ಭಾನುವಾರ, ಏಪ್ರಿಲ್ 26, 2026

ಕೊನೆಯ ಪದ್ಯ



"ಎಚ್ಎಸ್ವಿ ದುಗುಡಗಳನ್ನು ಕವಿತೆಯಾಗಿಸುತ್ತಲೇ ಅವು ದುಗುಡಗಳೆಂಬುದನ್ನು ಮರೆಯುತ್ತಾರೆ, ಮರೆಸುತ್ತಾರೆ." ಎನ್ನುವ ಮಾತನ್ನು ಜೋಗಿಯವರು ಉಲ್ಲೇಖಿಸುತ್ತಾರೆ. ಎಚ್. ಎಸ್. ವೆಂಕಟೇಶಮೂರ್ತಿ ಅವರ 'ಮುಸ್ಸಂಜೆ ಹೊತ್ತು' ಕವನ ಸಂಕಲನವನ್ನು ಓದಿದಾಗ ನನಗೆ ಈ ಮಾತು ನೂರಕ್ಕೆ ನೂರು ಸತ್ಯ ಎನ್ನಿಸಿತು. ಈ ಕವನ ಸಂಕಲನದಲ್ಲಿ ಹಲವಾರು ರೀತಿಯ ಭಾವಗಳು ಸೆರೆಯಾಗಿವೆ. ಕೆಲವೊಂದು ರೂಪಕಗಳು ಅಪ್ರತಿಮವೆನಿಸಿದರೆ.. ಕೆಲವೊಂದು ಸರಳ ಸಾಲುಗಳು, ಪದಲಾಲಿತ್ಯ ಮನಸೂರೆಗೊಳ್ಳುತ್ತವೆ.


"ಮಾತಲ್ಲಿ ಹೇಳಲಾಗದ್ದು ಕವಿತೆಯಲ್ಲಿ ಹೇಳಬಹುದು ಎನ್ನುವ ನಂಬಿಕೆ. ಮಾತಿಗೆ ಮೀರಿದ್ದನ್ನು ಕವಿತೆಯಲ್ಲಿಯೇ ಹೇಳಬೇಕು, ಬೇರೆ ದಾರಿಯೇ ಇಲ್ಲ. " ಎನ್ನುತ್ತಾರೆ ಎಚ್ಎಸ್ವಿ. ಹೀಗೆ ಕಟ್ಟಿಕೊಟ್ಟಿರುವ ಕವಿತೆಗಳ ಒಂದು ಗುಚ್ಛ "ಮುಸ್ಸಂಜೆ ಹೊತ್ತು" ಎನ್ನುವ ಕವನ ಸಂಕಲನ.


ಈ ಕವನ ಸಂಕಲನದಿಂದ ನನ್ನ ಆಯ್ಕೆಯ ಕವಿತೆ "ಕೊನೆಯ ಪದ್ಯ"

ಇದು ಈ ಕವನ ಸಂಕಲನದ ಕೊನೆಯ ಕವಿತೆ ಇದಾದರೂ.. ಇದು ಅಂತ್ಯವನ್ನು ಸೂಚಿಸುವುದಿಲ್ಲ.. ಬದಲಾಗಿ, ಅಂತ್ಯದ ಅನಂತರದ ಅನಂತತೆಯನ್ನು ಕಟ್ಟಿಕೊಡುವ ಕವಿತೆಯಾಗಿ ನನಗೆ ಇಷ್ಟವಾಯಿತು.


ಕವಿತೆಯ ಶೀರ್ಷಿಕೆ : ಕೊನೆಯ ಪದ್ಯ 

-----------------------------------------


ಪದ್ಯ ಮುಗಿಯುವುದಿಲ್ಲ, ಚಂಡೆ ನಿಲ್ಲುವುದಿಲ್ಲ 

ಹಿಟ್ಟ ಮೆಲ್ಲುವುದಿಲ್ಲ ಗಿರಣಿ ಗರಗರ ಕಲ್ಲು 

ಯಕ್ಷಗಾನದ ವೇಷಧಾರಿಗಳ ಕಾಲ್ಗುಣಿತ 

ಕುಣಿತ ಮುಗಿಯದು ಆಟ ಮುಗಿದ ಮೇಲು.


ನಾವಡರು ಹಾಡುವರು ಯಂತ್ರ ಪಕ್ಷಿಯು ಸಿಡಿದು 

ಬಯಲಲ್ಲಿ ನಕ್ಷತ್ರ ಚೂರು ಚೂರಾದ ಮೇಲೂ 

ನಕ್ಷತ್ರ ಚೂರು ಹಾಡುವುವು ಬೆಳಕಿನ ಹಾಡು 

ಪೂರ್ವದಿಕ್ಕಿನ ನೆತ್ತಿ ಸಿಡಿದ ಮೇಲೂ 


ಹಕ್ಕಿ, ಹಾಡುಗಳನ್ನು ಹೆಕ್ಕುವವು ಬಯಲಲ್ಲಿ 

ದನಿಯು ನಡುಗುತ ಕೆಳಕ್ಕೆ ಬೀಳದಂತೆ 

ಅಲೆಯ ಆಲಾಪ ಕೊಳದಾಳದಲ್ಲುಳಿಯುವುದು 

ಮುಳುಗಿಯೂ ಎದೆಯ ದನಿ ಉಡುಗದಂತೆ


ಎಷ್ಟೋ ಒಳ್ಳೆಯ ಸಂಗತಿಗಳು ಮುಗಿದವೆಂದುಕೊಂಡ ನಂತರವೂ ಅವುಗಳು ಉಳಿಸಿ ಹೋಗುವ ಮಧುರ ನೆನಪುಗಳು ಹಾಗೂ ಅವುಗಳ ಸವಿ ಎಂದಿಗೂ ಕಡಿಮೆಯಾಗುವುದಿಲ್ಲ. ಈ ಕವನ ಸಂಕಲನದಲ್ಲಿ ಇದು ಕೊನೆಯ ಪದ್ಯವಾದರೂ.. ಪದ್ಯ ಮುಗಿಯುವುದಿಲ್ಲ ಎನ್ನುತ್ತಾರೆ. ಕವಿಯ ಮನಸ್ಸಿನ ಭಾವನೆಗಳು ಅಕ್ಷರ ರೂಪದಲ್ಲಿ ನೆಲೆಯಾದರೂ.. ಹೇಳಲು ಅವರ ಮನಸ್ಸಿನಲ್ಲಿ ಮತ್ತಷ್ಟು ಭಾವಗಳಿರುತ್ತವೆ, ಹೊಸ ಭಾವಗಳು ಹುಟ್ಟುತ್ತವೆ. ಅಲ್ಲದೆ, ಓದಿದವರ ಮನಸ್ಸಿನಲ್ಲಿ ಉಳಿಯುವ ಭಾವ ಆಗಾಗ ಮೆಲುಕು ಹಾಕುವಂತೆ ಮಾಡುತ್ತದೆ. ಅದರ ಅನುರಣನ ಮುಗಿಯುವುದಿಲ್ಲ.. 


ಯಕ್ಷಗಾನದ ವೇಷಧಾರಿಗಳ ಆಟ ಮುಗಿದ ನಂತರವೂ ಅವರ ಕುಣಿತ ಮುಗಿಯುವುದಿಲ್ಲ. ಹಾಗೆಯೇ ಚಂಡೆಯ ಸದ್ದು ಸಹ.. ಹೀಗೆ ನೋಡಿದವರ ಭಾವಗಳು ಅಷ್ಟೇ.. ಆ ಸಂದರ್ಭ ಮುಗಿದ ನಂತರವೂ ಅವು ಕಟ್ಟಿಕೊಟ್ಟಿರುವ ಭಾವ ನೋಡುಗರ ಮನಸ್ಸಿನಲ್ಲಿದ್ದರೆ, ಅದನ್ನು ಯಶಸ್ವಿಯಾಗಿಸಿದ ಭಾವ ಮತ್ತು ಅದೇ ಕುಣಿತದ ನೆನಪು ರಂಗದಲ್ಲಿ ಕುಣಿದವರದ್ದು.


ತಮ್ಮ ವಿಶಿಷ್ಟ ಕಂಠಸಿರಿ ಹಾಗೂ ಧ್ವನಿಯಿಂದ ಯಕ್ಷಗಾನದ ಭಾಗವತಿಕೆಯಲ್ಲಿ ಇಂದಿಗೂ ಅಜರಾಮರರಾಗಿರುವ ನಾವಡರ ಅಂತ್ಯ ಭೌತಿಕವಾಗಿ ಆಗಿದ್ದರರೂ.. ಅವರು ಇನ್ನೂ ಯಕ್ಷಗಾನ ಪ್ರೇಮಿಗಳ ಮನಸ್ಸಿನಲ್ಲಿ ಸದಾ ಜೀವಂತವಾಗಿದ್ದಾರೆ. ಯಂತ್ರಪಕ್ಷಿ ಎಂದು ಪ್ರಸ್ತಾಪಿಸಿ ಅವರ ಅಂತ್ಯವನ್ನು ಸೂಕ್ಷ್ಮವಾಗಿ ಹೇಳಿದ್ದಾರೆ ಇಲ್ಲಿ.


ಬೆಳಿಗ್ಗೆ ಪೂರ್ವ ದಿಕ್ಕಿನಲ್ಲಿ ಸೂರ್ಯ ಉದಯಿಸಿದ ಮೇಲೂ.. ರಾತ್ರಿಯ ನಕ್ಷತ್ರಗಳು ಮಸುಕಾದರೂ.. ಅವುಗಳು ತಾವು ಬೆಳಕು ಸೂಸುವುದನ್ನು ಎಂದಿಗೂ ನಿಲ್ಲಿಸಿರುವುದಿಲ್ಲ. ಬೆಳಕಿನ ಹಾಡನ್ನು ಹಾಡಲು ಕತ್ತಲೆಯೇ ಇರಬೇಕಿಲ್ಲ. ಅದು ನಿರಂತರವಾಗಿ ಹೊರಹೊಮ್ಮುತ್ತಲೇ ಇರುತ್ತದೆ.


ಹಕ್ಕಿ, ಹಾಡನ್ನು ಹೆಕ್ಕುವ ಪರಿಯೇ ವಿಶಿಷ್ಟ ಎನ್ನುತ್ತಲೇ ಅವುಗಳು ತಮ್ಮ ಕಂಠಸಿರಿಯಿಂದ ಹೊರಹೊಮ್ಮಿಸುವ ಸುನಾದವನ್ನು ಕೆಳಕ್ಕೆ ಬೀಳದ ಯಾವುದೋ ದನಿಯ ಪ್ರತಿನಿಧಿಯನ್ನಾಗಿಸಿದ್ದಾರೆ. 


ಕೊಳಕ್ಕೆ ಎಸೆದ ಕಲ್ಲು ಅಲೆಯನ್ನು ಸೃಷ್ಟಿಸಿದರೂ.. ನಂತರ ಆ ಅಲೆ ಕರಗಿ ಹೋದರೂ.. ಅಲೆಯ ಆಲಾಪ ಹೇಗೆ ಉಳಿದಿರುತ್ತದೆ ಎನ್ನುವುದರ ಜೊತೆಗೆ ಎದೆಯ ದನಿಯನ್ನು ಧ್ವನಿಸುತ್ತಾರೆ. 


ಈ ಕವಿತೆಯಲ್ಲಿ ಶಬ್ದಗಳ ಝೇಂಕಾರ ಹಾಗೂ ನೆನಪಿನ ನಿನಾದ ಅನಂತವಾಗಿದೆ.


ಕವಿತೆಗಳನ್ನು ಓದಿ ಸವಿದಷ್ಟು, ಮತ್ತೆ ಮತ್ತೆ ಓದಿದಷ್ಟು ಸುಲಭವಲ್ಲ ಅವುಗಳ ಭಾವಗಳನ್ನು ಬಿಚ್ಚಿಡುವುದು. ಕವಿ ಎಚ್ಚೆಸ್ವಿ ಮಾತಲ್ಲಿ ಹೇಳಲಾಗದನ್ನು ಕವಿತೆಯಲ್ಲಿ ಹೇಳಿದ್ದಾರೆ. ಅದನ್ನು ಗದ್ಯದಲ್ಲಿ ವಿಶ್ಲೇಷಿಸುವುದು ನಿಜಕ್ಕೂ ಸುಲಭವಲ್ಲ.

ಎಚ್ಎಸ್ವಿಯವರ "ಕೊನೆಯ ಪದ್ಯ" ಕವಿತೆಯನ್ನು ನನ್ನ ಅರಿವಿಗೆ ಬಂದಂತೆ, ಭಾವಕ್ಕೆ ದಕ್ಕಿದಂತೆ ವಿಶ್ಲೇಷಿಸಿದ್ದೇನೆ. ಹೆಚ್ಚೆಸ್ವಿಯವರಿಗೆ ಅಕ್ಷರ ನಮನ ಸಲ್ಲಿಸುವ ಸಲುವಾಗಿ ಇದು ನನ್ನ ಪುಟ್ಟ ಪ್ರಯತ್ನ.


~ವಿಭಾ ವಿಶ್ವನಾಥ್

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ