ಶುಕ್ರವಾರ, ಏಪ್ರಿಲ್ 17, 2026

ಹೇಳದೇ ಉಳಿದದ್ದು ! (ಪುಸ್ತಕ ಯಾನ - 220)


ಪುಸ್ತಕದ ಶೀರ್ಷಿಕೆ : ಹೇಳದೇ ಉಳಿದದ್ದು ! 

ಒಲವಿನ ಕವಿತೆಗಳು

ಲೇಖಕರು : ಸೌಮ್ಯ ಕಾಶಿ

ಪ್ರಕಾಶಕರು : ಹರಿವು ಬುಕ್ಸ್

ಪುಟಗಳು : 32

ಬೆಲೆ : 90 ರೂ.


"ಭಾವನೆ ಎಂಬುದು ಬರೆದ ಕವಿತೆಗಳಲ್ಲಿ ಇರುವುದಕ್ಕಿಂತ, ಓದುವವರ ಆ ಮೆಲುದನಿಯಲ್ಲಿ, ಪದಗಳ ನಡುವೆ ಇರುವ ಆ ಮೌನದಲ್ಲಿ ಇರುತ್ತದೆಯಂತೆ!" ಎನ್ನುವ ಸೌಮ್ಯ ಕಾಶಿಯವರ ಕವನ ಸಂಕಲನದ ಈ ಒಲವಿನ ಕವಿತೆಗಳನ್ನು ಓದುವಾಗ ಎಂದಿನ ಜಂಜಾಟಗಳನ್ನೆಲ್ಲಾ ಹೊರಗಿಟ್ಟು ಕೇವಲ ಹೇಳದೆ ಉಳಿದ ಆ ಮಾತುಗಳನ್ನು ಮೆಲುಕು ಹಾಕುವಂತೆ ಮಾಡುತ್ತದೆ. 


ಇಲ್ಲಿನ ಸಾಲುಗಳನ್ನು ಓದುವಾಗ.. ಕೇವಲ ಹರೆಯದ ಪ್ರೇಮಿಗಳ ಒಲವು ಮಾತ್ರವಲ್ಲದೆ, ಒಲವಿನ ಪಿಸು ಮಾತುಗಳಿಗೆ ಕೆನ್ನೆ ಕೆಂಪಾಗುವ ಪ್ರೇಮಿಗಳ ನೆನಪಾಗಬಹುದು. ಹರೆಯದಲ್ಲಿ ಹೇಳದೆ ಉಳಿದ, ಎದೆಯಲ್ಲಿ ಬಚ್ಚಿಟ್ಟ ಆಗಾಗ ನೆನಪಾಗುವ ಬೆಚ್ಚನೆಯ ವಿವರಿಸಲಾಗದಂತಹಾ ಪ್ರೀತಿ ನೆನಪಾಗಬಹುದು. ಮೊದಲು ಬಂದ ಪ್ರೇಮಪತ್ರ ಅಥವಾ ಮೊದಲು ಬರೆದ ಪ್ರೇಮಪತ್ರ ನೆನಪಾಗಬಹುದು. ಬೇಸಿಗೆಯ ದಿನಗಳಲ್ಲಿ ಒಲವಿನ ತಂಪಿನ ಅರಿವಾಗುತ್ತದೆ. ಮಳೆಗಾಲದ ದಿನಗಳಲ್ಲಿ ಬೆಚ್ಚಗಿನ ಓದಾಗುತ್ತದೆ. ಪುಟ್ಟ-ಪುಟ್ಟ ಸಾಲುಗಳು ಹೇಳಿದ್ದನ್ನು ನೆನಪಿಸುವಷ್ಟೇ.. ಹೇಳದೆ ಉಳಿದುದ್ದನ್ನೂ ನೆನಪಿಸುತ್ತವೆ. ನನಗೆ ಇಷ್ಟವಾದ ಒಂದೇ ಒಂದು ಕವಿತೆಯನ್ನು ಉಲ್ಲೇಖಿಸುತ್ತೇನೆ.


ಈಗೀಗ ನಮ್ಮಿಬ್ಬರ ಮಧ್ಯೆ 

ಮಾತಿಗಿಂತ ಬರೀ

ಮೌನವೇ ಹೆಚ್ಚು, 

ಈಗೀಗ ನಮ್ಮಿಬ್ಬರ ಮಧ್ಯೆ 

ಮಾತಿಗಿಂತ ಬರೀ

ಮೌನವೇ ಹೆಚ್ಚು, 

ಹೇಳು, ಪ್ರೀತಿ ಅತಿಯಾದಂತೆಲ್ಲ 

ಪ್ರೀತಿ ಅತಿಯಾದಂತೆಲ್ಲ 

ಭಾಷೆ ಬಡವಾಗುತ್ತದೆಯೇ !?


ಭಾಷೆ ಸಮರ್ಥವಾಗಿ ದಾಟಿ ಭಾವಗಳನ್ನು ವಿನಿಮಯಿಸುವುದು ಒಂದು ರೀತಿಯಾದರೆ, ಎಷ್ಟೋ ಬಾರಿ ಒಂದು ಸ್ಪರ್ಶ, ಅಪ್ಪುಗೆ ಅಥವಾ ಮುಖದ ಮೇಲಿನ ಮುಗುಳ್ನಗು, ಕಣ್ಣಂಚಿನಲ್ಲಿ ನಿಂತ ಕಣ್ಣೀರು ಸಹಾ ದಾಟಿಸಿ ಬಿಡುತ್ತವೆ. ಅಂತಹ ಎಷ್ಟೋ ಭಾವಗಳು ಇಲ್ಲಿ ವಿನಿಮಯವಾಗಿ ಬಿಡುತ್ತವೆ. ಮೌನವೂ ಒಂದು ಒಲವಿನ ಭಾಷೆಯಾಗುವ ಸಂದರ್ಭ ಇಲ್ಲಿದೆ. 


ಮೈಸೂರು ಮಲ್ಲಿಗೆಯೇ ಆಗಬೇಕೆಂಬ 

ಆಸೆಯಿಲ್ಲ, 

ಕಾಡುಮಲ್ಲಿಗೆಯಾದರೂ ಸರಿಯೇ !


ಎನ್ನುವ ಸಾಲುಗಳಲ್ಲಿ ಯಾವುದೂ ನಿಕೃಷ್ಟವಲ್ಲ ಎನ್ನುವ ಭಾವ ಕಾಣುತ್ತದೆ. ಕೆಲವರ ಬದುಕಲ್ಲಿ ಪ್ರೀತಿ ಮರೆತ ಅಧ್ಯಾಯ ಎಂದರೂ.. ಪ್ರೀತಿ ಇಲ್ಲದೆ ಬದುಕಿಲ್ಲವೆಂಬುದೇ ಸತ್ಯ. ಎಷ್ಟೋ ಪ್ರೀತಿಯ ಮಾತುಗಳನ್ನು ಸೊಗಸಾಗಿ ದಾಟಿಸುತ್ತಾರೆ. ಒಲವಿನ ಕವಿತೆಗಳು ಸೊಗಸಾಗಿ ಓದಿಸಿಕೊಂಡು ಹೋಗುತ್ತವೆ.


ಈ ಪುಸ್ತಕದಲ್ಲಿ ಒಳಪುಟ ಚಿತ್ರಗಳು ಹಾಗೂ ಮುಖಪುಟವೂ ಸೊಗಸಾಗಿವೆ. ಅಕ್ಷರಗಳ ಗಾತ್ರ ಹೆಚ್ಚೆನಿಸಿ, ಕವಿತೆಗಳು ಇಷ್ಟು ಬೇಗ ಮುಗಿದವು ಎನ್ನಿಸಿತು. ಈ ಓದು ತೃಪ್ತಿ ಕೊಟ್ಟರೂ.. ಬೆಲೆಗೆ ಹೋಲಿಸಿದಾಗ ಕಂಟೆಂಟ್ ಕಡಿಮೆಯಾಯಿತೇನೋ ಎನ್ನುವ ಪುಟ್ಟ ದೂರು ನನ್ನದು.


~ವಿಭಾ ವಿಶ್ವನಾಥ್

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ