ಪುಸ್ತಕದ ಶೀರ್ಷಿಕೆ : ಬೆಳ್ಳಿ ಚಂದ್ರಮ
ಲೇಖಕರು : ಹೆಚ್. ಜಿ. ರಾಧಾದೇವಿ
ಪ್ರಕಾಶಕರು : ಶ್ರೀ ಲಕ್ಷ್ಮೀ ವೆಂಕಟೇಶ್ವರ ಪ್ರಕಾಶನ
ಎರಡನೇ ಮುದ್ರಣ : 2022 (ನನ್ನ ಓದಿಗೆ ಸಿಕ್ಕಿದ್ದು)
ಮನದಲ್ಲಿ ಮೂಡಿದ ಅಸಮಾಧಾನದ ಕತ್ತಲೆ ತೊಲಗಿ, ಪ್ರೀತಿ-ಪ್ರೇಮದ ಬೆಳ್ಳಿ ಚಂದ್ರಮ ಎಂದು ಮೂಡುತ್ತಾನೋ ಅಂದಿನಿಂದ ನಮ್ಮ ದಾಂಪತ್ಯ ಜೀವನವೆಂದು ಗಂಡನಿಗೆ ಖಡಾಖಂಡಿತವಾಗಿ ಹೇಳಿದ ದಿಟ್ಟ ಹೆಣ್ಣೊಬ್ಬಳ ಕಥೆ ಇಲ್ಲಿದೆ. ಎಷ್ಟೋ ಗೃಹಿಣಿಯರು ತನ್ನ ಗಂಡ ಹೇಗಿದ್ದರೂ ಸರಿ ಎನ್ನುವ ಮನೋಭಾವದಲ್ಲಿರುತ್ತಾರೆ. ಇನ್ನು ಕೆಲವರು ಹೀಗಾಯಿತಲ್ಲಾ ಎಂದು ಅಶಾಂತಿಯಿಂದ ತೊಳಲುತ್ತಾರೆ. ಇನ್ನು ಕೆಲವರಿಗೆ ತವರಿನಲ್ಲಿ ಬೆಂಬಲವಿರುವುದಿಲ್ಲ. ಇಲ್ಲವೇ.. ಸಮಾಜದ ಭಯವಿರುತ್ತದೆ. ಇಲ್ಲವೇ ಕೆಲಸವಿರುವುದಿಲ್ಲ. ಇವೆಲ್ಲವೂ ಇದ್ದು ಆರ್ಥಿಕವಾಗಿ ಸಬಲವಾಗಿರುವ ಎಷ್ಟೋ ಹೆಂಗಸರು ಸಹಾ ಗಂಡಿನ ದಬ್ಬಾಳಿಕೆಯನ್ನು, ಆತ ಮಾಡುವ ಕುತಂತ್ರಗಳನ್ನೂ ಸಹಿಸಿ ಬಾಳುವುದು ಇದ್ದೇ ಇದೆ. ಪ್ರೇಮ ವಿವಾಹವಾದರಂತೂ.. ಮನೆಯವರು ತಮ್ಮ ಮೇಲೆ ತಪ್ಪು ತಿಳಿಯುತ್ತಾರೆ ಎಂದು ಎಲ್ಲವನ್ನು ಸರಿದೂಗಿಸಿಕೊಂಡು ಹೋಗುತ್ತಾರೆ. ಆದರೆ, ಇಲ್ಲಿನ ಕಥಾ ನಾಯಕಿ ವಿಭಿನ್ನವಾಗಿ ತನ್ನ ಗಂಡನಿಗೆ ಪಾಠ ಕಲಿಸಿ, ಆತನನ್ನು ಸರಿ ಮಾಡಲೇಬೇಕು ಎನ್ನುವ ಹಾದಿಯಲ್ಲಿ ಸಾಗುತ್ತಿರುವಾಗ ಅವಳಿಗೆ ಎದುರಾದ ಸಮಸ್ಯೆಗಳು, ಅಡೆ-ತಡೆಗಳು ಹಾಗೂ ಆಕೆ ಅದೆಲ್ಲದರ ಮೂಲಕ ಹಾದುಹೋದ ಕಥೆಯಿದೆ.
ಈ ಕಾದಂಬರಿಯಲ್ಲಿ ಮೊದಲಿಗೆ.. ಶಿಕ್ಷಕಿಯಾದ ಗಾಯತ್ರಿ ಯ ಪ್ರಸ್ತಾಪ ಬರುವುದರಿಂದ ಆಕೆಯೇ ಈ ಕಾದಂಬರಿಯ ನಾಯಕಿ ಎಂದುಕೊಂಡಿದ್ದೆ. ಆದರೆ, ಗಾಯಿತ್ರಿಯದ್ದು ಇಲ್ಲಿ ಪ್ರಮುಖ ಪಾತ್ರವಿದ್ದದೂ ಇದು ಶರ್ಮಿಲಳ ಕಥೆ.
ಇಲ್ಲಿ ನನಗೆ ಗಾಯಿತ್ರಿ ಹಾಗೂ ಗಾಯಿತ್ರಿಯ ಚಿಕ್ಕಮ್ಮನ ಮೂಲಕ ಮಾತುಕತೆಯಲ್ಲಿ ವಿಮರ್ಶೆಯ ಕುರಿತಾಗಿ ಹೇಳಿರುವ ವಿಚಾರಗಳು ಬಹಳ ಇಷ್ಟವಾದವು. ಅಲ್ಲದೇ.. ಎಷ್ಟು ನಿಜವಲ್ಲವಾ..! ಎನ್ನಿಸಿತು. ಹಾಗಾಗಿ ನಾನು ಮೆಚ್ಚಿದ ಆ ವಿಚಾರಗಳ ಕುರಿತು ಇಲ್ಲಿ ಹಾಗೆಯೇ ಉಲ್ಲೇಖಿಸುತ್ತೇನೆ.
"ಮನುಷ್ಯನಿಗೆ ಒಂದು ಅಧಿಕಾರ ಕೊಟ್ಟು ಇನ್ನೊಬ್ಬರ ಕೆಲಸ ಪರಿಶೀಲಿಸಿ ಒಳಿತು ಕೆಡುಕನ್ನೇ ಹುಡುಕು ಅಂದ್ರೆ ಒಳಿತಿಗಿಂತ ಕೆಡುಕೇ ಜಾಸ್ತಿ ಹುಡುಕುತ್ತಾನೆ. ಒಬ್ಬ ಮನುಷ್ಯ ತಾನು ದುರ್ಬಲವಾದಷ್ಟು ಇನ್ನೊಬ್ಬರ ದೌರ್ಬಲ್ಯ ಹುಡುಕ್ತಾನೆ. ಜನಪ್ರಿಯ ಕಾದಂಬರಿಗಳಲ್ಲಿ ಹುರುಳೇ ಇರಲ್ಲ ಅನ್ನೋರು ಅದರಲ್ಲಿನ ಹುಳುಕು ಏಕೆ ಹುಡುಕಬೇಕು..? ಹೇಗೋ ಜನ ಮೆಚ್ಚುತ್ತಾರೆ. ಪ್ರಕಾಶಕರು ಪ್ರಕಟಿಸುತ್ತಾರೆ ಅಂತ ಆದರೆ ಗೊಡವೆ ಬಿಟ್ಟು ತಾವು ಮೆಚ್ಚಿದ ಶ್ರೇಷ್ಠ ಕೃತಿಯನ್ನು ಜನರಿಗೆ ಪರಿಚಯ ಮಾಡಿಸಿ ಕೊಡಬೇಕು."
ಜನಸಾಮಾನ್ಯರಿಗೆ ತಿಳಿಯೋ ಅಪರಿಚಿತವಾದ ಅಪೂರ್ವ ಕೃತಿಗಳು, ಅವುಗಳ ಮೌಲ್ಯ ಸಾಮಾನ್ಯ ಜನರಿಗೆ ತಿಳಿಯೋ ಹಾಗೆ, ಪುಸ್ತಕ ಓದಿಲ್ಲದವರಿಗೆ ಅದರಲ್ಲಿ ಏನಿದೆ ಅನ್ನೋದನ್ನ ಸೊಗಸಾಗಿ ವಿವರಿಸುವ ಮಯೂರ ಪತ್ರಿಕೆಯ ಡಾ|| ಮರುಳ ಸಿದ್ದಪ್ಪ ಅವರ ಪುಸ್ತಕ ಪರಿಚಯದ ಕುರಿತಾಗಿ ಹೇಳಿದ್ದಾರೆ.
ವಿಮರ್ಶಕ ನಿಜವಾಗಿ ವಿದ್ವಾಂಸನೂ ಆದರೆ ಇಂಥಹಾ ಕೆಲಸ ಮಾಡಲಿಕ್ಕೆ ಸಾಧ್ಯ. ವಿಮರ್ಶೆ ಅಂದರೆ ಸಾಮಾನ್ಯ ಕೃತಿಗಳಲ್ಲಿ ತಪ್ಪು ಹುಡುಕಿ ಬೈತಾ ಕೂರೋದಲ್ಲ. ಕನ್ನಡದಲ್ಲಿ ಪ್ರಕಟವಾದ ಜನಸಾಮಾನ್ಯರಿಗೆ ಅಪರಿಚಿತವಾದ, ಕೆಲವು ಸಲ ಅರ್ಥವೂ ಆಗಲಾರದ ಅಪರೂಪದ ಗ್ರಂಥಗಳ ಬಗ್ಗೆ, ಆದರ ವೈಶಿಷ್ಟ್ಯದ ಬಗ್ಗೆ ರಸಭರಿತವಾಗಿ ವಿವರಿಸಿ ಜನಸಾಮಾನ್ಯರಿಗೆ ಅದರ ಬಗ್ಗೆ ಓದಬೇಕೆನ್ನುವ ಪ್ರಚೋದನೆ ಹುಟ್ಟಿಸುವುದು." ಎನ್ನುವ ಮಾತು ಎಷ್ಟು ನಿಜವಲ್ಲವಾ ಎನಿಸಿತು
ಕಾದಂಬರಿಯ ಕಥಾವಸ್ತುವಿಗೆ ಬರುವುದಾದರೆ..
ಶರ್ಮಿಲ ಹಾಗೂ ಗಾಯಿತ್ರಿ ಇಬ್ಬರೂ ಒಂದೇ ಶಾಲೆಯಲ್ಲಿ ಶಿಕ್ಷಕಿಯರಾಗಿದ್ದವರು. ಗಾಯಿತ್ರಿಯ ಮನೆ ಅಲ್ಲಿಯೇ ಹತ್ತಿರದಲ್ಲಿದ್ದು.. ಅವರ ಮನೆಯ ಪೇಯಿಂಗ್ ಗೆಸ್ಟ್ ಆಗಿ ಬರಲು ತಾನು ಸಿದ್ಧಳಿದ್ದೇನೆಂದು ಶರ್ಮಿಲ ಕೇಳಿದಾಗ ತಾಯಿಯನ್ನು ಕೇಳಿ ಹೇಳುತ್ತೇನೆ ಎಂದಿದ್ದಳು ಗಾಯಿತ್ರಿ. ಅಪ್ಪ-ಅಮ್ಮನಿಗೆ ಒಬ್ಬಳೇ ಮುದ್ದಿನ ಮಗಳು ಗಾಯಿತ್ರಿ. ಆಕೆಗೆ ವಿವಾಹಕ್ಕೆಂದು ವರನನ್ನು ಹುಡುಕುತ್ತಿದ್ದರಾದರೂ.. ಆಕೆಯ ತಾಯಿ ಶಾರದಮ್ಮನವರಿಗೆ ತನ್ನ ಅಣ್ಣನ ಮಗನಾದ ಗೋವಿಂದನಿಗೆ ವಿವಾಹ ಮಾಡಿಕೊಡಬೇಕೆಂಬ ಮನಸಿತ್ತು. ಆದರೆ, ಅವನ ಹಣದ ದುರಾಸೆ ತಿಳಿದಿದ್ದ ಗಾಯಿತ್ರಿಗೆ ಆ ಕುರಿತು ಮನಸ್ಸಿರಲಿಲ್ಲ. ತಂದೆ ರಾಜಾರಾಯರದ್ದು ಮಗಳು ಯಾವ ಆಯ್ಕೆ ಮಾಡಿಕೊಳ್ಳುತ್ತಾಳೋ ಅದರಂತೆ ಎನ್ನುತ್ತಾ ಆಕೆಗೆ ಸಂಪೂರ್ಣ ಸ್ವಾತಂತ್ರವನ್ನು ಕೊಟ್ಟಿದ್ದರು. ಓದಿನ, ಕೆಲಸದ ವಿಷಯದಲ್ಲಿಯೂ ಅಷ್ಟೇ..
ಶರ್ಮಿಲಳ ತಂದೆ-ತಾಯಿಗೆ ನಾಲ್ಕು ಜನ ಮಕ್ಕಳು. ಇಬ್ಬರು ಗಂಡು ಮಕ್ಕಳು ತಂದೆಯ ಜವಳಿ ಅಂಗಡಿಯನ್ನು ನೋಡಿಕೊಳ್ಳುತ್ತಿದ್ದರೆ, ಅಕ್ಕನ ಮದುವೆಯಾಗಿತ್ತು. ಶರ್ಮಿಲ ಟ್ಯೂಷನ್ ಗೆ ಹೋಗುತ್ತಿದ್ದಾಗ ಹೈಸ್ಕೂಲಿನ ಉಪಾಧ್ಯಾಯನಾಗಿದ್ದ ರಂಗನಾಥನನ್ನು ಪ್ರೇಮಿಸಿದ್ದಳು. ಆಕೆ ಆತನ ರೂಪಕ್ಕೆ ಮರುಳಾಗಿದ್ದರೆ, ಆ ಊರಿಗೆ ಶ್ರೀಮಂತರ ಮನೆಯ ಹುಡುಗಿಯೆಂದು ರಂಗನಾಥ ಅವಳನ್ನು ಮೆಚ್ಚಿದ್ದ. ಹಾಗೆಂದು, ಶರ್ಮಿಲಾ ಮನೆಯವರು ಆತನನ್ನು ಬಡವರೆಂದು ಕೀಳಾಗಿ ಕಾಣಲಿಲ್ಲ. ಬದಲಾಗಿ ರಂಗನಾಥನೇ ಅವರು ಹಣ ಕೊಟ್ಟರೂ ತೆಗೆದುಕೊಳ್ಳದೆ, ತಾನು ಶ್ರೀಮಂತಿಕೆಗೆ ಮರುಳಾಗಿಲ್ಲವೆಂದೇ ತೋರಿಸಿಕೊಳ್ಳುತ್ತಿದ್ದ.
ರಂಗನಾಥನಿಗೆ ಇಬ್ಬರು ಅಕ್ಕಂದಿರು ಹಾಗೂ ಇಬ್ಬರು ತಂಗಿಯರು. ಅಕ್ಕಂದಿರ ವಿವಾಹವಾಗಿ ತಂಗಿಯರು ಕೆಲಸ ಮಾಡುತ್ತಿದ್ದರು. ಆತನ ವಿವಾಹದ ನಂತರವೂ ಹಣ ಸೇರಿಸಿ, ತಂಗಿಯರಿಗೆ ಮದುವೆ ಮಾಡಬೇಕು ಎನ್ನುವ ವಿಚಾರವನ್ನು ಹೇಳಿಯೇ ವಿವಾಹವಾಗಿದ್ದ. ಶರ್ಮಿಲಾ ವರ್ಷಕ್ಕೊಮ್ಮೆ ಏಪ್ರಿಲ್ ರಜೆಯಲ್ಲಿ ಒಂದು ತಿಂಗಳು ಅತ್ತೆಯ ಮನೆಯಲ್ಲಿರುತ್ತಿದ್ದಳು. ಎಲ್ಲರೂ ಸ್ನೇಹದಿಂದಲೇ ಇದ್ದರು. ಕ್ರಮೇಣ ಮಕ್ಕಳಾದ ಬಳಿಕ ಶರ್ಮಿಲ ಅತ್ತ ಹೋಗುವುದನ್ನು ಕಡಿಮೆ ಮಾಡಿದ್ದಳು. ಹಾಗೆಂದು, ಮೊಮ್ಮಕ್ಕಳು ಎಂಬ ಪ್ರೀತಿಯನ್ನು ಅವರೂ ತೋರದೆ, ಹೆಣ್ಣುಮಕ್ಕಳ ಮಕ್ಕಳನ್ನೇ ಮೊಮ್ಮಕ್ಕಳ ಪ್ರೀತಿ ತೋರಿಸಿ ನೋಡಿಕೊಳ್ಳುತ್ತಿದ್ದರು. ಹಾಗಾಗಿ ಹೆಚ್ಚಿನ ಬಾಂಧವ್ಯವೇನೂ ಕಾಣುವುದಿಲ್ಲ.
ಶರ್ಮಿಲಾ ಕೂಡ ಶಿಕ್ಷಕಿಯಾಗಿದ್ದರಿಂದ ಬಂದ ಹಣದಲ್ಲಿ ಮನೆ ಸಂಸಾರವನ್ನು ನಡೆಸುತ್ತಿದ್ದಳು. ಇಬ್ಬರು ಮಕ್ಕಳನ್ನು ಚೆನ್ನಾಗಿ ಓದಿಸುತ್ತಾ.. ಎಲ್ಲವನ್ನು ತೂಗಿಸಿಕೊಂಡು ಹೋಗುತ್ತಿದ್ದಳು. ಮೊದಲು ರಂಗನಾಥನ ಮಾತಿನಂತೆ.. ಆಕೆ ಗೃಹಿಣಿಯಂತೆ ಎಲ್ಲವನ್ನು ನಿಭಾಯಿಸುತ್ತಾ ಇದ್ದವಳಿಗೆ ಜ್ಞಾನೋದಯವಾಗಿದ್ದು ಕೊಂಚ ತಡವಾಗಿಯೇ.. ಆತ ತನ್ನ ತವರಿನಿಂದ ಏನನ್ನೂ ತೆಗೆದುಕೊಂಡಿರಲಿಲ್ಲವಾದರೂ. ಆಕೆಗೂ ಏನನ್ನೂ ತೆಗೆದು ಕೊಟ್ಟಿರಲಿಲ್ಲ ಹಾಗೂ ತನ್ನ ಅಲಂಕಾರ, ಸ್ವಾರ್ಥಕ್ಕೆ ತನ್ನ ಹಣವನ್ನೆಲ್ಲಾ ಖರ್ಚು ಮಾಡುತ್ತಿದ್ದ ಎನ್ನುವುದರ ಅರಿವಾದ ನಂತರ ಕೆಲಸದವರನ್ನು ಇಟ್ಟುಕೊಂಡು ನಿರಾಳವಾದಳು ಶರ್ಮಿಲಾ.
ಮದುವೆಯಾದ ಆರು ವರ್ಷದ ನಂತರ ಒಮ್ಮೆ ಆತನಿಗೆ ವರ್ಗಾವಣೆಯಾದಾಗ ಆತನ ಜೊತೆಗೆ ಹೋಗದೆ ಬಿಂಕ ತೋರಿತಳಾದರೂ.. ನಂತರ ಹೋಗಿ ಕೆಲಸದವಳಂತೆ ಜೀವನ ನಡೆಸಲೂ ಆಗಲಿಲ್ಲ. ಒಂಟಿತನ ಕಷ್ಟವೆಂಬುದರ ಅರಿವಾಗಿ ಮತ್ತೆ ಇಬ್ಬರೂ ಒಂದಾಗಿದ್ದರು. ಈಗ 12 ವರ್ಷದ ನಂತರ ಮತ್ತೊಮ್ಮೆ ರಂಗನಾಥನಿಗೆ ವರ್ಗಾವಣೆಯಾಗಿತ್ತು. ಮೊದಲಿದ್ದಷ್ಟು ಅನುರಾಗ ಇಬ್ಬರಲ್ಲೂ ಇರಲಿಲ್ಲ. ತಂಗಿಯರ ವಿವಾಹಕ್ಕೆ ಆತ ಖರ್ಚು ಮಾಡಿದ್ದೆನೆಂದು ತೋರಿಸಿಕೊಂಡ ಹಣವಷ್ಟೂ ಖರ್ಚಾಗಿರಲಿಲ್ಲ. ಅಲ್ಲದೇ.. ಅಕ್ಕನ ಮಗಳು ವಾಸಂತಿಯನ್ನು ಓದಿಸುತ್ತೇನೆಂದು ಹಾಗೂ ಅಕ್ಕನ ಸಂಸಾರವನ್ನು ನೋಡಿಕೊಳ್ಳುತ್ತಾ.. ಅತ್ತ ತಂದೆ-ತಾಯಿ ಹಾಗೂ ಇತ್ತ ಹೆಂಡತಿಗೂ ಕಣ್ಣಿಗೆ ಮಣ್ಣೆರಚಿ ಕಳ್ಳಾಟ ನಡೆಸುತ್ತಿದ್ದ.
ಶರ್ಮಿಲಾಳಿಗೆ ಇದಾವುದೂ ಗೊತ್ತಿಲ್ಲದಿದ್ದರೂ.. ಆತನ ನಡೆಯಿಂದ ರೋಸಿ ಹೋಗಿದ್ದರಿಂದ ಈ ಬಾರಿ ವರ್ಗಾವಣೆ ಮಾಡಿಸಿಕೊಳ್ಳಲಿ ಎಂದು ತನ್ನ ಮಕ್ಕಳನ್ನು ತವರಿಗೆ ಕಳಿಸಿ, ಮನೆ ಖಾಲಿ ಮಾಡಿ ಪೇಯಿಂಗ್ ಗೆಸ್ಟ್ ಆಗಿ ಗಾಯಿತ್ರಿಯ ಮನೆಯಲ್ಲಿ ಉಳಿದಳು.
ಭಾವನ ಕಿರಿಯ ತಮ್ಮನಾಗಿದ್ದ ರಮಾನಂದ ಆಗಾಗ ಶರ್ಮಿಲಾಲನ್ನು ಮಾತನಾಡಿಸಲು ಬರುತ್ತಿದ್ದನು. ಇದನ್ನು ನೋಫಿದ ರಂಗನಾಥ ಆಕೆಯ ಮೇಲೆ ತಪ್ಪಾಗಿ ಅರ್ಥ ಮಾಡಿಕೊಂಡಿದ್ದನು. ಆದರೆ, ನಿಜ ವಿಷಯ ಬೇರೆಯೇ ಇತ್ತು. ಆತನಿಗೂ.. ಗಾಯಿತ್ರಿಗೂ ವಿವಾಹ ನಿಷ್ಕರ್ಷೆಯಾಗಿದ್ದು ಶರ್ಮಿಲಾಳ ದೆಸೆಯಿಂದಲೇ.
ರಂಗನಾಥ ಕೆಲವೊಮ್ಮೆ ಬಿಂಕ ತೋರಲು ಹೋಗಿ ಕೈ ಸುಟ್ಟುಕೊಂಡ. ಅತ್ತ ವಾಸಂತಿಯೂ ದಕ್ಕಲಿಲ್ಲ. ಇತ್ತ ಶರ್ಮಿಲಾಳಿಗೆ ವಾಸಂತಿ ಹಾಗೂ ರಂಗನಾಥನ ವಿಚಾರ ತಿಳಿದಾಗಿತ್ತು. ಶರ್ಮಿಲಾಳ ಮುಂದಿನ ನಡೆಯೇನು..?? ರಂಗನಾಥನಿಗೆ ತಕ್ಕ ಶಾಸ್ತಿ ಮಾಡಿದಳೇ ಅಥವಾ ರಂಗನಾಥನಿಗೆ ಪಾಠ ಕಲಿಸುವ ಭರದಲ್ಲಿ ತನ್ನ ಬದುಕನ್ನು ಬಲಿಕೊಟ್ಟಳೇ..?
ಸಂಸಾರದಲ್ಲಿ ಮೊದಲಿನ ಅನುರಾಗವಿಲ್ಲದೆ, ಮೂಗುಬ್ಬಸದಲ್ಲಿಯೇ.. ಸಂಸಾರ ನಡೆಯುತ್ತಿದ್ದಾಗ ಶರ್ಮಿಲಾ ಮೊದಮೊದಲು ಸಹಿಸಿಕೊಂಡಳಾದರೂ.. ನಂತರ ಎಚ್ಚೆತ್ತುಕೊಂಡಳು. ಹೆಣ್ಣು ಮಕ್ಕಳು ಈ ರೀತಿ ನಡೆದುಕೊಳ್ಳಲು ಆರ್ಥಿಕ ಸಬಲತೆ ಹಾಗೂ ತವರಿನವರ ಸಹಕಾರವೂ ಮುಖ್ಯ ಎಂಬುದರ ಅರಿವಾಗುತ್ತದೆ. ಆಕಾಶದಲ್ಲಿ ಕಾಣುವ ಚಂದಿರನಂತೆ, ದೂರದ ನೋಟಕ್ಕೆ ಚಂದವಾಗಿ ಕಾಣಿಸುವ ಸಂಸಾರಗಳೂ.. ಎನ್ನಿಸಿದರೂ.. ಸಂಸಾರದಲ್ಲಿ ಬೆಳ್ಳಿ ಚಂದ್ರಮ ಮೂಡಿದರೆ ಮಾತ್ರವೇ ದಾಂಪತ್ಯಕ್ಕೊಂದು ಸೊಗಸು ಹಾಗೂ ಅರ್ಥ ಎನ್ನಿಸುವಂತೆ ಮಾಡಿತು.
~ವಿಭಾ ವಿಶ್ವನಾಥ್
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ