ಕಾದಂಬರಿಯ ಶೀರ್ಷಿಕೆ : ನೆಮ್ಮದಿಯ ನೆಲೆ
ಲೇಖಕರು : ವಿಶಾಲಾಕ್ಷಿ ದಕ್ಷಿಣಾಮೂರ್ತಿ
ಪ್ರಥಮ ಮುದ್ರಣ : 1997
ಚೆಲುವಿನ ಕೆರೆಯಲ್ಲಿ ಮನೆಯ ಯಜಮಾನನ ಪಟ್ಟದಲ್ಲಿರಬೇಕಿದ್ದ ಶೇಖರ ತಲೆಮರೆಸಿಕೊಂಡು ಬಹಳ ಸಮಯವೇ ಆಗಿತ್ತು. ಮನೆಯಲ್ಲಿ ಆತನ ಪತ್ನಿ ಕಮಲ. ವಯಸ್ಸಾದ ತಾಯಿ ಭಾಗಮ್ಮ, ಮಗಳು ರತ್ನ, ಇನ್ನೆರಡು ಪುಟ್ಟ ಮಕ್ಕಳು ಶಿವು ಹಾಗೂ ನಾಗೇಶ. ಆತ ತಲೆಮರೆಸಿಕೊಂಡಿದ್ದಕ್ಕೆ ಕಾರಣವೂ ಗಹನವಾದದ್ದೇ ಆಗಿತ್ತು. ಆತ ಸರ್ಕಾರಿ ಹುದ್ದೆಯಲ್ಲಿದ್ದು ಆ ಹಣವನ್ನು ಲಪಟಾಯಿಸಿದ್ದ. ಪೊಲೀಸರು ಆತನನ್ನು ಹುಡುಕಿಕೊಟ್ಟವರಿಗೆ ಬಹುಮಾನವನ್ನು ಘೋಷಿಸಿದ್ದರು. ಆದರೆ ಆತ ವರ್ಷಕೊಮ್ಮೆ ಅಥವಾ ಅಪರೂಪಕ್ಕೆ ಮನೆಗೆ ಗುಟ್ಟಾಗಿ ಬಂದು ಹೋಗುತ್ತಿದ್ದ.
ಇದ್ದುದರಲ್ಲೇ ಹೇಗೋ ಬಡತನದ ಜೀವನ ನಡೆಸಿಕೊಂಡು ಹೋಗುತ್ತಿದ್ದ ಕಮಲಳಿಗೆ ಆಸರೆಯಾಗುತ್ತಿದ್ದದ್ದು ನಾದಿನಿ ಗೌರಮ್ಮ ಹಾಗೂ ಆಕೆಯ ಪತಿ ಶ್ರೀಕಂಠಯ್ಯ. ಬಾವಮೈದುನನ ಸಂಸಾರದ ಕಷ್ಟ ಆತನಿಗೆ ಅರಿವಿತ್ತು. ತಮ್ಮ ಊರಿಗೆ ಅವರೆಲ್ಲರನ್ನೂ ಕರೆತರಲು ಇಚ್ಚಿಸಿದರೂ ಅದಕ್ಕೆ ಭಾಗಮ್ಮ ಒಪ್ಪಿರಲಿಲ್ಲ. ಅಲ್ಲದೆ, ರತ್ನನನ್ನು ಸೊಸೆಯನ್ನಾಗಿಸಿಕೊಳ್ಳಲು ಅವರ ಗಂಡು ಮಕ್ಕಳು ಬಹಳ ದೊಡ್ಡವರು. ಹೀಗಾಗಿ ಅವರ ಬಡತನವನ್ನು ದವಸ-ಧಾನ್ಯ, ಬಟ್ಟೆಗಳನ್ನು ನೀಡಿ ತಕ್ಕ ಮಟ್ಟಿಗೆ ಕಡಿಮೆ ಮಾಡಬಹುದಿತ್ತಷ್ಟೇ. ಆದರೆ, ಶ್ರೀಕಂಠಯ್ಯ ವಿದ್ಯಾಭ್ಯಾಸಕ್ಕೆ ಬಹಳ ಒತ್ತು ನೀಡುತ್ತಿದ್ದರು.
ಹೀಗೆ ಸಾಗುತ್ತಿದ್ದ ಸಂಸಾರದಲ್ಲಿ ರತ್ನ ಬಹಳವೇ ಮಾಗಿದಳು. ಅಕ್ಕನಾದರೂ ತಾಯಿಯಂತೆಯೇ ಇಬ್ಬರು ತಮ್ಮಂದಿರನ್ನು.. ಅದರಲ್ಲಿಯೂ ಚಿಕ್ಕ ತಮ್ಮ ನಾಗೇಶನನ್ನು ಪೋಷಿಸಿದಳು. ವಯಸ್ಸು ಚಿಕ್ಕದಾದರೂ.. ಅರ್ಥಮಾಡಿಕೊಂಡು ತ್ಯಾಗ ಮಾಡುತ್ತಲೇ ತನ್ನ ಆಸೆಗಳನ್ನು ಅದುಮಿಟ್ಟುಕೊಂಡು ಬದುಕುತ್ತಿದ್ದಳು.
ನಾಗೇಶ ಹುಟ್ಟಿದಾಗ ಶೇಖರನ ಅನುಪಸ್ಥಿತಿ ಇದ್ದರೂ ಊರಿನವರಾರೂ ಕಮಲಮ್ಮನನ್ನು ತಪ್ಪು ತಿಳಿಯಲಿಲ್ಲ. ಆಕೆಯ ಕುರಿತು ಸಂಶಯ ಪಡಲಿಲ್ಲ. ಆದರೆ, ಕುಟಿಲ ಸ್ವಭಾವದ ನಾಗವೇಣಿ ಕೆಲವೊಮ್ಮೆ ಅವರ ನೆಮ್ಮದಿಗೆ ಕಲ್ಲು ಹಾಕಲು ಬಂದರೂ ಅದು ಭಾಗಮ್ಮನವರಿಂದ ತಪ್ಪಿ ಹೋಗುತ್ತದೆ.
ರತ್ನ ಓದು ಮುಗಿಸಿ ಜಿಲ್ಲೆಯ ಮುಖ್ಯ ಆಫೀಸಲ್ಲಿ ಟೈಪಿಸ್ಟ್ ಕೆಲಸಕ್ಕೆ ಸೇರಿ ತಮ್ಮಂದಿರನ್ನು ಓದಿಸಿ, ಅವರಿಗೆ ನೆಲೆ ಕಲ್ಪಿಸಲು ಒದ್ದಾಡುತ್ತಿದ್ದಳು. ಸುಂದರಮ್ಮನವರ ವಠಾರದಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದಳು. ಆಫೀಸಿನಲ್ಲಿ ಬಾಸ್ ಶ್ರೀಧರನ ಕಟ್ಟುನಿಟ್ಟಿಗೆ ಅವಳದ್ದೂ ಅಷ್ಟೇ ಶ್ರಮದ ಕೆಲಸ. ಅದು ಆಫೀಸ್ ಆದರೂ.. ಅಲ್ಲಿಯೂ ಕುಟುಂಬದ ವಾತಾವರಣದಂತೆ ಒಬ್ಬರಿಗೊಬ್ಬರು ಹೊಂದಿಕೊಂಡು ಕೆಲಸ ಮಾಡುತ್ತಿದ್ದರು. ಲೆಕ್ಕ ಗೊತ್ತಿಲ್ಲದ ಲೀಲಾವತಿ ತನಗೆ ಒಲ್ಲದ ಕೆಲಸದಲ್ಲಿ ಪರದಾಡುತ್ತಿರುವಾಗ ಆಕೆಗೆ ತಕ್ಕ ಕೆಲಸ ಹೊಂದಿಸಿಕೊಟ್ಟು ನೆಲೆ ಕಲ್ಪಿಸಿಕೊಟ್ಟವಳು ರತ್ನ.
ಆಗ ಮನೆಯನ್ನು ಪೋಷಿಸುತ್ತಿದ್ದ ಅತ್ತೆ ಗೌರಮ್ಮನ ಸ್ಥಾನ ಈಗ ರತ್ನಳದ್ದು. ಅಷ್ಟೇ ವಾತ್ಸಲ್ಯ. ಆಕೆ ಅಂದುಕೊಂಡಂತೆ ಶಿವು ಓದದೆ ಫೇಲಾದರೂ ಆತ ಹಾದಿ ತಪ್ಪಿರಲಿಲ್ಲ. ಅಮ್ಮನ ಹಾಗೂ ಮನೆಗೆ ಬರುತ್ತಿದ್ದ ಬ್ಯಾಂಕ್ ಆಫೀಸರ್ ನ ಪತ್ನಿ ತುಂಗಮ್ಮನ ಸಹಾಯದಿಂದ ಲೋನು ಪಡೆದು ಈಗ ರೇಷ್ಮೆ ಕೃಷಿ ಮಾಡುತ್ತಿದ್ದ. ನಾಗೇಶನಿಗೆ ಓದಿನಲ್ಲಿ ಅಷ್ಟು ಆಸಕ್ತಿ ಇಲ್ಲದಿದ್ದರೂ ರತ್ನಳನ್ನು ಬೇಸರ ಮಾಡಲು ಇಷ್ಟವಿರಲಿಲ್ಲ. ಶಿವುವಿನ ರೇಷ್ಮೆ ಕೃಷಿಗೆ ಮನೆಯವರೆಲ್ಲರೂ ತಮ್ಮ ಸ್ವಂತ ಸುಖವನ್ನು ತ್ಯಾಗ ಮಾಡಿ ಆತನ ಒಳಿತಿಗೆ ಆಶಿಸುತ್ತಿದ್ದರು.
ಆಫೀಸಿನಲ್ಲಿ ಲೀಲಾವತಿಯ ಜಾಗವನ್ನು ಈಗ ಅಲ್ಪಾವಧಿಗೆಂದು ಈ ವಯಸ್ಸಿನಲ್ಲಿ ಹಿರಿಯರಾದ ಲಲಿತಮ್ಮ ತುಂಬಿದ್ದರು. ಹಾಗೆಯೇ ರತ್ನಳಿಗೆ ಮತ್ತೊಂದು ಅಮ್ಮನ ಜಾಗವನ್ನು ಸಹ. ಮನೆ ಕೆಲಸಕ್ಕೆ ಬರುತ್ತಿದ್ದ ಮಾದೇವಿಯದ್ದು ಅಂತಃಕರಣದ ಬಾಂಧವ್ಯ. ಕೆಲಸದವಳನ್ನುವ ಕೀಳಿನಿಂದ ಅವಳನ್ನು ನಡೆಸಿಕೊಳ್ಳುತ್ತಿರಲಿಲ್ಲ. ಈ ಎಲ್ಲಾ ಸುಂದರ ಚಿತ್ರಣವನ್ನು ಕದಡಿದ್ದು ಸುಂದರಮ್ಮನ ತಮ್ಮ ನಾಣಿ. ಸುಂದರಮ್ಮ ತನ್ನ ಹಾದಿ ತಪ್ಪಿದ ತಮ್ಮನಿಗೆ ರತ್ನಳನ್ನು ಗಂಟು ಹಾಕಬೇಕೆಂದುಕೊಂಡರೂ ಎಲ್ಲರ ಸಹಾಯದಿಂದ ಕೆಟ್ಟ ದುರಂತದಿಂದ ಬಚಾವಾಗುತ್ತಾಳೆ. ಆಕೆಯ ಚಾರಿತ್ರ್ಯವಧೆ ಮಾಡುವ ಅವರ ಹುನ್ನಾರವನ್ನು ಶ್ರೀಧರ ಮುರಿಯುತ್ತಾನೆ. ನೆಮ್ಮದಿಯ ನೆಲೆಯನ್ನು ತನ್ನ ಹೃದಯದಲ್ಲಿಯೂ ಕಲ್ಪಿಸಿ ಕೊಡುತ್ತಾನೆ. ಅಷ್ಟಕ್ಕೂ ಆತ ಬೇರಾರೂ ಅಲ್ಲ.. ರತ್ನನ ತಂದೆಯ ಆಪ್ತ ಸ್ನೇಹಿತನ ಮಗ.
ರತ್ನನ ತಂದೆ ಶೇಖರ ಮತ್ತೆ ಮನೆಗೆ ಬಂದರೂ ಆತನನ್ನು ಪೊಲೀಸರು ಹುಡುಕಿ ಬಂದರು ಅಂತ್ಯ ಎಲ್ಲರ ಎಣಿಕೆಗೂ ಮೀರಿದ್ದಾಗಿತ್ತು. ಕುಟುಂಬಕ್ಕೆ ಅಂಟಿಯೂ ಅಂಟದಂತಹ ಶೇಖರ ಮಗಳಿಗೊಂದು ಒಳ್ಳೆಯ ಕುಟುಂಬ ಸಿಕ್ಕಿದ್ದಕ್ಕೆ ಹಾಗೂ ತನ್ನ ಕುಟುಂಬ ಒಡೆಯದೆ ಒಗ್ಗೂಡಿದ್ದಕ್ಕೆ ಸಂತಸಪಟ್ಟನಾದರೂ.. ಆತನಿಲ್ಲದ ಶೂನ್ಯ ಹಾಗೂ ಪರಿಣಾಮಗಳು ಕುಟುಂಬದ ದಿಕ್ಕನ್ನೇ ಬದಲಿಸಿದ್ದಂತೂ ಸತ್ಯ. ಆ ತಲೆಮಾರಿಗಿಲ್ಲದ ನೆಮ್ಮದಿಯ ನೆಲೆ ಮುಂದಿನ ತಲೆಮಾರು ಕಂಡದ್ದು ಭರವಸೆಯನ್ನು ಸೂಚಿಸಿತು.
*********************
ಉತ್ತಮ ಜೀವನ ಮೌಲ್ಯಗಳು : ಕುಟುಂಬದ ನೆಮ್ಮದಿಯ ಹಾಗೂ ಶಾಂತಿಯುತ ಬದುಕಿಗೆ ಜೀವನ ಮೌಲ್ಯಗಳು ಮತ್ತಷ್ಟು ಮೆರುಗು ನೀಡುತ್ತವೆ. ಕಾದಂಬರಿಯಲ್ಲಿ ಅಂತಹ ಹಲವು ಜೀವನ ಮೌಲ್ಯಗಳು ಗಮನಿಸಬಹುದು.
ಜವಾಬ್ದಾರಿ : ಶೇಖರ ತನ್ನ ತಂಗಿಯ ಮದುವೆಯ ಜವಾಬ್ದಾರಿಯನ್ನು ತೀರಿಸಿದನಾದರೂ... ತನ್ನ ಕುಟುಂಬದ ಹೊಣೆಯನ್ನು ಹೊರದೆ ಕಾಣೆಯಾದಾಗ ತಂಗಿ ಗೌರಮ್ಮ ಹಾಗೂ ಆಕೆಯ ಪತಿ ಶ್ರೀಕಂಠಯ್ಯ ಬೇಸರಿಸಿಕೊಳ್ಳದೆ, ಆತನ ಮೇಲೆ ಎಷ್ಟೇ ಕೋಪವಿದ್ದರೂ ಕಮಲಮ್ಮ, ಮಕ್ಕಳು ಹಾಗೂ ಭಾಗಮ್ಮನವರನ್ನು ಪೊರೆಯುತ್ತಾರೆ.
ಶಾಂತಿ ಮತ್ತು ಸಹಕಾರ : ಪೊಲೀಸರು ಶೇಖರನ ಇರುವಿಕೆಯನ್ನು ತಿಳಿಸಿದವರಿಗೆ ಬಹುಮಾನ ಘೋಷಿಸಿದ್ದರಾದರೂ.. ಊರಿನವರಾರೂ ಅಂತಹ ದುಸ್ಸಾಹಸಕ್ಕೆ ಕೈ ಹಾಕುವುದಿಲ್ಲ. ಶೇಖರ ಯುಗಾದಿಯಲ್ಲಿ ಊರಿಗೆ ಬಂದಿದ್ದಾಗ ದೇವಸ್ಥಾನಕ್ಕೆ ಪತಿ-ಪತ್ನಿಯರು ಹೋಗಿ ಬರುವ ಸಂದರ್ಭದಲ್ಲಿ ಊರಿನವರು ಆಡುವ ಮಾತುಗಳು ಇವು.
"ಈಗ ಈ ಜುಜುಬಿ ಬಹುಮಾನಕ್ಕೆ ಆಸೆಪಟ್ಟು ಶಿವ, ಪಾರ್ವತಿ ಅಂತ ಗಂಡ ಹೆಂಡ್ರನ್ನ ಬ್ಯಾರೆ ಮಾಡು ಅಂತೀಯ ? ಕನಸ್ನಾಗೂ ಅಂತ ಯೋಚ್ನೆ ಮಾಡಬ್ಯಾಡ್ರಿ ಪಾಪ! ಎಲ್ಲಾರಾ ಸುಖವಾಗಿ ಬಾಳಲಿ ಅನ್ನಿ"
"ನಮ್ಮ ಹೆಣ್ಣು ಮಕ್ಕಳಂಗೆ ಅಲ್ಲವಾ ಆಕೇನೂ, ಈ ಊರು ಉಟ್ಟಿದಾಗ್ನಿಂದ ಯಾರೂ ಗಂಡ ಹೆಂಡತಿರನ್ನು ಬ್ಯಾರೆ ಮಾಡಿದೋರಿಲ್ಲ ಕಣಪ್ಪ"
"ನಮ್ಮೂರ ತುಂಬಾ ಇರಾ ಮಾಸ್ತಿಗಲ್ಲುಗಳನ್ನ ನೋಡಿಯಾರಾ ಬುದ್ದಿ ತಿಳಿಬ್ಯಾಡ್ವ ನಾವು "
ಗೌರವ : ಆಫೀಸಿನಲ್ಲಿ ಕುಟುಂಬದಂತೆ ಹೊಂದಿ ಬಾಳುವ ವಾತಾವರಣ. ಅಲ್ಲಿ ಪ್ಯೂನ್ ಬಸಯ್ಯ ಎಲ್ಲರೂ ಹೊರಟು ಹೋದರೂ ಅವಸರಿಸದೇ ರತ್ನ ಕೆಲಸ ಮುಗಿಸುವವರೆಗೂ ಅವಳ ಅರಿವಿಗೂ ಬರದಂತೆ, ತೊಂದರೆಯಾಗದಂತೆ ಕಾದು ಕುಳಿತಿರುತ್ತಿದ್ದನು.
"ಸೀತಮ್ಮನವರಿಗೆ ಕಾವಲು ಕುಳಿತ ಹನುಮಪ್ಪನಂಗೆ ಇಲ್ಲೇ ಕುಂತಿದೀನಿ ಕಣ್ರವ್ವ" ಎನ್ನುತ್ತಿದ್ದ.
ಪ್ರಾಮಾಣಿಕತೆ : ಊರಿನಲ್ಲಿ ಕಾಮಣ್ಣನ ಹಬ್ಬಕ್ಕೆಂದು ಎಲ್ಲರ ಮನೆಯ ಮರದ ಸಾಮಗ್ರಿಗಳನ್ನು ತೆಗೆದುಕೊಂಡು ಹೋಗುವಾಗ ಕಮಲಮ್ಮನ ಮನೆಯ ಬೆಂಚನ್ನು ಕದ್ದುಕೊಂಡು ಹೋಗಿದ್ದ ಮಕ್ಕಳ ಮನ ಪರಿವರ್ತಿಸಿ ಪಟೇಲರ ಮನೆಯ ಶಾಮಣ್ಣ ಎಲ್ಲರ ಮುರುಕು ಸಾಮಗ್ರಿಗಳನ್ನು ರಿಪೇರಿ ಮಾಡಿಸಿ ಅವರವರ ಮನೆಗೆ ಕಳುಹಿಸುತ್ತಾರೆ. ಇನ್ನೆಂದೂ ಹಾಗೆ ಕಳ್ಳತನ ಮಾಡದಂತೆ, ಕೇಳಿ ಪಡೆಯಬೇಕೆಂದು ಪ್ರಾಮಾಣಿಕತೆಯ ಪಾಠ ಕಲಿಸಿದ್ದನ್ನು ಹಾಗೂ ನಮ್ಮ ಮನೆಯಂತೆಯೇ ಎಲ್ಲರ ಕುಟುಂಬವೂ ಎಂದು ಹೇಳಿಕೊಟ್ಟದ್ದನ್ನು ಇಲ್ಲಿ ಗಮನಿಸಬಹುದು.
ದಯೆ : ಊರಿನಲ್ಲಿ ಕಷ್ಟಪಡುವ ಹೆಣ್ಣಾದ ಕಮಲಮ್ಮ ಹಾಗೂ ಅಷ್ಟೇ ತಿಳುವಳಿಕೆಯುಳ್ಳ ರತ್ನನೆಂದರೆ ಎಲ್ಲರಿಗೂ ಪ್ರೀತಿ ಜೊತೆಗೆ ಆಕೆಗೆ ದಯೆ ತೋರುತ್ತಿದ್ದರು. ಯುಗಾದಿಯಲ್ಲಿ ತನ್ನ ತಮ್ಮ ತಂದಿದ್ದ ಎರಡು ಮುತ್ತಿನ ಸರದಲ್ಲಿ ಒಂದನ್ನು ತನ್ನ ಮಗಳಿಗೆ ಇಟ್ಟುಕೊಂಡು ಇನ್ನೊಂದನ್ನು ಉಟ್ಟು-ತೊಟ್ಟು ಮಾಡಲಿ ಎಂದು ರತ್ನನಿಗೊಂದು ಸರ ಕೊಟ್ಟ ರಾಜಮ್ಮ ಯಾವುದೇ ರಕ್ತ ಸಂಬಂಧವಿಲ್ಲದಿದ್ದರೂ ದಯೆ ತೋರಿ ಆಪ್ತವಾಗುವ ಚಿತ್ರಣವಿಲ್ಲಿದೆ.
ಸಮಗ್ರತೆ : ಎಲ್ಲರನ್ನೂ ತನ್ನ ಕುಟುಂಬದಂತೆ ಕಾಣುವ ರತ್ನ, ತವರು ಹಾಗೂ ಗಂಡನ ಮನೆಯಲ್ಲಿ ಭೇದ ತೋರದೆ.. ತನ್ನ ಮಾವ ಮದುವೆಯ ಸಂದರ್ಭದಲ್ಲಿ ಒಡವೆಗಳನ್ನು ತೋರಿ ಇವು ಆಗುತ್ತವಾ ಎಂದು ಕೇಳಿದಾಗ "ನಾನು ಇಂಥ ಜಡ ವಸ್ತುಗಳಿಗೆಲ್ಲ ಆಸೆಪಡುವವಳೇ ಅಲ್ಲ ಮಾವನವರೆ, ನಮಗೆ ಬೇಕಾದ್ದು ನಿಮ್ಮ ಆಶೀರ್ವಾದ ಅಷ್ಟೇ" ಎನ್ನುತ್ತಾಳೆ.
ಪ್ರೀತ್ಯಾದರ : ಮನೆ ಕೆಲಸಕ್ಕೆಂದು ಬರುವ ಮಾದೇವಿ ರತ್ನಳಿಗೆ ಇಷ್ಟವೆಂದು ಆಯ್ದ ತರುವ ಕೆಂಡಸಂಪಿಗೆ ಅವರಿಬ್ಬರ ನಡುವಿನ ಪ್ರೀತ್ಯಾದರದ ಬಾಂಧವ್ಯವನ್ನು ತೋರುವ ಸಣ್ಣ ಉದಾಹರಣೆ. ನಾಣಿ ಹಾಗೂ ಸುಂದರಮ್ಮನಿಂದ ತೊಂದರೆಯಾದಾಗ ಮಗಳಂತೆ ತನ್ನ ಮನೆಯಲ್ಲಿ ಆಶ್ರಯ ಕೊಟ್ಟು ಧೈರ್ಯ ತುಂಬಿದ ಲಲಿತಮ್ಮನ ಆಪ್ತತೆಯನ್ನು ಕಾಣಬಹುದು.
*********************
ನನ್ನ ಅಭಿಪ್ರಾಯ :
ತಾಯಿಯಿಂದ ಕಲಿಯುವಂತೆ ಮಕ್ಕಳು ತಂದೆಯಿಂದಲೂ ಕಲಿಯುತ್ತಾರೆ. ಅಲ್ಲದೆ, ಕುಟುಂಬದ ಆಧಾರಸ್ತಂಭವಾಗಬೇಕಾಗಿರುವ ಯಜಮಾನ ಎಲ್ಲರಿಗೂ ಮಾದರಿಯಾಗಬೇಕಾಗಿರುತ್ತದೆ. ಇಲ್ಲಿ ಅಂತಹ ಭದ್ರ ಅಡಿಪಾಯವಾಗಬೇಕಾಗಿದ್ದ ಶೇಖರ ತಾನು ಮಾಡಿದ ತಪ್ಪಿಗೆ ಶಿಕ್ಷೆ ಅನುಭವಿಸಿ, ಹೊರಬಂದು ಬದುಕು ಕಟ್ಟಿಕೊಂಡಿದ್ದರೆ ಪ್ರಾಮಾಣಿಕತೆಯನ್ನು ತೋರಬಹುದಿತ್ತು.
ಶೇಖರ ತನ್ನ ತಂಗಿಯ ವಿವಾಹದ ಸಂದರ್ಭದಲ್ಲಿ ಹಣ ಕದ್ದ ಸಮರ್ಥನೆಯನ್ನು ಮಾಡಿಕೊಂಡರೂ.. ಮುಂದೆ ಆತನ ಬಳಿ ಹಣ ಸೇರಿದಾಗ ತನ್ನ ಬದುಕನ್ನು ಬದಲಾಯಿಸಿಕೊಳ್ಳುವ ಅವಕಾಶವಿದ್ದರೂ ತಲೆಮರೆಸಿಕೊಂಡದ್ದು ಆತ ಜವಾಬ್ದಾರಿಯಿಂದ ಓಡಿ ಹೋದನೇ ಎನ್ನಿಸುವಂತಾಗುತ್ತದೆ. ಪುಣ್ಯಕ್ಕೆ ಇಲ್ಲಿ ಮಕ್ಕಳು ತಂದೆಯಂತಾಗಲಿಲ್ಲ.
ಭಾಗಮ್ಮ ಮಗನಿಗೆ ಬುದ್ಧಿ ಹೇಳಬಹುದಾಗಿದ್ದರೂ.. ಅವರು ಬುದ್ಧಿ ಹೇಳದೇ ಉಳಿದದ್ದು ಶೇಖರನ ಮನಸ್ಥಿತಿ ಬದಲಾಗದೇ ಇರುವುದಕ್ಕೆ ಕಾರಣವಾಗಿರಬಹುದು.
ತಂದೆಯ ಶ್ರೀರಕ್ಷೆ ಅಥವಾ ಬೆಂಬಲ ಇದ್ದಿದ್ದರೆ ರತ್ನಳಿಗೆ ಸುಂದರಮ್ಮ ಹಾಗೂ ನಾಣಿಯಿಂದ ಕಿರುಕುಳ ಉಂಟಾಗುತ್ತಿರಲಿಲ್ಲ. ಒಂದು ಕುಟುಂಬವನ್ನು ಕಟ್ಟಲು ಕುಟಿಲತೆಯಿಂದ ಸಾಧ್ಯವಿಲ್ಲ. ಬದಲಾಗಿ ಅದನ್ನು ಪ್ರೀತಿಯಿಂದ ಸಾಧಿಸಬೇಕು. ಇಲ್ಲಿ ನಾಣಿ ಹಾಗೂ ಶ್ರೀಧರನ ಸ್ವಭಾವದ ವ್ಯತ್ಯಾಸಗಳನ್ನು ಗಮನಿಸಿದಾಗ ಇದು ಅರಿವಾಗುತ್ತದೆ.
ಒಂದು ಕುಟುಂಬದ ಏಳಿಗೆಯನ್ನು ಸಹಿಸದ ಮನಸ್ಥಿತಿಯವರು ಬೆರಳಿಣಿಕೆಯಷ್ಟಿರುತ್ತಾರೆ. ಅದಕ್ಕೆ ನಾಗವೇಣಿ ಉದಾಹರಣೆ. ಇಲ್ಲಿ ಅವಳ ಒಡೆದ ಸಂಸಾರ ಅವಳ ಮನಸ್ಥಿತಿಯನ್ನು ರೂಪಿಸಿರುವುದನ್ನು ಕಾಣಬಹುದು. ತನಗಿಲ್ಲದ ನೆಮ್ಮದಿ ಮತ್ತೊಬ್ಬರಿಗೆ ಇರುವುದನ್ನು ಕಂಡು ಕೇಡು ಮಾಡಲು ಬಯಸುವ ಇಂತಹವರೂ ಇರುತ್ತಾರೆ. ಆಗ ಅಂತಹವರಿಗೆ ಅವರ ಭಾಷೆಯಲ್ಲಿಯೇ ತಕ್ಕ ಉತ್ತರ ನೀಡುವ ಭಾಗಮ್ಮ ಕುಟುಂಬದ ನೆಮ್ಮದಿಗಾಗಿ ಕಠಿಣವಾಗಿ ನಡೆದುಕೊಳ್ಳುವ ಸಂದರ್ಭವಿದ್ದರೆ ಕಠಿಣವಾಗಬೇಕು ಎನ್ನುವ ಸಂದೇಶವನ್ನು ನೀಡುತ್ತಾರೆ.
ಇಲ್ಲಿ ನನಗೆ ಅತ್ತೆ ಸೊಸೆಯರ ಜಟಾಪಟಿಗಳು, ಅತ್ತಿಗೆ ನಾದಿನಿಯರ ವೈಮನಸುಗಳು ಅಥವಾ ತಮ್ಮ ದಾಕ್ಷಿಣ್ಯದಲ್ಲಿ ಅವರು ಬದುಕುತ್ತಿದ್ದಾರೆ ಎನ್ನುವ ಗೌರಮ್ಮ ದಂಪತಿಗಳ ಧೋರಣೆ ಕಾಣಲಿಲ್ಲ. ಇದು ಕಾದಂಬರಿಯ ಧನಾತ್ಮಕ ಅಂಶ.
ಇಲ್ಲಿ ಕುಟುಂಬದಲ್ಲಿ ಮಾತ್ರವಲ್ಲದೆ .. ಊರಿನವರೂ ಕಮಲಮ್ಮ ಹಾಗೂ ಮಕ್ಕಳನ್ನು ತಮ್ಮ ಮನೆಯವರಂತೆ ಕಾಣುವ ಬಾಂಧವ್ಯ ಇಡೀ ಊರು ಒಂದು ಕುಟುಂಬ ಎಂಬ ಮನೋಭಾವದಲ್ಲಿ ಬಾಳುವ ಸಾಮರಸ್ಯವನ್ನು ತೋರಿದ್ದು ಅನುಕರಣೀಯ.
"ಸಂಸಾರ ಗುಟ್ಟು ವ್ಯಾಧಿ ರಟ್ಟು" ಎಂದು ಅರಿತಿದ್ದ ಕಮಲಮ್ಮ ಎಂದಿಗೂ ಇತರರಿಗೆ ತನ್ನ ಕಷ್ಟಗಳನ್ನು ಹಂಚಿಕೊಂಡವಲ್ಲ. ಆದರೂ ಅವಳ ಪರಿಸ್ಥಿತಿಯನ್ನರಿತು ಸಹಾಯಕ್ಕೆ ನಿಂತವರನ್ನು ಇಲ್ಲಿ ಕಾಣಬಹುದಾಗಿದೆ.
ಎಷ್ಟೇ ಕಷ್ಟ ತೊಂದರೆಗಳು ಬಂದರೂ.. ಎಲ್ಲವನ್ನು ಎದುರಿಸಿ ತನ್ನ ಕುಟುಂಬವನ್ನು ಕಟ್ಟಿಕೊಳ್ಳುವ ಪ್ರಯತ್ನದಲ್ಲಿ, ಎಲ್ಲರನ್ನೂ ನೆಮ್ಮದಿಯ ನೆಲೆಯಲ್ಲಿ ಕಾಪಿಡುವ ಪ್ರಯತ್ನದಲ್ಲಿ ರತ್ನ ಸಫಲಳಾಗುವ ಕಾದಂಬರಿ ಸದಾ ತನ್ನವರಿಗಾಗಿ ಮಿಡಿಯುತ್ತಾ, ತನ್ನ ಕಷ್ಟಗಳನ್ನು ಸಹಿಸಿ ಸಿಹಿಯನ್ನಷ್ಟೇ ನೀಡುವ ಜೇನಿನಂತಹ ಬದುಕಿನ ಜೇನುಗೂಡನ್ನೇ ನೆನಪಿಸಿತು. ರತ್ನಳ ವಿವಾಹ ಎಲ್ಲರ ಒಟ್ಟಾಗುವಿಕೆಯ ಆನಂದವನ್ನು, ನೆಮ್ಮದಿಯನ್ನು ಕಟ್ಟಿಕೊಟ್ಟಿತು. ಚೆಂದದ ಕಾದಂಬರಿಯ ಸುಂದರ ಓದು.
~ವಿಭಾ ವಿಶ್ವನಾಥ್
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ