ಪುಸ್ತಕದ ಶೀರ್ಷಿಕೆ : ಇದೂ ಒಂದು ಪ್ರೇಮ ಕಥೆ
ಲೇಖಕರು : ಚಿತ್ರಲೇಖ
ಪ್ರಕಾಶಕರು : ಸುಧಾ ಶಿಶುಸಾಹಿತ್ಯ ಮಾಲೆ
ಪ್ರಥಮ ಮುದ್ರಣ : 1994
ದ್ವಿತೀಯ ಮುದ್ರಣ : 2009 (ನನ್ನ ಓದಿಗೆ ಸಿಕ್ಕಿದ್ದು)
ಪುಟಗಳು : 200
ಬೆಲೆ : 75 ರೂ.
ಮಾಧುರಿ ಹಾಗೂ ಹೇಮಂತ್ ಇಬ್ಬರ ಸಾಂಸಾರಿಕ ಜೀವನದಲ್ಲಿ ಸುಂದರ ಕನಸಿನಂತೆ ಕಾಣುತ್ತಿದ್ದ ಮಯೂರಿ ಅವರಿಬ್ಬರ ಬದುಕನ್ನು ಬೆಸೆಯಲು ಕೊಂಡಿಯಾಗಿದ್ದಳು ಎಂದರೂ ತಪ್ಪಾಗಲಾರದು. ಮಯೂರಿಯದ್ದು ಈಗ ಸುಂದರ ಕನಸು ಕಾಣುವ ವಯಸ್ಸು, ಬದುಕನ್ನು ಅಷ್ಟೇ ಜೀವನೋತ್ಸಾಹದಲ್ಲಿ ಕಾಣುತ್ತಿದ್ದಳು. ಅದಕ್ಕೆ ಕಾರಣ ತಾಯಿ ಎಂದರೂ ತಪ್ಪಾಗಲಾರದು. ಅಲಂಕರಿಸಿಕೊಳ್ಳುವ ಆಸಕ್ತಿಯೂ ತಾಯಿಯಿಂದಲೇ ವರ್ಗಾವಣೆಯಾಗಿತ್ತು.
ಮಾಧುರಿ ಹಾಗೂ ಹೇಮಂತ್ ಇಬ್ಬರೂ ಮದುವೆಯಾಗಿ 21 ವರ್ಷಗಳು ಕಳೆದಿದ್ದವು. ಮದುವೆಯಾದ ಮರುವರ್ಷವೇ ಮಯೂರಿ ಹುಟ್ಟಿದ್ದಳು. ಮನೆಯಲ್ಲಿ ನೋಡಿ ಆಯ್ಕೆ ಮಾಡಿದ ವರ ಹೇಮಂತ್. ಮಯೂರಿಗೆ 39 ವರ್ಷ ವಯಸ್ಸಾಗಿದ್ದರೂ ಇನ್ನೂ 30ರಂತೆಯೇ ಕಾಣುತ್ತಿದ್ದಳು. ಅವಳು ಅಲಂಕಾರಪ್ರಿಯೆಯಾದರೂ.. ಮಿತಿಮೀರಿ ಅಲಂಕರಿಸಿಕೊಂಡವಳಲ್ಲ. ಬದಲಾಗಿ ಮಾಧುರಿಗೆ ಪ್ರತಿಯೊಂದರಲ್ಲೂ ಕಲಾತ್ಮಕ ದೃಷ್ಟಿಯಿತ್ತು. ಆದರೆ, ಹೇಮಂತನಿಗೆ ಇದಕ್ಕೆ ವ್ಯತಿರಿಕ್ತವಾದ ಮನಸ್ಸು. ಆತ ಬದುಕನ್ನು ಕಲಾತ್ಮಕ ದೃಷ್ಟಿಯಿಂದ ಎಂದಿಗೂ ಅನುಭವಿಸಿದವನಲ್ಲ. ಒಂದು ರೀತಿಯ ಸಿಸ್ಟಮ್ಯಾಟಿಕ್ ಬದುಕಿನಂತೆ. ಆತನಿಗೆ ಅಲಂಕಾರದಲ್ಲಿಯೂ ಹೆಚ್ಚಿನ ಆಸಕ್ತಿ ಇರಲಿಲ್ಲ. ಹೇಗೂ ಇದ್ದರಾಯ್ತು ಎಂಬ ಭಾವ.
ಜಾನಕಿ ರಾಮನ್ ಅವರ ಐದು ಜನ ಹೆಣ್ಣು ಮಕ್ಕಳು ಹಾಗೂ ಮೂರು ಜನ ಗಂಡು ಮಕ್ಕಳ ಕುಟುಂಬದಲ್ಲಿ ಮಾಧುರಿ ನಾಲ್ಕನೆಯ ಮಗಳು. ತಾಯಿ ಇಲ್ಲದಿದ್ದರೂ.. ತಂದೆಗೆ ಯಾವ ಚಿಂತೆ ದುಃಖವನ್ನು ಉಂಟು ಮಾಡದೆ, ಆಟ-ಪಾಠದ ಜೊತೆಗೆ ಕಲಾತ್ಮಕ ಮನಸ್ಸನ್ನು ಹೊಂದಿದ್ದವರು. ಅದರಲ್ಲಿಯೂ ಮಾಧುರಿಯದ್ದು ಒಂದು ಕೈ ಮೇಲೆಯೇ. ಕಲಾವಿದೆಯಾಗಲು ಬಯಸಿದರೂ.. ಕೆಲಸಕ್ಕೆ ಹೋಗಲು ಬಯಸಿದರೂ.. ತಂದೆ ಅದು ವಿವಾಹದ ನಂತರ ನಿನ್ನ ಗಂಡನ ಅನುಮತಿಯ ಮೇರೆಗೆ ಎಂದು ಅದಕ್ಕೆ ನಿರ್ಬಂಧಿಸಿದ್ದರು. ಅಕ್ಕಂದಿರ ಮದುವೆಯಾದ ನಂತರ ಅವಳು ಮನಸ್ಸಿನಲ್ಲಿ ತನ್ನ ಭಾವೀ ಪತಿಯ ಬಗ್ಗೆ ಕನಸು ಕಂಡಿದ್ದಳು. ಅಕ್ಕಂದಿರ ಬದುಕಿನ ಹಾಗೆ ತನ್ನ ಬದುಕು ಎಂದು ಕನಸು ಕಂಡಿದ್ದಳಾದರೂ.. ಆ ಕನಸು ಅವಳ ಪಾಲಿಗೆ ನಿಜವಾಗಿರಲಿಲ್ಲವೆಂದು ಅರಿವಾಗಿದ್ದು ಮದುವೆಯ ನಂತರವೇ.
ಹೇಮಂತ್ ಇಂಜಿನಿಯರ್ ಆಗಿದ್ದವನು. ಆದರೆ, ಮತ್ತೊಬ್ಬರ ಕೈ ಕೆಳಗೆ ದುಡಿಯಲು ಇಷ್ಟವಿಲ್ಲವೆಂದು ಸ್ವಂತವಾಗಿ ಗ್ಯಾರೇಜ್ ನಡೆಸುತ್ತಿದ್ದ. ತಂದೆ-ತಾಯಿಯರಿಗೆ ಒಬ್ಬನೇ ಮಗ. ಇದ್ದ ಇಬ್ಬಂದಿರು ಅಕ್ಕಂದಿರ ಮದುವೆಯಾಗಿತ್ತು. ತಂದೆ-ತಾಯಿ ಹಳ್ಳಿಯಲ್ಲಿದ್ದರು. ಅವರಿಗೆ ಪಟ್ಟಣದ ವಾಸ ಬೇಕಾಗಿರಲಿಲ್ಲ. ಮಾಧುರಿಯ ಜಾತಕವೂ ಹೊಂದಿಕೆಯಾಗಿ ಕನ್ಯೆ ನೋಡಲು ಬಂದಾಗಲೇ ಒಪ್ಪಿದ್ದ. ಮಿತಭಾಷಿಯಾಗಿ, ಸಾಧಾರಣ ಉಡುಪಿನಲ್ಲಿ ಬಂದಿದ್ದ ಹೇಮಂತ್ ರನ್ನು ಎಲ್ಲರೂ ಮೆಚ್ಚಿದ್ದರೂ ಮಾಧುರಿಗೇಕೋ ಅಷ್ಟು ಹಿತವೆನ್ನಿಸಿರಲಿಲ್ಲ. ವಾಚಾಳಿಯಾದ, ರಸಿಕಳಾದ ಆಕೆಗೆ ಈಕೆಗೆ ಹೊಂದಾಣಿಕೆಯಾಗುತ್ತಾನಾ ಎಂದು ತಿಳಿಯುವಷ್ಟರಲ್ಲಿಯೇ ವಿವಾಹ ನಡೆದುಹೋಗಿತ್ತು.
ಬದುಕಿನ ಸತ್ಯ ಸಂಗತಿಗಳ ಅರಿವಾಗತೊಡಗಿದ್ದು ಮಾಧುರಿಗೆ ಆಗಲೇ.. ಗಂಭೀರ ಸ್ವಭಾವವೆನಿಸಿಕೊಂಡದ್ದು ಸಂಕುಚಿತ ಸ್ವಭಾವವೆಂದು ಅರ್ಥವಾಗಲು ಬಹಳ ಸಮಯ ಹಿಡಿದಿತ್ತು. ಮದುವೆಯ ಮುಂಚೆ ಸುತ್ತಾಟಕ್ಕೆ ಬರೆದಿದ್ದಾಗ ಮನಸ್ಸು ತಳಮಳಗೊಂಡಿದ್ದರೂ.. ಆಕೆ ಯಾರ ಬಳಿಯೂ ಅದನ್ನು ಹಂಚಿಕೊಳ್ಳುವಂತಿರಲಿಲ್ಲ. ಮೇಲ್ನೋಟಕ್ಕೆ ಸುಂದರವಾದ ಸಂಸಾರದಂತಿದ್ದರೂ ಒಳಗೊಳಗೆ ಅತೃಪ್ತಿಯ ಅಲೆಗಳು ಕಾಡುತ್ತಿತ್ತು. ಆಕೆಯ ಇಷ್ಟದಂತೆ ನಾವೀನ್ಯತೆಯಿಂದ ಅಲಂಕರಿಸಿಕೊಳ್ಳುವ ಅವಕಾಶವಿಲ್ಲ ಅದಕ್ಕೂ ಕೊಂಕು ಮಾತುಗಳು. ಸರಸವೂ ಆತನಿಗೆ ಬೇಕಾದಾಗಷ್ಟೇ.. ಆಕೆ ಬಯಸಿದರೆ ಅದಕ್ಕೂ ಆತನ ಕೊಂಕು ಮಾತುಗಳು ಕುಟುಕುತ್ತಿದ್ದವು. ತಂದೆ-ತಾಯಿ, ಅಕ್ಕಂದಿರು ಬಂದಾಗಲೆಲ್ಲಾ ಮಾಧುರಿ ಅವರ ಸೇವೆಗೆ ಸಿದ್ದಳಿರಬೇಕಾಗಿತ್ತು.
ಮದುವೆಯಾದ ವರ್ಷದಲ್ಲಿಯೇ ಆಕೆ ಗರ್ಭಿಣಿಯಾಗಿ, ಮಯೂರಿಯೂ ಹುಟ್ಟಿದಳು. ಮಗಳು ಹುಟ್ಟಿದ ಮೇಲೆ ಆತ ಬದಲಾಗುತ್ತಾನೆ ಎಂದುಕೊಂಡದ್ದು ಸುಳ್ಳಾಗಿತ್ತು. ಆಕೆ ಮಯೂರಿಯ ಹೆಸರಿಡುವಾಗಲೂ.. ಆತ ಹೆಚ್ಚಿನ ಲವಲವಿಕೆ ತೋರಿಸಿರಲಿಲ್ಲ. ಯಾವುದೋ ಒಂದು ಎಂಬಂತಿತ್ತು ಆತನ ಭಾವ. ಹಾಗೆಂದು ಮಯೂರಿ ಎಂದರೆ ತೀರಾ ಅಸಡ್ಡೆ ಇರದಿದ್ದರೂ.. ಭಾವರಹಿತ ಬದುಕಿನಂತೆ ಅವನ ಜೀವನ. ಮಾಧುರಿಗೆ ಅದರ ನಂತರ ಮಕ್ಕಳ ಸೌಭಾಗ್ಯ ಸಿಕ್ಕಿದರೂ.. ಆಕೆ ತನ್ನ ಬದುಕಿಗೆ ಮಯೂರಿ ಒಬ್ಬಳೇ ಸಾಕು ಎಂದು ನಿರ್ಧರಿಸಿ, ಆರೋಗ್ಯದ ಕಾಳಜಿ ವಹಿಸಿ ಮಗಳನ್ನು ತನ್ನಂತೆಯೇ ಬೆಳೆಸುತ್ತಿದ್ದಳು.
ಹೀಗೆ ಸಾಗುತ್ತಿದ್ದ ಬದುಕಿನಲ್ಲಿ ಮಯೂರಿ ದೊಡ್ಡವಳಾದಾಗ.. ಮನೆಯಲ್ಲಿ ತನಗೆ ಬೇಜಾರು, ತನ್ನ ಒಂಟಿತನ ತಾಳಲಾಗದೆ ಕೆಲಸಕ್ಕೆ ಸೇರುತ್ತೇನೆಂದು ಸ್ವಲ್ಪ ಹಠ ಮಾಡಿ ಮೂರ್ನಾಲ್ಕು ವರ್ಷದಿಂದ 'ಸಿಂಧು ಎಕ್ಸ್ಪೋರ್ಟ್' ಕಂಪನಿಯಲ್ಲಿ ಅಂತರಂಗ ಕಾರ್ಯದರ್ಶಿಯಾಗಿ ಕೆಲಸಕ್ಕೆ ಸೇರಿದಳು. ಎಲ್ಲವೂ ಸುಗಮವಾಗಿಯೇ ಸಾಗುತ್ತಿದ್ದಾಗ ಎಂ.ಡಿ ವಿಶ್ವನಾಥ್ ಕರೆ ಮಾಡಿ, ತಮ್ಮ ಆಪ್ತ ಸ್ನೇಹಿತ ಸೂರ್ಯಕಾಂತ್ ಬಂದಾಗ ಸತ್ಕರಿಸಲು ಹೇಳಿದರು. ಅವನ ಸ್ನೇಹಪರತೆಯಿಂದ ಮಾಧುರಿಯ ಬದುಕು ಬದಲಾಗುವುದರಲ್ಲಿತ್ತು.
ಮಯೂರಿ ತನ್ನ ಸ್ನೇಹಿತೆಯರಾದ ಜೆನ್ನಿ, ಪಾರು, ಫರೀದಾ, ನಳಿನ ಜೊತೆಗೆ ಪ್ರವಾಸಕ್ಕೆ ಹೋಗಿದ್ದಾಗ ನಡೆದ ಘಟನೆಯಲ್ಲಿ ಪರಿಚಿತವಾಗಿದ್ದ ಪ್ರಶಾಂತ್ ಮುಂದೊಂದು ದಿನ ಆಕಸ್ಮಿಕವಾಗಿ ಸಿಕ್ಕಿ ಸ್ನೇಹದ ಸೆಳೆತ ಪ್ರೇಮಕ್ಕೆ ತಿರುಗಿತ್ತು.
ಸೂರ್ಯಕಾಂತ್ ಹಾಗೂ ಮಾಧುರಿಯ ಸ್ನೇಹವೂ ಗಾಢವಾಗಿದ್ದಾಗಲೇ ಸೂರ್ಯಕಾಂತ್ ಅವರಲ್ಲಿ ತನ್ನ ಹೆಂಡತಿ ಸೀಮಾಳ ಛಾಯೆಯನ್ನು ಗುರುತಿಸಿದ್ದರು. ಈಗ ಆಕೆ ಬದುಕಿರಲಿಲ್ಲ. ಎದುರು ಮನೆ ಹುಡುಗಿ ಸೀಮಾಳನ್ನು ಮದುವೆಯಾಗಿದ್ದ ಸೂರ್ಯಕಾಂತ್ ಆಕೆಯ ಸ್ಥಿತಿವಂತ ಕುಟುಂಬಕ್ಕೆ, ಬಡತನದ ಕಾರಣಕ್ಕಾಗಿ ಒಪ್ಪಿಗೆಯಾಗಿರಲಿಲ್ಲ. ಆದರೆ, ಧಿಕ್ಕರಿಸಿ ವಿವಾಹವಾದ ನಂತರ ಸೀಮಾ ಬದುಕಿನಲ್ಲಿ ಕಷ್ಟಪಟ್ಟರೂ.. ನಂತರ, 'ಸೀಮಾ ಇಂಡಸ್ಟ್ರಿ' ಶುರುವಾದ ಮೇಲೆ ಬದುಕಿನಲ್ಲಿ ಗೆಲುವಿನ ಮೆಟ್ಟಿಲನ್ನು ಏರುತ್ತಿದ್ದಾಗಲೇ ಪತ್ನಿ ಅವರನ್ನು ಕೈಬಿಟ್ಟು ಸಾವಿನತ್ತ ನಡೆದಿದ್ದರು.
ತನ್ನ ಬದುಕಿನ ಸತ್ಯವನ್ನೆಲ್ಲಾ ಸೂರ್ಯಕಾಂತ್ ಮುಚ್ಚಿಡದೇ ಹೇಳಿದರೂ.. ಮಾಧುರಿ ಅವರ ಬಳಿಯಲ್ಲಿ ತನ್ನ ಸಂಸಾರದ ಕುರಿತು ಹೆಚ್ಚಿನದ್ದೇನನ್ನೂ ಹೇಳಿರಲಿಲ್ಲ.
ಇಂದಿನ ಯುವ ಪೀಳಿಗೆಯ ಆಧುನಿಕತೆಗೆ, ನಾಗರೀಕತೆಗೆ ಒಗ್ಗದ ಅಥವಾ ಒರಟಾದ, ವಿಚಿತ್ರ ಸ್ವಭಾವದ ವ್ಯಕ್ತಿಯನ್ನು ಕೈಹಿಡಿದ ಮಾಧುರಿ ತನ್ನನ್ನೇ ತಾನು ಬಂಧಿಸಿಕೊಂಡಿದ್ದಳೇ..?? ಅವಳ ಹಿಂಜರಿಕೆಗೆ ಕಾರಣವೇನಿತ್ತು..?? ಸೂರ್ಯಕಾಂತ್ ಹಾಗೂ ಮಾಧುರಿಯರ ಬದುಕು ತಮ್ಮ ಸ್ನೇಹದ ಪರಿಧಿಯನ್ನು ದಾಟಿ ಮುಂದುವರಿಯಿತೇ.. ಹಾಗಾದರೆ ಅದು ಸರಿಯೇ..??
ಮಾಧುರಿಯ ಬದುಕಿನ ಬೆಳಕಿನಂತಿದ್ದ ಮಯೂರಿ ತನ್ನ ಬದುಕನ್ನು ಕಟ್ಟಿಕೊಳ್ಳಲು ಪ್ರಶಾಂತನ ಜೊತೆ ಹೊರಡಲು ಸಿದ್ದಳಿದ್ದರೂ.. ಅದು ಹೇಮಂತ್ ಗೆ ತಿಳಿದಾಗ, ಎಲ್ಲಾ ಸಿಟ್ಟು ಮಾಧುರಿಯ ಮೇಲೆ ಪ್ರತಿಫಲಿತವಾಗಿತ್ತು. ಮಾಧುರಿ ಕೈಗೊಂಡ ನಿರ್ಧಾರವೇನು..?? ಮಯೂರಿಯ ಪ್ರೇಮ ಸಫಲವಾಯಿತೇ..??
ಮಾಧುರಿ ಹಾಗೂ ಮಯೂರಿಯರ ಬದುಕು ಮತ್ತಾವುದೋ ವಿಚಿತ್ರ ಬಿಂದುವಿನಲ್ಲಿ ಬಂಧಿಸಿಕೊಂಡಿತ್ತು. ಆ ರಹಸ್ಯವೇನು..??
ಈ ಕಾದಂಬರಿ 'ಮಂಗಳ' ವಾರಪತ್ರಿಕೆಯಲ್ಲಿ ಧಾರಾವಾಹಿಯಾಗಿ ಪ್ರಕಟವಾಗಿ ಓದುಗರ ಮೆಚ್ಚುಗೆ ಪಡೆದಿತ್ತು. ಈ ಕಾದಂಬರಿಯನ್ನು ಓದಿದಾಗ ನನಗೆ ಇಲ್ಲಿ ನೈತಿಕತೆ ಹಾಗೂ ಅನೈತಿಕತೆಯ ಅಥವಾ ಸರಿ-ತಪ್ಪಿನ ತಕ್ಕಡಿಯಲ್ಲಿಟ್ಟು ತೂಗಲು ಹೋದದ್ದಕ್ಕಿಂತ, ಇದನ್ನು ಬದುಕಿನ ಪ್ರೇಮ ಕಥೆಯನ್ನಾಗಿ ನೋಡಬಹುದು.
ಇಲ್ಲಿ ಪ್ರೇಮ ಕೇವಲ ಯುವ ಮನಸ್ಸಿನ ಪ್ರೇಮವೆಂದು ಅಳೆಯಲಾಗದು. ಇಲ್ಲಿ ಒಂದು ವಿಭಿನ್ನ ಪ್ರೇಮಕಥೆ ಸಿಗುತ್ತದೆ. ಒಂದು ಸುಖೀ ಕುಟುಂಬದ ಹಿಂದೆ ಹೀಗೂ ಇರಬಹುದಾ ಎನ್ನುವ ಸಂಶಯ ಬಂದರೂ.. ಹಲವಾರು ಹೆಣ್ಣುಮಕ್ಕಳು ಆಡಲೂ ಆಗದೆ, ಅನುಭವಿಸಲೂ ಆಗದೆ.. ಇಂತಹಾ ಸ್ಥಿತಿಯನ್ನು ಅನುಭವಿಸುತ್ತಿರಬಹುದು ಎಂಬ ಆಲೋಚನೆಯೂ ಮೂಡಿತು. ಸಮಾಜದಲ್ಲಿ ಬಿಡುಬೀಸಾಗಿ ತೆರೆದಿಡಲಾಗದ ವೈವಾಹಿಕ ಜೀವನದ ಸಮಸ್ಯೆಯೊಂದನ್ನು ಸೂಕ್ಷ್ಮವಾಗಿ ಬಿಚ್ಚಿಟ್ಟಿರುವ ಪರಿ ಇಷ್ಟವಾಯಿತು.
~ವಿಭಾ ವಿಶ್ವನಾಥ್
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ