ಭಾನುವಾರ, ಏಪ್ರಿಲ್ 26, 2026

ಬೆಳಗಾಗಿ ನಾನೆದ್ದು.. (ಪುಸ್ತಕ ಯಾನ - 356)


ಪುಸ್ತಕದ ಶೀರ್ಷಿಕೆ : ಬೆಳಗಾಗಿ ನಾನೆದ್ದು..

ಲೇಖಕರು : ಎಚ್. ಎಸ್. ವೆಂಕಟೇಶಮೂರ್ತಿ

ಪ್ರಕಾಶಕರು : ಬಹುರೂಪಿ

ಪ್ರಥಮ ಮುದ್ರಣ : 2019

ಪುಟಗಳು : 144

ಬೆಲೆ : 150 ರೂ.


ಎಚ್. ಎಸ್. ವೆಂಕಟೇಶಮೂರ್ತಿಯವರು ಕಾವ್ಯ ಲೋಕದ ತಾರೆಗಳೊಂದಿಗೆ ತಮ್ಮ ಅನುಭವಗಳು ಹಾಗೂ ಅವರ ವ್ಯಕ್ತಿತ್ವವನ್ನು ಪರಿಚಯಿಸಿರುವ ನುಡಿದೀಪ ಇದಾಗಿದೆ. ಇಲ್ಲಿ 21 ನುಡಿದೀಪಗಳಿವೆ. ಇಲ್ಲಿ ವಿಮರ್ಶಕರು ಹಾಗೂ ಕವಿಗಳ ಹಿರಿಮೆ, ಆಯ್ದ ಕವಿತೆ ಸಾಲುಗಳ ಜೊತೆಗೆ ಎಚ್ಚೆಸ್ವಿ ಅವರ ಪದಗಳ ಲಾಸ್ಯ ಹಾಗೂ ಅವರ ಅನುಭವಗಳನ್ನು ಓದುವುದೇ ಒಂದು ವಿಭಿನ್ನ ಅನುಭವ. ಈ ಪುಸ್ತಕದ ಓದು 2025ರ ನನ್ನ ಮೆಚ್ಚಿನ ಓದು. ಈ ಕೃತಿಯ ವಿಶ್ಲೇಷಣೆ ಕಷ್ಟವೇ. ಓದಿರದಿದ್ದವರು ಈ ನುಡಿದೀಪವನ್ನು ಓದಿ ನೋಡಿ.


ಪಶ್ಚಿಮದ ಗೋಡೆ ಮತ್ತು ಸೂರ್ಯ :

"ಕವಿಯಾದವನು ಕಾಣುವುದರ ಆಚೆ ಇರುವ ಕಾಣ್ಕೆಯನ್ನು ಪಡೆಯಬೇಕಯ್ಯಾ! ಕಂಡದ್ದು ನೋಟ. ಕಂಡದ್ದರ ಆಚೆ ಕಾಣುವಂಥದ್ದು ಕಾಣ್ಕೆ; ದರ್ಶನ" ಎನ್ನುವ ಪು.ತಿ.ನ ಅವರ ಮಾತು ಎಚ್ಚೆಸ್ವಿಯವರನ್ನು ಧ್ಯಾನಿಸುವಂತೆ ಮಾಡಿದ ಸಂದರ್ಭ ಇಲ್ಲಿದೆ. ಆ ಸಂಧರ್ಭವೇನು..?


ಆಮೂರರ ಅಸೀಮ ವ್ಯಕ್ತಿತ್ವ :

ದಾಸರು ಹೇಳುವ ಅಸ್ಕಲಿತ ತೈಲಧಾರೆಯಂತೆ ನಿತ್ಯವಸಾಯದಲ್ಲಿ ತೊಡಗಿರುವ ಆಮೂರರ ಸಾಹಿತ್ಯ ಕೃಷಿ, ಏಕಾಗ್ರ ಚಿತ್ತ ಹಾಗೂ ವ್ಯಕ್ತಿತ್ವವನ್ನು ಕವಿ ಹಾಗೂ ವಿಮರ್ಶಕರಾಗಿರುವ ರೂಪದ ನೋಟ ಇಲ್ಲಿದೆ.


ಪ್ರೀತಿ ಎಂಬ ಮಾಟಗಾರಿಕೆ :

ಶೀರ್ಷಿಕೆ ನೋಡಿ ಊಹಿಸಿದಂತೆ ಇದು ಕೆ.ಎಸ್.ನ ಕುರಿತ ನುಡಿದೀಪ. ಕೆ.ಎಸ್.ನ ಹಾಗೂ ವೆಂಕಮ್ಮನವರ ಆತಿಥ್ಯದ ಜೊತೆಗೆ ಇಲ್ಲಿ ಪು.ತಿನ ಅವರ ಜೊತೆಗಿನ ಮಾತುಕತೆ, ದೊಡ್ಡವರ ನಡುವೆ ನಡೆಯುವ ಶುಭ್ರವಾದ ತಮಾಶೆಯ ಮಾತು ಕಹಿಯ ಸೋಂಕಿಲ್ಲದ ಹಾಸ್ಯದ ಘಟನೆ ಮನಸೆಳೆಯುತ್ತದೆ. ಮೈಸೂರು ಮಲ್ಲಿಗೆಯ ಕುರಿತು ಹಿರಿಯ ಕವಿಯೊಬ್ಬರ ಮಾತಿಗೆ ಕೆ.ಎಸ್.ನ ಕೊಟ್ಟ ಪ್ರತ್ಯುತ್ತರ ಇಲ್ಲಿದೆ.


ಮಗುನಗೆಯ ಪ್ರೌಢ ಕವಿ :

"ದೇವರು ಮನುಷ್ಯರಾಗಬೇಕು. ಮನುಷ್ಯರು ದೇವರಾಗಬೇಕು. ಜನ ನಿರಂಜನರಾಗಬೇಕು!" ಎಂಬ ಉಕ್ತಿಯನ್ನು ಹೇಳುತ್ತಿದ್ದ, ಅಂತೆಯೇ ಕವಿತೆ ಕಟ್ಟುತ್ತಿದ್ದ ಎಕ್ಕುಂಡಿಯವರ ಸರಳತನ, ಅವರ ಕಾವ್ಯಸೃಷ್ಟಿ ಮತ್ತು ಜನರೊಟ್ಟಿಗಿನ ಬೆರೆಯುವಿಕೆಯ ನೋಟ ಇಲ್ಲಿದೆ.


ಕವಿಯು ತೀರಿದ ಮೇಲೆ ಕವಿತೆಯೇ ನಾಲಗೆ! :

1968ರಲ್ಲಿ ಎಚ್ಚೆಸ್ವಿ ಅವರ ಪ್ರಥಮ ಕವನ ಸಂಕಲನ ಬಿಡುಗಡೆಯಾಗಿತ್ತು. ನಂತರ ಅಡಿಗರಿಂದ ಬಂದ ಪತ್ರದ ನೆನಪು ಜೊತೆಗೆ ಅಡಿಗರ ಕಾವ್ಯರಚನೆಗಳನ್ನು ಕಾಣಬಹುದು. 

ಹಿರಿಮೆ ಕಾವ್ಯದಲ್ಲಿದ್ದರೂ.. ಸರಳ ಸಾಮಾನ್ಯತೆ ನಿತ್ಯಬದುಕಿನಲ್ಲಿದ್ದ ಬಗ್ಗೆ ಹಾಗೂ ಅಡಿಗರ ಅಂತ್ಯದ ನೆನಪು ಎಲ್ಲವನ್ನು ಹಿಡಿದಿಟ್ಟ ನುಡಿದೀಪ ಇದು.


ಎರಡು ಇರುಳಿನ ನಡುವೆ :

ಎಚ್ಚೆಸ್ವಿ ಅವರ ಬಳಿ ತರುಣ ಲೇಖಕರೊಬ್ಬರು ಕೇಳುತ್ತಾರೆ. "ಹೆಸರು ಮಾಡಬೇಕೆಂದರೆ ಎಷ್ಟು ಬರೆಯಬೇಕು..?" ಎಂದು. ಆಗ ಎಚ್ಚೆಸ್ವಿ ಹೇಳುವ ಉತ್ತರ "ಎಲ್.ಎಸ್.ಎಸ್ ಬರೆದಷ್ಟನ್ನು ನೀವು ಓದಿದರೆ ಸಾಕು. ಆನಂತರ ನೀವು ಬರೆಯುವ ಒಂದೇ ಒಂದು ಪುಸ್ತಕ ನಿಮ್ಮ ಹೆಸರನ್ನು ಬೆಳಕಿಗೆ ತರಬಲ್ಲದು" ಎಂದು. ಸದಾ ಸಮಾಧಾನಿ ಹಾಗೂ ಸರಳ ವ್ಯಕ್ತಿತ್ವದ ಎಲ್ಎಸ್ಎಸ್ ಅವರ ನೋಟವನ್ನು ಇಲ್ಲಿ ಕಾಣಬಹುದು. 

ತಮ್ಮ ಬದುಕನ್ನು ರೂಪಿಸಿದ ಸಾಹಿತ್ಯ ಒಂದು ತಕ್ಕಡಿಯಲ್ಲಿ, ಬದುಕು ಇನ್ನೊಂದು ತಕ್ಕಡಿಯಲ್ಲಿ ಇವೆರಡರಲ್ಲಿ ಯಾವುದರ ತೂಕ ಹೆಚ್ಚು..? ಎಂದು ಕೇಳಿದಾಗ ಎಲ್ಎಸ್ಎಸ್ ಏನು ಹೇಳಿದರು ಓದಿನೋಡಿ.


ಕಾವ್ಯದ ಮರ್ಯಾದಾ ಪುರುಷೋತ್ತಮ:

ರಾಮಚಂದ್ರಶರ್ಮರಿಗೆ ಕಾವ್ಯವೆಂಬುದು ಹೇಗಿರಬೇಕಿತ್ತು ಎಂಬ ಬಗ್ಗೆ ತಮ್ಮದೇ ಆದ ನಿಷ್ಠುರ ನಿಲುವುಗಳು, ಸಿದ್ದಸೂತ್ರಗಳಿದ್ದವು. ತಾವೇ ಹಾಕಿಕೊಂಡ ಲಕ್ಷ್ಮಣ ರೇಖೆಯನ್ನು ಈ ಮರ್ಯಾದ ರಾಮಚಂದ್ರ ಮೀರದ ಬಗೆ ಇಲ್ಲಿದೆ. ಅಂತಹ ಸಂದರ್ಭಗಳು ಎದುರಾದಾಗ ಅವರ ನಡೆ ಹೇಗಿರುತ್ತಿತ್ತು ನೀವೇ ಓದಿ ನೋಡಿ.


ವೃತಗೆಡದ ಬಿಲ್ಲೋಜ :

ಜಿ.ಎಸ್.ಎಸ್ ಅವರ ಶಿಸ್ತು ಹಾಗೂ ಅವರ ಕಾವ್ಯದ ಕಟ್ಟುವಿಕೆಯ ಜೊತೆಗೆ ಸಾಹಿತ್ಯಪ್ರಿಯರಾದ ಅವರು ಬಿಲ್ಲೋಜನಾದದ್ದು ಹೇಗೆ ಎಂಬುದನ್ನು ಚೇತೋಹಾರಿ ಕ್ಷಣಗಳ ಮೂಲಕ ತೆರೆದಿಟ್ಟಿದ್ದಾರೆ.


ಹಸಿರುಗದ್ದೆಗೆ ಹಾಯುವ ಕೈಗಾಲುವೆಯ ಕಾವ್ಯ :

ನಲ್ನುಡಿ, ಮೆಲು ನಡೆ, ತಿಳಿ ನಗೆ ಈ ಇವೆಲ್ಲದರ ತ್ರಿವೇಣಿಸಂಗಮವಾಗಿರುವ ಚನ್ನವೀರ ಕಣವಿ ಕುರಿತ ನೋಟ ಇಲ್ಲಿದೆ. ಪ್ರಶಾಂತಿಯೇ ಜೀವಗುಣವಾಗಿರುವ ಕಣವಿಯವರ ಕಾವ್ಯ ಹಾಗೂ ವ್ಯಕ್ತಿತ್ವವನ್ನು ಕಾಣಬಹುದು.


ಕುರ್ತಕೋಟಿ ಎನ್ನುವ ವಿದಗ್ಧ ರಸಿಕ :

ಎಚ್ಚೆಸ್ವಿಯವರಿಗೆ ಕುಮಾರವ್ಯಾಸನ ಗುಂಗು ಹಿಡಿಸಿದವರಲ್ಲಿ ಪ್ರೊಫೆಸರ್ ಕೀರ್ತಿನಾಥ ಕುರ್ತಕೋಟಿ ಪ್ರಮುಖರು. ಮುಂದೆ ಅವರ ನಿಕಟ ಬಾಂಧವ್ಯ ಹಾಗೂ ಎಚ್ಚೆಸ್ವಿಯವರ 'ಒಣಮರದ ಗಿಳಿಗಳು' ಎಂಬ ಕಾವ್ಯ ಸಂಗ್ರಹಕ್ಕೆ ಮುನ್ನುಡಿ ಬರೆಸಿಕೊಂಡ ಪ್ರಸಂಗದ ಜೊತೆಗೆ ಅವರ ಒಡನಾಟದ ಚಿತ್ರಣವಿದೆ.


ಸಿದ್ಧಲಿಂಗಯ್ಯ ಅವರ ಖಡಕ್ ವ್ಯಕ್ತಿತ್ವ :

ಸ್ವತಂತ್ರವಾಗಿ ನಮ್ಮ ಮನಸ್ಸು ಪ್ರವರ್ತಿಸಲು ಅವಕಾಶ ಕಲ್ಪಿಸುವುದು ಸಿದ್ಧಲಿಂಗಯ್ಯನವರ ಸ್ವಭಾವ ಎನ್ನುತ್ತಾ "ನಾನು ಹೇಳಬೇಕಾದ್ದು ಹೇಳುವೆ. ನೀವು ಹೇಳಬೇಕಾದ್ದು ನೀವು ಹೇಳಿ. ಆಯ್ ಆಮ್ ಓಪನ್ ಎನ್ನುವ ಸಿದ್ಧಲಿಂಗಯ್ಯರ ನಿಲುವಿನ ದರ್ಶನ ಮಾಡಬಹುದು.


ಕಾವ್ಯ ಪ್ರೀತಿಯ ಲೋಕವಿಮರ್ಶಕ :

ಅನಂತಮೂರ್ತಿಯವರ ಮಾತುಗಾರಿಕೆ.. ಅದರಲ್ಲಿಯೂ ಸಭೆಯಲ್ಲಿ ಆಡುತ್ತಲೇ ತನ್ನ ಮಾತನ್ನು ಕಟ್ಟಿಕೊಳ್ಳುವ ಹಾಗೂ ತುಂಬಿದ ಸಭೆಯಲ್ಲೂ ಏಕಾಂತ ಸಾಧಿಸಿ ಅಂತರಂಗ ತೆರೆದಿರುವ ಧ್ಯಾನಾಭಿವೃದ್ಧಿಯ ರೂಪವನ್ನು ತೋರುತ್ತಾರೆ. ಸಾಹಿತ್ಯ ಚರ್ಚೆ ಮತ್ತು ಒಟ್ಟೊಟ್ಟಿಗೆ ಸಾಮಾಜಿಕ, ರಾಜಕೀಯ ಚರ್ಚೆ ಅವರ ಅಂತರಂಗ ಬಹಿರಂಗಗಳಲ್ಲಿ ಸದಾ ನಡೆಯುತ್ತಾ ಇತ್ತು ಎನ್ನುತ್ತಾ ಅವರ ಒಡನಾಟವನ್ನು ತೆರೆದಿಟ್ಟಿದ್ದಾರೆ.


ಹಳ್ಳಿಗನೊಬ್ಬ ವಿಶ್ವರೂಪಿಯಾದ 'ಸಮಾಚಾರ' :

ನಾವು ವಿಶ್ವಮಾನವರು ಕನ್ನಡ ವಿಶ್ವ ಭಾಷೆ ಎಂದು ಹೇಳುವ ಸುಬ್ಬಣ್ಣ ಜಗತ್ತೇ ಹಳ್ಳಿಯಾಗುವ ಬಗ್ಗೆ ಇದ್ದ ನಿಲುವುಗಳನ್ನು ತೆರೆದಿಟ್ಟಿದ್ದಾರೆ.


ನಿಸಾರೆಂಬ ಸೂಟಾಂಬರಧಾರಿ :

ಎಚ್ಚೆಸ್ವಿಯವರ ಕಾಲೇಜಿಗೆ ಭೂವಿಜ್ಞಾನದ ಅಧ್ಯಾಪಕರಾಗಿ ಬಂದವರು ಅದ್ಭುತವಾಗಿ ಒಳ್ಳೆಯ ಕವಿ ನಿಸಾರರು. ಎಚ್ಚೆಸ್ವಿ ಸಂಕೋಚ, ಹಿಂಜರಿಕೆಯಿಂದಲೇ ಇದ್ದವರು. ನಂತರದ ದಿನಗಳಲ್ಲಿ ಸೈನ್ಸ್ ಹುಡುಗನಿಗೆ ಭೂವಿಜ್ಞಾನದ ಮೇಷ್ಟ್ರು ಕಾವ್ಯದರ್ಶಿಯಾದ ಕುರಿತ ಚಿತ್ರಣವಿದೆ.


ಸಹಜಕಾವ್ಯದ ಅದಮ್ಯ ಚಿಲುಮೆ :

ಕನ್ನಡದ ಬಹುದೊಡ್ಡ ಫರ್ಫಾಮರ್ ಕವಿ ಎಂದರೆ ಅದು ಕಂಬಾರರೇ ಎನ್ನುತ್ತಾ ಅವರ ಗದ್ಯಾತ್ಮಕ ಕವಿತೆಗಳು ಬೆರಗು ಹುಟ್ಟಿಸಿದ ಪರಿ ಹಾಗೂ ಅವರೇ ತಮ್ಮ ಕವಿತೆಗಳನ್ನು ಓದುವ ಪರಿಣಾಮಕಾರಿ ಬಗೆಯ ಕುರಿತು, ಕಾವ್ಯದ ಕುರಿತ ನಿರ್ವಾಜ್ಯ ಪ್ರೇಮದ ಜೀವಂತಿಕೆಯ ಬಗ್ಗೆ ಹೇಳುತ್ತಾರೆ.


ಸಂಕಲ್ಪಬಲದ ಅಸಾಮಾನ್ಯತೆ :

ಇನ್ನೊಬ್ಬರಿಗೆ ಸಹಾಯ ಮಾಡುವುದರಲ್ಲಿ ಎತ್ತಿದ ಕೈ ಲಕ್ಷ್ಮೀನಾರಾಯಣ ಭಟ್ಟರು. ಎಚ್ಚೆಸ್ವಿಯವರಿಗೆ ಮೈಸೂರಿನಲ್ಲಿ ಎಂ. ಎ ಗೆ ಸೀಟು ಸಿಗದಿದ್ದಾಗ ಬೆಂಗಳೂರಿನಲ್ಲಿ ಎಂ.ಎ ಮಾಡಲು ಅವಕಾಶ ದೊರಕಿಸಿ ಕೊಡುವಲ್ಲಿ ಅವರ ಪಾತ್ರ ಹಿರಿದಾದದ್ದು. ಶಿವಮೊಗ್ಗ ಸುಬ್ಬಣ್ಣನವರ ಬದುಕಲ್ಲಿಯೂ ಅವರದ್ದು ನಿರ್ಣಾಯಕವಾದ ಪಾತ್ರವೇ.. ಇದರೊಟ್ಟಿಗೆ ಅವರ ಕಾವ್ಯಮಯ ಸಾಲುಗಳ ವಿಶ್ಲೇಷನೆಯನ್ನೂ ಓದಬಹುದು.


ವಜ್ರ ಕಠಿಣ; ಹೂ ಮೃದುಲ :

ಅನನ್ಯ ಕಾವ್ಯಪ್ರೇಮಿಯಾದ ಹಿರಿಯ ಕವಿ ಸುಮತೀಂದ್ರ ನಾಡಿಗರದ್ದು ಕಾವ್ಯದ ಬಗ್ಗೆ ತೈಲಧಾರೆಯಂತಹ ಶ್ರದ್ಧೆ. ಕಾವ್ಯ, ಕವಿಗಳ ಬಗ್ಗೆ, ಹೊಸಬರ ಬಗ್ಗೆ, ಹಳಬರ ಬಗ್ಗೆ ಮಾತನಾಡುವಾಗ ಕೆಲವರ ಗುಣವಿಶೇಷಗಳನ್ನು ಬಣ್ಣಿಸುವಷ್ಟೇ ಉತ್ಸಾಹದಿಂದ ಕೆಲವರ ಸಣ್ಣತನಗಳನ್ನು ಬಯಲಿಗೆಳೆಯುತ್ತಿದ್ದರು. ನಾಡಿಗರು ಮೆಚ್ಚಿದ ಕಾವ್ಯವನ್ನು ಹೊಸಬರು, ಹಳಬರು ಎಂದು ನಿರ್ಭಿಡೆಯಿಂದ ಅವರ ಅಂಗಡಿಯಲ್ಲಿ ಪ್ರಚಾರ ಮಾಡುತ್ತಿದ್ದರು. ಆ ಸಾಹಿತ್ಯದ ಕೆಲವು ಸಾಲುಗಳನ್ನು ಓದಿ ಕುತೂಹಲ ಹುಟ್ಟಿಸಿ, ಓದಲು ಪ್ರೇರೇಪಿಸುತ್ತಿದ್ದ ಬಗೆ, ಅವರು ತೋರುತ್ತಿದ್ದ ಸಾಹಿತ್ಯಪ್ರೇಮಕ್ಕೆ ಒಂದು ಪುಟ್ಟ ಉದಾಹರಣೆಯಷ್ಟೇ..


ಭಾವೋದ್ರೇಕವಿಲ್ಲದ ವಿಮರ್ಶಾ ಧೀಮಂತಿಕೆ ! :

ಗಿರಡ್ಡಿ ಎಂದ ಕೂಡಲೇ ಸುಲಭಕ್ಕೆ ಯಾವುದನ್ನೂ ಒಪ್ಪದ ಅವರ ಕುಸುಬಿಷ್ಟಿ ಮೊದಲು ನೆನಪಾಗುತ್ತದೆ ಎನ್ನುತ್ತಲೆ ಅವರ ಪರ್ಫೆಕ್ಷನ್ ಹಾಗೂ "ಅಡ್ಡಿಯಿಲ್ಲ"ದ ಮಾತುಗಳನ್ನು ಮೆಲುಕು ಹಾಕುತ್ತಾರೆ. ಭೀಷ್ಮರು ಹೆಣ್ಣಿನ ಕೈಹಿಡಿಯಲ್ಲ ಎಂದು ವೀರಪ್ರತಿಜ್ಞೆ ಮಾಡಿದಂತೆ ತಾನು ಮುನ್ನುಡಿ ಬರೆಯೆನು ಎಂಬುದು ಗಿರಡ್ಡಿಯವರ ವೀರಪ್ರತಿಜ್ಞೆ. ಆ ಪ್ರತಿಜ್ಞೆ ಏನಾಯ್ತು..? ಓದಿ ನೋಡಿ.


ಬೇಕು ಪ್ರತಿಯೊಂದು ಅಬ್ದಕ್ಕೂ ಅದರದೇ ಶಬ್ದ :

"ತಿರುಮಲೇಶರದ್ದು ಮುಖ್ಯವಾಗಿ ಪ್ರಶ್ನಿಸುವ ನೆಲೆ. ಒಪ್ಪುವ ನೆಲೆಯಲ್ಲ" ಎನ್ನುತ್ತಲೇ.. ಪ್ರಾಚೀನದ ಕುರಿತ ಅರಿವು ಹಾಗೂ ಅದರೊಂದಿನ ಮುಖಾಮುಖಿ ಅವರ ಕವಿತೆಗಳಲ್ಲಿ ಹೇಗಿರುತ್ತಿತ್ತು ಎಂಬುದನ್ನು ಹೇಳುತ್ತಾರೆ.


ಸದ್ದುಮಾಡದ ಸಾಧಕ :

ಎಚ್ಚೆಸ್ವಿ ಹಾಗೂ ಪ್ರಜಾವಾಣಿಯ ಒಡನಾಟದಲ್ಲಿ.. ಜಿ.ಎನ್ ರಂಗನಾಥರಾವ್ ಅವರ ಒಡನಾಟ ಬೆಳೆದ ದಿನಗಳು ಹಾಗೂ ನಿರಂತರವಾಗಿ ಬೆಸೆದ ಇಬ್ಬರ ಸಾಹಿತ್ಯ ಪ್ರೇಮವನ್ನು ಇಲ್ಲಿ ಕಾಣಬಹುದು.


ಚೊಕ್ಕಾಡಿಯೆಂಬ ಸವರ್ಣದೀರ್ಘ ಸಂಧಿ :

ಅಮೂರ್ತ ಧ್ವನಿಯಾಗಿದ್ದ ಚೊಕ್ಕಾಡಿಯವರು ನಿಧಾನವಾಗಿ ಎಚ್ಚೆಸ್ವಿಯವರಿಗೆ ಅಗ್ರಜನಾದ ದಿನಗಳು, ಚೊಕ್ಕಾಡಿಯವರ ಮೌನವನ್ನು ತಂಬೂರಿಯು ಮಿಡಿಯುವಂತೆ ಮಿಡಿಯುವ ಕವಿತೆಗಳು.. ಜೊತೆಗೆ ಸಿ. ಅಶ್ವಥ್ ಅವರ ಜೊತೆಗೆ ಸಂಯೋಜನೆಯ ಸಮಯದಲ್ಲಿ ಇರುತ್ತಿದ್ದ ಸಂದರ್ಭಗಳು, ಇದರೊಟ್ಟಿಗೆ ಚೊಕ್ಕಾಡಿಯವರ ಸ್ನೇಹಮಯ ವ್ಯಕ್ತಿತ್ವವನ್ನು ಹೇಳುತ್ತಲೇ ಅವರನ್ನು ಕನ್ನಡದ ಕಾವ್ಯ ಲೋಕದ ಸವರ್ಣದೀರ್ಘ ಸಂಧಿ ಎನ್ನುತ್ತಾರೆ. ಇದರ ಮರ್ಮವೇನು..? ನೀವೇ ಓದಿ ನೋಡಿ. 


ಇಲ್ಲಿನ ಒಡನಾಟಗಳು ಎಚ್ಚೆಸ್ವಿ ಅವರ ಬದುಕಲ್ಲಿ ವಿದ್ಯಾರ್ಥಿ ಘಟ್ಟದಿಂದಲೂ ಅವರ ಇಳಿ ವಯಸ್ಸಿನಲ್ಲಿರುವಾಗಿನವರೆಗೂ ಚಿತ್ರಿತವಾಗಿದೆ. ತಮ್ಮ ಕಷ್ಟದ ದಿನಗಳು, ನೋವಿನ, ಸಂಕಟದ ಸಂದರ್ಭದಲ್ಲಿ ಆಪ್ತರು ಸಹಕರಿಸಿದ ರೀತಿ ಹಾಗೂ ಮನೆಯವರ ಜೊತೆಗಿನ ಒಡನಾಟ, ಕವಿಗೋಷ್ಠಿಗಳು, ಇಷ್ಟವಾದ ಕಾವ್ಯ ಸಾಲುಗಳು ಹೀಗೆ ಎಲ್ಲವನ್ನೂ ಒಳಗೊಂಡಿರುವ ನುಡಿದೀಪಗಳು ಇಲ್ಲಿವೆ. ಇಲ್ಲಿನ ನುಡಿದೀಪಗಳು ಕಾವ್ಯಲೋಕದ ಹಾದಿಯನ್ನು ತೋರುತ್ತವೆ. ಒಬ್ಬ ಕವಿಯ ನಿಲುವುಗಳು ಹಾಗೂ ವೈರುಧ್ಯದ ನಡುವೆಯೂ.. ಸ್ನೇಹ ಅದೆಲ್ಲವನ್ನು ಮೀರಿದ್ದನ್ನು ಕಾಣಬಹುದಾಗಿದೆ. ಇಲ್ಲಿನ ಸ್ನೇಹ ವಯೋಸಹಜದ್ದಲ್ಲ.. ಬದಲಾಗಿ ಸಾಹಿತ್ಯ ಬೆಸೆದದ್ದು. ಈ ನುಡಿದೀಪಗಳು ಓದಿದವರ ಎದೆಯಲ್ಲಿ ಸದಾ ಬೆಳಗುವಂತಹವು. ಮತ್ತಷ್ಟು ಬೆರಗು ಹುಟ್ಟಿಸುವಂತಹವು. ಹಾಗೂ ಚೈತನ್ಯದಾಯಕ ಸಹ.


~ವಿಭಾ ವಿಶ್ವನಾಥ್

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ