ಶನಿವಾರ, ಏಪ್ರಿಲ್ 18, 2026

ಮುತ್ತು ಚೆಲ್ಲಿದ ಹಾದಿ (ಪುಸ್ತಕ ಯಾನ - 254)


ಪುಸ್ತಕದ ಶೀರ್ಷಿಕೆ : ಮುತ್ತು ಚೆಲ್ಲಿದ ಹಾದಿ

ಲೇಖಕರು : ಹೆಚ್. ಜಿ. ರಾಧಾದೇವಿ

ಪ್ರಕಾಶಕರು : ಶ್ರೀ ಲಕ್ಷ್ಮೀ ವೆಂಕಟೇಶ್ವರ ಪ್ರಕಾಶನ

ಎರಡನೇ ಮುದ್ರಣ : 2022 (ನನ್ನ ಓದಿಗೆ ಸಿಕ್ಕಿದ್ದು)


ಈ ಕಾದಂಬರಿಯಲ್ಲಿ ಒಂದು ಮಾತಿದೆ. "ದುಂಡಾದ, ಹೊಳಪಿನ, ನುಣುಪಾದ ಮುತ್ತಿನ ರಾಶಿಯ ಮೇಲೆ ಕಾಲಿಟ್ಟು ನಡೆಯುವಾಗ ಕಾಲು ಜಾರುತ್ತೆ. ನಿನ್ನ ತೂಕ ನೀನು ಉಳಿಸಿಕೊಂಡು ಮೆಲುವಾದ ಹೆಜ್ಜೆ ಹಾಕಿದ್ರೆ ಹೆಲ್ದಿ." ಈ ವಾಕ್ಯಗಳಿಗೆ ಈ ಕಾದಂಬರಿಯ ಮೂಲಕ ನೋಡುವಾಗ ಬಹಳ ಅರ್ಥಗಳು ಕಾಣುತ್ತವೆ. ಮುತ್ತಿನ ರಾಶಿ ಎಂಬುದು ಇಲ್ಲಿ ನಿಜಾರ್ಥದ ಮುತ್ತಿನ ರಾಶಿಯಲ್ಲ.. ಬದಲಾಗಿ ಗೆಲುವಿನ ಹಾಗೂ ವೃತ್ತಿ ಬದುಕಿನ ಗೆಲುವಿನ ಹಾದಿಯಲ್ಲಿ ನಡೆಯುತ್ತಿರುವ ದಾರಿಯೂ ಹೌದು. ಅದರಲ್ಲಿಯೂ.. ಇಲ್ಲಿ ವೃತ್ತಿ ಎಂದರೆ ನಟನೆಯ ವೃತ್ತಿ ಎಂದೇ ಮುಖ್ಯವಾಗಿ ತೆಗೆದುಕೊಂಡಾಗ.. ನಿನ್ನ ತೂಕ ನೀನು ಉಳಿಸಿಕೊಂಡು ಮೇಲುವಾದ ಹೆಜ್ಜೆ ಹಾಕಿದ್ರೆ ಎನ್ನುವುದು ಅವರ ದೇಹದ ತೂಕವೂ ಹೌದು ಹಾಗೂ ಮನಸ್ಸಿನ ನಿಯಂತ್ರಣವೂ ಹೌದು. ಇದು ಕೇವಲ ನಟನೆಯ ವೃತ್ತಿಯಲ್ಲಿರುವವರಿಗೆ ಮಾತ್ರವಲ್ಲ.. ಎಲ್ಲರಿಗೂ ಅನ್ವಯವಾಗುವಂತಹ ಮಾತು ಎಂದರೂ ತಪ್ಪಾಗಲಾರದು. 


ಜಯಂತಿ ಲೆಕ್ಚರರ್ ಆಗಿದ್ದಳು. ಆಕೆ ಕಾಲೇಜಿನಲ್ಲಿ ನಿರರ್ಗಳವಾಗಿ, ಭಾವಪೂರ್ಣವಾಗಿ ಇಂಗ್ಲೀಷ್ ನಲ್ಲಿ ಉಪನ್ಯಾಸ ಕೊಡುವಾಗ ತನ್ಮಯರಾಗಿ ಆಲಿಸುತ್ತಿದ್ದ ವಿದ್ಯಾರ್ಥಿಗಳು 'ಕೋಕಿಲಕಂಠೇ' ಎಂದು ಹೆಸರಿಟ್ಟಿದ್ದರು. ಆಕೆ ಪೂರ್ತಿ ಕೋಗಿಲೆಯಷ್ಟು ಕಪ್ಪಲ್ಲದಿದ್ದರೂ.. ನಸುಗಪ್ಪಿನ ಲಕ್ಷಣವಾದ ಹೆಣ್ಣು. ಇಂಗ್ಲೀಷ್ ಅನ್ನು ಮೇಜರ್ ಆಗಿ ತೆಗೆದುಕೊಂಡಾಗಲೇ.. ತಂದೆ ವಿವಾಹ ಮಾಡಬೇಕೆಂದು ಪ್ರಯತ್ನಿಸಿದ್ದರೂ ಸಹಾ ಅವಳ ಬದಲಾಗಿ ಅವಳ ಹಾಗೆಯೇ ಇದ್ದ ಆದರೆ ಬಣ್ಣದಲ್ಲಿ ಹೊಂಬಣ್ಣವಿದ್ದ ತಂಗಿಯ ವಿವಾಹ ಅದೇ ಶ್ರೀಮಂತ ಬೀದಿಯಲ್ಲಿದ್ದ ಡಾಕ್ಟರ್ ವರನೊಂದಿಗೆ ನಡೆದು ಹೋಗಿತ್ತು. 


ಸುಭದ್ರಮ್ಮ ಹಾಗೂ ಕೇಶವರಾಯರಿಗೆ ಇಬ್ಬರು ಹೆಣ್ಣು ಮಕ್ಕಳು. ಮೊದಲನೆಯವಳೇ ಜಯಂತಿ. ಎರಡನೆಯವಳು ಭಾರತಿ. ಭಾರತಿ ತನ್ನ ಗೆಳತಿ ಪದ್ಮಿನಿಯ ಅಣ್ಣ ಡಾಕ್ಟರ್ ರಾಜೇಂದ್ರನನ್ನೇ ಪ್ರೇಮಿಸಿದಳು. ಇವರ ಅಂತಸ್ತಿಗಿಂತ ಮೇಲಿದ್ದರೂ.. ರೂಪ ನೋಡಿ ಹೆಣ್ಣು ಒಪ್ಪಿಕೊಂಡಿದ್ದರು. ಆ ಮನೆಯವರು ಮೊದಮೊದಲು ಎಲ್ಲವೂ ಚೆನ್ನಾಗಿಯೇ ಇದ್ದರೂ ನಂತರ, ಭಾರತಿಗೆ ಅಲ್ಲಿಯ ಪರಿಸ್ಥಿತಿ ಅರಿವಾಗಿತ್ತು. ಆಕೆ ಈಗ ಅವರ ಪಾಲಿನ ಒಂದು ಬಣ್ಣದ ಗೊಂಬೆ ಅಷ್ಟೇ.. ಆತನಿಗೆ ಆತನ ಸೋದರಮಾವನ ಮಗಳ ಜೊತೆ ಚೆಲ್ಲಾಟವೂ ಇತ್ತು. ಭಾರತಿಯನ್ನು ಮನೆಯಲ್ಲಿರಿಸಿ, ಅತ್ತೆ-ಮಾವ ಆರಾಮಾಗಿ ತಿರುಗಾಡಲು ಹೋಗುತ್ತಿದ್ದರು. ಮದುವೆಯಾಗಿ 8 ವರ್ಷಗಳಾಗಿದ್ದರೂ.. ಮಕ್ಕಳಾಗಿರಲಿಲ್ಲ. ಅಮ್ಮನಿಗೆ ತನ್ನ ಮನಸ್ಸಿನ ಬೇಗುದಿಯೆಲ್ಲವನ್ನು ಹಂಚಿಕೊಳ್ಳಲು ಸಾಧ್ಯವಿಲ್ಲದಿದ್ದರೂ.. ಅಕ್ಕನೊಡನೆ ಇದೆಲ್ಲವನ್ನೂ ಹಂಚಿಕೊಂಡಿದ್ದಳು ಭಾರತಿ. 


ತನಗಿಂತ ಮೊದಲು ವಿವಾಹವಾಯಿತು ಎಂದೋ.. ಶ್ರೀಮಂತ ವರ ಎಂದೋ.. ಜಯಂತಿಗೆ ಆಕೆಯ ಕುರಿತು ಯಾವ ರೀತಿಯ ದ್ವೇಷದ ಭಾವವೂ ಇರಲಿಲ್ಲ. ಇದನ್ನೆಲ್ಲಾ ಕೇಳಿದ ಮೇಲೆ ಆಕೆಯೂ ಮನಸ್ಸಿನಲ್ಲಿ ಮರುಗಿದಳಷ್ಟೇ..


ಈಗ ಜಯಂತಿಗೆ ಅವರ ಸಹೋದ್ಯೋಗಿ ಮೋಹನ್ ಅವರ ಪತ್ನಿ ಶಾಲಿನಿಯಿಂದ ಒಂದು ಆಹ್ವಾನ ಬಂದಿತ್ತು. ಮಗುವಿನ ಹುಟ್ಟುಹಬ್ಬದ ನೆಪವಿಟ್ಟುಕೊಂಡು ಆಕೆ ಒಂದು ಮುಖ್ಯ ವಿಚಾರಕ್ಕೆ ಪೀಠಿಕೆ ಹಾಕಿದಳು. ಆಕೆ ಕೆಲಸ ಮಾಡುತ್ತಿದ್ದ ರೂಬಿ ಚಾನೆಲ್ ನಲ್ಲಿ ಭಾರತೀಯ ಪರಂಪರೆಯ ಟೆಲಿ ಫಿಲಂಗಳನ್ನು ಮಾಡಿ ಹೊರದೇಶಕ್ಕೆ ಮಾರುತ್ತಿದ್ದರು. ಆದರೆ, ನೇರವಾಗಿ ಇಂಗ್ಲಿಷ್ ಕೃತಿಗಳನ್ನು ಟೆಲಿ ಫಿಲಂ ಮಾಡದಿದ್ದರೂ ಕನ್ನಡ, ತೆಲುಗು ಕೃತಿಗಳನ್ನು ಆರಿಸಿಕೊಂಡರೂ ಅದು ಇಂಗ್ಲಿಷ್ ಭಾಷೆಯಲ್ಲಿ ಭಾವಪೂರ್ಣವಾಗಿ ಬರಬೇಕು. ಜಯಂತಿ ಎಲ್ಲದಕ್ಕೂ ಒಪ್ಪಿತವಾಗುವಂತಿದ್ದಳು. ಅಲ್ಲಿನ ಟೆಲಿಫಿಲಂಗಳಲ್ಲಿ ಅಶ್ಲೀಲ ದೃಶ್ಯಗಳಿರುತ್ತಿರಲಿಲ್ಲ. ಹಾಗಾಗಿ, ಈ ಪ್ರಸ್ತಾಪ ತಂದಿದ್ದಳು ಶಾಲಿನಿ. ಆದರೆ, ಅಲ್ಲಿನ ಮುಖ್ಯ ಕಂಡೀಶನ್ ಎಂದರೆ ನಾಯಕಿಯಾಗಿ ಅಲ್ಲಿ ಅಭಿನಯಿಸುವವರು ಐದು ವರ್ಷದವರೆಗೂ ವಿವಾಹವಾಗುವಂತಿರಲಿಲ್ಲ.


ಶಾಲಿನಿ ಇದಕ್ಕೂ ಒಂದು ಪರಿಹಾರ ಸೂಚಿಸಿದ್ದಳು. ಮೋಹನ್ ಅವರ ಚಿಕ್ಕಪ್ಪನ ಮಗ ಅಂದರೆ ಮೈದುನನೇ ಆದ ಚಂದ್ರು ಕುಲಕರ್ಣಿ. ಆತ ಕನ್ನಡ ಲೆಕ್ಚರರ್ ಆಗಿದ್ದವನು. ಅವರ ಮನೆಯಲ್ಲಿ 5 ಹೆಣ್ಣು ಮಕ್ಕಳ ವಿವಾಹವಾಗಬೇಕಾಗಿತ್ತು. ಆತನ ತಂದೆಗೆ ಇಬ್ಬರು ಪತ್ನಿಯರು. ಈತನಿಗೆ ಇಬ್ಬರು ಅಕ್ಕಂದಿರು. ಚಿಕ್ಕಮ್ಮನ ಮೂವರು ಹೆಣ್ಣುಮಕ್ಕಳ ವಿವಾಹಕ್ಕಾಗಿ ಆತನೇ ಖರ್ಚು ಮಾಡಬೇಕಿತ್ತು. ಹಾಗಾಗಿ, ಈಗ ಎಂಗೇಜ್ ಮೆಂಟ್ ಆಗಿ ಐದು ವರ್ಷದ ನಂತರ ಇವರೆಲ್ಲರ ಮದುವೆಯಾದ, ನಂತರ ತಮ್ಮ ಮದುವೆಗೆ ಎಂದು ಆತನೂ ಒಪ್ಪಿದ್ದನು. 


ಆದರೆ, ಆತನ ಚಿಕ್ಕಮ್ಮನಿಗೆ ಇದು ಮನಃಸ್ಪೂರ್ತಿಯಾಗಿ ಒಪ್ಪಿತವಿರದಿದ್ದರೂ. ಆಕೆ ಒಪ್ಪಿದಂತೆ ನಟಿಸಿದ್ದಳು. ಇತ್ತ ಜಯಂತಿಯ ತಂದೆ-ತಾಯಿ ಮದುವೆಯ ಪ್ರಯತ್ನ ಮಾಡುತ್ತಿದ್ದರು. ಆಕೆಗೆ ಮದುವೆಯಾಗದಿದ್ದರೆ ಹೆಚ್ಚು ಲಾಭವೆಂದು ಮದುವೆ ತಪ್ಪಿಸಲು ನೋಡುತ್ತಿದ್ದಂತೆ.. ಇದು ಜಯಂತಿಗೂ ಅರಿವಾಗಿ ನಂತರ ಆಕೆ ಶಾಲಿನಿಯ ಮನೆಯಲ್ಲಿಯೇ ಇದ್ದ ಔಟ್ ಹೌಸ್ ನಲ್ಲಿ ಪೇಯಿಂಗ್ ಗೆಸ್ಟ್ ಆಗಿ ಸೇರಿದಳು. ಇತ್ತ ಚಂದ್ರುವಿನ ದುಶ್ಚಟಗಳು ಒಂದೊಂದಾಗಿ ಜಯಂತಿಗೆ ತಿಳಿದು ಮನಸ್ಸು ರಾಡಿಯಾಗಿತ್ತು. ಆತನಿಗೆ ಕುಡಿತ, ಇಸ್ಪೀಟಿನ ಸಹವಾಸ, ಗೆಳತಿಯರು, ಜೊತೆಗೆ ತನ್ನ ತಂಗಿಯ ಗಂಡನಿಗೆ ಜೊತೆಗಿದ್ದ ಗೆಳೆತನ ಎಲ್ಲವೂ ಅರಿವಾಯಿತು. ಅಲ್ಲದೇ ಮನಸ್ಸು ಬೇಡವೆಂದರೂ ತಂಗಿಯ ಮನೆಯ ಪರಿಸ್ಥಿತಿಯನ್ನೂ.. ಇಲ್ಲಿನದ್ದನ್ನೂ ತಾಳೆ ಮಾಡಿ ನೋಡುವಂತೆ ಮಾಡುತ್ತಿತ್ತು. ತಾನು ಚಂದೃವನ್ನು ಎಂಗೇಜ್ಮೆಂಟ್ ಮಾಡಿಕೊಂಡು ತಪ್ಪು ಮಾಡಿದೆನೇನೋ ಎಂಬ ಭಾವದಲ್ಲಿದ್ದಳು. 


ಹಾಗಿದ್ದಾಗಲೇ.. ಅದೇ ಚಾನಲ್ ನಲ್ಲಿ ಕೆಲಸ ಮಾಡುತ್ತಿದ್ದ ನಾಯಕನಟ ರಂಗರಾಜ್ ಹಾಗೂ ಜಯಂತಿ ಆತ್ಮೀಯರಾಗುತ್ತಿದ್ದರು. ಆತನ ಹಳ್ಳಿಯಲ್ಲಿನ ಕುಟುಂಬದ ಹಿನ್ನೆಲೆ, ಭವಿಷ್ಯದ ಕುರಿತ ಮಾತುಗಳನ್ನು ಕೇಳಿ ಆತನತ್ತ ಆಕರ್ಷಿತವಾಗುತ್ತಿದ್ದಳು. ಇತ್ತ ಚಂದ್ರುವಿನ ಹಾಗೂ ಅವಳ ನಡುವೆ ನಡೆದ ಜಗಳವೊಂದು ಆತನ ಅನುಪಸ್ಥಿತಿಯಲ್ಲಿ ಇದೆಲ್ಲವನ್ನೂ ಯೋಚಿಸುವಂತೆ ಮಾಡುತ್ತಿತ್ತು. ಆದರೆ, ರಂಗರಾಜನ ಕುರಿತಾಗಿ ಸತ್ಯವೊಂದು ತಿಳಿದಾಗ ಆಕೆ ಮನಸ್ಸು ಕೆಡಿಸಿಕೊಂಡಿದ್ದಳು. 


ಸಮಯದಲ್ಲಿ ಶಾಲಿನಿಯ ಬುದ್ಧಿಮಾತು ಇವಳ ಎಷ್ಟೋ ಸಮಸ್ಯೆಗಳಿಗೆ ಪರಿಹಾರ ತಂದಿತ್ತು . ಆಕೆ ರಂಗರಾಜ್ ನ ಆಪ್ತ ಸ್ನೇಹವನ್ನು ಗಮನಿಸಿ, ಆತನ ನಿಜ ರೂಪದರ್ಶನ ಮಾಡಿಸಿದ್ದಳು. ಅಲ್ಲದೆ, ಚಂದ್ರುಗೆ ಕೆಲವು ದೌರ್ಬಲ್ಯಗಳೂ ಇದೆ. ಆತನ ತಾಯಿ ಕೆಟ್ಟವಳು. ಆ ಕುಟುಂಬದ ಸಮಸ್ಯೆಗಳಿಗೆ ಓದಿ ಹೋಗಿ ನೀನೇನೂ ಸಿಕ್ಕಿಕೊಳ್ಳಬೇಡ. ಬದಲಾಗಿ, ಸ್ನೇಹ ಬೆಳೆದ ನಂತರ ಅವನನ್ನು ಹದ ಮಾಡಿ ನಿನ್ನ ದಾರಿಗೆ ತರಲು ಬುದ್ಧಿಮಾತು ಹೇಳಿದಳು. ಈ ಸಂದರ್ಭದಲ್ಲಿಯೇ.. ಮುತ್ತಿನ ರಾಶಿಯ ಮೇಲೆ ಕಾಲಿಟ್ಟು ನಡೆಯುವಾಗ ಕಾಲು ಜಾರುವ ಕುರಿತಾಗಿ ಎಚ್ಚರಿಸಿ ಮೆಲುವಾದ ಹೆಜ್ಜೆ ಹಾಕಲು ಎಚ್ಚರಿಸಿದ್ದು.


ರಂಗರಾಜ್ ಕುರಿತು ಜಯಂತಿಗೆ ತಿಳಿದ ಸತ್ಯವೇನು..? ಮಗಳ ವಿವಾಹಕ್ಕೆ ಅಡ್ಡಗಾಲು ಹಾಕುತ್ತಿದ್ದ ತಂದೆ-ತಾಯಿಯ ಮನಸ್ಸಿನಲ್ಲಿ ಇದ್ದ ಭಾವನೆಗಳೇನು..?? ಶಾಲಿನಿ ಹೇಳಿದರಲ್ಲಿ ಎಷ್ಟು ಸತ್ಯವಿತ್ತು ? ಜಯಂತಿ ಅದನ್ನು ಎಷ್ಟು ಅನುಸರಿಸಿದಳು.. ಮುತ್ತು ಚೆಲ್ಲಿದ ಹಾದಿಯಲ್ಲಿ ಜಯಂತಿ ನಡೆದ ಬಗೆ ಹೇಗೆ..?? ಎಲ್ಲವನ್ನೂ ತಿಳಿಯಲು ಓದಿ 'ಮುತ್ತು ಚೆಲ್ಲಿದ ಹಾದಿ' ಕಾದಂಬರಿಯನ್ನು. 


ಇಲ್ಲಿ ಶಾಲಿನಿಯ ಪಾತ್ರ ಒಳ್ಳೆಯವಳದ್ದಾ..?? ಕೆಟ್ಟವಳದ್ದಾ..? ಎಂದು ಸುಲಭವಾಗಿ ತೀರ್ಮಾನಿಸಲು ಸಾಧ್ಯವೇ ಇಲ್ಲದಂತೆ ನಿರೂಪಣೆ ಇದೆ. ಆದರೆ, ಆಕೆಯ ಮನಸ್ಸಿನ ಮಾತು ಹಾಗೂ ಆಕೆ ನೀಡುವ ಸೂಚನೆಗಳು, ಅದರಿಂದ ಜಯಂತಿಯ ಬದುಕಿನಲ್ಲಿ ಆಗುವ ಬದಲಾವಣೆಗಳ ಮೇಲೆ ಆಕೆಯ ಪಾತ್ರ ಎಷ್ಟರಮಟ್ಟಿಗೆ ತೂಕವುಳ್ಳದ್ದು ಹಾಗೂ ಎಷ್ಟು ಪ್ರಭಾವಿಸುವಂತಹದ್ದು ಎನ್ನುವುದರ ಅರಿವಾಗುತ್ತದೆ. 


ಇಲ್ಲಿ ಜಯಂತಿಯದ್ದು ಸಿಡಿದೆದ್ದ ಪಾತ್ರವಲ್ಲದಿದ್ದರೂ.. ಸ್ವಾಭಿಮಾನಿಯಾಗಿ ಕಾಣುವ ಪಾತ್ರ. ಎರಡಕ್ಕೂ ವ್ಯತ್ಯಾಸವಿದೆ. ಆ ವ್ಯತ್ಯಾಸ ಈ ಕಾದಂಬರಿಯಲ್ಲಿ ನಾಯಕಿಯ ಚಿತ್ರಣದಲ್ಲಿ ಸ್ಪಷ್ಟವಾಗಿ ರೂಪಿತವಾಗಿದೆ. ಈ ಅಂಶ ನನಗೆ ಬಹಳ ಇಷ್ಟವಾಯಿತು.


ದುಡುಕಿ ನಿರ್ಧಾರ ತೆಗೆದುಕೊಳ್ಳಲು ಹೊರಡುವ ಅಥವಾ ತಪ್ಪು ಹಾದಿಗೆ ಇಳಿಯಲು ಹೋಗುವಾಗ ಹಿರಿಯಕ್ಕನಂತೆ ಅಥವಾ ಮಾರ್ಗದರ್ಶಿಯಂತೆ ಎಚ್ಚರಿಸುವವರು ಯಾರಾದರೂ ಸಿಕ್ಕಿದ್ದರೆ ಯಾರ ಬದುಕೂ ಹಳಿ ತಪ್ಪದೇನೋ ಎನ್ನುವ ಭಾವ ಮೂಡಿಸಿದ ಕಾದಂಬರಿ ಸರಾಗವಾದ ಓದು.


~ವಿಭಾ ವಿಶ್ವನಾಥ್

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ