ಭಾನುವಾರ, ಏಪ್ರಿಲ್ 26, 2026

ಮೇನಕಾ (ಪುಸ್ತಕ ಯಾನ - 399)


ಪುಸ್ತಕದ ಶೀರ್ಷಿಕೆ : ಮೇನಕಾ

ಲೇಖಕರು : ಇಂದ್ರಾಯಿಣಿ ಸಾವಕಾರ

ಅನುವಾದಕರು : ಮಾಲತಿ ಮುದಕವಿ 

ಪ್ರಕಾಶಕರು : ಅಜಬ್ ಪಬ್ಲಿಕೇಶನ್ಸ್ 

ಪ್ರಥಮ ಮುದ್ರಣ : 2020

ಪುಟಗಳು : 400

ಬೆಲೆ : 400 ರೂ.


ಇಂದ್ರಾಯಿಣಿ ಸಾವಕಾರ ಅವರ ಮರಾಠಿ ಕಾದಂಬರಿಯನ್ನು ಮಾಲತಿ ಮುದಕವಿಯವರು ಕನ್ನಡಕ್ಕೆ ಅನುವಾದಿಸಿದ್ದಾರೆ. ಈ ಪೌರಾಣಿಕ ಕಾದಂಬರಿ ಓದುವಾಗ ಇದು ಅನುವಾದವೆಂದೇ ಅನ್ನಿಸಲಿಲ್ಲ. ಅಷ್ಟು ಚೆಂದವಾಗಿ ಕಾದಂಬರಿಯನ್ನು ಕಟ್ಟಿಕೊಟ್ಟಿದ್ದಾರೆ. ಬಿಡಿಬಿಡಿಯಾಗಿ ಓದಿದ್ದ ಎಷ್ಟೋ ಪೌರಾಣಿಕ ಕಥೆಗಳು ಕಾಲಾನುಕ್ರಮದಲ್ಲಿ ಒಂದಕ್ಕೊಂದು ಬೆಸೆದುಕೊಂಡಿರುವ ಪರಿ ಇಷ್ಟವಾಯಿತು. ಅಲ್ಲದೆ, ಅಪ್ಸರೆಯರು ಎಂದರೆ ಸೌಂದರ್ಯ, ನೃತ್ಯ, ಆಮೋದ-ಪ್ರಮೋದಗಳು ಎಂಬ ಚಿತ್ರಣವೇ ಮೊದಲಿಗೆ ಮನಸ್ಸಿಗೆ ಬರುತ್ತಿತ್ತು. ಆದರೆ, ಇದು ಅಪ್ಸರೆಯರ ಮನದಾಳವನ್ನು ತೆರೆದಿಟ್ಟು ವಿಭಿನ್ನ ದೃಷ್ಟಿಕೋನದಲ್ಲಿ ನೋಡುವಂತೆ ಮಾಡಿದ ಕಾದಂಬರಿ. ಇಲ್ಲಿ ಅಶ್ಲೀಲತೆ ಇಲ್ಲದಂತಹ ಭಾಷೆ ಬಹಳ ಮುಖ್ಯವಾಗಿ ಹಿಡಿಸಿತು. ಶೃಂಗಾರದ ವಿಚಾರಗಳು, ಕಾಮದ ವಿಷಯಗಳು ಬಂದರೂ.. ಮಿತಿಮೀರದಂತೆ.. ಓದುಗರಿಗೆ ಮುಜುಗರ ತರದಂತೆ ಕಟ್ಟಿಕೊಟ್ಟಿರುವ ಕಾದಂಬರಿ ಇದು.


ರಂಭೆ, ಊರ್ವಶಿ, ಮೇನಕಾ ಹಾಗೂ ಅಲಂಬುಜೆ ಎಂಬ ನಾಲ್ವರು ಅಪ್ಸರೆಯರು ಇಲ್ಲಿ ಬಂದಿರುವರಾದರೂ.. ಮುಖ್ಯವಾಗಿ ಮೇನಕೆಯ ಮನೋಭೂಮಿಕೆಯನ್ನು ಹಿಡಿದಿಡುತ್ತದೆ. ಅಷ್ಟೇ ಅಲ್ಲದೆ, ಮೇನಕೆಯ ದೃಷ್ಟಿಯಿಂದ ಇಡೀ ಕಥನವಿದ್ದರೂ.. ಕಾದಂಬರಿಯ ಕೊನೆಯಲ್ಲಿ ಇಂದ್ರನ ಪತ್ನಿ ಶಚಿಯ ಪಾತ್ರ ಬೇರೆಯದ್ದೇ ತೆರನಾಗಿ ಇಷ್ಟವಾಯಿತು. ಇಂದ್ರದೇವನನ್ನು ನಾವು ಮೇನಕೆಯಂತೆಯೇ ವಿರೋಧಿಸುತ್ತಲೇ ಹೋಗುತ್ತೇವಾದರೂ.. ಕೆಲವೊಮ್ಮೆ ಇಂದ್ರನಿಗಾಗಿ ವೃಷಾಕಪಿಯಂತೆ ಮರುಗುವುದೂ ಇದೆ. 


ಶಕ್ತಿಗಿಂತ ಯುಕ್ತಿ ಮೇಲು ಎಂಬಂತೆ ಇಂದ್ರನು ಶಕ್ತಿಯನ್ನು ಉಪಯೋಗಿಸುವುದಕ್ಕೂ ಮೊದಲು ತನ್ನ ಬುದ್ಧಿಶಕ್ತಿಯನ್ನು ಉಪಯೋಗಿಸಿ ಗೆಲ್ಲುವ ಹಾದಿಯನ್ನು ನೋಡುತ್ತಿರುತ್ತಾನೆ. ಆದರೆ, ಕುಟಿಲತನ ಹಾಗೂ ಧೂರ್ತತನ ತುಂಬಿರುವ ಬುದ್ಧಿಶಕ್ತಿ ಮೆಚ್ಚುಗೆಯಾಗುವುದು ಕಡಿಮೆಯೇ.. 


ತ್ರಿದೇವರ ನಂತರ ಸ್ಥಾನ ಪಡೆದಿದ್ದ ಇಂದ್ರದೇವರಿಗೆ ಸ್ವರ್ಗಲೋಕದ ಅಧಿಪತಿ ಹಾಗೂ ಸೇನಾಧಿಪತಿಯ ಸ್ಥಾನವಿತ್ತು. ಆದರೆ, ತನ್ನ ಕುಟಿಲ ಬುದ್ಧಿಯನ್ನೇ ಉಪಯೋಗಿಸುತ್ತಿದ್ದ ಇಂದ್ರದೇವ ತನ್ನ ಆಯುಧ ವಜ್ರವನ್ನು ಉಪಯೋಗಿಸಿದ್ದು ಕಡಿಮೆಯೇ. ಸ್ವರ್ಗದ ಮೇಲೆ ಆಕ್ರಮಣವಾದಾಗ ಸೋಲು ಗೆಲುವುಗಳು ಇದ್ದೇ ಇರುತ್ತಿದ್ದವು. ಪಾತಾಳದ ರಾಜ ಬಲೀಂದ್ರ ಇಂದ್ರದೇವನನ್ನು ಸೋಲಿಸಿ ಆತನ ಸಂಪತ್ತನ್ನು ತೆಗೆದುಕೊಂಡು ಹೋಗುವಾಗ ಸಮುದ್ರ ರಾಜನ ದೆಸೆಯಿಂದ ಅದು ಸಮುದ್ರದ ಆಳಕ್ಕೆ ಬಿದ್ದಿತು. ನಂತರದ್ದು ಸಮುದ್ರ ಮಂಥನ. ಇದು ದೇವ-ದಾನವರಿಂದಾದರೂ.. ಹೆಚ್ಚು ಉಪಯುಕ್ತವಾಗಿದ್ದು ಇಂದ್ರ ದೇವರಿಗೆ. ಸಂಪತ್ತು ಕೈ ಸೇರಿದ ನಂತರ ಬ್ರಹ್ಮದೇವರ ಸೃಷ್ಟಿಯಾದ ಸುಂದರಿಯರು ಸಮುದ್ರದಾಳದಿಂದ ಸಿಕ್ಕಿದ್ದರು.


ಮೇನಕಾ, ರಂಭಾ, ಅಲಂಬುಜ, ಊರ್ವಶಿ, ತಾರಾ ಹಾಗೂ ರುಮಾ. ತಾರೆ ಹಾಗೂ ರುಮಾರನ್ನು ವಾಲಿ-ಸುಗ್ರೀವರಿಗೆ ವಿವಾಹ ಮಾಡಿಕೊಡಲಾಯಿತು. ಇಂದ್ರದೇವರಿಗೆ ವಿಧಿಯಿಲ್ಲದೆ ಅದನ್ನು ಒಪ್ಪಿಕೊಳ್ಳಬೇಕಾಯಿತು. ಉಳಿದ ನಾಲ್ವರು ಸ್ವರ್ಗಕ್ಕೆ ಬಂದರು. ಆದರೆ, ಅವರ ಮನದಲ್ಲಿ ಇಂದ್ರ ದೇವರು ತಮ್ಮನ್ನು ವಿವಾಹ ಮಾಡಿಕೊಳ್ಳುತ್ತಾರೆ ಎಂಬ ವಿಚಾರವಿತ್ತು. ಆದರೆ, ಇಂದ್ರನ ಆಲೋಚನೆಯೇ ಬೇರೆ ಇದ್ದಿತು. ಇದನ್ನು ತಿಳಿಯದ ಮೇನಕಾ ತಾನಾಗಿಯೇ ಇಂದ್ರನ ಕಕ್ಷೆಗೆ ಹೋದಾಗ ಆತನ ತಿರಸ್ಕಾರ ಹಾಗೂ ಆತನ ಪತ್ನಿ ಶಚಿ ದೇವಿಯಿಂದ ಅಪಮಾನವಾಯಿತು. ಈ ಘಟನೆಯಿಂದಾಗಿ ಶಚಿ- ಇಂದ್ರರ ದಾಂಪತ್ಯ ಬಿರುಕು ಬಿಟ್ಟಿತು. ಆತನ ಆಪ್ತನಾಗಿದ್ದ ದೇವತೆ ವೃಷಾಕಪಿಯ ಸ್ನೇಹವೂ ಸಡಿಲಾಯಿತು. ವೃಷಾಕಪಿ- ವಿಷಯೆಯರ ದಾಂಪತ್ಯ ಮುರಿದು ಬಿದ್ದದ್ದಷ್ಟೇ ಅಲ್ಲ.. ವಿಷಯೆ ಭ್ರಮಾಧೀನಳಾಗುತ್ತಾಳೆ. ಈ ಸರಣಿ ಘಟನೆಗಳ ಶುರುವಾಗುವಿಕೆಗೆ ಮೇನಕಾ ತನಗರಿವಿಲ್ಲದಂತೆಯೇ ಕಾರಣಳಾಗುತ್ತಾಳೆ. 


ಶಚಿ ಹಾಗೂ ಇಂದ್ರದೇವರದ್ದು ಪ್ರೇಮ ವಿವಾಹ. ಇದಾದ ನಂತರವೂ ಇಂದ್ರನಿಗೆ ಹಲವಾರು ಸ್ತ್ರೀಯರ ಸಂಪರ್ಕವಿದ್ದರೂ ಹುಟ್ಟಿದ ಮಕ್ಕಳ ಜವಾಬ್ದಾರಿಯನ್ನು ತೆಗೆದುಕೊಳ್ಳಲು ಸಿದ್ಧವಿರಲಿಲ್ಲ ಹಾಗೂ ಶಚಿಗೆ ಇಂದ್ರನ ಯಾವ ಮೋಸವೂ ಅರಿವಿರಲಿಲ್ಲ. ಶಚಿ -ಇಂದ್ರರ ದಾಂಪತ್ಯ ಮತ್ತೆ ಹಳಿಗೆ ಬಂದದ್ದು ಯಾವಾಗ..? ವಿಷಯೆಯ ಕುರಿತು ಶಚಿಗೆ ತಿಳಿದು ಆಕೆ ಅವಳನ್ನು ಭ್ರಮೆಯಿಂದ ಹೊರತರಲು ಹೋದರೂ ಆಕೆ ಸರಿಯಾಗುವುದಿಲ್ಲ. ಇಂದ್ರದೇವ ಈ ಕುರಿತು ತನಗೂ ಅದಕ್ಕೂ ಸಂಬಂಧವಿಲ್ಲವೆಂಬಂತೆ ಇರತೊಡಗಿದ್ದೇಕೆ..? ವೃಷಾಕಪಿಯ ಕುರಿತು ಮೇನಕೆಗೆ ಅನುಕಂಪ ಹುಟ್ಟಿದ್ದೇಕೆ..?


ಇಂದ್ರನು ಎಲ್ಲಾ ಅಪ್ಸರೆಯರಿಗೂ ಒಂದೊಂದು ಕಾರ್ಯವನ್ನು ವಹಿಸುತ್ತಾರೆ. ಹಾಗೆ ಮೇನಕೆಗೆ ದೂರ್ವಾಸರ ಬಳಿ ಹೋಗಲು ಹೇಳುತ್ತಾರೆ. ಆಕೆ ಹೋದ ಕಾರ್ಯ ಸಫಲವಾಯಿತೇ? ದೂರ್ವಾಸರು ತಮ್ಮ ಪತ್ನಿ ಕಂದಲಿಯನ್ನು ಉರಿಸಿ ಕೊಂದುದಕ್ಕೆ ಮೇನಕೆ ಕಾರಣಳೇ?


ಇತರೆ ಅಪ್ಸರೆಯರಿಗೆ ಅದರಲ್ಲಿಯೂ ರಂಭೆಗೆ ಕುಣಿಜಾ ನದಿತೀರಕ್ಕೆ ಹೋಗಲು ಸಾಕಷ್ಟು ಸೆಳೆತ. ಆದರೆ, ಮೇನಕೆಗೆ ಅದರ ಕುರಿತು ಲಕ್ಷ್ಯ ಕೊಡದಿದ್ದದ್ದು ಏಕೆ ?


ಅಹಲೈಯ ಪ್ರಸಂಗದಲ್ಲಿ ಗೌತಮ ಋಷಿಗಳ ಶಾಪ ಇಂದ್ರದೇವರಿಗೆ ತಟ್ಟಿದಾಗ ಆ ಶಾಪವನ್ನು ಯಾರು ಯಾರು ತೆಗೆದುಕೊಂಡರು ಹಾಗೂ ಅದರ ಫಲವೇನಾಯ್ತು..?


ಮೇನಕೆಗೆ ವಿಷಯೆ ಹಾಗೂ ವೃಷಾಕಪಿ ಇಬ್ಬರ ಮೇಲೂ ಮರುಕವಿದ್ದರೂ.. ಇಂದ್ರದೇವನ ಮುಂದೆ ಅದನ್ನು ಪ್ರಸ್ತಾಪಿಸಿದರೂ ಅದಕ್ಕೆ ಫಲ ಸಿಗುತ್ತಿರಲಿಲ್ಲ. ಮೇನಕೆಗೆ ಸಿಕ್ಕ ಕೆಲಸವನ್ನು ಸರಿಯಾಗಿ ನಿರ್ವಹಿಸಲಾಗದೆ ಹೋಗುವಂತಾಯಿತು. ಅದಕ್ಕಾಗಿ ಸಿಕ್ಕ ಶಿಕ್ಷೆ, ಮೇನಕೆ ಹಾಗೂ ರಂಭೆ ರಾಕ್ಷಸರಾದ ಸಾಯುಜ ಹಾಗೂ ಗಾರ್ಗಣನ ಬಳಿ ಹೋಗುವಂತಾಯಿತು. ಅವರ ಕಪಿಮುಷ್ಠಿಯಲ್ಲಿ ಸಿಲುಕಿದವರನ್ನು ಬಿಡಿಸಿದವರಾರು..?


ಒಂದಾದ ನಂತರ ಮತ್ತೊಂದು ಕಾರ್ಯಗಳು ಅಪ್ಸರೆಯರಿಗೆ ಇದ್ದೇ ಇರುತ್ತಿದ್ದವು. ಇಲ್ಲದಿದ್ದಲ್ಲಿ ಇಂದ್ರನ ಆಸ್ಥಾನದಲ್ಲಿ ನರ್ತಿಸುವ ಕಾರ್ಯವಂತೂ ಇದ್ದೇ ಇತ್ತು. ಇಂದ್ರನ ಅಣತಿಯಂತೆ ಅವಪಾತಾಳದ ವೃತ್ರಾಸುರನ ಬಳಿ ಮೇನಕೆ ಹೋಗುತ್ತಾಳೆ. ರಾಕ್ಷಸನಾದರೂ.. ವೃತ್ರಾಸುರನೇ ಇಂದ್ರನಿಗಿಂತಲೂ ಮೇಲು ಎನಿಸುವ ಸಂದರ್ಭಗಳೂ ಇಲ್ಲದಿಲ್ಲ.


ತಾನೇ ದೇವಸೇನಾಧಿಪತಿಯಾಗಿ ಉಳಿಯಬೇಕು ಎನ್ನುವ ಇಂದ್ರನ ಸ್ವಾರ್ಥದ ನಡೆಗೆ ಮೇನಕೆ ಕಾರ್ತಿಕೇಯನ ಬಳಿಗೆ ಹೋಗಬೇಕಾಗುತ್ತದೆ. ಅಲ್ಲಿ ಆಕೆಗೆ ಸಿಕ್ಕ ಉಪಚಾರವೇ ಬೇರೆಯದ್ದು. ನಂತರ, ಇಂದ್ರದೇವನ ಮಗಳು ದೇವಸೇನೆ ಹಾಗೂ ಕಾರ್ತಿಕೇಯನ ವಿವಾಹ ನೆರವೇರುತ್ತದೆ. ಇಂದ್ರ ತನ್ನ ಸ್ವಾರ್ಥಕ್ಕಾಗಿ ಏನು ಬೇಕಾದರೂ ಮಾಡುತ್ತಾನೆ ಎನ್ನುವುದಕ್ಕೆ ಆತ ಶುಕ್ರಾಚಾರ್ಯರಿಗೆ ತನ್ನ ಮಗಳು ಜಯಂತಿಯನ್ನು ವಿವಾಹ ಮಾಡಿಕೊಡುವುದೇ ಸಾಕ್ಷಿಯಾಗುತ್ತದೆ. 


ಅಶ್ವಿನೀ ಕುಮಾರರ ಮೇಲೆ ಇಂದ್ರ ಸಿಟ್ಟು ಮಾಡಿಕೊಂಡದ್ದು, ವೃತ್ರಾಸುರನ ವಧೆಯಾದಾಗ ಮೇನಕೆ ಅಶ್ವಿನೀ ಕುಮಾರರ ನೆರವನ್ನೇ ಪಡೆದುಕೊಂಡದ್ದು, ಧದೀಚಿಯ ದೇಹತ್ಯಾಗ ಎದಲ್ಲದರಲ್ಲೂ ಮೇನಕೆಯ ಉಪಸ್ಥಿತಿಯನ್ನು ಓದಿ ನೋಡಿ. 


ಇಂದ್ರ ಹಾಗೂ ವಿಶ್ವಾಮಿತ್ರರ ನಡುವಿನ ಹಲವಾರು ಪ್ರಸಂಗಗಳು ಇಲ್ಲಿವೆ. ಮೊದಲಿಗೆ ವಿಶ್ವಾಮಿತ್ರ ಇಂದ್ರದೇವನ ಸ್ನೇಹಹಸ್ತವಿದ್ದರೂ.. ನಂತರ ಹಲವಾರು ಕಾರಣಗಳಿಗಾಗಿ ಅದು ಬದಲಾಗುತ್ತಾ ಹೋಗುತ್ತದೆ. ಮೇನಕೆ ಹಾಗೂ ವಿಶ್ವಾಮಿತ್ರರ ಪ್ರಸಂಗ ಹಾಗೂ ಶಕುಂತಲೆಯ ಜನನ ಮತ್ತು ಮುಂದಿನ ಜೀವನವನ್ನೂ ಇಲ್ಲಿ ಕಾಣಬಹುದು. 


ಇಂದ್ರನು ಮೇಘನಾದನ ಬಂದಿಯಾದಾಗ ಆತ 'ಇಂದ್ರಜಿತ' ಎಂದವರಾರು..? ಅಥವಾ ಇಂದ್ರ-ಜೀತ ಎಂದು ಕರೆದ ಇಂದ್ರನ ಮನಸ್ಥಿತಿಯೇನಿತ್ತು ಓದಿ ನೋಡಿ.


ವೃಷಾಕಪಿಯ ಸಂಸಾರ ಸರಿಯಾಗಲೆಂದು ಮೇನಕೆಯ ಪ್ರಯತ್ನ ಹಾಗೂ ಮೇನಕೆಯ ಬಿಡುಗಡೆಗಾಗಿ ವೃಷಾಕಪಿಯ ಪ್ರಯತ್ನ, ಎರಡು ನಿಸ್ವಾರ್ಥ ಸ್ನೇಹಜೀವಿಗಳು, ಸಾಂತ್ವನ, ಕಲಹ ಮತ್ತೆ ಒಬ್ಬರಿಗೊಬ್ಬರ ಹೊಂದಿಕೊಳ್ಳುವಿಕೆ ಎಲ್ಲವೂ ಇಲ್ಲಿವೆ.


ಇಲ್ಲಿ ಸಪ್ತಷಿಗಳಲ್ಲ.. ಅಷ್ಟರ್ಷಿಗಳು ಇಂದ್ರ ತನ್ನ ಪದವಿ ಕಳೆದುಕೊಂಡಾಗ ಶಚಿಯ ಸಹಾಯಕ್ಕೆ ಬರುತ್ತಾರೆ. ಅದು ಮೇನಕೆಯ ಸಹಾಯದಿಂದ. ಆ ಪ್ರಸಂಗ ಓದಿನೋಡಿ.


ಅಲಂಬುಜೆ ಇಂದ್ರನ ಶಾಪದಿಂದಾಗಿ ಭೂಮಿಯಲ್ಲಿ ಜನ್ಮವೆತ್ತುವ ಪ್ರಸಂಗ ಬರುತ್ತದೆ. ಇನ್ನು ಊರ್ವಶಿ ಮತ್ತು ಪುರೂರವರ ಒಡನಾಟ ಒಂದೆಡೆಯಾದರೆ.. ರಂಭೆಗೆ ರಾವಣನನ್ನು ವಶಪಡಿಸಿಕೊಳ್ಳುವ ಕಾರ್ಯ ಹಾಗೂ ಆಕೆಗೆ ನಲಕುಬೇರನ ಜೊತೆಗೆ ಪ್ರೇಮ, ವಿವಾಹದ. ತಿಲೋತ್ತಮೆ ತನ್ನ ಕಾರ್ಯವಾದ ನಂತರ ಸ್ವಾತಂತ್ರ್ಯಳು. ಇದೆಲ್ಲದರ ನಡುವೆ ಏಕಾಂಗಿ ಯೋಧಯಂತೆ ಭಾಸವಾಗುವುದು ಮೇನಕೆ. ಪ್ರತಿಯೊಂದು ಕಾರ್ಯಕ್ಕೂ ಆಕೆಯನ್ನೇ ದೂಡುವ ಇಂದ್ರದೇವ ಅದೆಷ್ಟು ಸ್ವಾರ್ಥಪರನಾಗುತ್ತನಲ್ಲವಾ ಎನ್ನಿಸಿತು. ಇಂದ್ರದೇವನಂತೆಯೇ ಕಾಣುವ ಗೃತ್ಸಮದ ಯಾರು..? ಅವನಿಂದ ಒಳಿತಾಯಿತೋ..? ಕೆಡುಕಾಯಿತೋ..? ಓದಿ ನೋಡಿ.


ಮೇನಕೆಯ ಬಿಡುಗಡೆಯಾಗಲಿ ಎಂದೇ ಆಶಿಸುವಾಗ ಮೇನಕೆಯ ಮುಂದಿನ ಬದುಕು ಹೇಗಿತ್ತು ಎಂಬುದನ್ನು ತಿಳಿಯಲು ಈ ಕಥೆ ಓದಿ ನೋಡಿ. ಮೇನಕಾದೇವಿ ಎಂದು ಸಂಭೋಧಿಸಿ ಗೌರವಿಸಿದ ವ್ಯಕ್ತಿಗಳಾರು..?


ಬೇರೆ ಸೃಷ್ಟಿಗಿಂತಲೂ ಹೆಚ್ಚಿನ ಕಾಮವನ್ನು ತುಂಬಿ, ಅಪ್ಸರೆಯರನ್ನು ಸೃಷ್ಟಿ ಮಾಡಿದ ಬ್ರಹ್ಮದೇವ ಅವರನ್ನು ಸಾಗರ ತಳಕ್ಕೆ ನೂಕಿ ಬಿಡುತ್ತಾರೆ. ಅಲ್ಲಿ ಜಡವಾಗಿದ್ದವರು ಸ್ವರ್ಗಕ್ಕೆ ಬಂದಾಗ ಸಿಗುವುದು ಅವರಿಷ್ಟದ ಕೆಲಸವೇನಲ್ಲ. ಆದರೆ, ಇಂದ್ರದೇವನ ಆಜ್ಞೆಯನ್ನು ಪಾಲಿಸಲೇಬೇಕಿತ್ತು. ತಾರೆ ಹಾಗೂ ರುಮೆಯರಿಗಾದರೂ ವೈವಾಹಿಕ ಜೀವನ ಸಿಕ್ಕಿತು. ಉಳಿದವರು ಇಂದ್ರದೇವನ ಶತ್ರುಗಳನ್ನು ತಮ್ಮ ವಶ ಮಾಡಿಕೊಂಡು ಕಾರ್ಯವಿಳಂಬ ಮಾಡುವ ಕುಟಿಲತೆಗೆ ಬಲಿಯಾಗಬೇಕಿತ್ತು. ಇದರಲ್ಲಿ ಎಷ್ಟೋ ಬಾರಿ ಸೋತದ್ದಿದೆ, ಎಷ್ಟೋ ಬಾರಿ ಗೆದ್ದದ್ದಿದೆ.


ಆದರೆ, ಅದು ಗೆಲುವಲ್ಲ. ಪ್ರತಿಯೊಬ್ಬ ಪುರುಷನಲ್ಲೂ ಕಾಮವೇ ಪ್ರಧಾನವಾಗಿಲ್ಲ ಎಂಬುದನ್ನು ಇಂದ್ರದೇವನಿಗೆ ಅರ್ಥ ಮಾಡಿಸುವಲ್ಲಿ ಸೋತಾಗಲೆಲ್ಲಾ ಸಿಗುವುದು ಶಿಕ್ಷೆ. ಮೇನಕೆಗೆ ಕೊನೆಕೊನೆಯಲ್ಲಂತೂ ನಿರ್ಲಿಪ್ತ ಭಾವ. ತನ್ನ ಬಿಡುಗಡೆ ಸಾಧ್ಯವಿಲ್ಲವೆಂದಾಗ ಪ್ರತಿಬಾರಿಯ ಹತಾಶೆಗೂ ಕೋಪ. ಹಾಗೆಂದು, ಮತ್ತೆ ಸಾಗರತಳಕ್ಕೆ ಹೋಗುವದಕ್ಕೂ ಇಷ್ಟವಿಲ್ಲ.


ಅಪ್ಸರೆಯಾದರೂ ಆಕೆಗೂ ಮನಸ್ಸಿದೆಯಲ್ಲವಾ..? ಹೇರಿಕೆಯಿಂದ ಹಲವಾರು ಪುರುಷರ ಬಳಿ ಹೋಗುವ ಆಕೆ ಇಷ್ಟವಾದವರ ಬಳಿ ಉಳಿಯುವಂತಿಲ್ಲ, ವಿವಾಹವಾಗುವಂತಿಲ್ಲ. ತಾಯ್ತನದ ಸವಿಯನ್ನು ಅನುಭವಿಸಲಾದ ಸ್ಥಿತಿ. ಏನೇ ಮಾಡಿದರೂ.. ದೇವರಾಜನ ಕುರಿತ  ಗೌರವ ಭಾವ, ಆತನ ಬಿಡುಗಡೆಗೆ ಮಾಡುವ ಪ್ರಯತ್ನ ಕಾಣುತ್ತದೆ. ಅಷ್ಟಕ್ಕೂ ಮೇನಕೆ ಪ್ರತಿ ಕೆಲಸವನ್ನೂ ಮಾಡಿದ್ದು ಇಂದ್ರದೇವನಿಗಾಗಿಯೇ ಅಲ್ಲವಾ..? ಆತನ ಆಜ್ಞೆ ಪಾಲಿಸುವುದಕ್ಕೆ ಅಲ್ಲವಾ ಎಂದುಕೊಂಡರೂ.. ಹೇರಿಕೆಗೂ, ವಿರೋಧಿಸುತ್ತಲೇ ಬದುಕುವ ವ್ಯಕ್ತಿಯೊಬ್ಬನನ್ನು ಗೌರವಿಸುವುದಕ್ಕೂ ಅಂತರವಿದೆ. ತನ್ನ ಮನಸ್ಸನ್ನು ಅರ್ಥ ಮಾಡಿಸುತ್ತಲೇ ಮನಕಲಕುವ, ತನ್ನ ಜೀವನಗಾಥೆಯನ್ನು ತೋರುವ ಮೇನಕಾ ಕಾಡುತ್ತಾಳೆ.


ಅನುವಾದವೆಂದೇ ಅನ್ನಿಸದ

ಕಾಡುವಂತಹ ಪೌರಾಣಿಕ ಕಾದಂಬರಿಯ ಓದು. 

~ವಿಭಾ ವಿಶ್ವನಾಥ್

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ