ಪುಸ್ತಕದ ಶೀರ್ಷಿಕೆ : ಆನಂದ ಭೈರವಿ
ಲೇಖಕರು : ಚಿತ್ರಲೇಖ
ಪ್ರಕಾಶಕರು : ಲಲಿತಾ ಪ್ರಕಾಶನ
ಮರು ಮುದ್ರಣ : 2022
ಲಲಿತಮ್ಮನವರ ತಂದೆ ಮೇಷ್ಟ್ರು . ಅವರ ಮಕ್ಕಳಲ್ಲಿ ಲಲಿತಮ್ಮನವರು ಸಂಗೀತವನ್ನು ಆರಾಧಿಸಿದರು. ಆದರೆ ಕೈ ಹಿಡಿದದ್ದು ಮಾತ್ರ ಅದರ ಗಂಧವನ್ನೇ ಅರಿಯದ ಸಾಮಾನ್ಯ ಹಾಗೂ ಲೆಕ್ಕಾಚಾರದ ಮನುಷ್ಯ ಚಲಪತಿಯ ಜೊತೆ. ಮಕ್ಕಳು ಏನಾಗಬೇಕು ಎಂಬ ಆಯ್ಕೆ ಮಾಡುವ ಅವಕಾಶ ಲಲಿತಮ್ಮನವರಿಗಿಲ್ಲದಿದ್ದರೂ ಅವರ ಹೆಸರಿಡುವ ಅವಕಾಶ ಅವರಿಗೆ ಸಿಕ್ಕಿದ್ದೇ ಅವರ ಖುಷಿ. ಮೊದಲಿಗೆ ಕಲ್ಯಾಣಿ ನಂತರ ಒಂದರ ಹಿಂದೆ ರಾಗಗಳಂತೆ ರಂಜನಿ, ವಸಂತ, ನೀಲಾಂಬರಿ, ಮೋಹನ, ಭೈರವಿ ಕೊನೆಗೆ ಅವಳಿ-ಜವಳಿ ಕಮಲ-ಮನೋಹರಿಯರು.
ಮಕ್ಕಳನ್ನು ದೊಡ್ಡವರನ್ನಾಗಿಸುವಾಗ ಅವರಿಗೆ ವಿದ್ಯೆ ನೀಡುವುದು ಪೋಷಕರ ಬಹು ಮುಖ್ಯವಾದ ಕರ್ತವ್ಯ. ಹೆಣ್ಣುಮಕ್ಕಳೇ ಆಗಿದ್ದರಿಂದ ಅವರಿಗೆ ಒಳ್ಳೆಯ ವಿದ್ಯಾಭ್ಯಾಸ ದೊರಕಿಸಿಕೊಟ್ಟರೆ ಮುಂದೆ ಅವರ ಕಾಲ ಮೇಲೆ ಅವರೇ ನಿಂತು ದುಡಿದು ಮದುವೆಗೆಂದು ಕೂಡಿಸುತ್ತಾರೆ. ಅಲ್ಲದೆ, ಮನೆಯ ಹೊಣೆಯನ್ನು ಹೊರುತ್ತಾರೆ ಎಂದು ದೂರದ ಆಸೆಯಲ್ಲಿದ್ದರು ಚಲಪತಿ. ಹೆಣ್ಣುಮಕ್ಕಳಲ್ಲೆಲ್ಲಾ ರೂಪ ಹಾಗೂ ವಿದ್ಯೆಯಲ್ಲಿ ಮೇಲುಗೈ ಭೈರವಿಯದ್ದು. ಅವಳನ್ನು ಡಾಕ್ಟರ್ ನ್ನಾಗಿ ಮಾಡಬೇಕು ಎಂಬುದು ಅವಳ ತಂದೆಯ ಆಸೆ. ಪುಟ್ಟ ಭೈರವಿಗೆ ತಂದೆ-ತಾಯಿ ವಿಶೇಷ ಅಕ್ಕರೆ ನೀಡುವುದು ಅರಿವಾಗುತ್ತಿದ್ದರೂ ಎಲ್ಲರಿಗಿಂತ ತಾನೇ ಹೆಚ್ಚು ಎಂಬ ಧೋರಣೆಯೂ ಬೆಳೆಯುತ್ತಿತ್ತು. ಎಲ್ಲೆಡೆಯಲ್ಲಿಯೂ ಅವಳು ಇದನ್ನೇ ನಿರೀಕ್ಷಿಸತೊಡಗಿದಳು. ಸೋಲನ್ನು ತಡೆದುಕೊಳ್ಳಲಾರದ, ಅಪಮಾನದಿಂದ ಸೇಡು ತೀರಿಸಿಕೊಳ್ಳುವ ಮನೋಭಾವ ಅವಳಲ್ಲಿ ಬೇರು ಬಿಡತೊಡಗಿತ್ತು. ತಂದೆ-ತಾಯಿಯರು ಇಂತಹ ದುರ್ಬಲ ವಿಷ ಬೀಜವನ್ನು ಅಲಕ್ಷಿಸಿದರು.
ಶಾಲೆಯಲ್ಲಿಯೂ ಅವಳು ಮಾನಿಟರ್. ಅಲ್ಲದೆ, ಓದಿನಲ್ಲಿಯೂ ಮುಂದು. ಶ್ರೀಮಂತ ಮನೆತನದ ಹುಡುಗಿ ಭವಾನಿ ಶಾಲೆಗೆ ಬಂದಾಗ ಮೊದಲು ಇವಳಿಗೆ ಇರುಸು-ಮುರುಸಾದರೂ.. ನಂತರ ಭವಾನಿ ಹೆಚ್ಚು ಬಿನ್ನಾಣ ತೋರದೆ ಬುದ್ಧಿವಂತೆಯಾದ ಭೈರವಿಯೊಂದಿಗೆ ಸ್ನೇಹ ಬೆಳೆಸಿದರೆ, ಭೈರವಿಯೂ ಹೊಂದಿಕೊಂಡು ಸ್ನೇಹಿತೆಯಾಗಿರಲು ಶುರು ಮಾಡಿದ ನಂತರ ಇಬ್ಬರಲ್ಲಿ ಆಪ್ತತೆ ಬೆಳೆಯಿತು. ಆದರೂ ಭೈರವಿಗೆ ಅವರಲ್ಲಿಯ ಸಿರಿತನ ತನ್ನಲಿಲ್ಲವೆಂಬುದು ತಿಳಿದಿದ್ದರೂ ಸ್ವಾಭಿಮಾನ ಹೆಚ್ಚೇ ಇದ್ದಿತು. ಆದರೂ.. ಭೈರವಿಗೆ ವಾಸ್ತವತೆ ದುಃಖ ಕೊಟ್ಟಿದ್ದವು. ಆಸೆಗಳು ಅವಳಿಗೆ ದುಃಖ ಕೊಟ್ಟವು. ಕಣ್ಣೀರ ರೂಪದಲ್ಲಿ ಹೊರಬೀಳದ ಅವು ದ್ವೇಷಗಳಾಗಿ ಹೆಪ್ಪುಗಟ್ಟಿದವು. ಅದಕ್ಕೆ ಕಾರಣ ತನ್ನ ತಂದೆ-ತಾಯಿಯರು ಎಂದುಕೊಂಡವಳ ಮನಸ್ಸನ್ನು ಬದಲಿಸುವುದಂತು ಸಾಧ್ಯವಿರಲಿಲ್ಲ.
ಮುಂದೆ ಕಾಲೇಜಿಗೆ ಸೇರಿದಾಗ ಭವಾನಿಗೆ ಅಮೆರಿಕದಲ್ಲಿದ್ದ ತನ್ನ ಸೋದರ ಮಾವನ ಮಗನ ಜೊತೆ ವಿವಾಹ ನಡೆಯುತ್ತದೆ. ಆಕೆಗೆ ವಿದ್ಯಾಭ್ಯಾಸದಲ್ಲಿ ಹೆಚ್ಚಿನ ಆಸಕ್ತಿಯೇನೂ ಇರಲಿಲ್ಲ. ಅವನ ಓದು ಅಲ್ಲಿಗೆ ಮೊಟಕಾಗುತ್ತದೆ. ಅವಳ ವಿವಾಹದ ಸಂದರ್ಭದಲ್ಲಿ ಅವಳ ಇದ್ದೂಬ್ಬ ಅಣ್ಣ ಆನಂದನ ಪರಿಚಯ ಭೈರವಿಗಾಗುತ್ತದೆ. ಭೈರವಿ ಆತನ ಚೆಲುವಿಗೆ ಮನಸೋಲುತ್ತಾಳಾದರೂ ತೋರಿಸಿಕೊಳ್ಳುವುದಿಲ್ಲ.
ಎಷ್ಟೇ ಆಪ್ತತೆ ಇದ್ದರೂ ಸ್ನೇಹ ಒಂದು ಘಟ್ಟದಲ್ಲಿ ಕಡಿದು ಹೋಗುತ್ತದೆ. ಅಂತಹ ಪರಿಸ್ಥಿತಿ ಭವಾನಿ ಹಾಗೂ ಭೈರವಿಯರ ನಡುವೆ ಉಂಟಾಯಿತು. ಭೈರವಿ ತನ್ನ ಪಾಡಿಗೆ ತಾನು ಓದಿನಲ್ಲಿ ವ್ಯಸ್ತವಾಗಿರುವಾಗ ಅವಳ ಬದುಕಿನಲ್ಲಿ ನಿರೀಕ್ಷಿಸದಂತೆ ಆನಂದನ ಆಗಮನವಾಗುತ್ತದೆ. ಆನಂದ ತಾನು ಆಕೆಯನ್ನು ವಿವಾಹವಾಗುತ್ತೇನೆಂದು ನಂಬಿಸಿ, ತನ್ನ ಪ್ರೀತಿಯ ಬಲೆಯಲ್ಲಿ ಬೀಳಿಸಿಕೊಳ್ಳುತ್ತಾಳೆ. ಭೈರವಿಗೆ ತಾನು ಬಯಸಿದಂತೆಯೇ ಸಿರಿವಂತಿಕೆ ಸಿಗುವಾಗ ಓದಿನ ಮಹತ್ತಿನನ ಅರಿವು ತಕ್ಷಣಕ್ಕೆ ಉಂಟಾಗುವುದಿಲ್ಲ. ಅದರ ಬದಲಾಗಿ ತಾನು ಹೇಗೂ ಸಿರಿವಂತೆಯಾಗುತ್ತೇನೆ ಎಂಬ ಆಲೋಚನೆಯಿಂದ ಆನಂದನ ಪ್ರೀತಿಗೆ ಹೂಂಗುಡುತ್ತಾಳೆ. ತನ್ನ ತಂದೆ-ತಾಯಿಯರು ತನ್ನನ್ನು ಏಣಿಯನ್ನಾಗಿ ಉಪಯೋಗಿಸಿಕೊಂಡು ಉಳಿದವರ ಭವಿಷ್ಯವನ್ನು ರೂಪಿಸುತ್ತಾರೆ ಎನ್ನುವ ಆಲೋಚನೆ ಅವಳಲ್ಲಿ ಇರುಸು-ಮುರಿಸು ಉಂಟಾಗಿಸಿ, ಆನಂದನನ್ನೇ ವಿವಾಹವಾಗುವ ಕನಸನ್ನು ಕಾಣುತ್ತಿರುವಾಗ ಆಕೆಗೆ ಪಾತಾಳಕ್ಕೆ ನೂಕಿದಂತಹ ಸ್ಥಿತಿ ಉಂಟಾಗುತ್ತದೆ..
ಭೈರವಿಗೆ ತಾನು ಗರ್ಭಿಣಿ ಎಂಬ ವಿಚಾರ ತಿಳಿದ ಹೊತ್ತಿನಲ್ಲಿಯೇ ಭವಾನಿಯೂ ಗರ್ಭಿಣಿ. ಭವಾನಿ ಆಕೆಯ ಮನೆಗೆ ಬಂದಾಗ ಘೋರ ಸತ್ಯವೊಂದು ಅರಿವಾಗುತ್ತದೆ. ಅದು ರೋಷಕ್ಕೆ ತಿರುಗಿ, ಪರಿಸ್ಥಿತಿಯ ಬಿಸಿಯಲ್ಲಿ ಆಕೆಯೇ ಆನಂದನ ಕೊಲೆಯನ್ನು ಮಾಡಿಬಿಡುತ್ತಾಳೆ.
ಕೊಲೆ ಮಾಡಿದ ನಂತರ ಆಕೆ ತನ್ನ ಶಾಲೆಯಲ್ಲಿದ್ದ ಮದರ್ ಮೇರಿಯ ಆಶ್ರಯಕ್ಕೆ ಹೋಗುತ್ತಾಳೆ. ಹಾಗೆಂದು ಆಕೆಗೆ ಪೋಲೀಸರಿಂದ ತಪ್ಪಿಸಿಕೊಳ್ಳುವ ಮನಸ್ಸಿರಲಿಲ್ಲ. ಬದಲಾಗಿ ಮಗುವನ್ನು ರಕ್ಷಿಸಿಕೊಳ್ಳಬೇಕಾಗಿತ್ತು. ಮಗುವನ್ನು ಹೆತ್ತ ನಂತರ ಆಕೆಯೇ ಹೋಗಿ ತಾನೇ ಆನಂದನ ಕೊಲೆಗಾತಿ ಎಂಬುದನ್ನು ಒಪ್ಪಿ, ತನಗೆ ನೀಡಲಾದ 25 ವರ್ಷಗಳ ಶಿಕ್ಷೆ ಮುಗಿಸಿ ಹೊರಬರುತ್ತಾಳೆ.
ಜೈಲಿನಿಂದ ಹೊರ ಬಂದಾಗ ಪರಿಸ್ಥಿತಿ, ಕಾಲ ಎರಡೂ ಬದಲಾಗಿರುತ್ತದೆ. ಮುಂದೆ ಭೈರವಿಯ ಬದುಕು ಹೇಗಿರುತ್ತದೆ..?
ಬಿಡುಗಡೆಯಾದ ನಂತರ ಭೈರವಿ ತಾನು ಆಮ್ಮಣ್ಣಿ ಎಂಬ ಹೆಸರಿನಲ್ಲಿ ಪುನೀತಳ ಮನೆ ಸೇರುತ್ತಾಳೆ. ಪುನೀತ, ಆಕೆಯ ಪತಿ ಗೌತಮ್ ಹಾಗೂ ಇಬ್ಬರು ಮಕ್ಕಳ ಜವಾಬ್ದಾರಿ ಹೊರುತ್ತಾಳೆ. ಆದರೆ, ಗೌತಮ್ ನ ಚಿಕ್ಕಪ್ಪ ರಿಟೈರ್ ಪೋಲೀಸ್ ಸೂಪರಿಡೆಂಟ್ ಮಿಸ್ಟರ್ ಅರುಣ್ ಕುಮಾರ್ ಬಂದಾಗ ಆಕೆಯ ಹಿಂದಿನ ಬದುಕು ಹಾಗೂ ಆಕೆ ಮಾಡಿದ ಕೊಲೆ ಅನಾವರಣವಾಗುತ್ತದೆ.
ನಾನು ಮಾಡಿದ ತಪ್ಪಿಗೆ ಶಿಕ್ಷೆಯನ್ನು ಅನುಭವಿಸಿದ ಮೇಲೂ ಆಕೆ ಮತ್ತೆ ಶಿಕ್ಷೆ ಅನುಭವಿಸುತ್ತಾಳಾ..?
ಭೈರವಿ ಅಮ್ಮಣ್ಣಿಯಾಗಿ ಬದಲಾದದ್ದೇಕೆ..? ಪುನೀತ ಆಕೆಯನ್ನು ಅವಮಾನಿಸಿದಷ್ಟೂ ಗೌತಮ್ ಆಕೆಯನ್ನು ಸಮರ್ಥಿಸಿಕೊಂಡು ಗೌರವ ಕೊಡುತ್ತಿದ್ದ ನಡೆಗೆ ಏನಾದರೂ ಕಾರಣವಿತ್ತೇ..? ಚಿಕ್ಕಪ್ಪ ನಿಜ ಅನಾವರಣ ಮಾಡಿದ ನಂತರ ಆತನ ಮುಂದಿನ ನಡೆ ಏನು..?
ಭೈರವಿ ಹೆತ್ತ ಮಗು ಏನಾಯ್ತು..? ಅವಳ ಭವಿಷ್ಯ ಹೇಗಿತ್ತು..?
ಭೈರವಿ ತಾನು ಆನಂದನನ್ನು ಕೊಲೆ ಮಾಡಿದಳಾದರೂ ಆಕೆಗೆ ಆತನನ್ನು ದ್ವೇಷಿಸಲು ಸಾಧ್ಯವಾಗಲಿಲ್ಲವೇಕೆ..? ಈ ಕಾದಂಬರಿಯ ಶೀರ್ಷಿಕೆ ಆನಂದ ಭೈರವಿ ಎಂದು ಇರುವ ಕಾರಣವೇನು..? ಈ ಕಥೆಯನ್ನು ನೀವೇ ಓದಿ ನೋಡಿ.
ಇಲ್ಲಿ ಭೈರವಿ ರುದ್ರ ಭೈರವಿಯಾಗಿಯೂ ಹಾಗೂ ಆನಂದಭೈರವಿಯಾಗಿಯೂ ನಂತರ ಬದಲಾದಾಗ ಸಾಧ್ಯವಾದಷ್ಟು ಸಮಾಧಾನ, ತಾಳ್ಮೆಯಿಂದ ಇರುವ ಭೈರವಿಯಾಗಿಯೂ ಕಾಣಸಿಗುತ್ತಾಳೆ ಒಂದು ಹೆಣ್ಣಿನ ಮನಸ್ಥಿತಿ, ಪರಿಸ್ಥಿತಿ ಹಾಗೂ ಆಕೆಯ ಬದಲಾವಣೆಯ ಚಿತ್ರಣ ಇಲ್ಲಿದೆ.
ಡಾ. ರಾಜಕುಮಾರ್ ಅವರು ಆನಂದ ಭೈರವಿ ಕಾದಂಬರಿಯನ್ನು ಓದಿ ಅಪಾರಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದರು ಎಂಬ ಖುಷಿಯ ಸಂಗತಿಯನ್ನು ಚಿತ್ರಲೇಖ ಮೇಡಂ ಈ ಕಾದಂಬರಿಯ ಮುನ್ನುಡಿಯಲ್ಲಿ ಹಂಚಿಕೊಂಡಿದ್ದಾರೆ. ಸೊಗಸಾದ ಕಾದಂಬರಿಯ ಸುಲಲಿತ ಓದು.
~ವಿಭಾ ವಿಶ್ವನಾಥ್
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ