ಶುಕ್ರವಾರ, ಏಪ್ರಿಲ್ 17, 2026

ನಾಟ್ಯ ಮಯೂರಿ (ಪುಸ್ತಕ ಯಾನ - 216)


ಪುಸ್ತಕದ ಶೀರ್ಷಿಕೆ : ನಾಟ್ಯ ಮಯೂರಿ

ಲೇಖಕರು : ಡಾ. ಸಾ. ಶಿ. ಮರುಳಯ್ಯ

ಪ್ರಕಾಶಕರು :ಸಪ್ನ ಬುಕ್ ಹೌಸ್

ಪ್ರಥಮ ಮುದ್ರಣ : 1994

ನಲವತ್ಮೂರನೇ ಮುದ್ರಣ : ಫೆಬ್ರವರಿ 2024 (ನನ್ನ ಓದಿಗೆ ಸಿಕ್ಕಿದ್ದು)

ಪುಟಗಳು : 94

ಬೆಲೆ : 70 ರೂ. 


ರಾಣಿ ಶಾಂತಲೆಯ ಕುರಿತಾಗಿ ಹಲವಾರು ಪುಸ್ತಕಗಳು ಬಂದಿದ್ದರೂ.. ಒಂದೊಂದು ಕಾದಂಬರಿ, ಒಂದೊಂದು ಕಥೆಯಲ್ಲಿಯೂ ಶಾಂತಲೆ ವಿಭಿನ್ನವಾಗಿ ಕಾಣಸಿಗುತ್ತಾಳೆ. ಶಾಂತಲೆಯ ಕುರಿತು ತಿಳಿಯುವ ಆಸಕ್ತಿಯು ಹೆಚ್ಚಾಗಿ.. ಹಿಡಿದದ್ದು ನಾಟ್ಯಮಯೂರಿ ಕಾದಂಬರಿಯನ್ನು. ನಾಟ್ಯರಾಣಿ, ನೃತ್ಯ ಸರಸ್ವತಿಯ ಅನುರೂಪದಂತಹಾ ಶೀರ್ಷಿಕೆಯೇ 'ನಾಟ್ಯಮಯೂರಿ'.


ಕಾದಂಬರಿ ಶುರುವಾಗುವುದು ಶಾಂತಲೆಯ ನೃತ್ಯದ ಸಂದರ್ಭದಲ್ಲಿ. ತನ್ನ ತಂದೆ ಮಾರಸಿಂಗಮಯ್ಯನವರ ಹಿಂಜೇರು ಯುದ್ಧಭೂಮಿಯಿಂದ ಕಳುಹಿಸಿದ ವಿಜಯದ ಸುದ್ದಿ ಕೇಳಿ ಅದರ ಸಂತೋಷಾರ್ಥವಾಗಿ ಹೊನ್ನಾದೇವಿಗೆ ವಿಶೇಷ ಪೂಜೆ ಹಾಗೂ ವಿಶೇಷ ನರ್ತನದ ಸಂದರ್ಭದಲ್ಲಿ ಆಕೆಯ ನೃತ್ಯವನ್ನು ತಂದೆಯ ಜೊತೆಗೆ ಭಾವಿ ಪ್ರಭುಗಳಾದ ವಿಷ್ಣುವರ್ಧನರೂ ನೋಡುತ್ತಾರೆ. ತಂದೆ ಹಾಗೂ ತಾಯಿ ಮಾಚಿಕಬ್ಬೆಯವರ ಅಪ್ಪಣೆಯಂತೆ ಶಾಂತಲೆ ಹೊನ್ನಾದೇವಿಯ ಎದುರು ಮತ್ತೆ ನರ್ತನಕ್ಕೆ ನಿಲ್ಲುತ್ತಾಳೆ. ಅವಳ ಜೊತೆಗೆ ಶಿವನ ವೇಷ ಧರಿಸಿದ್ದ ಲಕ್ಷ್ಮಿಯೂ ಸೇರುತ್ತಾಳೆ.


ದ್ವಾರಸಮುದ್ರದ ದಾರಿಯಲ್ಲಿ ವಿಷ್ಣುವರ್ಧನ ಯುವರಾಜರು ಆತ್ಮೀಯ ಗೆಳೆಯ ಹಾಗೂ ಸಹಪಾಠಿಯಾದ ಬಪ್ಪರಸನೊಡನೆ ಸಂಭಾಷಣೆ ನಡೆಸುತ್ತಾ.. ಮಾರಸಿಂಗಮಯ್ಯನವರ ಬಗ್ಗೆ ತಿಳಿಯುತ್ತಾನೆ. ಮಾರಸಿಂಗಮಯ್ಯನವರು ಹುಟ್ಟಿದ್ದು ಶಿವ ಕ್ಷೇತ್ರವೆನಿಸಿದ ಬಳ್ಳಿಗಾವಿಯಲ್ಲಿ. ವಿದ್ಯೆ ಕಲಿತದ್ದು ಅಲ್ಲಿನ ಕೋಡಿಮಠದಲ್ಲಿ. ಎರೆಯಂಗರ ದೃಷ್ಟಿಗೆ ಬಿದ್ದು ಅಲ್ಲೇ ಪೆರ್ಗಡೆಯಾಗಿ ನಿಯಮಿತರಾದರು. ಒಂದು ದಿನ ಶ್ರವಣಬೆಳಗೊಳಕ್ಕೆ ದಯಮಾಡಿಸಿದಾಗ ಅಲ್ಲಿನ ಪೆರ್ಗಡೆಯ ಮಗಳು ಮಾಚಿಕಬ್ಬೆ ಅವರ ಕಣ್ಣಿಗೆ ಬಿದ್ದು, ನಂತರ ವಿವಾಹವೂ ನೆರವೇರಿ ಲಗ್ನದ ನಂತರ ಶಿವಗಂಗೆ ನಾಡಿನ ಡಣಾಯಕ ಪದವಿ ದೊರೆಯಿತು. ಆನಂತರ ಅವರು ಪತ್ನಿ ಸಮೇತರಾಗಿ ನೆಲೆಸಿದ್ದು ಶಿವಗಂಗೆಯಲ್ಲಿ. ಇದರ ಜೊತೆಗೆ ಆತ ಶಾಂತಲೆಯ ಕುರಿತಾದ ಹಲವು ವಿಚಾರಗಳನ್ನು.. ಆಕೆ ಕಲಿತ ಅರವತ್ನಾಲ್ಕು ವಿದ್ಯೆಗಳ ಕುರಿತಾಗಿ ಹೇಳುತ್ತಾ ಯುವರಾಜರ ಮನಸ್ಸಿಗೆ ತಂಪೆರೆಯುತ್ತಾನೆ. ಲಕ್ಷ್ಮಿಯ ಕುರಿತು ಕೇಳಿದಾಗ ಆಕೆ ಮೂರು ದಿನದ ಹಸುಳೆಯಾಗಿದ್ದಾಗ ಶ್ರೀರಾಮಾನುಜಾಚಾರ್ಯರ ಶ್ರೀಮಠಕ್ಕೆ ಯಾರೋ ತಂದು ಅರ್ಪಿಸಿ ಹೋದರೆಂದು ನಂತರ ಶಾಂತಲೆಯ ತಂದೆ-ತಾಯಿಯರೇ ಅವಳನ್ನು ಸಾಕಿದ್ದನ್ನು ಹೇಳುತ್ತಾರೆ. 


ಬಲ್ಲಾಳ, ವಿಷ್ಣು ಹಾಗೂ ಉದಯಾದಿತ್ಯರ ತಂದೆ ಎರೆಯಂಗರು ಹೊಯ್ಸಳರಲ್ಲಿ ಬಹಳ ಪ್ರಸಿದ್ಧರಾದ ರಾಜ. ತಾಯಿ ಏಚಲದೇವಿ. ಮಗನ ವಿವಾಹ ಮಾಡಲು ತಾಯಿ ಕಾತರಿಸುತ್ತಿರುವಾಗ ವಿಷ್ಣುವರ್ಧನ ಶಾಂತಲೆಯನ್ನು ಮೆಚ್ಚಿರುವುದು ಹಾಗೂ ಶಾಂತಲೆ ಲಕ್ಷ್ಮಿಯರು ಇಬ್ಬರೂ ಒಬ್ಬರನ್ನೊಬ್ಬರು ಬಿಟ್ಟಿರದೆ ಒಬ್ಬರನ್ನೇ ವಿವಾಹವಾಗುವುದನ್ನು ತಿಳಿಯುತ್ತಾರೆ. ಶಾಂತಲೆಯನ್ನು, ಅವಳ ಬುದ್ಧಿವಂತಿಕೆಯನ್ನು ನೋಡಿ ಸಂಪೂರ್ಣವಾಗಿ ಆಕರ್ಷಿತರಾಗುತ್ತಾರೆ. ಅದೇ ಸಮಯದಲ್ಲಿ ಪಲ್ಲವ ರಾಜ ಮಗಳು ಬಮ್ಮಲೆಯನ್ನು ಮತ್ತೊಂದು ಕಡೆ ನೊಳಂಬವಾಡಿಯ ಅರಸು ಗಂಗನೊಳಂಬ ತನ್ನ ಮಗಳು ರಾಜಲೆಯನ್ನು ಮತ್ತು ಬನವಾಸಿಯ ಅರಸು ಬಿಜ್ಜಲೆಯನ್ನು ವಿವಾಹ ಮಾಡಿಕೊಡಬೇಕೆಂದು ಆಶಿಸಿದಾಗ ಅದೆಲ್ಲದಕ್ಕೂ ಒಪ್ಪಿದ ಶಾಂತಲೆ 'ಸವತಿ ಗಂಧವಾರಣೆ'ಯಾಗುತ್ತಾಳೆ.


ವೇಲಾಪುರಿಯಲ್ಲಿ ವಿಜಯನಾರಾಯಣ ದೇಗುಲದ ಸಿದ್ಧತೆಗಳು ನಡೆದಿರುವಾಗ ಶಾಂತಲೆ ತನ್ನ ಶಿಲ್ಪಗುರುವಾದ ಜಕಣಾಚಾರ್ಯರ ಕುರಿತಾಗಿ ಹೇಳಿದಾಗ ವಿಷ್ಣುವರ್ಧನ ತಾನು ಹಿಂದೊಮ್ಮೆ ಅವರ ಬಳಿ ಪ್ರಸ್ತಾಪಿಸಿದ್ದನ್ನು ನಿರಾಕರಿಸಿದ ಕುರಿತು ಹೇಳುತ್ತಾನೆ. ಆಗ ಶಾಂತಲೆ ಅದು ಹಾಗಾಗಿರಲಾರದು ಎಂದು ತಪ್ಪು ತಿಳುವಳಿಕೆಯನ್ನು ಬದಿಗೊತ್ತಿ, ಮಹಾರಾಜರೊಡನೆ ಹೋಗಿ ತಾಳಗುಂದದ ಪ್ರಣವೇಶ್ವರ ದೇಗುಲದ ಬಳಿಯಲ್ಲಿ ಅವರು ಕೆತ್ತನೆಯ ಕಾರ್ಯದಲ್ಲಿ ಮುಳುಗಿ ಹೋಗಿರುವಾಗ ಅವರ ಶಿಷ್ಯರು ಮಾಡಬೇಕಾಗಿದ್ದನ್ನು ಮಾಡುತ್ತಾರೆ. ಮಹಾರಾಜರು ತಮ್ಮ ಕೈಯ್ಯಾರೆ ತಾಂಬೂಲದ ಪಟ್ಟಿಗಳನ್ನು ಮಡಿಸಿಕೊಟ್ಟರೆ, ಮಹಾರಾಣಿ ಪೀಕುದಾನಿಯನ್ನು ಮುಂದೆ ಚಾಚುತ್ತಿದ್ದರು. ನಂತರ ಆಚಾರ್ಯರಿಗೆ ಇದೆಲ್ಲವೂ ತಿಳಿದು.. ತನ್ನಿಂದ ಅಪಚಾರವಾಯಿತೆಂದು ನೊಂದುಕೊಂಡು, ಶಾಂತಲೆಯ ವಿನಮ್ರ ಬೇಡಿಕೆಯನ್ನು ಈಡೇರಿಸಲು ಮನಸ್ಸು ಮಾಡುತ್ತಾರೆ ಎನ್ನುವ ಸನ್ನಿವೇಶದ ಚಿತ್ರಣವಿದೆ.


ಜೊತೆಗೆ ಅವರು ತನ್ನ ಹೆಸರನ್ನು ಎಲ್ಲಿಯೂ ಹೇಳಬಾರದೆಂದು ಕೇವಲ ಅಮರಶಿಲ್ಪಿ ಎಂದು ಬಳಸಬೇಕೆಂದು ಹೇಳುತ್ತಾರೆ. ಇದಕ್ಕೆ ಕಾರಣವೇನೆಂದು ನೀವು ಓದಿಯೇ ತಿಳಿಯಬೇಕು.


ಮಹಾರಾಜರು ಯುದ್ಧಕ್ಕಾಗಿ ರಾಜ್ಯದಿಂದ ದೂರವಿದ್ದ ಸಂದರ್ಭದಲ್ಲಿ ಯುವರಾಜಕುಮಾರ ಉದಯಾದಿತ್ಯನನ್ನು ಜೊತೆಯಲ್ಲಿ ಕರೆದುಕೊಂಡು ವೇಷ ಮರೆಸಿ ದ್ವಾರಸಮುದ್ರದಿಂದ ಹೊರಟ ಶಾಂತಲೆಗೆ ಒಂದು ದೇಗುಲದ ಮುಂದೆ ನೆರೆದಿದ್ದ ಪಂಚಾಯಿತಿಯ ವಿಚಾರ ಕಂಡು ಅವರಿಗೆ ಅಚ್ಚರಿಯಾಗಿತ್ತು. ಆ ಪ್ರಸಂಗದಿಂದಲೇ ಕೇತಮಲ್ಲನಾಯಕನ ಮುಂದಾಳತ್ವದಲ್ಲಿ ದ್ವಾರಸಮುದ್ರದಲ್ಲಿ ಹೊಯ್ಸಳೇಶ್ವರ ಹಾಗೂ ಶಾಂತಲೇಶ್ವರ ಎಂಬ ಅವಳಿ ದೇಗುಲಗಳ ನಿರ್ಮಾಣದ ನಿರ್ಧಾರವಾಯಿತು. ಅಲ್ಲಿ ಅಂದು ನಡೆದ ಪ್ರಸಂಗವೇನು ಓದಿ ನೋಡಿ.


ಶಾಂತಲೆಯ ಕುರಿತ ಕಾದಂಬರಿಗಳಲ್ಲಿ ಆಕೆಯ ಅಂತ್ಯದ ಕುರಿತು ವಿಭಿನ್ನ ಚಿತ್ರಣಗಳಿರುತ್ತವೆ. ಇಲ್ಲಿ ಶಾಂತಲೆ ಆ ತೀರ್ಮಾನಗಳನ್ನು ಕೈಗೊಳ್ಳುವುದಕ್ಕೂ ಮುನ್ನ ಹಲವಾರು ಘಟನೆಗಳು ಹಿನ್ನೆಲೆಯಾಗುತ್ತವೆ. ಯುವರಾಜ ಉದಯಾದಿತ್ಯನಿಗೆ ಯೋಗ್ಯ ಕನ್ಯೆ ತಂದು ವಿವಾಹ ಮಾಡಿ ಮಾಂಡಳಿಕನಾಗಿ ನೇಮಿಸಲಾಗಿತ್ತು. ಆತನ ಪುತ್ರ ಎರೆಯಂಗ. ರಾಜಮಾತೆಯವರ ಮರಣದ ನಂತರ ಶಾಂತಲೆಗೆ ಗಂಡು ಮಗುವಾಗಿತ್ತು. ಅವನ ಹೆಸರು ಬಲ್ಲಾಳ. ಹುಟ್ಟಿದ ಕೆಲವೇ ದಿನಗಳಲ್ಲಿ ಆ ಮಗುವು ಅಸುನೀಗಿತ್ತು. ತಾಯಿ ಮಾಚಿಕಬ್ಬೆ ಮುತ್ತೈದೆಯಾಗಿಯೇ ಸತ್ತ ನಂತರ.. ಶಾಂತಲೆಯ ಅಚ್ಚುಮೆಚ್ಚಿನ ಗೆಳತಿ ಸೋಮಲೆ ವಿವಾಹವಾದ ಮೂರು ತಿಂಗಳಲ್ಲಿಯೇ ವಿಧವೆಯಾಗಿ ಶಿವಗಂಗೆಯನ್ನು ಸೇರಿದಳು. ಹತ್ತು ವರ್ಷದ ಬಾಲಕ ಎರೆಯಂಗ ಕುದುರೆಯ ಕಾಲಿಗೆ ಸಿಕ್ಕಿ ಚಿಂದಿಚಿಂದಿಯಾಗಿದ್ದ. ವಿಪರ್ಯಾಸವೆಂದರೆ ವಿದ್ಯಾಪೀಠದಲ್ಲಿ ಅಭ್ಯಾಸ ಮಾಡುತ್ತಿದ್ದ ಆ ಮಗುವನ್ನು ಹುಟ್ಟುಹಬ್ಬದ ಸಲುವಾಗಿ ದ್ವಾರಸಮುದ್ರಕ್ಕೆ ಕರೆಸಿಕೊಳ್ಳಲಾಗಿತ್ತು. ಹುಟ್ಟು ಹಬ್ಬದ ದಿನವೇ ಆತ ಸಾವನ್ನು ಆಚರಿಸುವಂತಾಗಿತ್ತು. 


ಸಾವಿನ ಸರಣಿಗಳಿಂದ ನೊಂದು ಬದುಕನ್ನು ನಶ್ವರವೆಂದು ಭಾವಿಸುತ್ತಿದ್ದಳು ಶಾಂತಲೆ. ಕ್ಷಣಿಕವಾದ ಈ ಬದುಕಿನಿಂದ ಬಿಡುಗಡೆಬೇಕೆಂದು ಬಯಸುತ್ತಿರುವಾಗ ಪಟ್ಟದರಸಿಯ ಪಟ್ಟದಿಂದಲೂ ಬಿಡುಗಡೆ ಬೇಕೆಂದು ಕೇಳಿದಳು. ಆದರೆ, ನೀನು ಬದುಕಿರುವವರೆಗೂ ಅದು ಸಾಧ್ಯವಿಲ್ಲವೆಂದಾಗ.. ತನಗೆ ಮಕ್ಕಳಿಲ್ಲವೆಂದೂ.. ಜೊತೆಗೆ ತಾನು ಇರುವಾಗ ಬೇರೆ ಯಾವ ರಾಣಿಯರಿಗೂ ಆ ಪಟ್ಟದ ಮೇಲೆ ಕೂರಲಾಗದೆಂದು ತಿಳಿದು ತನ್ನ ತವರಿಗೆ ಹೋಗಿ ಬರಲು ಅನುಮತಿ ಕೇಳಿದವಳು ಶಿವಗಂಗೆಗೆ ಹೊರಟಳು.


ರಾಜಕಾರಣದ ನಿಮಿತ್ತ ಮಾರಸಿಂಗಮಯ್ಯನವರು ರಾಜ್ಯದ ಗಡಿ ಪ್ರದೇಶದಲ್ಲಿಯೇ ಸಂಚರಿಸುತ್ತಿದ್ದುದರಿಂದ, ವಿಷ್ಣುವರ್ಧನರು ಉತ್ತರದ ಗಡಿಯನ್ನು ಭದ್ರಪಡಿಸಿ ಬರುವ ಹೊತ್ತಿಗೆ ಶಾಂತಲೆ ಕಠಿಣ ಮನೋನಿರ್ಧಾರ ಮಾಡಿ 21 ದಿನಗಳಾಗಿದ್ದವು. ಶಿವಗಂಗೆಯ ಹೊನ್ನಾದೇವಿಯ ಗುಡಿಯ ಮುಂಭಾಗದ ಬಂಡೆಯ ಮೇಲೆ ಅನ್ನ ,ಆಹಾರಾದಿಗಳನ್ನು ತೊರೆದು ಹಗಲಿರುಳೆಲ್ಲದೆ, ಮಳೆಬಿಸಿಲೆನ್ನದೆ ಘೋರ ವ್ರತವನ್ನಾಚರಿಸುತ್ತಾ ಜೀವವನ್ನು ಅರ್ಪಿಸಿದಳು.


ಈ ಕಾದಂಬರಿಯಲ್ಲಿ ಲಕ್ಷ್ಮಿಯ ಕುರಿತು ಮೊದಲಿಗೆ ಉಲ್ಲೇಖ ಬಂದರು ಲಕ್ಷ್ಮಿಯ ಕುರಿತಾಗಲಿ ಅಥವಾ ಬೇರೆ ಯಾವ ರಾಣಿಯರ ಕುರಿತಾಗಲಿ ಮುಂದೆಲ್ಲೂ ಉಲ್ಲೇಖಗಳು ಬರುವುದಿಲ್ಲ. ಬೇಲೂರಿನ ಎಂದರೆ ವೇಲಾಪುರಿಯ ದೇವಸ್ಥಾನವನ್ನು ಕಟ್ಟಿದ ಶಿಲ್ಪಿಯ ಪ್ರಸಂಗವನ್ನು ಹಾಗೂ ಕೇತಮಲ್ಲ ನಾಯಕ ಕೊಡುವ ತೀರ್ಪಿನಿಂದ ದ್ವಾರಸಮುದ್ರದಲ್ಲಿ ನಿರ್ಮಾಣವಾಗುವ ದೇವಾಲಯಗಳ ಕುರಿತು ವಿಭಿನ್ನ ದೃಷ್ಟಿಕೋನದ ಪ್ರಸಂಗಗಳಿವೆ. ವಿಷ್ಣುವರ್ಧನ ಹಾಗೂ ಶಾಂತಲೆಯರಲ್ಲಿ ಯಾವುದೇ ಧಾರ್ಮಿಕ ಭಿನ್ನಾಭಿಪ್ರಾಯ ಕಂಡುಬರಲಿಲ್ಲ. ಇಲ್ಲಿ ರಾಣಿ ನಾಟ್ಯಮಯೂರಿಯಾಗಿ ಮೊದಲಿಗೆ ಕಂಡರೂ.. ನಂತರ ಅವಳ ನೃತ್ಯಕ್ಕಿಂತ ಶಿಲ್ಪಕಲೆಗೆ ಹೆಚ್ಚಿನ ಒತ್ತು ನೀಡಲಾಗಿದೆ. ಇಲ್ಲಿ ಕುವರ ವಿಷ್ಣುವಿನ ಪ್ರಸ್ತಾಪವಿಲ್ಲ. ಶಾಂತಲೆಗೆ ಮಕ್ಕಳೇ ಇರಲಿಲ್ಲ ಎನ್ನುವುದಕ್ಕಿಂತ ಒಂದು ಮಗು ಹುಟ್ಟಿ ಸತ್ತಿದೆ ಎಂದು ಹೇಳಿದ್ದಾರೆ. ಶಾಂತಲೆ ಶಿವಗಂಗೆ ಬೆಟ್ಟದಿಂದ ಹಾರಿ ಜೀವ ಬಿಟ್ಟ ಪ್ರಸಂಗ ಹಾಗೂ ಆಕೆ ಸಲ್ಲೇಖನ ವ್ರತ ಕೈಗೊಂಡಿದ್ದರ ಪ್ರಸ್ತಾಪ ಬರದೇ ಇಲ್ಲಿ ವಿಭಿನ್ನವಾದ ಅಂತ್ಯ ಕಾಣುತ್ತದೆ.


ಇಲ್ಲಿನ ಕಥಾರೂಪದಲ್ಲಿ ಎಲ್ಲವೂ ಚುಟುಕಾಗಿ ಇರುವುದರಿಂದ ಹೆಚ್ಚಿನ ಸಾಂದರ್ಭಿಕವಾದ ವಿಸ್ತರಣೆಗಳಿಲ್ಲ. ಆದರೆ, ವಿಭಿನ್ನ ಪ್ರಸಂಗಗಳು ಕಂಡು ಬಂದು ಬೇರೆ ಕಾದಂಬರಿಗಳಿಗಿಂತ ಶಾಂತಲೆಯ ಹಾಗೂ ಆಕೆಯ ಸಮಯದಲ್ಲಿನ ರಾಜ್ಯಾಡಳಿತದ ಕುರಿತು ವಿಭಿನ್ನವಾದ ಚಿತ್ರಣ ಕಾಣುತ್ತದೆ. 


~ವಿಭಾ ವಿಶ್ವನಾಥ್

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ