ಶನಿವಾರ, ಏಪ್ರಿಲ್ 18, 2026

ಒಲವಿನ ಪೂಜೆ (ಪುಸ್ತಕ ಯಾನ - 246)


ಪುಸ್ತಕದ ಶೀರ್ಷಿಕೆ : ಒಲವಿನ ಪೂಜೆ

ಲೇಖಕರು : ಹೆಚ್. ಜಿ. ರಾಧಾದೇವಿ


ಪ್ರೀತಿ ಪ್ರೇಮದ ಪರಿಧಿ ವಿಶಾಲವಾಗಿ, ಸಮಗ್ರ ಸಂಸಾರಕ್ಕೆ ಒಲವಿನ ಪೂಜೆಯಾಗಿ ಸಂದಾಗ, ಸಂಸಾರ ನಂದನವನವಾಗುತ್ತದೆ ಎನ್ನುವ ಆಶಯವನ್ನು ಇಟ್ಟುಕೊಂಡ ರಾಧಾದೇವಿಯವರ ಚಂದದ ಕಾದಂಬರಿಗೆ ಒಲವಿನ ಪೂಜೆ. ನನಗೆ ಈ ಕಾದಂಬರಿಯ ಆಶಯ ಬಹಳ ಹಿಡಿಸಿತು.


ತನ್ನ ತಂಗಿಯ ಮಗಳು ಸರೋಜ ತಬ್ಬಲಿಯಾಗಬಾರದೆಂದು, ತಂಗಿಯ ಆಸೆಯಂತೆ ತಮ್ಮ ಆಶ್ರಯದಲ್ಲಿ ಬೆಳೆಸಿದವರು ನರಸಿಂಹರಾಯರು. ಪತ್ನಿ ಲಕ್ಷ್ಮಮ್ಮ ಅಷ್ಟು ನಿಸ್ವಾರ್ಥಿಯಲ್ಲದಿದ್ದರೂ ಬರುವ ಒಡವೆ ಹಾಗೂ ಹಣದ ದುರಾಸೆಯೂ ಇತ್ತು. ಸರೋಜಳನ್ನು ಅರ್ಧಕ್ಕೆ ಓದು ಬಿಡಿಸಿ ಮನೆಕೆಲಸಕ್ಕೆ ಹಾಕಿಕೊಂಡು ಸ್ವಾತಂತ್ರ್ಯ ನೀಡದಿದ್ದಾಗಲೂ ಆಕೆ ಪ್ರತಿಭಟಿಸಲಿಲ್ಲ ಬದಲಾಗಿ ಕುಮುದಾಬಾಯಿಯ ಬಳಿ ಟೈಲರಿಂಗ್ ಗೆ ಹೋಗುತ್ತಾ ತನ್ನ ಜೀವನವನ್ನು ರೂಪಿಸಿಕೊಳ್ಳಲು ಮುಂದಾಲೋಚನೆ ಮಾಡಿದವಳು.


ಸರೋಜಳ ತಾಯಿ ಕೊಟ್ಟದ್ದ ಹಣದಿಂದಲೇ ಮಗ ಶ್ರೀನಿವಾಸನನ್ನು ಓದಿಸುತ್ತಾರೆ. ಅವಳ ತಾಯಿ ಕೊಟ್ಟಿದ್ದ 20 ತೊಲ ಚಿನ್ನದಲ್ಲಿ ತನ್ನ  ಹೆಣ್ಣುಮಕ್ಕಳ ಮದುವೆ ಮಾಡಿ..ಸರೋಜಳನ್ನೇ ಸೊಸೆ ಮಾಡಿಕೊಂಡು ಹಣ- ಒಡವೆ ತಮ್ಮದಾಗಿಸಿಕೊಳ್ಳುವ ಹುನ್ನಾರ ನಡೆಸುತ್ತಾರೆ. ಆದರೆ, ಸರೋಜ ಆ ಕನಸು ಕಾಣದೆ ವಾಸ್ತವವನ್ನು ಅರಿತು ತನ್ನ ದಾರಿ ನೋಡಿಕೊಳ್ಳಲು ತೀರ್ಮಾನಿಸಿ ಮದುವೆಯನ್ನು ಧಿಕ್ಕರಿಸುತ್ತಾಳೆ. ಆಗ ನರಸಿಂಹರಾಯರೂ ಆಕೆಗೆ ವಿರೋಧವಾಗುತ್ತಾರೆ. ಲಕ್ಷ್ಮಮ್ಮನ ಮಗಳು ಲಲಿತಾ ತನ್ನ ಮೈದುನನಿಗೆ ಸರೋಜಾಳನ್ನು ತಂದುಕೊಂಡರೆ ಆಕೆ ಮನೆಯ ಕೆಲಸದವಳಂತಿರುತ್ತಾಳೆ ಎಂದು ಕುಯುಕ್ತಿ ಮಾಡಿ, ತಾಯಿಗೂ ಹೇಳಿದರೂ ಆಕೆಯ ಕುಯುಕ್ತಿ ಫಲಿಸಲಿಲ್ಲ. 


ಮಗ ಶ್ರೀಮಂತ ಸಂಬಂಧವನ್ನು ಹಿಡಿದಾಗ ಸರೋಜಾಳನ್ನು ಅಡಿಯಾಳನ್ನಾಗಿಸಿಕೊಳ್ಳಲು ನೋಡುತ್ತಾರೆ ಲಕ್ಷ್ಮಮ್ಮ. ಅಷ್ಟರಲ್ಲಾಗಲೇ ಮನೆಯಿಂದ ಹೊರಡುತ್ತಾಳೆ ಸರೋಜ. ಟೈಲರಿಂಗ್ ಕಲಿಯುತ್ತಿದ್ದ ಕುಮುದಾಬಾಯಿಯ ಸೊಸೆಯಾಗುತ್ತಾಳೆ. ಮಲತಾಯಿ ಹಾಗೂ ಮಲತಂಗಿಯರ ಕಾಟದಿಂದ ನೊಂದಿದ್ದ ಕುಮುದಾಬಾಯಿ ಸರೋಜಳನ್ನು ತನ್ನಂತೆಯೇ ಎಂದು ತಿಳಿದು ಆದರಿಸುತ್ತಾರೆ. ಕುಮುದಮ್ಮನ ಏಕೈಕ ಮಗ ಶ್ರೀಕಾಂತ ಚುರುಕಾದ ಬುದ್ಧಿ ಹಾಗೂ ಸೃಜನಶೀಲ ಕಲೆ ಇದ್ದರೂ ಹೆಚ್ಚು ಓದಲಾಗಲಿಲ್ಲ. ಒಳ್ಳೆಯ ಮನಸ್ಸಿನ ಪ್ರಾಮಾಣಿಕ ವ್ಯಕ್ತಿ. ತಾಯಿಯ ಯಾವ ಮಾತಿಗೂ ಎದುರಾಡುತ್ತಿರಲಿಲ್ಲ. ತಾಯಿಯ ಹೊಲಿಗೆಗೂ ಸಹಾಯ ಮಾಡುತ್ತಾ ಇದ್ದ ಕಷ್ಟಜೀವಿ. ಆತನ ಕುರಿತು ಹೇಳುತ್ತಿದ್ದ ಕುಮುದಾಬಾಯಿಯ ಮಾತಿನಿಂದಲೇ ಆತನ ವ್ಯಕ್ತಿತ್ವ ಅರಿತ ಸರೋಜ ಆತನೊಡನೆ ಮಾತನಾಡಿ ವಿವಾಹವಾಗಿರುತ್ತಾಳೆ.


ತನ್ನ ಬುದ್ಧಿವಂತಿಕೆಯಿಂದ ಮಾಮೂಲು ಬಟ್ಟೆಯ ಜೊತೆಗೆ ಫ್ಯಾಶನ್ ಬಟ್ಟೆಗಳನ್ನು ಹೊಲಿದು ಮಾರಲು ಶುರುಮಾಡುತ್ತಾರೆ. ಅದೇ ಸಮಯಕ್ಕೆ ದೇವರಂತೆ ಬಂದವರು ಕನಕಾಂಬುಜ ಮೇಡಂ. ಕುಮುದಾಬಾಯಿಯವರ ಹೊಲಿಗೆಯನ್ನು ಮೆಚ್ಚಿದ ಹಳೆಯ ನೆರೆಯವರು. ಬಡತನದಿಂದ ಸಿರಿತನಕ್ಕೇರಿದ್ದವರು. ಶಿಕ್ಷಕಿಯಾಗಿದ್ದವರು ತಮ್ಮ ಶಾಲೆಯ ಯೂನಿಫಾರಂ ಕಾಂಟ್ರಾಕ್ಟ್ ಕೊಡಿಸುವುದರ ಜೊತೆಗೆ ಇವರ ಉಳಿದ ಫ್ಯಾಶನ್ ಬಟ್ಟೆಗಳನ್ನು ಮಾರಲು ದಾರಿ ತೋರುತ್ತಾರೆ. ಕ್ರಮೇಣ ಶ್ರೀಕಾಂತನೂ ಇವರ ಜೊತೆಯಾಗುತ್ತಾನೆ. 


ಕೊಂಚ ಹಣ ಕೈ ಸೇರಿದಾಗ ಸರೋಜ ಬೀದಿಯಲ್ಲಿ ಸ್ನಾನ ಮಾಡುತ್ತಿದ್ದ ಹಾಗೂ ನಿಕೃಷ್ಟವಾದ ಬದುಕು ಸಿಕ್ಕರೂ ತುಟಿ ಬಿಚ್ಚದ ಮಾವನನ್ನು ಆದರಿಸಲು ಹೋಗಿ ಕುಮುದಾಬಾಯಿಯ ಕೆಂಗಣ್ಣಿಗೆ ಗುರಿಯಾಗುತ್ತಾಳೆ. ಕುಮುದಾಬಾಯಿ ತನ್ನ ಗಂಡನನ್ನು ಹಾಗೆ ನಡೆಸಿಕೊಳ್ಳುತ್ತಿದ್ದುದಕ್ಕೂ ಕಾರಣವಿತ್ತು. ಮಲತಾಯಿಯ ಚಿತಾವಣೆಯಿಂದ 15 ವರ್ಷ ದೊಡ್ಡವರಾದ ಶ್ರೀನಿವಾಸರಾಯರನ್ನು ಮದುವೆಯಾದರು ಕುಮುದಮ್ಮ. ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಅವರಿಗೆ ನಂತರದಲ್ಲಿ ಅನಾರೋಗ್ಯ. ತೀರಾ ಬುದ್ಧಿವಂತರೇನೂ ಅಲ್ಲ. ಹಾಗಾಗಿ, ಗಂಡನ ಮೇಲೆ ಪ್ರೀತಿ ತೋರದೆ ಮೂಲೆಗುಂಪಾಗಿಸಿದ್ದರು. ಅಷ್ಟು ಸೇವೆ ಮಾಡಿದ ಸೊಸೆಯನ್ನು ತನ್ನ ಮಾವನಿಗೆ ಆದರಿಸಿದಳೆಂಬ ಕಾರಣಕ್ಕಾಗಿ ಜರಿದು ತೀರಾ ಹೀನಾಯವಾಗಿ ಕಂಡ ಕುಮುದಾಬಾಯಿ ಬಚ್ಚಲಲ್ಲಿ ಜಾರಿ ಬಿದ್ದು ಮೇಲೇಳಲು ಸಾಧ್ಯವಾಗದೆ ಕಷ್ಟಪಟ್ಟರಾದರೂ.. ಸೊಸೆಯ ಬಳಿ ಸೇವೆ  ಮಾಡಿಸಿಕೊಳ್ಳಲು ಇಚ್ಛಿಸದೆ, ಆಸ್ಪತ್ರೆ ಸೇರಿದರು.


ಕುಮುದಾಬಾಯಿಯೇ ಡಾಕ್ಟರ್ ಪ್ರಮೀಳಾಳ ಬಾಣಂತನ ಮಾಡಿದ್ದರು. ಹಾಗೆಂದು ದಾಕ್ಷಿಣ್ಯಕ್ಕೆ ಆಕೆಯನ್ನು ಸಿಲುಕಿಸಿ, ತನ್ನ ಅನಾರೋಗ್ಯ ಸರಿಯಾಗುವವರೆಗೂ ಕಡಿಮೆ ಖರ್ಚಿನಲ್ಲಿ ಆಕೆಯ ಆಸ್ಪತ್ರೆಯಲ್ಲಿ ಒಂದು ವರ್ಷ ಚಿಕಿತ್ಸೆ ಪಡೆದರು. ಆ ಸಮಯದಲ್ಲಿ ಶ್ರೀಕಾಂತ ತನ್ನ ತಾಯಿಯನ್ನು ನೋಡಿ ಬರುವುದು, ಊಟ-ತಿಂಡಿ ಕೊಡುವುದು ಮಾಡುತ್ತಿದ್ದ. ತಾಯಿ ಸರೋಜಳ ಕುರಿತು ತಳೆದ ಧೋರಣೆ ಇಷ್ಟವಾಗುತ್ತಿರಲಿಲ್ಲವಾದರೂ ಸರೋಜಳ ಸಲಹೆಯಿಂದ ತಾಯಿಯನ್ನು ಆದರಿಸುತ್ತಿದ್ದ.


ಇತ್ತ ಶ್ರೀನಿವಾಸ ಪ್ರೀತಿಸಿ ಮದುವೆಯಾದ ಹುಡುಗಿ ಚಂದ್ರಿಕಾಳನ್ನು, ಲಕ್ಷ್ಮಮ್ಮನವರು ತಮ್ಮ ಕಾಲಕಸದಂತೆ ಕಾಣಲು ಇಚ್ಚಿಸಿದ್ದಾಗ, ಎದೆಗುಂದದೆ ಆಕೆಯಿಂದ ಪಾರಾಗಿ ತಾನಾಯಿತು ತನ್ನ ಗಂಡನಾಯಿತು ಎಂಬಂತೆ ಸಂಸಾರದಿಂದ ಹೊರಬಂದಿದ್ದರು.


ಸರೋಜಳ ಬುದ್ಧಿವಂತಿಕೆಯಿಂದ, ಶ್ರೀಕಾಂತನ ಸೃಜನಶೀಲತೆಯಿಂದ ವ್ಯಾಪಾರ ದಿನೇದಿನೇ ವೃದ್ಧಿಯಾಗುತ್ತಿತ್ತು. ಕೆಲಸಕ್ಕೆ ಸಮಯ ಸಾಲದಾದಾಗ ಶ್ರೀಕಾಂತನ ಗೆಳೆಯ ನಾಗೇಂದ್ರನ ಹೋಟೆಲ್ ನಿಂದಲೇ ಕೆಲ ತಿಂಗಳುಗಳು ಬೆಳಗಿನ ಹಾಗೂ ಸಂಜೆಯ ಉಪಹಾರವನ್ನು ತರಿಸಿಕೊಂಡು ಕೆಲಸವನ್ನು ನಿಭಾಯಿಸುತ್ತಿದ್ದಳು.  ನಾಗೇಂದ್ರನ ಮಲತಮ್ಮ ರಂಗನಿಗೆ ಮಾಡಲು ಬರುವುದಿಲ್ಲವೆಂದು ಹಂಗಿಸುತ್ತಿದ್ದರು. ಸರೋಜಳ ಪ್ರೀತಿ ತುಂಬಿದ, ಕಾಳಜಿಯುಕ್ತ ಟ್ರೈನಿಂಗ್ ನಿಂದ ಆತನೂ ಒಬ್ಬ ಮನುಷ್ಯನೆನಿಸಿಕೊಳ್ಳಲು ಸಾಧ್ಯವಾಯಿತು. ಪಕ್ಕದ ಮನೆಯ ವತ್ಸಲಮ್ಮ ಹಾಗೂ ಆಕೆಯ ಮಗಳಿಗೂ ತನ್ನ ಬಳಿಯೇ ಕೆಲಸ ಕೊಟ್ಟಳು ಸರೋಜ. ಮಾವನ ಆರೋಗ್ಯ ವೃದ್ಧಿಯಾಗುವಂತೆ ಮಾಡಿದಳು. ಶ್ರೀಕಾಂತನ ಆರೋಗ್ಯದತ್ತ ಗಮನ ಹರಿಸಿದಳು. ಮುಂದುವರಿದ ವ್ಯಾಪಾರ ಹೊಸ ದಿಕ್ಕನ್ನೇ ಹಿಡಿಯಿತು. ಸರೋಜಳ ಮಾವನೂ ತಮ್ಮ ಕೈಲಾದಷ್ಟು ಕೆಲಸ ಮಾಡುತ್ತಿದ್ದರು. ಸರೋಜಳ ವ್ಯಾಪಾರ ವೃದ್ಧಿಸಿದ್ದು ಹೇಗೆ..?


 ಒಂದು ವರ್ಷದ ನಂತರ ಕುಮುದಮ್ಮ ಆಸ್ಪತ್ರೆಯಿಂದ ಒಲ್ಲದ ಮನಸ್ಸಿನಿಂದಲೇ ಮನೆಗೆ ಬಂದರು. ಆದರೆ, ಅಲ್ಲಿನ ಬದಲಾವಣೆ ಅವರನ್ನು ಅಚ್ಚರಿಗೊಳಿಸಿತ್ತು. ಕುಮುದಮ್ಮ ಮನೆಗೆ ಬಂದಾಗ ಅವರ ಪತಿ ಹಾಗೂ ಸರೋಜಳ ಪ್ರತಿಕ್ರಿಯೆ ಹೇಗಿತ್ತು..?? 


ನರಸಿಂಹನವರು ಹಾಗೂ ಲಕ್ಷ್ಮಮ್ಮನವರ ಬದುಕು ಯಾವ ಹಂತಕ್ಕೆ ತಲುಪಿತ್ತು..?  


ಸರೋಜ ಹಾಗೂ ಶ್ರೀಕಾಂತರ ವೈವಾಹಿಕ ಬದುಕು ದುಡಿಮೆಯಾಚೆಗೆ ಹೇಗಿತ್ತು..? ಎಲ್ಲವನ್ನೂ ತಿಳಿಯಲು ಓದಿ 'ಒಲವಿನ ಪೂಜೆ' ಕಾದಂಬರಿಯನ್ನು.


ಈ ಕಾದಂಬರಿಯ ಶೀರ್ಷಿಕೆ ಹಾಗೂ ಮುಖಪುಟವನ್ನು ಮೊದಲ ಬಾರಿಗೆ ಕಂಡಾಗ ಇದು ಪರಸ್ಪರರ ಹೊಂದಾಣಿಕೆಯ ದಾಂಪತ್ಯದ ಕತೆ ಇರಬಹುದು ಎನ್ನಿಸಿತ್ತು. ಆದರೆ, ಈ ಕಾದಂಬರಿ ಅದನ್ನೂ ಮೀರಿದ ಸಂದೇಶ ನೀಡುತ್ತದೆ.


ಕಲ್ಲು ನಾಗರ ಕಂಡಡೆ ಹಾಲನೆರೆಯೆಂಬರು

ದಿಟದ ನಾಗರ ಕಂಡಡೆ ಕೊಲ್ಲೆಂಬರಯ್ಯ

ಉಂಬ ಜಂಗಮ ಬಂದಡೆ ನಡೆಯೆಂಬರು

ಉಣ್ಣದ ಲಿಂಗಕ್ಕೆ ಬೋನವ ಹಿಡಿಯೆಂಬರಯ್ಯ

ನಮ್ಮ ಕೂಡಲಸಂಗನ ಶರಣರ ಕಂಡು 

ಉದಾಸೀನವ ಮಾಡಿದಡೆ

ಕಲ್ಲು ತಾಗಿದ ಮಿಟ್ಟೆಯಂತಪ್ಪರಯ್ಯ


ಎಂಬ ವಚನವೂ ನೆನಪಾಯಿತು. ದೇವರನ್ನು ಎಷ್ಟೇ ಬೇಡಿಕೊಂಡರೂ.. ನಾವು ಕೇಳಿಕೊಂಡರೂ ಅದಿನ್ನೂ ನಮಗೆ ಸಿಕ್ಕಿಲ್ಲವೆಂದಾಗ ದೇವರು ಒಲಿಯಲಿಲ್ಲವೆಂದು ಕಳವಳಪಡುತ್ತೇವೆ. ಆದರೆ, ದೇವರು ಮಾಡುವಂತಹಾ ಸೇವೆಯನ್ನು ಮನುಷ್ಯರಲ್ಲಿ ಅಸಹಾಯಕರಿಗೆ, ರೋಗಿಗಳಿಗೆ, ವೃದ್ಧರಿಗೆ ಮಾಡಿದರೆ ದೇವರೂ ಒಲಿಯುತ್ತಾರೆಂಬ ಸಂದೇಶ ಇಷ್ಟವಾಯಿತು. 


ಹೆಣ್ಣುಮಕ್ಕಳ ಸಬಲತೆ, ಉದ್ಯಮವನ್ನು ಕಟ್ಟಿಕೊಟ್ಟು ಸುತ್ತಮುತ್ತಲಿನವರನ್ನೂ ಉದ್ಯೋಗಸ್ಥರಾಗಿಸಿದ ಪರಿ ಇಷ್ಟವಾಯಿತು. ತನಗೆ ಕೇಡು ಮಾಡಿದವರನ್ನು ನೆನೆಯದೆ, ಅವರ ಏಳಿಗೆಗೆ ಕರುಬದೆ.. ತಮ್ಮ ಜೀವನದ ಮೇಲೆ ಮಾತ್ರ ಕೇಂದ್ರೀಕರಿಸಿದರೆ ಅದರಿಂದ ಸಿಗುವ ನೆಮ್ಮದಿಯ ಜೀವನ ಕೂಡಾ ಪ್ರಭಾವಿಸುತ್ತದೆ.


ಕೇವಲ ಹಿರಿಯರು ಮಾತ್ರ ಸರಿಯಾದ ಹಾದಿಯಲ್ಲಿ ಸಾಗುವುದಿಲ್ಲ. ಕಿರಿಯರೂ ಸಾಗುತ್ತಾರೆ. ಅದಕ್ಕೆ ಅವಕಾಶ ಕೊಡಬೇಕಷ್ಟೇ..


ಕೇವಲ ಅಂದುಕೊಳ್ಳುವುದು ಮಾತ್ರವಲ್ಲದೇ.. ಅದನ್ನು ಮಾಡಿ ತೋರಿಸಿದ್ದು ಅಷ್ಟೇ ಅಲ್ಲದೆ.. ಹಿರಿಯರು ಮಾತ್ರವೇ ವಿವೇಚನೆಯಿಂದ ಹೆಜ್ಜೆ ಇಡುತ್ತಾರೆ ಎಂಬುದಕ್ಕಿಂತಲೂ.. ಹಿರಿಯರಿಂದ ಅರಿತೋ, ಅರಿಯದೆಯೋ ತಪ್ಪಾದಾಗ ಕಿರಿಯರು ಸಹಾ ಅದನ್ನೇ ರೂಢಿಸಿಕೊಳ್ಳದೆ, ಅದನ್ನು ಮೀರಿ ಸರಿ ದಾರಿಯಲ್ಲಿ ನಡೆದ ಪರಿ ಇಷ್ಟವಾಯಿತು. ಒಲವ ಪೂಜೆ ಕೇವಲ ದಂಪತಿಗಳ ನಡುವೆ ಮಾತ್ರವಲ್ಲ.. ಸಂಸಾರದಲ್ಲಿಯೂ ಇರಬೇಕು ಎಂಬುದು ಇಲ್ಲಿನ ವಿಶೇಷ ಸಂದೇಶ. 

~ವಿಭಾ ವಿಶ್ವನಾಥ್

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ