ಶುಕ್ರವಾರ, ಏಪ್ರಿಲ್ 17, 2026

ಮುದ್ದಿನ ಮನದನ್ನೆ (ಪುಸ್ತಕ ಯಾನ - 204)


ಪುಸ್ತಕದ ಶೀರ್ಷಿಕೆ : ಮುದ್ದಿನ ಮನದನ್ನೆ

ಲೇಖಕರು : ಹೆಚ್. ಜಿ. ರಾಧಾದೇವಿ

ಪ್ರಕಾಶಕರು : ಶ್ರೀ ಲಕ್ಷ್ಮೀವೆಂಕಟೇಶ್ವರ ಪ್ರಕಾಶನ

ಪ್ರಥಮ ಮುದ್ರಣ : 1999

ಎರಡನೇ ಮುದ್ರಣ : 2020 (ನನ್ನ ಓದಿಗೆ ಸಿಕ್ಕಿದ್ದು)


ಮುದ್ದಿನ ಮನದನ್ನೆ ಎನ್ನುವ ಕಾದಂಬರಿಯ ಶೀರ್ಷಿಕೆ ಕಂಡಾಗ ಮೊದಲಿಗೆ ಇದೊಂದು ಪ್ರೇಮ ಕಥೆ ಆಗಿರಬಹುದಾ ಎನ್ನಿಸಿ ಓದಲು ಶುರು ಮಾಡಿದೆ. ಆದರೆ, ಇದು ಸಾಂಸಾರಿಕ ಕಥೆಯಾದರೂ.

 ಗಂಡ-ಹೆಂಡತಿಯ ನಡೆ ಹೇಗಿದ್ದಾಗ ಆಕೆ ಮುದ್ದಿನ ಮನದನ್ನೆಯಾಗಿರಬಲ್ಲಳು ಎನ್ನುವುದನ್ನು ತೋರಿಸುವುದರ ಜೊತೆಗೆ ಸಂಸಾರದಲ್ಲಿ ಪ್ರೇಮ ಹಾಗೂ ತಾಳ್ಮೆಯ ಪಾತ್ರವನ್ನು ಹೇಳುತ್ತದೆ. 


ರಾಘವೇಂದ್ರರಾಯರಿಗೆ ಎರಡನೇ ಹೆಂಡತಿಯಾಗಿ ಬಂದದ್ದು ವಿಶಾಲು. ವಿಶಾಲಿಗೆ ಅವರು ಸೋದರ ಮಾವನೇ ಆಗಬೇಕು. ಮೊದಲೇ ಈ ಮದುವೆಯ ಪ್ರಸ್ತಾಪ ಬಂದಾಗ ಖಾಸಗಿ ಹೈಸ್ಕೂಲಿನಲ್ಲಿ ಕೆಲಸದಲ್ಲಿದ್ದ ಅವರನ್ನು ವಿವಾಹವಾಗಲು ವಿಶಾಲು ಒಪ್ಪಿರಲಿಲ್ಲ. ಆದರೆ, ರಾಯರು ವಿವಾಹವಾಗಿ ಅವರ ಪತ್ನಿ ಮಗು ಶೀಲಾ ಹುಟ್ಟಿದಾಗ ತೀರಿಕೊಂಡ ಸಂದರ್ಭದಲ್ಲಿ.. ವಿಶಾಲಿಗೂ ಯಾವ ವರನೂ ಅವಳ ನಿರೀಕ್ಷೆಗೆ ತಕ್ಕಂತೆ ಸಿಕ್ಕಿರದಿದ್ದಾಗ ತಾಯಿಯ ಮಾತಿನಂತೆ ರಾಯರನ್ನೇ ವಿವಾಹವಾಗಿದ್ದಳು. ಆಕೆಗೆ ವಾರಿಜಾ ಎಂಬ ಮಗಳು ಹಾಗೂ ರಾಜು, ರಾಮು ಎಂಬ ಅವಳಿ ಗಂಡು ಮಕ್ಕಳು ಇದ್ದರು.


ಎರಡನೆಯ ವರನಾಗಿ ಒಂದು ಮಗುವಿನ ತಂದೆಯೂ ಆಗಿದ್ದವನನ್ನು ಮದುವೆಯಾದರೂ.. ಆಕೆಯು ಶಿಕ್ಷಕಿಯಾಗಿ ಕೆಲಸದಲ್ಲಿದುದರಿಂದ ಆರ್ಥಿಕವಾಗಿ ಸಬಲಳಾಗಿಯೇ ಇದ್ದಳು. ತನ್ನ ಮಕ್ಕಳ ಹೆಸರಿನಲ್ಲಿ ದುಡ್ಡಿಟ್ಟಿದ್ದಳು. ಶೀಲಾಳ ಹೆಸರಿನಲ್ಲಿ ಯಾವ ಹಣವೂ ಇರಲಿಲ್ಲ. ಶೀಲಾಳಿಗೆ ಚಿಕ್ಕಮ್ಮನಿಂದ ಅನ್ಯಾಯವಾಗುತ್ತಿಲ್ಲ ಎಂದು ರಾಯರು ಭಾವಿಸಿದ್ದರು. ಮಲತಾಯಿ ಕಾಟವೇನೂ ಇರಲಿಲ್ಲ. ರಾಯರ ಅಕ್ಕ ಮೀನಾಕ್ಷಮ್ಮ ತನ್ನ ಮಗಳ ಮಕ್ಕಳು ಹಾಗೂ ಈ ಹುಡುಗಿ ಬೇರೆ ಎಂದು ಭೇದ ಮಾಡದೆ ಎಲ್ಲರನ್ನೂ ಪ್ರೀತಿಸುತ್ತಿದ್ದಳು. ಆದರೆ ಶೀಲಾ ಎಸ್‌.ಎಸ್.‌ಎಲ್.‌ಸಿ ಮುಗಿಸಿದ ಸಂದರ್ಭದಲ್ಲಿ ಮೀನಾಕ್ಷಮ್ಮನವರೂ ತೀರಿಕೊಂಡು, ಚಿಕ್ಕಮ್ಮನ ಮತ್ಸರದಿಂದ ಮನೆಯ ಕೆಲಸ ಹಾಗೂ ಅಡುಗೆ ಕೆಲಸ ಶೀಲಾಳ ಮೇಲೆಯೇ ಬಿದ್ದಿತ್ತು.


ಶೀಲಾ ವಾರಿಜಾಳಂತೆ ಕೊಬ್ಬು ತೋರಿಸದಿದ್ದರೂ.. ಆಕೆಗಿಂತ ಬಹಳ ರೂಪವತಿ. ತಮ್ಮಂದಿರಿಬ್ಬರಿಗೂ ವಾರಿಜಾಳಿಗಿಂತಲೂ ಶೀಲಾಳ ಮೇಲೆ ಹೆಚ್ಚು ಪ್ರೀತಿ. ಶೀಲಾಳ ತಾಯಿಯ ಮನೆಯಲ್ಲಿ ಆಕೆಯ ಮಾವಂದಿರು ಆಕೆಯ ತಾಯಿಯ ಆಭರಣಗಳು ಹಾಗೂ ದುಡ್ಡನ್ನು ಸಹಾ ಕೊಟ್ಟಿರಲಿಲ್ಲ.


ಇದನ್ನೇ ನೆಪವಾಗಿರಿಸಿಕೊಂಡ ವಿಶಾಲು ಗೊತ್ತಿದ್ದೂ ಗೊತ್ತಿದ್ದೂ.. ತಾನೇ ಹತ್ತು ಸಾವಿರ ವರದಕ್ಷಿಣೆ ಕೊಡುತ್ತೇನೆಂದು ಆಕೆಗೆ ಒಂದು ವಿವಾಹದ ಪ್ರಸ್ತಾಪ ತಂದು ವಿವಾಹ ಮಾಡಿಬಿಟ್ಟರು. ಪ್ರಸಾದನಿಗೆ ಕೆಲಸದಲ್ಲಿರುವ ಹುಡುಗಿ ಬೇಕಿಲ್ಲ, ಮನೆ ಕೆಲಸ ನೋಡಿಕೊಂಡರೆ ಸಾಕು ಎಂದು ಬಣ್ಣಬಣ್ಣದ ಮಾತನಾಡಿ ಶ್ರೀಮಂತಿಕೆ ತೋರಿಸಿ ವಿವಾಹ ಮಾಡಿಕೊಂಡಿದ್ದರು. ಆದರೆ, ಅಲ್ಲಿ ನಾಲ್ಕು ಜನ ಹೆಣ್ಣು ಮಕ್ಕಳಿಗೂ ಶೀಲಾಳ ಗಂಡ ದಾಸನಿದ್ದ ಹಾಗೆ. ಏನನ್ನೂ ಕೇಳದ ಮೂಗಬಸವನಂತೆ ದುಡಿಯುತ್ತಿದ್ದ. ಜೊತೆಗೆ ತಾಯಿ ಸುಭದ್ರಮ್ಮ ಮಹಾ ಕಟುಕಳು. ತಮ್ಮಂದಿರಿಗೆ ಹೆಣ್ಣು ಮಕ್ಕಳನ್ನು ಮದುವೆ ಮಾಡಿಕೊಟ್ಟು ಜೊತೆಗೆ ಇರಿಸಿಕೊಂಡಿದ್ದರು. ಆದಾಯದ ಲಾಭದಲ್ಲಿ ಪಾಲು ಬಂದರೂ ಮಗನ ಸಂಬಳವನ್ನೂ ತಾವೇ ಇರಿಸಿಕೊಳ್ಳುತ್ತಿದ್ದರು. ವರದಕ್ಷಿಣೆಯಾಗಿ ಹತ್ತು ಸಾವಿರ ನೀಡುತ್ತೇನೆ ಎಂಬ ಭರವಸೆ ನೀಡಿ ಅದನ್ನು ಕೊಡದೆ, ಆಕೆಗೆ ಮತ್ತಷ್ಟು ಚಿತ್ರ ಹಿಂಸೆಯಾಗಲಿ ಎಂದೇ ಬಯಸಿದ್ದಳು ವಿಶಾಲಿ. ಅತ್ತೆ ಮನೆಯ ಹಿಂಸೆ ತಾಳಲಾಗದೆ, ವಿದ್ಯೆ ಇಲ್ಲದೆ, ಆರ್ಥಿಕ ಬಲವೂ ಇಲ್ಲದೇ ತನ್ನ ಮನೆಗಾದರೂ ಬಂದು ಇಲ್ಲಿನ ಕೆಲಸ ಮಾಡಿಕೊಂಡು ಬಿದ್ದಿರುತ್ತಾಳೆ ಎಂಬ ಕೀಳು ಆಲೋಚನೆ.


ಈಗ ಶೀಲಾ ಮನೆಗೆ ಬರುವ ಸಂದರ್ಭದಲ್ಲಿ ಆಕೆ ಸೋತು ಬರುತ್ತಾಳೆ ಎಂದು ನಿರೀಕ್ಷಿಸಿದ ತಾಯಿ-ಮಕ್ಕಳಿಗೆ ಅಚ್ಚರಿಯಾಗಿತ್ತು. ಬೆಲೆಬಾಳುವ ಸೀರೆಗಳು, ಒಡವೆ ಜೊತೆಗೆ ಮೈ-ಕೈ ತುಂಬಿಕೊಂಡ ಅವಳನ್ನು ಕಂಡು ಹೊಟ್ಟೆಕಿಚ್ಚಾಗಿತ್ತು. ತನ್ನ ತಂದೆ ಬಂದು ತನ್ನ ಗಂಡನಿಗೆ ಬುದ್ಧಿ ಹೇಳಿದ ನಂತರ ತನ್ನ ಅದೃಷ್ಟವೇ ಬದಲಾಯಿತು ಎಂದು ಹೇಳಿ ಆಕೆ ತನ್ನ ವೈಭವವನ್ನು ತೋರಿಸಿದಳು. 


ವಾರಿಜಾಳಿಗೂ ಇನ್ನೂ ಮೂರು ತಿಂಗಳಲ್ಲಿ ಮದುವೆ ಮಾಡಿಕೊಡಲಿದ್ದಳು. ಆತ ಎಂ.ಎಸ್ಸಿ ಓದಿ ಕೆಲಸದಲ್ಲಿದ್ದ ಗಿರೀಶ ಎಲ್ಲಿ ನನ್ನ ಮುದ್ದು ಮನದನ್ನೆ.. ಎನ್ನುತ್ತಾ ಅವಳನ್ನೇ ಹಂಬಲಿಸುತ್ತಾನೆ. ಇವಳೇ ಜೋರು ಮಾಡಿದರೂ ನನ್ನ ಮುದ್ದು ಮನದನ್ನೆ ಏನೆಂದರೂ ನನಗೆ ಆನಂದ ಎನ್ನುತ್ತಾನೆ ಎನ್ನುತ್ತಾ ತನ್ನ ಮಗಳನ್ನು ಪ್ರೀತಿಸಿದ್ದ ಪರಿಯನ್ನು ಹೇಳಿದ್ದರು. 


ಆದರೆ ಶೀಲಾಳ ನಿಜರೂಪವೂ ಹಾಗೂ ವಾರಿಜಾಳ ನಿಜ ಬದುಕು ಬೇರೆಯೇ ಇತ್ತು. ಬೇರೆಯವರಿಗೆ ಕೆಟ್ಟದ್ದು ಬಯಸಿದರೆ ತಮಗೂ ಕೆಟ್ಟದ್ದೇ ಆಗುತ್ತದೆ ಎನ್ನುವ ಕರ್ಮಫಲದ ಅರಿವಿರದ ವಿಶಾಲುವಿಗೆ ತಕ್ಕ ಶಾಸ್ತಿಯೇ ಆಗಿತ್ತು.


ಶೀಲಾ ತನ್ನ ಅತ್ತೆ ಮನೆಯವರ ಕಪಿಮುಷ್ಟಿಯಿಂದ ತಪ್ಪಿಸಿಕೊಂಡು ಚಂದದ ಬದುಕು ಬದುಕಲು ಕಷ್ಟ ಪಟ್ಟಳಾದರೂ.. ನಂತರ ಅವಳ ಬದುಕು ಸುಖ ಸಂಸಾರವಾಗಿಯೇ ಇತ್ತು. ಅದೆಲ್ಲದಕ್ಕೂ ರಾಯರು ಕಾರಣವಾಗಿರಲಿಲ್ಲ. ಆದರೆ, ಶೀಲಾಳಿಗೆ ಅವರ ಸಹಾಯ ಚೆನ್ನಾಗಿಯೇ ಇತ್ತು. ಅವಳ ಸಂಸಾರ ಹಾಗೂ ಬದುಕು ನೇರವಾದ ಬಗೆ ಹೇಗೆ..??


ಮುದ್ದಿನ ಮನದನ್ನೆ ಎಂದು ಮಾತಲ್ಲಿಯೇ ಸ್ವರ್ಗ ತೋರಿಸುತ್ತಿದ್ದ ಗಿರೀಶನ ನಿಜಸ್ವರೂಪ ಏನು..?? ಆತ ಅಷ್ಟು ಕಡು ಕುರೂಪಿ ವಾರಿಜಾಳನ್ನು ಮೆಚ್ಚಲು ಹಾಗೂ ಆಕೆಯನ್ನು ವಿವಾಹವಾಗಲು ಹೂಡಿದ್ದ ನಾಟಕವೇನು ಕಡಿಮೆಯದಾಗಿರಲಿಲ್ಲ. ಆದರೆ, ವಿವಾಹವಾದ ನಂತರ ಅಮ್ಮ-ಮಗಳಿಗೆ ಆತ ಕಲಿಸಿದ ಪಾಠವು ಅಂತಿಂಥದೇನಲ್ಲ.


ಮಾತಿನಲ್ಲಿ ಮುದ್ದಿನ ಮನದನ್ನೆ ಎನ್ನುತ್ತಿದ್ದ ಗಿರೀಶನಿಗೂ ಹಾಗೂ ಮುದ್ದಿನ ಮನದನ್ನೆ ಎಂದು ಎಲ್ಲಿಯೂ ಆಡದಿದ್ದರೂ.. ಆಕೆಯನ್ನು ಸುಪ್ಪತ್ತಿಗೆಯಲ್ಲಿಟ್ಟು ನೋಡಿಕೊಂಡ ಪ್ರಸಾದನಿಗೂ ಅಜಗಜಾಂತರ ವ್ಯತ್ಯಾಸವಿದೆ. ತೋರಿಕೆಯ ಬದುಕಿಗೂ ಹಾಗೂ ನಿಜವಾಗಿ ಹಾಗೆಯೇ ಬಾಳ್ವೆ ಮಾಡುವವರೆಗೂ ಇರುವ ವ್ಯತ್ಯಾಸ ಕಂಡು ಬರುತ್ತದೆ.


ಕೇಡು ಬಯಸಿದ ಸ್ವಾರ್ಥಿಗಳಿಗೆ ಸಿಕ್ಕ ಪ್ರತಿಫಲದ ಜೊತೆಗೆ ಒಳ್ಳೆಯದನ್ನು ಮಾಡಲು ಹೊರಡುವವರ.. ತಾಳ್ಮೆಯ ಪ್ರತಿಫಲವೂ ಸಿಕ್ಕ ಪರಿ ಕಾಣುತ್ತದೆ. ಚೆಂದದ ನೀತಿಯುಳ್ಳ ಸುಂದರ ಕಾದಂಬರಿ.


~ವಿಭಾ ವಿಶ್ವನಾಥ್

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ