ಪುಸ್ತಕದ ಶೀರ್ಷಿಕೆ : ತಾರಾಬಲ
ಲೇಖಕರು : ಪ್ರೇಮಾ ಭಟ್
ಪ್ರಕಾಶಕರು : ಶ್ರೀ ಪ್ರೇಮಸಾಯಿ ಪ್ರಕಾಶನ
ಪ್ರಥಮ ಮುದ್ರಣ : 1978
ಪುಟಗಳು : 154
ಕೆಲವರು ಮೊದಮೊದಲಿಗೆ ಜ್ಯೋತಿಷ್ಯ, ಜಾತಕ ಹಾಗೂ ತಾರಾಬಲವನ್ನು ನಂಬದೇ.. ನಂತರ ಯಾವುದಾದರೂ ಒಂದು ಪ್ರಸಂಗ ಅವರ ಜೀವನದಲ್ಲಿ ಹೊಸ ಹೊಳವು ತಂದಾಗ ಅಥವಾ ಸಕಾರಾತ್ಮಕವಾಗಿಯೋ.. ನಕಾರಾತ್ಮಕವಾಗಿಯೋ ಪರಿಣಾಮ ಬೀರಿದಾಗ ಅದು ತಾಳೆಯಾಗಿ ನಂಬಲು ತೊಡಗುತ್ತಾರೆ. ನಂಬಿಕೆ ಹಾಗೂ ವಾಸ್ತವದ ನಡುವೆ ಅವರವರ ಬದುಕು ಸಾಗುತ್ತಾ ಹೋಗುವ ಕಥೆಯನ್ನು ಲೇಖಕಿ ಪ್ರೇಮಾ ಭಟ್ ಅವರು ಸೊಗಸಾಗಿ ಹೆಣೆದಿದ್ದಾರೆ.
ಮೊದಮೊದಲಿಗೆ ಜ್ಯೋತಿಷ್ಯ ಜಾತಕ, ತಾರಾಬಲವನ್ನು ಅಷ್ಟು ನಂಬದ ಕೃಷ್ಣಮೂರ್ತಿ ತನ್ನ ಮೊದಲ ಮಗಳು ಪಂಕಜಾಕ್ಷಿಗೆ ಯಾವುದನ್ನೂ ಪರಿಶೀಲಿಸದೆ ಅನಂತಮೂರ್ತಿಯೊಡನೆ ಮದುವೆ ಮಾಡಿಕೊಡುತ್ತಾನೆ. ನಂತರ ಯಾವುದೋ ಒಂದು ಘಟನೆ ಅವನ ಜೀವನದಲ್ಲಿ ತಾರಾಬಲ ಹಾಗೂ ಜ್ಯೋತಿಷ್ಯವನ್ನು ನಂಬುವಂತೆ ಮಾಡುತ್ತದೆ. ಅದಾದ ನಂತರ ಯಾರಾದರೂ ಮನೆಗೆ ಬಂದ ಸಂದರ್ಭ ಅಥವಾ ಯಾವುದಾದರೂ ಒಳ್ಳೆಯ ಕೆಲಸಕ್ಕೆ ಹೋಗುವಾಗ ಒಳ್ಳೆಯ ಘಳಿಗೆ ನೋಡಿ, ನಂಬಿಯೇ ಕೆಲಸ ಮಾಡುವುದು ಹಾಗೂ ಬಂದವರ ಸಂಬಂಧವನ್ನು ಒಪ್ಪಿಕೊಳ್ಳುವುದು ಮಾಡುವಷ್ಟು ಕೃಷ್ಣಮೂರ್ತಿ ಬದಲಾಗುತ್ತಾನೆ.
ಪಂಕಜಾಕ್ಷಿ ರೋಗಿಷ್ಟ ಗಂಡನೊಂದಿಗೆ ನರಳಾಡುವುದನ್ನು ಕಂಡು ಪತ್ನಿ ನಳಿನಾಕ್ಷಿಯಲ್ಲಿ ಪೇಚಾಡುತ್ತಿದ್ದ. ಆಕೆಗೆ ಮದುವೆ ಮಾಡಿಕೊಟ್ಟಾಗ ತಮ್ಮ ಮನೆಯಲ್ಲಿದ್ದ ಬಡತನದಿಂದ ಅವಳ ಬದುಕಲ್ಲಿ ಮತ್ತೇನೂ ಸಹಾಯ ಮಾಡಲಾಗದ ಪರಿಸ್ಥಿತಿಯಿತ್ತು.
ಆದರೆ, ಎರಡನೆಯ ಮಗಳು ಪದ್ಮಿನಿಯನ್ನು ಶ್ರೀಪತಿಗೆ ಹಾಗೂ ಮತ್ತೊಬ್ಬ ಮಗಳು ಕೃಷ್ಣವೇಣಿಯನ್ನು ಶೇಷಗಿರಿಗೂ ಮದುವೆ ಮಾಡಿಕೊಡುವಾಗ ತಾರಾಬಲವನ್ನು ನೋಡಿಯೇ ಮದುವೆ ಮಾಡಿಕೊಟ್ಟಿದ್ದ. ಅವರಿಬ್ಬರೂ ಸುಖವಾಗಿದ್ದರು. ಮಗ ಶಿವರಾಮ ಓದದಿದ್ದರೂ ಚುರುಕಾಗಿದ್ದ ಹಾಗೂ ಗುಣವಂತ. ಆತ ಬಟ್ಟೆ ಅಂಗಡಿಯ ವ್ಯಾಪಾರವನ್ನು ಶುರು ಮಾಡಿದ್ದ. ಆತ ಬಟ್ಟೆ ಅಂಗಡಿಯ ವ್ಯಾಪಾರದಲ್ಲಿ ತೊಡಗಿದರೆ ಆತನಿಗೆ ಕೈ ಹತ್ತುವುದಿಲ್ಲವೆಂದು ಹೇಳಿದ್ದರೂ.. ಆತ ಅದಾವುದನ್ನು ಲೆಕ್ಕಿಸದೆ ಕೇವಲ ತನ್ನ ಶಕ್ತಿಯನ್ನು ನಂಬಿ ವ್ಯಾಪಾರ ಶುರು ಮಾಡಿದ್ದ. ಅಂಗಡಿ ಲಾಭ ಗಳಿಸುತ್ತಾ ಮನೆಯನ್ನೂ ಆರ್ಥಿಕವಾಗಿ ಸಬಲವಾಗುವಂತೆ ಮಾಡಿತ್ತು ಕೃಷ್ಣಮೂರ್ತಿಗೆ ಮನಸ್ಸಿನಲ್ಲಿ ಅಳುಕು ಇದ್ದೇ ಇತ್ತು. ಎಷ್ಟೇ ಹೇಳಿದರು ಮಗ ಶಾಂತಿ ಮಾಡಿಸಲು ಒಪ್ಪಲಾರ ಎಂದು ಸುಮ್ಮನಾಗಿದ್ದ.
ತವರಿನ ಆರ್ಥಿಕ ಪರಿಸ್ಥಿತಿ ಬದಲಾಯಿಸಿದ ಮೇಲೆ ಹೆರಿಗೆಂದು ಬಂದ ಪಂಕಜಾಕ್ಷಿಯನ್ನು ಕಂಡು ಮನೆಯವರು ಆಕೆಗೊಂದು ನೆಲೆ ಮಾಡಿ ಕೊಡಬೇಕೆಂದು ತೀರ್ಮಾನಿಸಿ ಪಂಕಜಾಕ್ಷಿಯ ಗಂಡ ಅನಂತಮೂರ್ತಿಯ ರೋಗವನ್ನು ಸರಿ ಮಾಡಿದ್ದರು. ಅಷ್ಟು ಮಾಡುವಷ್ಟರೊಳಗೆ ಮನೆಯವರೆಲ್ಲರೂ ಹೈರಾಣಾಗಿದ್ದರು. ಅದಾವುದನ್ನೂ ಗಣನೆಗೆ ತೆಗೆದುಕೊಳ್ಳದೆ ದರ್ಪದಿಂದ ವರ್ತಿಸಿ ಹೆಂಡತಿ, ಮಕ್ಕಳನ್ನು ತೊರೆದು ನಡೆದಿದ್ದ ಅನಂತಮೂರ್ತಿ. ಶಿವರಾಮನೇ ಅಕ್ಕ ಹಾಗೂ ಮಕ್ಕಳ ಜವಾಬ್ದಾರಿ ತೆಗೆದುಕೊಂಡಿದ್ದ. ಆಕೆಗೆ ಪ್ರಹ್ಲಾದ ಹುಟ್ಟಿದ ಸಂಧರ್ಭದಲ್ಲಿಯೇ ಕೃಷ್ಣವೇಣಿಗೂ ಮೂರನೆಯ ಹೆರಿಗೆ. ಕೃಷ್ಣವೇಣಿಗೆ ಅದಾಗಲೇ ಇಬ್ಬರು ಗಂಡುಮಕ್ಕಳಿದ್ದರು. ಹೆಣ್ಣುಮಗುವಿಗಾಗಿ ಆಸೆ ಪಡುತ್ತಿದ್ದಳು.
ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಪೂರ್ಣಿಮಾಳನ್ನು ಇಷ್ಟಪಟ್ಟಿದ್ದ ಶಿವರಾಮ. ಪಂಕಜಾಕ್ಷಿ ನಳಿನಾಕ್ಷಿಯರಿಗೂ ಆಕೆ ಇಷ್ಟವಾಗಿದ್ದಳು.
ಕೃಷ್ಣವೇಣಿ ತವರಿಗೆ ಬಂದ ಸಂದರ್ಭದಲ್ಲಿ ಆಕೆ ಬಂದ ಸಮಯ ಸರಿಯಾಗಿಲ್ಲವೆಂದು, ಮಗು ಹುಟ್ಟಿದ ಸಮಯವೂ ಸರಿಯಿಲ್ಲವೆಂದು ಹೇಳಿದ್ದ ಕೃಷ್ಣಮೂರ್ತಿಯ ಮಾತನ್ನು ಯಾರು ಲೆಕ್ಕಿಸಿರಲಿಲ್ಲವಾದರೂ.. ಕೃಷ್ಣವೇಣಿ ಸತ್ತಿದ್ದಳು. ಪುಟ್ಟ ಮಗು 'ನಂದಾ' ಪಂಕಜಾಕ್ಷಿಯ ಪುಟ್ಟ ಮಗಳು ಶ್ರೀಮತಿಗಂತೂ ಬಹಳ ಅಚ್ಚುಮೆಚ್ಚು. ಹೆಂಡತಿ ಸತ್ತ ನಂತರ ಮಗುವನ್ನು ನಿರ್ಲಕ್ಷಿಸಿದ್ದ ಶೇಷಗಿರಿ ಮುಂದೊಂದು ದಿನ ತಾಯಿಯ ಆಸೆಯಂತೆ ಮಗುವನ್ನು ಕರೆದುಕೊಂಡು ಹೊರಟಾಗ, ಮಗುವನ್ನು ತೀರಾ ಹಚ್ಚಿಕೊಂಡಿದ್ದ ಶ್ರೀಮತಿಗೆ ವಿಪರೀತ ಜ್ವರ ಬಂದಿತ್ತು. ಇದು ಕಡಿಮೆಯಾಗುತ್ತದೆಂದು ಮನೆಯವರೆಲ್ಲರೂ ಭಾವಿಸಿದರು. ಕಳುಹಿಸಿದ ನಂದಾಳನ್ನು ಕರೆತಂದರೆ ಆ ಮಗು ಇಲ್ಲೇ ಉಳಿದರೆ ಎಂಬ ಆಲೋಚನೆಯಲ್ಲಿ ಒಂದೆರಡು ದಿನ ಕಳೆಯುವಷ್ಟರಲ್ಲಿಯೇ ಶ್ರೀಮತಿ ಸಾವನ್ನಪ್ಪಿದ್ದಳು.
ಶಿವರಾಮನಿಗೆ ಅಂಗಡಿಯ ವಿಚಾರದಲ್ಲಿ ಅಷ್ಟು ಬಲವಿಲ್ಲವೆಂದಿದ್ದ ಅಪ್ಪನ ಜ್ಯೋತಿಷ್ಯದ ಮಾತನ್ನು ಲೆಕ್ಕಿಸದೇ ಅಂಗಡಿ ಮಾಡಿದ್ದವನು ಮನೆಯಲ್ಲಿನ ದುಃಖದ ಸಂದರ್ಭದಲ್ಲಿ ಅತ್ತ ನಿರ್ಲಕ್ಷಿಸಿದ್ದ. ಇತ್ತ ಗಮನ ಹರಿಸಿದಾಗ ಅಂಗಡಿಗೆ ನಷ್ಟವಾಗಿತ್ತು. ಪೂರ್ಣಿಮಾಳ ಅರಿವಿಗೂ ಬಾರದಂತೆ ಉಳಿದ ಕೆಲಸದವರು ತಮ್ಮ ಸ್ವಾರ್ಥವನ್ನು ನೋಡಿಕೊಂಡು ಅಂಗಡಿಗೆ ನಷ್ಟ ಉಂಟು ಮಾಡಿಬಿಟ್ಟಿದ್ದರು.
ಪೂರ್ಣಿಮಾಳಿಗೆ ತಾಯಿ ಕಮಲ ಇದ್ದರೂ.. ತಂದೆ ಚಿಕ್ಕವಯಸ್ಸಿನಲ್ಲಿಯೇ ತೀರಿ ಹೋಗಿದ್ದರು. ಆಕೆಯ ಸೋದರಮಾವ ಹಾಗೂ ಸೋದರತ್ತೆ ಸ್ವಂತ ಮಗಳಂತೆ ಬೆಳೆಸುತ್ತಿದ್ದರು. ಆಕೆ ತನ್ನ ಸೋದರಮಾವನ ಕಷ್ಟ ನೋಡಲಾಗದೆ, ಮನೆಗೆ ಸಹಾಯವಾಗಲೆಂದೇ ದುಡಿಯಲು ಬರುತ್ತಿದ್ದದ್ದು. ಆಕೆಯ ತಾಯಿ ಕಮಲ ಈಗ ತನ್ನ ಪತಿಯ ಸ್ನೇಹಿತ ಅನಂತಮೂರ್ತಿಯ ಜೊತೆ ಹೆಚ್ಚು ಸಲುಗೆಯಿಂದಿರುವುದು ಪೂರ್ಣಿಮಾಳಿಗೆ ಹಿಡಿಸುತ್ತಿರಲಿಲ್ಲ. ಮಗಳ ವಿವಾಹ ನಿಶ್ಚಯಿಸಲು ಸಹಾಯಕನಾಗಿದ್ದಾನೆಂದೇ ಆತನೊಂದಿಗೆ ಆತ್ಮೀಯವಾಗಿರುವುದು ಎನ್ನುವುದನ್ನು ಆಕೆ ನಂಬಲು ಸಿದ್ಧವಿರಲಿಲ್ಲ.
ಅದೇ ಸಮಯಕ್ಕೆ ಶಿವರಾಮನ ಮನೆಯವರು ಆಕೆಯ ಸೋದರಮಾವನನ್ನು ಮಾತುಕತೆಗೆ ಆಹ್ವಾನಿಸಿದಾಗ ಅವರು ಬಿಡುವಿನ ದಿನದಲ್ಲಿ ಅವರ ಮನೆಗೆ ಭೇಟಿ ನೀಡಿದರು ಬಂದ ದಿನ,ಸಮಯ ಸರಿಯಿಲ್ಲವೆಂದು ಆ ಸಂಬಂಧ ಕೂಡಿ ಬರದು ಎಂದಿದ್ದರು ಕೃಷ್ಣಮೂರ್ತಿಯವರು. ಕೃಷ್ಣಮೂರ್ತಿಯವರ ಮನಸ್ಸನ್ನು, ನಂಬಿಕೆಯನ್ನು ಅರಿತಿದ್ದ ಶಿವರಾಮ ಮತ್ತೆ ತನ್ನ ತಂದೆಗೆ ಘಾಸಿಯಾಗಬಾರದು ಸುಮ್ಮನಾಗಿದ್ದ. ಅವಿವಾಹಿತನಾಗಿಯೇ ಉಳಿದಿದ್ದ ಆತನ ಮನಸ್ಸಿನ ತುಂಬಾ ಪೂರ್ಣಿಮಾಳೇ ತುಂಬಿಕೊಂಡಿದ್ದಳು. ಬೇರಾವ ಹುಡುಗಿಗೂ ಅಲ್ಲಿ ಜಾಗವಿರಲಿಲ್ಲ.
ಬಹಳ ಒಳ್ಳೆಯ ಜಾತಕವೆಂದು ಮದುವೆ ಮಾಡಿಕೊಟ್ಟಿದ್ದ ಮಗಳು ಮೀನಾಕ್ಷಿಯನ್ನು ಹೆಚ್ಚು ವಿಚಾರಿಸದೆ ವಿವಾಹ ಮಾಡಿಕೊಟ್ಟಿದ್ದರು ಕೃಷ್ಣಮೂರ್ತಿಯವರು. ಆದರೆ, ಆತನಿಗೆ ಎಲ್ಲ ರೀತಿಯ ದುಶ್ಚಟಗಳು ಇದ್ದವು. ಅದನ್ನು ತಿಳಿದ ಪೂರ್ಣಿಮಾ ತನ್ನ ಬದುಕಿನ ದೊಡ್ಡ ನಿರ್ಧಾರ ಮಾಡಿದ್ದಳು. ಹಾಗೆಂದು ಆಕೆ ಅಕ್ಕನಂತೆ ಮತ್ತೆ ತವರಿಗೆ ಬಂದು ಅಲ್ಲಿ ಉಳಿಯಲಿಲ್ಲ. ಬದಲಾಗಿ ಆಕೆ ತೆಗೆದುಕೊಂಡ ನಿರ್ಧಾರವೇನು..??
ಪೂರ್ಣಿಮಾಳ ತಾಯಿ ಸಲುಗೆಯಿಂದಿದ್ದ ಅನಂತಮೂರ್ತಿ ಹಾಗೂ ಪಂಕಜಳ ಗಂಡ ಅನಂತಮೂರ್ತಿ ಇಬ್ಬರೂ ಒಂದೇ ವ್ಯಕ್ತಿಯಾ ಅಥವಾ ಇಬ್ಬರು ಬೇರೆ ಬೇರೆಯಾ...?
ಪೂರ್ಣಿಮಾಳ ವಿವಾಹ ಯಾರೊಂದಿಗಾಯಿತು.. ಶಿವರಾಮನ ಮುಂದಿನ ಬದುಕು ಹೇಗಿತ್ತು..??
ಪೂರ್ಣಿಮಾಳ ತಾಯಿ ತನ್ನ ಬದುಕಿನ ಸತ್ಯವೊಂದನ್ನು ತಿಳಿಸಿದಾಗ ಪೂರ್ಣಿಮಾ ಆಘಾತಗೊಂಡದ್ದೇಕೆ..?? ತನ್ನ ಮಗು ಸತ್ತಾಗಲೂ ಬಾರದ ಅನಂತಮೂರ್ತಿ, ಮತ್ತೆ ತನ್ನ ಬಳಿ ಬಂದಾಗ ಪಂಕಜಾಕ್ಷಿಯ ಪ್ರತಿಕ್ರಿಯೆಯೇನು ಎಲ್ಲದಕ್ಕೂ ಉತ್ತರ ತಿಳಿಯಲು ಓದಿ 'ತಾರಾಬಲ' ಕಾದಂಬರಿಯನ್ನು.
ತಾರಾಬಲ ಹಾಗೂ ಜ್ಯೋತಿಷ್ಯಶಾಸ್ತ್ರಕ್ಕೆ ಹೆಚ್ಚಿನ ಒತ್ತು ನೀಡಿದ್ದ ತಂದೆ ಹಾಗೂ ಸ್ವಂತ ಪರಿಶ್ರಮ, ಶಕ್ತಿ, ಪ್ರೀತಿಯಿಂದ ಬದುಕನ್ನು ಕಟ್ಟಿಕೊಳ್ಳಬಯಸಿದ್ದ ಮಗ ಇವರಿಬ್ಬರ ನಂಬಿಕೆಗಳ ಜೊತೆಗೆ ಕುಟುಂಬದಲ್ಲಿ ನಡೆದ ಘಟನೆಗಳ ಚಿತ್ರಣವಿರುವ ಕಾದಂಬರಿ ಇದು. ನಂಬಿಕೆ, ಅಪನಂಬಿಕೆ ಎರಡೂ ಅತಿಯಾದರೆ ಏನಾಗುತ್ತದೆಂಬ ಸ್ಪಷ್ಟ ಚಿತ್ರಣವಿರುವ ಸರಾಗ ಓದಿನ ಕಾದಂಬರಿ.
~ವಿಭಾ ವಿಶ್ವನಾಥ್
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ