ಶನಿವಾರ, ಏಪ್ರಿಲ್ 18, 2026

ಸರಿದ ತೆರೆ (ಪುಸ್ತಕ ಯಾನ - 243)


ಪುಸ್ತಕದ ಶೀರ್ಷಿಕೆ : ಸರಿದ ತೆರೆ

ಲೇಖಕರು : ವೈ. ಕೆ ಸಂಧ್ಯಾಶರ್ಮ 

ಪ್ರಕಾಶಕರು : ಸಹನಾ ಪ್ರಕಾಶನ

ಪ್ರಥಮ ಮುದ್ರಣ : 2014


ಹಯವದನಾಚಾರ್ಯರ ಮೊದಲ ಹೆಂಡತಿ ತೀರಿಕೊಂಡ ನಂತರ ಅವರು ಯಮುನಾಬಾಯಿಯನ್ನು ಮದುವೆಯಾಗಿದ್ದರು. ಆಗ ಮಗ ಪ್ರಾಣೇಶನಿಗೆ ಇನ್ನೂ ಎರಡು ವರ್ಷ. ಯಮುನಾಬಾಯಿ ಮೊದಮೊದಲು ಅವನನ್ನು ಅಕ್ಕರೆಯಿಂದ ನೋಡಿಕೊಂಡರೂ.. ತಮ್ಮ ಮಡಿಲು ತುಂಬಿದಾಗ ಪ್ರೀತಿ, ವಾತ್ಸಲ್ಯ ಅತ್ತ ಹರಿಯಿತು. ಯಮುನಾಬಾಯಿಯವರಿಗೆ ಐದು ಮಕ್ಕಳು. ಮೂರು ಹೆಣ್ಣು ಹಾಗೂ ಇಬ್ಬರು ಗಂಡು ಮಕ್ಕಳು. ಹೆತ್ತ ಮಕ್ಕಳಂತೆ ತಾರತಮ್ಯವಿಲ್ಲದೆ ಪ್ರಾಣೇಶನನ್ನು ನೋಡಿಕೊಳ್ಳದಿದ್ದರೂ.. ಮಲ ಮಗನಂತೆ ಕಾಟ ಕೊಡುವುದನ್ನು ಮಾಡಿರಲಿಲ್ಲ. ಪ್ರಾಣೇಶನಿಗೆ ತಾಯಿ ಎಂದರೆ ಅದೇನೋ ಮುಗ್ಧ ಪ್ರೀತಿ. ಪ್ರಾಣೇಶ ಚಿಕ್ಕಂದಿನಿಂದಲೂ ಬಹಳ ಚುರುಕು. ಓದಿನಲ್ಲಿ ಬುದ್ಧಿವಂತ. ಎಲ್ಲಾ ತರಗತಿಗಳಲ್ಲಿಯೂ ಮುಂದಾಗಿ, ಪದವೀಧರನಾಗಿ ಉದ್ಯೋಗ ಹಿಡಿದು ತಂದೆಗೆ ಸಂಸಾರದಲ್ಲಿ ನೆರವಾಗಿದ್ದ. 


ಯಮುನಾಬಾಯಿಯವರಂತೂ ತಿಂಗಳ ಮೊದಲ ದಿನ ಆತ ತಂದಿಡುವ ಸಂಬಳದ ಹಣ ಕಂಡಾಗ ಉಪಚಾರದ ಮೇಲೆ ಉಪಚಾರ ಮಾಡುತ್ತಿದ್ದರು. ತಂಗಿ-ತಮ್ಮಂದಿರು ಆಗಾಗ ಬೇಡಿಕೆಗಳನ್ನಿಡುತ್ತಾ ಪ್ರಾಣೇಶನಿಂದ ಎಲ್ಲವನ್ನೂ ಈಡೇರಿಸಿಕೊಳ್ಳುತ್ತಿದ್ದರು. ಎಲ್ಲವೂ ಸರಿಯಾಗಿತ್ತು ಎನ್ನುವ ಸಂದರ್ಭದಲ್ಲಿಯೇ ಮಗ ತನ್ನ ಮಾತನ್ನು ಕೇಳುತ್ತಾನೆಂಬ ನಂಬಿಕೆ ಇದ್ದ ಯಮುನಾಬಾಯಿಯವರಿಗೆ ಆಘಾತವಾಗಿದ್ದು.. ಪ್ರಾಣೇಶ ತನ್ನ ಕಚೇರಿಯಲ್ಲಿಯೇ ಕೆಲಸ ಮಾಡುತ್ತಿದ್ದ ಹುಡುಗಿಯನ್ನು ಪ್ರೀತಿಸಿದ್ದೇನೆಂದು ಹೇಳಿದಾಗ. ತುಳಸಿ ಅವರ ಜಾತಿಯವಳೇ ಆಗಿದ್ದರೂ ಯಮುನಾಬಾಯಿಗೆ ಏಕೋ, ಆಕೆಯನ್ನು ಮಗ ಪ್ರೀತಿಸುತ್ತಿರುವುದು ಸರಿ ಬಂದಿರಲಿಲ್ಲ. ಆದರೆ, ಅದನ್ನು ಲೆಕ್ಕಿಸದೇ ಹಯವದಾಚಾರ್ಯರು ಮದುವೆಗೆ ಒಪ್ಪಿಗೆ ನೀಡಿಯಾಗಿತ್ತು. 


ಮದುವೆಯ ನಂತರ ಮುಸುಕಿನಲ್ಲಿಯೇ ದುಸುಮುಸು ಶುರುವಾಗಿತ್ತು. ಹೆಣ್ಣು ಮಕ್ಕಳಿರುವಾಗಲೇ ಮಗ ತನ್ನ ಹೆಂಡತಿಯೊಂದಿಗೆ ಸರಸವಾಡುತ್ತಿದ್ದದ್ದು ಯಮುನಾಬಾಯಿ ಹಾಗೂ ಮಕ್ಕಳಿಗೆ ಸರಿ ಬರುತ್ತಿರಲಿಲ್ಲ. ಹಾಗಾಗಿ ತನಗೆ ಹುಷಾರಿಲ್ಲವೆಂಬ ನೆಪ ತೆಗೆದು ಅವರು ಹನಿಮೂನ್ ಗೆ ಹೋಗುವುದನ್ನು ತಪ್ಪಿಸಿದ್ದರು. ಯಮುನಾಬಾಯಿ ಹೊಂದಿಕೊಳ್ಳಲಿಲ್ಲ. ತುಳಸಿ ಮನೆಗೆ ಹೊಂದಿಕೊಳ್ಳಲು ಪ್ರಯತ್ನಿಸಿದಷ್ಟೂ.. ಆಕೆಯನ್ನು ಜರಿಯುತ್ತಾ ಪ್ರತಿಯೊಂದು ಆಕ್ಷೇಪಣೆ ಮಾಡುತ್ತಾ, ಯಮುನಾಬಾಯಿ ಆಕೆಯನ್ನು ಒಪ್ಪುತ್ತಲೇ ಇರಲಿಲ್ಲ. ಇನ್ನು ನಾದಿನಿಯರಾದ ಸುಕನ್ಯಾ, ಸುಧಾರಂತು ಹೊಂದಿಕೊಳ್ಳಲೇ ಇಲ್ಲ. ತುಳಸಿ ಹೇಗೋ ತನ್ನ ಕೈಲಾದದ್ದನ್ನು ಮಾಡುತ್ತಾ ಹೊಂದಿಕೊಳ್ಳುತ್ತಿದ್ದಳು.


ಹಿರಿಯವಳಾದ ಸುಕನ್ಯಾಳ ವಿವಾಹವಾಗುವವರೆಗೂ ತಮಗೆ ಮಕ್ಕಳು ಬೇಡವೆಂದ ಪ್ರಾಣೇಶ. ಗಂಡ-ಹೆಂಡಿರ ನಡುವಿನ ವಿರಸ ದಿನೇದಿನೇ ಹೆಚ್ಚುತ್ತಲೇ ಹೋಯಿತು. ಹಯವದನಾಚಾರ್ಯರು ತೀರಿಕೊಂಡದ್ದಕ್ಕೂ ಯಮುನಾಬಾಯಿ ಸೊಸೆಯ ಕಾಲ್ಗುಣವನ್ನೇ ದೂರಿದರು. ಎಲ್ಲರನ್ನೂ ಮೆಚ್ಚಿಸುವ, ಸ್ವಾಭಿಮಾನವಿಲ್ಲದ ಗಂಡನ ಕುರಿತು ದಿನೇದಿನೇ ಆಕ್ಷೇಪ ಹೆಚ್ಚಾಗುತ್ತಿತ್ತು ತುಳಸಿಗೆ. ಕಚೇರಿಯಿಂದ ಬಂದ ತುಳಸಿ ರೂಮು ಸೇರುವಾಗ, ಅಂದು ವಧುಪರೀಕ್ಷೆಗೆ ಬಂದಿದ್ದವರು ಸುಕನ್ಯಾಳ ಬದಲಿಗೆ ಎರಡನೇ ಮಗಳು ತುಳಸಿಯನ್ನು ಮೆಚ್ಚಿದ್ದೇವೆಂದು ಪತ್ರ ಬರೆದಾಗ ಮನೆಯಲ್ಲಿ ನಡೆದ ರಾದ್ಧಾಂತಕ್ಕೆ ಬೇಸತ್ತು ಆಕೆ ಮನೆ ಬಿಟ್ಟು ಹೊರಟಳು.


ಸುಧಾ ಜಾತಿಯಲ್ಲಿ ಬೇರೆಯಾಗಿದ್ದ ಹಿಂದಿ ಮಾಸ್ಟರ್ ಆದ ಶಿವಾನಂದ್ ಅವರನ್ನು ಪ್ರೇಮ ವಿವಾಹ ಮಾಡಿಕೊಂಡು ಮನೆಯಿಂದ ದೂರಾದಳು. ತನ್ನ ಜಾತಿಯವಳೇ ಆಗಿದ್ದ ಸೊಸೆಯನ್ನೇ ಹೊಂದಿಕೊಳ್ಳದ ಯಮುನಾಬಾಯಿಯವರಂತು ಕುಸಿದೇ ಹೋಗಿದ್ದರು. ಆದರೂ ಮಗಳೆಂಬ ಮಮಕಾರದಿಂದ ಆಕೆ ಗರ್ಭಿಣಿಯಾದಾಗ ಸುಕನ್ಯಾಳನ್ನು ಬಾಣಂತನ ಮಾಡಲೆಂದು ಕಳುಹಿಸಿದ್ದರು. ಕಾಲಕ್ರಮೇಣ ಅವರಿಗೂ ಹೊಂದಿಕೊಂಡರು.


ಇಬ್ಬರು ಗಂಡು ಮಕ್ಕಳಲ್ಲಿ ಮೊದಲನೆಯವನು ಗೋಪಾಲ. ಕೆಲಸಕ್ಕೆ ಸೇರಿಲ್ಲವೆಂಬ ವಿಚಾರಕ್ಕೆ ಬೈದಾಗ ಅದನ್ನೇ ದೊಡ್ಡದು ಮಾಡಿಕೊಂಡು ಆತ ಮನೆ ಬಿಟ್ಟು ಹೋದವನು ನಂತರ ಮತ್ತೊಬ್ಬರ ಮನೆ ಅಳಿಯನಾಗಿಯೇ ಸೇರಿಹೋದ. ಮತ್ತೆ ಇತ್ತ ಸೇರಲಿಲ್ಲ.


ಮೂರನೇ ಮಗಳು ಜ್ಯೋತಿ ಮನೆಯ ಕಷ್ಟ ನೋಡಲಾಗದೆ ಓದನ್ನು ಅರ್ಧಕ್ಕೆ ಮೊಟಕುಗೊಳಿಸಿ ಲಾಯರ್ ಆಫೀಸಿನಲ್ಲಿ ಟೈಪಿಸ್ಟ್ ಕೆಲಸಕ್ಕೆ ಸೇರಿದಳು. ಮೊದಮೊದಲು ಎಲ್ಲವೂ ಚೆನ್ನಾಗಿಯೇ ನಡೆಯುತ್ತಿತ್ತು ಎನ್ನಿಸಿದರೂ.. ನಂತರ ಆಕೆ ಮನೆಗೆ ಬಂದು ಹೋಗುವ ಸಮಯ, ಅಲಂಕಾರ ಎಲ್ಲವೂ ಅವರಲ್ಲಿ ಆತಂಕ ಮೂಡಿಸಿತ್ತು. ವಯಸ್ಸಿಗೆ ಬಂದ ಮಗಳು ದುಡುಕಿಯಾಗಿತ್ತು. ಯಮುನಾಬಾಯಿಗೆ ಬುದ್ಧಿ ಬಂದಿತ್ತು. ಯಾರಿಗೂ ಹೇಳದೆ ಅದನ್ನು ತೆಗೆಸಿಕೊಂಡು ಬಂದರು. ಜ್ಯೋತಿ ಮನೆಯಲ್ಲಿಯೇ ಉಳಿದಳು. 


ಅಕ್ಕ-ಅಣ್ಣ ಇಬ್ಬರೂ ಜಾತಿಯಿಂದ ಬೇರೆಯವರನ್ನು ಮದುವೆಯಾದ ಮೇಲೆ ಸುಧಾಳ ಭವಿಷ್ಯ ಇನ್ನೂ ಕಗ್ಗಂಟಾಗಿತ್ತು. ತಮ್ಮ ಜಯತೀರ್ಥನ ಹೆಂಡತಿ ರತ್ನಳಿಗೆ ಕ್ಯಾನ್ಸರ್ ಎಂದು ತಿಳಿದಾಗ ಮರುಗಿ ಆತನ ಮಗುವನ್ನು ತಮ್ಮ ಮನೆಯಲ್ಲಿಯೇ ಇಟ್ಟುಕೊಂಡು ನೋಡಿಕೊಂಡರು. ಮಗು ಸುಧಾಳಿಗೆ ಬಹಳ ಹೊಂದಿಕೊಂಡಿತು. ರತ್ನಾಳು ಕ್ಯಾನ್ಸರ್ ನಿಂದ ಉಳಿಯಲಿಲ್ಲ. ಜಯತೀರ್ಥನಿಗೆ ಮತ್ತೊಂದು ವಿವಾಹವಾಗುವ ಸಲಹೆ ನೀಡಿದ ಯಮುನಾಬಾಯಿಯವರಿಗೆ ಅಚ್ಚರಿಯಾಗುವಂತೆ ಸುಧಾ ತಾನೇ ಆ ಮಗುವಿನ ತಾಯಿಯಾಗುವುದಾಗಿ ಹೇಳಿದಳು. ನಂತರ ಆಕೆಗೆ ಶ್ರೀಧರನೆಂಬ ಮಗ ಹುಟ್ಟಿದನು. 


ಚಿಕ್ಕ ಮಗ ಶ್ರೀನಿವಾಸ ಚೆನ್ನಾಗಿ ಓದಿ ವಿದೇಶಕ್ಕೆ ಹಾರಿದವನು, ಮತ್ತೆ ಮನೆಯತ್ತಾ ತಲೆ ಹಾಕಲಿಲ್ಲ. 


ಯಮುನಾಬಾಯಿಯವರ ಪಾಲಿಗೆ ಉಳಿದದ್ದು ಈಗ ಪ್ರಾಣೇಶ ಮಾತ್ರವೇ. ಮಲ ಮಗನಾದರೂ ಒಂದು ದಿನವೂ ಆತ ತಾಯಿಯನ್ನು ಅಸಡ್ಡೆ ಮಾಡಲಿಲ್ಲ. ಕಾಲ ಸಾಗುತ್ತಿದ್ದಂತೆ ಯಮುನಾಬಾಯಿಯವರ ಬುದ್ಧಿ ಬದಲಾಗಿತ್ತು. ತುಳಸಿ ಕಡೆಗೆ ತಮ್ಮ ನಡೆ ತಪ್ಪು ಎಂಬ ಅರಿವಾಗಿತ್ತು. ಆದರೆ, ಈಗ ಕಾಲ ಮಿಂಚಿ ಹೋಗಿತ್ತು. 


ಸುಕನ್ಯಾ ತನ್ನ ಮಗಳ ಮದುವೆಗೆ ಸುಧಾ ಹಾಗೂ ಗೋಪಾಲರ ಸಂಸಾರವನ್ನು ಆಹ್ವಾನಿಸಿದಾಗ ಯಮುನಾಬಾಯಿ ಎಲ್ಲರನ್ನೂ ನಗುತ್ತಲೇ ಮಾತನಾಡಿಸಿದ್ದರು. ಶ್ರೀಧರ ಕೆಲಸಕ್ಕೆ ಸೇರಿದ್ದ. ಶ್ರೀಧರ ಸ್ವಭಾವತಃ ಮೃದು, ಭಕ್ತಿ ಭಾವವುಳ್ಳ ಹುಡುಗ. ಮಕ್ಕಳೇ ತಮ್ಮ ಸಂಪ್ರದಾಯ, ಪದ್ಧತಿಯನ್ನು ಅಲಕ್ಷಿಸಿ ಒಂದೊಂದು ದಾರಿ ಹಿಡಿದಿದ್ದಾಗ ಶ್ರೀಧರ ಹಳೆ ಬೇರಿನತ್ತ ಒಲವು ತೋರಿದ್ದ. ಆತನನ್ನು ಒಂದು ಹುಡುಗಿಯ ಜೊತೆ ನೋಡಿದ್ದೇವೆ ಎನ್ನುವವರ ಮಾತನ್ನು ಕೇಳಿ ಅವನನ್ನೇ ವಿಚಾರಿಸಿದಾಗ, ಆಕೆಯನ್ನು ಅನುಮಾನಿಸಬಾರದೆಂದೂ.. ತಮ್ಮ ನಡುವೆ ಹಾಗೇನಿಲ್ಲವೆಂದು ಶೀಲಾ ನಾಯ್ಡು ಎಂದು ಪರಿಚಯಿಸಿದ. ಕಾರಣಾಂತರದಿಂದ ಮನೆಗೆ ಬಂದವಳು, ನಂತರ ಬಂದು ಹೋಗುವ ಬಂಧುವೇ ಆದಳು. ಜಾತಿ, ಮತ ಎಲ್ಲವನ್ನು ಮರೆತು.. ಆತ್ಮೀಯಳಂತೆ ಅಜ್ಜಿ, ಮೊಮ್ಮಗಳಂತೆ ನಡೆಸಿಕೊಳ್ಳುತ್ತಿದ್ದಳು ಶೀಲಾಳನ್ನು.


ಶೀಲಾ ತನ್ನ ಹುಟ್ಟು ಹಬ್ಬಕ್ಕೆಂದು ತಮ್ಮ ಮನೆಗೆ ಆಹ್ವಾನಿಸಿದಾಗ ಮೊದಮೊದಲಿಗೆ ಒಪ್ಪದಿದ್ದರೂ ಮನೆಯಲ್ಲಿ ತಾನು, ತನ್ನ ತಾಯಿ ಹಾಗೂ ಅಣ್ಣ ಮಾತ್ರ ಇರುವುದು. ತಂದೆ ಕಳೆದ ವರ್ಷ ತೀರಿ ಹೋದರು. ಅಲ್ಲದೆ, ಅಡುಗೆಯ ವಿಚಾರದಲ್ಲಿಯೂ ತೊಂದರೆಯಾಗದು ಎಂದಾಗ ಅದೆಲ್ಲವನ್ನು ಈಗ ಬಿಟ್ಟಿದ್ದೇನೆ ಎಂದ ಯಮುನಾಬಾಯಿ ಶೀಲಾಳ ಮನೆಗೆ ಹೋದರೆ ಅವರಿಗೊಂದು ಅಚ್ಚರಿ ಕಾದಿತ್ತು. ಅತ್ತ ಶೀಲಾಳ ಅಮ್ಮನಿಗೂ.. ಏಕೆಂದರೆ ಅಲ್ಲಿದ್ದದ್ದು ತುಳಸಿ. 


ಶೀಲಾ ನಾಯ್ಡುವಿನ ಅಮ್ಮ ತುಳಸಿ ಎಂದಾದರೆ.. ತುಳಸಿಯ ಬದುಕಿನ ಕಥೆ ಏನಾಗಿತ್ತು ? ತುಳಸಿ ಮನೆತೊರೆದು ಹೋದ ನಂತರ ಪ್ರಾಣೇಶ ಕೋಪದಲ್ಲಿ ಮೊದಮೊದಲು ನಿರ್ಲಕ್ಷಿಸಿದನಾದರೂ.. ನಂತರ ವಿಚಾರಿಸಿದಾಗ ಆಕೆ ಮನೆ ತೊರೆದು ಎಲ್ಲಿಯೋ ಹೋಗಿಯಾಗಿತ್ತು. ಎಲ್ಲೆಡೆಯಿಂದಲೂ ಆಕೆಯ ಸುದ್ದಿಯಿರಲಿಲ್ಲ. ಹಾಗಾದರೆ, ಅವಳ ಬಾಳಿನಲ್ಲಿ ನಡೆದ ಘಟನೆಗಳೇನು..? ಯಮುನಾಬಾಯಿ ಹಾಗೂ ಪ್ರಾಣೇಶ ಈ ಪ್ರಸಂಗವನ್ನು ನಿಭಾಯಿಸಿದ್ದು ಹೇಗೆ ? ತುಳಸಿಗೆ ಬದಲಾದ ಯಮುನಾಬಾಯಿಯಿಂದ ಸಿಕ್ಕ ಪ್ರತಿಕ್ರಿಯೆ ಹೇಗಿತ್ತು  ?ಸರಿದ ತೆರೆ ಯಾವ ರೀತಿಯ ಬದುಕಿನ ದರ್ಶನವನ್ನು ಮಾಡಿಸಿತ್ತು ? ಎಲ್ಲವನ್ನೂ ತಿಳಿಯಲು ಓದಿ 'ಸರಿದ ತೆರೆ' ಕಾದಂಬರಿಯನ್ನು. 


ಮೌಢ್ಯದ ತೆರೆಯನ್ನು ಸರಿಸಿದ ನಂತರ ಯಮುನಾಬಾಯಿಯವರ ಬದುಕು ಬದಲಾಗಿತ್ತು ಎಂಬುದು ನಿಜವಾದರೂ.. ಅಷ್ಟರೊಳಗಾಗಿ ಬದಲಾದ ಬದುಕುಗಳೆಷ್ಟೋ.. ತೆರೆ ಸರಿದ ನಂತರವೂ ಮುಸುಕು ಉಳಿಯುವುದೇ ? ಕಾಲವೇ ಎಲ್ಲವನ್ನೂ ಬದಲಾಯಿಸುತ್ತದೆ ಎಂಬುದೂ ಗಮನೀಯ. ಸೊಗಸಾದ ಕಾದಂಬರಿಯ ಸುಲಲಿತ ಓದು.

~ವಿಭಾ ವಿಶ್ವನಾಥ್

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ