ಶುಕ್ರವಾರ, ಏಪ್ರಿಲ್ 17, 2026

ಕ್ಷಮಯಾ ಧರಿತ್ರಿ (ಪುಸ್ತಕ ಯಾನ - 205)

ಪುಸ್ತಕದ ಶೀರ್ಷಿಕೆ : ಕ್ಷಮಯಾ ಧರಿತ್ರಿ

ಲೇಖಕರು : ಗಂಗಾ ಪಾದೇಕಲ್

ಪ್ರಕಾಶಕರು : ಗೀತಾ ಪ್ರಕಾಶನ ಮಂದಿರ

ಪ್ರಥಮ ಮುದ್ರಣ : 2002

ಪುಟಗಳು : 160

ಬೆಲೆ : 90 ರೂ.

ಲಭ್ಯತೆ : ಹಳೆಯ ಪುಸ್ತಕದ ಅಂಗಡಿ

ಸಾಹಿತ್ಯಪ್ರಿಯರಿಗೆ ಗಂಗಾ ಪಾದೇಕಲ್ ಅವರ ಹೆಸರು ಚಿರಪರಿಚಿತ. ಇವರ 12 ಕಾದಂಬರಿಗಳು 180ಕ್ಕೂ ಮಿಕ್ಕಿ ಸಣ್ಣ ಕಥೆಗಳು ಪ್ರಕಟಿತವಾಗಿವೆ. ಇವರು ಬರೆದ ಮೂರು ನಾಟಕಗಳು ರಂಗದ ಮೇಲೆ ಪ್ರದರ್ಶನಗೊಂಡಿದೆ. ಇವರ ಬರಹಗಳ ಕುರಿತಾಗಿ ಬರೆದ ಮಹಾಪ್ರಬಂಧಕ್ಕೆ ಎಂ.ಫಿಲ್ ಪದವಿ ಸಿಕ್ಕಿದೆ. ಇವರ 'ಹೊಸ ಹೆಜ್ಜೆ' ಕಥಾ ಸಂಕಲನ ಮಂಗಳೂರು ವಿಶ್ವವಿದ್ಯಾಲಯದಲ್ಲಿ ಬಿ.ಕಾಂ ತರಗತಿಗೆ ಅಭ್ಯಾಸದ ಪಠ್ಯಪುಸ್ತಕವಾಗಿತ್ತು.

ಗಂಗಾ ಪಾದೇಕಲ್ ಅವರ ಹೆಸರು ಕೇಳಿದ್ದನಾದರೂ.. ಅವರ ಪುಸ್ತಕಗಳ ಹುಡುಕಾಟದಲ್ಲಿದ್ದೆ. ಈ ಪುಸ್ತಕ ನಾನು ಓದಿದ ಅವರ ಮೊದಲ ಪುಸ್ತಕ. ಇಲ್ಲಿನ ಕಥೆಗಳು ತುಷಾರ, ತರಂಗ, ಸುಧಾ, ಮಯೂರ, ಕಸ್ತೂರಿ ಮುಂತಾದ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಈ ಕಥಾ ಸಂಕಲನದಲ್ಲಿ 18 ಚಂದದ ಕಥೆಗಳಿವೆ. ಇವರ ಬರಹದ ಶೈಲಿಯೂ ಬಹಳ ಇಷ್ಟವಾಯಿತು.

ಸುರುಳಿ ಹೂಗಳು :ಹೊನ್ನಳ್ಳಿಯ ಸಿರಿವಂತರಾದ ಅನಂತನ ಅಪ್ಪನಿಗೆ ಇಬ್ಬರೇ ಮಕ್ಕಳು. ಅನಂತ ಹಾಗೂ ಅವನಕ್ಕ ಜಾನಕಿ. ಅನಂತನನ್ನು ಮದುವೆಯಾದ ಸೀತೆಗೆ ನೆಮ್ಮದಿಯ ಬದುಕು ಸಿಕ್ಕಿರಲಿಲ್ಲ. ಜಾನಕಿ ಮದುವೆಯಾದ ವರ್ಷದೊಳಗೆ ಗಂಡನನ್ನು ಕಳೆದುಕೊಂಡು ತವರಲ್ಲಿ ಕೂತಿದ್ದಳು. ಅಮ್ಮ ಈ ಬೇಜಾರಿನಿಂದ ಕಣ್ಮುಚ್ಚಿದರೆ, ಅಪ್ಪ ಮಗಳ ಪರ. ಸೀತೆಗೆ ಅತ್ತೆ ಇಲ್ಲದ ಮನೆ ಸಿಕ್ಕಿದರೂ.. ಅತ್ತೆಗಿಂತಲೂ ಮಿಗಿಲಾಗಿ ಅತ್ತೆತನ ತೋರುವ ಅತ್ತಿಗೆ ಸಿಕ್ಕಿದ್ದಳು. ಜಾನಕಿಯ ಹಲವಾರು ಕಟ್ಟುನಿಟ್ಟಿನ ಕ್ರಮಗಳಲ್ಲಿ ಸುರುಳಿ ಹೂವಿನ ವಿಚಾರಕ್ಕೆ ಶುರುವಾದ ಜಗಳ, ಮುನಿಸು ಗಂಡ-ಹೆಂಡಿರಲಿ ತಂದ ಭಿನ್ನಾಭಿಪ್ರಾಯವೇನು..?? ಈ ಮುನಿಸು ಕರಗಿತೇ..?? ಇಲ್ಲಿ ಅಸಹಾಯಕ ಸೊಸೆಯ ಜೊತೆಗೆ ತನಗೆ ಸಿಗದ ಸೌಭಾಗ್ಯವನ್ನು ಮತ್ತೊಬ್ಬರಿಗೂ ಬೇಡವೆನ್ನುವ ಹೊಟ್ಟೆ ಕಿಚ್ಚಿನ ಹೆಣ್ಣು ಜಾನಕಿಯೂ ಕಾಣುತ್ತಾಳೆ. 

ಈ ಮಣ್ಣು ನಮ್ಮದು : ದೇಶ ಸೇವೆಗಾಗಿ ಮಗ ಶ್ರೀಕಾಂತನನ್ನು ಕಳುಹಿಸಿದ ಭಾಗಮ್ಮ ಹಾಗೂ ರಾಯರ ಆತಂಕಕ್ಕೆ ಕಾರಣವಿತ್ತು. ಜೊತೆಗೆ, ಮಗಳು ವಸುಧಾಳಿಗೆ ಎರಡು ಬಸುರು ಇಳಿದು ಮೂರನೇ ಬಸುರಿನ ಸಮಯ. ಈ ಸಮಯದಲ್ಲಿ ಶ್ರೀಕಾಂತನ ಕುರಿತಾದ ವಿಚಾರ ಬಂದು ತಲುಪಿದಾಗ ಭಾಗಮ್ಮ ಕುಸಿದೇ ಹೋಗಿದ್ದರು. ಆಘಾತದ ಈ ವಿಚಾರವಾಗಿ ರಾಯರ ಉನ್ನತ ಯೋಚನೆ ಮಾದರಿಯಾದದ್ದು. ಈ ಮಣ್ಣು ನಮ್ಮದು ಎನ್ನುತ್ತಾ ಶ್ರೀಕಾಂತನಂತಹ ಎಷ್ಟೋ ತರುಣರು ಯೋಧರಾಗಿ ದೇಶಕ್ಕೆ ಸೇವೆ ಸಲ್ಲಿಸುವ ಮನೆ-ಮನಗಳ ಕಥೆ ಇದು. 

ಹಣವೇ ನಿನ್ನಯ... : ಅಶೋಕ ಅಂದು ಬ್ಯಾಂಕಿನಿಂದ ಮನೆಗೆ ತಲುಪಿದಾಗ ಹೊಸ ಚಿಂತೆಯೊಂದು ಆತನ ಹೆಗಲೇರಿತ್ತು. ಮಧ್ಯಮ ವರ್ಗದ ಕುಟುಂಬದ ಅವನಿಗೆ ಹತ್ತು ಸಾವಿರ ಹಣ ಕಡಿಮೆ ಬಿದ್ದಿದ್ದು ಆತನೇ ಕಟ್ಟಿ ಕೊಡುವಂತಾಗಿತ್ತು. ಅಷ್ಟು ಹಣ ಆ ಕಾಲದಲ್ಲಿ ದೊಡ್ಡ ಮೊತ್ತವೇ. ಆ ಸಂದರ್ಭದಲ್ಲಿ ತಮ್ಮ ವಿಶ್ವನ ಪ್ರತಿಕ್ರಿಯೆ ವಿಭಿನ್ನವಾಗಿದ್ದರೂ.. ತಾಯಿ ಹಾಗೂ ತಂಗಿಯರ ಪ್ರತಿಕ್ರಿಯೆ ಆತನಲ್ಲಿ ಬೇಸರವನ್ನು ಮೂಡಿಸಿತ್ತು. ಹಣದ ಮಾಯೆ ತರುವ ಮಾರ್ಪಾಡು ಎಂತಹದ್ದು ಎನ್ನುವುದನ್ನು ಕಟ್ಟಿಕೊಡುವ ಕಥೆ. ಆ ಹತ್ತು ಸಾವಿರದ ಹೊಂದಿಕೆಯಾದದ್ದು ಹೇಗೆ..??

ಬೊಜ್ಜ: ಮುದ್ದ ಇನ್ನೂ ಚಿಕ್ಕ ವಯಸ್ಸಿನಲ್ಲಿಯೇ ಅಪ್ಪನನ್ನು ಕಳೆದುಕೊಂಡಿದ್ದ. ದೊಡ್ಡಪ್ಪನೇ ನಿಂತು ಎಲ್ಲವನ್ನೂ ಮಾಡುತ್ತಿದ್ದರಾದರೂ.. ಶೀನು ಮಾವನ ಆತಂಕ, ಅಮ್ಮನ ಕೊಳಕು ವೇಷ ಎಲ್ಲವೂ ಅವನನ್ನು ಕಸಿವಿಸಿಗೊಳಿಸಿತ್ತು. ಮಗುವಿನ ದೃಷ್ಟಿಯಲ್ಲಿ ಸಾವು ಹಾಗೂ ಬೊಜ್ಜದ ದಿನವನ್ನು ಕಟ್ಟಿಕೊಟ್ಟಿರುವರಾದರೂ.. ಎಲ್ಲವನ್ನು ಮೀರಿದ ಹಸಿವಿನ ಚಿತ್ರಣ ಢಾಳಾಗಿ ಕಾಣುತ್ತದೆ. 

ಮಾನವ ಜನ್ಮ ದೊಡ್ಡದು: ಕುಟುಂಬದೊಡನೆ ತನ್ನ ಆಸೆಯನ್ನು ಈಡೇರಿಸಿಕೊಳ್ಳಲು ಪ್ರವಾಸ ಹೊರಟಿದ್ದ ಜಲಜ ಅಪಘಾತದಲ್ಲಿ ಎಲ್ಲರನ್ನೂ ಕಳೆದುಕೊಂಡು ಒಂಟಿಯಾಗಿದ್ದಳು. ಈಗ ತನಗಾರೂ ಇಲ್ಲವೆಂದು ಸಾವಿನ ದಾರಿ ಹಿಡಿಯುತ್ತಿದ್ದಾಗ.. ತನ್ನಂತೆಯೇ ಎಲ್ಲರನ್ನು ಕಳೆದುಕೊಂಡಿದ್ದ ಎರಡು ಜೀವಗಳಾದ ಹಸುಗೂಸು ಮಧುರ ಹಾಗೂ ಮುದುಕಿ ಸಾವಿತ್ರಮ್ಮ ಆಕೆಯ ಬದುಕಿನ ಆಲೋಚನೆಯ ಗತಿಯನ್ನೇ ಬದಲಿಸಿದ ರೀತಿ ಇಲ್ಲಿದೆ. ಮಾನವ ಜನ್ಮ ದೊಡ್ಡದು ಎಂಬುದು ಆಕೆಗೆ ಮನವರಿಕೆಯಾದ ಪರಿ ಹೇಗೆ..??

ಸಮಿತ್ತು: ಸಾವಿತ್ರಮ್ಮನವರು ಈಗ ಹಿರಿಯ ಮಗನ ಮನೆಗೆ ಬಂದಿದ್ದರು. ಮೂರು ಮಕ್ಕಳ ಜೊತೆಯೂ ಮೂರು ಮೂರು ತಿಂಗಳು ಇರುವ ಅವರ ನಿರ್ಧಾರ ಈಗ ಇಲ್ಲಿಗೆ ಕರೆ ತಂದಿತ್ತು. ಸಿರಿವಂತ ಸೊಸೆಯರಾದ ಗೀತಾ ಹಾಗೂ ಕರುಣಾರಿಗಿಂತ ಹಿರಿಯ ಸೊಸೆ ಭಾರತೀ ಈಗ ಅವರ ಕಣ್ಣಿಗೆ ಬೇರೆಯದ್ದೇ ರೀತಿ ಕಂಡು ಅಸಮಾಧಾನ ಮೂಡಿತ್ತು. ಅವರ ಸಂಸಾರಕ್ಕೆ ಸಮಿತ್ತಾಗಿದ್ದ ಆಕೆಯನ್ನು ಅವರು ನಡೆಸಿಕೊಂಡ ಪರಿ ಹೀಗಿತ್ತು..?? ಮಗಳು ಸುಮಾ ಇವರ ನಡವಳಿಕೆಗೆ ಪ್ರತಿಕ್ರಿಯಿಸಿದ ಬಗೆ ಹೇಗೆ..?

ಕೆಸರಿನಲ್ಲಿ ಒಂದು ಕಮಲ :ರಾಜಪ್ಪನವರ ಅರಮನೆಯಂತಹಾ ಬಂಗಲೆಯಲ್ಲಿ ಸಾವಿತ್ರಮ್ಮನ ಕೈ ಕೆಳಗೆ ಕೆಲಸ ಮಾಡುತ್ತಿದ್ದ ಚೆನ್ನಿಯ ಮನೆಯಲ್ಲಿ ಬಡತನವಿದ್ದರೂ.. ನಾಲ್ಕು ಹೆಣ್ಣು ಮಕ್ಕಳನ್ನು ಹೆತ್ತಿದ್ದರೂ.. ಮಗಳು ಕಮಲಿ ಆಕೆಗೆ ಆಸರೆಯಾಗಿದ್ದಳು. ಸಾವಿತ್ರಮ್ಮನವರಿಗೆ ಹೆಣ್ಣುಮಕ್ಕಳೆಂದರೆ ಆಸೆ. ತನಗೊಂದು ಹೆಣ್ಣು ಮಗು ಬೇಕೆಂದು ಆಶಿಸಿದ್ದರೂ ಅವರಿಗೆ ಹೆಣ್ಣು ಮಗುವಾಗಿರಲಿಲ್ಲ. ಚೆನ್ನಿಯ ಮಗುವನ್ನು ಸಾಕಲು ಕೇಳುತ್ತಿದ್ದರಾದರೂ ಅದು ಈಡೇರುವಂತಿರಲಿಲ್ಲ. ಅಂತಹಾ ಸಂದರ್ಭದಲ್ಲಿ ತೊಟ್ಟಿಯಲ್ಲಿ ಬಿದ್ದಿದ್ದ ಅನಾಥ ಹೆಣ್ಣುಮಗುವೊಂದು ಯಾರ ಮಡಿಲಿಗೆ ಸೇರಿತು..?? ಇಲ್ಲಿ ದೊಡ್ಡವರೆನಿಸಿಕೊಂಡವರ ಸಣ್ಣತನ ಹಾಗೂ ಅಂತಸ್ತಿನಲ್ಲಿ ಸಣ್ಣವರಾಗಿರುವವರ ದೊಡ್ಡತನವೂ ಕಾಣುತ್ತದೆ. 

ಮೂರಾಬಟ್ಟೆ: ಗೌರಿ ದೊಡ್ಡ ಸಾಹೇಬರ ಮನೆಗೆ ಕೆಲಸಕ್ಕೆ ಹೋಗುತ್ತಿದ್ದಳು. ಪುಟ್ಟಿಯ ವಯಸ್ಸಿನವಳೇ ಆದ ಅವರ ಮಗು ವಸಂತಳ ಹುಟ್ಟು ಹಬ್ಬದಂದು ನಡೆದ ಘಟನೆಯೊಂದು ಅವಳ ಬದುಕನ್ನೇ ಮೂರಾಬಟ್ಟೆಯಾಗಿಸಿದ ಕಥೆ ಇಲ್ಲಿದೆ. ಹೆಣ್ಣಿನ ಬಡತನದ ಬದುಕನ್ನು ಅಸಹಾಯಕತೆಯ ಅಡಕತ್ತರಿಗೆ ಸಿಲುಕಿಸಿದ ದುರಂತ ಕಥೆ ಕಾಣುತ್ತದೆ. 

ಕ್ಷಮಯಾ ಧರಿತ್ರಿ: ಮದುವೆಯಾದ ನಂತರ ಮಗ ಬದಲಾದನೆಂದು ಸೊಸೆಯನ್ನು ದೂಷಿಸುತ್ತಾ ಅವಳನ್ನು ಕೀಳಾಗಿ ನಡೆಸಿಕೊಳ್ಳುವ ಅತ್ತೆ ಹಾಗೂ ಅವರ ಇಬ್ಬರು ಅವಿವಾಹಿತ  ಹೆಣ್ಣುಮಕ್ಕಳು ಅವಳಿಗೆ ಪ್ರತಿನಿತ್ಯ ಕೊಡುವ ಕಾಟದ ಜೊತೆಗೆ ಗಂಡನ ಅಸಹಾಯಕತೆಯೂ ಸೇರಿ ಆಕೆ ಮಸಣಕ್ಕೆ ಹೋಗುವವಳಿದ್ದಳು. ಆದರೆ ಆಕೆ ಕ್ಷಮಯಾಧರಿತ್ರಿ ಎನ್ನುವುದಕ್ಕೆ ಅದಕ್ಕಿಂತಲೂ ದೊಡ್ಡ ಉದಾಹರಣೆ ಸಿಗಲಾರದೇನೋ. ಕೂಡು ಕುಟುಂಬಗಳಲ್ಲಿನ ವೈವಾಹಿಕ ಜೀವನದ ನಂತರ ಕಿರುಕುಳದ ಮತ್ತೊಂದು ಮುಖವನ್ನು ಇಲ್ಲಿ ಪರಿಚಯಿಸಿದ್ದಾರೆ.

ಹಕ್ಕು: ಕಮಲಮ್ಮ ತಂಗಿಯ ಮಗಳಾದ ಕಿರಣಗಳನ್ನು ತನಗೆ ಮಗನಿದ್ದರೂ.. ಸಾಕಿ ಬೆಳೆಸಿಕೊಂಡಿದ್ದರು. ತಂಗಿ ಹಾಗೂ ಆಕೆಯ ಗಂಡನ ನಡವಳಿಕೆಯಿಂದ ಮನಸ್ಸು ಕೆಟ್ಟರೂ.. ಕಿರಣಳ ಮೇಲಿಟ್ಟಿದ್ದ ಪ್ರೀತಿಗೆ ಹಲ್ಲು ಕಚ್ಚಿ ಸುಮ್ಮನಾದರು. ತನಗೆ ಅವಳ ಮೇಲೆ ಹಕ್ಕಿಲ್ಲವೆಂದಾದಾಗ ಅವರು ಅನುಭವಿಸಿದ ಮಾನಸಿಕ ಯಾತನೆಗಳಿವೆ. ಮತ್ತೆ ಕಿರಣಳನ್ನು ಅವರ ಬಳಿಗೆ ಸೇರಿಸಲು ಮುಂದಾದಾಗ ಕಮಲಮ್ಮನವರ ತೀರ್ಮಾನವೇನು..? 

ಎತ್ತಣ ಮಾಮರ: ವನಜಮ್ಮನವರ ಮನೆಯಲ್ಲಿ ಅಂದು ಸರಸಮ್ಮನ ಮೇಲಿನ ಆಪಾದನೆಯಿಂದ ದೊಡ್ಡ ಹಗರಣವೇ ನಡೆದಿತ್ತು. ಸ್ಮಿತಾ ಮಾಡಿದ ತಪ್ಪಿನಿಂದ ಸರಸಮ್ಮ ಅಪರಾಧಿಯಾಗುವವರಿದ್ದರು. ಆದರೆ, ಅದರ ನಂತರವೂ ಸರಸಮ್ಮ ಅಲ್ಲಿ ಉಳಿಯಲಾರೆ ಎಂದುಕೊಂಡರೂ.. ಅವರನ್ನು ಮತ್ತೆ ಅಲ್ಲಿ ಸೆಳೆದು ನಿಲ್ಲಿಸಿದ ಮಮತೆ ಯಾವುದು..?? ಸ್ವಪ್ನಳಿಗೂ ಸರಸಮ್ಮನವರಿಗೂ ಇದ್ದ ಬಾಂಧವ್ಯ ಇಂತಹದ್ದು..??

ಒಂದು ಸಂಜೆಯಲ್ಲಿ: ಕೋಲಾರದ ಮೇಷ್ಟ್ರು ಶಾಮಯ್ಯನವರ ಮಗಳು ರುಕ್ಮಿಣಿಗೆ ಅನಂತನೊಟ್ಟಿಗೆ ವಿವಾಹವಾಗಿತ್ತು. ಅಪ್ಪ ತೀರಿಕೊಂಡ ನಂತರ, ಬದಲಾದ ಗಂಡನೊಂದಿಗಿನ ಬಡತನದಲ್ಲಿಯೂ ಭರವಸೆಯಾಗಿದ್ದ ಮಗಳು ವಿಮಲ ತೀರಿಕೊಂಡಾಗ ಅವಳ ಬದುಕು ಸಾಗಿದ್ದೆತ್ತ..?? ಕಾಲು ಜಾರಿ ಬದುಕಬಹುದಾಗಿದ್ದರೂ.. ತನ್ನ ಬದುಕಿನ ರೀತಿಯನ್ನು ಬದಲಾಯಿಸದ ರುಕ್ಕುವಿಗೆ ಸಿಕ್ಕ ಪಟ್ಟವೇನು.. ಆ ಸಂಜೆಯಲ್ಲಿ ನಡೆದ ಆ ಘಟನೆ ಯಾವುದು..??

ಗುರಿ :ತನ್ನ ಪ್ರವಾಸಕ್ಕೆ ಹಣ ಕೊಡಲಿಲ್ಲವೆಂದು ವಿನುತ ಮನೆಯಲ್ಲಿ ಊಟವನ್ನೂ ಮಾಡದೆ, ಪ್ರತಿಭಟಿಸಿ ಮನೆ ಬಿಟ್ಟು ತಂದೆ-ತಾಯಿಗೆ ಕಷ್ಟ ಕೊಡಬೇಕೆನ್ನುವ ಅವಳ ವಿಚಾರಧಾರೆ ಬದಲಾಗಿ ತನ್ನ ಬದುಕಿನಲ್ಲಿಯೂ ಒಂದು ಗುರಿ ಇಟ್ಟುಕೊಳ್ಳಬೇಕು ಎಂಬ ನಿರ್ಧಾರ ತಳೆಯಲು ಕಾರಣವಾದ ಆ ಘಟನೆ ಯಾವುದು..??

ಅಂತರ್ ದೃಷ್ಟಿ: ತಮ್ಮನ ಮಾತಿನಂತೆ ಮನೆ ಕಟ್ಟಲು ಸುಮತಿ ಒಪ್ಪಿಕೊಂಡಳಾದರೂ.. ಅವಳ ಮನಸ್ಸಿನಲ್ಲಿ ಬೇರೆಯದ್ದೇ ಆಲೋಚನೆ ಓಡುತ್ತಿತ್ತು. ಅದಕ್ಕೆ ಗೆಳತಿಯ ಮಾತುಗಳೂ ಸೇರಿತ್ತು. ತಮ್ಮನ ಹೆಂಡತಿ ಸರಳಳ ಕುರಿತು ಮೇಲ್ನೋಟಕ್ಕೆ ಕಂಡದ್ದಕ್ಕೂ.. ಅಂತರ್ ದೃಷ್ಟಿಗೆ ಕಂಡಿದ್ದಕ್ಕೂ ಇದ್ದ ವ್ಯತ್ಯಾಸವೇನು..?? ಸುಮತಿಗೆ ಅರಿವಾದ ಸತ್ಯವೇನು..?? 

ಉಡುಗೊರೆ: ಶಾಂತ ಗೆಳತಿ ಗೌತಮಿಯ ಮನೆಯ ಮದುವೆಗೆ ಹೋದಾಗ ಉಡುಗೊರೆಯೊಂದನ್ನು ಜತನದಿಂದ ಆಯ್ಕೆ ಮಾಡಿದ್ದಳು. ಆ ಉಡುಗೊರೆ ಅವಳಿಗೆ ಸತ್ಯದರ್ಶನ ಮಾಡಿಸಿತ್ತು. ಅಷ್ಟಕ್ಕೂ ಆ ಉಡುಗೊರೆ ಯಾವುದು ಹಾಗೂ ಅದರಿಂದ ತಿಳಿದ ಸತ್ಯವೇನು..?? 

ಜೀರ್ಣೋದ್ಧಾರ: ಸುಬ್ಬಾಭಟ್ಟರು ಪ್ರೀತಿಯಿಂದ ಆರಾಧಿಸುತ್ತಿದ್ದ ಬಾಲಕೃಷ್ಣನ ದೇವಾಲಯ ಶಿಥಿಲವಾಗಿತ್ತು. ಅದರ ಜೀರ್ಣೋದರಕ್ಕಾಗಿ ಪ್ರಯತ್ನಿಸುತ್ತಿದ್ದರು. ಆದರೆ, ಅದೇ ವಿಚಾರವಾಗಿ ಮತ್ತೊಬ್ಬರು ಅವರ ಜೊತೆಗೂಡಿದಾಗ ದೇವಾಲಯ ಜೀರ್ಣೋದ್ಧಾರವಾಗಿ ತನ್ನ ಕೃಷ್ಣನಿಗೆ ನೆಲೆ ಸಿಗುತ್ತದೆ ಎಂದುಕೊಂಡವರು ನಂತರ ಹುಚ್ಚರಾಗಿ ಬೀದಿ ಬೀದಿ ಅಲೆದದ್ದೇಕೆ..??

ನೆನೆಸದೇ ಇದ್ದದ್ದು : ಹುಡುಗಿ ಕಪ್ಪು ಎಂದು ಸರಳ ವಿವಾಹ ಕಷ್ಟವಾಗಿದ್ದಾಗ ಆಕೆಗೆ ಪರಿಚಿತನಾದ ಶ್ರೀ ಅವಳಲ್ಲಿ ಆಸೆ ಹುಟ್ಟಿಸಿ ಮನೆಯಿಂದ ಓಡಿ ಹೋಗಿ ವಿವಾಹವಾಗಲು ನಿಶ್ಚಯಿಸಿದ್ದನಾದರೂ.. ಸರಳಳೂ ಅದಕ್ಕೆ ಒಪ್ಪಿದ್ದಳಾದರೂ.. ಅವರಿಬ್ಬರೂ ನೆನೆಸದೇ ಇದ್ದ ಪ್ರಸಂಗವನ್ನು ನಡೆದು ಇಬ್ಬರ ಬದುಕೂ ಬದಲಾಗಿತ್ತು. ಅವರು ನೆನೆಸದೇ ಇದ್ದದ್ದೇನು ಹಾಗೂ ಆ ಘಟನೆ ಯಾವುದು..?? ಅದಕ್ಕೆ ಕಾರಣಳಾದ ಮಾಲತಿ ಏನು ಮಾಡಿದ್ದಳು..??

ಅಮ್ಮಾ: ದೀಪಿಕಾ ಹಾಗೂ ಪ್ರಕಾಶರಲ್ಲಿ ಪ್ರಕಾಶ ತನ್ನ ಅಮ್ಮನ ಕಷ್ಟವನ್ನು ಅರ್ಥ ಮಾಡಿಕೊಂಡಿದ್ದನಾದರೂ.. ದೀಪಿಕಾಳಿಗೆ ಅಪ್ಪನಿಲ್ಲದೆ ಸಾಕುತ್ತಿರುವ ಅಮ್ಮನ ಬೆಲೆ ಗೊತ್ತಾದ ದಿನ ಹೇಗಿತ್ತು..?? ಅಮ್ಮನಿಗಾಗಿ ಹಂಬಲಿಸಿದ ದೀಪಿಕಾ ಅಮ್ಮನ ಮಹತ್ವವನ್ನು ಅರಿತದ್ದು ಹೇಗೆ..?? ಮಕ್ಕಳ ಆಲೋಚನಾ ದೃಷ್ಟಿಯಿಂದ ರೂಪಿತವಾಗಿರುವ ಕಥೆ. 

ಇಲ್ಲಿನ ಕಥೆಗಳಲ್ಲಿ ಭಾವನೆಗಳಿಗೆ ಹೆಚ್ಚಿನ ಮಹತ್ವ ಕಾಣುತ್ತದೆ. ತಾಳ್ಮೆ ಹಾಗೂ ಕ್ಷಮೆಗೆ ಹೆಚ್ಚಿನ ತೂಕದ ಜೊತೆಗೆ ಮಹಿಳೆಯರು ಅನುಭವಿಸುವ ನೋವುಗಳು ಹಾಗೂ ಕಷ್ಟಗಳ ಮತ್ತೊಂದು ಮುಖವನ್ನು ತೆರೆದಿಡುತ್ತಾರೆ. ಅದೆಲ್ಲದರಿಂದ ಆಗುವ ಪರಿಣಾಮಗಳ ಚಿತ್ರಣವೂ ಇದ್ದು, ಅದಕ್ಕೆ ತಾಳ್ಮೆ ಹಾಗೂ ಕ್ಷಮೆ ಸೇರಿದಾಗ ಆಗುವ ಬದಲಾವಣೆ ನೀತಿ ಪಾಠದಂತಿದೆ. ಸೊಗಸಾದ ಕಥೆಗಳ ಚೆಂದದ ಓದು.

~ವಿಭಾ ವಿಶ್ವನಾಥ್

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ