ಶುಕ್ರವಾರ, ಏಪ್ರಿಲ್ 17, 2026

ಮೋಡದ ತೆರೆ (ಪುಸ್ತಕ ಯಾನ - 229)


ಪುಸ್ತಕದ ಶೀರ್ಷಿಕೆ : ಮೋಡದ ತೆರೆ

ಲೇಖಕರು : ಚಿತ್ರಲೇಖ

ಪ್ರಕಾಶಕರು : ಲಲಿತಾ ಪ್ರಕಾಶನ

ಮರು ಮುದ್ರಣ : 2022


ಚಿತ್ರಲೇಖ ಮೇಡಂ ಅವರ ಕಾದಂಬರಿಗಳ ನನ್ನ ಇತ್ತೀಚಿನ ಓದಿನಲ್ಲಿ ನನಾಗಿಷ್ಟವಾದದ್ದು ಅವರ ಮನೋವೈಜ್ಞಾನಿಕ ಕಾದಂಬರಿ ಮೋಡದ ತೆರೆ. ಮೊದಲಿಗೆ ಇದೊಂದು ಕೌಟುಂಬಿಕ ಕಾದಂಬರಿಯಂತೆ ಭಾಸವಾದರೂ.. ನಂತರ ಇದರಲ್ಲಿ ಕಾಣಸಿಗುವ ಮನೋರೋಗಕ್ಕೆ ಮದ್ದಾಗುವ ಹಾಗೂ ಚಿಕಿತ್ಸೆ ನೀಡುವ ಪರಿ ಅದ್ಭುತ. ಕಾದಂಬರಿಯ ಪೂರ್ವಾರ್ಧದಲ್ಲಿ.. ಇದ್ದರೆ ಇಂತಹಾ ಕುಟುಂಬ, ಇಷ್ಟು ಚಂದದ ಸಂಸಾರವಿರಬೇಕು ಎಂದೆನಿಸುವಂತೆ ಮಾಡಿದರೆ, ಕಾದಂಬರಿಯ ಉತ್ತರಾರ್ಧದಲ್ಲಿ ಹೆಣ್ಣನ್ನು ಸರಿಯಾಗಿ ಅರ್ಥ ಮಾಡಿಕೊಂಡರೆ ಆಕೆ ಎಷ್ಟು ಚಂದದ ಸಂಸಾರ ಕಟ್ಟಿ ಕೊಡಬಲ್ಲಳೋ.. ಅಕಸ್ಮಾತ್, ಆಕೆಯನ್ನು ಅರ್ಥ ಮಾಡಿಕೊಳ್ಳದಿದ್ದರೆ ಮನೆಯಲ್ಲಿ ಹಾಗೂ ಆಕೆಗೆ ಎಷ್ಟೆಲ್ಲಾ ಸಮಸ್ಯೆಗಳು ಉಂಟಾಗಬಹುದು ಎಂಬುದನ್ನು ಕಣ್ಣಿಗೆ ಕಟ್ಟುವಂತೆ ಚಿತ್ರಿಸಿದ್ದಾರೆ. 


ನರಸಿಂಹಾಚಾರ್ಯರು ಹಾಗೂ ಸಿಂಗಾರಮ್ಮನ ಏಕೈಕ ಮುದ್ದಿನ ಪುತ್ರನೇ ರಾಜೀವ್. ನರಸಿಂಗಾಚಾರ್ಯರಿಗೆ ಅಪಾರ ಆಸ್ತಿ ಇಲ್ಲದಿದ್ದರೂ.. ಇರುವ ಆಸ್ತಿಗೆ ಅವನು ಏಕೈಕ ವಾರಸುದಾರ. ಮೊದಲೆರಡು ಹೆಣ್ಣುಮಕ್ಕಳು ಹುಟ್ಟಿ ನಾಲ್ಕಾರು ತಿಂಗಳಲ್ಲಿಯೇ ಕಾರಣಾಂತರದಿಂದ ಮರಣ ಹೊಂದಿದ ನಂತರ ಸಿಂಗಾರಮ್ಮನವರು ಜಪ-ತಪ, ವ್ರತ, ನೇಮಗಳನ್ನು ಮಾಡಿ ಅದರ ಫಲದಿಂದ ಹುಟ್ಟಿದ ರಾಜೀವನನ್ನು ಬಹಳ ಜೋಪಾನವಾಗಿ ನೋಡಿಕೊಂಡರು. ಅಲ್ಲದೇ, ರಾಜೀವನಿಗೆ ಎರಡು ವರ್ಷವಿದ್ದಾಗ ಸಿಂಗಾರಮ್ಮನಿಗೆ ಹೊಟ್ಟೆಯಲ್ಲಿ ಗಡ್ಡೆಯಾಗಿ ಗರ್ಭಕೋಶವನ್ನು ತೆಗೆಯಬೇಕಾಗಿ ಬಂದಿತ್ತು. ಇದ್ದ ಏಕೈಕ ಮಗನಿಗೆ ತಮ್ಮೆಲ್ಲ ಪ್ರೀತಿ, ಕಾಳಜಿಯನ್ನು ಧಾರೆಯೆರೆದು ಬೆಳೆಸುತ್ತಿದ್ದರು. 


ಊರಲ್ಲಿ ಸ್ವಲ್ಪ ಹೊಲ-ಗದ್ದೆಗಳಿದ್ದರೂ.. ಖಾಸಗಿ ಬ್ಯಾಂಕ್ ನಲ್ಲಿ ಅಕೌಂಟೆಂಟ್ ಆಗಿ ಕೆಲಸ ಮಾಡುತ್ತಿದ್ದ ನರಸಿಂಗಾಚಾರ್ಯರು ಬೆಂಗಳೂರಿನಲ್ಲಿ ಮನೆ ಕಟ್ಟಿಕೊಂಡಿದ್ದರು. ರಾಜೀವ್ ಎಂ.ಇ ಓದಿ ಇಂಜಿನಿಯರಿಂಗ್ ಕಾಲೇಜ್ ನಲ್ಲಿ ಪ್ರೊಫೆಸರ್ ಆಗಿದ್ದನು. ಅಪ್ಪ-ಅಮ್ಮನಿಗೆ.. ಅದರಲ್ಲೂ ಅಮ್ಮನಿಗೆ ತನ್ನ ಮಗನಿಗೆ ಬೇಗ ವಿವಾಹ ಮಾಡಿ ಆತನ ವೈವಾಹಿಕ ಜೀವನವನ್ನು ಕಣ್ತುಂಬಿಕೊಳ್ಳಬೇಕೆಂಬ ಆಸೆ. ಆದರೆ, ರಾಜೀವನಿಗೆ ಈಗಲೇ ಮದುವೆಯಾಗಲು ಇಷ್ಟವಿರಲಿಲ್ಲ. 


ಆತನಿಗೆ ಹೆತ್ತವರೆಂದರೆ ಬಹಳವೇ ಪ್ರೀತಿ. ನೆಮ್ಮದಿಯಾಗಿ ಅಪ್ಪ-ಅಮ್ಮನೊಡನೆ ಬಾಳುತ್ತಿರುವ ಈ ಸಂಸಾರದಲ್ಲಿ ಹೊಸಬಳಾಗಿ ಬಂದ ಹೆಣ್ಣು ಅವರೊಂದಿಗೆ ಹೊಂದಿಕೊಳ್ಳದೇ ಹೋದರೆ..!

ತಂದೆ-ತಾಯಿ ಹಾಗೂ ತನ್ನ ನಡುವೆ ಬಿರುಕು ಉಂಟಾದರೆ ಎನ್ನುವ ಭಯವಿತ್ತು ಅವನಿಗೆ. ಅಲ್ಲದೇ, ನಮ್ಮ ಮನೆಗೆ ಹೊಂದಿಕೊಳ್ಳುವ ಹೆಣ್ಣಾದರೂ.. ಆಕೆಯನ್ನು ನೋಡಿದ ಮಾತ್ರಕ್ಕೆ ಆಕೆಯ ಗುಣದ ಪರಿಚಯವಾಗುತ್ತದೆಯೇ..?! ಎನ್ನುವ ಅವನ ಭಯಕ್ಕೆ ವಧುಪರೀಕ್ಷೆಯನ್ನು ತಪ್ಪಿಸುತ್ತಿದ್ದನಾದರೂ.. ಸಿಂಗಾರಮ್ಮನ ಮಾತನ್ನು ತೆಗೆದುಹಾಕುವಂತಿರಲಿಲ್ಲ.


ಆತನ ಅಂತಹಾ ಭಯಕ್ಕೆಲ್ಲಾ ಅರ್ಥವಿಲ್ಲವೆಂದು ಆತನಿಗೆ ಅರಿವಾಗಿಸುವಂತೆ ಆತನ ಜೊತೆಯಾದವಳು ಕಲ್ಪನ. ಕಲ್ಪನ ಸುಬ್ಬರಾಯರು ಹಾಗೂ ಗಿರಿಜಮ್ಮ ದಂಪತಿಗಳ ಹಿರಿಯ ಮಗಳು. ಆಕೆಯ ತಮ್ಮ ಶೇಖರ್. ವಧುಪರೀಕ್ಷೆಯ ದಿನವೇ ಅವಳ ರೂಪ, ಗುಣವನ್ನು ಮೆಚ್ಚಿದರೂ.. ತನ್ನ ನಿರೀಕ್ಷೆಯನ್ನು ಹೇಳಿ ಒಪ್ಪಿದ ರಾಜೀವನಿಗೆ ಅನುರೂಪದ ಜೋಡಿಯಂತೆ ಹೊಂದಿಕೊಂಡು ಸಾಗುತ್ತಿದ್ದಳು ಕಲ್ಪನ. ಅವರದ್ದು ಎಷ್ಟು ಚೆಂದದ ಸಂಸಾರವೆಂದರೆ.. ಆ ಮನೆಯಲ್ಲಿ ಆಕೆ ಮಗಳೇ ಆಗಿದ್ದಳು. ಆಕೆ ತನ್ನ ತವರು ಮನೆಗೆ ಹೋಗಲು ಇಚ್ಛೆ ಪಡುತ್ತಿದ್ದದ್ದು ಕಡಿಮೆಯೇ. 


ಸೊಸೆಯರಿಗೆ ಗಂಡನ ಮನೆ ತನ್ನ ಮನೆ ಎಂದೆನಿಸುವುದು ತನ್ನಿಚ್ಛೆಯಂತೆ ಆ ಮನೆಯನ್ನು ಅಲಂಕರಿಸಿ, ಸಿಂಗರಿಸುವ ಅವಕಾಶ ಸಿಕ್ಕರೆ.. ಹಾಗೆಯೇ ಇಷ್ಟಪಟ್ಟ ಅಡುಗೆಯನ್ನು ಮಾಡುವ ಅವಕಾಶ ಸಿಕ್ಕಾಗ. ಕಲ್ಪನಳ ಯಾವ ಆಸೆಗೂ ಅಡ್ಡಿಪಡಿಸದ ಸಿಂಗಾರಮ್ಮನವರು ಆಕೆಯನ್ನು ಪ್ರೋತ್ಸಾಹಿಸುತ್ತಿದ್ದರು. ಅಷ್ಟೇ ಅಲ್ಲದೆ, ಗಂಡ-ಹೆಂಡತಿಗೆ ಏಕಾಂತ ಒದಗಿಸಲು ಹಿರಿಯ ದಂಪತಿಗಳಿಬ್ಬರೂ ಸಂಜೆ ರಾಯರ ಮಠಕ್ಕೆಂದು ಹೋಗುತ್ತಿದ್ದರು. ಮಗ-ಸೊಸೆ ಹೊಂದಿಕೊಂಡಿರುವಂತೆ ನೋಡಿಕೊಳ್ಳುತ್ತಿದ್ದರು. ಗಂಡನನ್ನು ಮೆಚ್ಚಿಸಲು ಸಾಧ್ಯವಾಗುವುದು ಅತ್ತೆ-ಮಾವನ ಸೇವೆಯಿಂದ ಎಂದರಿತ ಕಲ್ಪನ ಹಾಗೂ ಮಗನ ಪ್ರೀತಿಯನ್ನು ಹಾಗೆಯೇ ಉಳಿಸಿಕೊಳ್ಳಲು ಆತನ ಪತ್ನಿಯನ್ನು ಅಷ್ಟೇ ಚೆನ್ನಾಗಿ ನೋಡಿಕೊಳ್ಳಬೇಕು ಎನ್ನುವ ಸಿಂಗಾರಮ್ಮ ಸಂಸಾರವನ್ನು ಬಹಳ ಸುಂದರವಾಗಿ ಅರ್ಥ ಮಾಡಿಕೊಂಡಿದ್ದರು.


ಕಲ್ಪನ ಗರ್ಭಿಣಿಯಾದಾಗಲಂತೂ ಎಲ್ಲರ ಹಿಗ್ಗು ಹೇಳತೀರದ್ದು. ಆದರೆ, ಎಲ್ಲವೂ ಸಂತಸದಿಂದಲೇ ಸಾಗಿದ್ದರೆ ಬದುಕಿಗೆ ಎಲ್ಲಿಯ ಅರ್ಥ ಎಂಬಂತೆ.  ಇನ್ನೇನು ಕಲ್ಪನಳಿಗೆ ಹೆರಿಗೆಯಾಗುವ ಸಮಯದಲ್ಲಿಯೇ.. ಒಂದೆರಡು ದಿನ ಬಂದ ನಿಗದಿತ ಸಮಯದಲ್ಲಿ ಬಂದಿದ್ದ ಹೊಟ್ಟೆನೋವನ್ನು ನಿರ್ಲಕ್ಷಿಸಿದವಳು ಮೂರನೇ ದಿನಕ್ಕೆ ತನ್ನ ಮಗುವನ್ನು ಕಳೆದುಕೊಂಡಿದ್ದಳ. ನಂತರ ಸನ್ನಿ ಹಿಡಿದವಳಂತೆ ಆಡುತ್ತಿದ್ದವಳು, ಮಗುವನ್ನು ಕಳೆದುಕೊಂಡ ವಿಚಾರ ತಿಳಿದು ಆಘಾತದಿಂದ ಕಾರ್ಡಿಯಾಕ್ ಅರೆಸ್ಟ್ ಆಗಿ ಮರಣ ಹೊಂದಿದಳು. ಎಲ್ಲರ ಮನಸ್ಸಿನ ಮೇಲೂ ಶಾಶ್ವತವಾದ ನೋವು ಉಳಿದು ಹೋಯಿತು. ಕಲ್ಪನಾಳನ್ನು ಯಾರೂ ಮರೆಯುವಂತೆಯೇ ಇರಲಿಲ್ಲ. 


ಅದಾದ ಸುಮಾರು ದಿನಗಳ ಬಳಿಕ ಇವರಿನ್ನು ಜೋಡಿ ಮಾಡಿದ್ದ ಜೋಯಿಸರೇ ರಾಜೀವನ ಬಳಿ ಬಂದು.. ಒಂದು ಹುಡುಗಿಯ ಬಾಳನ್ನು ಕಾಪಾಡಬೇಕು ಎಂದು ಕೇಳಿಕೊಂಡರು. ಶ್ಯಾಮಾ ಶಾಸ್ತ್ರಿಗಳ ಮೊದಲ ಮಗಳಾದ ಶ್ವೇತಳಿಗೆ ಬಾಳು ನೀಡಬೇಕೆಂದು ಕೇಳಿಕೊಂಡರು. ಬಡತನದ ಮನೆಯಲ್ಲಿ ಕಪ್ಪು ಮೈಬಣ್ಣ ಹೊತ್ತು ಹುಟ್ಟಿದ್ದ ಶ್ವೇತಾಳಿಗೆ ವಿವಾಹವಾಗುವುದು ಅಷ್ಟು ಸುಲಭವಿರಲಿಲ್ಲ. ರಾಜೀವನ ವಿದ್ಯೆಗೆ, ಅಂತಸ್ತಿಗೆ, ರೂಪಕ್ಕೆ ತಕ್ಕ ಕನ್ಯೆ ಅಲ್ಲದಿದ್ದರೂ.. ಮನೆಯ ವಾತಾವರಣಕ್ಕೆ ಹೇಳಿ ಮಾಡಿಸಿದಂತಹ ಹೆಣ್ಣು ಎಂದು ಹೇಳಿ ಆತನ ಮನಸ್ಸು ಬದಲಾಯಿಸುವರಲ್ಲಿ ಸಫಲರಾದರು. 


ಅಚ್ಚರಿಯನ್ನುವಂತೆ ವಿವಾಹವೂ ನಡೆದು ಶ್ವೇತ ಮನೆಗೆ ಬಂದಳು. ಆದರೆ ಕಲ್ಪನಾಳ ಛಾಯೆ ಆ ಮನೆಯವರನ್ನು ಬಿಡುವಂತಿರಲಿಲ್ಲ. ಎಲ್ಲದಕ್ಕೂ ಕಲ್ಪನಾಳನ್ನೇ ಹೋಲಿಸುತ್ತಾ ಶ್ವೇತಳ ಎಲ್ಲಾ ಗುಣಗಳು ಅದರಲ್ಲಿ ಮುಚ್ಚಿ ಹೋಗುವಂತೆ ನಡೆದುಕೊಂಡರು. ಈಕೆಯನ್ನು ಸೂಕ್ಷ್ಮವಾಗಿ ಗಮನಿಸಲೇ ಇಲ್ಲ. ಕಲ್ಪನಾಳ ಮನೆಯವರ ಓಡಾಟ, ಒಡನಾಟ ಮುಂದುವರೆದಿತ್ತು. ಗಂಡ ತನ್ನನ್ನು ಮದುವೆಯಾದದ್ದು ಮಗುವಿಗೋಸ್ಕರ ಎಂದು ತಿಳಿದವಳಿಗೆ ತೀರಾ ಆಘಾತವೇನೂ ಆಗಿರಲಿಲ್ಲ. ಮಗು ರಕ್ಷಿತಾ ತನ್ನ ಬಣ್ಣದಂತಿರದೆ ರಾಜೀವನಂತೆ ಬೆಳ್ಳಗೆ ಹುಟ್ಟಿದ್ದು ಸಂತಸ ತಂದಿದ್ದಾದರೂ.. ದಿನೇದಿನೇ ತನ್ನಿಂದ ದೂರವಾಗುತ್ತಿದ್ದ ಮಗುವನ್ನು ಉಳಿಸಿಕೊಳ್ಳುವ ದಾರಿ ಕಾಣದಾದಾಗ ಆಕೆ ಕಂಗೆಟ್ಟುಬಿಟ್ಟಳು.


ಮೊದಮೊದಲಿಗೆ ತನ್ನದೇ ಬಣ್ಣದ ಲೋಕದಲ್ಲಿ ಕಳೆದು ಹೋಗುತ್ತಿದ್ದವಳು ಶಾಶ್ವತವಾಗಿ ಒಂದು ಕೋಣೆ ಸೇರಿ ಬಿಟ್ಟಳು. 


ಮನೋವೈದ್ಯಳಾದ ರಕ್ಷಿತಾಳಿಗೆ ತನ್ನಮ್ಮನೂ ಮನೋರೋಗಿಯೇ ಎಂದು ತಿಳಿದಾಗ ಅಘಾತವಾಗಿದ್ದು ಏಕೆ..?? ಅದರಲ್ಲಿ ಆಕೆಯ ಪಾಲೂ ಇದ್ದಿತೇ..??


ಶ್ವೇತ ಬರೆದಿದ್ದ ಚಿತ್ರದಲ್ಲಿ ಹಾಗೂ ಡೈರಿಯಲ್ಲಿದ್ದ ಹಂಸ ಹಾಗೂ ಕೋಗಿಲೆಯ ಚಿತ್ರದ ರೂಪಕದ ಅರ್ಥವೇನು..??


ಕಲ್ಪನಳನ್ನು ಅಷ್ಟು ಚೆನ್ನಾಗಿ ಅರ್ಥಮಾಡಿಕೊಂಡಿದ್ದ ರಾಜೀವ ಹಾಗೂ ಆತನ ತಂದೆ-ತಾಯಿ ಶ್ವೇತಾಳನ್ನು ಕಡೆಗಣಿಸಿದ್ದೇಕೆ..? ಅದಕ್ಕೆ ಕಲ್ಪನಾಳ ನೆನಪು ಮಾತ್ರ ಕಾರಣವಾಗಿರಲಿಲ್ಲ.


ಮೋಡದ ತೆರೆ ಸರಿಯಿತೇ ಅಥವಾ ಇನ್ನಷ್ಟು ಮೋಡ ಮುಸುಕಿತೇ..??


ಇಲ್ಲಿ ನಿಜಕ್ಕೂ ತಪ್ಪು ಇಂತಹವರದ್ದೇ ಎಂದು ನಿಶ್ಚಯವಾಗಿ ಹೇಳಲಾಗದು. ತಪ್ಪನ್ನು ತಿದ್ದಿಕೊಳ್ಳುವುದರಲ್ಲಿ ಎಲ್ಲರೂ ಬದಲಾಗಬೇಕು, ಒಗ್ಗೂಡಬೇಕು ಎಂಬುದನ್ನು ನಿಚ್ಚಳವಾಗಿ ತೆರೆದಿಟ್ಟಿದ್ದಾರೆ ಲೇಖಕಿ. ಹೆಣ್ಣಿನ ಸೂಕ್ಷ್ಮ ಮನಸ್ಸು ಎಷ್ಟರಮಟ್ಟಿಗೆ ಘಾಸಿಗೊಳ್ಳಬಲ್ಲದು ಹಾಗೂ ಅದನ್ನು ಘಾಸಿಗೊಳಿಸುವವರು ತಮಗೆ ಅರಿವಿದ್ದೋ.. ಅರಿವಿಲ್ಲದೆಯೋ ವರ್ತಿಸುವ ಬಗೆಯನ್ನು ಸಹಾ ತೆರೆದಿಟ್ಟಿದ್ದಾರೆ. 


ಮನಸ್ಸು ಹಾಗೂ ಹೆಣ್ಣು ಎರಡೂ ಸೂಕ್ಷ್ಮ ವಿಚಾರಗಳು. ಹೆಣ್ಣಿನ ಮನಸ್ಸನ್ನು ಪದೇಪದೇ ನೋಯಿಸುತ್ತಾ ಬಂದರೆ ಆ ನೋವು ಹೇಗೆ ಪೆಡಂಭೂತವಾಗಿ ಕಾಡಬಲ್ಲದು ಎಂಬುದರ ಮನಮುಟ್ಟುವ ಚಿತ್ರಣ ಇಲ್ಲಿದೆ. ಹೆಣ್ಣೊಬ್ಬಳು ತಾಯ್ತನಕ್ಕೆ ಹಾಗೂ ಮಗುವಿಗಾಗಿ ಹಂಬಲಿಸುವ ಪರಿ ಹಾಗೂ ತಾಯ್ತನದ ಮಿಡಿತ.. ಹೆಣ್ಣಿಗೆ ತಾಯ್ತನ ಎಷ್ಟು ಮುಖ್ಯ ಹಾಗೂ ಶ್ರೇಷ್ಠವೆಂಬುದನ್ನು ಬಿಂಬಿಸುತ್ತದೆ. ಮನ ಮಿಡಿಯುವ ಕಾದಂಬರಿಯ ಓದು.

~ವಿಭಾ ವಿಶ್ವನಾಥ್

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ