ಪುಸ್ತಕದ ಶೀರ್ಷಿಕೆ : 5 ಪೈಸೆ ವರದಕ್ಷಿಣೆ
ಲೇಖಕರು : ವಸುಧೇಂದ್ರ
ಪ್ರಕಾಶಕರು : ಛಂದ ಪುಸ್ತಕ
ಪ್ರಥಮ ಮುದ್ರಣ : 2016
ಎರಡನೇ ಮುದ್ರಣ : 2016 (ನನ್ನ ಓದಿಗೆ ಸಿಕ್ಕಿದ್ದು)
ಪುಟಗಳು : 240
ಬೆಲೆ : 160 ರೂ.
ಕಥೆ, ಕಾದಂಬರಿ ಹಾಗೂ ಲಲಿತ ಪ್ರಬಂಧ ಈ ಮೂರು ಪ್ರಭೇದಗಳಲ್ಲಿ ಇಷ್ಟವಾಗುವ ಲೇಖಕರು ವಸುಧೇಂದ್ರ. ಅದರಲ್ಲಿಯೂ ಅವರ ಸುಲಲಿತ ಪ್ರಬಂಧಗಳು ಚೇತೋಹಾರಿ ಹಾಗೂ ಆಲೋಚನೆ ಮೂಡಿಸುವ ಬರಹಗಳು.
ಐದು ಪೈಸೆ ವರದಕ್ಷಿಣೆ ಪುಸ್ತಕ ಶೀರ್ಷಿಕೆಯಿಂದಲೇ ಸೆಳೆಯುತ್ತದೆ.
****************
ಮೊದಲನೆಯ ಪೈಸೆ - ಇಲ್ಲಿ ನೆನಪುಗಳು ಬಾಲ್ಯದೊಂದಿಗೆ ತಳುಕು ಹಾಕಿಕೊಂಡು ವಾಸ್ತವತೆಯ ಜೊತೆಗೆ ಹೋಲಿಕೆಯಾಗಿರುವ ಸಂಗತಿಗಳಿವೆ.
ಚುಕ್ಕಿ ಬಾಳೆಹಣ್ಣು : ಬಾಲ್ಯದ ದಿನಗಳಲ್ಲಿ ಆಸೆ ಪಡುತ್ತಿದ್ದ ಚುಕ್ಕಿ ಬಾಳೆಹಣ್ಣು ಇಂಗ್ಲೆಂಡಿನಲ್ಲಿ ಕಂಡ ಬಗೆ ಹಾಗೂ ಬಾಲ್ಯದ ದಿನಗಳ ನೆನಪುಗಳು ಹಣ್ಣಿನೊಂದಿಗೆ ತಳುಕು ಹಾಕಿಕೊಂಡಿರುವ ಚಿತ್ರಣವಿಲ್ಲಿದೆ.
ಐದು ಪೈಸೆ ವರದಕ್ಷಿಣೆ : ವಿಭಿನ್ನವಾಗಿ ಕಂಡರೂ ಅರ್ಥಪೂರ್ಣವಾಗಿದೆ. ಅಷ್ಟಕ್ಕೂ ಆ ಐದು ಪೈಸೆ ವರದಕ್ಷಿಣೆಯ ಜೊತೆಗೆ ಆಹಾರವನ್ನು ಪೋಲು ಮಾಡದ ಪಾಠ ಮಾತ್ರವಲ್ಲದೆ ಅಗತ್ಯಕ್ಕಿಂತಲೂ ಹೆಚ್ಚಿನದ್ದನ್ನು ಬದುಕಿನಲ್ಲಿ ಪಡೆಯಲು ಪ್ರಯತ್ನಿಸಿದಾಗಲೆಲ್ಲ ಕಾಡುವ ತಲ್ಲಣಗಳಿವೆ. ಅಕ್ಕನ ಅಳಿಯನಿಗೆ ಐದು ಪೈಸೆ ವರದಕ್ಷಿಣೆ ಕೊಡಬಹುದು ಎಂಬ ಇವರ ಮಾತಿನ ಅರ್ಥವೇನು..? ಓದಿ ನೋಡಿ
"ಊಟದ ಮಾತಂತಿರಲಿ, ಬದುಕಿನಲ್ಲಿಯೂ ರುಚಿಯಿಲ್ಲದ ಎಷ್ಟೋ ಸಂಗತಿಗಳನ್ನು ನಾವು ಸ್ವೀಕರಿಸಲೇಬೇಕಾದ ಒತ್ತಾಯ ಇದ್ದೇ ಇರುತ್ತದೆ. ಇನ್ನು ಊಟದ ಹೊತ್ತಿನಲ್ಲಿ ಆ ತಾರತಮ್ಯವೇಕೆ ? ಆಗೊಮ್ಮೆ, ಹೀಗೊಮ್ಮೆ ರುಚಿಹೀನವಾದದ್ದು ತಿಂದರೆ ಅಂತಹ ಪ್ರಮಾದವೇನೂ ಆಗುವುದಿಲ್ಲ. ನಮಗೆ ಅಡುಗೆ ಮಾಡಿ ಬಡಿಸುವವರಿಗೆ ತೋರುವ ಗೌರವವೂ ಅದಾಗಿರುತ್ತದೆ." ಎನ್ನುವ ಮಾತು ಅದೆಷ್ಟು ಅರ್ಥಪೂರ್ಣವಲ್ಲವೇ.?
ಸಾಲದ ಸಾನುಭೂತಿ : "ಪ್ರೀತಿಯ ಅಂಶವನ್ನು ಕಾಣದೆ ಒಣತರ್ಕ ಮಾಡಲು ಹೊರಟರೆ ಮೌಲ್ಯಗಳು ಕುಸಿದು ಹೋಗುವ ಸಾಧ್ಯತೆಯಿದೆ." ಎಂದು ನಮ್ಮೆಲ್ಲರ ಆಲೋಚನೆಗಳಲ್ಲೂ ಸಾನುಭೂತಿಯ ಅವಶ್ಯಕತೆಯಿದೆ ಎನ್ನುತ್ತಾ ಸಾಲ ಹಾಗೂ ಸಾಲದ ಸಾನುಭೂತಿ ಎರಡನ್ನೂ ತೆರೆದಿಡುತ್ತಾರೆ.
ಮಣಿಕರ್ಣಿಕಾ : ಮಣಿಕರ್ಣಿಕಾ ಘಾಟ್, ಗಂಗೆ, ಕಾಶಿ, ಸಾವು-ನೋವು, ಜೀವನದ ನಶ್ವರತೆ, ಆಧ್ಯಾತ್ಮ ಎಲ್ಲದರ ಜೊತೆ ಘನಶ್ಯಾಮ ಇಷ್ಟವಾಗುತ್ತಾನೆ.
ಪುರಂದರ : ದಾಸಪುರಂದರರ ಮಹತ್ತರತೆ, ಹಂಪಿ, ಅವರ ಓಡಾಟ, ಮುಂಡಿಗೆಗಳು, ಕೀರ್ತನೆಗಳು ಎಲ್ಲದರ ಜೊತೆ ಅಮ್ಮನ ಒಡನಾಟವೂ ಮನದಲ್ಲುಳಿಯುತ್ತದೆ.
ಜೋಡಿನ ಜೋಡಿ : ಚಪ್ಪಲಿಯ ಮಹತ್ವದ ಜೊತೆಗೆ ಚಪ್ಪಲಿ ಇಲ್ಲದಾಗ ಅದನ್ನು ಸಂಭಾಳಿಸಿದ ಪರಿ, ಅಂದಿನ ದಿನಗಳು ಜನರ ದೃಷ್ಟಿಯಲ್ಲಿ ಅಲ್ಲಿ ಕೆಲಸ ಮಾಡುತ್ತಿದ್ದವರು ಹಾಗೂ ಈಗಿನ ದಿನಗಳು ಜೋಡಿಯಾಗಿಯೇ ಇಷ್ಟವಾಗುತ್ತವೆ.
****************
ಎರಡನೆಯ ಪೈಸೆ - ಇಲ್ಲಿ ಉದ್ಯೋಗಿ ಹಾಗೂ ಪ್ರಕಾಶಕರಾಗಿ ಕಂಡ ನೋಟಗಳು ಲೇಖಕರ ಸುಲಲಿತ ಪ್ರಬಂಧಗಳಾಗಿವೆ.
ನಿದ್ದೆಗೊಮ್ಮೆ ನಿತ್ಯ ಮರಣ : ನಿದ್ದೆ ಬದುಕಿನಲ್ಲಿ ಎಷ್ಟು ಮುಖ್ಯ ಹಾಗೂ ನಿದ್ರಾಹೀನತೆ ವರವಾಗುವ ಕೆಲ ಪ್ರಸಂಗಗಳು ಇಲ್ಲಿವೆ.
ಕಡಲು ಮತ್ತು ಹಾಯಿದೋಣಿ : ಕಡಲಿನ ಆಳ, ಅಗಲ ನಾವು ಊಹಿಸಿದ್ದಕ್ಕಿಂತಲೂ ಬಹು ದೊಡ್ಡದಾಗಿರುತ್ತದೆ ಎನ್ನುತ್ತಾ ಇಲ್ಲಿ 'ಮೋಹನಸ್ವಾಮಿ' ಹಾಗೂ ' ಗೇ' ಬದುಕಿನ ಪ್ರಸಂಗಗಳನ್ನು ತೆರೆದಿಡುತ್ತಾರೆ.
ಇನ್ನೊಂದು ಸಮ್ಮೇಳನ : ಸಮ್ಮೇಳನದಲ್ಲಿ ಪ್ರೇಕ್ಷಕರು ಹಾಗೂ ವೇದಿಕೆಯ ಮೇಲಿರುವವರಿಗಿಂತ, ಪುಸ್ತಕ ಮಾರಾಟಗಾರರು ಕಾಣುವ ನೋಟವನ್ನು ಇಲ್ಲಿದೆ. ಪುಸ್ತಕ ಮಾರಾಟದ ಅನುಭವ ಹೇಗಿತ್ತು ಹಾಗೂ ಸಮ್ಮೇಳನ ಯಾವುದು ಎಂಬುದನ್ನು ಓದಿ ತಿಳಿಯಿರಿ.
ಕುಡಿಯದ ಕೂಸು : ಕಾಲೇಜಿನಿಂದಲೂ ಕುಡಿತದ ಅಭ್ಯಾಸವಿಲ್ಲದೆ ಬೆಳೆದವರು ಉದ್ಯೋಗದ ಸಮಯದಲ್ಲಿಯೂ ಕುಡಿಯದ ಕಾರಣಕ್ಕಾಗಿ ಅನುಭವಿಸಿದ ಪೇಚಾಟಗಳೇನು? ಹಾಗೂ ಈಗ ಅಂತಹ ಪ್ರಶ್ನೆಗಳಿಗೆ ಉತ್ತರಿಸುವ ರೀತಿ ಹೇಗಿದೆ ಎಂಬುದನ್ನು ಕಾಣಬಹುದು.
****************
ಮೂರನೆಯ ಪೈಸೆ - ಇಲ್ಲಿ ವಿಸ್ತಾರ ನೋಟಗಳು ಹಾಗೂ ಅನುಭವಗಳು.. ಆಲೋಚನೆಗೆ ಹಚ್ಚುವ ಸುಲಲಿತ ಪ್ರಬಂಧಗಳಿವೆ.
ಮಾತಿನ ಹತಾರ : "ವ್ಯಂಗ್ಯದ ಮಾತಿಗೆ, ವರ್ತನೆಗೆ ಅತ್ಯಂತ ಜಾಣತನ ಬೇಕು." ಅದನ್ನು ಮತ್ತೊಬ್ಬರ ಮನಸ್ಸು ನೋಯಿಸುವುದಕ್ಕೆ ಬಳಸುತ್ತಾ ಹೋದರೆ ಸೃಜನಶೀಲತೆ ಹೇಗೆ ವ್ಯರ್ಥವಾಗುತ್ತದೆ ಹಾಗೂ ಮಾತು ಮತ್ತೊಬ್ಬರ ಮೇಲೆ ಬೀರುವ ಪ್ರಭಾವಗಳ ನಿದರ್ಶನ ಇಲ್ಲಿದೆ.
ಎದೆಯ ದನಿಗೂ ಮಿಗಿಲು ಶಾಸ್ತ್ರವಿಹುದೇನು? : ನಂಬಿಕೆಯೊಂದು ಬದಲಾಗುವ ಪರಿ ಹಾಗೂ ಅದು ಉಳಿದವರ ಮೇಲೆ ಬೀಳುವ ಪರಿಣಾಮಗಳ ಪ್ರಸಂಗಗಳಿವೆ.
ಬದಲಾವಣೆ ಜಗದ ನಿಯಮ : ಅಗತ್ಯತೆಯ ಕಾರಣಕ್ಕಾಗಿ ಬದಲಾವಣೆ ಉಂಟಾದರೂ.. "ಬದಲಾವಣೆಗಳ ಜಗತ್ತು ಬಹುದೊಡ್ಡದಾಗಿದ್ದು, ನಮ್ಮ ಗಮನಕ್ಕೆ ದಕ್ಕುವುದು ಒಂದು ಹಿಡಿಯಷ್ಟು ಮಾತ್ರವಾಗಿರುತ್ತದೆ." ಎನ್ನುವುದರ ವಿಭಿನ್ನ ನೋಟ ಇಲ್ಲಿದೆ.
ಸಾವಿನ ನೆರಳು : "ದಿನನಿತ್ಯ ನೂರಾರು ಜನರು ನಮ್ಮ ಕಣ್ಣೆದುರಿಗೆ ಸಾಯುತ್ತಿದ್ದರೂ ಅದು ತನಗೆ ಸಂಬಂಧವೇ ಇಲ್ಲವೆಂಬಂತೆ ಮನುಷ್ಯ ಬದುಕುತ್ತಾನೆ." ಎಂದು ಹೇಳುವ ಧರ್ಮರಾಯನ ಮಾತನ್ನು ನೆನೆಯುತ್ತಲೇ.. ಧರ್ಮರಾಯ ದೌರ್ಬಲ್ಯವೆಂದು ಹೇಳಿರುವುದೇ ವರದಾನವಾಗಿರುವ ಪರಿಯನ್ನು ತೆರೆದಿಡುತ್ತಾರೆ.
****************
ನಾಲ್ಕನೆಯ ಪೈಸೆ - ಇಲ್ಲಿರುವ ಸುಲಲಿತ ಪ್ರಬಂಧಗಳು ಹೆಚ್ಚು ಕುತೂಹಲ ಹಾಗೂ ವಿಭಿನ್ನ ಆಲೋಚನೆಯನ್ನು ಮೂಡಿಸಿದವು. ಪುರಾಣ ಅದರಲ್ಲಿ ಹೆಚ್ಚಾಗಿ ಮಹಾಭಾರತದ ವಿವಿಧ ಪ್ರಸಂಗಗಳ ಮೂಲಕ ವಿಶ್ಲೇಷಣೆ ಮಾಡಿರುವ ಸುಲಲಿತ ಪ್ರಬಂಧಗಳಿವು.
ವಿರಾಟ ಪರ್ವದ ವಿಶೇಷಗಳು : ಮಹಾಭಾರತದ ನಾಲ್ಕನೆಯ ಪರ್ವ ಹಾಗೂ ಬಹು ಚಿಕ್ಕಪರ್ವವಾಗಿರುವ ಇದರಲ್ಲಿನ ನವರಸಗಳು ಹಾಗೂ ಪಾಂಡವರ ಅಜ್ಞಾತವಾಸದಲ್ಲಿನ ವಿಭಿನ್ನ ಆಲೋಚನೆಗಳು ಹೀಗೂ ಇರಬಹುದಾ ಎಂದೆನಿಸುವಂತಿದೆ. ಭಕ್ತಿರಸವಿಲ್ಲದ ಆದರೆ ಸ್ವಾರಸ್ಯಕರವಾದ ಕಥಾನಕದ ಮರುಶ್ರವಣಕ್ಕೆ, ಜಾಣರು ಕಂಡುಹಿಡಿದಿರುವ ಸೊಗಸಾದ ಉಪಾಯವಾದರೂ ಏನು..? ಎಂಬುದನ್ನು ಓದಿ ತಿಳಿಯಿರಿ.
ಶಿಖಂಡಿ ಎಂಬ ಅಸ್ತ್ರ : ಮೂಲ ಅರ್ಥವನ್ನು ಕಳೆದುಕೊಂಡ 'ಶಿಖಂಡಿ' ಎಂಬ ಹೆಸರಿಗೆ ನಟಿಸುವ ನವಿಲಿನಗರಿಗಳ ಪ್ರಭಾವಳಿಯಂತಹ ಕೇಶಾಲಂಕಾರ ಎಂಬ ಅರ್ಥವಿದೆ. ಅಂಬೆ ಹಾಗೂ ಅರ್ಜುನನ ಬೃಹನ್ನಳೆಯ ಸ್ಥಿತಿಯನ್ನು ಮುಖ್ಯವಾಗಿ ವಿಶ್ಲೇಷಿಸಿದ್ದಾರೆ.
ಭಕ್ತಿಯ ಕಡಲು, ಕ್ರೌರ್ಯದ ಅಲೆ : ಇದಂತೂ ಹೆಚ್ಚು ಆಲೋಚನೆಗೆ ಹಚ್ಚಿದ ಪ್ರಬಂಧ. ಭಕ್ತಿಪ್ರಧಾನ ಸಿನಿಮಾಗಳ ಅಂತ್ಯಗಳು ಗೊತ್ತಿರುವುದಕ್ಕೋ ಅಥವಾ ಪವಾಡ ನಡೆಯುತ್ತದೆ ಎಂಬ ಅರಿವಿರುವುದಕ್ಕೋ ನಾವು ಕ್ರೌರ್ಯವನ್ನು ಅಷ್ಟಾಗಿ ಮನಸ್ಸಿಗೆ ತೆಗೆದುಕೊಳ್ಳುವುದಿಲ್ಲ. ಆದರೆ, ಭಕ್ತಿಯ ಕಡಲಲ್ಲಿ ಈ ಕ್ರೌರ್ಯದ ಅಲೆ ಇರುವುದು ಸತ್ಯವೇ ಅಲ್ಲವೇ..? ಎನ್ನಿಸಿತು.
ಯಾರೂ ಮುಖ್ಯರಲ್ಲ, ಯಾರೂ ಅಮುಖ್ಯರಲ್ಲ : 12 ವರ್ಷದ ಜಾಣ ಮಗನೋ, 100 ವರ್ಷದ ದಡ್ಡ ಮಗನೋ ಎಂಬ ಪ್ರಶ್ನೆಯನ್ನು ತಾಯಿಗೆ ಕೇಳಿದ್ದರೆ ಅಥವಾ ಈಗಿನ ಹಿರಿಯರಿಗೆ ಕೇಳಿದರೆ ಅವರ ಉತ್ತರ ಏನಿರುತ್ತಿತ್ತು ಎಂಬ ಪ್ರಶ್ನೆ ಮೂಡಿಸುತ್ತಲೇ ಮಾರ್ಕಂಡೇಯನ ಪ್ರಸಂಗವನ್ನು ಇಟ್ಟುಕೊಂಡು ಮೃಕಂಡು ಮುನಿಯ ಆಲೋಚನೆ, ಜಾಣತನ-ದಡ್ಡತನದ ವಿಶ್ಲೇಷಣೆ ಮಾಡಿದ್ದಾರೆ.
****************
ಐದನೆಯ ಪೈಸೆ - ವರ್ತಮಾನದ ವಿಭಿನ್ನ ನೋಟಗಳು, ತೀರ್ಮಾನ, ತಪ್ಪು - ಸರಿಗಳ ಆಲೋಚನೆ ಮೂಡಿಸುವ ಸುಲಲಿತ ಪ್ರಬಂಧಗಳಿವು.
ನೀರಿಲ್ಲದ ಹಾಲಿಲ್ಲ : ವಿಮರ್ಶೆಯ ಕುರಿತ ಉಲ್ಲೇಖದಿಂದಲೇ ಶುರುವಾದ ಈ ಪ್ರಬಂಧ.. "ಹಂಸವಾಗಿ ಹಾಲನ್ನು ನೀರಿನಿಂದ ಬೇರ್ಪಡಿಸಿಕೊಳ್ಳುವ ಕಲೆಯನ್ನು ಕರಗತಗೊಳಿಸಿಕೊಳ್ಳದಿದ್ದರೆ ನಾವು ಸಿನಿಕರಾಗುತ್ತೇವೆ. ನಮಗೆ ಹಾಲು ದಕ್ಕುವುದಿಲ್ಲ, ನೀರು ದಕ್ಕುವುದಿಲ್ಲ. ಈ ಕಾಲದ ತುರ್ತು ಅಗತ್ಯವೇ ಹಾಲು-ನೀರಿನ ಬೇರ್ಪಡಿಕೆ ಎಂದು ನಾನು ಭಾವಿಸುತ್ತೇನೆ" ಎನ್ನುತ್ತಾರೆ.
ಯುವಜನತೆ ಮತ್ತು ಸಿನಿಮಾ : ಯುವಜನತೆಗೆ ತೆರೆದುಕೊಳ್ಳುತ್ತಿರುವ ಹೊಸಹಾದಿಗಳು ಹಾಗೂ ಕಲಾಮಾಧ್ಯಮ ಅದರಲ್ಲೂ ಸಿನಿಮಾದ ಕುರಿತ ಯುವಜನರ ಆಲೋಚನೆಯ ಆಸಕ್ತಿಕರ ನೋಟ ಇಲ್ಲಿದೆ.
ಭಗವಂತನ ಸೃಷ್ಟಿಯಲ್ಲಿ ಸೀಮೆಗಳಿಲ್ಲ : "ಹೃದಯಕ್ಕೆ ವೇದ್ಯವಾಗದೆ ಯಾವುದೂ ಮೆದುಳನ್ನು ಸೇರಲಾರದು. ಈ ಸಂಗತಿಯನ್ನು ಬದುಕು ನಮಗೆ ಮತ್ತೆಮತ್ತೆ ಕಲಿಸುತ್ತಲೇ ಇರುತ್ತದೆ." ಎನ್ನುತ್ತಾ ಭಗವಂತನ ಸೃಷ್ಟಿಯ ಸೀಮೆಗಳು ಹಾಗೂ ಸೀಮಾತೀತ ಚಿತ್ರಣವನ್ನು ತೆರೆದಿಟ್ಟಿದ್ದಾರೆ.
ಅಸಮಾನತೆ ಮತ್ತು ಅನುಕರಣೆ : ಅಮೆರಿಕ ಪ್ರವಾಸಕ್ಕೆ ಹೋಗಿ ಬಂದಿದ್ದ ರಮಣನ್ ಅವರು ಹೇಳಿದ ಒಂದು ಸಂಗತಿ ಹೆಚ್ಚು-ಕಡಿಮೆ 20 ವರ್ಷದ ನಂತರ ಇಂದಿನ ಪರಿಸ್ಥಿತಿಗೆ ಎಷ್ಟು ಹೋಲಿಕೆಯಾಗುತ್ತಿದೆ..? ಅನುಕರಣೆ ಮಾಡುವುದು ಹಾಗೂ ಅಸಮಾನತೆಯ ಸರಿ-ತಪ್ಪುಗಳ ದೃಷ್ಟಿಕೋನ ಇಲ್ಲಿದೆ.
ಪಹಾಡಿ ಹುಡುಗ : ಮಾನಸ ಸರೋವರದ ಚಾರಣದಲ್ಲಿ ಭೇಟಿಯಾದ ರಾಹುಲ್ ಎನ್ನುವ ಪಹಾಡಿ ಹುಡುಗನ ನೆನಪು ಹಾಗೂ ಆತನ ಒಡನಾಟದಲ್ಲಿ ಕಂಡ ನೋಟಗಳ ಅಕ್ಷರ ರೂಪವಿದು.
ಹೊಸತು ಹೊಸತು : "ಹೊಸದರ ಹುಡುಕಾಟಕ್ಕಿಂತಲೂ ಕಷ್ಟವಾದುದು ಹಳೆಯದರಲ್ಲಿ ಹೊಸದನ್ನು ಕಾಣುವುದಾಗಿದೆ." ಎನ್ನುತ್ತಾ ಹೊಸತನದ ಭಾವಗಳ ಕಟ್ಟುವಿಕೆ ಇಲ್ಲಿ ಸಮಗ್ರವಾಗಿ ಮೂಡಿಬಂದಿದೆ.
ಇಲ್ಲಿನ ಪ್ರಬಂಧಗಳ ಓದು ಸುಲಲಿತವಾಗಿದ್ದರೂ.. ಹೊಸತನದ ಆಲೋಚನೆಗಳನ್ನು ಮೂಡಿಸುವುದಂತೂ ಹೌದು.
~ವಿಭಾ ವಿಶ್ವನಾಥ್
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ