ಭಾನುವಾರ, ಏಪ್ರಿಲ್ 26, 2026

ಸಿಂಧೂರ (ಪುಸ್ತಕ ಯಾನ - 376)


ಪುಸ್ತಕದ ಶೀರ್ಷಿಕೆ : ಸಿಂಧೂರ

ಲೇಖಕರು : ಸಾಯಿಸುತೆ

ಪ್ರಕಾಶಕರು : ಸುಧಾ ಎಂಟರ್ಪ್ರೈಸರ್ಸ್

ಪ್ರಥಮ ಮುದ್ರಣ : 2025

ಪುಟಗಳು : 110

ಬೆಲೆ : 130 ರೂ. 


ಸಾಯಿಸುತೆಯವರ ಕಾದಂಬರಿಗಳಷ್ಟೇ ಕಥೆಗಳು ಸಹ ಸೆಳೆಯುತ್ತವೆ. ಈ ಕಥಾಸಂಕಲನದಲ್ಲಿ 8 ಕಥೆಗಳಿವೆ. ಇಂದಿನ ಕಾಲದಲ್ಲಿ ಬದಲಾಗುತ್ತಿರುವ ಸಂಬಂಧಗಳ ರೂಪುರೇಷೆ, ಬದಲಾದ ಆಲೋಚನೆಗಳುಳ್ಳ ವಾಸ್ತವದ ಕಟು ಸತ್ಯದ ಕಥೆಗಳಿವೆ.


ಸಿಂಧೂರ : ಅಶೋಕ್ ತನ್ನ ಊರು ಮೈಥಿಲಿಪುರಕ್ಕೆ ಬಂದುಳಿದದ್ದು ವಿವಾಹವಾದ ವರ್ಷಗಳ ನಂತರ. ಅದೂ ಎರಡು ದಿನ ಊರಲ್ಲುಳಿಯಲು ಸಿಕ್ಕ ಸ್ವಾತಂತ್ರ್ಯವಷ್ಟೇ.. ಅಶೋಕ್ ಸುಷ್ಮಾಳನ್ನು ಮದುವೆಯಾದ ಸಂದರ್ಭದಲ್ಲಿ ಅವರೇ ಹಣ ನೀಡಿ ಇವನನ್ನು ಕೊಂಡೊಯ್ದಂತಿತ್ತು. ವಿಭಿನ್ನ ವಾತಾವರಣ, ಮನುಷ್ಯರ ಜೊತೆಗೆ ಅಶೋಕ್ ಹೊಂದಿಕೊಳ್ಳುವ ಅನಿವಾರ್ಯವಿತ್ತೇ..? ಅದಕ್ಕೆ ಕಾರಣ ಯಾರು ಎಂದು ಯೋಚಿಸಿದರೆ ಅದು ಜಟಿಲ ಪ್ರಶ್ನೆ. ಉತ್ತರ ಸಿಗಬಹುದಾದರೂ.. ಈಗಿನ ಬದುಕನ್ನು ಅಪ್ಪಿಯಾಗಿತ್ತು. ಆದರೆ, ಮುರಿದ ಪ್ರೇಮದ ಭಗ್ನ ಕನಸೊಂದು ಈಗಲೂ ಅವನೆದೆಯಲ್ಲಿ ಹಾಗೆಯೇ ಇತ್ತು. ಹಾಗೆಯೇ ಚಾರುಲತಾಳನ್ನು ಭೇಟಿಯಾಗಲು ಹೋದವನಿಗೆ ಆತನ ಭ್ರಮಾಲೋಕಕ್ಕಿಂತ ಬೇರೆಯದ್ದೇ ಬದುಕೊಂದು ಕಂಡಿತ್ತು. ಚಾರುಲತಾಳನ್ನು ಕಂಡದಕ್ಕೂ.. ಕಥೆಯ ಶೀರ್ಷಿಕೆಗೂ ಇರುವ ಸಂಬಂಧವೇನು..? ಇಲ್ಲಿ ವಾಸ್ತವವನ್ನು ಒಪ್ಪಿ ಅಪ್ಪಿದ ಚಾರುಲತಾ ಇಷ್ಟವಾಗುತ್ತಾಳೆ.


ಅನಾವರಣ : ಸಿಂಧು, ಮುರಳಿಯ ಜೊತೆ ಮಗಳನ್ನು ಕರೆದುಕೊಂಡು ರಜೆಯಲ್ಲಿ ಅವಳ ಅಕ್ಕ, ಅಣ್ಣನ ಮನೆಗೆ ಹೋಗುವ ಪ್ರಸ್ತಾಪವಿಡುತ್ತಾಳೆ. ಸಿಂಧು ತನ್ನ ಮದುವೆಯಾದ ಸಂದರ್ಭದಿಂದಲೂ ಎಲ್ಲಿಯೂ ಹೋಗಿರಲಿಲ್ಲ. ಸಾಯುವವರೆಗೂ ಆಕೆಯ ತಂದೆಯೂ ಬಂದು ಈ ಮಗಳ ಜೊತೆಯಲ್ಲಿಯೇ ನೆಲೆಸಿದ್ದರು. ಅಕ್ಕ, ಅಣ್ಣಂದಿರ ಕುಟುಂಬಗಳೆಂದರೆ ವಿಪರೀತ ವಾತ್ಸಲ್ಯ. ಅವರು ಇಲ್ಲಿಗೆ ಬರುತ್ತಿದ್ದರೇ ಹೊರತು ಇವರು ಹೋಗಿರಲಿಲ್ಲ. ಹೋಗಿರಲಿಲ್ಲ ಎನ್ನುವುದಕ್ಕಿಂತ ತಂಗಿಯನ್ನು ಕರೆದೊಯ್ಯುವ ಮಾತುಗಳು ಅವರಿಂದ ಬಂದಿರಲಿಲ್ಲ ಎನ್ನುವುದೇ ಸರಿಯಾಗುತ್ತಿತ್ತೇನೋ..! ಮಗಳು ನಳಿನಾಳೊಂದಿಗೆ ಹೊರಟ ದಂಪತಿಗಳಿಗೆ ಅವರ ಮನೆಯಲ್ಲಿ ಸಿಕ್ಕ ಆತಿಥ್ಯವೇನು..? ಪತ್ನಿಯ ಮನಸ್ಸನ್ನು ನೋಯಿಸದ, ಪತ್ನಿಯನ್ನು ಅರಿತು ನಡೆಯುವ ಮುರಳಿ ಇಷ್ಟವಾಗುತ್ತಾನೆ.


ವನಪ್ರಭ : ವನಪ್ರಭ ಎನ್ನುವ ಚಿತ್ರಳ ಸಾಮ್ರಾಜ್ಯಕ್ಕೆ ಸಹನಾ ತನ್ನ ಮಗ ಗಿರಿಧರನನ್ನು, ಮಗಳು ಸುಧಾಳನ್ನು ಕರೆದುಕೊಂಡು ಬರುತ್ತಾಳೆ. ಚುರುಕು ಗಿರಿಧರ ಚಿತ್ರಳಿಗೆ ಮೂಡಿಸಿದ ಭಾವಸಂಚಾರವೇನು..? ಮಧ್ಯಮ ವರ್ಗದ ಕುಟುಂಬದಲ್ಲಿ ಇರುವ ಸಹನಾಳಿಗೂ.. ಈಗ ಅಗಾಧ ಶ್ರೀಮಂತಿಕೆ ಹೊಂದಿರುವ ಚಿತ್ರಳಿಗೂ ಇದ್ದ ಸಂಬಂಧವೇನು..? ಮಕ್ಕಳಿಗೆ ವನಪ್ರಭ ಯಾವ ಭಾವ ಹುಟ್ಟಿಸಿತು..? ಚಿತ್ರಳ ಇಡೀ ಬದುಕು ಹೇಗಿತ್ತು..? ಒಂದು ಪ್ರಭಾವಳಿಯ ಒಳಗೆ ಬದುಕುವ ಜನರ ಬದುಕು ಹೀಗೆಯೇ ಇರಬಹುದಾ ಎನ್ನುವ ಆಲೋಚನೆ ಹುಟ್ಟಿಸಿದ ಕಥೆ.


ಏನಾ ನೋಡಿ... ಪ್ರೀತಿಸಿದೆ ! : ಲತಾಳನ್ನು ಪ್ರೀತಿಸಿ ಎರಡು ಕಡೆಯವರ ವಿರೋಧ ಲೆಕ್ಕಿಸದೆ ವಿವಾಹವಾದವನು, ನಿನ್ನನ್ನು ಬಿಟ್ಟು ನನಗೆ ಬೇರೆ ಜಗತ್ತೇ ಇಲ್ಲವೆಂದು ಹೆತ್ತವರನ್ನು ಬಿಟ್ಟು ಬದುಕು ಕಟ್ಟಿಕೊಳ್ಳಲು ಹೊರಟಿದ್ದವನು. ಈಗ ಲತಾಳನ್ನು ಬೇರೆಯದ್ದೇ ರೀತಿಯಲ್ಲಿ ನೋಡುತ್ತಿದ್ದ. ಪ್ರೀತಿಯ ಬದಲಿಗೆ ಸಹಾನುಭೂತಿ. ಬದಲಾವಣೆ ಅಷ್ಟು ಮಾತ್ರವಲ್ಲ..! ಆಕೆಯ ಪ್ರತಿಯೊಂದು ಚರ್ಯೆಯೂ ಬದಲಾದಂತೆ ಕಾಣಿಸುತ್ತಿತ್ತು. ಇದು ಕೇವಲ ಆತನಿಗೆ ಮಾತ್ರವೇ ಅಲ್ಲ. ಲತಾಳಿಗೂ ಅವನ ವರ್ತನೆಗಳು ಬೇರೆಯದ್ದೇ ರೀತಿ ಕಾಣುತ್ತಿತ್ತು. ಇಬ್ಬರ ಭಾವನೆಗಳಲ್ಲಿಯೂ ಪ್ರೀತಿ ಬದಲಾಗಿತ್ತು. ತಮ್ಮದೆನ್ನುವ ಸ್ವಂತ ಸಂಬಂಧಗಳು ದೂರವಾಗಿದ್ದವು. ಪ್ರೀತಿಯಲ್ಲಿ ಮುಳುಗಿದ್ದಾಗ ಇದ್ದ ಉತ್ಸಾಹವು ಬದಲಾಗಿದ್ದ, ಪ್ರೀತಿಸಿ ವಿವಾಹವಾದ ಎಷ್ಟೋ ವರ್ಷಗಳ ನಂತರ ಹಿಂದಿರುಗಿ ನೋಡಿದವರು ಮೂಡಿಸಿಕೊಳ್ಳುವ ಭಾವ ಇಂದಿನ ವಾಸ್ತವದ ಚಿತ್ರಣದಂತೆ ಕಾಣಿಸಿತು. ಅಷ್ಟಕ್ಕೂ ಅವನ ಪ್ರಶ್ನೆಗೆ ಉತ್ತರ ಸಿಕ್ಕಿತೇ ಓದಿ ನೋಡಿ.


ಮಂಗಳಸೂತ್ರ : ಶ್ರೀಹರಿಯಿಂದ ವಿಚ್ಛೇದನ ಪಡೆದು ದೂರವಾದ 10 ವರ್ಷಗಳ ನಂತರದ ಅನಿರೀಕ್ಷಿತ ಭೇಟಿ ಇಬ್ಬರಿಗೂ. ಅದರಲ್ಲಿಯೂ ಅಪೂರ್ವ ತಾನೇ ಮುಂದಾಗಿ ಶ್ರೀಹರಿಯ ಮನೆಗೆ ಭೇಟಿ ನೀಡಿದ್ದಳು. ಅದಕ್ಕೆ ಬೇರೆ ಯಾವುದಾದರೂ ಕಾರಣವಿತ್ತೇ..? ಅವಳೇನೋ ಮತ್ತೊಂದು ಸಿರಿವಂತ ಕುಟುಂಬಕ್ಕೆ ಸೊಸೆಯಾಗಿ ಹೋಗಿದ್ದಳು. ಆದರೆ, ಶ್ರೀಹರಿಯ ಬದುಕಲ್ಲಿ ಆಗಿದ್ದ ಬದಲಾವಣೆಗಳೇನು..? ತಾನು ಆತನ ಮುಖದ ಮೇಲೆ ಎಸೆದು ಹೋಗಿದ್ದ, ಆತನೇ ಕಟ್ಟಿದ್ದ ಮಂಗಳಸೂತ್ರವನ್ನು ಆಕೆ ಕಂಡದ್ದಾದರೂ ಎಲ್ಲಿ..? ಅದು ಹುಟ್ಟಿಸಿದ ಭಾವಗಳೇನು..? ಬದಲಾದ ಭಾವಗಳಲ್ಲಿ ಕಳೆದುಕೊಂಡದ್ದೆಷ್ಟು ಪಡೆದುಕೊಂಡದ್ದೆಷ್ಟು..? ವಿವಾಹದ ಪವಿತ್ರ ಪರಿಕಲ್ಪನೆಯ ಜೊತೆಗೆ ಆಧುನಿಕ ಯೋಚನೆಗಳು ಮನುಷ್ಯರನ್ನು ಬದಲಾಯಿಸಿದ ಪರಿಯ ಕಟುವಾದ ಚಿತ್ರಣವಿಲ್ಲಿದೆ.


ಆತ್ಮಹತ್ಯೆ ಅಲ್ಲ ಕೊಲೆ : ಶೇಷಗಿರಿ ಹಾಗೂ ಅಹಲ್ಯಾರ ಒಬ್ಬನೇ ಮಗ ಸುನಾದನ ಪಿ.ಯು.ಸಿ ಫಲಿತಾಂಶದ ಸಮಯ. ಈ ಕುರಿತಾಗಿ ಸುನಾದನಿಗಿಂತಲೂ ಆತನ ತಂದೆಗೆ ಹೆಚ್ಚು ತಲೆಬಿಸಿ. ಆತನನ್ನು ಹೇಗಾದರೂ ಐ.ಎ.ಎಸ್ ಮಾಡಿಸಬೇಕೆಂಬ ಕನಸು ಕಾಣುತ್ತಿದ್ದರು. ಆದರೆ, ಸುನಾದನಿಗಿದ್ದ ಕನಸಾದರೂ ಏನು..? ಮಕ್ಕಳ ಕನಸನ್ನು ಅರ್ಥಮಾಡಿಕೊಳ್ಳದೆ ತಮ್ಮದೇ ಕನಸನ್ನು ಹೇರುವ ಪೋಷಕರ ಪ್ರತಿನಿಧಿಯಂತೆ ಕಾಣುವ ಶ್ರೀನಿಧಿ, ವಾಸ್ತವವನ್ನು ಅರ್ಥ ಮಾಡಿಕೊಂಡ ಹಾಗೂ ತನ್ನ ಬುದ್ಧಿಮತ್ತೆ ಜೊತೆಗೆ ಆಸಕ್ತಿಯಿಂದ ತನ್ನದೇ ಕ್ಷೇತ್ರವನ್ನು ಆಯ್ದುಕೊಳ್ಳಲು ಹೊರಟ ಮಕ್ಕಳ ಪ್ರತಿನಿಧಿಯಾಗಿ ಸುನಾದ ಕಾಣಿಸುತ್ತಾರೆ. ಇತ್ತ ಮಗನ ಕಡೆಗೂ ನಿಲ್ಲಲಾಗದೆ, ಗಂಡನ ಕಡೆಗೂ ನಿಲ್ಲಲಾಗದ ಅಸಹಾಯಕ ಪಾತ್ರವಾಗಿ ಅಹಲ್ಯ ಕಾಣಿಸಿಕೊಳ್ಳುತ್ತಾರೆ. ಅಷ್ಟಕ್ಕೂ ಫಲಿತಾಂಶ ಏನಾಯ್ತು..? ಈ ಫಲಿತಾಂಶದ ಪರಿಣಾಮವಾಗಿ ಈ ಕುಟುಂಬದಲ್ಲಿ ಒಂದು ಸಾವು ಸಂಭವಿಸುತ್ತದೆ. ಆ ಸಾವು ಯಾರದ್ದು..? ಅದು ಆತ್ಮಹತ್ಯೆಯೋ..? ಕೊಲೆಯೋ..? ನೀವೇ ಓದಿ ನೋಡಿ.


ಹಕ್ಕುದಾರ : ಚಂದ್ರಶೇಖರಯ್ಯನವರಿಗಿದ್ದ ಚಿಲ್ಲರೆ ಅಂಗಡಿಯಿಂದಲೇ ಸರಳ, ಸಾಧಾರಣವಾದ, ತೃಪ್ತಿಕರ ಸಂಸಾರ ಸಾಗುತ್ತಿತ್ತು. ಪತ್ನಿ ಸುನಂದ ಅವರಿಗೆ ತಕ್ಕವರು. ಇದ್ದೊಬ್ಬ ಮಗ ಮಧು ಸಾಫ್ಟ್ ವೇರ್ ಇಂಜಿನಿಯರ್ ಆಗಿ ವಿದೇಶಕ್ಕೆ ಹಾರಿದ್ದನು. ಈಗ ಅದೇ ಊರಿನಲ್ಲಿದ್ದ ಅವನ ಬಾಲ್ಯ ಸ್ನೇಹಿತ ಗಿರೀಶ್ ನಿಂದ ಅವನು  ಕೆಲಸ ಕಳೆದುಕೊಂಡು ಪತ್ನಿಯೊಂದಿಗೆ ಇಲ್ಲಿಯೇ ಬಂದು ಉಳಿಯುತ್ತಾನೆ ಎಂಬ ಸಮಾಚಾರ ಬಂದಿತ್ತು. ಮಗ-ಸೊಸೆ ಮನೆಗೆ ಬಂದರು. ಆದರೆ, ಅವರು ಬಂದದ್ದು ಹಕ್ಕುದಾರರಾಗಿ. 

"ಪ್ರತಿಯೊಬ್ಬ ವ್ಯಕ್ತಿಯು ಭೂಮಿಗೆ ಬರುವುದು ಮುಂದಿನ ಪೀಳಿಗೆಯ ವಾರಸುದಾರರಾಗಿ." ಎನ್ನುವ ಸಾಯಿಸುತೆಯವರು ಇಲ್ಲಿ ಹಕ್ಕುದಾರರನ್ನು ಹೇಗೆ ಚಿತ್ರಿಸಿದ್ದಾರೆ ಎಂಬುದನ್ನು ನೀವೇ ಓದಿ ನೋಡಿ.


ಪ್ರೇಮದ ಮಾಯೆಯಲ್ಲಿ ಮೂಡಿದ ಕುಸುಮ : ಸುಷ್ಮಾ ವಿದೇಶದಲ್ಲಿ ಹುಟ್ಟಿ ಬೆಳೆದಿದ್ದವಳು. ಆದರೆ, ಭಾರತ ಅಪರಿಚಿತವೇನಾಗಿರಲಿಲ್ಲ. ಪ್ರಾಥಮಿಕ ಓದು ಇಲ್ಲಿಯೇ ಆಗಿತ್ತು. ಈಗ ಅವಳು ಸುಭಾಷ್ ಮನೆಗೆ ಬಂದದ್ದು ತನ್ನ ತಾಯಿ ಆಶಾ ದೇವರಾಜ್ ಮಾತಿನಿಂದ. ಸುಭಾಷ್ ಕುರಿತು ಹೇಳಿದ್ದ ಆಶಾಳ ಮಾತುಗಳು ಈಗ ಸುಷ್ಮಾಳ ನೋಟಕ್ಕೆ ದಕ್ಕಿರಲಿಲ್ಲ. ಆದುದರಿಂದ ಅವಳಿಗೆ ಒಂದು ರೀತಿಯ ನಿರಾಸೆ ಆವರಿಸಿತು. ಸುಭಾಷ್ ಆಶಾ ನೆನಪುಗಳನ್ನು ಗತಕ್ಕೆ ನೂಕಿಯಾಗಿತ್ತು. ಆಶಾ ಹಾಗೂ ಸುಭಾಷ್ ಪ್ರೇಮದ ಮಾಯೆಯಲ್ಲಿ ಮೂಡಿದ ಕುಸುಮವೇ ಸುಷ್ಮಾ. ಆದರೆ, ಈಗ ಅವಳು ಸುಷ್ಮಾ ದೇವರಾಜ್. ಅಷ್ಟಕ್ಕೂ ಆಶಾ ಈ ವಿಷಯವನ್ನು ಬಹಳ ವರ್ಷಗಳ ನಂತರ ಸುಭಾಷ್ ಮುಂದಿಡಲು ಕಾರಣವೇನಿತ್ತು..? ಇದಕ್ಕೆ ಸುಭಾಷ್ ಪ್ರತಿಕ್ರಿಯೆ ಹೇಗಿತ್ತು..? ಈ ಪ್ರೇಮದ ಮಾಯೆ ಹೇಗಿತ್ತು..? ಹಾಗೂ ಈ ಮಾಯೆ ಕಳಚಿದ್ದಾದರೂ ಹೇಗೆ ಎಲ್ಲವನ್ನು ತಿಳಿಯಲು ಈ ಕಥೆ ಓದಿ. 


ಪಲ್ಲಟವಾದ ಬದುಕುಗಳು, ಒಡೆದು ಹೋದ ಸಂಬಂಧಗಳು, ಧುತ್ತನೆ ಎದುರಿಗೆ ನಿಲ್ಲುವ ಘೋರ ಸತ್ಯಗಳು, ಇವೆಲ್ಲವನ್ನು ಆರಗಿಸಿಕೊಳ್ಳುವ ಬಗೆ.. ಹೀಗೆ ವಾಸ್ತವದ ತಲ್ಲಣಗಳನ್ನೇ ಕಥೆಗಳಾಗಿ ಮುಂದಿಟ್ಟಿರುವ ಕಥಾಸಂಕಲನ. ಆಲೋಚನೆಗೆ ಹಚ್ಚುವ ಓದು. 


~ವಿಭಾ ವಿಶ್ವನಾಥ್

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ