ಪುಸ್ತಕದ ಶೀರ್ಷಿಕೆ : ಚಂದ್ರಿಕಾ
ಲೇಖಕರು : ಚಿತ್ರಲೇಖ
ಪ್ರಕಾಶಕರು : ಲಲಿತ ಪ್ರಕಾಶನ
ಮರು ಮುದ್ರಣ : 2022
ಪುಟಗಳು : 260
ಬೆಲೆ : 250 ರೂ.
ಚಿತ್ರಲೇಖ ಮೇಡಂ ಅವರ ಎರಡನೆಯ ಕಾದಂಬರಿ ಚಂದ್ರಿಕಾ. ಮುದುಡಿದ ತಾವರೆ ಅರಳಿತು ಅಪಾರ ಅಭಿಮಾನಿಗಳ ಮನ್ನಣೆ ಗಳಿಸಿದಂತೆ ಈ ಕೃತಿಯು ಇಷ್ಟವಾಗುತ್ತದೆ. ಹಿರಿಯ ಲೇಖಕಿ ಎಂ. ಕೆ. ಇಂದಿರಾರವರು ಈ ಕಾದಂಬರಿಯನ್ನು ಮೆಚ್ಚಿ ಮೂರು ಬಾರಿ ಓದಿದ್ದು ಹಾಗೂ ಚಿತ್ರಲೇಖ ಮೇಡಂ ಅವರನ್ನು ಪ್ರಶಂಸಿಸಿದ ವಿಚಾರಗಳನ್ನು ಹಂಚಿಕೊಂಡಿರುವುದು ಖುಷಿ ತಂದಿದೆ. ಲಲಿತ ಪ್ರಕಾಶನದಿಂದ ಮರು ಮುದ್ರಣ ಕಂಡಿರುವ ಈ ಕಾದಂಬರಿಗೆ ನಮ್ಮ ಪುಸ್ತಕ ಅವಲೋಕನ ಬಳಗದ ಅಡ್ಮಿನ್ ಆದ ವೀಣಾ ನಾಯಕ್ ಮೇಡಂ ಅವರ ಹಿತನುಡಿ ಇದೆ.
ಶ್ಯಾಮಲಮ್ಮ ತನ್ನ ಮಗ ರಾಜನ ಬರವಿಕೆಗೆ ಕಾಯುತ್ತಿದ್ದರು. ಆದರೆ, ಅಂದು ಆತ ಬಂದದ್ದು ಒಂದು ಮಗುವಿನ ಸಮೇತ. ಮೂರು ತಿಂಗಳ ಪುಟ್ಟ ಮಗು, ಆಕರ್ಷಕವಾಗಿದ್ದ ಜಯಂತಿ ಅವರನ್ನು ಸೆಳೆದರೂ ಅವರ ಮನಸ್ಸಿನಲ್ಲಿ ಬಹಳ ಪ್ರಶ್ನೆಗಳಿದ್ದವು.
ಜಯಂತಿ ಇನ್ನೂ ಮುಂದೆ ತಮ್ಮ ಮನೆಯ ಮಗುವಂತೆಯೇ ಬೆಳೆಯಬೇಕು ಎಂಬ ವಿಚಾರವನ್ನು ರಾಜ ತೆರೆದಿಟ್ಟನು. ಮಗುವಿನ ಹಿನ್ನೆಲೆಯನ್ನು ಕುರಿತು ಪ್ರಶ್ನಿಸಿದಾಗ ರಾಜ ಹೇಳಿದ್ದು.. ತನ್ನ ಒಬ್ಬ ಆಪ್ತ ಗೆಳೆಯನಾದ ಮುರುಳಿ ಹಾಗೂ ರಾಜೇಶ್ವರಿಯ ಮಗುವದು. ಇಬ್ಬರು ತೀರಿಕೊಂಡಿರುವುದರಿಂದ ಹಾಗೂ ಆ ಮಗುವಿಗೆ ಬೇರೆ ಯಾರೂ ಇಲ್ಲದ್ದರಿಂದ ಆ ಮಗುವನ್ನು ತಾನು ಕರೆತಂದೆ ಎಂಬ ವಿಚಾರವನ್ನು ಹೇಳುತ್ತಾನೆ.
ಸಂಪ್ರದಾಯದ ಮನೋಭಾವನೆ ಶಾಮಲಮ್ಮನವರಿಗಿದ್ದರೂ.. ಮಗುವಿನ ಮುಖ ನೋಡಿ ಹಾಗೂ ಮಾನವೀಯತೆಯ ದೃಷ್ಟಿಯಿಂದ ಜೊತೆಗೆ ಪ್ರೀತಿಯಿಂದಲೂ ಒಪ್ಪುತ್ತಾರೆ. ಮಗನ ಮೇಲಿನ ಮಮತೆ ಎಲ್ಲವನ್ನು ಮೀರಿ ಗೆಲ್ಲುತ್ತದೆ. ಹಾಗಾಗಿ ಸಂಪ್ರದಾಯಕ್ಕಿಂತ ಹೆಚ್ಚಾಗಿ ಮಗುವಿನ ವಾತ್ಸಲ್ಯವೇ ಗೆದ್ದು ಅವರ ಏಕಾಂತ ಜೀವನಕ್ಕೆ ಜಯಂತಿ ಆಸರೆಯಾಗುತ್ತಾಳೆ.
ಶ್ಯಾಮಲಮ್ಮ ಹಾಗೂ ಜಯರಾಮರಾಯರದ್ದು ಸಿರಿವಂತ ಕುಟುಂಬ. ಸ್ವಪ್ನ ಗೀತೆ ಬಂಗಲೆಯಲ್ಲಿ ನೆಲೆಸಿದ್ದ ಇವರಿಗೆ ಮೂವರು ಮಕ್ಕಳು. ಗಿರಿಜಾ, ವನಜ ಹಾಗೂ ರಾಜ. ಈಗಾಗಲೇ ಇಬ್ಬರು ಹೆಣ್ಣುಮಕ್ಕಳ ವಿವಾಹವಾಗಿದ್ದು, ರಾಜ ಲೆಕ್ಚರರ್ ಆಗಿದ್ದವನು. ರೂಪ, ಜಾಣ್ಮೆ ಸಿರಿವಂತಿಕೆ ಎಲ್ಲವೂ ಇದ್ದರೂ ಆತ ವಿವಾಹಕ್ಕೆ ಇನ್ನೂ ಹಿಂದೇಟು ಹಾಕುತ್ತಿದ್ದ.
ಜಯಂತಿ ಬೆಳೆಯುತ್ತಿದ್ದಂತೆ ರಾಜನನ್ನೇ ಅಪ್ಪ ಎಂದು ಸಂಬೋಧಿಸುತ್ತಿದ್ದಳು. ಮೊದಮೊದಲಿಗೆ ಶ್ಯಾಮಲಮ್ಮನವರು ಇದಕ್ಕೆ ಏನೂ ಅನ್ನದಿದ್ದರೂ.. ರಾಜನ ವಿವಾಹದ ವಿಚಾರಕ್ಕೆ ಇದು ಅಡ್ಡಿಯುಂಟು ಮಾಡಬಹುದು ಎಂದು ಆ ಸಂಭೋದನೆಯನ್ನು ಬಿಡಿಸಲು ಪ್ರಯತ್ನಿಸಿದರಾದರೂ ಜಯಂತಿ ಆತನನ್ನು ಅಪ್ಪನೆಂದೇ ಕರೆಯುತ್ತಿದ್ದಳು. ಜಯಂತಿಗೆ ತಾಯಿಯಾಗುವ ವಧುವನ್ನು ಮಾತ್ರವೇ ತಾನು ವಿವಾಹವಾಗುವೆ ಎನ್ನುತ್ತಿದ್ದನು ರಾಜ.
ರಾಮಸ್ವಾಮಿ ಹಾಗೂ ಸರಸ್ವತಮ್ಮನವರ ಮಗಳು ಕಾಮಿನಿಯನ್ನು ನೋಡಲೆಂದು ಹೊರಟ ರಾಜ ಮತ್ತವರ ಕುಟುಂಬಕ್ಕೆ ಆ ಕುಟುಂಬದ ಪರಿಚಯವಾಗಿತ್ತು. ಜಯಂತಿಯನ್ನು ಕಾರಣಾಂತರದಿಂದ ಮನೆಯಲ್ಲಿಯೇ ಬಿಟ್ಟು ಹೋಗಿದ್ದರು. ರಾಜನಿಗೆ ಕಾಮಿನಿಗಿಂತಲೂ ಆ ಮನೆಯಲ್ಲಿ ಕೊನೆಯ ಮಗಳಾಗಿದ್ದ ಕಾಂಚನಾಳೇ ಹೆಚ್ಚು ಹಿಡಿಸಿದಳು. ಅದಕ್ಕೆ ರೂಪ ಮಾತ್ರ ಕಾರಣವಾಗಿರಲಿಲ್ಲ, ಬದಲಾಗಿ ನಡೆಯೂ.. ಕಾಮಿನಿಯ ದರ್ಪವನ್ನು ಆತ ಕಂಡಾಗಿತ್ತು. ಕಾಂಚನ ಹಾಗೂ ರಾಜನ ವಯಸ್ಸಿನ ಅಂತರ ಹೆಚ್ಚಿದ್ದರೂ ಮುಂದೆ ಇವರ ಖರ್ಚಿನಲ್ಲಿಯೇ ಆ ವಿವಾಹ ನೆರವೇರುತ್ತದೆ.
ರಾಮಸ್ವಾಮಿಯವರ ತಂಗಿಯ ಮಗನಾದ ನಾಗರಾಜನಿಗೆ ಕಾಂಚನಳ ಮೇಲೆ ಪ್ರೀತಿ ಇದ್ದರೂ ತನಗಿಂತಲೂ ಸಿರಿವಂತನಾದ ರಾಜನ ಜೊತೆ ವಿವಾಹವೆಂದಾದಾಗ, ಇಷ್ಟು ದಿನ ಕಷ್ಟ ಅನುಭವಿಸಿದ್ದ ಕಾಂಚನಾಳಿಗೆ ಉತ್ತಮ ಸಂಬಂಧ ದೊರೆತಾಗ.. ತಾನು ಅಡ್ಡಿಯಾಗದೆ, ಹಿರಿಯಣ್ಣನಂತೆಯೇ ನಿಂತು, ರಾಜನನ್ನು ಸ್ನೇಹಿತನಂತೆ ಕಂಡು ಆ ವಿವಾಹಕ್ಕೆ ನೆರವಾಗುತ್ತಾನೆ.
ಆ ಮನೆಯಲ್ಲಿ ಅಸಡ್ಡೆಯಾಗಿಯೇ ಕಾಣುತ್ತಿದ್ದ ಕಾಂಚನಳ ವಿವಾಹದಿಂದ ಹೆಚ್ಚು ಮುಖಭಂಗವಾಗಿದ್ದು ಕಾಮಿನಿಗೆ ಮಾತ್ರವೇ. ಇದೆಲ್ಲವನ್ನೂ ಕಂಡ ರಾಜ ಆಕೆಯನ್ನು ನೀನು ಆ ಮನೆಯ ಮಗಳಲ್ಲವೇ ಅವರ ಸ್ವಂತ ಮಗಳಲ್ಲವೇ ಎಂದು ಕೇಳಿದ್ದೂ ಇದೆ.
ಇದ್ದಿದರಲ್ಲಿ ಆ ಮನೆಯಲ್ಲಿ ಕಾಂಚನಳಿಗೆ ಪ್ರೀತಿ ತೋರಿಸುತ್ತಿದ್ದದ್ದು ಅಕ್ಕ ಭಾಮಿನಿ ಹಾಗೂ ಆಕೆಯ ಪತಿ ರಾಮು.ಅವರೇ ಮುಂದೆ ನಿಂತು ಈ ವಿವಾಹವನ್ನು ಪ್ರೀತಿಯಿಂದ ನೆರವೇರಿಸಿದರು.
ರಾಜ ಕಾಂಚಳನ್ನು ವಿವಾಹವಾದರೂ.. ಕಾಂಚನಳಿಗೆ ಅದು ಮನಸ್ಪೂರ್ತಿಯ ಒಪ್ಪಿಗೆ ಎಂದೆನಿಸುವುದಿಲ್ಲ. ತನ್ನ ಅಕ್ಕ ಭಾಮಿನಿಯಂತೆಯೇ ಇಲ್ಲಿ ವನಜನ ಸ್ನೇಹವಾಗಿತ್ತು. ಸ್ನೇಹಮಹಿ ವನಜಳೊಂದಿಗೆ ಕಾಂಚನ ಹೆಚ್ಚು ಹೊಂದಿಕೊಂಡಿದ್ದಳು. ವಿವಾಹದ ಸಂಭ್ರಮ ಮುಗಿದು ಎಲ್ಲರೂ ನಿರ್ಗಮಿಸಿದ ನಂತರ ಆಕೆಗೆ ಇಲ್ಲಿ ಹೊಂದಿಕೊಳ್ಳಬೇಕಾದ ಪರಿಸ್ಥಿತಿಯಿತ್ತು. ಅಲ್ಲಿ ಇಡೀ ದಿನ ಕೆಲಸ ಮಾಡಿಕೊಂಡಿದ್ದವಳಿಗೆ ಎಲ್ಲದಕ್ಕೂ ಆಳುಕಾಳಿದ್ದರು. ಮನೆಯಲ್ಲಿ ಕೆಲಸವಿರಲಿಲ್ಲ. ಓದು ಮುಂದುವರಿಸಲು ಆಕೆಗೆ ಅಂತಹ ಆಸಕ್ತಿ ಇರಲಿಲ್ಲ. ಜಯಂತಿ ಜೊತೆಗೆ ಆಕೆ ಸುಲಭವಾಗಿ ಹೊಂದಿಕೊಂಡಳು. ಜಯಂತಿಯ ಆಕೆಯನ್ನು ಅಮ್ಮನೆಂದು ಕರೆಯುತ್ತಾ ಹೊಂದಿಕೊಳ್ಳುತ್ತಾ ಹೋದಾಗ ರಾಜನಿಗೆ ಹಿತವೆನ್ನಿಸಿತ್ತು. ಆದರೂ.. ಆತನ ಮನಸ್ಸಿನಲ್ಲಿ ಏನೋ ಒಂದು ಕೊರಗು.
ಕಾದಂಬರಿ ಕೊನೆಯ ಹಂತದ ವರೆಗೆ ಬರುವಾಗಲೂ ಕಾದಂಬರಿ ಶೀರ್ಷಿಕೆ ಚಂದ್ರಿಕಾ ಎಂದಿರುವುದಕ್ಕೂ ಕಥಾಹಂದರಕ್ಕೂ ಏನು ಸಂಬಂಧ ಎಂಬ ಪ್ರಶ್ನೆ ಮೂಡಿಸಿಕೊಂಡು ಕುತೂಹಲದಿಂದಲೇ ಓದುತ್ತಾ ಹೋಗುತ್ತೇವೆ. ಚಂದ್ರಿಕಾ ಎಂಬ ಪಾತ್ರವಿರಬಹುದೇ ಅಥವಾ ಇಲ್ಲಿ ಚಂದ್ರಿಕಾ ಎಂಬುದಕ್ಕೆ ಬೇರೆಯ ಅರ್ಥವಿದೆಯೇ..? ನೀವೇ ಕಾದಂಬರಿ ಓದಿ ಅರಿಯಬೇಕು.
ಕಾದಂಬರಿಯ ಕೊನೆಯಲ್ಲಿ ಎಲ್ಲಾ ಕುತೂಹಲಗಳಿಗೆ ತೆರೆ ಬೀಳುವ ಸಮಯ. ಜಯಂತಿಯ ಬದುಕಿನ ಜೊತೆಗೆ ರಾಜ ಮುಚ್ಚಿಟ್ಟಿದ್ದ ಒಂದು ಸತ್ಯ, ಅಷ್ಟೇ ಅಲ್ಲದೆ ಅವನ ಮದುವೆಗೆ ಒಪ್ಪದ್ದಕ್ಕೆ ಕಾರಣವಾದ ವಿಚಾರವನ್ನು ಅಮ್ಮ ಹಾಗೂ ಪತ್ನಿಯ ಎದುರಿಗೆ ತೆರೆದಿಡುತ್ತಾನೆ. ಭಾಮಿನಿ ಕಾಂಚನಾಳಿಗೆ ತಿಳಿಸಿದ ಆಕೆಯ ಹುಟ್ಟಿನ ರಹಸ್ಯವನ್ನು ಆಕೆ ರಾಜನೊಡನೆ ಹಂಚಿಕೊಂಡಿರುತ್ತಾಳಾದರೂ.. ಆತ ಅದನ್ನು ತನ್ನ ತಾಯಿಯ ಜೊತೆಗೆ ಹಂಚಿಕೊಳ್ಳುವುದಕ್ಕೆ ಸಮಯ ಬೇಕೆಂದು ಕೇಳಿರುತ್ತಾನೆ.
ಈಗ ಕಾಂಚನಾ ಗರ್ಭಿಣಿಯಾಗಿದ್ದ ಸಮಯದಲ್ಲಿ ಆಕೆಯ ಮನೋವೇದನೆಯನ್ನು ನೋಡಲಾಗದೆ ಆ ವಿಚಾರವನ್ನೂ ತೆರೆದಿಡುತ್ತಾನೆ. ಎಲ್ಲಿ ಎಲ್ಲಾ ಕೊಂಡಿಗಳು ಒಂದಕ್ಕೊಂದು ಬೆಸೆದುಕೊಂಡಿದೆ. ವಿಧಿಯಾಟದ ಗೊಂಬೆಗಳಾಗಿ ಪಾತ್ರ ವಹಿಸುವ ರಾಜ, ಕಾಂಚನ, ಜಯಂತಿಯರ ಬದುಕನ್ನು ಇಲ್ಲಿ ಓದಿ ನೋಡಿ.
ಸಮಯ ಹಾಗೂ ವಿಧಿ ಬದುಕಿನಲ್ಲಿ ಆಡುವ ಆಟಗಳನ್ನು ಕಂಡು ಮನುಷ್ಯನ ಬದುಕು ಆತನ ಕೈಮೀರಿದ್ದು ಎಂದೆನಿಸಿದರೂ ಮತ್ತೆ ಒಂದುಗೂಡಿಸುವ ವಿಧಿಯ ಆಟವೇ ದೊಡ್ಡದು. ಮನುಷ್ಯ ಎಲ್ಲರ ಮುಂದೆ ಸಮಯದ ಕೈಗೊಂಬೆ ಎಂಬುದನ್ನು ತೋರುವ ಕಥಾಹಂದರ. ಜೊತೆಗೆ ಸಂಪ್ರದಾಯ, ಜಾತಿಗಳಿಗಿಂತ ದೊಡ್ಡದಾದ ಮಾನವೀಯತೆ ಹಾಗೂ ವಾತ್ಸಲ್ಯಕ್ಕೆ ಕೊಟ್ಟಿರುವ ಮನ್ನಣೆ ಈ ಕಾದಂಬರಿಯನ್ನು ಆಪ್ತವಾಗುವಂತೆ ಮಾಡುತ್ತದೆ.
~ವಿಭಾ ವಿಶ್ವನಾಥ್
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ