ಶನಿವಾರ, ಏಪ್ರಿಲ್ 18, 2026

ಮರೆವಿನ ಬಳ್ಳಿ (ಪುಸ್ತಕ ಯಾನ - 238)


ಪುಸ್ತಕದ ಶೀರ್ಷಿಕೆ : ಮರೆವಿನ ಬಳ್ಳಿ

ಲೇಖಕರು : ಸಚ್ಚಿದಾನಂದ ಹೆಗಡೆ

ಪ್ರಕಾಶಕರು : ಅಂಕಿತ ಪುಸ್ತಕ

ಪ್ರಥಮ ಮುದ್ರಣ : 2016

ಪುಟಗಳು : 96

ಬೆಲೆ : 80 ರೂ.


ಸಚ್ಚಿದಾನಂದ ಹೆಗಡೆಯವರು ಉತ್ತರ ಕರ್ನಾಟಕದ ಇಡಗುಂಜಿಯವರು. ಭಾರತ ಮತ್ತು ಯುರೋಪ್ ಗಳಲ್ಲಿ ಉನ್ನತ ಶಿಕ್ಷಣ ಪಡೆದಿರುವ ಇವರು ಈಗ ಚೀನಾ ದೇಶದ ಕಾರ್ ಡಿಸೈನ್ ಕಂಪನಿಯೊಂದರಲ್ಲಿ ಉನ್ನತ ಹುದ್ದೆಯಲ್ಲಿದ್ದಾರೆ. 'ಕಾರಂತಜ್ಜನಿಗೊಂದು ಪತ್ರ' ಅವರ ಮೊದಲ ಕಥಾ ಸಂಕಲನ. ಇದು ಚಲನಚಿತ್ರವೂ ಆಗಿದೆ. ಈ ಕೃತಿಗೆ ಕನ್ನಡ ಸಾಹಿತ್ಯ ಪರಿಷತ್ತು ನೀಡುವ 'ಅರಳು ಪ್ರಶಸ್ತಿ' ಮತ್ತು ಪುಸ್ತಕ ದತ್ತಿ ಪ್ರಶಸ್ತಿ, ಅತ್ತಿಮಬ್ಬೆ ಪ್ರಶಸ್ತಿ, ಕಥಾರಂಗಂ ಪ್ರಶಸ್ತಿ, ಪಂಡಿತ ಪುಟ್ಟರಾಜ ಗವಾಯಿ ಸಾಹಿತ್ಯ ಪುರಸ್ಕಾರ ದೊರೆತಿದೆ. ಯಕ್ಷಗಾನ ಕೆರೆಮನೆ ಮಹಾಬಲ ಹೆಗಡೆಯವರ ಜೀವನ ಚರಿತ್ರೆ 'ಮಹಾಬಲ'ದ ಸಹಲೇಖಕರು ಕೂಡ. ಇದು ನಾನು ಓದುತ್ತಿರುವ ಅವರ ಮೊದಲ ಪುಸ್ತಕ. 


ಮರೆವಿನ ಬಳ್ಳಿ ಕಥಾಸಂಕಲನದಲ್ಲಿ ಐದು ಕಥೆಗಳಿವೆ. ಇಲ್ಲಿನ ಕಥೆಗಳು ಮಯೂರ, ಕನ್ನಡಪ್ರಭ, ಉದಯವಾಣಿ ಮತ್ತು ತರಂಗ ವಿಶೇಷಾಂಕಗಳಲ್ಲಿ ಪ್ರಕಟಿತವಾಗಿವೆ. 


ಎಲೆಕ್ಟ್ರಿಕ್ ಜಾಗಟೆ : ಎಲ್ಲವೂ ಜಾಗತೀಕರಣವಾಗುತ್ತಿರುವ ಸಂದರ್ಭದಲ್ಲಿ ದೇವಸ್ಥಾನವೂ ಅದೇ ಹಾದಿಯಲ್ಲಿ ನಡೆಯುವ ಸನ್ನಾಹದಲ್ಲಿದ್ದಾಗ ಬಹಳ ಹಿಂದಿನಿಂದ ಅಲ್ಲಿಯ ಪೂಜೆ ಮಾಡಿಕೊಂಡು ಬಂದಿದ್ದ ಶಂಕರ ಭಟ್ಟರು ಇತ್ತೀಚಿಗೆ ಹಾಸಿಗೆ ಹಿಡಿದಿದ್ದರು. ಮಗ ವಿನಾಯಕ ಭಟ್ಟರು ದೇವಸ್ಥಾನದ ಕಾರುಬಾರು ನೋಡುತ್ತಿದ್ದರು. 55 ವರ್ಷದ ಹಿಂದಿನ ಸ್ಥಿತಿಗೂ ನಾಲ್ಕೈದು ವರ್ಷದ ಹಿಂದಿನ ಸ್ಥಿತಿಗೂ ಒಂದಿಷ್ಟು ಬದಲಾವಣೆಗಳಂತೂ ಆಗಿದ್ದವು. ಮಗ ವಿನಾಯಕ ಭಟ್ಟರಿಗೆ ಏನು ನಡೆಯುತ್ತಿದೆ ಎಂದು ಪೂರ್ತಿ ತಿಳಿದಿತ್ತಾದರೂ.. ತಂದೆಗೆ ಯಾವ ವಿಷಯವನ್ನೂ ಬೇಕಂತಲೇ ತಿಳಿಸದೆ.. ಏನೂ ಗೊತ್ತಿಲ್ಲದವರಂತೆ ತನ್ನಷ್ಟಕ್ಕೆ ತಾನು ದೇವಸ್ಥಾನ, ಮನೆ ಎಂದಿದ್ದುಬಿಟ್ಟರು. ಆದರೆ, ಶಂಕರಭಟ್ಟರಿಗೆ ಎಲ್ಲವೂ ತಿಳಿದಾಗ ಜೀರ್ಣಿಸಿಕೊಳ್ಳಲಾಗಲಿಲ್ಲ. ನಿಧಾನವಾಗಿ ದೇವರ ಪೂಜೆಯನ್ನು ಸ್ವಲ್ಪ ಸ್ವಲ್ಪವೇ ಕೈಬಿಟ್ಟು ಮನೆಯಲ್ಲಿಯೇ ಇರಲು ಪ್ರಾರಂಭಿಸಿದರು. ನಂತರ ನಿಧಾನವಾಗಿ ಹಾಸಿಗೆ ಹಿಡಿದಿದ್ದರು. ಆದರೆ, ಅದರಿಂದ ಯಾವ ಬದಲಾವಣೆಗಳು ಆಗಲಿಲ್ಲ. ಇವರ ಮೌನ ಪ್ರತಿಭಟನೆಯನ್ನು ಯಾರೂ ಗಣನೆಗೆ ತೆಗೆದುಕೊಳ್ಳಲಿಲ್ಲ. 

ಆದರೆ, ಒಂದು ದಿನ ಸರಿಯಾಗಿ ಮಂಗಳಾರತಿಯ ಸಮಯಕ್ಕೆ ಕರೆಂಟು ಹೋದಾಗ ಎಲೆಕ್ಟ್ರಿಕ್ ಜಾಗಟೆ ಸದ್ದು ಮಾಡಲಿಲ್ಲ. ಮೂಲೆಯಲ್ಲಿ ಮಲಗಿರುತ್ತಿದ್ದ ಶಂಕರಭಟ್ಟರು ಮನೆಯಲ್ಲಿದ್ದ ಜಾಗಟೆ ಹಿಡಿದು ನಿಧಾನವಾಗಿ ದೇವಿಯ ಸಾನಿಧ್ಯಕ್ಕೆ ಬಂದು ಅದನ್ನು ಬಾರಿಸಲು ತೊಡಗಿದರು. ಎಲ್ಲರೂ ಅವರನ್ನೇ ಅನುಕರಿಸುತ್ತಾ.. ಬೇರೆ ಬೇರೆ ವಾದ್ಯಗಳನ್ನು ಹಿಡಿದರು. ಆದರೆ ಇಂದಿನ ಪರಿಸ್ಥಿತಿಯೇ ನಾಳೆಯೂ ಇರುತ್ತದಾ..?? ಇದೇ ಸಮಯಕ್ಕೆ ಕರೆಂಟು ಹೋಗುತ್ತದಾ..?? ಈ ಬದಲಾವಣೆ ಎಷ್ಟು ದಿನಕ್ಕೆ..? ಪರಿಸ್ಥಿತಿ ಅರಿವಾದದ್ದು ನಿಜವಾಗಿಯೂ ಯಾರಿಗೆ..?


ಲಾಫಿಂಗ್ ಕ್ಲಬ್ : ನಾಲ್ಕು ವರ್ಷದಿಂದ ಲಾಫಿಂಗ್ ಕ್ಲಬ್ ಗೆ ಹೋಗುತ್ತಿದ್ದ ಅನಂತ ಭಟ್ಟರಿಗೆ ಹೋಗಲು ಮನಸಿರದ್ದಕ್ಕೆ ಕಾರಣ ಅವರ ಗೆಳೆಯ ಶ್ರೀಕಂಠ ತೀರಿಕೊಂಡದ್ದು. ಆದರೆ, ಸೊಸೆ ಅವರಲ್ಲಿ ಬದಲಾವಣೆ ತರಲು ಅಲ್ಲಿಗೆ ಕಳುಹಿಸಿದಾಗ.. ಅಲ್ಲಿ ಅವರಿಗೆ ತನ್ನ ಅವನ ಸ್ನೇಹದ ಕುರಿತ ಎಷ್ಟೋ ಸಂಗತಿಗಳು ನೆನಪಾಗಿತ್ತು. ಬಾಲ್ಯದ ಸಂದರ್ಭಗಳು, ಏಳೆಂಟು ವರ್ಷ ದೊಡ್ಡವನಾಗಿದ್ದರೂ ಅವನ ಸ್ನೇಹ, ಶ್ರೀಕಂಠ ಕಳೆದು ಹೋದದ್ದು, ಬಹಳಷ್ಟು ದಿನ ಆತನನ್ನು ಹುಡುಕಲು ಪಟ್ಟ ಪರಿಪಾಟಲು, ಆತನಿಲ್ಲದಾಗ ಇವರು ಅವರ ಮನೆಗೆ ಹೋಗಿದ್ದು, ಕ್ಯಾಸೆಟ್ ತಂದಾಗ ಅದರಲ್ಲಿ ಸಿಕ್ಕ ಮುಖ್ಯವಾದ ಸುಳಿವು, ಐ ಲವ್ ಯು ಗೋವಾ ಎಂದಿದ್ದ ಆತನ ರಾಜದೂತ ಬೈಕು ಎಲ್ಲವೂ ನೆನಪಾಯಿತು. ಕಳೆದು ಹೋದವನು ಸಿಕ್ಕ ನಂತರ ಇಬ್ಬರು ಮತ್ತೆ ಒಂದಾಗಿದ್ದರು. ಅವನ ಸಾವಿನ ಕಾರಣದಿಂದ ಇವತ್ತು ಲಾಫಿಂಗ್ ಕ್ಲಬ್ ಬೇಡವೇ ಬೇಡ ಮೌನಾಚರಣೆ ಮಾಡೋಣ ಎಂದು ಬಹಳಷ್ಟು ಜನರು ಹೇಳಿದರೂ.. ಅನಂತ ಭಟ್ಟರು ಅದಕ್ಕೆ ಒಪ್ಪದೇ ಲಾಫಿಂಗ್ ಕ್ಲಬ್ ಅನ್ನು ಸೇರಿದ್ದೇಕೆ ?


ಮರೆವಿನ ಬಳ್ಳಿ : ಸಂದೀಪ ಕಾರ್ಪೊರೇಟ್ ಲೀಡರ್ಶಿಪ್ ತರಬೇತಿ ಕಂಪನಿಯೊಂದು ಆಯೋಜಿಸಿದ ಒಂದು ದಿನದ ತರಬೇತಿಗೆ ಹೋಗಲೇ ಬೇಕಾಗಿತ್ತು. ಸರಿಯಾದ ಸಮಯಕ್ಕೆ ಹೋದರೆ ಮಾತ್ರ ಕಾರ್ಯಕ್ರಮದ ಪೂರ್ಣ ಅರಿವು ಜೊತೆಗೆ ಹಾಜರಿಯೂ ಸಿಗುತ್ತಿತ್ತಾದ್ದರಿಂದ.. ತನ್ನ ಐಫೋನ್ ನಲ್ಲಿ ಜಿ.ಪಿ.ಎಸ್ ಆನ್ ಮಾಡಿಕೊಂಡು ಹೊರಟ. ಆದರೆ, ದೂರದಿಂದ ಫ್ಲೈ ಓವರ್ ಕಡೆಗೆ ನೋಡಿದಾಗ ಸಾವಿರ ರಸ್ತೆಗಳು ಒಂದಕ್ಕೊಂದು ಗಂಟು ಹಾಕಿಕೊಂಡಂತೆ.. ಇದರ ಪ್ರವೇಶದಲ್ಲಿ ನಿರ್ಗಮನವೆಲ್ಲಿ ಎಂದು ಅರ್ಥವಾಗದ ಸಂದರ್ಭದಲ್ಲಿ ತನ್ನ ಬಾಲ್ಯ ನೆನಪಾಗಿತ್ತು.

 ಇಬ್ಬರು ಅಜ್ಜಿಯರ ಜೊತೆಗೆ ಹಡೀಲಿಗೆ ಹೋಗುವ ಸಂದರ್ಭದಲ್ಲಿ ಹೀಗೆ ರಸ್ತೆಯೊಂದು ಸಿಕ್ಕು, ದಾರಿ ತಪ್ಪಿ ಅವರು ಮರವಿನ ಬಳ್ಳಿ ದಾಟಿರಬಹುದು ಎಂಬ ಉಳಿದವರ ಊಹೆ ನಿಜವಾಗಿದ್ದರೂ.. ಸುರಕ್ಷಿತವಾಗಿ ಮತ್ತೆ ಎಲ್ಲರ ಜೊತೆಗೂಡಿದ್ದರು. ಮರೆವಿನ ಬಳ್ಳಿಗೂ ಈಗಿನ ಸಂದರ್ಭಕ್ಕೂ ಇರುವ ಸಾಮ್ಯತೆಯೇನು ? ಆತ ಅಂದಿನ ತರಬೇತಿಗೆ ಹಾಜರಾದನೇ..??


ಕುತೂಹಲ : ಯಾವತ್ತಿಗೂ ಒಬ್ಬರ ಬದುಕಿನ ಬಗೆಗೆ ಮತ್ತೊಬ್ಬರಿಗೆ ತೀರದ ಕುತೂಹಲವೇ.. ಎಷ್ಟು ತಿಳಿದರೂ.. ಅದಷ್ಟೇ ಅಲ್ಲ ಮತ್ತೇನೋ ಇರಬೇಕು ಎನ್ನುವುದನ್ನು ತಲೆಯಲ್ಲಿಟ್ಟುಕೊಂಡು ಅವರ ಹಿಂದೆ ಹೋಗಿ ವಿಷಯ ಸಂಪಾದಿಸುವುದರಲ್ಲಿ ಕಡಿಮೆ ಏನಿರಲಿಲ್ಲ. ಇದು ದೊಡ್ಡವರಿಗೆ ಮಾತ್ರವಲ್ಲ.. ಮಕ್ಕಳಿಗೆ ಸೇರಿದ ವಿಚಾರವೂ ಹೌದು. ಲಕ್ಷ್ಮತ್ತೆಯ ಮನೆಗೆ ಬೇಸಿಗೆ ರಜೆಗೆ ಬಂದ ವಿನಯ ಕ್ರಿಕೆಟ್ ಆಡಲು ನಡೆದ ಸಂದರ್ಭದಲ್ಲಿ ಪಕ್ಕದಲ್ಲಿದ್ದ ವಿಠಲ, ಮಂಗೇಶ ಶೆಟ್ಟರ ಮನೆಯ ಹತ್ತಿರ ಬರುವಾಗ ಆತನೇ ತನ್ನ ಅಪ್ಪನನ್ನು ಕೊಂದಿದ್ದು ಎನ್ನುತ್ತಾ ಜೋರಾಗಿ ಅಳಲು ಪ್ರಾರಂಭಿಸಿದ. ವಿನಯನಿಗೆ ಕುತೂಹಲ ಹುಟ್ಟಿ ಆತನನ್ನು ವಿಚಾರಿಸಿದಾಗ ಮರುದಿನ ತಿಳಿದ ಸತ್ಯವೇನು..?? ಅದರಲ್ಲಿದ್ದ ಸತ್ಯವೆಷ್ಟು ? ಕುತೂಹಲ ಯಾವುದಕ್ಕೆ ದಾರಿ ಮಾಡಿಕೊಟ್ಟಿತು ? ಕುತೂಹಲದಿಂದ ನಾವು ಮತ್ತೊಬ್ಬರ ಬದುಕನ್ನು ಕೆದಕಲು ಹೊರಡುತ್ತೇವೆ. ಅದು ತನ್ನ ಅಂತರಂಗಕ್ಕೆ ಕನ್ನಡಿ ಹಿಡಿದಾಗ ಆಗುವ ಹುಟ್ಟುವ ಭಾವನೆಗಳೇನು ಎಂಬುದನ್ನು ಚಂದವಾಗಿ ಕಟ್ಟಿಕೊಟ್ಟಿರುವ ಕಥೆ.


ಮುಹೂರ್ತ : ಮಂಜುನಾಥ ಹೆಬ್ಬಾರರಿಗೆ ತನ್ನ ಸಮವಯಸ್ಕರೇ ಆಗಿದ್ದ ಗೋಪಾಲಕೃಷ್ಣ ಭಟ್ಟರು ಜ್ಯೋತಿಷ್ಯ ಹೇಳುತ್ತಿದ್ದರು. ಅವರ ಮೂರು ತಲೆಮಾರಿನವರಿಗೂ ಇವರ ಮನೆಯವರೆ ಜ್ಯೋತಿಷ್ಯ ಹೇಳುತ್ತಿದ್ದದ್ದು. ಈಗ ಪೇಟೆಗೆ ಬಂದಿದ್ದರಿಂದ ಅವರ ಮಗ ಸುಬ್ರಹ್ಮಣ್ಯ ಭಟ್ಟರ ಬಳಿ ಜ್ಯೋತಿಷ್ಯ ಕೇಳುತ್ತಿದ್ದರು. ಹೆಬ್ಬಾರರು ಜ್ಯೋತಿಷ್ಯವನ್ನು ನಂಬುತ್ತಿದ್ದರಾದರೂ.. ಇತ್ತೀಚೆಗೆ ಸುಬ್ರಹ್ಮಣ್ಯ ಭಟ್ಟರ ಮೇಲೆ ಕೋಪದಲ್ಲಿದ್ದರು. ಅದಕ್ಕೆ ಕಾರಣ ಮಂಜುನಾಥ ಹೆಬ್ಬಾರರ ಸೊಸೆಗೆ ಹೆರಿಗೆಯ ಸಮಯ. ಡಾಕ್ಟರ್ ನಾರ್ಮಲ್ ಹೆರಿಗೆ ಕಷ್ಟವೆಂದೂ.. ಸಿಜೇರಿಯನ್ ಆದರೆ ಒಳ್ಳೆಯದು. ಯಾವ ದಿನ ಯಾವ ಸಮಯಕ್ಕೆ ಎಂದು ಕೇಳಿದಾಗ ಯಮುನಾ ಮತ್ತು ಗುರುಪ್ರಸಾದ್ ದಂಪತಿಗಳು ಸುಬ್ರಮಣ್ಯ ಭಟ್ಟರಲ್ಲಿ ಬಂದು ಸಮಯ ಕೇಳಿಕೊಂಡು ಹೋಗಿದ್ದರು. ಸ್ವಾಭಾವಿಕವಾಗಿ ನಡೆಯುತ್ತಿದ್ದ ಪ್ರಕ್ರಿಯೆಯನ್ನು ಮಾನವ ತನ್ನ ಅಧೀನಕ್ಕೆ ತೆಗೆದುಕೊಳ್ಳುತ್ತಿರುವ ಭಾವನೆ ಹುಟ್ಟಿದ ಮಂಜುನಾಥ ಹೆಬ್ಬಾರರು ಸುಬ್ರಮಣ್ಯ ಭಟ್ಟರನ್ನು ಜಾಡಿಸಲೆಂದೇ ಬಂದಿದ್ದರು. "ಅವರಿಗೆ ಯಾವ ಯೋಗ ಬೇಕೋ ಅದೇ ಸಮಯ ಕೊಟ್ಟೆಯಂತಲ್ಲ.. ಯಾರೂ ಕೆಟ್ಟ ಗಳಿಗೆಯಲ್ಲಿ ಹುಟ್ಟಲಿಕ್ಕೆ ಸಾಧ್ಯವೇ ಇಲ್ಲವೇ..?? ಎಷ್ಟು ಅಸಹಜ ಕೆಲಸ" ಎಂದು ದೂರಿದಾಗ ಸುಬ್ರಮಣ್ಯ ಭಟ್ಟರು ಕೊಟ್ಟ ಉತ್ತರವೇನು..??

 ಇಲ್ಲಿ ಸಮಯದ ವಿಚಾರ ಒಬ್ಬರಿಗೆ ಸಹಜವಾದರೆ ಮತ್ತೊಬ್ಬರಿಗೆ ಅಸಹಜ. ತಲೆಮಾರುಗಳ ಆಲೋಚನೆಯ ಕಂದಕವು ಇಲ್ಲಿ ಸ್ಪಷ್ಟವಾಗಿ ಕಾಣಿಸುತ್ತದೆ. ಜೊತೆಗೆ ಯಮುನಾಳ ಹೆರಿಗೆ ಹಾಗೂ ಆ ತಲೆಮಾರಿನ ಯೋಚನೆಗೂ ಆಕೆಯ ತಾಯಿಯ ಆಲೋಚನೆಗೂ ಇದ್ದ ವ್ಯತ್ಯಾಸವು ಮತ್ತೊಂದು ಬಗೆಯಲ್ಲಿ ಚಿತ್ರಿತವಾಗಿದೆ.


ಇಲ್ಲಿನ ಕಥೆಗಳಲ್ಲಿ ಲಾಫಿಂಗ್ ಕ್ಲಬ್ ಹಾಗೂ ಮರೆವಿನ ಬಳ್ಳಿ ಕತೆಗಳು ಬೇರೆಯ ಕಥನ ತಂತ್ರದಿಂದ ಕೂಡಿವೆ, ಕಥೆಯೊಳಗೊಂದು ಕಥೆ ಅಥವಾ ಇಂದಿನ ಸಂದರ್ಭಕ್ಕೂ ಬಾಲ್ಯಕ್ಕೂ ಇರುವ ನಂಟೊಂದು ಕಾಣಿಸುತ್ತದೆ. ಎಲೆಕ್ಟ್ರಿಕ್ ಜಾಗಟೆ ಹಾಗೂ ಮೂಹೂರ್ತ ಕಥೆಗಳಲ್ಲಿ ಬದಲಾಗುತ್ತಿರುವ ತಲೆಮಾರಿನವರೊಂದಿಗೆ ಸಾಗದ ತಮ್ಮದೇ ಆಲೋಚನೆಯಲ್ಲಿ ಮುಳುಗಿರುವ ಮತ್ತೊಂದು ತಲೆಮಾರಿನ ವಿಚಾರವೂ ಕಾಣಿಸಿತ್ತದೆ. ಇಲ್ಲಿ ಎರಡರ ಸ್ಪಷ್ಟತೆಯೂ ಇದೆ. ಆಲೋಚನೆಗೆ ಹಚ್ಚುವ ಚಂದದ ಕಥಾಸಂಕಲನದ ಸುಲಲಿತ ಓದು.


~ವಿಭಾ ವಿಶ್ವನಾಥ್

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ