ಪುಸ್ತಕದ ಶೀರ್ಷಿಕೆ : ಹ್ಯಾಷ್ ಟ್ಯಾಗ್ codeಗನ ಸೈನ್ಸ್ ಫಿಕ್ಷನ್
ಲೇಖಕರು : ಗುರುರಾಜ ಕುಲಕರ್ಣಿ
ಪ್ರಕಾಶಕರು : ಛಂದ ಪುಸ್ತಕ
ಪ್ರಥಮ ಮುದ್ರಣ : 2025
ಪುಟಗಳು : 116
ಬೆಲೆ : 135 ರೂ.
ಇತ್ತೀಚಿನ ಓದಿನಲ್ಲಿ ನನಗೆ ಇಷ್ಟವಾದ ಕಥಾಸಂಕಲನ ಇದು. ಗುರುರಾಜ ಕುಲಕರ್ಣಿಯವರು ಹಳೆಯ ಧಾರವಾಡ ಜಿಲ್ಲೆಯ, ಈಗಿನ ಗದಗ ಜಿಲ್ಲೆಗೆ ಸೇರಿದ ನರಗುಂದ ತಾಲೂಕಿನ ಶಿರೋಳದಲ್ಲಿ ಜನಿಸಿದವರು. ಇವರ ಕೆಲವು ಲಲಿತ ಪ್ರಬಂಧಗಳು ಹಾಗೂ ಸಣ್ಣ ಕಥೆಗಳು ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಊರು-ನಾಡುಗಳ ಇತಿಹಾಸವನ್ನು ತಿಳಿಸುವ ' ದನಿಪಯಣ ' ಎನ್ನುವ ಪಾಡ್ಕಾಸ್ಟ್ ನಡೆಸುತ್ತಿದ್ದಾರೆ.
ತಂತ್ರಜ್ಞಾನಕ್ಕೆ ಸಂಬಂಧಿಸಿದ ಕಥಾ ಸಂಕಲನಗಳಿದ್ದರೂ ಬೆರಣಿಕೆಯಷ್ಟು ಮಾತ್ರವೇ ನನ್ನ ಓದಿಗೆ ಸಿಕ್ಕಿರುವುದು. ಹೊಸ ತಂತ್ರಜ್ಞಾನಗಳ ಕುರಿತು ಸರಳವಾಗಿ ತಿಳಿಯುವಂತೆ, ಎಲ್ಲಿಯೂ ಬೋರಾಗದಂತೆ ಸರಾಗವಾಗಿ ಕಥೆಗಳನ್ನು ಹೆಣೆದಿದ್ದಾರೆ.
2025ರ ಛಂದ ಪುಸ್ತಕ ಬಹುಮಾನ ಪಡೆದ ಕೃತಿ ಇದು. ಕಥಾಸಂಕಲನದ, ಕಥೆಗಳ ಶೀರ್ಷಿಕೆಯಂತೆಯೇ ನಿಧಿ ಬಿ. ಆರ್ ರಚನೆಯ ಮುಖಪುಟವೂ ವಿಭಿನ್ನವಾಗಿ ಸೆಳೆಯಿತು. ಕಂಪ್ಯೂಟರ್ ಗೆ ಅರ್ಥವಾಗುವ ಭಾಷೆ 0 ಮತ್ತು 1. 0 ಮತ್ತು 1 ಬಳಸಿಯೇ codeಗ ಅಲ್ಲಲ್ಲ 'ಕೋಡಗ'ನ ಮುಖ, ಶೀರ್ಷಿಕೆ, ಲೇಖಕರ ಹೆಸರು ಹೀಗೆ ಮುಖಪುಟದ ಅಕ್ಷರಗಳು LCD ಡಿಸ್ಪ್ಲೇನಂತೆ ಚಿತ್ರಿತವಾಗಿವೆ.
ಈ ಕಥಾ ಸಂಕಲನದಲ್ಲಿ ಒಟ್ಟು 10 ಕಥೆಗಳಿವೆ.
ಪ್ರಾಜೆಕ್ಟ್ ನೆನಪಿಕೆ : ನ್ಯೂಯಾರ್ಕ್ ನಲ್ಲಿದ್ದ ಕ್ಷಿತಿಜ್ ಈಗ ತನ್ನ ಪ್ರೊಫೆಸರ್ ಪೋಲಸ್ಕಿ ಅವರೊಂದಿಗೆ ಚರ್ಚಿಸಿ ತಾನು ದಾಸ್ತಾನು ಡಾಟ್ ಕಾಂ ಗೆ ಸೇರಿಕೊಳ್ಳುವುದೋ ಬೇಡವೋ ಎಂದು ನಿರ್ಧರಿಸಬೇಕಿತ್ತು. ಹಾಗೆ ನೋಡಿದರೆ 'ದಾಸ್ತಾನು' ಕ್ಷಿತಿಜನದ್ದೇ ಕನಸಿನ ಕೂಸು. ನ್ಯೂಯಾರ್ಕ್ ಗೆ ಬಂದ ಹೊಸತರಲ್ಲಿ ವಾರಾಂತ್ಯದಲ್ಲಿ ಹೈಕಿಂಗ್ ಗೆಂದು ಗಗನನ ಜೊತೆ ಹೊರಟಾಗ ಆತ ತನ್ನ ಹೈಕಿಂಗ್ ಸಾಮಾಗ್ರಿಗಳನ್ನು ಸೇಫ್ ಸ್ಟೋರೇಜ್ ನಿಂದ ಕೊಂಡೊಯ್ಯುವುದನ್ನು ಕಂಡು ಅದರ ಮೇಲೆ ಆಸಕ್ತಿ ಹುಟ್ಟಿತ್ತು. ಇಂತಹದ್ದೇ ಸ್ಟೋರೇಜ್ ಉದ್ಯಮಕ್ಕೆ ಭಾರತದಲ್ಲಿಯೂ ಭವಿಷ್ಯವಿದೆ ಎಂದು ಕ್ಷಿತಿಜ ಲೆಕ್ಕಾಚಾರ ಹಾಕಿದ್ದ. ಈಗ ಇದು ಸ್ಟಾರ್ಟಪ್ ಹಂತದಲ್ಲಿತ್ತು.
ಪೋಲಸ್ಕಿ ಅವರೊಡನೆ ಮಾತನಾಡಲು ಹೋದಾಗ ಕೆಲ ಪುಸ್ತಕಗಳನ್ನು ಸೇಫ್ ಸ್ಟೋರೇಜ್ ನಿಂದ ತಂದುದನ್ನು ಕಂಡು ಮನೆಯಲ್ಲಿ ಎಷ್ಟೊಂದು ಜಾಗವಿದ್ದರೂ ಪುಸ್ತಕಗಳನ್ನು ದುಡ್ಡು ಕೊಟ್ಟು ಸೇಫ್ ಸ್ಟೋರೇಜ್ ನಲ್ಲಿಟ್ಟದ್ದೇತಕೆ ಎಂದು ಕೇಳಿದಾಗ
"ಮೈ ಯಂಗ್ ಫ್ರೆಂಡ್, ಏನನ್ನಾದರೂ ಇಟ್ಟುಕೊಳ್ಳಲು ಮನೆಯಲ್ಲಿ ಜಾಗವಷ್ಟೇ ಅಲ್ಲ, ಮನಸ್ಸಿನಲ್ಲಿ ಜಾಗವೂ ಬೇಕಾಗುತ್ತದೆ ಎನ್ನುತ್ತಾರೆ."
ಹೀಗೆ ಚರ್ಚೆ ಎರಡೂ ದಿಕ್ಕಿನಿಂದಲೂ ಸಾಗುತ್ತಾ ಹೋಗುತ್ತದೆ. ಭಾರತದ ಮಾರುಕಟ್ಟೆ, ಗ್ರಾಹಕರು, ತಂತ್ರಜ್ಞಾನವನ್ನು ಬಿಟ್ಟು ಸ್ಟೋರೇಜ್ ಕಡೆಗೆ ಮುಖ ಮಾಡಿದ ಕ್ಷಿತಿಜನ ಪ್ರತಿಭೆ ಎಲ್ಲದರ ಸಕಾರಾತ್ಮಕ-ನಕಾರಾತ್ಮಕ ಸಾಧ್ಯತೆಗಳನ್ನು ಚರ್ಚಿಸುತ್ತಾರೆ. ಇದಾದ ನಂತರ ಪ್ರೊಫೆಸರ್ ಪ್ರಾಜೆಕ್ಟ್ ನೆನಪಿಕೆಯನ್ನು ನಿಲ್ಲಿಸಲು ಹೊರಡುತ್ತಾರೆ. ಫಂಡಿಂಗ್ ತೊಂದರೆ ಇಲ್ಲದೆ, ಪ್ರಾಯೋಜಕರ ಕಿರಿಕಿರಿ ಇಲ್ಲದೆ, ಪೇಟೆಂಟ್ ಗಲಾಟೆಯೂ ಇಲ್ಲದೆ ಪ್ರೊಫೆಸರ್ ಅದನ್ನು ನಿಲ್ಲಿಸಲು ಹೊರಟದ್ದೇಕೆ..? ಅಷ್ಟಕ್ಕೂ ಪ್ರಾಜೆಕ್ಟ್ ನೆನಪಿಕೆ ಏನಿತ್ತು ..? ಪ್ರೊಫೆಸರ್ರ ವೈಯಕ್ತಿಕ ಬದುಕಿಗೂ ಇದಕ್ಕೂ ಇರುವ ನಂಟೇನು..?
ಕಬ್ಬಿಗ. ai : ದೊಡ್ಡ ಕಂಪನಿಯಲ್ಲಿ ಸಣ್ಣ ಇಂಜಿನಿಯರಿಂಗ್ ಮ್ಯಾನೇಜರ್ ಆಗಿರುವ ಕುಲಕರ್ಣಿ ಹಾಗೂ ನಿವೃತ್ತ ಕನ್ನಡ ಮೇಷ್ಟ್ರು ಪುಟ್ಟಲಿಂಗಯ್ಯನವರು ಇಬ್ಬರ ಸ್ನೇಹದ ಸಾಂಗತ್ಯ ಎಲ್ಲಿಂದಲ್ಲಿಯ ಸ್ನೇಹ ಎನಿಸಿದರೂ ಬೆಳೆಯುತ್ತಾ ಹೋದ ಸ್ನೇಹದಲ್ಲಿ ತಂತ್ರಾಂಶದ ಕುರಿತು ಗುರುಗಳು ತಿಳಿದುಕೊಳ್ಳತೊಡಗಿದ್ದರೆ, ಕೃತಕ ಬುದ್ಧಿಮತ್ತೆ (ಕೃಬು)/ ಯಂತ್ರ ಜಾಣ್ಮೆ (ಯಂಜಾ) ಉಪಯೋಗಿಸಿ ಕುಲಕರ್ಣಿ ಅವರು ಕಬ್ಬಿಗ. ai ತಂತ್ರಾಂಶವನ್ನು ಗುರುಗಳ ಜ್ಞಾನ ಹಾಗೂ ತಮ್ಮ ತಂತ್ರಜ್ಞಾನದ ಜ್ಞಾನದಿಂದ ಬೆಳೆಸುತ್ತಾ ಹೋದರು. ಈ ತಂತ್ರಜ್ಞಾನದ ಉದ್ದೇಶ ಏನಿತ್ತು..? ಮುಂದೆ ಪುಟ್ಟಲಿಂಗಯ್ಯನವರು ಯಂಜಾಚಾರ್ಯರ ಕಾವ್ಯದ ಕುರಿತು ಹೇಳಿದ ಮಾತುಗಳಲ್ಲಿ ಎಷ್ಟು ನಿಜವಿತ್ತು..? ಕುಲಕರ್ಣಿಯವರು ನಿಜ ತೆರೆದಿಡಲು ಹಿಂತೆಗೆದದ್ದೇಕೆ..? ತಂತ್ರಜ್ಞಾನದ ಜೊತೆಗೆ ಸಾಹಿತ್ಯವನ್ನು ಮಿಳಿತಗೊಳಿಸಿರುವ ಕತೆ.
ಕೋವಿಡ್ ಹಬ್ಬ : 'ಸೆನ್ಸೋ ಸ್ಟಾರ್' ಎನ್ನುವ ಚಿಕ್ಕ ಸ್ಟಾರ್ಟಪ್ ಹುಬ್ಬಳ್ಳಿಯಲ್ಲಿತ್ತು. ಕಾಲೇಜಿನ ಜೂನಿಯರ್ ಆಗಿದ್ದ ಬಸವರಾಜ ಸಂಗೊಳ್ಳಿ ಅದರ ಸ್ಥಾಪಕ-ಮುಖ್ಯಸ್ಥ. ಒಂದು ಸಂದರ್ಭದಲ್ಲಿ ಅದೇ ಕಂಪನಿಯಲ್ಲಿ ಕೆಲಸಕ್ಕೆ ಅವಕಾಶ ಸಿಕ್ಕು ಸೆನ್ಸಾರ್ ಗಳ ಹಾಗೂ ಇಂಟರ್ನೆಟ್ ಆಫ್ ಥಿಂಗ್ಸ್ ಗಳ ಕುರಿತು ಕೆಲಸ ಮಾಡುತ್ತಿರುವಾಗ, ಕಂಪನಿಯ ಆರ್ಥಿಕ ಸ್ಥಿತಿಯೂ ಚೆನ್ನಾಗಿಯೇ ಇದ್ದಿರುವಾಗ 21 ದಿನಗಳ ಸಂಪೂರ್ಣ ಲಾಕ್ ಡೌನ್ ಘೋಷಿಸಿದರು. ಎಲ್ಲ ಕಂಪನಿಗಳಂತೆ ವರ್ಕ್ ಫ್ರಮ್ ಶುರುವಾಯಿತು ಎಂದುಕೊಂಡರೆ.. ಅಂತಹ ಕಠಿಣ ಪರಿಸ್ಥಿತಿಯಲ್ಲೂ ಬಸವರಾಜ ಹೊಸ ಅವಕಾಶವನ್ನು ಕಂಡುಕೊಂಡಿದ್ದ. ಆ ಅವಕಾಶವೇನು ಹಾಗೂ ಅದರ ಪರಿಣಾಮ ಏನಾಯ್ತು..? ತಂತ್ರಜ್ಞಾನದ ಜೊತೆಗೆ ರಾಜಕೀಯವೂ ಬೆರೆತಿರುವ ಕತೆ.
ಹೊಲವೇ ಜೀವನ ಸಾಕ್ಷಾತ್ಕಾರ... : ದೇಶದ ಖ್ಯಾತ ಪತ್ರಿಕೆಯ ವರದಿಗಾರ್ತಿಯಾಗಿ ಹೆಸರು ಮಾಡಿದ್ದವಳಿಗೆ 25 ವರ್ಷಗಳ ಹಿಂದೆ ತೀರಿ ಹೋಗಿದ್ದ ಅಜ್ಜಿ ಕನಸಿನಲ್ಲಿ ಬಂದು "ಹೊಲ ತಗೋ" ಎಂದು ಗಂಟು ಬಿದ್ದಿದ್ದರು. ಭಾರತೀ ಅಕ್ಕೋರು ಎಂದೇ ಖ್ಯಾತರಾಗಿದ್ದ ಅಜ್ಜಿಯ ಕಷ್ಟಗಳು, ಅಪ್ಪನನ್ನು ಬೆಳೆಸಿದ ಕಷ್ಟ, ಅಕ್ಷರವನ್ನು ಕಲಿಸಿದ್ದು, ವಿನೋಭಾ ಭಾವೆಯವರ ಭೂದಾನ ಚಳುವಳಿಯ ಮಹಿಳಾ ಕಾರ್ಯಕರ್ತೆಯಾಗಿ ಭಾಗವಹಿಸಿದ್ದು, ಅಜ್ಜಿಯ ಬದುಕಿನಲ್ಲಿ ಬಂದ ಹಠಾತ್ ತಿರುವು, ಮಾಯಿ ಸ್ಥಾಪಿಸಿದ ವನಿತಾ ಸೇವಾ ಸಮಾಜ ಇದೆಲ್ಲದರ ಕಥೆ ಬಿಚ್ಚಿಕೊಳ್ಳುತ್ತಾ ಹೋಗುತ್ತದೆ. ಅಜ್ಜಿ ಹೊಲ ತೆಗೆದುಕೊಳ್ಳಲು ಗಂಟು ಬಿದ್ದದ್ದೇಕೆ..? ಅಜ್ಜಿ ಹೇಳಿದ ವಿಚಾರಗಳು ಎಷ್ಟರಮಟ್ಟಿಗೆ ಆಲೋಚನೆಗೆ ಹಚ್ಚಿದವು..? ಇದೆಲ್ಲವನ್ನೂ ತಾನು ಮದುವೆಯಾಗುವ ಹುಡುಗ ಸಂದೀಪನೊಡನೆ ಹೇಳಿಕೊಂಡಾಗ ಆತ ಕೊಟ್ಟ ತಾರ್ಕಿಕ ಉತ್ತರವೇನು..?
ಮರಕೋತಿ ಭಾರತಿ : ಮಕ್ಕಳು ಆಟವೆಂದರೆ ಪಬ್ಜಿ ಎಂಬ ಕಂಪ್ಯೂಟರ್ ಗೇಮು ಎಂದುಕೊಳ್ಳುತ್ತಿರುವ ಸಂದರ್ಭದಲ್ಲಿಯೇ.. ಅಖಿಲ ಭಾರತ ಮರಕೋತಿ ಉತ್ಸವ ನಡೆಯುತ್ತಿರುವುದು ಹಾಗೂ ಅದಕ್ಕೆ ಭಾಗವಹಿಸಲು ದೇಶದ ವಿವಿದೆಡೆಯಿಂದ ಮರಕೋತಿ ಪ್ರಚಾರಕರು, ಅಭಿಮಾನಿಗಳು ಬರುತ್ತಿದ್ದಾರೆಂದು ತಿಳಿದು ಬಂದಿತ್ತು. ಮರಕೋತಿ ಜ್ಯೋತಿ ಎಂಬ ಮೊಬೈಲ್ ಅಪ್ಲಿಕೇಶನ್ ಕೂಡಾ ಸಿಕ್ಕಿತು. ಇದೆಲ್ಲವನ್ನೂ ನಡೆಸುತ್ತಿರುವ ಸಂಸ್ಥೆ ಮರಕೋತಿ ಭಾರತಿ. ಆ ಸಂಸ್ಥೆಯ ಯಶೋಗಾಥೆಯ ಹಿಂದಿನ ಕಥೆ ಮಾತ್ರವಲ್ಲದೆ, ಆ ಸಂಸ್ಥೆಯ ಮೂರ್ಖತನದ ಪರಿಣಾಮ ವೈಯಕ್ತಿಕವಾಗಿ ತಟ್ಟಿದ ಕಥೆಯೂ ಇಲ್ಲಿದೆ.
ಯಾವುದು ಹೌದು ಅದು ಅಲ್ಲ, ಯಾವುದು ಅಲ್ಲ ಅದು ಹೌದು! : ಈ ಕಥೆಯ ಶೀರ್ಷಿಕೆಯ ಸಾಲು ಕೋಡಿಕೊಪ್ಪದ ಹುಚ್ಚೀರಪಜ್ಜ ಎಂಬ ಸಂತನ 'ಜಗತ್ ಮಿಥ್ಯ' ಅರ್ಥದ ಖ್ಯಾತ ನುಡಿಯೆಂಬ ಉಲ್ಲೇಖವಿದೆ. ತನ್ನ ಬಾಸ್ ಸತೀಶನ ಜೊತೆ ಬೆಂಗಳೂರಿನ ಹೊರವಲಯದ ಸರ್ಜಾಪುರ ರಸ್ತೆಯ ಜಮೀನಿನ ಬಳಿ ಬಂದದ್ದಕ್ಕೆ ಕಾರಣ ಅಲ್ಲಿ ಕಟ್ಟುತ್ತಿರುವ ದೊಡ್ಡ ಟೆಕ್ ಪಾರ್ಕ್. ಅಲ್ಲಿ ಅವರ ಕಂಪನಿಗೂ ಜಾಗ ನೋಡಿಕೊಂಡು ಅದು ಸರಿ ಎನ್ನಿಸಿದರೆ, ಬಾಡಿಗೆ ಕಮ್ಮಿ ಇದ್ದರೆ, ಹೆಡ್ ಆಫೀಸ್ ಗೆ ತಿಳಿಸುವ ಉದ್ದೇಶದಿಂದ. ಈಗಿದ್ದ ಆಫೀಸನ್ನು ಹೊರವಲಯಕ್ಕೆ ಸ್ಥಳಾಂತರ ಮಾಡಲು ಹೊರಟಿದ್ದೇಕೆ..? ಗೋಲ್ಡನ್ ಟೆಕ್ ಪಾರ್ಕ್ ನೋಡಿದ ಮೇಲೆ ಆ ಜಾಗವನ್ನೇ ಶಿಫಾರಸ್ಸು ಮಾಡಿದ ಭಾವಜೀವಿ ಸತೀಶನ ನಿರ್ಧಾರದ ಹಿಂದೆ ಯಾವ ಭಾವ ವಿತ್ತು..? ವರ್ಚುಯಲ್ ರಿಯಾಲಿಟಿ ಕನ್ನಡಕ ಹಾಕಿಕೊಂಡು ಹಲವಾರು ಸೌಲಭ್ಯಗಳನ್ನು ಕೂಡಾ ಕಂಡಿದ್ದರು. ಆಫೀಸ್ ಸ್ಥಳಾಂತರವಾದ ನಂತರ ವಿಕ್ಷಿಪ್ತ ರೀತಿಯಲ್ಲಿ ಸತೀಶ ರಾಜೀನಾಮೆ ಕೊಟ್ಟು ಹೋದ ಸಂದರ್ಭಕ್ಕೆ ಕಾರಣವೇನು..?
ಮೊಲೆವಾಲು ನಂಜಾಗಿ ಕೊಲುವಡೆ... : ಸಂತೋಷ ಮಹತ್ವಾಕಾಂಕ್ಷಿ. ಕೆಲವೊಮ್ಮೆ ಅವನದ್ದು ದುಡುಕು ಸ್ವಭಾವ, ಚಂಚಲ ಸ್ವಭಾವ ಎನ್ನಿಸಿದರೂ ಇದರ ವಿರುದ್ಧವಾದ ಅಭಿಪ್ರಾಯ ಸಂತೋಷನಿಗೆ ಈತನ ಕುರಿತು ಇತ್ತು. ಅಮೆರಿಕಾದಿಂದ ಮಗಳು ಭಾರತೀಯ ಸಂಸ್ಕೃತಿ ಕಲಿಯಲಿ ಎಂದು ಬಂದು ಇಂಟರ್ನ್ಯಾಷನಲ್ ಸ್ಕೂಲ್ ಗೆ ಸೇರಿಸಿದ್ದಾಗಿತ್ತು. ಆದರೆ, ಶಾಲೆಯಲ್ಲಿ ಆದ ಒಂದು ಅವಗಢ ಪೋಷಕರ ಮನಸ್ಸನ್ನೇ ತಳಮಳಗೊಳಿಸುವಂತಹದ್ದು. ಆ ಘಟನೆ ಏನು ಓದಿ ನೋಡಿ.
ನಿಶಾಚರ ಸಾಫ್ಟ್ವೇರ್ ಡಾಟ್ ಕಾಂ : ಕ್ರೈಮ್ಸ್ ಆಫ್ ಇಂಡಿಯಾ ಪತ್ರಿಕೆಗಾಗಿ ನಿಶಾಚರ ಸಾಫ್ಟ್ವೇರ್ ಡಾಟ್ ಕಾಂ ಕಂಪೆನಿಯ ಮುಖ್ಯಾಧಿಕಾರಿಯನ್ನು ಅವರದ್ದೇ ಆಹ್ವಾನದ ಮೇಲೆ ಸಂದರ್ಶನ ಮಾಡಲು ಹೋಗಿದ್ದು ರಾತ್ರಿ 11:50ಕ್ಕೆ. ರಾತ್ರಿಯ ಅಪವೇಳೆಯಲ್ಲಿ ಸಂದರ್ಶನಕ್ಕೆ ಬಾ ಎಂದದ್ದು ಬೇಜಾರು ತಂದಿತ್ತಾದರೂ ಚಾನ್ ಬಂದ ಮೇಲೆ ಸಂದರ್ಶನವನ್ನು ಶುರು ಮಾಡಿ ಆಗಿತ್ತು. ಹೀಗೆ ಆಸಕ್ತಿಕರವಾಗಿಯೇ ಸಾಗುತ್ತಿದ್ದ ಕಥೆ ಹಾರರ್ ರೂಪ ತಳೆಯುವುದನ್ನು ಓದಿ ನೋಡಿ.
ಅಳಗಪ್ಪನ ಅಲ್ಗಾರಿದಮ್ : ಕಂಪನಿಯಲ್ಲಿ ಕೆಲಸ ಮಾಡುವ ಅಳಗಪ್ಪನ ಪೂರ್ತಿ ಹೆಸರು ಅಳಗಪ್ಪನ್ ಪಳನಿಯಪ್ಪನ್. ಜಾಣನಾಗಿದ್ದಾತ ಕಷ್ಟಪಟ್ಟು ದುಡಿಯುತ್ತಿದ್ದ. ಒಂದೇ ತರಹದ ಕೆಲಸಗಳನ್ನು ಎರಡು ಸಲ ಮಾಡಿದ್ದೇ ಇಲ್ಲ. ಮೊದಲನೇ ಸಲ ಕೆಲಸ ಮಾಡಿ ಅದನ್ನು ಇನ್ನೊಮ್ಮೆ ಮಾಡಬೇಕಾಗಿ ಬಂದರೆ ಎಂದು ಮುಂದಾಲೋಚನೆಯಿಂದ ಕಂಪ್ಯೂಟರ್ ಪ್ರೋಗ್ರಾಮ್ ಬರೆದು ಅದೇ ತರಹದ ಸಮಸ್ಯೆಗೆ ಕಂಪ್ಯೂಟರ್ ನಿಂದ ಕೆಲಸ ಮಾಡಿಸಲು ಪ್ರಯತ್ನಿಸುತ್ತಿದ್ದ. ಹೀಗೆ ಆಟೋಮೇ ಶನ್ ಮಾಡುತ್ತಾ ಇದ್ದವನ ಪ್ರತಿಭೆಗೆ ಇದ್ದ ಒಂದೇ ಸಮಸ್ಯೆ ಎಂದರೆ 'ಹತಗೊಂಡು ಹಲೇ' ಸಿಂಡ್ರೋಮ್. ಮುಂದೆ ಶೇರ್ ಟ್ರೇಡಿಂಗ್ ಅನ್ನು ಮಾಡಲು ಅಲ್ಗೊರಿದಮ್ ಅನ್ನು ಬಳಸಲು ಹೋದ ಅಳಗಪ್ಪನ ಕಥೆ ಏನಾಯ್ತು ಓದಿ ನೋಡಿ.
ಮಲ್ಲೇಶಿಯ ಮೈನೆ ಪ್ಯಾರ್ ಕಿಯಾ ಕಥಾನಕವು : ತನ್ನೂರಿನಲ್ಲಿಯೇ ಬಿ.ಎಸ್ಸಿ ಮುಗಿಸಿದ್ದ ಮಲ್ಲೇಶಿ. ಅವನಿಗೆ ಪ್ರೀತಿ, ಪ್ರೇಮ ಇತ್ಯಾದಿ ಶಬ್ದಗಳೆಲ್ಲ ಫ್ರೆಂಚ್, ಗ್ರೀಕ್ ಭಾಷೆಯಂತಿದ್ದವು. ಹೀಗಿದ್ದವನು ಬೆಂಗಳೂರಿಗೆ ಹೊರಟದ್ದೇ ವಿಭಿನ್ನ ಕಥೆ. ಸಣ್ಣ ಕಂಪನಿಯಲ್ಲಿಯೂ ಕೆಲಸ ಗಿಟ್ಟಿಸಲು ಕಷ್ಟವಾಗಿತ್ತು. ರೆಸ್ಯೂಮ್ ಹಿಡಿದುಕೊಂಡು ಚಪ್ಪಲಿ ಸವೆಸುತ್ತಿದವನಿಗೆ ಒಮ್ಮೆ ಸೆಕ್ಯೂರಿಟಿ ಆಫೀಸರ್ ಇಂಟರ್ ವ್ಯೂ ತೆಗೆದುಕೊಂಡ. ಅಲ್ಲಿಯೂ ಫೇಲ್ ಆಗಿ ಮುಂದೆ ಕಾಲ್ ಸೆಂಟರ್ ನಲ್ಲಿಯೂ ಪ್ರಯತ್ನಿಸಿಯಾಯಿತು. ಆದರೆ, ಎಲ್ಲೋ ಒಂದು ಕಡೆ ಕೆಲಸ ಸಿಗುತ್ತದೆ ಎಂಬಂತೆ.. ಮಲ್ಲೇಶನಿಗೂ ಕೆಲಸ ಸಿಕ್ಕಿತು. ಅವನ ಮೈನೆ ಪ್ಯಾರ್ ಕಿಯಾ ಕಥನ ಏನು? ಊಹೆಗೆ ಸಿಗದ ಕಥೆ ಓದಿ ನೋಡಿ.
ಎಂದಿನಂತೆ ಛಂದ ಪುಸ್ತಕದ ಚಂದದ ವಿಭಿನ್ನ ಕಥೆಗಳ ಕಥಾಗುಚ್ಛವಿದು. ಲಘು ಹಾಸ್ಯ, ವಿಡಂಬನೆ ಭಾವಪೂರ್ಣತೆ, ಸಾಹಿತ್ಯ, ಹಾರರ್, ಟೆಕ್ನಾಲಜಿ ಹೀಗೆ ತರಹೇವಾರಿ ಕಥೆಗಳನ್ನು ತಂತ್ರಜ್ಞಾನದ ಹೆಚ್ಚಿನ ಅರಿವಿಲ್ಲದವರೂ ಓದಬಹುದು.
~ ವಿಭಾ ವಿಶ್ವನಾಥ್
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ