ಶನಿವಾರ, ಏಪ್ರಿಲ್ 18, 2026

ಮಮತೆಯ ಮಡಿಲು (ಪುಸ್ತಕ ಯಾನ - 231)


ಪುಸ್ತಕದ ಶೀರ್ಷಿಕೆ : ಮಮತೆಯ ಮಡಿಲು

ಲೇಖಕರು : ಚಿತ್ರಲೇಖ

ಪ್ರಕಾಶಕರು : ಸಾಹಿತ್ಯಲೋಕ ಪಬ್ಲಿಕೇಶನ್ಸ್

ಪ್ರಥಮ ಮುದ್ರಣ : 1994

ಪರಿಷ್ಕೃತ ಮರು ಮುದ್ರಣ : 2024


ಮಮತೆಯ ಮಡಿಲು ಕಾದಂಬರಿಯನ್ನು ಓದಿದಾಗ ನನಗೆ ಇಂದಿನ ವಾಸ್ತವಕ್ಕೆ ಬಹಳ ಹೊಂದಿಕೆಯಾಗುವ ಕಥೆಯಂತೆ ಕಾಣಿಸಿತು. ಅಲ್ಲದೆ, ಉದ್ಯೋಗಸ್ಥ ಅಮ್ಮಂದಿರು ಅನುಭವಿಸುವ ಸಮಸ್ಯೆಯನ್ನು ಬಹಳ ಮನೋಜ್ಞವಾಗಿ ಬಿಡಿಸಿಟ್ಟಿದ್ದಾರೆ ಲೇಖಕಿ. ಹೊರಗೆ ದುಡಿಯುವ ಮಹಿಳೆಯರ ಸಂಖ್ಯೆ ಹೆಚ್ಚಾದಂತೆ ಮಕ್ಕಳ ಪೋಷಣೆಗಾಗಿ ಬೇಬಿ ಸಿಟ್ಟಿಂಗ್, ಬೇಬಿ ಕೇರ್ ಸೆಂಟರ್ ಗಳು ಹೆಚ್ಚಾಗಬಹುದು. ಆದರೆ, ಏನೇ ಇದ್ದರೂ ಮಗುವಿಗೆ ತಾಯಿಯ ಮಡಿಲಿನಂತಾಗುವುದಿಲ್ಲ ಅದು. ಅಮ್ಮಂದಿರಿಗೆ ತಾವು ಮಕ್ಕಳಿಗೆ ಏನೋ ಕೊರತೆ ಮಾಡುತ್ತಿದ್ದೇವೆನ್ನುವ ಭಾವ ಹುಟ್ಟಿದ್ದರೆ.. ಮಕ್ಕಳಿಗೆ ಅಮ್ಮ ತಮ್ಮಿಂದ ದೂರಾಗುತ್ತಿದ್ದಾಳೆ ಎನ್ನುವ ಭಾವ ಹುಟ್ಟಿಸಬಹುದು. ಕೆಲವೊಮ್ಮೆ ಇಂತಹಾ ವಾತಾವರಣ ಮಕ್ಕಳ ಮಾನಸಿಕ ಸಮಸ್ಯೆಗಳಿಗೂ ಕಾರಣವಾಗಬಹುದು.


ಎಂ.ಕಾಂ ಮಾಡಿದ್ದ ಉಮೇಶ್, ಬೆಂಗಳೂರಿನ ರಫ್ತು ಕಂಪನಿಯೊಂದರಲ್ಲಿ ನಿರ್ವಾಹಕನಾಗಿ ಕೆಲಸ ಮಾಡುತ್ತಿದ್ದ. ಮಂಡ್ಯದ ಕಡೆಯವನು. ಆತನ ಅಣ್ಣನ ಸಂಸಾರ ಅಲ್ಲಿಯೇ ನೆಲೆಸಿತ್ತು. ಇಬ್ಬರು ತಂಗಿಯರ ಮದುವೆಯಾಗಿತ್ತು. ತಂದೆ-ತಾಯಿಯರು ಹಳ್ಳಿಯ ವಾತಾವರಣಕ್ಕೆ ಹೋಗಿ ಇವರ ಜೊತೆ ಬಂದಿರಲು ಒಪ್ಪುತ್ತಿರಲಿಲ್ಲ. ಅಲ್ಲದೇ ಆತ ಪ್ರೀತಿಸಿ ಮದುವೆಯಾಗಿದ್ದ ಹೆಣ್ಣು ಊರ್ಮಿಳಾ ಸ್ಟೆನೋ ಆಗಿದ್ದವನು. ಉದ್ಯೋಗಸ್ಥ ಹೆಣ್ಣಾದರೂ ಎಲ್ಲದರಲ್ಲಿಯೂ ಹೊಂದಿಕೆ ಮಾಡಿಕೊಂಡು ಸಾಗುತ್ತಿದ್ದ ಅವಳ ಜೊತೆಯ ಬಾಳು ಸುಖಮಯವಾಗಿಯೇ ಸಾಗುತ್ತಿತ್ತು. ಆದರೆ, ಮೊದಲ ಮಗು ವಿವೇಕ್ ಬಸುರಿನಲ್ಲಿ ಊರ್ಮಿಳಾ ತವರಿನವರು ಯಾರೂ ಬರದೇ ಉಮೇಶನ ತಂದೆ-ತಾಯಿಯೂ ಬರಲು ಒಪ್ಪಿರಲಿಲ್ಲ. 


ನೌಕರಿ ಮಾಡುವ ಹೆಣ್ಣು ಬೇಡವೆಂದರೂ ಮದುವೆಯಾದೆ ಎನ್ನುವ ಕೋಪವನ್ನು ಆ ಸಂದರ್ಭದಲ್ಲಿ ತೀರಿಸಿದರು. ಅಲ್ಲದೆ, ಈಗಲೂ ಆಕೆ ಉದ್ಯೋಗ ಬಿಟ್ಟು ಹಾಯಾಗಿರಲಿ ಎಂದಿದ್ದರು. ಆದರೆ, ಅದನ್ನು ಒಪ್ಪದ ಉಮೇಶ್ ಬೆಂಗಳೂರಿನ ಬಾಡಿಗೆ, ಇತರ ಖರ್ಚಿಗೆ ಒಬ್ಬರ ಸಂಬಳ ಸಾಲುವುದಿಲ್ಲವೆನ್ನುವ ವಾಸ್ತವವನ್ನು ತಿಳಿ ಹೇಳಿದ್ದರೂ ಅವರು ಜಗ್ಗಿರಲಿಲ್ಲ. ಊರ್ಮಿಳೆಯೂ ಸುಮ್ಮನಾಗಿದ್ದಳು. 


ಕೆಲಸದ ಹುಡುಗಿಯನ್ನು ನಂಬಲಾಗುವುದಿಲ್ಲವೆನ್ನುತ್ತಾ ಮನೆಯ ಹತ್ತಿರದಲ್ಲಿಯೇ ಇದ್ದ ಬೇಬಿ ಸಿಟ್ಟಿಂಗ್ 'ನಿರ್ಮಲ ಹೋಂ'ನಲ್ಲಿ ಪುಟ್ಟ ಮಗು ವಿವೇಕ್ ನನ್ನು ಬಿಟ್ಟು ಹೋಗುತ್ತಿದ್ದಳು.


ಮೊದಮೊದಲಿಗೆ ಅದನ್ನು ನಡೆಸುವ ಮಧುರ ಐದು ತಿಂಗಳಷ್ಟು ಚಿಕ್ಕ ಮಗುವನ್ನು ನೋಡಿಕೊಳ್ಳಲಾಗುವುದಿಲ್ಲ, 10 ತಿಂಗಳ ನಂತರದ ಮಕ್ಕಳನ್ನು ಮಾತ್ರ ಎಂದು ಹೇಳಿದ್ದರೂ ಕೊನೆಗೆ ಅವಳ ಕಷ್ಟ ಹಾಗೂ ನಯವಾದ ಪ್ರಾರ್ಥನೆಗೆ ಕರಗಿ ಒಪ್ಪಿದ್ದರು. ಆದರೂ.. ಮಗುವಿಗೆ ಹುಷಾರಿಲ್ಲದ ದಿನ ಆಕೆ ಅಲ್ಲಿ ಮಗುವನ್ನು ಬಿಡುವಂತಿರಲಿಲ್ಲ. ಆದರೆ, ಹೆಚ್ಚಿನ ಮಕ್ಕಳು ಬೆಳೆಯುವ, ಬಂದು ಹೋಗುವವರು ಹೆಚ್ಚಿದ್ದ ವಾತಾವರಣದಲ್ಲಿ ಮಗುವಿಗೆ ಹುಷಾರು ತಪ್ಪುವ ಸಂದರ್ಭಗಳೇ ಹೆಚ್ಚಾಗಿದ್ದವು. ಮೊದಮೊದಲಿಗೆ ಆಕೆಗೆ ಬೇಸರವಾದರೂ.. ನಂತರ ಪರಿಸ್ಥಿತಿಗೆ ಹೊಂದಿಕೊಂಡಿದ್ದಳು. 


ವಿವೇಕ್ ಸ್ವಭಾವತಃ ಚೂಟಿ ಹಾಗೂ ಚುರುಕು. ಅವನ ಹಲವು ಚಟುವಟಿಕೆಗಳು ಚೇಷ್ಟೆ ಎನ್ನಿಸಿದರೆ, ಇನ್ನು ಕೆಲವು ಹಾಸ್ಯದಂತಿರುತ್ತಿದ್ದವು. ಕೆಲವೊಮ್ಮೆ ಆತನ ಅತಿ ಚಟುವಟಿಕೆಯಿಂದ ಆತನಿಗೆ ಗಾಯವಾಗಿ ಏಟಾಗುವುದೂ ಇತ್ತು. ಆತನ ತುಂಟಾಟಗಳಿಗೆ ಉಮೇಶ್ ಪೆಟ್ಟು ಕೊಡುತ್ತಿದ್ದ. ಬದಲಾಗಿ, ನಿಧಾನವಾಗಿ ಕೂಡಿಸಿಕೊಂಡು ಪ್ರೀತಿಯಿಂದ ತಿದ್ದುತ್ತಿರಲಿಲ್ಲ. ಊರ್ಮಿಳಾಗೆ ಇದು ಆತಂಕವೂ ಆಗಿತ್ತು.


ಮತ್ತೊಂದು ಮಗು ಜೊತೆಯಾದರೆ ಆತನ ತುಂಟಾಟಗಳು ಕಡಿಮೆಯಾಗುತ್ತದೆನ್ನುವ ಗೆಳತಿಯರ ಸಲಹೆ ಹಾಗೂ ಹೆಣ್ಣು ಮಗುವಿನ ಆಸೆಯಿಂದ ಮತ್ತೆ ಗರ್ಭಪಾತ ಮಾಡಿಸಿಕೊಳ್ಳುವ ಮನಸ್ಸಾಗದೆ ಮಗುವಿಗೆ ಜನ್ಮ ನೀಡಲು ಸಿದ್ದಳಾದಳು ಊರ್ಮಿಳ. ಆದರೆ, ಅವರು ಆಸೆ ಪಟ್ಟಂತೆ ಅದು ಹೆಣ್ಣಾಗಲಿಲ್ಲ. ಬದಲಿಗೆ ಹುಟ್ಟಿದ್ದು ಗಂಡು ಮಗು.


ಆದರೆ ಈ ಬಾರಿ ಊರ್ಮಿಳಾಳ ಅತ್ತೆ-ಮಾವ ಇಲ್ಲಿಗೆ ಬರಲು ಒಪ್ಪಿದ್ದರು. ಮೊದಲನೆಯ ಸೊಸೆಯ ಜೊತೆ ಕೊಂಚ ಘರ್ಷಣೆ ನಡೆಯುತ್ತಿದ್ದುದರಿಂದ ಅವರಿಗೂ ಅಲ್ಲಿ ಮನಸ್ಸು ಕೆಟ್ಟು ಇಲ್ಲಿ ಬರಲು ಒಪ್ಪಿದ್ದರು. ಇಲ್ಲಿಗೆ ಬಂದವರಿಗೆ ಅಲ್ಲಿಯ ಸೊಸೆಯ ಉದಾಸೀನತೆಗಿಂತ, ಇಲ್ಲಿಯ ಸ್ನೇಹ ತುಂಬಿದ ವಾತಾವರಣ ಇಷ್ಟವಾಗಿತ್ತು. ಅಲ್ಲದೆ, ಮನೆಯ ವಿಚಾರಗಳಲ್ಲಿ ಅವರಿಷ್ಟದಂತಿರಲು ಅಡ್ಡಿ ಪಡಿಸಿರಲಿಲ್ಲವಾದ್ದರಿಂದ, ಅವರಿಗೆ ಈ ಮನೆಗೆ ಬಾರದೆ ಇಷ್ಟು ದಿನ ಮಾಡಿದ್ದು ತಪ್ಪು ಎಂದೆನಿಸಿತು. 


ಕೃಷ್ಣಪ್ಪ ಹಾಗೂ ನಾಗಮ್ಮನವರಿಗೆ ಮಗುವನ್ನು ಕಂಡರೆ ಪ್ರೀತಿಯಿದ್ದರೂ.. ಆತನ ಎಳವೆಯಿಂದ ಜೊತೆಯಲ್ಲಿಲ್ಲದ್ದರಿಂದ, ಇವರಿಗೂ ವಯಸ್ಸಾದ್ದರಿಂದ ಸಹನೆ ಕಡಿಮೆಯಿತ್ತು. ಪ್ರತಿಯೊಂದಕ್ಕೂ ವಿವೇಕ್ ನನ್ನು ದೂಷಿಸುತ್ತಿದ್ದರು. ನಾಗಮ್ಮ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಎಲ್ಲವನ್ನೂ ತನ್ನ ಮಗನಿಗೆ ಹೇಳುತ್ತಿದ್ದರು. ಇದರಿಂದ ವಿವೇಕ್ ಕುರಿತ ದೂರುಗಳು ಉಮೇಶ್ ಬಳಿಗೆ ಬರಲು ಹೆಚ್ಚಾಗಿ, ಆತ ಆತನನ್ನು ಬಡಿಯುತ್ತಿದ್ದದ್ದೇ ಹೆಚ್ಚು. 


ಪುಟ್ಟ ಮಗು ವಿನಯ್ ಹುಟ್ಟಿದ ಮೇಲೆ ವಿವೇಕನಿಗೆ ತಾನು ಎಲ್ಲರಿಂದ ನಿರ್ಲಕ್ಷ್ಯಕ್ಕೊಳಗಾಗುತ್ತಿದ್ದೇನೆ ಎಂಬ ಭಾವ ಹೆಚ್ಚು ಕಾಡತೊಡಗಿತ್ತು. ತನ್ನಮ್ಮನನ್ನು ತನ್ನಿಂದ ದೂರ ಮಾಡುತ್ತಿದ್ದಾರೆ ಎಂದೆನಿಸುತ್ತಿತ್ತು. ಊರ್ಮಿಳಾಳಿಗೆ ಮಗನ ಭಾವ ಅರ್ಥವಾಗಿ ಆಕೆ ಕಾಳಜಿ ಮಾಡಿದರೆ, ನಾಗಮ್ಮನವರು ಅತಿ ಪ್ರೀತಿಯಿಂದ ಮಗುವನ್ನು ಕೆಡಿಸುತ್ತಿದ್ದಿ ಎಂದು ದೂಷಿಸುತ್ತಿದ್ದರು. ಎಲ್ಲದಕ್ಕೂ ಪುಟ್ಟ ಮಗುವೇ ಕಾರಣವೆನ್ನುವುದು ವಿವೇಕ್ ಮನಸ್ಸಲ್ಲಿ ಆಳವಾಗಿ ಕುಳಿತು ಬಿಟ್ಟಿತು. ಇದರಿಂದ ವಿನಯ್ ಗೆ ಆಗಾಗ ತೊಂದರೆಗಳಾಗುತ್ತಿದ್ದವು. 


ಶಾಲೆಯಲ್ಲಿಯೂ ಮಂಕಾಗಿದ್ದ ವಿವೇಕ್ ಕುರಿತು ತಿಳಿದಾಗ ಆತನನ್ನು ಮನೋವೈದ್ಯರಲ್ಲಿ ಕರೆದೊಯ್ಯಲು ಪತಿಯ ಬಳಿ ಕೇಳಿದಾಗ ಆತನೂ ಒಪ್ಪಲಿಲ್ಲ. ವಿವೇಕನೂ ಒಪ್ಪಲಿಲ್ಲ. ಊರ್ಮಿಳಾ ಒಬ್ಬಳೇ ಮನೋವೈದ್ಯರ ಬಳಿ ಹೋಗಿದ್ದಳು, ಹಾಗಾಗಿ ಸಮಸ್ಯೆ ಬಗೆಹರಿದಿರಲಿಲ್ಲ. ಮನೋವೈದ್ಯರ ಬಳಿ ಎಂದರೆ ಹುಚ್ಚಾಸ್ಪತ್ರೆಗೆ ಎಂದು ತಿಳಿದಿರುವವರೇ ಹೆಚ್ಚು. ಅಂತಹಾ ಸಂದರ್ಭ ಇಲ್ಲಿಯೂ ಇತ್ತು. ಆದರೆ, ಆ ತಪ್ಪು ತಿಳುವಳಿಕೆಯನ್ನು ಹೋಗಲಾಡಿಸಿಕೊಂಡು ಮನೋವೈದ್ಯರನ್ನು ಸಂಪರ್ಕಿಸುವುದು ಎಷ್ಟು ಅವಶ್ಯಕವೆನ್ನುವುದರ ಅರಿವಾಗುತ್ತದೆ.


ವಿನಯ್ ಅಜ್ಜ-ಅಜ್ಜಿಯರ ಕಣ್ಮಣಿಯಾಗಿ, ಸ್ವಭಾವತಃ ಮೆದುವಾಗಿ ಬೆಳೆಯುತ್ತಿದ್ದರೆ.. ವಿರುದ್ಧವಾಗಿ ಬೆಳೆಯುತ್ತಿದ್ದ ವಿವೇಕ್. ಇವರಿಬ್ಬರ ಈ ವೈರುಧ್ಯ ಕೆಲವೊಮ್ಮೆ ಜಗಳದಲ್ಲಿ ಮುಕ್ತಾಯವಾಗುತ್ತಿತ್ತು. ಎಲ್ಲರ ಮೇಲಿನ ಕೋಪವನ್ನು ತಮ್ಮನ ಮೇಲೆ ತೋರಿಸುತ್ತಿದ್ದ ವಿವೇಕ್ ಬದಲಾದನೇ..??


ಅಜ್ಜ-ಅಜ್ಜಿಯಾಗಿ ಸ್ವಲ್ಪ ಸಹನೆ ತೋರಬಹುದಾಗಿದ್ದರೂ.. ವಿವೇಕ್ ವಿಷಯದಲ್ಲಿ ಅವರಿಗೆ ಅಸಹನೆ ಹುಟ್ಟಿದ್ದಕ್ಕೆ ವಿನಯ್ ಪರೋಕ್ಷವಾಗಿ ಕಾರಣವಾದನೇ..?? 


ಓದಿನಲ್ಲಿ ಹಿಂದುಳಿದ ವಿವೇಕ್ ಮತ್ತೆ ಮೊದಲಿನಂತಾದನೇ..?? ಆತನಿಗೆ ಸಿಕ್ಕ ಮಡಿಲು ಮಮತೆಯದ್ದಾಯಿತೇ..?? ಎಲ್ಲವನ್ನೂ ತಿಳಿಯಲು ಓದಿ ಮಮತೆಯ ಮಡಿಲು.


ಇಬ್ಬರು ಮಕ್ಕಳಿದ್ದಾಗ ಎಷ್ಟು ಜೋಪಾನ ಮಾಡಿದರೂ ಅದು ಕಡಿಮೆಯೇ.. ಅದರಲ್ಲಿಯೂ ತಾಯಿ-ತಂದೆಯರು ಉದ್ಯೋಗಕ್ಕೆ ಹೋಗುತ್ತಿದ್ದರಂತೂ ಅವರನ್ನು ಕಣ್ಣಲ್ಲಿ ಕಣ್ಣಿಟ್ಟು ಗಮನಿಸಬೇಕು. ಆದರೆ ಇಂದಿನ ಪರಿಸ್ಥಿತಿಗಳು ಹಿಂದಿನಂತಿಲ್ಲ. ಚಿಕ್ಕದಾಗುತ್ತಿರುವ ಕುಟುಂಬಗಳಲ್ಲಿ ಹಿರಿಯರ ಸ್ಥಾನ ಹಾಗೂ ಅವರ ಅನುಭವ ಎಷ್ಟು ಮುಖ್ಯವಾಗುತ್ತದೆ ಎನ್ನುವುದರ ಜೊತೆಗೆ, ಮಕ್ಕಳ ಸೂಕ್ಷ್ಮ ನಡವಳಿಕೆಗಳು ಹಾಗೂ ಅವರ ಭಾವನೆಗಳನ್ನು ಅರ್ಥೈಸುವಂತೆ ಕಟ್ಟಿಕೊಟ್ಟಿರುವ ರೀತಿ ಇಷ್ಟವಾಯಿತು. 


ಮಕ್ಕಳಿಗೆ ಅಮ್ಮನ ಮಡಿಲಿನಷ್ಟು ಸುರಕ್ಷಿತವಾದ ಜಾಗ ಮತ್ತೊಂದಿಲ್ಲ. ಅದು ಸುರಕ್ಷಿತವೂ ಹೌದು, ಮಮತೆಯೂ ಹೌದು. ಅದನ್ನು ಯಾರೇ ತುಂಬಿಕೊಟ್ಟರೂ.. ಅಮ್ಮನ ಅನುಪಸ್ಥಿತಿ ಕಾಡುವುದಿದೆ. ಊರ್ಮಿಳಾಳಿಗೆ ಆ ಮಮತೆಯನ್ನು ತಾನು ಸರಿಯಾಗಿ ಕೊಡುತ್ತಿಲ್ಲ ಎಂಬ ಭಾವ ಹುಟ್ಟುವುದಕ್ಕೆ ಕೇವಲ ಅವಳ ಉದ್ಯೋಗವಷ್ಟೇ ಕಾರಣವಲ್ಲ, ಅರಿತು ನಡೆಯುವ ಪತಿ ಅಥವಾ ಪತ್ನಿ ಇದ್ದರೆ ಸಂಸಾರ ಎಷ್ಟು ಸರಾಗವಾಗಬಲ್ಲದು ಎನ್ನುವುದರ ಅರಿವಾಗುತ್ತದೆ. ಎಲ್ಲಾ ಅಂಶಗಳನ್ನು ಹೊಂದಿರುವ ಸಕಾರಾತ್ಮಕ ಆಲೋಚನೆಯನ್ನು ಕಟ್ಟಿ ಕೊಡುವ ಕಾದಂಬರಿಯ ಓದು.


~ವಿಭಾ ವಿಶ್ವನಾಥ್

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ