ಪುಸ್ತಕದ ಶೀರ್ಷಿಕೆ : ಪ್ರೇಮದ ಷರತ್ತುಗಳು
ತೆಲುಗು ಮೂಲ : ಯರ್ರಂಶೆಟ್ಟಿ ಶಾಯಿ
ಕನ್ನಡಕ್ಕೆ : ಕೆ. ವಿ. ರಾಜೇಶ್ವರಿ
ಪ್ರಕಾಶಕರು : ಸ್ನೇಹಾ ಪ್ರಿಂಟರ್ಸ್
ಪ್ರಥಮ ಮುದ್ರಣ : 1994
ದ್ವಿತೀಯ ಮುದ್ರಣ : 2011 (ನನ್ನ ಓದಿಗೆ ಸಿಕ್ಕಿದ್ದು)
ಪುಟಗಳು : 214
ಬೆಲೆ : 120 ರೂ.
ತೆಲುಗು ಮೂಲದ ಹಲವು ಅನುವಾದಿತ ಕಾದಂಬರಿಗಳನ್ನು ಓದಿದ್ದೆನಾದರೂ.. ಈ ಕಾದಂಬರಿಯ ಶೀರ್ಷಿಕೆಯನ್ನು ಕಂಡಾಗ ಮೊದಲಿಗೆ ಇದು ಯಾವುದಾದರೂ ಪ್ರೀತಿ-ಪ್ರೇಮದ ಅಥವಾ ಕೌಟುಂಬಿಕ ಕಥೆ ಇರಬಹುದಾ ಎಂಬ ಊಹೆಯಿತ್ತು. ಆದರೆ, ಇದನ್ನು ಓದುತ್ತಾ ಹೋದಂತೆ ಅಲ್ಲಿನ ನವಿರಾದ ಹಾಸ್ಯ ಹಾಗೂ ವಿಡಂಬನೆಗಳು ಇದೊಂದು ಚೆಂದದ ಚಲನಚಿತ್ರವಾಗಬಹುದಾದ ಕಥೆ ಎಂದೆನಿಸಿತು. ಈ ಪುಸ್ತಕವನ್ನು ಓದುವಾಗ ಎಲ್ಲಿಯೂ ಇದು ಅನುವಾದಿತ ಕಾದಂಬರಿ ಎಂಬ ಭಾವ ಹುಟ್ಟಿಸಲಿಲ್ಲ.
ಸತ್ಯನಾರಾಯಣ, ನಾಗೇಶ್ವರ್ ಹಾಗೂ ಗೋಪಾಲ್ ನಡುವೆ ನಡೆದ ಮಾತುಕತೆಯಲ್ಲಿ ಪ್ರೇಮದ ನಿಯಮಗಳ ಕುರಿತು ಶುರುವಾದ ಮಾತುಕತೆ ನಂತರ ಮಾತಿನ ಚಕಮಕಿಗೆ ತಿರುಗಿ ನಂತರ ಎಲ್ಲರೂ ಆಸ್ಪತ್ರೆಗೆ ಸೇರಿದಾಗ.. ಅಮಲಿಳಿದ ನಂತರ ಸತ್ಯನಾರಾಯಣ ತನ್ನ ಗೆಳೆಯನ ಜೀವನದಲ್ಲಿ ನಡೆದ ಘಟನೆಯನ್ನು ಹೇಳುತ್ತಾನೆ. ಅವರ ದೃಷ್ಟಿಯಲ್ಲಿ ಪ್ರೇಮಕ್ಕೆ ಇರುವ ನಿಯಮಗಳು ಎರಡೇ ಎಸ್ ಆರ್ ನೋ ಅಷ್ಟೇ.. ಆದರೆ, ಸತ್ಯನಾರಾಯಣ ಹೇಳುವ ಘಟನೆಯಲ್ಲಿ ಬರುವ ಪ್ರೇಮದ ಷರತ್ತುಗಳು ಬೇರೆಯವೇ..
ರಘುನಾಥ ಶ್ರೀಮಂತ ಮನೆತನದಲ್ಲಿ ಹುಟ್ಟಿದ್ದ. ಆತ ಈಗ ಸೋದರಮಾವನ ಮನೆಯಲ್ಲಿಯೇ ಬೆಳೆಯುತ್ತಿದ್ದದ್ದು.. ತಂದೆ-ತಾಯಿ ತೀರಿಕೊಂಡ ನಂತರ ಸೋದರಮಾವನೇ ರಘುನಾಥ್ ನನ್ನು ಸಾಕುತ್ತಿದ್ದದ್ದು. ಜೊತೆಗೆ, ಈಗ ಮೂರು ವರ್ಷದಿಂದ ವಾಲ್ಮೀಕಿ ಇದ್ದಾನೆ. ಶ್ರೀಮಂತ ಕುಟುಂಬದ ಮಕ್ಕಳಿಗೆ ಇರುವ ಎಲ್ಲಾ ಶೋಕಿಗಳೂ ಇದ್ದು ಅದರಲ್ಲಿ ಕುಡಿತವೇ ಹೆಚ್ಚಾಗಿತ್ತು ರಘುನಾಥನ ಬದುಕಲ್ಲಿ. ಅದಕ್ಕೆ ಕಾರಣ ಆತನ ಗೆಳೆಯ ನರಸಿಂಹ. ಇಬ್ಬರೂ ಸೇರಿ ಕುಡಿತದ ಅಮಲಿಗೇರುತ್ತಿದ್ದರು.
ಹಾಗೆ ಒಂದು ದಿನ ಕುಡಿದ ರಘು ಹಾಗೂ ನರಸಿಂಹ ಬಾರ್ ನಲ್ಲಿ ಮಿಲಿಟರಿ ಬಟ್ಟೆ ಧರಿಸಿದ್ದ ವ್ಯಕ್ತಿಯೊಡನೆ ಗದ್ದಲವೆಬ್ಬಿಸಿಕೊಂಡಿದ್ದರು. ಹಾಗೆ ಜಗಳವಾಡಿದ್ದು ಮೇಜರ್ ರಾಮಚಂದ್ರ ಅವರ ಬಳಿ. ಅವರ ಮಗಳು ಸ್ವರೂಪಳನ್ನು ರಘುನಾಥನಿಗೆ ವಿವಾಹ ಮಾಡುವ ಆಲೋಚನೆಯಿಂದ ಬಂದದ್ದು. ಆದರೆ, ಅವರೊಡನೆ ಮಾತನಾಡಲು ಹೋಗಿ ಮೂವರೂ ಕುಡಿಯುತ್ತಾ ಅಮಲಿನಲ್ಲಿ ಜಗಳವಾಡಿದರು.
ಈ ಘಟನೆಯ ನಂತರ ರಘುನಾಥನಿಗೆ ಡಾಕ್ಟರ್ ಚಂದ್ರಕಲಾ ಮೇಲೆ ಪ್ರೇಮವಾಗಿತ್ತು. ಆದರೆ, ಚಂದ್ರಕಲಾ ಈತನ ಪ್ರೇಮಕ್ಕೆ ಷರತ್ತು ಹಾಕಿದ್ದಳು. ಅವಳ ಪ್ರೇಮದ ಷರತ್ತುಗಳಲ್ಲಿ ಮುಖ್ಯವಾದದ್ದು.. ಮೊಟ್ಟ ಮೊದಲು ಪ್ರಪಂಚ ಎಂದರೇನು ಎನ್ನುವುದನ್ನು ತಿಳಿದುಕೊಳ್ಳಬೇಕು. ತನ್ನ ಸ್ವಶಕ್ತಿ ಸಾಮರ್ಥ್ಯದಿಂದ ಒಂದು ಕೆಲಸ ಸಂಪಾದಿಸಿಕೊಂಡು ಆರು ತಿಂಗಳಾದರೂ ಆ ಕೆಲಸ ಮಾಡಬೇಕು. ನಿಮ್ಮ ಸಂಪಾದನೆಯಲ್ಲಿ ಜೀವನ ನಡೆಸಬೇಕು ನಿಮ್ಮ ಅತ್ತೆ ಅಥವಾ ಮಾವನ ರೆಕಮೆಂಡೇಶನ್ ನಿಂದ ಕೆಲಸ ತೆಗೆದುಕೊಳ್ಳಬಾರದು. ಅಲ್ಲದೇ, ಕನಿಷ್ಠ ಆರು ತಿಂಗಳು ಕೆಲಸ ಮಾಡಬೇಕು. ಸ್ನೇಹಿತರು ಅಥವಾ ಪರಿಚಯದವರ ಹತ್ತಿರವೂ ಒಂದು ಪೈಸೆಯೂ ಸಾಲ ಮಾಡಬಾರದು ಎಂಬುದಾಗಿ.
ರಘುನಾಥನ ಮಾವ ಶ್ರೀಮಂತ ಉದ್ಯಮಿ ಜನಾರ್ಧನ್ ಹಾಗೂ ಅತ್ತೆ ರಚನಾದೇವಿ ಲೇಖಕಿ. ತನ್ನ ಗಂಡನಿಗೆ ಡಾಕ್ಟರೇಟ್ ಕೊಡಿಸಬೇಕೆಂದು ಗವರ್ನರ್ ದೂರ್ವಾಸ್ ಬಳಿಯೂ ರಚನಾದೇವಿ ಮಾತನಾಡಿದ್ದರು.
ಅದರ ಸಮಯ ಹತ್ತಿರ ಬರುತ್ತಿದ್ದಾಗಲೇ.. ರಘುನಾಥ ಬಾರ್ ನಲ್ಲಿ ಮಾಡಿಕೊಂಡು ಬಂದಿದ್ದ ಅವಾಂತರ ಪೇಪರ್ ನಲ್ಲಿ ಬಂದಿತ್ತು. ಅದೇ ವಿಚಾರವಾಗಿ ಇಬ್ಬರಲ್ಲಿಯೂ ಮಾತು ನಡೆದಿತ್ತು. ಚಂದ್ರಕಲಾಳ ಕಂಡೀಷನ್ ಒಪ್ಪಿಕೊಂಡ ರಘುನಾಥ್ ಇದನ್ನೇ ನೆಪವಾಗಿರಿಸಿಕೊಂಡು ಮನೆ ಬಿಟ್ಟು ಹೊರಟ.
ಒಬ್ಬ ನಿರುದ್ಯೋಗಿ ಉದ್ಯೋಗ ಸಂಪಾದಿಸುವುದು ಎಷ್ಟು ಕಷ್ಟ ಹಾಗೂ ತನ್ನ ಅನ್ನವನ್ನು ತಾನೇ ದುಡಿದುಕೊಳ್ಳುವುದಕ್ಕೆ ಎಷ್ಟು ಕಷ್ಟವಿದೆ ಎನ್ನುವುದನ್ನು ಲೇಖಕರು ಹೇಳುತ್ತಾರೆ. ಆದರೆ, ತನ್ನ ಸೋದರಳಿಯನ ಮೇಲಿನ ಪ್ರೀತಿಯಿಂದ ಜನಾರ್ಧನ್ ಪ್ರತಿ ಹೆಜ್ಜೆಯಲ್ಲೂ ಅವನಿಗೆ ತಿಳಿಯದಂತೆ ಆತನ ಅನುಕೂಲವನ್ನು ನೋಡಿಕೊಳ್ಳುತ್ತಿದ್ದರು. ಆದರೆ, ಚಾಣಾಕ್ಷ ಚಂದ್ರಕಲಾ ಇದೆಲ್ಲದರ ಜಾಡು ಹಿಡಿದು ರಘುನಾಥನ ಎಲ್ಲಾ ಕೆಲಸಗಳಿಗೂ ನಿರಾಕರಿಸಿ ಎಲ್ಲಾ ಸತ್ಯವನ್ನು ಬಿಚ್ಚಿಡುತ್ತಿದ್ದಳು.
ಜನಾರ್ಧನ್ ತನ್ನ ಪತ್ನಿ ಎಲ್ಲದಕ್ಕೂ ಅಡ್ಡಿ ಮಾಡುತ್ತಿರುವುದನ್ನು ಕಂಡು ಬೇಸರವಾಗಿ ರಘುನಾಥನಿಗೆ ಜೊತೆಯಾಗಿ ಹೊರಬಂದರು. ಅದೇ ಸಮಯಕ್ಕೆ ಗವರ್ನರ್ ದೂರ್ವಾಸ್ ಕೊಟ್ಟ ಪೇಪರ್ ನ ಜಾಹೀರಾತು ಕೆಲಸಕ್ಕೆಂದು ರಘುನಾಥ್ ಹಾಕುತ್ತಿದ್ದ ನಿಯಮಕ್ಕೆ ಬದ್ಧವಾಗಿತ್ತು. ರಘುನಾಥ ಆ ಉದ್ಯೋಗಕ್ಕೆ ಸೇರಿದನೇ..??
ಇಲ್ಲಿ ಮೇಜರ್ ರಾಮಚಂದ್ರರ ಮಗಳು ಸ್ವರೂಪ ರಘುನಾಥನ ಗೆಳೆಯ ನರಸಿಂಹನನ್ನು ಪ್ರೀತಿಸುತ್ತಿದ್ದಳು. ಆಕೆಯನ್ನು ನೋಡಲು ಈಶ್ವರದತ್ ಎಂಬ ಹುಡುಗ ಬರಬೇಕಿತ್ತು. ಅದರ ಬದಲಾಗಿ ನರಸಿಂಹನಿಗೆ ಆ ವೇಷದಲ್ಲಿ ಬರಲು ತಿಳಿಸಿದಾಗ.. ಇಬ್ಬರಿಗೂ ಆಶ್ಚರ್ಯ ಆಗುವಂತೆ ಅಲ್ಲಿ ಬಂದದ್ದು ರಘುನಾಥ್. ಆತ ತನ್ನ ಗೆಳೆಯನಿಗೂ ಗೊತ್ತಾಗದಂತೆ ಅಲ್ಲಿಗೆ ಬಂದದ್ದೇಕೆ..??
ದೂರ್ವಾಸ್ ಹರಿತಾದೇವಿಗೆಂದು ಬರೆದ ಪತ್ರ ತಪ್ಪಿ ರತ್ನಾದೇವಿಗೆ ಹೋಗಿ ಸೇರುತ್ತದೆ. ಆಕೆ ಮತ್ತಾರು ಅಲ್ಲದೆ ಮೇಜರ್ ರಾಮಚಂದ್ರ ಅವರ ಪತ್ನಿ. ಪತ್ರವನ್ನೇ ಇಟ್ಟುಕೊಂಡು ರತ್ನದೇವಿ ದೂರ್ವಾಸ್ ನನ್ನು ಬ್ಲಾಕ್ಮೈಲ್ ಮಾಡಲು ಶುರು ಮಾಡುತ್ತಾರೆ. ಆ ಪತ್ರದಲ್ಲಿ ಅಂತಹದ್ದೇನಿತ್ತು..?? ಹರಿತಾದೇವಿ ಯಾರು..?? ಅಷ್ಟಕ್ಕೂ ಈ ಪತ್ರ ವ್ಯವಹಾರ ನಡೆದದ್ದೇಕೆ..??
ರಘುನಾಥನಿಗೆ ಉದ್ಯೋಗ ಸಿಕ್ಕಿತೇ..?? ಆತ ಎಷ್ಟು ದಿನ ಉದ್ಯೋಗ ಮಾಡಿದ..?? ಡಾಕ್ಟರ್ ಚಂದ್ರಕಲಾ ಪ್ರತಿ ಹೆಜ್ಜೆಗೂ ರಘುನಾಥನನ್ನು ಪರೀಕ್ಷಿಸುತ್ತಿದ್ದವಳು ಆತನಿಗೆ ಸಿಕ್ಕ ಉದ್ಯೋಗದ ಬಗ್ಗೆ ಅರಿತಳೇ..?? ರಘುನಾಥನಿಗೆ ಆಕೆ ಹಾಕಿದ್ದ ಉಳಿದ ಪ್ರೇಮದ ಷರತ್ತುಗಳು ಯಾವುವು..?? ಅವೆಲ್ಲವನ್ನೂ ಪೂರೈಸಿ ಆ ಪ್ರೇಮವನ್ನು ಗೆದ್ದರೇ?? ನರಸಿಂಹ ಹಾಗೂ ಸ್ವರೂಪರ ಪ್ರೇಮ ಏನಾಯ್ತು..?? ಅಲ್ಲಿಗೆ ರಘುನಾಥ ಪ್ರವೇಶಿಸಿದ್ದೇಕೆ..?? ಎಲ್ಲದಕ್ಕೂ ಉತ್ತರ ತಿಳಿಯಲು ಓದಿ ಈ ಕಾದಂಬರಿಯನ್ನು.
~ವಿಭಾ ವಿಶ್ವನಾಥ್
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ