ಪುಸ್ತಕದ ಶೀರ್ಷಿಕೆ : ಹೃದಯ ಹಾಡಿದ ರಾಗ
ಲೇಖಕರು : ಹೆಚ್. ಜಿ. ರಾಧಾದೇವಿ
ಪ್ರಕಾಶಕರು : ಶ್ರೀ ಲಕ್ಷ್ಮೀವೆಂಕಟೇಶ್ವರ ಪ್ರಕಾಶನ
ದ್ವಿತೀಯ ಮುದ್ರಣ : 2023 (ನನ್ನ ಓದಿಗೆ ಸಿಕ್ಕಿದ್ದು)
ಹೃದಯ ಹಾಡಿದ ರಾಗ ಕಾದಂಬರಿಯನ್ನು ಓದಿದಾಗ ಇಷ್ಟು ದಿನ ಓದಿದ ಹೆಚ್.ಜಿ. ರಾಧಾದೇವಿಯವರ ಕಾದಂಬರಿಗಳಿಗಿಂತ ವಿಭಿನ್ನವಾದ ಕಥಾ ಪರಿಸರವಿತ್ತು. ಇಲ್ಲಿ ಸಂಪೂರ್ಣವಾಗಿ ಕ್ರೈಸ್ತ ಪರಿವಾರದ, ಆಚರಣೆಯ ಹಾಗೂ ಅಲ್ಲಿನ ಒಂದು ಸುಂದರ ಪ್ರೇಮ ಕಥೆಯೊಂದನ್ನು ಹೇಳುತ್ತಾರೆ. ಇದುವರೆಗೂ ಭಾರತೀಯ ಸಂಸ್ಕೃತಿಯಲ್ಲಿ ಹಿಂದೂ ಸಂಸ್ಕೃತಿಯ ಕುರಿತಾದ ಕಥಾ ಪರಿಸರ ಹಾಗೂ ಅಲ್ಲಿನ ತಿನಿಸುಗಳು, ಆಹಾರಗಳನ್ನು ವರ್ಣಿಸುತ್ತಿದ್ದ ಲೇಖಕಿ ಆಸ್ಥೆಯಿಂದ ಇಲ್ಲಿಯೂ ಅಲ್ಲಿನ ಕಥಾ ಪರಿಸರವನ್ನು ಕಣ್ಣಿಗೆ ಕಟ್ಟುವಂತೆ ಕಟ್ಟಿಕೊಟ್ಟಿದ್ದಾರೆ.
ಚಾರ್ಲಿಯ ಪೂರ್ತಿ ಹೆಸರು ಚಾರ್ಲೆಸ್ ಜಾನ್ ವೆಸ್ಲಿ. ಚಾರ್ಲಿಯ ತಂದೆ ಜಾನ್ ವೆಸ್ಲಿ. ಚಾರ್ಲಿ ನೆಲೆಸಿದ್ದು ಮುಂಬೈನಲ್ಲಾದರೂ.. ಆತ ಬೆಳೆದಿದ್ದು ರಾಬರ್ಟ್ ಅವರ ತಂದೆ-ತಾಯಿ ಕ್ರಿಸ್ಟೋಫರ್ ಹಾಗೂ ಶ್ರೀಮತಿ ವೈಲೆಟ್ ಕ್ರಿಸ್ಟೋಫರ್ ಅವರ ಮಡಿಲಿನಲ್ಲಿ. ಚಾರ್ಲಿಯ ತಂದೆ ಕ್ರೈಸ್ತರಾದರೂ.. ತಾಯಿ ವಿಶಾಲು ಬ್ರಾಹ್ಮಣರ ಹುಡುಗಿ. ಅವರಿಬ್ಬರ ಪರಿಚಯವಾಗಿ ವಿವಾಹವಾದದ್ದು ಒಂದು ವಿಚಿತ್ರ ಸನ್ನಿವೇಶದಲ್ಲಿ.
ಚಿಕ್ಕವಯಸ್ಸಿಗೆ ತಂದೆಯನ್ನು ಕಳೆದುಕೊಂಡ ವಿಶಾಲುವಿಗೆ ತಾಯಿ ಲಕ್ಷ್ಮಮ್ಮನೇ ಸರ್ವಸ್ವ. ಲಕ್ಷ್ಮಮ್ಮ ಮನೆಯ ಮುಂದೆ ಅಂಗಡಿ ಇಟ್ಟುಕೊಂಡು ತಿಂಡಿಗಳು ಹಾಗೂ ಇಡ್ಲಿ ಮಾಡಿ ಮನೆ ಮನೆಗೆ ಹೋಗಿ ಮಾರುತ್ತಿದ್ದಳು. ಇದು ಆದಾಯಕ್ಕೆ ಅನುಕೂಲವಾದರೂ.. ಮಗಳ ಮದುವೆಗೆ ತೊಡಕಾಗಿತ್ತು. ಬೋಂಡಾ, ಚಕ್ಲಿ, ಮನೆ ಮನೆಗೆ ಇಡ್ಲಿ ಮಾರುವಾಕೆಯ ಮಗಳನ್ನು ಯಾರು ಮದುವೆಯಾಗುತ್ತಾರೆಂದು ಮೂಗುಮುರಿದವರೇ ಹೆಚ್ಚು. ಎರಡನೇ ವರ, ಅಂಗವಿಕಲ, ಕಳಪೆ ವರಗಳನ್ನು ಲಕ್ಷ್ಮಮ್ಮನವರು ಒಪ್ಪಲಿಲ್ಲ. ಕೊನೆಗೆ ವಿಶಾಲುವೇ ಧೈರ್ಯ ಮಾಡಿ ಮುಂದಕ್ಕೆ ಓದಿ ಗ್ರಾಜುಯೇಟ್ ಆಗುತ್ತೇನೆಂದಳು. ಅದಾದ ನಂತರ ಅವಳ ಓದಿಗೆ ತಕ್ಕ ಕೆಲಸ ಸಿಗಲಿಲ್ಲ.
ಇದೇ ಕೊರಗನ್ನು ಮನಸ್ಸಿಗೆ ಹಚ್ಚಿಕೊಂಡು ಲಕ್ಷ್ಮಮ್ಮ ಕಾಯಿಲೆ ಬಿದ್ದು ಆಸ್ಪತ್ರೆ ಸೇರಿದರು. ಸರ್ಕಾರಿ ಆಸ್ಪತ್ರೆಯಲ್ಲಿ ವಾಸಿಯಾಗದೆ ಇದ್ದುದರಿಂದ ಮೆಥೆಡಿಸ್ಟ್ ಮಷೀನರಿ ಆಸ್ಪತ್ರೆಗೆ ತಾಯಿಯನ್ನು ಸೇರಿಸಿದಳು. ಅಲ್ಲಿ ನರ್ಸ್ ಆಗಿದ್ದ ವೈಲೆಟ್ ವಿಶಾಲುವಿನ ಆಪ್ತ ಗೆಳತಿಯಾದಳು. ಈಕೆಯ ಸಮಸ್ಯೆಗೆ ಪರಿಹಾರದಂತೆ ಅದೇ ಆಸ್ಪತ್ರೆಯಲ್ಲಿ ಖಾಲಿ ಇದ್ದ ರಿಸೆಪ್ಷನಿಸ್ಟ್ ಹುದ್ದೆಗೆ ಸೇರುವಂತೆ ಸೂಚಿಸಿದಳು. ಆಕೆಯ ಗಂಡ ಕ್ರಿಸ್ಟೋಫರ್ ಅದೇ ಆಸ್ಪತ್ರೆಯಲ್ಲಿ ಸೂಪರಿಡೆಂಟ್ ಆಗಿದ್ದವರು. ಆ ದಂಪತಿಗಳ ದೆಸೆಯಿಂದ ವಿಶಾಲುವಿಗೆ ಆಸ್ಪತ್ರೆಯಲ್ಲಿ ಕೆಲಸ ಸಿಕ್ಕಿತು.
ಆಗಾಗ ಆಸ್ಪತ್ರೆಗೆ ಆ ಸಂಸ್ಥೆಯ ಡೈರೆಕ್ಟರ್ ಆಗಿದ್ದ ಜಾನ್ ವೆಸ್ಲಿ ಭೇಟಿ ನೀಡುತ್ತಿದ್ದರು ಆ ಸಂಧರ್ಭದಲ್ಲಿ ವಿಶಾಲು ಅವರ ಸಹಾಯಕ್ಕೆ ಹೋಗಬೇಕಾದ ಸಂದರ್ಭ ಬರುತ್ತಿತ್ತು. ಅವರಿಗೆ ವಿಶಾಲುವಿನ ರೂಪ, ವಿನಯ, ಕೆಲಸದ ಅಚ್ಚುಕಟ್ಟು, ಜಾಣ್ಮೆ ಎಲ್ಲವೂ ಹಿಡಿಸಿತು. ನಂತರ ಪರಿಚಯ ಸ್ನೇಹಕ್ಕೆ ತಿರುಗಿ ಅವರು ತಮ್ಮ ವೈಯಕ್ತಿಕ ವಿಚಾರವನ್ನು ಬಿಚ್ಚಿಟ್ಟರು. ತನ್ನ ಮೊದಲ ಪತ್ನಿ ಆಗಿದ್ದ ನೋರಾ ತಾನಿಲ್ಲದ ಸಂದರ್ಭದಲ್ಲಿ ಸ್ವಚ್ಛಂದವಾಗಿ ವಿಹರಿಸುತ್ತಿದ್ದದ್ದು ಗೊತ್ತಾಗಿ ಮನಶ್ಶಾಂತಿ ಬೇಕೆಂದು ಆಕೆಗೆ ವಿಚ್ಛೇದನ ನೀಡಿ ಭಾರತದಲ್ಲಿಯೇ ನೆಲೆಸಿದ್ದರು. ಅದಾಗಿ 16 ವರ್ಷಗಳೇ ಕಳೆದಿದ್ದವು. ಈಗ ವಿಶಾಲುವಿನ ಮೇಲೆ ಮನಸ್ಸಾಗಿತ್ತು. ಲಕ್ಷ್ಮಮ್ಮನವರು ಜಾತಿ-ಮತವನ್ನು ಗಣನೆಗೆ ತೆಗೆದುಕೊಳ್ಳದೆ, ಈ ಮದುವೆಗೆ ಒಪ್ಪಿಗೆಯಿತ್ತರು. ವಿವಾಹದ ನಂತರ ವಿಶಾಲು ಕೆಲಸ ಬಿಟ್ಟು ಅವರ ಜೊತೆ ಬೊಂಬಾಯಿಗೆ ಹೊರಟಳು. ಸೊಗಸಾದ ಬಂಗಲೆ, ಕೈಗೊಬ್ಬ-ಕಾಲಿಗೊಬ್ಬ ಆಳು, ಮನೆಯ ತುಂಬಾ ಸುಖ ಸಾಧನಗಳಿದ್ದರೂ ಆಕೆಗೆ ಆ ವಾತಾವರಣ ಹಿಡಿಸಲಿಲ್ಲ. ಕುರಿಯನ್ ಮಾಡಿದ ವೆಜಿಟೇರಿಯನ್ ಅಡುಗೆಯನ್ನೂ ತಿನ್ನುತ್ತಿರಲಿಲ್ಲ. ದಿನವೂ ಮಧುಪಾನ, ಪಾರ್ಟಿಗಳಿಂದ ಮತ್ತರಾಗುತ್ತಿದ್ದ ಜಾನ್ ವೆಸ್ಲಿ ತಾನು ನೋಡಿದ ವ್ಯಕ್ತಿಯಲ್ಲವೆಂದು ದಿನೇದಿನೇ ಕೊರಗುತ್ತಾ ಕೃಶಳಾದಳು. ಗರ್ಭಿಣಿಯಾಗಿದ್ದವಳು ತನ್ನೂರಿಗೆ ಬಂದು ವೈಲೆಟ್ ರವರ ಮನೆಯಲ್ಲಿಯೇ ಇದ್ದು, ಚಾರ್ಲಿಗೆ ಜನ್ಮ ನೀಡಿ ತೀರಿಕೊಂಡಳು. ಎಳೆಯ ಮಗುವನ್ನು ಸಾಕಲಾಗದ ಜಾನ್ ವೆಸ್ಲಿ ಅವರು ಈ ದಂಪತಿಗಳ ಮನೆಯಲ್ಲಿಯೇ ತಮ್ಮ ಮಗನನ್ನು 16 ವರ್ಷಗಳವರೆಗೂ ಬಿಟ್ಟರು.
ಅದಾದ ನಂತರ ತಮ್ಮ ಮಗ ಮತ್ತೆ ಅವರತ್ತ ಆಕರ್ಷಿತನಾಗಬಾರದೆಂದು ಈ ದಂಪತಿಗಳಿಗೂ ಚಾರ್ಲಿಗೂ ನಡುವಿದ್ದ ಕೊಂಡಿಯನ್ನು ಇಬ್ಬರಿಗೂ ಅರಿವಿಲ್ಲದಂತೆ ಕಳಚಿದರು ವೆಸ್ಲಿ. ಸತತ ಮೂರು ವರ್ಷದಿಂದ ಒತ್ತಾಯಿಸುತ್ತಿದ್ದ ರಾಬರ್ಟ್ ನ ಪ್ರೀತಿಯ ಕರೆಗೆ ಓಗೊಟ್ಟು ಈಗ ಚಾರ್ಲಿ ಮತ್ತೆ ಭಾರತಕ್ಕೆ ಬಂದಿದ್ದ. ಆಗಿನ ಚಾರ್ಲಿಗೂ.. ಈಗಿನ ಚಾರ್ಲಿಗೂ ಬಹಳ ವ್ಯತ್ಯಾಸವಿತ್ತು. ದೊಡ್ಡ ಮನೆ, ಸೊಗಸಾದ ತೋಟ, ಮನೆ ತುಂಬಾ ಆಳುಗಳು, ಜೊತೆಗೆ ಚಾರ್ಲಿಗೆ ಖಾಸಗಿ ಆಳು ಪೀಟರ್, ದೇಶ-ವಿದೇಶಗಳಲ್ಲಿ ಕಲಿತು ಬಂದ ಪದವೀಧರ ಕೋಟ್ಯಾಧೀಶನಾಗಿದ್ದ ಚಾರ್ಲಿ ಬದಲಾಯಿಸಿದ. ಒಂದು ಬಗೆಯ ದರ್ಪ, ಅಹಂಕಾರದಲ್ಲಿಯೇ ಸಭ್ಯತೆಗಾಗಿ ಹಾಗೂ ಶ್ರೀಮಂತ ಪ್ರದರ್ಶನಕ್ಕಾಗಿ ಅತಿಥಿಸತ್ಕಾರ ನಡೆಸಿದ್ದ. ಕ್ರಿಸ್ಟೋಫರ್ ದಂಪತಿಗಳ ಮೇಲೆ ಹಿಂದಿನ ಆತ್ಮೀಯತೆ ಇರಲಿಲ್ಲ.
ಮೂರು ವರ್ಷಗಳ ನಂತರ ಚಾರ್ಲಿ ಸರಿಯಾಗಿ ಕ್ರಿಸ್ಮಸ್ ರ‌್ಯಾಲಿ ಬಂದಿದ್ದ. ರಾಬರ್ಟ್ ನನ್ನು ಮದುವೆಯಾಗುವ ಹುಡುಗಿ ಮರ್ಸಿಯ ಕುರಿತು ಕೂಡ ತಿಳಿಯಿತು. ಆಕೆಯೂ ರಾಬರ್ಟ್ ಗೆ ಬೆನ್ನೆಲುಬಾಗಿ ನಿಂತು ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಸಹಾಯ ಮಾಡುತ್ತಿದ್ದಳು.
ಚಾರ್ಲಿಗೆ ಸಹಾಯಕನಾಗಿ ಪೀಟರ್ ಇದ್ದನಾದರೂ.. ಅಂಥೋನಿ ಬೇರೆ ಕೆಲಸಕ್ಕೆ ಹಾಗೂ ಥಾಮಸ್ ಅಡುಗೆಗೆ ನೇಮಕವಾಗಿದ್ದ. ಈ ಸಮಯದಲ್ಲಿ ಆತನ ಕುರಿತು ತಿಳಿದಿದ್ದ ಇತರ ಶ್ರೀಮಂತ ಕುಟುಂಬದ ಕನ್ಯಾಪಿತೃಗಳು ಆತನನ್ನು ಭೇಟಿಯಾಗಲು ಕಾಯುತ್ತಿದ್ದರು.
ಬಂಗಾಳದ ಪ್ರಸಿದ್ಧ ಶ್ರೀಮಂತರು ಆಗಿದ್ದ ಪ್ರೊಫೆಸರ್ ಸ್ವೀಫನ್ ಹೆನ್ರಿ ಹಾಗೂ ಶ್ರೀಮತಿ ಹೆನ್ರಿ ಹಾಗೂ ಅವರ ಮಗಳು ಸ್ಟೆಲ್ಲಾ ಪರಿಚಿತವಾದರು. ಆಕೆ ಚಾರ್ಲಿಯ ಕೂಗಿಗೆ ಸ್ಯಾಲಿ ಆದಳು.
ಪಂಜಾಬಿನ ಹೆನ್ರಿಕ್ ವ್ಯಾನ್ ರಿಜಿನ್ ಸ್ಯಾಂಸನ್ ಹಾಗೂ ಅವರ ಪತ್ನಿ ಶ್ರೀಮತಿ ಸ್ಯಾಂ ಅವರು ಪರಿಚಿತವಾದರು ಪಂಜಾಬಿನಲ್ಲಿ ಅವರದ್ದೇ ಆದ ಎಜುಕೇಶನ್ ಸಂಸ್ಥೆಯೂ ಇತ್ತು. ಎಂ.ಬಿ.ಬಿ.ಎಸ್ ಓದುತ್ತಿದ್ದ ತನ್ನ ಮಗಳು ವಿಲ್ಮಾಳನ್ನು ಕೂಡಾ ಪರಿಚಯ ಮಾಡಿಸಿದರು. ಆಕೆ ಚಾರ್ಲಿಗೆ ವಿನ್ನಿ ಆದಳು. ಅವರ ಕಲಾಸಕ್ತಿ ಚಾರ್ಲಿಯ ಮನಸ್ಸೆಳೆಯಿತು.
ಆದರೆ, ಆ ಇಬ್ಬರು ಶ್ರೀಮಂತ ಕನ್ಯೆಯರಿಗಿಂತ ಆತನ ಮನಸೆಳೆದಿದ್ದು ಜೂಲಿ. ಮೊದಲಿಗೆ ಮುಖವೇ ನೋಡದೆ, ಇಂಪಾದ ಕಂಠದ ಗಾಯನಕ್ಕೆ ಆಕರ್ಷಿತನಾಗಿದ್ದ. ನಂತರ, ಆಕೆ ನಟಿಸಿದ ನಾಟಕದಲ್ಲಿ ದೇವತೆಯ ವೇಷದಲ್ಲಿ ಮನಸ್ಸಿಗಿಳಿದಿದ್ದಳು. ಅಂಥೋನಿಯ ಪರಿಚಯದ ಕುಟುಂಬದ ಹೆಣ್ಣು ಮಗಳು. ಮರ್ಸಿಯ ವಿದ್ಯಾರ್ಥಿನಿ. ಸ್ವಾಭಿಮಾನವುಳ್ಳ ಹೆಣ್ಣು ಜೂಲಿ ಚಾರ್ಲಿಯ ಶ್ರೀಮಂತಿಕೆಗೆ ಮರುಳಾಗಲಿಲ್ಲ. ಆದರೆ, ಸಂದರ್ಭಗಳು ಆಕೆ ಆತನಿಂದ ಎಷ್ಟೇ ದೂರ ಉಳಿಯಬೇಕೆಂದರೂ ಅದಕ್ಕೆ ಅವಕಾಶ ನೀಡಲಿಲ್ಲ. ಕ್ರಿಸ್ಮಸ್ ಕಾರ್ಯಕ್ರಮದ ಕೊನೆಯ ದಿನ ಸಿಂಡ್ರೆಲಾಳ ಕಥೆಯ ನಾಟಕದಲ್ಲಿ ರಾಜಕುಮಾರನಾಗಿ ಚಾರ್ಲಿ ಅಭಿನಯಿಸಿದರೆ, ಜೂಲಿ ಸಿಂಡ್ರೆಲಾ ಆದಳು. ಇದು ನಾಟಕಕ್ಕಷ್ಟೇ ಸೀಮಿತವಾಯಿತೇ..??
ಜೂಲಿಯ ತಾಯಿ ಚಾರ್ಲಿಯ ಜೊತೆ ನಾಟಕದಲ್ಲಿ ಅವಳನ್ನು ನೋಡಿದಾಗ ಆಕೆಯನ್ನು ದಂಡಿಸಿದ್ದೇಕೆ..?? ಸಂತೋಷಮ್ಮನ ಆ ಪ್ರತಿಕ್ರಿಯೆಗೆ ಕಾರಣವೇನು..?? ಚಾರ್ಲಿಯ ಶ್ರೀಮಂತಿಕೆಗೆ ಜೊತೆಯಾದವರು ಯಾರು..?? ಆತನ ಮನಸ್ಸಿನಲ್ಲಿಳಿಯಲು ಸ್ಯಾಲಿ ಹಾಗೂ ವಿನ್ನಿಯ ನಡೆಗಳೇನು..?? ಹೃದಯ ಹಾಡಿದ ರಾಗಕ್ಕೆ ಮೇಳವಾದವರು ಯಾರು.. ಎಲ್ಲವನ್ನೂ ತಿಳಿಯಲು ಓದಿ 'ಹೃದಯ ಹಾಡಿದ ರಾಗ'.
ಇದರಲ್ಲಿ ಹೆಚ್ಚು ಸೆಳೆದದ್ದು ಜೂಲಿಯ ಸ್ವಾಭಿಮಾನ ಹಾಗೂ ಹೃದಯಗಳ ನಡುವೆ ಬೆಳೆದ ನಿಷ್ಕಲ್ಮಶವಾದ ಪ್ರೇಮ. ಕ್ರಿಸ್ಟೋಫರ್ ಹಾಗೂ ವೈಲೆಟ್ ಚಾರ್ಲಿಯನ್ನು ಸ್ವಂತ ಮಗನಂತೆಯೇ ಸಾಕಿದ ಅಪ್ರತಿಮ ವಾತ್ಸಲ್ಯ. ವಿಭಿನ್ನ ಕಥಾವಸ್ತುವಿನ ಓದು.
~ವಿಭಾ ವಿಶ್ವನಾಥ್
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ