ಪುಸ್ತಕದ ಶೀರ್ಷಿಕೆ : ಕಾನನದ ಸುಮವೊಂದು
ಲೇಖಕರು : ವೇದ ಮಂಜುನಾಥನ್
ಪ್ರಕಾಶಕರು : ಶ್ರೀ ಲಕ್ಷ್ಮೀ ವೆಂಕಟೇಶ್ವರ ಪ್ರಕಾಶನ
ಪ್ರಥಮ ಮುದ್ರಣ : 2006
ಕಾನನದ ಸುಮವೊಂದು ಇದು ವೇದ ಮಂಜುನಾಥ್ ಅವರ ಕಿರು ಕಾದಂಬರಿ. ಕಾದಂಬರಿಯ ಶೀರ್ಷಿಕೆಯನ್ನು ಕಂಡಾಗ ಹಳ್ಳಿಯ ಅಥವಾ ಬೆಳಕಿಗೆ ಬಾರದ ಪ್ರತಿಭೆಯೊಂದು ಅರಳುವ ಬಗೆಯನ್ನು ಹೇಳಿರಬಹುದೇನೋ ಎಂದೆನಿಸಿತು. ಈ ಕಾದಂಬರಿಯಲ್ಲಿ ಸಿನಿಮಾ ನಟಿಯೊಬ್ಬಳು ಬದುಕಿನ ಚಿತ್ರಣವಿದೆ. ಅದರಲ್ಲಿಯೂ.. ಹಳ್ಳಿಯಲ್ಲಿ ಬೆಳೆದ ಕಾನನದ ಸುಮದಂತಿದ್ದು ಅರಳಿದ ಪ್ರತಿಭೆಯ ಪರಿ ಕಾಣಸಿಗುತ್ತದೆ.
'ಸೂರ್ಯೋದಯ' ಎಂಬ ದಿನಪತ್ರಿಕೆಯಿಂದ ಅವಳ ಸಂದರ್ಶನಕ್ಕಾಗಿ ಬಂದವರು ಕೇಳಿದ ಪ್ರಶ್ನೆಗಳು ಹಾಗೂ ಅದಕ್ಕೂ ಮುಂಚಿನ ಕೆಲ ನೆನಪುಗಳನ್ನು ಮೆಲುಕು ಹಾಕುತ್ತಿದ್ದಳು ಸುರಭಿ.
ಸುರಭಿಯ ಮೊದಲ ಹೆಸರು ತುಂಗಾ. ತುಂಗಾ ರಾಮಾಶಾಸ್ತ್ರಿಗಳು ಹಾಗೂ ಸೀತಮ್ಮನವರಿಗೆ ಮೂರನೆಯ ಮಗಳು. ಶಾಸ್ತ್ರಿಗಳ ಮೊದಲ ಮಗ ಶ್ರೀಧರ. ಎರಡನೆಯವಳು ಪಂಕಜ. ಮೂರನೇ ಮಗಳೇ ತುಂಗಾ. ಶಾಸ್ತ್ರಿಗಳು ಹಳ್ಳಿಯ ಪೌರೋಹಿತ್ಯ ಮಾಡಿಕೊಂಡು ಇದ್ದವರು. ಅದರಿಂದ ಬಂದ ಆದಾಯದಲ್ಲೇ ಅವರ ಪತ್ನಿ ತಮ್ಮ ಮನೆಯನ್ನು ನಡೆಸುತ್ತಿದ್ದರು. ಸ್ವಗ್ರಾಮ ಬೆಳಗೆರೆಯಲ್ಲಿ ಆಸ್ತಿ-ಪಾಸ್ತಿಗಳು ಭಾಗವಾಗಿ ವರ್ಷಗಳೇ ಕಳೆದಿದ್ದವು. ಅವರಿಗೆ ಬಂದಿದ್ದ ಹೊಲವನ್ನು ಬೇರೆಯವರಿಗೆ ಬಾಡಿಗೆಗೆಂದು ನೀಡಿ, ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಬೇರೆಯ ಊರಿಗೆ ಬಂದಿದ್ದರು.
ಶ್ರೀಧರ ಕಾಲೇಜು ಓದುತ್ತಿದ್ದುದರ ಜೊತೆಗೆ ಪಾರ್ಟ್ ಟೈಮ್ ಕೆಲಸಕ್ಕೆ ಎಂದು ಮಂಡಿಯಲ್ಲಿ ಲೆಕ್ಕ ಬರೆಯುತ್ತಿದ್ದ. ಪಂಕಜ ಟಿ.ಸಿ.ಎಚ್ ಓದುತ್ತಾ ಮಕ್ಕಳಿಗೆ ಮನೆ ಪಾಠ ಹೇಳಿಕೊಡುತ್ತಿದ್ದಳು. ತುಂಗಾ ಮಾತ್ರ ಚಿಕ್ಕವಳೆಂದು ಅವಳಿಗೆ ಇದೆಲ್ಲದರಿಂದ ಸ್ವಲ್ಪ ಬಿಡುವಿತ್ತು.
ತುಂಗಾಳಿಗೆ ಅಚ್ಚುಮೆಚ್ಚಿನ ಅಣ್ಣನಾಗಿದ್ದು ಅವಳ ದೊಡ್ಡಪ್ಪನ ಮಗ ನರಹರಿ. ಅವನ ತಂದೆ ಶ್ರೀಕಂಠ ಶಾಸ್ತ್ರಿಗಳು ಹಾಗೂ ತಾಯಿ ಚಿಕ್ಕ ವಯಸ್ಸಿನಲ್ಲಿಯೇ ತೀರಿಹೋಗಿದ್ದರಿಂದ ಸೀತಮ್ಮನವರು ತಮ್ಮ ಮೂರು ಮಕ್ಕಳ ಜೊತೆಗೆ ಅವನನ್ನೂ ತನ್ನ ಮಗನೆಂದೇ ಭಾವಿಸಿ ಬೆಳೆಸಿದ್ದರು. ಆತನು ಶ್ರೀಧರನಿಗಿಂತ ಮೂರು ವರ್ಷ ದೊಡ್ಡವನು. ತನ್ನ ಚಿಕ್ಕಪ್ಪ-ಚಿಕ್ಕಮ್ಮನನ್ನೇ ಅಪ್ಪ-ಅಮ್ಮನೆಂದು ಭಾವಿಸಿದ್ದನು. ಆತ ಎಲ್.ಎಲ್.ಬಿ ಮುಗಿಸಿ ಲಾಯರ್ ಆಗಿದ್ದ. ನಿತ್ಯವೂ ಪಟ್ಟಣಕ್ಕೆ ಕೋರ್ಟಿಗೆ ಓಡಾಡುತ್ತಿದ್ದ. ಸೀತಮ್ಮನೇ ಮುಂದೆ ನಿಂತು ತಮ್ಮ ದೂರದ ಸಂಬಂಧಿಗಳ ಒಬ್ಬಳೇ ಮಗಳಾದ ವಸಂತಳನ್ನು ಮದುವೆ ಮಾಡಿದ್ದರು. ಎಲ್ಲರೊಂದಿಗೆ ಹೊಂದಿಕೊಂಡು ಬಾಳುತ್ತಿದ್ದರು ಎಲ್ಲರೂ.
ತುಂಗಾಳಿಗೆ ಶಾಲೆಯಲ್ಲಿ ಹೊಸದಾಗಿ ಶುರುವಾಗಿದ್ದ ಮ್ಯೂಸಿಕ್ ಹಾಗೂ ಡ್ಯಾನ್ಸ್ ಕಲಿಯಲು ಆಸಕ್ತಿಯಿತ್ತು. ಆದರೆ, ಮನೆಯಲ್ಲಿ ತಂದೆಯ ಬಳಿ ಇದಕ್ಕೆ ಅವಕಾಶವಿರಲಿಲ್ಲ. ಅವಳ ಆಸಕ್ತಿ ಕಂಡು ಪ್ರೋತ್ಸಾಹಿಸಿದ್ದು ಅಣ್ಣ ನರಹರಿ. ಹೀಗೆ ಪ್ರೋತ್ಸಾಹಿಸುತ್ತಿದ್ದ ನರಹರಿಗೆ ಹಳ್ಳಿಯ ಜೀವನವನ್ನು ಬಿಟ್ಟು ಪಟ್ಟಣಕ್ಕೆ ಹೋಗುವ ಆಸೆ ಮೊಳೆತಿತ್ತು. ಹಾಗೆಂದು ಆತ ತಾನು ತನ್ನ ಹೆಂಡತಿ ಮಾತ್ರ ಎಂದು ಬೇರೆ ಹೋಗಲು ಸಿದ್ದನಿರಲಿಲ್ಲ. ತನ್ನ ಜೊತೆ ಇಡೀ ಕುಟುಂಬದವರನ್ನು ಕರೆದೊಯ್ಯಲು ಸಿದ್ದನಾಗಿದ್ದ. ಅದಕ್ಕೆ ಉಳಿದವರಾರೂ ಸಿದ್ಧವಿರಲಿಲ್ಲ. ಕೊನೆಗೂ ಆತನ ಆಸೆಯಂತೆ ಆತ ಹಾಗೂ ವಸಂತನ ಜೊತೆಗೆ ಓದಲು ತುಂಗಾಳನ್ನು ಪಟ್ಟಣಕ್ಕೆ ಕರೆದೊಯ್ದರು.
ತುಂಗಾ ಪಟ್ಟಣಕ್ಕೆ ಬಂದ ನಂತರ ಆಕೆಯ ಅದೃಷ್ಟ ಬದಲಾಗಿತ್ತು. ಕೇವಲ ಮ್ಯೂಸಿಕ್ ಹಾಗೂ ಡ್ಯಾನ್ಸ್ ನಲ್ಲಿ ಆಸಕ್ತಿಯಿದ್ದ ಅವಳು ಈಗ ಖ್ಯಾತ ನಟಿಯಾಗಿದ್ದಳು. ಆದರೆ, ಬೇರೆ ನಟಿಯರಂತಿರಲಿಲ್ಲ ಅವಳು.
ಎಲ್ಲಾ ನಟಿಯರಂತೆ ತನ್ನ ಹುಟ್ಟುಹಬ್ಬವನ್ನು ಆಡಂಬರವಾಗಿ ಆಚರಿಸಿಕೊಳ್ಳದೆ, ಕೇವಲ ದೇವಸ್ಥಾನಕ್ಕೆ ಹೋಗಿ ಬಂದು ಮನೆಯಲ್ಲಿಯೇ ಸಿಹಿ ತಿಂಡಿ ಮಾಡಿಸುತ್ತಾಳೆ. ಅಭಿಮಾನಿಗಳಿಗೆ ಗೊತ್ತಾದರೆ ಅವಳ ಹುಟ್ಟುಹಬ್ಬವನ್ನು ಹಬ್ಬದಂತೆಯೇ ಮಾಡುತ್ತಿದ್ದವರು. ಆದರೆ, ಯಾರಿಗೂ ಇದರ ಗುಟ್ಟು ಬಿಟ್ಟು ಕೊಟ್ಟಿರಲಿಲ್ಲ ಸುರಭಿ.
ತುಂಗಾ ನಟಿಯಾಗುವುದು ಮನೆಯಲ್ಲಿ ಸುತಾರಾಂ ಇಷ್ಟವಿರಲಿಲ್ಲ. ಆದರೆ, ತುಂಗಾಳ ಹಠಕ್ಕೆ ಮಣಿದು ಒಪ್ಪುವ ಸಂದರ್ಭವೂ ಇರಲಿಲ್ಲ. ಶಾಸ್ತ್ರಿಗಳು ಅವಳನ್ನು ತಮ್ಮ ಮಗಳೆಂಬ ಸ್ಥಾನದಿಂದ ಕಿತ್ತುಹಾಕಿ ದೂರವಿದ್ದು ಬಿಟ್ಟಿದ್ದರು. ಸೀತಮ್ಮ ಮಗಳ ಮನ ಪರಿವರ್ತಿಸಲು ಮುಂದಾಗಿ ಸೋತಿದ್ದರು. ತುಂಗಾಳ ನಿರ್ಧಾರ ಅಚಲವಾಗಿದ್ದಾಗ ಇದಕ್ಕೆ ಕಾರಣ ನರಹರಿ ಎಂದು ಅವನನ್ನು ಸಂಬಂಧದಿಂದ ದೂರವಿರಿಸಿಬಿಟ್ಟಿದ್ದರು.
ಬಣ್ಣದ ಬದುಕಿನ ನಡುವೆ ಕಳೆದು ಹೋದ ಎಷ್ಟೋ ನಟಿಯರು ಮತ್ತೆ ತಮ್ಮ ಹಿಂದಿನ ಜೀವನವನ್ನು ನೆನಪಿಸಿಕೊಳ್ಳುತ್ತಾರೆ. ಸುರಭಿ ಕೂಡಾ ತನ್ನ ಹಿಂದಿನ ಬದುಕಿಗೆ ಹಿಂದಿರುಗಲು, ಹಳ್ಳಿಯ ಮುಕ್ತ ಜೀವನದಲ್ಲಿ ಬದುಕಲು ಆಶಿಸುತ್ತಿದ್ದಳು. ಆದರೆ, ಅದು ಅಷ್ಟು ಸುಲಭವಾಗಿರಲಿಲ್ಲ.
ತುಂಗಾ ಸುರಭಿಯಾಗಿ ಬದಲಾಗಲು ಕಾರಣವೇನು..?? ಅದರಲ್ಲಿ ನರಹರಿಯ ಪಾತ್ರವೆಷ್ಟಿತ್ತು..?? ಮೊದಲಿಗೆ ನರಹರಿ ಈಕೆಯನ್ನು ಪ್ರೋತ್ಸಾಹಿಸಿದರೂ.. ಆತನ ಕೆಲಸ,ಸಂಸಾರದ ನಡುವೆ ಅವನ ಪ್ರೋತ್ಸಾಹ ಮುಂದುವರಿಯಿತೇ.. ಆತನ ವೃತ್ತಿ ಜೀವನ ಹೇಗೆ ನಡೆಯುತ್ತಿತ್ತು..??
ತುಂಗಾ ಸುರಭಿಯಾಗಿ ಬದಲಾದ ನಂತರ ಅವಳ ಬದುಕಿನಲ್ಲಿ ನಡೆದ ಮಹತ್ತರವಾದ ಬದಲಾವಣೆಗಳೇನು..?? ತಂದೆ ಆಕೆಯನ್ನು ಕ್ಷಮಿಸಿದರೇ.. ತಾಯಿ ಯಾರ ಪರ ನಿಂತರು.?? ಅಣ್ಣ ಹಾಗೂ ಅಕ್ಕನ ಬದುಕಿನ ಸ್ಥಿತಿ ಈಗ ಹೇಗಿತ್ತು..?? ತನ್ನ ತವರಿಗೆ ಯಾವುದಾದರೂ ಸಹಾಯ ಮಾಡಿದ್ದಳೇ..??
ಬಣ್ಣದ ಬದುಕಿನ ನಂತರ ವೈವಾಹಿಕ ಬದುಕು ಸಹ ಜೀವನದಲ್ಲಿ ಅಷ್ಟೇ ಮುಖ್ಯವಾಗುತ್ತದೆ. ಯೌವ್ವನ ಕಳೆದ ನಂತರ ಬಣ್ಣದ ಬದುಕು ಮಾಸುತ್ತಾ ಬರುವ ಸಂದರ್ಭದಲ್ಲಿ ವೈವಾಹಿಕ ಬದುಕಿನ ಅವಶ್ಯಕತೆ ಇರುತ್ತದೆ. ಸುರಭಿ ಈ ಘಟ್ಟದಲ್ಲಿ ಯಾವ ನಿರ್ಧಾರವನ್ನು ಮಾಡುತ್ತಾಳೆ..??
ಸೂರ್ಯೋದಯ ಪತ್ರಿಕೆಗೆ ಆಕೆ ಕೊಟ್ಟ ಸಂದರ್ಶನದ ಜೊತೆಗೆ ಅಷ್ಟು ದಿನ ಯಾಕೆ ಗುಟ್ಟಾಗಿಟ್ಟಿದ್ದ ಅವಳ ಬದುಕಿನ ಮುಖ್ಯ ಘಟನೆಗಳು ಸಹಾ ತೆರೆದುಕೊಳ್ಳುತ್ತವೆ. ಅದಕ್ಕೆ ಕಾರಣರಾದವರು ಯಾರು..??
ಕಾನನದ ಸುಮವೊಂದು ಪಟ್ಟಣದ ಬದುಕಿನಲ್ಲಿ ಅರಳುವುದು ಹಾಗೂ ಗಂಧವನ್ನು ಪಸರಿಸುವುದು ಸುಲಭವಿಲ್ಲದ ಆ ಪಯಣದಲ್ಲಿ ಅದು ಬಳಲಿತೇ..? ಉತ್ತರ ತಿಳಿಯಲು ನೀವೇ ಓದಿ.
ತುಂಗಾ ಸುರಭಿಯಾಗಿರುವ ಘಟ್ಟದಲ್ಲಿ ಅವಳ ಬಣ್ಣದ ಬದುಕಿನ ಘಟ್ಟಗಳ ಜೊತೆಗೆ ಹೆಣ್ಣಿನ ಮನಸ್ಸಿನ ಸೂಕ್ಷ್ಮ ಭಾವನೆಗಳು ಹಾಗೂ ಮಾಗಿದ ಮನಸ್ಸಿನ ಭಾವನೆಗಳು ಸಹಾ ಕಾಣುತ್ತವೆ. ಚಿಕ್ಕ ಚೊಕ್ಕ ಕಾದಂಬರಿಯ ಚೆಂದದ ಓದು.
~ವಿಭಾ ವಿಶ್ವನಾಥ್
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ