಗೆಯೊಡೆಯ : ರಾಮ ಹಾಗೂ ಸೀತೆಯರು ವಸಂತ ಮಾಸದ ಒಂದು ರಮ್ಯವಾದ ದಿನ ವನವಾಸದ ಸಂದರ್ಭದಲ್ಲಿ ಒಗಟುಗಳಲ್ಲಿ ಮಾತನಾಡಿಕೊಳ್ಳುವುದು ಸೊಗಸಾಗಿದೆ.
ಮಾವು ಮಲ್ಲಿಗೆಯೊಡೆಯ
ಮನ್ಮಥನ ದಳವಾಯಿ ಜಾನಕಿ
ಇವನ್ಯಾರೆಂದು ಹೇಳಿದರೆ
ಬೆರಳ ಮುದ್ರಿಕೆಯ ಮುಡಿಪಂಥ
ವಸಂತದೇವನ ಕುರಿತು ಶ್ರೀರಾಮರು ಒಗಟನ್ನು ರಚಿಸಿ ಕೇಳಿದಾಗ ಸೀತಮ್ಮನಿಗೆ ಇಷ್ಟು ಸರಳವಾದ ಒಗಟು ಎಂದು ನಸು ಕೋಪ ಬಂದರೂ ಆಕೆ ಉತ್ತರಿಸುವ ಪರಿಯು ಬಹಳ ಸೊಗಸಾಗಿದೆ.
ಹರುಷದಿ ಕೋಗಿಲೆಯ
ಕೂಗಾನ ಹರಿಸೋನು
ವರಷಾದ ಮೊದಲಲ್ಲಿ ಬರುವೋನು
ಬರುವೋನಿವನ ಋತುರಾಜನೆಂದು ಕರೆಯೋರು
ಒಗಟಿನ ಮಾತುಗಳಿಗೆ ಒಗಟಿನ ಮಾತೇ ಉತ್ತರವಾಗಿ ಓದುಗರಲ್ಲಿಯೂ ಆಲೋಚಿಸುವ ಶಕ್ತಿಯನ್ನು ಹೆಚ್ಚಿಸುತ್ತಾ ಓದಿನವನ್ನು ವಿಸ್ತರಿಸುತ್ತಾರೆ.
ತಂಗಿ ಸುಭದ್ರೆ ಮುನಿದಾಳು : ಈ ಕಥೆಯಲ್ಲಿ ಸುಭದ್ರೆಯ ಮುನಿಸಿಗೆ ಕಾರಣವೇನೆಂದು ಹುಡುಕಿದವರೆಲ್ಲರದ್ದು ಅವರವರ ಆಲೋಚನೆಯ ನೇರಕ್ಕೆ ಕಾರಣವನ್ನು ತಿಳಿಯುತ್ತಾರೆ. ದೇವಕಿ, ಬಲರಾಮರು ಬೇರೆ ಬೇರೆ ರೀತಿಯಲ್ಲಿ ಇದಕ್ಕೆ ಅವಳಿಗೆ ಮುನಿಸಿರಬಹುದು ಎನ್ನುವಾಗ ಬಲರಾಮ ಕೋಪಿಸಿಕೊಂಡು ತಟ್ಟನೆ ರುಕ್ಮಿಣಿ ದೇವಿಯ ದಿಟ್ಟ ಮಾತಿಗೆ
ಕೃಷ್ಣನ ಅರಸೀರು
ಬಲು ದಿಟ್ಟೆಯರು ನೀವೆಲ್ಲಾ
ಅಟ್ಟಿಸಿ ಅಡಗಿಸಿ ಹೆಂಡತಿಯ
ನಮ್ಮಂತೆ ಇಡಲು ತಮ್ಮಂಗೆ ಬರಲಿಲ್ಲ
ಎನ್ನುತ್ತಾ ಹೇಳುವ ಪರಿಯಂತೂ ತಂಗಿಯ ಮೇಲಿನ ಅಪರಿಮಿತ ಪ್ರೀತಿಯನ್ನು ತೋರುತ್ತದೆ. ಆದರೆ, ಸುಭದ್ರೆಯ ಮುನಿಸಿಗೆ ಕಾರಣವೇ ಬೇರೆ. ಅದಕ್ಕೆ ಕಾರಣ ಒಂದು ರೀತಿಯಲ್ಲಿ ಕೃಷ್ಣನೇ ಎಂದರು ತಪ್ಪಾಗಲಾರದು. ಆ ಕಾರಣವೇನು ಓದಿ ನೋಡಿ.
ಇದಿಷ್ಟು ಪುರಾಣಕ್ಕೆ ಸಂಬಂಧಿಸಿದ ಜಾನಪದ ರಮ್ಯ ಕಥೆಗಳಾದರೆ ಬಂಗಾರ ಕೂದಲ ಸಿಂಗಾರಿ ಚೆಲುವೀ, ನಾಗರ ಮೇಲೊರಗೋ ನಗೆಮುಖದಾಕೇ, ರಂಗೋಲಿ ಚೆಲುವೆ ರಂಗ ಲಕ್ಷ್ಮಿ, ನಕ್ಕರೆ ನವರತ್ನ ಅತ್ತರೇ ಮುತ್ತಂತೇ, ಪಂಚವರ್ಣದ ಸೀರೆ ಅಂಚೆಲ್ಲಾ ನವರತ್ನ, ಸೇವಂತಿಗೆ ರಾಜಕುಮಾರಿ, ಚೆಂದಲಾಪುರದ ಚಿನ್ನಾರಿ ಚೆಲುವೆ, ಕಲ್ಲು ಕುಟ್ಟಿಗನ ಮಗಳು, ರಾಜಕುಮಾರಿ ರಸವಂತಿ, ಕನ್ನಡ ಜಾನಪದ ಕವಿ ಕಂಡ ರಾಧಾಕೃಷ್ಣ, ವಸಂತ ನೀಡಿದನೆ ರಸದೌತಣ, ಮಿಂಚಿನಿಂದಿಳಿದ ಮೋಹನಾಂಗಿ, ಎಳ್ಳೊಡನೆ ಬೀರಿದ ಬೆಳ್ಳಿ ಬಟ್ಟಲು ಕತೆಗಳು ಜಾನಪದೀಯ ಕತೆಗಳು. ಇಲ್ಲಿ ರಾಜಕುಮಾರಿಯರ, ಅತ್ತೆ-ಸೊಸೆಯ ಕತೆಗಳ ಜೊತೆಗೆ ಜಾಣ್ಮೆಯಿಂದ ಬಂದ ವಿಪತ್ತನ್ನು ಸರಿಪಡಿಸಿಕೊಳ್ಳುವ ಹಾಗೂ ಬುದ್ದಿವಂತಿಕೆಯಿಂದ ಸವಾಲುಗಳನ್ನು ಗೆಲ್ಲುವ, ಒಳ್ಳೆಯತನಕ್ಕೆ ಒಳ್ಳೆಯದೇ ಆಗುತ್ತದೆ ಎಂದು ತೋರುವ ನೀತಿಯುಕ್ತ ಕತೆಗಳು. ಉಳಿದ ಕತೆಗಳಿಗೆ ಈ ಕಥಾಸಂಕಲನವನ್ನು ಓದಿ ಸವಿಯಿರಿ.
ಈ ಕಥಾ ಸಂಕಲನದ ಮತ್ತೊಂದು ಮನಸೆಳೆಯುವ ಅಂಶವೆಂದರೆ ಮೋನಪ್ಪನವರು ರಚಿಸಿರುವ ಒಳಪುಟದ ಚಿತ್ರಗಳು. ನಿಜಕ್ಕೂ ಕಣ್ಮನ ತಣಿಸುವ ಸುಂದರ ಚಿತ್ರಗಳು ಇವು.
~ವಿಭಾ ವಿಶ್ವನಾಥ್
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ