ಭಾನುವಾರ, ಏಪ್ರಿಲ್ 26, 2026

ಮದುವೆಯ ಆಲ್ಬಮ್ (ಪುಸ್ತಕ ಯಾನ - 409)


ಪುಸ್ತಕದ ಶೀರ್ಷಿಕೆ : ಮದುವೆಯ ಆಲ್ಬಮ್ 

ಲೇಖಕರು : ಗಿರೀಶ ಕಾರ್ನಾಡ 

ಪ್ರಕಾಶಕರು : ಮನೋಹರ ಗ್ರಂಥ ಮಾಲಾ

ಪ್ರಥಮ ಮುದ್ರಣ : 2017

ಪುಟಗಳು : 100

ಬೆಲೆ : 90 ರೂ.


ಗಿರೀಶ್ ಕಾರ್ನಾಡರು ಸಮಕಾಲೀನ ಜೀವನದ ಬಗ್ಗೆ ಬರೆದ ನಾಟಕ ಮದುವೆಯ ಆಲ್ಬಮ್. ಈ ನಾಟಕದಲ್ಲಿ ದಾಂಪತ್ಯಗಳ ಹಾಗೂ ವಿವಾಹಗಳ ಚಿತ್ರಣ ಕಾಣಿಸುತ್ತದೆ. 


ಅಪ್ಪ ಹಾಗೂ ಆಯಿ ಇರುವ ಕುಟುಂಬದ ಮೂವರು ಮಕ್ಕಳು ಹೇಮಾ, ರೋಹಿತ ಹಾಗೂ ವಿದುಲಾಳ ಜೀವನವನ್ನು ಇಲ್ಲಿ ಕಾಣಬಹುದಾಗಿದೆ. ನಾಟಕದಲ್ಲಿ ಪ್ರಮುಖವಾಗಿ ವಿದುಲಾಳ ವಿವಾಹದ ಸಂದರ್ಭದಲ್ಲಿ ಚಿತ್ರಣವಿದೆ. 9 ದೃಶ್ಯಗಳ ಈ ನಾಟಕದಲ್ಲಿ ಒಂದನೆಯ ಹಾಗೂ ಐದನೆಯ ದೃಶ್ಯಗಳ ಘಟನೆಗಳು ನಾಟಕದ ಉಳಿದ ಘಟನೆಗಳಿಗಿಂತ ಮೂರು ವರ್ಷ ನಂತರ ನಡೆಯುತ್ತವೆ. 


ವಿದುಲಾ ನಾಡಕರ್ಣಿ ಮಾಡುತ್ತಿದ್ದ ವಿಡಿಯೋವನ್ನು ರೋಹಿತ ರೆಕಾರ್ಡ್ ಮಾಡುತ್ತಿದ್ದ. ಆಕೆ ತನ್ನ ಹಾಗೂ ತನ್ನ ಕುಟುಂಬದ ಪರಿಚಯ ಮಾಡಿಕೊಡುತ್ತಿದ್ದಳು. ತಂದೆ ಸರ್ಕಾರಿ ಸರ್ವಿಸ್ ನಲ್ಲಿ ಡಾಕ್ಟರ್ ಆಗಿದ್ದವರು. ಹೇಮಾರಿಗೆ ಈಗಾಗಲೇ ವಿವಾಹವಾಗಿದೆ. ಪ್ರೀತಿಸುವವನೊಡನೆಯೇ ವಿವಾಹವಾಗಿ ಆಸ್ಟ್ರೇಲಿಯಾದಲ್ಲಿ ಇರುತ್ತಾಳೆ. ರೋಹಿತ ಸಾಹಿತಿ ಹಾಗೂ ಟೆಲಿವಿಷನ್ ನ ಸ್ಕ್ರಿಪ್ಟ್ ಬರೆಯುತ್ತಾನೆ. ವಿದುಲಾಳಿಗೆ ನೌಕರಿ ಮಾಡುವ ಇಚ್ಛೆಯಿಲ್ಲ. ಹೀಗೆ ತನ್ನ ಕುಟುಂಬದ ಹಲವಾರು ವಿಚಾರಗಳನ್ನು ಟೇಪ್ ನಲ್ಲಿ ಹೇಳುತ್ತಾಳಾದರೂ.. ಯಾವುದನ್ನು ಹೇಳಬೇಕು, ಯಾವುದನ್ನು ಹೇಳಬಾರದು ಎಂದು ಮುಚ್ಚುಮರೆ ಇಲ್ಲದೆಯೇ ಮಾತನಾಡುತ್ತಾಳೆ. ರೋಹಿತನ ದೃಷ್ಟಿಯಲ್ಲಿ ಅವಳು ಮುಗ್ದೆ ಹಾಗೂ ನಾಚುಬುರುಕಿ.


ನಂತರ ರೋಹಿತನ ನಿರೂಪಣೆಯಲ್ಲಿ ಪ್ರತಿಭಾಳಿಗೆ ಆತ ವಿವರಿಸುತ್ತಿರುವುದು ಮೂರು ವರ್ಷದ ನಂತರ ವಿದುಲಾಳ ವಿವಾಹದ ಸಂದರ್ಭವನ್ನು. ಈಗ ಆತನ ತಂದೆ ಸತ್ತು, ತಾಯಿ ಒಂಟಿಯಾಗಿದ್ದಾಳೆ. ವಿಮಲಾ ವಿವಾಹವಾಗಿ ಹೋದವಳು ಮತ್ತೆ ಬಂದಿಲ್ಲ. ಆದರೆ ತಾಯಿ ಹಾಗೂ ಅಕ್ಕನ ಜೊತೆಗೆ ಸಂಪರ್ಕದಲ್ಲಿ ಇದ್ದಾಳೆ. ರೋಹಿತನಿಗೂ ವಿವಾಹವಾಗಿದೆ. 


ವಿದುಲಾಳ ವಿವಾಹದ ಸಂದರ್ಭದಲ್ಲಿ ಹೇಮಾ ಅಲ್ಲಿಗೆ ಬಂದಿದ್ದಾಗ ಸೀರೆ ಆಯ್ಕೆ ಮಾಡುವಾಗಲೂ ತನಗೆ ಒಪ್ಪುವ ಬಣ್ಣದ ಸೀರೆಯನ್ನು ಆಯ್ಕೆ ಮಾಡಿಕೊಳ್ಳಲು ಬರದಿರುವ ಸಂದರ್ಭ, ತಾಯಿ ಹಾಗೂ ಅಡುಗೆ ಮಾಡುತ್ತಿದ್ದ ರಾಧಾಬಾಯಿಯವರ ನಡುವೆ ಆಗಾಗ ನಡೆಯುವ ರಸಕಸಿಗಳು, ವಿದುಲಾಳ ಬಳಿಯಿಂದ ಪಕ್ಕದ ಮನೆಯ ಹುಡುಗ ವಿವಾನ್ ಕೊಂಡು ಹೋಗುವ ಪುಸ್ತಕಗಳು. ಆದರೆ, ಆತ ಬರೆದ ಪತ್ರಗಳು ಹೇಮಾಳನ್ನು ಉದ್ದೇಶಿಸಿ ಇರುತ್ತಿರುವ ಬಗೆ, ಅದಕ್ಕೆ ಹೇಮಾಳ ಪ್ರತಿಕ್ರಿಯೆ ಹೀಗೆ ಎಲ್ಲವೂ ಸಂಭಾಷಣೆಯಲ್ಲಿ ಕಾಣುತ್ತಾ ಹೋಗುತ್ತವೆ. 


ಹೇಮಾಳ ಸಂಸಾರದ ಚರ್ಚೆ ಬಂದಾಗ.. ಆಕೆಯ ವಿವಾಹದ ಮುಂದಿನ ದಿನಗಳು ಹಾಗೂ ಈಗಿನ ದಿನಗಳನ್ನು ಸೂಕ್ಷ್ಮವಾಗಿ ತೆರೆದಿಟ್ಟಿವೆ. ಆ ಮಾತುಕತೆಗಳು ಅಲ್ಲಲ್ಲಿಗೆ ನಿಂತು ಹೋಗುತ್ತವೆ. ಈಗ ಯಾವುದನ್ನು ಬದಲಾಯಿಸುವಂತಿರುವುದಿಲ್ಲವಲ್ಲ. 


ರೋಹಿತನ ಗರ್ಲ್ ಫ್ರೆಂಡ್ ಇಸಬೆಲ್ ಎಂಬುದು ವಿದುಲಾಳಿಗೆ ಗೊತ್ತಿತ್ತು. ಆ ವಿಚಾರ ಹೇಮಾಳಿಗೆ ತಿಳಿದಾಗ ಆಕೆಯ ಪ್ರತಿಕ್ರಿಯೆ ಹೇಗಿತ್ತು..? ರೋಹಿತನಿಗೆ ತಪಸ್ಯಾಳನ್ನು ವಿವಾಹ ಮಾಡಿಕೊಳ್ಳುವ ಪ್ರಸ್ತಾಪ ಬಂದಾಗ ಆತ ಯಾವ ರೀತಿಯಲ್ಲಿ ಪ್ರತಿಕ್ರಿಯಿಸಿದ..? ವಿದುಲಾಳ ವಿವಾಹದ ಹಿಂದಿನ ದಿನಗಳಲ್ಲಿಯೇ ಬಂದ ಶಿರೂರು ದಂಪತಿಗಳು ಹಾಗೂ ಹತ್ತಂಗಡಿ ದಂಪತಿಗಳ ಬಳಿ ಆತನ ವರ್ತನೆ ಹೇಗಿತ್ತು..? ಈಗ ರೋಹಿತ ವಿವಾಹವಾಗಿರುವುದಾದರೂ ಯಾರನ್ನು..?


ತಂದೆ ಗೋಪಾಲ ನಾಡಕರ್ಣಿ ಮಾತನಾಡುವಾಗ ತಮ್ಮ ಕುಟುಂಬದ, ಅದರಲ್ಲಿಯೂ ತನ್ನ ತಮ್ಮ ರಾಮದಾಸ್ ಕುರಿತು ಹೆಚ್ಚಾಗಿಯೇ ಹೆಮ್ಮೆ ಇಟ್ಟುಕೊಂಡಿದ್ದರು. ಆದರೆ ಆಯಿಗೂ ಅದೇ ಹೆಮ್ಮೆಯಿತ್ತೇ..? 


ಅಶ್ವಿನ್ ಪಂಜೆ ಹಾಗೂ ವಿದುಲಾ ಇಬ್ಬರು ವಿಡಿಯೋ ಟೇಪ್ ಗಳಲ್ಲಿ ಒಬ್ಬರನ್ನೊಬ್ಬರು ಪರಿಚಯಿಸಿಕೊಂಡಿದ್ದರು. ಅವರಿಬ್ಬರ ಮುಖಾಮುಖಿಯಾಗಿ ಇಬ್ಬರೂ ಒಪ್ಪುವವರೆಗೂ ಮದುವೆ ನಡೆಯುವುದು ಗ್ಯಾರೆಂಟಿ ಇರುವುದಿಲ್ಲ. ಆದರೆ, ಮದುವೆಗೆ ಬೇಕಾದ ಎಲ್ಲಾ ತಯಾರಿಯಂತೂ ನಡೆದಾಗಿತ್ತು. ಅಶ್ವಿನ್ ಪಾಶ್ಚಾತ್ಯರ ಬೇರೆಲ್ಲಾ ವಿಚಾರಗಳನ್ನು ಒಪ್ಪುವಂತಿದ್ದರೂ ಮದುವೆಯ ವಿಚಾರದಲ್ಲಿ ಆತ ಭಾರತದ ಸಾಂಸಾರಿಕ ದೃಷ್ಟಿಕೋನದಲ್ಲಿಯೇ ಯೋಚಿಸುತ್ತಿದ್ದ. ರೋಹಿತ ವಿದುಲಾಳ ಕುರಿತು ಕೊಟ್ಟ ನೋಟಕ್ಕಿಂತ, ವಿದುಲಾಳ ವ್ಯಕ್ತಿತ್ವದ ಪರಿಚಯ ನಮಗೆ ವಿಭಿನ್ನವಾಗಿಯೇ ಆಗುತ್ತದೆ. ಇಂಟರ್ನೆಟ್ ಕೆಫೆಯ ಆ ಸಂದರ್ಭ ಹೇಗಿತ್ತು..? ಅಶ್ವಿನ್ ಮಾತಿಗೆ ವಿದುಲಾ ನಡೆದುಕೊಂಡ ಪರಿ ಹೇಗಿತ್ತು..?


ವಿದುಲಾ ವಿದೇಶಕ್ಕೆ ಹೋಗುವ ಸಂದರ್ಭದಲ್ಲಿ ಪಾಸ್ ಪೋರ್ಟ್ ಅಗತ್ಯವಿತ್ತು. ಆ ಪಾಸ್ಪೋರ್ಟ್ ಮಾಡಿಸಲು ಬರ್ತ್ ಸರ್ಟಿಫಿಕೇಟ್ ಅಗತ್ಯವಿತ್ತು. ಆದರೆ, ಆ ಬರ್ತ್ ಸರ್ಟಿಫಿಕೇಟ್ ನಲ್ಲಿ ತಂದೆಯ ಹೆಸರಿನ ಜಾಗದಲ್ಲಿ ಇದ್ದದ್ದು ರಾಮ್ ದಾಸ್ ನ ಹೆಸರು. ಈ ವಿಚಾರವನ್ನು ನಾಡಕರ್ಣಿಯವರಿಗೆ ತಿಳಿಸಿದರೇ..? ಆಯಿಯ ಪ್ರತಿಕ್ರಿಯೆ ಹೇಗಿತ್ತು..? ಇದೆಲ್ಲವನ್ನೂ ಸರಿಪಡಿಸಿರುವ ಬಗೆಯಾದರೂ ಹೇಗೆ..?


ರಾಧಾಬಾಯಿಯ ಗತ ಜೀವನದ ಚಿತ್ರಣವೂ ಇಲ್ಲಿ ಬಿಚ್ಚಿಕೊಳ್ಳುತ್ತಾ ಹೋಗುತ್ತದೆ. ಆಕೆ ಹಾಗೂ ಅವಳ ಮಗಳು ಸಾವಿತ್ರಿಯ ಬದುಕು ಹೇಗಿತ್ತು..? ರಾಧಾಬಾಯಿ ತನ್ನ ಮಗಳೊಟ್ಟಿಗೆ ಇರಲಾಗದ ಸಂದರ್ಭ ಸೃಷ್ಟಿಯಾದ ಬಗೆ ಹೇಗೆ..? ರಾಧಾಬಾಯಿಯ ಬದುಕು ಹೇಗಿತ್ತು..?


ವಿವಾನ್ ಗೆ ಹೇಮಾಳ ಮಗನ ವಯಸ್ಸು. ಹೇಮಾಳ ಅತೃಪ್ತ ದಾಂಪತ್ಯದ ನೋಟಗಳು ಇಲ್ಲಿ ವಿವಾನ್ ಪತ್ರ ಕೊಟ್ಟು ಹೋದಾಗ ಹೇಮಾಳ ಆಲೋಚನೆಯಲ್ಲಿ ವ್ಯಕ್ತವಾದರೆ, ರೋಹಿತನ ನಡೆ ಪ್ರೇಮದ ಕಡೆಗಿದ್ದರೂ.. ಅದು ಎಷ್ಟು ಸಫಲವಾಯಿತು ಹಾಗೂ ರೋಹಿತನ ವಿಚಾರಧಾರೆ ಹೇಗಿತ್ತು ಎಂಬುದು ಆತನ ಆಲೋಚನೆಯ ಮೂಲಕ, ವಿದುಲಾ ತಾನು ಅಶ್ವಿನ್ ಹೇಳಿದ ಮಾತುಗಳಿಗೆ ಒಪ್ಪಿಯೇ ಆತನನ್ನು ವಿವಾಹವಾಗುತ್ತಿರುವುದಾಗಿಯೂ.. ಜೊತೆಗೆ ತಾನು ಚಂಚಲ ಮನಸ್ಸಿನವಳಲ್ಲವೆಂದು ಹೇಳುವ ಮಾತಿನಲ್ಲಿ ಆಕೆಯ ಗಟ್ಟಿ ನಿರ್ಧಾರ ಕಾಣುತ್ತದೆ. ಇಲ್ಲಿ ಮೂವರ ಮದುವೆಯೂ ವಿಭಿನ್ನ ರೀತಿಯಲ್ಲಿ ಆಗಿರುವುದನ್ನು ಕಾಣಬಹುದು. 


ಸಂಬಂಧಗಳ ಸಂಕೀರ್ಣತೆಗಳು ಮೇಲೆ ನಾನು ಹೇಳಿರುವುದಕ್ಕಿಂತಲೂ ವಿಭಿನ್ನವಾಗಿಯೂ ಕಾಣಸಿಗುತ್ತವೆ. ಈ ನಾಟಕವನ್ನು ಓದಿದಾಗ ಮತ್ತಷ್ಟು ಒಳನೋಟಗಳು ಹಾಗೂ ಚದುರಿದ ಚಿತ್ರಗಳ ಒಗ್ಗೂಡಿಸುವಿಕೆ ಕಾಣುತ್ತದೆ. ಕಲ್ಪನೆಗೂ ಹಾಗೂ ವಾಸ್ತವತೆಗೂ ಇರುವ ವ್ಯತ್ಯಾಸದ ಅರಿವಾಗುತ್ತದೆ. 


~ವಿಭಾ ವಿಶ್ವನಾಥ್

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ