ಪುಸ್ತಕದ ಶೀರ್ಷಿಕೆ : ಬಣ್ಣದ ಕಾಲು
ಲೇಖಕರು : ಜಯಂತ ಕಾಯ್ಕಿಣಿ
ಪ್ರಕಾಶಕರು : ಅಂಕಿತ ಪುಸ್ತಕ
ಪ್ರಥಮ ಮುದ್ರಣ : 1999
ಆರನೇ ಮುದ್ರಣ : 2021 (ನನ್ನ ಓದಿಗೆ ಸಿಕ್ಕಿದ್ದು)
ಪುಟಗಳು : 132
ಬೆಲೆ : 120 ರೂ.
ಜಯಂತ ಕಾಯ್ಕಿಣಿಯವರ ಕಥೆಗಳು ಚಲಿಸುವ ಗಳಿಗೆಗಳು, ನಿಂತಿರುವ ಚಿತ್ರಗಳು, ಸುತ್ತಮುತ್ತಲೂ ನಾವು ಕಂಡ ಹಾಗೂ ನಾವು ಕಾಣದ ಪರಿಸರ ಎಲ್ಲವೂ ಕಥೆಗಳಲ್ಲಿ ಕಣ್ಮುಂದೆಯೇ ಕಟ್ಟುವಂತಿದೆ. ಈ ಕಥೆಗಳಲ್ಲೊಮ್ಮೆ ಹೊಕ್ಕರೆ ಅವೇ ಇಲ್ಲೆಲ್ಲಾ ಯಾನ ಮಾಡಿದಂತೆನ್ನಿಸುತ್ತದೆ. ಇಲ್ಲಿಯ ಕಥೆಗಳು ಯಾವುದೋ ಒಂದು ಸಂದೇಶವನ್ನು ನೀಡಲೇಬೇಕೆಂಬ ಹಪಾಹಪಿಯನ್ನು ದಾಟಿದಂತಹ ಕಥೆಗಳು ಎನ್ನಿಸಿತು.
ಈ ಕಥಾಸಂಕಲನದಲ್ಲಿ ಎರಡು ಭಾಗಗಳಲ್ಲಿ ಒಟ್ಟು 13 ಕಥೆಗಳನ್ನು ಕಟ್ಟಿಕೊಟ್ಟಿದ್ದಾರೆ
ಭಾಗ ಒಂದು
ಬಣ್ಣದ ಕಾಲು : ಪೀಠಿಕೆಯಿಂದಲೇ ಕುತೂಹಲ ಮೂಡಿಸುವ ಈ ಕಥೆಯಲ್ಲಿ ನರಸಿಂಹ ಮಗನನ್ನು ಕರೆದುಕೊಂಡು ಮುಂಬೈಗೆ ಹೋಗುವ ಚಿತ್ರಣವಿದೆ. ಅತಿ ಪುಂಡನಾಗಿದ್ದ ಚಂದುವನ್ನು ತಂದೆ ನರಸಿಂಹ ರಿಮ್ಯಾಂಡ್ ಹೋಂಗೆ ದಾಖಲು ಮಾಡಲು ಅಲ್ಲಿ ಕಾಟಕರ್ ಕಾಕಾ ಸಹಾಯ ಪಡೆಯುವವನಿದ್ದ. ಚಂದುವಿಗೆ ಇದಾವುದರ ಪರಿವೆಯೂ ಇರಲಿಲ್ಲ. ಬದಲಾಗಿ ಕುಂಟ ಮಂಗೇಶ ಕಟ್ಟಿಕೊಟ್ಟ ಚಿತ್ರಣವೇ ಅವನ ಕಣ್ಣಲ್ಲಿ. ಮಂಗೇಶನಿಗೆ ಮುಂಬೈಯಲ್ಲಿ ಸಿಗುವ ಒಂದು ಜೋಡಿ ಕಾಲು ಅದರಲ್ಲೂ.. ಬಣ್ಣದ ಕಾಲು ತರುವ ಕನಸು ಕಟ್ಟಿಕೊಂಡು ಹೊರಡುತ್ತಾನೆ ಚಂದು. ವಾಸ್ತವ ಅರಿಯದ ಪುಟ್ಟ ಪೋರ, ವಾಸ್ತವಕ್ಕೆ ನಡುಗಿ ಹೋಗುವ ನರಸಿಂಹ ಇಬ್ಬರ ಕಣ್ಣಲ್ಲೂ ಕಾಣುವ ವಿಭಿನ್ನ ಚಿತ್ರಣಗಳಿವೆ ಇಲ್ಲಿ.
ಚೌತಿ ಚಂದ್ರ : ಡ್ರೈವರ್ ಪಾಂಡುರಂಗ ತನ್ನ ಜೊತೆ ಕೆಲಸ ಮಾಡಿದ್ದ, ಈಗ ಶಿಫ್ಟ್ ಇನ್ ಚಾರ್ಜ್ ಸಾವಂತನ ಜೊತೆ ಗಣಪತಿ ಹಬ್ಬಕ್ಕಾಗಿ ರಜೆ ಕೇಳಿ ಇಲ್ಲವೆನಿಸಿಕೊಂಡಾಗ.. ಅವನದ್ದೇ ರೀತಿಯಲ್ಲಿ ದಂಗೆ ಎದ್ದು ಬಸ್ಸಿನ ಸಮೇತ ಊರಿಗೆ ಹೊರಡುತ್ತಾನೆ. ಆದರೆ, ಮುಂದಿನ ಪರಿಣಾಮಗಳು..? ಮನೆಯವರ ಭಯ, ಆತಂಕ, ಸಮರ್ಥನೆ, ವಿಭಿನ್ನ ನಡವಳಿಕೆಗಳು ಹೀಗೆ ಒಂದು ವಾಸ್ತವದ ಕಥೆ ಕತ್ತಲಿಂದ ಬೆಳಕಿನೆಡೆಗೆ ಸಾಗಿತೇ ಅಥವಾ ಬೆಳಕಿನಿಂದ ಕತ್ತಲೆಡೆಗೆ ಸಾಗಿತೇ..? ಓದಿ ನೋಡಿ.
ಸೇವಂತಿ ಹೂವಿನ ಟ್ರಕ್ಕು : ಮುನ್ಸಿಪಲ್ ಚಾಳ್ ನ ಕೊನೆಯ ಖೋಲಿಯಲ್ಲಿದ್ದ ದುರ್ಗಿ ಬಹಳ ವರ್ಷದ ಹಿಂದೆ ಅಲ್ಲಿಗೆ ಕೆಲಸಕ್ಕೆಂದು ಬಂದವಳು, ವಯಸ್ಸಾದರೂ ಈಗ ಅಲ್ಲಿಯೇ ಉಳಿದು ಹೋಗಿದ್ದಳು. ಎಲ್ಲರ ಭಾರವನ್ನು ಹಗುರ ಮಾಡಲು ಬಂದವಳು ಈಗ ಅವರಿಗೆ ಭಾರವಾಗುವ ಪರಿಸ್ಥಿತಿಯಲ್ಲಿದ್ದಳು. ಒಂದು ಉದ್ದಾನುದ್ದದ ರಾತ್ರಿ, ದುರ್ಗಿಯ ಗತ, ವಾಸ್ತವ ಎಲ್ಲಕ್ಕಿಂತ ಹೆಚ್ಚಾಗಿ ಸೇವಂತಿಗೆ ಹೂವಿನ ಟ್ರಕ್ಕಿನ ಘಮಲು ಉಳಿದುಹೋಗುತ್ತದೆ.
ಅಪರೂಪ : ಹುಟ್ಟಿನಿಂದಲೇ ತನ್ನ ಬಲಪಾರ್ಶ್ವ ಸೊಟ್ಟಗೆ, ಬಲಹೀನವಾಗಿದ್ದ ವರ್ಷ ಮನಸ್ಸಿನಲ್ಲಿ ಮೊದಲಿಂದಲೇ ತನ್ನ ದೇಹದ ಇದ್ದ ಭಾವನೆಯನ್ನು ಬದಲಾಯಿಸುವುದು ಸುಲಭವಿರಲಿಲ್ಲ. ಆದರೆ, ಅವಳ ಪೂರ್ಣ ಫೋಟೋ ಒಂದರ ಅವಶ್ಯಕತೆ ಇದ್ದದ್ದಂತೂ ಹೌದು. ಅವಳ ದೇಹದ ನ್ಯೂನತೆಯನ್ನು ಎತ್ತಿ ತೋರಿಸುವಂತಹ ಫೋಟೋವಾದರೂ ಏಕೆ ಬೇಕಿತ್ತು,.? ಅಪೂರ್ವ ಅಪರೂಪವಾದ ಕ್ಷಣಗಳನ್ನು ಆಕೆ ಸ್ಟುಡಿಯೋದಲ್ಲಿ ಕಣ್ಣು ತುಂಬಿಕೊಂಡರೂ.. ಸ್ಟುಡಿಯೋದವನ ಕಣ್ಣಲ್ಲಿ ಆ ದೃಶ್ಯಗಳಿದದ್ದು ಹೇಗೆ..?
ಹೊಸ್ತಿಲು : ಮುಚ್ಚೀಮಿಯಾನ ಮೋಡಕಾ ದುಕಾನಿನಲ್ಲಿ ಮುರಿದ ಮನೆಗಳ ಅವಶೇಷವನ್ನು ಮಾರಲಾಗುತ್ತಿತ್ತು. ಮಿಯಾ ಕಾಣುತ್ತಿದ್ದ ಕಲ್ಪನೆ, ಕನಸು ವಾಸ್ತವ ಎಲ್ಲದರ ಮಿಶ್ರಿತ ಭಾವ ಇಲ್ಲಿ ಚಿತ್ರಿತವಾಗಿವೆ.
ದಿಟ್ಟಿಬೊಟ್ಟು : ಸಿಂಬಳ ಸುರುಕ, ಗಲೀಜು ಪುಟ್ಟ ದೇವತೆಗಳ ಕನಸಿಗೆ ಬಣ್ಣ ತುಂಬವಂತೆ ಬಣ್ಣಬಣ್ಣದ ರೇಖಾಚಿತ್ರವನ್ನು ಕಲಿಸುತ್ತಿದ್ದ ಕೆ. ಕೆ ಅಥವಾ ಖಡು ಕಾಕಾ ಇಂತಹ ಮಕ್ಕಳ ಕನಸುಗಳಿಗೆ ಬಣ್ಣ ತುಂಬುವುದರಲ್ಲಿ ಸಾರ್ಥಕತೆ ಕಾಣುತ್ತಿದ್ದರು. ಅವರು ಕೊಟ್ಟ ಖಾಲಿ ಕಾಗದವನ್ನು ಮಕ್ಕಳು ಜೋಪಾನ ಮಾಡುವುದರಲ್ಲಿ ಅಸ್ಥೆ ವಹಿಸಿದರು. ಆ ಖಾಲಿ ಕಾಗದದ ರಹಸ್ಯವೇನು..? "ಜಗದ ಕಣ್ಣು ತಾಕದಿರಲಿ ಎಂದು ತಾಯಿ ಕಂದನ ಕೆನ್ನೆಗೆಟ್ಟ ದಿಟ್ಟಿ ಬೊಟ್ಟಿನಷ್ಟೇ ಅವು ಅಮಾಯಕವಾಗಿದ್ದವು" ಎನ್ನುತ್ತಾರೆ. ಇಂತಹ ಅಮಾಯಕ ಜೀವಗಳ ಕಥೆ ಇಲ್ಲಿದೆ.
ಭಾಗ ಎರಡು
ಸ್ವಪ್ನ ದೋಷ : ಭವಾನಿ ಹಾಗೂ ಲೀಲಾಧರರ ದಾಂಪತ್ಯ ಹಾಗೂ ಭವಾನಿಯ ಬಂಗಾರದ ಆಸೆ, ಅವಳ ಕನಸು ಇದ್ದಕ್ಕಿದ್ದಂತೆ ಮತ್ತೊಂದು ದಿಕ್ಕಿಗೆ ಹೊರಳಿದ ಪ್ರಸಂಗ. ಬೇರೆಯವರಿಗೆ ವಿಚಿತ್ರವಾಗಿ ಕಂಡರೂ.. ಭವಾನಿ ಅಂತಹ ಬದುಕನ್ನು ಇಷ್ಟಪಟ್ಟದಕ್ಕೆ ಕಾರಣವೇನು..? ಆಕೆ ಕಂಡ ಕನಸಿನಂತಹ ಬದುಕು ಎಷ್ಟು ಕಾಲ ಉಳಿಯಿತು ಅಥವಾ ಎಷ್ಟು ಸಫಲವಾಯಿತು ಓದಿ ನೋಡಿ.
ಟ್ರೈಸಿಕಲ್ : ಪ್ರಿಯಾಗಿ ಹಾಗೂ ಪ್ರಭಾಕರನ ಮಗ ಆನಿಗೆ ಕೊಟ್ಟ ಟ್ರೈಸಿಕಲ್ ಅನ್ನು ಈಗ ಮತ್ತೆ ಮಾಸ್ತರರು ಮರಳಿ ಒಯ್ಯಲೆಂದೇ ಬಂದರಾದರೂ.. ಅವರ ಮನಸ್ಸಿನ ವಿಲಕ್ಷಣ ವೇದನೆ, ಸೆಳೆತ.. ಪ್ರಭಾಕರ, ಪ್ರಿಯಾಗಿ ಹಾಗೂ ಆನುವಿನ ಆತಂಕ ಎಲ್ಲವೂ ಇಲ್ಲಿದೆ. ಅಷ್ಟಕ್ಕೂ ಟ್ರೈಸಿಕಲ್ ಯಾರ ಬಳಿ ಉಳಿಯಿತು..? ಅದರ ಭಾಂದವ್ಯವಾದರೂ ಎಂತಹದು..?
ಗಾಳಿಮರದ ನೆರಳು : ತುಳಸಿಯ ಅಣ್ಣ ನಾಗಮ್ಮನ ಗಂಡ ವೆಂಕಟೇಶನನ್ನು ಕುಮಟೆಯ ಜೈಲಿನಿಂದ ಕಾರವಾರದ ಜೈಲಿಗೆ ಒಯ್ಯುತ್ತಾನೆ ಎಂದೂ.. ಅವರು ಇದೇ ಹೆದ್ದಾರಿಯಲ್ಲಿ ಹಾದು ಹೋಗುತ್ತಾರೆ ಎಂದು ಹೊರಟ ಅತ್ತಿಗೆ, ನಾದಿನಿಯರ ಕೈಯಲ್ಲಿ ವೆಂಕಟೇಶನೇ ತಂದ ಹೊಸಕ್ಕಿಯ ಪಾಯಸವಿತ್ತು. ನಂತರ, ಗಾಳಿಮರಗಳ ನಡುವಿಂದ ಬಂದ ಗಾಳಿಯೊಂದು ಇವರಿಬ್ಬರನ್ನು ಮಾತ್ರವಲ್ಲದೆ ಮೂರನೆಯವರನ್ನೂ ಸಂತೈಸಿತ್ತು. ಯಾರದು..? ವೆಂಕಟೇಶನ ಭೇಟಿ ಆಯಿತೇ..? ಓದಿ ನೋಡಿ.
ತೀರ : ಸಮುದ್ರ ತೀರದಲ್ಲಿ ಕಂಡ ವಿಸ್ಮಯವೊಂದು ವಿಜೇ ಮಾಸ್ತರು, ಮೆಣಸಗಿ ಹಾಗೂ ರುಕ್ಮಾಂಗದನಿಗೆ ಬೇರೆಯದ್ದೇ ಲೋಕವನ್ನು ತೆರೆದಂತಿತ್ತು. ಸಮುದ್ರದ ವಾಸನೆ, ತೀರದ ವಿಸ್ಮಯ ಹಾಗೂ ಎಲ್ಲರ ಎದೆಯೊಳಗಿನ ನಿಶಬ್ದ ಬೇರೆಯದ್ದೇ ಲೋಕದ ಧ್ವನಿಯಂತೆ ಭಾಸವಾಗಿ ವಿಭಿನ್ನವಾಗಿ ತಾಗುವ ಕಥೆ ಇದು.
ಚುಕ್ಕಾಣಿ : ಯುದ್ಧಕ್ಕೆ ಹೊರಟವರಂತೆ ಹೊರಟ ಲಾಂಚುಗಳು ಸಮುದ್ರದಲ್ಲಿ ಹೋಗಿದ್ದಾಗ ಬಂದರು ಬಿಕೋ ಎನ್ನುವ ಚಿತ್ರಣದ ಜೊತೆಗೆ ಬೋಳಾಗಿ ಹರಿಯುವ ಅಘನಾಶಿನಿಯ ಒಳಗು, ಜೊತೆಗೆ ಮಾಸ್ತರರ ಮನೆಯ ಕಥೆ. ಅಂತರಂಗದ ಕುಲುಕಷ್ಟೇ ಕೇಳುವಂತಹ ನಿಶ್ಯಬ್ದಕ್ಕೆ ಮುನ್ನಿನ ಕಥೆ ಇಲ್ಲಿದೆ.
ಬಿಡು ಬಿಡು ನಿನ್ನಯ... : ಮಿರ್ಜಾನಾದಲ್ಲಿ ಇದ್ದ ಮೂರು ದಶಕಗಳ ಹಿಂದಿನ ಚಟುವಟಿಕೆಗಳಿಗೆ ಸಂಬಂಧಿಸಿದ ಎರಡು ಜೀವಗಳು ಇನ್ನೂ ಅದಕ್ಕೆ ಸಂಬಂಧಿಸಿದಂತೆ ಯೋಚಿಸುತ್ತಿದ್ದವು. ಒಬ್ಬರು ನವಿಲನ್ನು ರಕ್ಷಿಸಲು ಹಾಗೂ ಕೋಟೆಯನ್ನು ಕಾಯಲು ವಿದ್ಯಾರ್ಥಿಗಳನ್ನು ತಯಾರು ಮಾಡಿದ್ದ ವಿದ್ಯಾರ್ಥಿಗಳ ನೆಚ್ಚಿನ ಗುರೂಜಿ ಪಡಸಾಲೆ ಮಾಸ್ತರು. ಮತ್ತೊಬ್ಬರು ಅದೇ ಗುರೂಜಿಯ ಮೆಚ್ಚಿನ ವಿದ್ಯಾರ್ಥಿ ದಿಲೀಪನ ತಂದೆ ಘನಶ್ಯಾಮ ನಾಯಕ. ಅಕಸ್ಮಾತ್ ಇಬ್ಬರೂ ಈಗ ಭೇಟಿಯಾಗಿದ್ದಿದ್ದರೆ.. ಘನಶ್ಯಾಮ ಹೇಗಿರುತ್ತಿದ್ದ.. ಪರಿಸರದ ಕಾಳಜಿಯ ಜೊತೆಗೆ ಮನುಷ್ಯನ ಮಾನವೀಯತೆ ಜೀವಂತಿಕೆಯ ಚಿತ್ರಣ ಕಂಡಿತು.
ಚಂದ್ರಶಾಲೆ : ತೇರಿನ ಮನೆಯಲ್ಲಿ ಯಾವಾಗಲೂ ಇರುತ್ತಿದ್ದ ಕಾಯಕ್ಕ ವಿಶ್ವೇಶ್ವರಯ್ಯನ ಗೋಪುರದಂತಹ ಕುಂಕುಮಗಳನ್ನು ಪೇರಿಸಿಟ್ಟ ಕುಂಕುಮದ ಅಂಗಡಿಯಲ್ಲಿದ್ದ ಕಪ್ಪು ಕುಂಕುಮವನ್ನು ಬಳಸಲು ತೋರಿದ ರೀತಿಯ ವಿಭಿನ್ನತೆಯ ಜೊತೆಗೆ ರಥಬೀದಿಯ ಸದ್ದುಗಳು, ತೇರು ಹಾಗೂ ಅಲ್ಲಿನ ವರ್ತಮಾನದ ಕಾಣುವ ಹಾಗೂ ಕಾಣದ ಚಿತ್ರಣ ಇಲ್ಲಿದೆ.
ಕಾಯ್ಕಿಣಿಯವರ ಕಥೆಗಳು ಹೇಳಿಯೂ ಹೇಳದ್ದು ಹಾಗೂ ಹೇಳದೆಯೂ ಹೇಳುವಂತಹದ್ದು ಮತ್ತೇನೋ ಇರುವಂತೆ ಭಾಸವಾಯಿತು. ನನ್ನ ಓದಿಗೆ ಈ ಕಥೆಗಳು ಎಷ್ಟು ದಕ್ಕಿದೆಯೋ ತಿಳಿದಿಲ್ಲ. ಅವರ ಕವಿತೆಗಳನ್ನು ಮಾತ್ರ ಓದಿದ್ದ ನನಗೆ ಈ ಕಥೆಗಳು ಹೆಚ್ಚು ಇಷ್ಟವಾದವು. ಕೆಲವೊಂದು ಕಥೆಗಳು ಅದರ ಕಾವ್ಯಾತ್ಮಕ ಶೈಲಿ, ಪರಿಸರದ ವರ್ಣನೆ ಹಾಗೂ ಕೊಡುವ ಭಾವದಿಂದ ಎರಡೆರಡು ಬಾರಿ ಓದಿಸಿಕೊಂಡದ್ದೂ ಹೌದು. ಕೆಲವು ತಣ್ಣನೆಯ, ನಿಶಬ್ದದ ಕಥೆಗಳಾದರೆ ಮತ್ತೆ ಕೆಲವು ಗುಪ್ತಗಾಮಿನಿಯಂತವು. ಉಪಮೆಗಳನ್ನು ಬಳಸಿರುವ ಪರಿ ಆ ಸಾಲುಗಳನ್ನು ಮತ್ತೆ ಮತ್ತೆ ಮೆಲುಕು ಹಾಕುವಂತೆ ಮಾಡುತ್ತವೆ.
ನಾನು ಇನ್ನೂ ಸರಳ ಕಥೆಗಳನ್ನು ಓದುತ್ತಿದ್ದ ಕಾಲದಲ್ಲಿ ಕಾಯ್ಕಿಣಿಯವರ ಕಥೆಗಳನ್ನು ಓದಲು ಹೊರಟು ಪುಸ್ತಕವನ್ನು ಬದಿಗಿಟ್ಟಿದ್ದೆ. ಬಹುಷಃ ಈ ಕಥೆಗಳನ್ನು ಓದಲು ಒಂದಷ್ಟು ತಾಳ್ಮೆ, ಓದಿನ ಅನುಭವ ಬೇಕು ಎನ್ನಿಸಿತು. ಕಥೆಗಳ ಒಳಗಿಳಿದಷ್ಟು ಇಷ್ಟವಾಗುವ ಕಥೆಗಳು. ಬಹುಶಃ ಈ ಅಭಿಯಾನವಿಲ್ಲದಿದ್ದರೆ ಇಷ್ಟೊಳ್ಳೆ ಕಥೆಗಳ ಓದನ್ನು ತಪ್ಪಿಸಿಕೊಳ್ಳುತ್ತಿದ್ದೆನೇನೋ..
~ವಿಭಾ ವಿಶ್ವನಾಥ್
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ