ಶುಕ್ರವಾರ, ಏಪ್ರಿಲ್ 17, 2026

ಚೈತ್ರ ನಂದನ (ಪುಸ್ತಕ ಯಾನ - 203)


ಪುಸ್ತಕದ ಶೀರ್ಷಿಕೆ : ಚೈತ್ರ ನಂದನ

ಲೇಖಕರು : ಹೆಚ್. ಜಿ. ರಾಧಾದೇವಿ

ಪ್ರಕಾಶಕರು : ಶ್ರೀ ಲಕ್ಷ್ಮೀವೆಂಕಟೇಶ್ವರ ಪ್ರಕಾಶನ

ಪ್ರಥಮ ಮುದ್ರಣ : 1999

ಎರಡನೇ ಮುದ್ರಣ : 2020 (ನನ್ನ ಓದಿಗೆ ಸಿಕ್ಕಿದ್ದು)


ಚೈತ್ರ ನಂದನ ಕಾದಂಬರಿಯಲ್ಲಿ ಲೇಖಕಿಯೊಬ್ಬಳ ಜೀವನದ ಏಳುಬೀಳುಗಳು ಹಾಗೂ ಭಾವನಾತ್ಮಕ ತಲ್ಲಣಗಳು ಜೊತೆಗೆ ಕೌಟುಂಬಿಕ ಬದುಕಿನ ಚಿತ್ರಣವಿದೆ. ಸಾಹಿತ್ಯ ಪ್ರಪಂಚದಲ್ಲಿ ಏನೂ ಅರಿಯದ ಒಬ್ಬ ಲೇಖಕಿ ಕಾಲಿಡುವ ಜೀವನಕ್ಕೂ.. ಅದರ ನಂತರದ ಬದುಕಿಗೂ ಇರುವ ವ್ಯತ್ಯಾಸಗಳನ್ನೂ ಕಾಣಬಹುದು.


ಲಲಿತಮ್ಮನವರಿಗೆ ಮೂವರು ಹೆಣ್ಣುಮಕ್ಕಳು ಅದರಲ್ಲಿ ವಾಸಂತಿ ಹಿರಿಯವಳು. ಸುಧಾ ಹಾಗೂ ವನಜ ಆಕೆಯ ತಂಗಿಯರು. ಈಗ ಆಕೆಯ ವಿವಾಹಕ್ಕೂ ಮುನ್ನ ತಂಗಿಯರ ವಿವಾಹದ ನಿಶ್ಚಯವಾಗಿ ವಿವಾಹವೂ ನೆರವೇರಲಿತ್ತು. ಇದಕ್ಕೆ ಕಾರಣವೆಂದರೆ ಹಣ. 


ವಾಸಂತಿ ಕಥೆ ಬರೆಯುವ ಹುಚ್ಚಿನಲ್ಲಿ ಓದನ್ನು ಅರ್ಧಕ್ಕೇ ಬಿಟ್ಟಳು. ಸೆಕೆಂಡ್ ಪಿ.ಯು.ಸಿ ಕೂಡಾ ಉತ್ತೀರ್ಣಳಾಗದೆ, ಈಗ ಮನೆಯ ಹತ್ತಿರವಾಗಿರುವ ನರ್ಸರಿ ಶಾಲೆಯಲ್ಲಿ 300 ರೂಪಾಯಿ ಸಂಬಳಕ್ಕಾಗಿ ದುಡಿಯುತ್ತಿದ್ದಳು. ಆದರೆ, ತಂಗಿಯರದ್ದು ಹಾಗಿರಲಿಲ್ಲ. ಅವರಿಬ್ಬರೂ ಬಿ.ಎ, ಬಿ.ಕಾಂ ಪಾಸ್ ಮಾಡಿಕೊಂಡು ಹೈಸ್ಕೂಲಿನಲ್ಲಿ ಹಾಗೂ ಫೈನಾನ್ಸ್ ನಲ್ಲಿ ಕೆಲಸ ಮಾಡುತ್ತಿದ್ದರು. ಅಲ್ಲಿಯೇ ಕೆಲಸ ಮಾಡುತ್ತಿದ್ದವರನ್ನು ಪ್ರೇಮಿಸಿ ವಿವಾಹವಾಗುತ್ತಿದ್ದರು.


ವಾಸಂತಿಗೆ ಎಸ್.ಎಸ್.ಎಲ್.ಸಿ ಓದುವ ಹೊತ್ತಿನಲ್ಲಿ ಕಥೆ, ಕಾದಂಬರಿ ಓದುವ ಹುಚ್ಚು ಬೆಳೆಯಿತು. ಶಾಲೆಯ ಪುಸ್ತಕಗಳನ್ನು ಬಿಟ್ಟು ತ್ರಿವೇಣಿ, ಎಂ.ಕೆ ಜಯಲಕ್ಷ್ಮಿ, ವಾಮಿ, ಎಂ.ಕೆ ಇಂದಿರಾ, ಅ.ನ.ಕೃ, ತ.ರಾ.ಸು ಇವರೆಲ್ಲರ ಕಾದಂಬರಿಯನ್ನು ತಂದು ಓದುತ್ತಿದ್ದಳು. ನಂತರ ಬರೆಯಲು ಕೂಡಾ ಶುರು ಮಾಡಿದ್ದಳು. ಪಿ.ಯು.ಸಿ ಓದುವಾಗ ಕಾಲೇಜಿನಲ್ಲೊಂದು ಸಾಹಿತ್ಯ ಸಂಘವಿತ್ತು. ಅಲ್ಲಿಯ ಸೀನಿಯರ್ ವಿದ್ಯಾರ್ಥಿ ವಿಶ್ವನಾಥ ಕಲ್ಲಚ್ಚು ಪತ್ರಿಕೆ ಹೊರಡಿಸುತ್ತಿದ್ದ. ಅದರಲ್ಲಿ ಅವಳ ಹೆಚ್ಚಿನ ಕಥೆಗಳು ಪ್ರಕಟವಾದವು. ಅಲ್ಲದೆ, ಆತನ ಮೆಚ್ಚುಗೆ ಹೊಗಳಿಕೆಗಳಿಂದ ಆಕೆ ಹೆಚ್ಚೆಚ್ಚು ಸಾಹಿತ್ಯದತ್ತ ವಾಲುತಿದ್ದಳು.


ಆಕೆಯ ತಾಯಿ ವಿಶ್ವನಾಥನಿಗೆ ಆಗಾಗ ಹಂಗಿಸುತ್ತಿದ್ದದ್ದೂ ಇತ್ತು. ನೀನು ಕಥೆ, ಕಾದಂಬರಿ ಎಂದು ಹುಚ್ಚು ಹಿಡಿಸಿ ಅವಳು ಫೇಲಾದಳು. ಬಿ.ಎ ಮಾಡಿದರೆ ನಮ್ಮ ಭಾವನ ಎಜುಕೇಶನ್ ಸಂಸ್ಥೆಯಲ್ಲಿ ಮೇಡಂ ಕೆಲಸವಾದರೂ ಸಿಗುತ್ತಿತ್ತು ಎನ್ನುತ್ತಿದ್ದರು. ಆದರೆ, ವಿಶ್ವನಾಥ ಆಕೆಯ ಪ್ರತಿಭೆಯ ಕುರಿತು ಒಳ್ಳೆಯ ಮೆಚ್ಚುಗೆಯ ಮಾತನಾಡಿ ಆಗಾಗ ಸಭೆಗಳಲ್ಲಿಯೂ ಹೊಗಳಿ ವಿಮರ್ಶಿಸುತ್ತಿದ್ದ. ಆಕೆಯ ಕಥಾಸಂಕಲನವನ್ನು ಪ್ರಕಟಿಸಲು ಬೆಂಗಳೂರಿನಿಂದ ಒಬ್ಬ ಪ್ರಕಾಶಕರನ್ನು ಕರೆತಂದಿದ್ದಎಂ ಕಾದಂಬರಿಯ ಹಾಗೂ ಕಥಾಸಂಕಲನದ ಕುರಿತು ಮಾತಾಗಿದ್ದರೂ.. ಅವಳ ಕಥಾಸಂಕಲನವಾಗಲಿ ಕಾದಂಬರಿಯಾಗಲಿ ಅವಳ ಕೈಸೇರಲಿಲ್ಲ.


ಜಿಲ್ಲೆಯ ಕತೆಗಾರರನ್ನೆಲ್ಲಾ ಒಟ್ಟು ಸೇರಿಸಿ ಕಥಾಸಂಕಲನವನ್ನು ಹೊರತರಲು ಪ್ರಯತ್ನಿಸಿ, ಅದಕ್ಕೆ ಕರಡು ತಿದ್ದುಪಡಿಗೆ ವಿಶ್ವನಾಥ ವಾಸಂತಿಯ ಸಹಾಯವನ್ನು ಪಡೆದನಾದರೂ.. ಆ ಕಾರ್ಯಕ್ರಮದಲ್ಲಿ ಆತನ ಹೆಸರು ಪ್ರಸ್ತಾಪವಾಗದೆ, ವಾಸಂತಿಯ ಹೆಸರೂ ಪ್ರಸ್ತಾಪವಾಗದೆ ಶ್ರೀಧರ ಎನ್ನುವವರ ಹೆಸರು ಬಂದದ್ದು ಹಾಗೂ ಮಹಿಳಾ ಲೇಖಕಿಯರ ಕಥೆಗಳಿಗೆ ಅಷ್ಟು ಬೆಳಕು ಚೆಲ್ಲದೆ, ಅವರಿಗೆ ಮನ್ನಣೆ ಕೊಡದೇ ಹೋಗಿದ್ದು, ಬಹುಮಾನಗಳ ಹಿಂದಿನ ಚಿತಾವಣೆ ಹಾಗೂ ಈಕೆಗೆ ಸಿಗಬೇಕಾದ ಗೌರವ ಪ್ರತಿಯ ಕುರಿತಾಗಿಯೂ ವಿಶ್ವನಾಥ ಹೇಳಿದ್ದು ಆಕೆಯನ್ನು ಖಿನ್ನಳನ್ನಾಗಿಸಿದರೂ.. ಆಕೆಯ ಕಥೆಗಳನ್ನು ತೆಗೆದುಕೊಂಡು ತಾನೇ ಪರಿಚಿತ ಪ್ರಕಾಶಕರಿಂದ ಅಚ್ಚು ಹಾಕಿಸುವೆ ಎಂದದ್ದು ಕೊಂಚ ಭರವಸೆ ತಂದಿತ್ತು. 


ಈ ಸಮಯದಲ್ಲಿ ಅವಳ ತಾಯಿ ವಿಶ್ವನಾಥನ ಕುರಿತಾಗಿ ಮೆಚ್ಚುಗೆ ವ್ಯಕ್ತಪಡಿಸಿ ಆತನೇನಾದರೂ ನಿನ್ನನ್ನು ಮದುವೆಯಾದರೆ..! ಎಂಬ ಆಶಾಕಿರಣವನ್ನು ಮೂಡಿಸಿದರು. ಆತ ಬಂದಾಗ ಲಲಿತಮ್ಮನೇ ಇದನ್ನು ಪ್ರಸ್ತಾಪಿಸಿದರೂ.. ಆತನ ಜಾತಿ ಬೇರೆ ಎಂದು ಅಂತರ್ಜಾತಿ ವಿವಾಹಕ್ಕೆ ಆತ ಸಿದ್ದನಾಗಿರುವೆನೆಂದರೂ, ಲಲಿತಮ್ಮನವರಿಗೆ ಅದು ಒಪ್ಪಿಗೆಯಾಗದೇ ಅಲ್ಲಿಗೆ ಮುಗಿದಿತ್ತು. ಅದಾದ ನಂತರ ವಿಶ್ವನಾಥ ಕೊಂಡು ಹೋದ ಪ್ರತಿಗಳ ಕುರಿತಾಗಲಿ, ಪುಸ್ತಕದ ಕುರಿತಾಗಲಿ ಏನೂ ತಿಳಿದು ಬರಲಿಲ್ಲ. ಪ್ರಕಾಶಕರ ಹೆಸರು ಗೊತ್ತಿದ್ದರಿಂದ ಇವರೇ ಅಲ್ಲಿಗೆ ಹೋದಾಗಲೂ.. ಆತನ ಗಿಲೀಟು ಮಾತು ಹಾಗೂ ಮೋಸದ ಅರಿವಾಗಿತ್ತು.


ಆಕೆ ಓದಿ ಗ್ರಾಜುಯೇಟ್ ಆಗಿದ್ದಿದ್ದರೆ ಇದೆಲ್ಲವೂ ಆಗುತ್ತಿತ್ತೇ ಎಂದು ಆಕೆಯ ತಾಯಿ ಆಗಾಗ ಹಂಗಿಸುತ್ತಿದ್ದರು. ಒಮ್ಮೆ ವಿಶ್ವನಾಥ ಅಚಾನಕ್ಕಾಗಿ ವಾಸಂತಿಗೆ ಭೇಟಿಯಾಗಿದ್ದ. ಆತನ ಎಂ.ಎ ಮುಗಿದಿತ್ತು. ಪ್ರಕಾಶನಕನ ಕುರಿತು ಹೇಳಿದಾಗ, ಆತನ ಮೋಸದ ಕುರಿತು ಹೇಳಿದ್ದ. ಜಿಲ್ಲಾ ಲೇಖಕರ ಕಥಾಸಂಕಲನಗಳನ್ನು ತೆಗೆದುಕೊಂಡನಾದರೂ.. ದುಡ್ಡು ಕೊಡಲಿಲ್ಲ. ಹೊಸಬರನ್ನು ಹಿಡಿದು ತಾವು ದುಡ್ಡು ಮಾಡಿಕೊಳ್ಳುವ ಅವರ ಮೋಸದ ಕುರಿತು ತೆರೆದಿಟ್ಟಿದ್ದ. 


ವನಜ, ಸುಧಾ ಕೆಲಸಕ್ಕೆ ಸೇರಿಕೊಂಡ ಸಂದರ್ಭದಲ್ಲಿ ಶಿಶುವಿಹಾರದಲ್ಲಿ ಈಕೆಗೂ ಒಂದು ಕೆಲಸ ಸಿಕ್ಕು.. ಹಣ ಕೂಡಿಟ್ಟುಕೊಳ್ಳುವಷ್ಟಲ್ಲವಾದರೂ ತನ್ನ ಓದು, ಬರಹದ ಖರ್ಚಿಗೆ ಆಗುವಷ್ಟು ಹಣ ಸಿಕ್ಕಿತು.


ಈ ನಡುವೆ ಕನ್ನಡದ ಹೊಸ ಮಾಸಪತ್ರಿಕೆಯ ಕುರಿತಾಗಿ ಅವಳ ಕಣ್ಣಿಗೆ ಬಿದ್ದ ಬರಹದಲ್ಲಿ.. ಪ್ರತಿಬರಹಕ್ಕೂ ಸಂಭಾವನೆ ಇರುವುದನ್ನು ಕಂಡು ನೋಡಿದರೆ.. ಅದು ಅದರ ಸಂಪಾದಕ ಆರ್. ವಿಶ್ವನಾಥ್ ಎಂ.ಎ ಎಂದಿತ್ತು. ಜೊತೆಗೆ ಭಾವಚಿತ್ರವೂ ಇದ್ದುದರಿಂದ ಆತನೇ ತನ್ನ ಸೀನಿಯರ್ ಎಂಬುದರ ಅರಿವಾಗಿತ್ತು. ತನ್ನ ಕಷ್ಟಗಳನ್ನು ವಿವರಿಸಿ ಪತ್ರ ಬರೆದ ನಂತರ.. ಆತನಿಗೂ ಈಕೆಯ ಸಾಹಿತ್ಯದ ಕುರಿತು ಅರಿವಿದ್ದುದರಿಂದ.. ಆಕೆಯ ಕಥೆ, ಕಾದಂಬರಿಗಳನ್ನು ತನ್ನ ಪತ್ರಿಕೆಯಲ್ಲಿ ಪ್ರಕಟಿಸಿರುವ ಭರವಸೆ ಹಾಗೂ ಸಂಭಾವನೆಯ ಕುರಿತು ಹೇಳಿದ. ಆದರೆ, ತನ್ನ ನಿಜನಾಮಧೇಯದಿಂದಲ್ಲದೇ ಪುಣ್ಯಶ್ರೀ ಎಂಬ ಹೆಸರಿನಿಂದ ಬರೆಯಲು ಶುರುವಿಟ್ಟಳು.


ತಂಗಿಯರ ನಡೆಯಿಂದ ಬೇಸರವಾಗಿ ಅವರ ಮದುವೆಗೂ ಹೋಗಲಿಲ್ಲ. ಆ ಸಂದರ್ಭದಲ್ಲಿ ವಾಸಂತಿಗೆ ಮತ್ತೊಂದು ಅಗ್ನಿಪರೀಕ್ಷೆ ಎದುರಾಗಿತ್ತು. ಅದಂದರೆ ನರ್ಸರಿ ಶಾಲೆ ಮುಚ್ಚುತ್ತಿತ್ತು. ಆದರೆ, ಆ ಹೊತ್ತಿಗಾಗಲೇ ಆ ಶಾಲೆಗೆ ಹೋಗುತ್ತಿದ್ದ ಮಗುವಿನ ತಾಯಿ ಪಾರ್ವತಮ್ಮನವರ ಜೊತೆಗೆ ಆತ್ಮೀಯತೆ ಬೆಳೆದಿತ್ತು. ತನ್ನ ಕಷ್ಟವನ್ನೆಲ್ಲಾ ಹೇಳಿಕೊಂಡಾಗ ಆಕೆ ಒಂದು ಪರಿಹಾರ ನೀಡಿದ್ದರು. ಆ ಪರಿಹಾರವೇನು..??


ತನ್ನ ತಮ್ಮನನ್ನು ಮದುವೆಯಾಗಬಹುದು ಎನ್ನುವ ಅವರ ಯೋಚನೆಯನ್ನೂ ಹೇಳಿದ್ದರು. ವಾಸಂತಿ ತಂಗಿಯರ ಮದುವೆ ಸಮಯದಲ್ಲಿ ಮನೆಯಲ್ಲಿ ಉಳಿದಿದ್ದಾಗ ಜೊತೆಯಲ್ಲಿದ್ದ ಗುಂಡಜ್ಜಿ ಒಂದು ವರನ ಪ್ರಸ್ತಾಪ ಮಾಡಿದ್ದರು. ಆಕೆಯ ಸೊಸೆ ರಾಜಮ್ಮ ಅವರನ್ನು ಆ ವರನನ್ನು ನೋಡಲು ಕರೆದುಕೊಂಡು ಹೋದರು. ಆತನ ಕುರೂಪಿತನ, ಹುಚ್ಚನ್ನು ನೋಡಿಯೂ ತಾಯಿ ವಾಸಂತಿಯನ್ನು ಆಕೆಗೆ ಕಟ್ಟಲು ನೋಡಿದ್ದೇಕೆ..?? 


ಈ ನಡುವೆ ವನಜ ತನ್ನ ಬಾಣಂತನಕ್ಕೆ ಬಂದಾಗ, ವಾಸಂತಿಯ ಬಳಿ ಆಕೆಯ ಗಂಡನ ಚೆಲ್ಲುತನ ನೋಡಿ ರೋಸಿ ಹೋಗಿತ್ತು. ಆ ಸಂದರ್ಭದಲ್ಲಿ ತನ್ನ ತಂಗಿ ಸುಧಾಳ ಜೊತೆ ಮಾತನಾಡಿ ಆಕೆಯ ಶಾಲೆಯಲ್ಲಿ ಕೆಲಸ ಮಾಡುತ್ತಿದ್ದ ಡ್ರಿಲ್ ಮಾಸ್ತರ್ ರ ಪ್ರಸ್ತಾಪ ಮಾಡಿದ್ದಳು. ಸ್ವಾಭಿಮಾನವೇ ಇಲ್ಲದ ಅವಕಾಶವಾದಿ ಹಾಗೂ ಸಿಗರೇಟಿನ ಚಟವಿರುವ ಆತನನ್ನು ಕಂಡು ವಾಸಂತಿಯ ಅಭಿಪ್ರಾಯ ಏನಾಗಿತ್ತು..??


ಕಾಲಚಕ್ರ ತಿರುಗುವಷ್ಟರಲ್ಲಿ ಆಕೆ ಒಬ್ಬ ಖ್ಯಾತ ಲೇಖಕಿಯಾಗಿದ್ದಳು. 12 ಕಾದಂಬರಿಗಳನ್ನು ಎರಡು ವರ್ಷದಲ್ಲಿ ಬರೆದಾಗಿತ್ತು. ಅವಳ ಸಾಹಿತ್ಯ ಆಕೆಗೆ ಹಣ ತಂದುಕೊಟ್ಟಿತೇ ಅಥವಾ ಜೀವನದ ತೃಪ್ತಿಗೆ ಮಾತ್ರ ಸಾಹಿತ್ಯವೇ..?? ಆಕೆಯ ವಿವಾಹ ಯಾರ ಜೊತೆಗಾಯಿತು..?? ವಿಶ್ವನಾಥನ ದೆಸೆಯಿಂದ ಆಕೆಗೆ ಬರಹದಲ್ಲಿ ಮುಂದೆ ಸಾಗಿದರೂ ಆಕೆಯ ಹಣದ ಸಂಪಾದನೆಯ ವಿಚಾರವೇನು..?? ವಿಶ್ವನಾಥನ ಪತ್ನಿ ಇದಕ್ಕೆ ಪ್ರತಿಕ್ರಿಸಿದ ಬಗೆ ಹೇಗೆ..?? ಮನೆಯಲ್ಲಿ ಪುಣ್ಯಶ್ರೀ ಕುರಿತು ತಿಳಿದಿತ್ತೇ..??


ಇಲ್ಲಿ ವಾಸಂತಿಯ ತಾಯಿ, ತಂಗಿಯರ ಸಣ್ಣ ಬುದ್ಧಿಗಳು ಹಾಗೂ ನಡವಳಿಕೆಗಳು.. ಒಬ್ಬರು ಸೋತಾಗ ಅವರನ್ನು ಕೈ ಕೊಟ್ಟು ಮೇಲೆಬ್ಬಿಸುವುದರ ಬದಲಾಗಿ ಮತ್ತಷ್ಟು ಜರಿಯುವ ಮನುಷ್ಯನ ಪ್ರತಿಕ್ರಿಯೆಯನ್ನು ತೋರುತ್ತವೆ. 


ಈ ಕಾದಂಬರಿಯಲ್ಲಿ ಈಗಿನ ಉದಯೋನ್ಮುಖ ಲೇಖಕ ಅಥವಾ ಲೇಖಕಿಯರ ಭವಣೆಯನ್ನು ಕಾಣಬಹುದು. ಸಾಹಿತ್ಯ ಕ್ಷೇತ್ರಕ್ಕೆ ಹೊಸದಾಗಿ ಕಾಲಿಡುವವರು.. ಅದರಲ್ಲಿಯೂ.. ಅದನ್ನೇ ತನ್ನ ವೃತ್ತಿಯನ್ನಾಗಿಸಿಕೊಳ್ಳುವವರು ಆ ರೀತಿಯ ಆಲೋಚನೆ ಮಾಡುವಾಗ ಪರಿಸ್ಥಿತಿಯ ಪ್ರಾಮುಖ್ಯತೆಯನ್ನು ತೋರುತ್ತದೆ. ಜೊತೆಗೆ ವಾಸಂತಿಯ ಕಥಾವಸ್ತುಗಳ ಆಯ್ಕೆಯ ಪರಿಚಯವೂ ವಾಸ್ತವಕ್ಕೆ ಹತ್ತಿರವಾಗಿರುವ ಪರಿ ಕಾಣುತ್ತದೆ. ಎಲ್ಲಾ ಲೇಖಕ ಅಥವಾ ಲೇಖಕಿಯರಿಗೂ ಇಂತಹಾ ಗೆಲುವು ಸಿಗಲಾರದು. ಸಿಕ್ಕವರ ಬಾಳು ಮಾತ್ರ 'ಚೈತ್ರ ನಂದನ'ವೇ.. ಸೊಗಸಾದ ನೀತಿಯುಕ್ತ ಕಾದಂಬರಿಯ ಸುಲಲಿತ ಓದು.


~ವಿಭಾ ವಿಶ್ವನಾಥ್

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ