ಪುಸ್ತಕದ ಶೀರ್ಷಿಕೆ : ಪಿ. ಎಚ್. ಸಿ ಕವಲುಗುಡ್ಡ 24/7
ಲೇಖಕರು : ಡಾ. ಲಕ್ಷ್ಮಣ ವಿ. ಎ
ಪ್ರಕಾಶಕರು : ಕ್ರಿಯೇಟಿವ್ ಪುಸ್ತಕ ಮನೆ
ಪ್ರಥಮ ಮುದ್ರಣ : 2024
ಪುಟಗಳು : 216
ಬೆಲೆ : 250 ರೂ.
ಈ ಕಾದಂಬರಿ ಕೋವಿಡ್ ಸಮಯದಲ್ಲಿ ವೈದ್ಯರ ಜೀವನವನ್ನು ಬಿಚ್ಚಿಡುವ ಕಾದಂಬರಿ. ಕೋವಿಡ್ ಸಮಯ ಎಲ್ಲರ ಬದುಕನ್ನು ಬದಲಿಸಿತಾದರೂ.. ವೈದ್ಯರ ದಿನಚರಿ, ಬದುಕು, ವೈಯಕ್ತಿಕ ಕ್ಷಣಗಳು, ಆಸ್ಪತ್ರೆಗಳಲ್ಲಿನ ಒಳನೋಟಗಳು ಎಲ್ಲವೂ ಸಂಪೂರ್ಣವಾಗಿ ಬದಲಾದ ದಿನಗಳು. ಅಂತಹ ದಿನಗಳ ಚಿತ್ರಣ ಇಲ್ಲಿದೆ. ಸ್ವತಃ ವೈದ್ಯರೇ ಆಗಿರುವ ಲೇಖಕರು ಕಟ್ಟಿಕೊಟ್ಟಿರುವ ಕಾದಂಬರಿ ಇದು.
35 ವರ್ಷದ ವೈದ್ಯ ಡಾ. ಸುಹಾಸ್ ಜಿಲ್ಲಾ ವೈದ್ಯಾಧಿಕಾರಿಗಳ ಕಚೇರಿಯಲ್ಲಿ ಡಿ.ಎಚ್.ಓ ಗಾಗಿ ಕಾಯುತ್ತಿದ್ದ. 50 ಖಾಲಿ ಹುದ್ದೆಗಳಿದ್ದ ಸಂದರ್ಶನಕ್ಕೆ ಬಂದದ್ದು ಕೇವಲ ಐದು ಜನ. ಪರ್ಮನೆಂಟ್ ಕೆಲಸದಲ್ಲಿರುವ ಡಾಕ್ಟರ್ ಗಳು ತಮ್ಮ ಜೀವ ಉಳಿದರೆ ಸಾಕು ಎಂದು ರಜೆ ಹಾಕಿ, ನೆಪ ಹೂಡಿ ಡ್ಯೂಟಿಗೆ ಬರದ ದಿನಗಳಲ್ಲಿ ರೋಗಿಗಳು ದಂಗೆಯೆದ್ದು ಟಿ.ವಿ, ಪೇಪರ್ ಗಳಲ್ಲಿ ಸರ್ಕಾರದ ಮೇಲೆ ರೋಷ ಉಕ್ಕಿದಾಗ ಈ ಸಮಸ್ಯೆಯ ಪರಿಹಾರಕ್ಕಾಗಿ ಕಾಂಟ್ರಾಕ್ಟ್ ಬೇಸಿಸ್ ಮೇಲೆ ವೈದ್ಯಾಧಿಕಾರಿಗಳನ್ನು ನೇಮಿಸಿಕೊಳ್ಳುತ್ತಿದ್ದರು.
ನಾಮಕಾವಸ್ಥೆಯ ಸಂದರ್ಶನ ನಡೆದು ಸುಹಾಸ್ ರಜೆ ಕೇಳುವಂತಿಲ್ಲ, ಭಾನುವಾರವೂ ಡ್ಯೂಟಿ ಮಾಡಬೇಕಾಗುತ್ತದೆ ಎಂದು ಹೇಳಿಯೇ ಆತನನ್ನು ಕವಲುಗುಡ್ಡ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ನೇಮಿಸಲಾಗಿತ್ತು. ಅದು ಕೋವಿಡ್ ಸಮಯವೇ ಅಲ್ಲದಿದ್ದಲ್ಲಿ ಯಾರ ಪ್ರಭಾವವೂ ಇಲ್ಲದೆ ಸರ್ಕಾರಿ ವೈದ್ಯನ ಹುದ್ದೆ ಸಿಗುವುದಾದರೂ ಸುಲಭವಿತ್ತೇ..?!
ದೇಶದ ತುರ್ತು ಆರೋಗ್ಯದ ಸಂಕಟದ ಸಂದರ್ಭದಲ್ಲಿ ಹಗಲಿರುಳೆನ್ನದೆ ದುಡಿಯುವ ವೈದ್ಯರನ್ನೇ ತನ್ನ ಆದರ್ಶವಾಗಿಟ್ಟುಕೊಂಡಿದ್ದವನು. ಜನಸೇವೆಗಾಗಿ ಇದು ತನಗೆ ಸಿಕ್ಕಿರುವ ಅದೃಷ್ಟವೆಂದೇ ತಿಳಿದು ಸಂಕಲ್ಪ ಮಾಡಿ ಕೆಲಸಕ್ಕೆ ಹೊರಟು ನಿಂತಿದ್ದ. ಕವಲಗುಡ್ಡ ಪಿ.ಎಚ್.ಸಿಯಲ್ಲಿ ಇದ್ದದ್ದು ಸರಳ ಸಿಸ್ಟರ್, ಗ್ರೂಪ್ ಡಿ ನೌಕರರಾದ ಕಾಳಮ್ಮ ಹಾಗೂ ವನಜ, ಲ್ಯಾಬ್ ಟೆಕ್ನಿಷಿಯನ್ ರವಿಕುಮಾರ್.
ಅಂದಾಜು 35000 ಜನಸಂಖ್ಯೆಯ ಆರೋಗ್ಯ ಕೇಂದ್ರದ ವ್ಯಾಪ್ತಿಯಲ್ಲಿ ಕ್ವಾರಂಟೈನಿನಲ್ಲಿದ್ದವರು, ಅವರ ಸಂಪರ್ಕಕ್ಕೆ ಬಂದಿದ್ದ ಪ್ರೈಮರಿ, ಸೆಕೆಂಡರಿ, ಟರ್ಷಿಯರಿ ಸಂಪರ್ಕಿತರು, ಹೋಂ ಕ್ವಾರಂಟೈನಿನಲ್ಲಿ ಇದ್ದವರು, ಮೈಕ್ರೋ ಕಂಟೈನ್ಮೆಂಟ್ ಜೋನ್ ಗಳ ಎಲ್ಲಾ ಮೇಲ್ವಿಚಾರಣೆಯನ್ನು ಆತ ನೋಡಬೇಕಿತ್ತು.
ಎರಡನೇ ದಿನದ ಡ್ಯೂಟಿಯಷ್ಟರಲ್ಲಿ ದಿನಕ್ಕೆ ಕನಿಷ್ಠ 100 ಶಂಕಾಸ್ಪದ ರೋಗಿಯ ತಪಾಸಣೆಯ ಟಾರ್ಗೆಟ್ ಕೊಟ್ಟಿದ್ದರು. ರವಿಕುಮಾರ್ ಫೀಲ್ಡ್ ಗೆ ಹೋಗಿ ಸ್ವ್ಯಾಬ್ ಟೆಸ್ಟ್ ಸ್ಯಾಂಪಲ್ ಕಲೆಕ್ಷನ್ ಮಾಡಿಕೊಂಡು ಬರುತ್ತಿದ್ದ ಸಂದರ್ಭದಲ್ಲಿ ಆಸ್ಪತ್ರೆಯನ್ನು ನಿಭಾಯಿಸಬೇಕಾಗಿತ್ತು. ಆಗ ಎಲ್ಲವನ್ನೂ ಕಲಿತು ಪಿ.ಪಿ ಇ ಕಿಟ್ ಹಾಕಿಕೊಂಡು ಆ ಬಿರುಬಿಸಿಲಿನಲ್ಲಿಯೂ ಜಳಜಳ ಬೆವೆತು ಸುಹಾಸ್ ಬಂದ ರೋಗಿಗಳ ಸ್ವ್ಯಾಬ್ ಪರೀಕ್ಷೆ ನಡೆಸುತ್ತಿದ್ದ. ಪಿ.ಪಿ.ಇ ಕಿಟ್ ಧರಿಸಿ ಕೆಲಸ ಮಾಡುವುದು ಕಡಿಮೆ ಸುಲಭದ್ದಲ್ಲ. ಅಲ್ಲದೇ, ಸಿಗದ ನೆಟ್ವರ್ಕ್ ನಲ್ಲಿ ಐ.ಸಿ.ಎಂ.ಆರ್ ಪೋರ್ಟಲಿನಲ್ಲಿ ರೋಗಿಯ ಮಾಹಿತಿಗಳನ್ನು ತುಂಬಬೇಕಿತ್ತು. ತಾತ್ಕಾಲಿಕವಾಗಿ ವನಜ ಆತನಿಗೆ ಸಹಾಯಕಳಾಗಿದ್ದಳು.
ಟೆಸ್ಟಿಂಗ್ ಜಾಗಕ್ಕೆ ಬರುತ್ತಿದ್ದ ಶಂಕಾಸ್ಪದ ರೋಗಿಗಳಿದ್ದ ಜಾಗದಲ್ಲಿ ಚೂರು ಯಾಮಾರಿದರೂ.. ಒಂದೇ ಒಂದು ವೈರಸ್ ನ ಕಣ ದೇಹ ಹೊಕ್ಕರೂ ಸಿಬ್ಬಂದಿಗಳ ಪ್ರಾಣಕ್ಕೆ ಕುತ್ತು ಬರುವಂತಿದ್ದ ಸಂದರ್ಭ..
ಕೈಗಾರಿಕಾ ಪ್ರದೇಶಗಳಿರುವ ಕವಲುಗುಡ್ಡ ಪಿ.ಎಚ್.ಸಿಯಲ್ಲಿ ಇದ್ದ ನಾಲ್ಕೈದು ಸಿಬ್ಬಂದಿಗಳಿಂದ ನಿಯಂತ್ರಣ ಸಾಧಿಸುವುದು ಸುಹಾಸನಿಗೆ ಸುಲಭದ ಮಾತಾಗಿರಲಿಲ್ಲ. ಜೊತೆಗೆ ಆಸ್ಪತ್ರೆಯ ಸಿಬ್ಬಂದಿ ಹಾಗೂ ಆಶಾ ಕಾರ್ಯಕರ್ತೆರ ಜೊತೆಗೆ ಮೀಟಿಂಗು ನಡೆಸಲೇಬೇಕಿತ್ತು. ಒಂದು ಆರೋಗ್ಯ ಕೇಂದ್ರದ ನಿಯಂತ್ರಣ ಸಾಧಿಸಲು ಎಲ್ಲರ ಸಹಕಾರ ಪಡೆಯುವುದು ಅತ್ಯಗತ್ಯವಾಗಿತ್ತು.
ಆಸ್ಪತ್ರೆಯೇ ಕೋವಿಡ್ ನ ಹಾಟ್ ಸ್ಪಾಟ್ ನಂತಿತ್ತು. ಸುಹಾಸ್ ಮನೆಗೆ ಹೋದರೂ ಅಲ್ಲಿ ಭಯಭೀತಳಾಗಿದ್ದ ಪತ್ನಿ ನಳಿನಿ ಹಾಗೂ ಪುಟ್ಟ ಮಗ ಮನ್ವಿತ್ ನಿಂದ ಅಂತರ ಕಾಯ್ದುಕೊಳ್ಳಬೇಕಿತ್ತು. ಏನೇ ಪಿ.ಪಿ.ಇ ಕಿಟ್, ಸ್ಯಾನಿಟೈಸರ್ ಬಳಸಿದರೂ ಜೋಪಾನವಾಗಿರುವುದು ಅತ್ಯವಶ್ಯಕವಾಗಿತ್ತು. ನಳಿನಿಯಂತೂ ಮೊದಲೇ ಹೆದರಿದ್ದವಳು ಅವರಿದ್ದ ಏರಿಯಾ ಸೀಲ್ಡೌನ್ ಆದಾಗ, ಸುಹಾಸನಿಗೆ ಸರ್ಕಾರಿ ಡ್ಯೂಟಿ ಸಿಕ್ಕಾಗ ಮತ್ತಷ್ಟು ಭಯಭೀತಳಾಗಿದ್ದಳು. ಈ ಅಂತರ ಸುಹಾಸನ ಮನದ ಮಾತುಗಳನ್ನು ಹಂಚಿಕೊಳ್ಳಲೂ ಆಗದಂತೆ ಮಾಡಿತ್ತು. ಇದಕ್ಕೆ ಪರಿಹಾರವಾಗಿ ಡಾ. ಸುಹಾಸನಿಗೆ ಕವಲುಗುಡ್ಡ ಆಸ್ಪತ್ರೆಯಿಂದ ತುಸುವೇ ದೂರವಿರುವ ಸುಂದರ ಬಾಡಿಗೆ ಮನೆ ಕಾಳಮ್ಮನಿಂದಾಗಿ ಸಿಕ್ಕಿತು. ಅದರ ಹಿನ್ನೆಲೆ ತಿಳಿದಿದ್ದರೆ ನಳಿನಿ ಅಲ್ಲಿಗೆ ಕಾಲಿಡುತ್ತಿದ್ದದ್ದೂ ಅನುಮಾನ
ಪಿ.ಎಚ್.ಸಿ ಯಲ್ಲಂತೂ ಗೇಟಿನ ಎದುರು, ಟೆಂಟುಗಳಲ್ಲಿ ರೋಗಿಗಳ ಸಾಲೇ ಸಾಲು. ಡಾಕ್ಟರ್ ಗ್ರೂಪಿನಲ್ಲಿ ಮೆಸೇಜುಗಳು, ಸರ್ಕ್ಯುಲರ್ ಗಳ ರಾಶಿಗಳು. ಕೋವಿಡ್ ನಿಂದಾಗಿ ಸತ್ತವರಿಗೆ ಅಂತ್ಯಕ್ರಿಯೆ ಮಾಡಲು ಪಾಲಿಸಬೇಕಾಗಿದ್ದ ಪ್ರೋಟೋಕಾಲ್ ಗಳನ್ನು ಪಾಲಿಸಿ ಆ ಫೋಟೋಗಳು ಹಾಗೂ ರಿಪೋರ್ಟ್ ಗಳನ್ನು ಸುಹಾಸ್ ಅಪ್ಲೋಡ್ ಮಾಡಬೇಕಿತ್ತು.
ಒಂದು ಪುಟ್ಟ ಕಣ್ತಪ್ಪಿನಿಂದ ಇನಿಷಿಯಲ್ ಮಿಸ್ ಆದ ಮುನಿರಂಗಸ್ವಾಮಿಯ ಶವ ವಿಲೇವಾರಿಯಾಗಿತ್ತು. ಸತ್ತವನೆಂದುಕೊಂಡಿದ್ದ ವ್ಯಕ್ತಿ ಬದುಕಿಯೇ ಇದ್ದ. ಸುಹಾಸ್ ಈ ತಪ್ಪಿನಿಂದ ಮೇಲಾಧಿಕಾರಿಗಳ ಕೆಂಗಣ್ಣಿಗೆ ಗುರಿಯಾಗಿದ್ದ. ಜೊತೆಗೆ ಟಿ.ವಿಯವರ ಸುದ್ದಿಗೂ ಸಿಕ್ಕಿದ್ದ.
ಹೊಸ ಹೊಸ ವೈದ್ಯರು ನೇಮಕವಾಗುತ್ತಿದ್ದರೆ, ಹಳೆ ವೈದ್ಯರ ರಾಜೀನಾಮೆ ಸ್ವೀಕಾರವಾಗುತ್ತಿರಲಿಲ್ಲ. ಅವೆಲ್ಲವೂ ಜಿಲ್ಲಾಧಿಕಾರಿ ಕಚೇರಿಗಳಲ್ಲಿದ್ದವು. ಫ್ರಂಟ್ ಲೈನ್ ವಾರಿಯರ್ ಗಳ ಸಾವಾದರೆ 50 ಲಕ್ಷ ರೂಪಾಯಿ ವಿಮೆ ಘೋಷಿಸಿದ್ದರು. ಆದರೂ.. ಆರೋಗ್ಯ ಇಲಾಖೆಯಲ್ಲಿ ವೈದ್ಯರ ಕೊರತೆ ಇತ್ತು. ಇತ್ತ ಸುಹಾಸ್ ನನ್ನು ಟಾರ್ಗೆಟ್ ರೀಚ್ ಆಗದ ಕುರಿತು ಮಾತ್ರ ಪ್ರಶ್ನಿಸುತ್ತಿದ್ದರು. ಆದರೆ, ಆತ ಬೇಡಿಕೆ ಇಟ್ಟಿದ್ದ ಸೌಲಭ್ಯಗಳಾವುವೂ ಶೀಘ್ರವಾಗಿ ದೊರೆತಿರಲಿಲ್ಲ. ಕೋವಿಡ್ ಪಾಸಿಟಿವ್ ಹಾಗೂ ನೆಗೆಟಿವ್ ರಿಪೋರ್ಟ್ ಗಳ ಸಂದರ್ಭದಲ್ಲಿ ರವಿ ಮಾಡುತ್ತಿದ್ದ ಕೆಲವು ತಪ್ಪುಗಳ ಪರಿಣಾಮ ಸುಹಾಸನ ಮೇಲಾಗುತ್ತಿತ್ತು.
ಮುಂದಿನ ದಿನಗಳಲ್ಲಿ ಪ್ರತಿಯೊಂದು ಆರೋಗ್ಯ ಕೇಂದ್ರಕ್ಕೆ ತಲಾ ಮೂರು ಕಾರುಗಳನ್ನು ಹಾಗೂ ಒಂದು ಆಂಬುಲೆನ್ಸ್ ಅನ್ನು ಬಾಡಿಗೆ ಆಧಾರದ ಮೇಲೆ ಮಂಜೂರು ಮಾಡಲಾಗಿತ್ತು. ಒಬ್ಬರು ಡಿ.ಇ.ಓ, ಒಬ್ಬರು ಸ್ಟ್ಯಾಬ್ ಕಲೆಕ್ಟರ್ ಮತ್ತು ಒಬ್ಬರು ಸಹಾಯಕರು. ಒಟ್ಟು ಒಂಬತ್ತು ಜನ ಜೊತೆಗೆ ನಾಲ್ವರು ಡ್ರೈವರ್ ಗಳು. ಹೀಗೆ 13 ಜನರ ಹೊಸ ತಂಡ ರೆಡಿಯಾಯಿತು. ಅದರ ಹೊಣೆಗಾರಿಕೆ ಡಾ. ಸುಹಾಸ್ ಮೇಲಿತ್ತು. ಟಾರ್ಗೆಟ್ ರೀಚ್ ಆಗಲೇಬೇಕಿತ್ತು. ಅವರೆಲ್ಲರನ್ನೂ ಮಾನಸಿಕವಾಗಿಯೂ ಈ ಕೆಲಸಕ್ಕೆ ಅಣಿ ಮಾಡಬೇಕಿತ್ತು. ಅದನ್ನೂ ಮಾಡುತ್ತಿದ್ದ ಸುಹಾಸ್.
ಕಾರ್ಖಾನೆಯೊಂದರಲ್ಲಿ 20 ಕಾರ್ಮಿಕರಿಗೆ ಕೋವಿಡ್ ಪಾಸಿಟಿವ್ ಬಂದಿತ್ತು. ಹಾಗಾಗಿ ಆ ಫ್ಯಾಕ್ಟರಿಗೆ ಬೀಗ ಹಾಕಿಸಿ, ಅಲ್ಲಿದ್ದ ಎಲ್ಲರಿಗೂ ಕೋವಿಡ್ ಟೆಸ್ಟ್ ಮಾಡಿಸಿ, ಅಪ್ಡೇಟ್ ಗಾಗಿ ಫೋಟೋ ತೆಗೆದು ಕಳಿಸಬೇಕಿತ್ತು. ಇನ್ನೇನು ಎಲ್ಲವೂ ಅರ್ಧದ ಹಂತ ತಲುಪಿತು ಎನ್ನುವಾಗ ರಾಜಕೀಯ ಒತ್ತಡದಿಂದ ಅಂದಿನ ಕೆಲಸ ಅಲ್ಲಿಗೆ ನಿಂತಿತ್ತು. ಜೊತೆಗೆ ಅಂದಿನ ಟಾರ್ಗೆಟ್ ಸಹ ಕಡಿಮೆಯಾಗಿತ್ತು. ಮಲ್ಲಿಕಾರ್ಜುನಯ್ಯ ಹಾಗೂ ಜಯರಾಜ್ ಎಂಬ ಇಬ್ಬರು ರಾಜಕೀಯ ವ್ಯಕ್ತಿಗಳ ಹಸ್ತಕ್ಷೇಪ ಮುಂದೆ ಸುಹಾಸನ ಕಾರ್ಯಗಳನ್ನು ಮತ್ತಷ್ಟು ಕಠಿಣಗೊಳಿಸಿತು.
ಕೋವಿಡ್ ನಲ್ಲಿ ಮೃತಪಟ್ಟ ಬಡ ಕುಟುಂಬಕ್ಕೆ ಸರ್ಕಾರ ಎರಡು ಲಕ್ಷಗಳ ಪರಿಹಾರ ಘೋಷಿಸಿದ್ದರಿಂದ ಫಲಾನುಭವಿಗಳನ್ನು ಗುರುತಿಸುವ ಜವಾಬ್ದಾರಿಯೂ ಸುಹಾಸ್ ಹೆಗಲೇರಿತು. ಇದನ್ನು ನಿಭಾಯಿಸುವ ಹಾದಿ ಸುಲಭವಿರಲಿಲ್ಲ. ಜೊತೆಗೆ ಭಾವನೆಗಳನ್ನೂ,.
ಇನ್ನು ಹೋಂ ಡೆತ್ ಆದಾಗ, ಆ ಸಮಯದಲ್ಲಿ ಲಭ್ಯವಿಲ್ಲದ ಆಂಬುಲೆನ್ಸ್ ಜೊತೆಗೆ ಆಕ್ಸಿಜನ್ ಕೊರತೆಯಿಂದಾದ ಗರ್ಭಿಣಿ ಭವ್ಯಳ ಸಾವಿಗೆ ಕವಲುಗುಡ್ಡ ಆರೋಗ್ಯ ಕೇಂದ್ರದ ಎಲ್ಲಾ ಸಿಬ್ಬಂದಿಯಿಂದ ಆದ ಕರ್ತವ್ಯಲೋಪ ಎಂದು ನೋಟಿಸ್ ಜಾರಿಯಾಗಿತ್ತು. ಇದಕ್ಕೆ ಸುಹಾಸ್ ಏನೇ ಕಾರಣ ನೀಡಿದರೂ.. ಅದು ತನ್ನ ಕೈಮೀರಿದ್ದೆಂದು ಹೇಳಿದರೂ ಆತನ ಮೇಲೆ ವಿಚಾರಣೆಯಂತೂ ಜಾರಿಯಾಯಿತು.
ಇನ್ನು ಕೆಲ ತಿಂಗಳ ನಂತರ ಮುಂದಿನ ಹಂತವಾಗಿ ಕೋವಿಡ್ ಲಸಿಕೆ ಪಿ.ಎಚ್.ಸಿಗೆ ಬಂದಿತ್ತು. ಮೊದಲಿಗೆ ಎಲ್ಲಾ ಸಿಬ್ಬಂದಿಗೂ ಲಸಿಕೆ ನೀಡಿ, 60 ವರ್ಷ ಮೇಲ್ಪಟ್ಟವರಿಗೆ ಲಸಿಕೆ ನೀಡುವ ಕೆಲಸ. ಪುಟ್ಟ ಸಂಜೀವಿನಿ ಎಲ್ಲವನ್ನು ಬದಲಾಯಿಸುತ್ತದೆ ಎಂದುಕೊಂಡವನಿಗೆ ಆತನ ಕೆಲಸ ಮತ್ತಷ್ಟು ಬಿಗಡಾಯಿಸಿತು. ಜೀವಭಯ ಇದ್ದ ಯುವಕರು ರಾಜಕೀಯ ವ್ಯಕ್ತಿಗಳು ಜೊತೆಗೆ ಸೇರಿ ಆಸ್ಪತ್ರೆಯಲ್ಲಿ ಕರಪ್ಟ್ ಆಗಿದ್ದ ಸಿಬ್ಬಂದಿಯಿಂದ ನಡೆಸಿದ ಗೋಲ್ಮಾಲ್ ಗೆ ಈತನ ತಲೆದಂಡವಾಗಿತ್ತು.
ತಾಲೂಕು ಮೆಡಿಕಲ್ ಆಫೀಸರ್ ಡಾ. ಹೊಸಮನಿಯವರ "ಯು ಹ್ಯಾವ್ ಬೀನ್ ರಿಲೀವ್ಡ್" ಎಂಬ ತಣ್ಣನೆಯ ಮಾತುಗಳು ಸುಹಾಸ್ ನಿಗೆ ತಂದ ಭಾವಗಳೇನು. ? ಕವಲುಗುಡ್ಡದಲ್ಲಿ ನ ಬಾಡಿಗೆ ಮನೆಯ ಹಿಂದಿನ ರಹಸ್ಯ ಏನಿತ್ತು ? ನಾನು ಮೇಲೆ ಹೇಳುವ ಪ್ರಸಂಗಗಳು ಬೆರಳೆಣಿಕೆಯಷ್ಟು ಅಷ್ಟೇ.. ಇಂತಹ ಎಷ್ಟೋ ಪ್ರಸಂಗಗಳಿಗೆ ಡಾ. ಸುಹಾಸ್ ಮೂಕಸಾಕ್ಷಿಯಾಗುತ್ತಾನೆ. ಪರ್ಮನೆಂಟ್ ಹಾಗೂ ಗುತ್ತಿಗೆಯಲ್ಲಿ ನೇಮಕವಾದ ವೈದ್ಯರುಗಳ ಭೇದ-ಭಾವ ಸುಹಾಸನ ಕಣ್ಣಲ್ಲಿ ಚಿತ್ರಿತವಾಗಿರುವುದು ಹೇಗೆ ಓದಿ ನೋಡಿ.
*************
"ವೈದ್ಯೋ ನಾರಾಯಣೋ ಹರಿಃ" ಎಂಬ ಮಾತು ವೈದ್ಯರ ಮೇಲೆ ರೋಗಿಗಳ ನಂಬಿಕೆ ಹಾಗೂ ಅವರನ್ನು ದೇವರ ಸ್ವರೂಪವಾಗಿ ಕಾಣುವುದನ್ನು ಹೇಳುತ್ತದೆ. ವೈದ್ಯ ವೃತ್ತಿಯ ಮೇಲೆ ಅಪಾರವಾದ ಗೌರವವನ್ನು ಇರಿಸಿಕೊಂಡು ಪ್ರಾಮಾಣಿಕವಾಗಿ ದುಡಿಯಲು ಕೆಲಸಕ್ಕೆ ಸೇರಿದ ಸುಹಾಸ್ ಸುತ್ತಲಿನವರ ಸಮಸ್ಯೆಗೆ ತನ್ನ ಮಿತಿಯಲ್ಲಿ ಸ್ಪಂದಿಸುತ್ತನಾದರೂ.. ಅದಕ್ಕೆ ಆತ ತರುವ ಬೆಲೆ ಅಪಾರ.
ಸೇವೆಯೇ ತನ್ನ ಪರಮೋಚ್ಚ ಗುರಿ ಎಂದು ವೈಯಕ್ತಿಕ ಜೀವನವನ್ನು ಬದಿಗೊತ್ತಿ ರೋಗಿಗಳ ಚಿಕಿತ್ಸೆಗಾಗಿ ನಿಲ್ಲುತ್ತಾನೆ ಡಾ. ಸುಹಾಸ್.
ವೈದ್ಯರಾದವರು ಪ್ರತಿದಿನವೂ ಕಲಿಯಬೇಕು. ಇಲ್ಲಿ ಸುಹಾಸ್ ತನಗೆ ಗೊತ್ತಿಲ್ಲದ ವಿಚಾರಗಳನ್ನು ಕಲಿತು ರೋಗಿಗಳ ಸೇವೆಗೆ ಮೊದಲ ಆದ್ಯತೆ ನೀಡುತ್ತಾನೆ.
ದೈಹಿಕ ಹಾಗೂ ಮಾನಸಿಕ ಸವಾಲುಗಳನ್ನು ಮೆಟ್ಟಿ ನಿಂತು ಜನರ ಜೀವ ಉಳಿಸಲು ತನ್ನ ಕೈಲಾದಷ್ಟು ಹೋರಾಡುತ್ತಾನೆ. ಸಮಸ್ಯೆಯ ಜೊತೆಗೆ ಮಾತ್ರವಲ್ಲದೆ, ಭ್ರಷ್ಟತೆಯ ವಿರುದ್ಧವೂ ಹೋರಾಡಬೇಕಾದ ಸಂದರ್ಭ ಬಂದಾಗ ದಿಟ್ಟವಾಗಿ ನಿಲ್ಲುತ್ತಾನೆ. ಸುದೀರ್ಘವಾದ ಕೆಲಸದ ಅವಧಿ, ವೇಳೆಯ ಮಿತಿ ಇಲ್ಲದೆ, ದಣಿವಿದ್ದಾಗಲೂ ಅದಾವುದನ್ನೂ ತೋರ್ಪಡಿಸಿಕೊಳ್ಳದೆ ಕೆಲಸ ಮಾಡುವುದನ್ನು ಕಾಣಬಹುದು.
ರೋಗಿಗಳು ಸಾವನ್ನಪ್ಪಿದಾಗ ಅವರ ಕುಟುಂಬದವರ ಜೊತೆ ವೈದ್ಯರು ಒಡನಾಡುವ ಕ್ಷಣಗಳು, ಸಾಂತ್ವನ ಹೇಳುವ ಪರಿ, ಅತ್ಯಂತ ಸೂಕ್ಷ್ಮವಾಗಿರಬೇಕು. ಅಂತಹ ಸೂಕ್ಷ್ಮತೆ ಡಾ. ಸುಹಾಸ್ ನಲ್ಲಿ ಕಾಣುತ್ತದೆ.
ಮಾನವೀಯತೆಯಿಂದ, ಪ್ರಾಮಾಣಿಕವಾಗಿ, ತೃಪ್ತಿಯಿಂದ ಆತ ಕೆಲಸ ಮಾಡಿದರೂ ಭ್ರಷ್ಟ ವ್ಯವಸ್ಥೆಯಿಂದ ಸಿಗಬೇಕಾದ ಗೌರವ ಸಿಗದೇ ಹೋದದ್ದು ವಿಪರ್ಯಾಸ.
ಸಾಂಕ್ರಾಮಿಕ ರೋಗದಲ್ಲಿ ತನ್ನ ಸಾವೇ ಎದುರು ಬಂದು ನಿಲ್ಲುತ್ತದೆ ಎಂಬ ಸತ್ಯದ ಅರಿವಿದ್ದರೂ.. ದಾರುಣ ಸಂದರ್ಭಗಳಲ್ಲಿ ತನ್ನನ್ನೇ ತಾನು ಅರ್ಪಿಸಿಕೊಂಡು ಸೇವೆ ಸಲ್ಲಿಸುವುದು ಸುಲಭದ ಮಾತಲ್ಲ. ಹಾಗೆ ಸೇವೆ ಸಲ್ಲಿಸಿದ ಎಲ್ಲಾ ಕೋವಿಡ್ ವಾರಿಯರ್ ಗಳಿಗೂ ಒಂದು ನಮನ ಸಲ್ಲಿಸುವುದು ಅತ್ಯವಶ್ಯಕ. ಪ್ರತಿಯೊಂದು ಜೀವದ ಉಳಿವಿಗೂ ಕಾರಣರಾಗುವ ವೈದ್ಯರನ್ನು ಮತ್ತಷ್ಟು ಗೌರವಿಸುವುದು ಅವಶ್ಯಕ. ಈ ಭಾವನೆಗಳನ್ನು ಮತ್ತಷ್ಟು ಹೆಚ್ಚಾಗಿಸಿದ ಕಾದಂಬರಿ ಇದು.
~ವಿಭಾ ವಿಶ್ವನಾಥ್
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ