ಮಹಾಭಾರತವನ್ನು ಮುಖ್ಯಪಾತ್ರಗಳ, ಗುಣವಿಶೇಷಗಳ ಮೂಲಕ ನೋಡಲು ಹೊರಟರೆ
"ಛಲದೊಳ್ ದುರ್ಯೋಧನಂ ನನ್ನಿಯೊಳಿನತನಯಂ
ಗಂಡಿನೊಳ್ ಭೀಮಸೇನಂ
ಬಲದೊಳ್ ಮದ್ರೇಶನತ್ಯುನ್ನತಿಯೊಳಮರ ಸಿಂಧೂದ್ಭವಂ
ಚಾಪ ವಿದ್ಯಾಬಲದೊಳ್ ಕುಂಭೋದ್ಭವಂ
ಸಾಹಸದ ಮಹಿಮೆಯೊಳ್ ಫಲ್ಗುಣಂ
ಧರ್ಮದೊಳ್ ನಿರ್ಮಲಚಿತ್ತಂ ಧರ್ಮಪುತ್ರಂ
ಮಿಗಿಲಿವರ್ಗಳಿನೀ ಭಾರತಂ ಲೋಕಪೂಜ್ಯಂ"
ಎನ್ನುವ ಮಾತುಗಳು ಹಿರಿಮೆಯನ್ನು ಎತ್ತಿ ಹಿಡಿಯುತ್ತವೆ. ಆದರೆ, ಈ ಹಿರಿಮೆಗೆ ಕಾರಣರಾದ ಎಷ್ಟೋ ಪಾತ್ರಗಳು ತೆರೆಮರೆಯಲ್ಲೇ ಇವೆ.
ಮಹಾಭಾರತದಲ್ಲಿ ನೇಪಥ್ಯಕ್ಕೆ ಸರಿದ ಪಾತ್ರಗಳಲ್ಲಿ ಕರ್ಣನ ಪತ್ನಿ ನೆನಪಾಗುತ್ತಾಳೆ. ಆದರೆ, ಕರ್ಣನ ಪತ್ನಿ ಎನ್ನುವುದಕ್ಕಿಂತ ಕರ್ಣನ ಪತ್ನಿಯರು ಎಂದರೆ ಇನ್ನೂ ಸೂಕ್ತವಾಗುತ್ತದೇನೋ.. ದ್ರೌಪದಿಗೆ ಸಿಕ್ಕ ಮನ್ನಣೆಯಲ್ಲಿ ಕೊಂಚ ಸುಭದ್ರೆಗೆ ಸಿಕ್ಕಿತಾದರೂ ಉಪಪಾಂಡವರ ತಾಯಂದಿರು ಹಾಗೆಯೇ ಉಳಿದರು. ಧುರ್ಯೋಧನನ ಪತ್ನಿ ಭಾನುಮತಿ ತಿಳಿದಂತೆ, ದ್ರೌಪದಿ ಗೊತ್ತಿದ್ದಂತೆ ಕರ್ಣನ ಪತ್ನಿ ಮುಖ್ಯ ಭೂಮಿಕೆಯಲ್ಲಿ ಸಿಗಲಿಲ್ಲ. ಇದಕ್ಕೆ ಕಾರಣ.. ವಿಭಿನ್ನವಾದ ಕತೆಗಳಲ್ಲಿ ವಿಭಿನ್ನವಾದ ಪಾತ್ರಗಳು ಸಿಗುವುದೂ ಆಗಿರಬಹುದು. ಇದರಲ್ಲಿ ವೃಷಾಲಿ ಎಲ್ಲೆಡೆ ಕರ್ಣನ ಪತ್ನಿಯಾಗಿ ಕಾಣಿಸಿಕೊಳ್ಳುತ್ತಾಳೆ.
ವಿಭಿನ್ನ ಕಥಾಹಂದರ ಹಾಗೂ ಜಾನಪದ ಕಥೆಗಳು ವಿಭಿನ್ನ ಮಹಿಳೆಯರನ್ನು ಕರ್ಣನ ಹೆಂಡತಿಯರಾಗಿ ಚಿತ್ರಿಸಿವೆ.
ಸಾಮಾನ್ಯವಾಗಿ ಸಿಗುವ ಚಿತ್ರಣ ವೃಶಾಲಿ ಮತ್ತು ಸುಪ್ರಿಯಾರದ್ದು.
ಶಿವಾಜಿ ಸಾವಂತ್ ಅವರ ಮೃತುಂಜಯದಲ್ಲಿ ವೃಷಾಲಿ ಮೊದಲ ಪತ್ನಿಯಾಗಿದ್ದರೆ, ಸುಪ್ರಿಯಾ ಎರಡನೇ ಪತ್ನಿ. ಆದ್ಯರಾಮಾಚಾರ್ಯರ 'ರಾಧೇಯ'ದಲ್ಲಿ ಊರ್ಮಿಳಾ ಸತ್ತ ನಂತರ ವೃಶಾಲಿಯನ್ನು ವಿವಾಹವಾಗುತ್ತಾನೆ ಕರ್ಣ.
ಕರ್ಣನಿಗೆ ಇಬ್ಬರು ಪತ್ನಿಯರಿಂದ 9 ಜನ ಮಕ್ಕಳು ಜನಿಸುತ್ತಾರೆ ಎನ್ನಲಾಗಿದೆ. ಅವರ ಹೆಸರು ವೃಷಸೇನ, ವೃಷಕೇತು, ಚಿತ್ರಸೇನ, ಸತ್ಯಸೇನ, ಸುಶೇನ, ಶತ್ರುಂಜಯ, ದ್ವಿಪಾದ, ಸುಶರ್ಮ ಹಾಗೂ ಪ್ರಸೇನ. ಪ್ರಸೇನನಿಗೆ ಸುಧಾಮ ಎಂಬ ಹೆಸರೂ ಇರುತ್ತದೆ. 8 ಜನ ಕರ್ಣನ ಮಕ್ಕಳು ಕುರುಕ್ಷೇತ್ರ ಯುದ್ಧದಲ್ಲಿ ಹತರಾಗಿ ಕರ್ಣನ ಕೊನೆಯ ಮಗನಾದ ವೃಷಕೇತು ಮಾತ್ರ ಬದುಕುಳಿಯುತ್ತಾನೆ. ಅಭಿಮನ್ಯು ಹಾಗೂ ಉಪಪಾಂಡವರೂ ಹತರಾಗಿದ್ದಾಗ, ಕರ್ಣನ ಜನ್ಮರಹಸ್ಯ ತಿಳಿದ ಪಾಂಡವರು ಆತನನ್ನೇ ತಮ್ಮ ಮಗನಂತೆ ಕಾಣುತ್ತಾರೆ.
ವಿದ್ವಾಂಸ ಪ್ರದೀಪ್ ಭಟ್ಟಾಚಾರ್ಯರು ಸುಪ್ರಿಯಾ ಸಂಪೂರ್ಣವಾಗಿ ಲೇಖಕ ಶಿವಾಜಿ ಸಾವಂತ್‌ನ ಪಾತ್ರ ಸೃಷ್ಟಿ ಎನ್ನುತ್ತಾರೆ. ಕಳಿಂಗದ ರಾಜಕುಮಾರಿ ಭಾನುಮತಿಯ ದಾಸಿಯಾಗಿದ್ದವಳನ್ನು ಭಾನುಮತಿ ತನ್ನೊಡನೆ ಕರೆತರಲು ಪ್ರಬಲವಾಗಿ ಇಚ್ಛಿಸಿದಾಗ ಸ್ವತಃ ದುರ್ಯೋಧನನೇ ವೃಶಾಲಿಯ ಬಳಿ ಬಂದು ಆಕೆಯನ್ನು ಕರ್ಣ ವಿವಾಹವಾಗಲು ಒಪ್ಪಿಗೆ ಕೊಡಲು ಕೇಳುತ್ತಾನೆ. ಆಕೆಯ ಸಮ್ಮತಿಯ ನಂತರ ಸುಪ್ರಿಯಾಳನ್ನು ಕರ್ಣ ವಿವಾಹವಾಗುತ್ತಾನೆ.
ಬಂಗಾಳಿ ಸಾಹಿತ್ಯದ ಪ್ರಮುಖ ಕವಿಯಾಗಿರುವ ಕಾಶಿರಾಮ್ ದಾಸ್ ಮೊಹಾಭಾರತ್ ಎಂದು ಕರೆಯಲ್ಪಡುವ ಮಹಾಭಾರತದ ಅವರ ಬಂಗಾಳಿ ಮಹಾಭಾರತದ ದಂತಕಥೆಯಲ್ಲಿ ಪದ್ಮಾವತಿಯನ್ನು ಕರ್ಣನ ಪತ್ನಿ ಎಂದು ಹೇಳುತ್ತಾನೆ. ಆಕೆ ಅಸಾವರಿ ರಾಜಕುಮಾರಿಯ ಸೇವಕಿಯಾಗಿದ್ದವಳು. ಕಾಡಿನ ಮಧ್ಯೆ ದರೋಡೆಕೋರದಿಂದ ಅವರಿಬ್ಬರನ್ನೂ ಕರ್ಣ ರಕ್ಷಿಸಿದ ಸಂದರ್ಭದಲ್ಲಿ ರಾಜಕುಮಾರಿ ಮೂರ್ಛೆ ಹೋಗುತ್ತಾಳೆ. ಪದ್ಮಾವತಿ ಹಾಗೂ ಕರ್ಣರ ನಡುವೆ ಪ್ರೇಮಾಂಕುರವಾಗುತ್ತದೆ. ಸ್ವಾರ್ಥಿಯಾಗಿ ನಡೆದುಕೊಳ್ಳುವ ರಾಜಕುಮಾರಿ ನಂತರ ಕರ್ಣನನ್ನು ನಿರ್ಲಕ್ಷಿಸುತ್ತಾಳೆ. ಕೆಲ ದಿನಗಳ ನಂತರ ಆಕೆಯ ಸ್ವಯಂವರಕ್ಕೆ ಬರುವ ಕರ್ಣನನ್ನು ರಾಜ ಅವಮಾನಿಸಿದಾಗ ಸ್ವಯಂವರದಲ್ಲಿದ್ದ ರಾಜರು ಹಾಗೂ ಆಕೆಯ ತಂದೆಯ ಮೇಲೆ ಆಕ್ರಮಣ ಮಾಡಿ ಅವಳನ್ನು "ತನ್ನನ್ನು ವಿವಾಹವಾಗಲು ಬಯಸುತ್ತೀಯಾ..?" ಎಂದು ಪ್ರಶ್ನಿಸಿದಾಗ ಆಕೆ ತನ್ನ ತಂದೆಯನ್ನು ಉಳಿಸಲು ಏನು ಬೇಕಾದರೂ ಮಾಡುತ್ತೇನೆ ಎಂದು ಉತ್ತರಿಸುತ್ತಾಳೆ. ಕರ್ಣ ಅವಳ ಸೊಕ್ಕನ್ನು ಮುರಿದ ನಂತರ ಅವಳನ್ನು ತಿರಸ್ಕರಿಸಿ ಅಲ್ಲಿದ್ದ ಪದ್ಮಾವತಿಯನ್ನು ಒಪ್ಪಿಗೆ ಕೇಳಿ ಅವಳನ್ನು ಮದುವೆಯಾಗುತ್ತಾನೆ.
ಪುಕಲೆಂತಿಪ್ಪುಲವರ್ ಬರೆದ ತಮಿಳು ನಾಟಕವಾದ "ಕಟ್ಟೈಕ್ಕುಟ್ಟು ಕರ್ಣ ಮೋಕ್ಷಂ"ನಲ್ಲಿ ಪೊನ್ನುರುವಿ ಕರ್ಣನ ಹೆಂಡತಿ . ಯೋಧ ರಾಜಕುಮಾರಿಯಾಗಿ ಆಕೆಯನ್ನು ಬಿಂಬಿಸಲಾಗಿದೆ. ಇದರಲ್ಲಿ ಅವಳು ಕಳಿಂಗದ ರಾಜಕುಮಾರಿ. ಮೂಲ ಮಹಾಕಾವ್ಯದಲ್ಲಿ ರಾಜಕುಮಾರಿಯು ದುರ್ಯೋಧನನನ್ನು ಮದುವೆಯಾದರೂ.. ಜನಪದ ಕತೆಗಳಲ್ಲಿ, ಪೊನ್ನುರುವಿಯನ್ನು ದುರ್ಯೋಧನನಿಗಾಗಿ ಕರ್ಣ ಅಪಹರಿಸಿದರೂ.. ಅಪಹರಣದ ಸಮಯದಲ್ಲಿ ಸ್ಪರ್ಶಿಸಿದಕ್ಕಾಗಿ ಕರ್ಣನನ್ನು ವಿವಾಹವಾಗುತ್ತಾಳೆ. ಕರ್ಣ ಸೂತಪುತ್ರನೆಂಬ ಭಾವದಿಂದ ಅವನನ್ನು ನಿಂದಿಸುತ್ತಾ.. ತನ್ನ ಮಗನನ್ನು ಮುಟ್ಟಲೂ ಬಿಡುವುದಿಲ್ಲ. ಆದರೆ, ಕುರುಕ್ಷೇತ್ರ ಯುದ್ಧಕ್ಕೆ ಮುನ್ನ ಆತನ ಜನ್ಮರಹಸ್ಯ ತಿಳಿದು ಕ್ಷಮೆ ಕೇಳುತ್ತಾಳೆ. ದುರ್ಯೋಧನನ ಪಕ್ಷ ತೊರೆಯಲು ಹೇಳಿದ್ದಕ್ಕೆ ಒಪ್ಪದ ಅವನಿಗೆ ಸಹೋದರರಾದ ಪಾಂಡವರನ್ನು ಕೊಲ್ಲದಂತೆ ಸಲಹೆ ನೀಡುತ್ತಾಳೆ .
ಕವಿತಾ ಕೇನ್ ಬರೆದ ಕರ್ಣನ ಪತ್ನಿ: ದಿ ಔಟ್‌ಕಾಸ್ಟ್ಸ್ ಕ್ವೀನ್ ಎಂಬ ಪುಸ್ತಕದಲ್ಲಿ ಉರುವಿ ಪಾತ್ರವನ್ನು ಕರ್ಣನ ಹೆಂಡತಿಯಾಗಿ ಚಿತ್ರಿಸಲಾಗಿದೆ.
ತಮಿಳು ಭಾಷೆಯಲ್ಲಿರುವ ಕತೆಯಲ್ಲಿ ಕರ್ಣನಿಗೆ ಪೊನ್ನುರುವಿ, ಉರ್ವಿ ಎಂಬ ಪತ್ನಿಯರಿದ್ದರೆ.. ಬೆಂಗಾಳಿ ಜಾನಪದ ಕತೆಗಳಲ್ಲಿ ಪದ್ಮಾವತಿ, ಅಸ್ಸಾಮಿ ಕತೆಯಲ್ಲಿ ತುಲ್ಸಾ, ಒಡಿಸ್ಸಾ ಜಾನಪದ ಕತೆಗಳಲ್ಲಿ ಚಂದ್ರಾವಲಿ ಹಾಗೂ ಪದ್ಮಾವತಿ ಎಂಬ ಪತ್ನಿಯರಿದ್ದರು ಎಂದು ಮಾಹಿತಿ ಸಿಕ್ಕಿತು. ಈ ಜಾನಪದ ಕತೆಗಳಲ್ಲಿ ಬರುವ ಹೆಸರುಗಳು ವೃಶಾಲಿ ಹಾಗೂ ಸುಪ್ರಿಯಾರ ಬೇರೆ-ಬೇರೆ ಹೆಸರುಗಳೂ ಆಗಿರಬಹುದು. (ಅಂತರ್ಜಾಲದಲ್ಲಿ ಸಿಕ್ಕ ಮಾಹಿತಿ)
ಮುಂದೆ ನಾನು ಮುಖ್ಯ ಪಾತ್ರ ವೃಶಾಲಿ ಕುರಿತು ಮಾತ್ರ ಹೇಳುತ್ತೇನೆ.
ರುಷಾಲಿ, ವೃಶಾಲಿ, ವೃಷಾಲಿ ಎಂಬ ಹೆಸರುಗಳಿಂದ ಕರೆಸಿಕೊಳ್ಳುವ ವೃಷಾಲಿ ಒಬ್ಬಳೇ ಎಂಬ ಚಿತ್ರಣದಿಂದ ಈ ಮಾಹಿತಿಗಳನ್ನು ಸಂಗ್ರಹಿಸಿದ್ದೇನೆ.
ಜೈಮಿನಿ ಮುನಿಯ ‘ಅಶ್ವಮೇಧಿಕ ಪರ್ವ'ದಲ್ಲಿ ಬರುವ ಕರ್ಣನ ಪತ್ನಿಯ ಹೆಸರು ವೃಶಾಲಿ. ಈಕೆ ದುರ್ಯೋಧನನ ಸಾರಥಿಯಾದ ಸತ್ಯಸೇನನ ಸಹೋದರಿ. ಪಾಂಡವರಿಗೆ ಹಸ್ತಿನಾಪುರವನ್ನು ವಿಭಜಿಸಿ ಇಂದ್ರಪ್ರಸ್ತವನ್ನು ನೀಡಿದಾಗ ವೃಶಾಲಿ ಅಲ್ಲಿಗೆ ಹೋಗಬಯಸುತ್ತಾಳೆ. ಆದರೆ ಕೊನೇ ಕ್ಷಣದಲ್ಲಿ ಅವಳಿಗೆ ಅಲ್ಲಿಗೆ ಹೋಗಲು ಆಗದಾಗ ಸ್ವತಃ ಕರ್ಣನೇ ಅವಳನ್ನು ಇಂದ್ರಪ್ರಸ್ತಕ್ಕೆ ತಲುಪಿಸಲು ಹೋಗುವ ಸಮಯದಲ್ಲಿ ಅವರಿಬ್ಬರಿಗೂ ಪ್ರೇಮಾಂಕುರವಾಗಿ ವಿವಾಹವಾಗುತ್ತದೆ.
ಮರಾಠಿಯ ಸುಪ್ರಸಿದ್ಧ ಕಾದಂಬರಿಕಾರ ಶಿವಾಜಿ ಸಾವಂತ ಅವರ ಮೃತ್ಯುಂಜಯ ಕಾದಂಬರಿಯನ್ನು ಆಧರಿಸಿ.. ಅಶೋಕ ನೀಲಗಾರ್ ರವರು ಕರ್ಣ ಮತ್ತು ಆತನ ಪತ್ನಿಯನ್ನೇ ಮುಖ್ಯ ಭೂಮಿಕೆಯಲ್ಲಿ ಕರ್ಣ-ವೃಷಾಲಿ ಎಂದು ಹೇಳಿದ್ದಾರೆ. (1992 ರ ಜೂನ್ ನ ಕಸ್ತೂರಿ ಮಾಸಪತ್ರಿಕೆಯಲ್ಲಿ ಪ್ರಕಟಿತ)
ಈ ಕಥೆಯಲ್ಲಿ ಅಲ್ಲಲ್ಲಿ ಸಾಮಾನ್ಯ ಮಡಿಕೆಯ ಚೂರು ಕಥೆಯನ್ನು ನಿರೂಪಿಸುವ ವಿಭಿನ್ನ ತಂತ್ರದಿಂದ ಹೆಣೆದಿದ್ದಾರೆ. ತ್ರಿವೇಣಿ ಸಂಗಮದಲ್ಲಿ ಮಿಂದು ಆ ಮಾಡಿಕೆಯ ಚೂರಿಗೆ ಶಕ್ತಿ ಬಂದಿದೆ ಎಂದು ಹೇಳುವ ಅವರು ಆಕೆ ನೀರು ತರುವ ಸಂದರ್ಭದಲ್ಲಿ ಮೊದಲ ಬಾರಿಗೆ ಕರ್ಣನ ಭೇಟಿಯಾಗುವ ಸಂದರ್ಭವನ್ನು ಹೇಳುತ್ತಾರೆ. ಸಾರಥಿಯಾಗಿದ್ದ ಸತ್ಯಸೇನನ ತಂಗಿಯಾದ ವೃಷಾಲಿಯನ್ನು ಕರ್ಣ ಮೆಚ್ಚಿದ್ದರೂ.. ಆತನ ಮನದಿಂಗಿತ ಅರಿತ ದುರ್ಯೋಧನ ಕರ್ಣನ ತಂದೆ ಅಧಿರಥನೊಂದಿಗೆ ಚರ್ಚಿಸಿ ವೃಷಾಲಿಯನ್ನೇ ಕರ್ಣನಿಗೆ ಮದುವೆ ಮಾಡಿಸುತ್ತಾರೆ.
ರಾಜಮಾತೆ ಕುಂತಿ ಆಕೆಗೆ ಕೊಟ್ಟ ಸೀರೆ ಕರ್ಣನನ್ನು ವಿಶೇಷವಾಗಿ ಸೆಳೆಯುತ್ತದೆ. ನೀಲಾಕಾಶದಲ್ಲಿಯ ಹೊಂಬಣ್ಣದ ಸೂರ್ಯದೇವನನ್ನು ನೋಡುತ್ತಾ ನಿಂತುಬಿಡುವ ಕರ್ಣನನ್ನೇ ಗಮನಿಸಿ ನೀಲಿ ಸೀರೆಯಲ್ಲಿ ಹೊಂಬಣ್ಣದ ನಕ್ಷೆಯನ್ನು ಸೇರಿಸಿ ನೇಯ್ದ ಸೀರೆಯದು. ವೃಶಾಲಿಯ ಕುರಿತು ಕುಂತಿ ತೋರುವ ಪ್ರೀತಿ ಶುರುವಾಗುವುದು ಇಲ್ಲಿಂದಲೇ.. ನಂತರ, ವೃಷಾಲಿ ಗರ್ಭಿಣಿಯಾದ ಸಂದರ್ಭದಲ್ಲಿ ಕರ್ಣನ ಅಪೇಕ್ಷೆ ಎಂದರೆ ತನ್ನ ಮಗನೂ ತನ್ನಂತೆಯೇ ಕರ್ಣಕುಂಡಲವನ್ನು ಹೊತ್ತು ಹುಟ್ಟುತ್ತಾನೆಂದು. ಆ ನಿರೀಕ್ಷೆ ನಿಜವಾಗದ ಸಂದರ್ಭದಲ್ಲಿ ಅವನ ಭಾವಗಳನ್ನು ಗ್ರಹಿಸುವ ವೃಷಾಲಿಯ ವಿಷಾದ ಕಾಣುತ್ತದೆ.
ದುರ್ಯೋಧನ ಭಾನುಮತಿಯನ್ನು ವಿವಾಹವಾಗುವ ಸಂದರ್ಭದಲ್ಲಿ ಕರ್ಣನಿಗೆ ಸುಪ್ರಿಯಾಳನ್ನು ತಂದು ವಿವಾಹ ಮಾಡುವ ಮೊದಲಿಗೆ ವೃಷಾಲಿಯ ಅನುಮತಿಯನ್ನು ಕೇಳುವ ಸಂದರ್ಭವಿದೆ. ಸುಪ್ರಿಯಾಳ ಮಕ್ಕಳೂ ಕರ್ಣಕುಂಡಲವನ್ನು ಹೊತ್ತು ಹುಟ್ಟದೇ ಇರುವುದು ಕರ್ಣನಿಗೆ ದಿನೇದಿನೇ ಬೇಸರದ ಸಂಗತಿ. ಆತನ ಏಳು ಮಕ್ಕಳಿಗೂ ಆತನ ಕರ್ಣಕುಂಡಲ ಬಾರದ ವಿಚಾರದಿಂದ ವ್ಯಥಿತನಾಗುವಾಗ ವೃಷಾಲಿ ಪತಿಯ ಪ್ರತಿಬಿಂಬದಂತೆ ಕಾಣುತ್ತಾಳೆ.
ದ್ರೌಪದಿಯ ಸ್ವಯಂರದಲ್ಲಿ ಸೂತಪುತ್ರನೆಂದು ಕರ್ಣನನ್ನು ಅವಮಾನಿಸಿದಾಗ ಕರ್ಣನಿಗಿಂತಲೂ ನೊಂದದ್ದು ವೃಷಾಲಿ. ಆದರೆ, ದಿನಕಳೆದಂತೆ ನಿಜ ತಿಳಿದ ಅವಳು ಕರ್ಣನಿಗೆ ದ್ರೌಪದಿಯ ಕುರಿತಾಗಿ ಇದ್ದ ತಪ್ಪು ಭಾವನೆಯನ್ನು ಹೋಗಲಾಡಿಸುತ್ತಾಳೆ. ಹೀಗೆ ಕರ್ಣನ ಸೋಲು-ಗೆಲುವು, ನೋವು-ನಲಿವುಗಳ ಜೊತೆಯಾಗುವ ವೃಷಾಲಿ ಆತ ಸತ್ತಾಗ ಆತನ ಜೊತೆಗೇ ಸಹಗಮನ ಮಾಡುವ ಮೂಲಕ ಕಥೆ ಮುಗಿಯುತ್ತದೆ. ಮನಸು ಭಾರವಾಗುತ್ತದೆ.
ಇಲ್ಲಿ ಕರ್ಣನ ತಮ್ಮ ಶೋಣ ಹಾಗೂ ಆತನ ಪತ್ನಿ ಮೇಘಮಾಲೆಯ ಪರಿಚಯವಾಗುತ್ತದೆ. ಅಲ್ಲದೇ.. ದ್ರೌಪದಿ ಹಾಗೂ ಸುಭದ್ರೆಯರ ನಡುವಿನ ಹೋಲಿಕೆಯನ್ನು ತನ್ನ ಹಾಗೂ ಸುಪ್ರಿಯಾ ನಡುವೆ ಕಾಣುವ ವೃಷಾಲಿ ಏಕೋ ತೆರೆಮರೆಯ ನಾಯಕಿಯಾಗಿಯೇ ಉಳಿದುಹೋದಳೇನೋ ಎನ್ನಿಸಿತು.
ವಿಭಿನ್ನ ಕತೆಗಳು ವಿಭಿನ್ನವಾಗಿ ಹೇಳುವ ಕತೆಯಲ್ಲಿಯೂ ಕರ್ಣನ ಪತ್ನಿ ಆತನ ಪಾಲಿನ ಆಪ್ತಸ್ನೇಹಿತೆಯಂತೆ ನೆರಳಾಗಿ ನಿಲ್ಲುವುದು ಕಾಣುತ್ತದೆ.
~ವಿಭಾ ವಿಶ್ವನಾಥ್
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ