ಪುಸ್ತಕದ ಶೀರ್ಷಿಕೆ : ಅಕ್ಕಮಹಾದೇವಿ - ಅಕ್ಕ ಕೇಳವ್ವ ನಾನೊಂದು ಕನಸು ಕಂಡೆ
ಲೇಖಕರು : ಸು. ರುದ್ರಮೂರ್ತಿ ಶಾಸ್ತ್ರಿ
ಪ್ರಕಾಶಕರು : ಅಂಕಿತ ಪುಸ್ತಕ
ಪ್ರಥಮ ಮುದ್ರಣ : 2021
ಪುಟಗಳು : 144
ಬೆಲೆ : 150 ರೂ.
150ಕ್ಕೂ ಹೆಚ್ಚು ಪುಸ್ತಕ ರಚಿಸಿರುವ ಸು. ರುದ್ರಮೂರ್ತಿ ಶಾಸ್ತ್ರಿಯವರು ಅಕ್ಕಮಹಾದೇವಿ ಕಾದಂಬರಿಯನ್ನು ಎಂಟು ಅಧ್ಯಾಯಗಳಲ್ಲಿ ರಚಿಸಿದ್ದಾರೆ. ಭಕ್ತಿಸಾಧಕಿಯಾಗಿ, ಶ್ರೇಷ್ಠ ಶಿವಶರಣೆಯಾಗಿ, ಒಳ್ಳೆಯ ವಚನಕಾರ್ತಿಯಾಗಿ, ಅಲ್ಲದೆ ದಿವ್ಯ ಪ್ರೇಮದಿಂದ ಲೌಕಿಕ ಸುಖ-ಭೋಗಗಳನ್ನು ತೊರೆದು ವೈರಾಗ್ಯದ ಹಾದಿಯಲ್ಲಿ ನಡೆದು ಮಹಾವಿರಾಗಿಣಿಯಾಗಿ ದಿಟ್ಟತನದಿಂದ ಹೆಜ್ಜೆ ಇಟ್ಟ ಹೆಣ್ಣಾಗಿ ಬೆರಗು ಹುಟ್ಟಿಸುವ ಅಕ್ಕನ ವ್ಯಕ್ತಿತ್ವ ಸೊಗಸಾಗಿ ಚಿತ್ರಿತವಾಗಿದೆ.
ಅಕ್ಕಮಹಾದೇವಿಯ ಬಾಲ್ಯ, ತಂದೆ-ತಾಯಿ, ವಿವಾಹ ಹೀಗೆ ಹೆಚ್ಚಿನ ವಿಚಾರಗಳು ನಮಗೆ ತಿಳಿದಿದ್ದರೂ.. ಸಂಕ್ಷಿಪ್ತವಾಗಿ ಹೇಳಿ.. ಕಾದಂಬರಿಯಲ್ಲಿ ನನಗೆ ಇಷ್ಟವಾದ ಅಂಶಗಳನ್ನು ಉಲ್ಲೇಖಿಸುತ್ತೇನೆ.
ಇಂದಿನ ಶಿವಮೊಗ್ಗ ಜಿಲ್ಲೆಯ ಉಡುತಡಿ ಎಂಬ ಊರಿನಲ್ಲಿ ನಿರ್ಮಲ ಹಾಗೂ ಸುಮತಿಯರ ಮಗಳಾಗಿ ಜನಿಸಿದ ಮಹಾದೇವಿ ಮಲ್ಲಿಕಾರ್ಜುನನ ಹರಕೆಯಿಂದ ಪರಶಿವನ ವರಪ್ರಸಾದವಾಗಿ ಜನಿಸುತ್ತಾಳೆ.
ಬಾಲ್ಯದಲ್ಲಿಯೇ ಅವಳ ತೇಜಸ್ಸು ಅಕ್ಕಪಕ್ಕದವರನ್ನು ಸೆಳೆಯುವ ಪರಿ ಹಾಗೂ ಶಿವ ಪೂಜೆಗೆ ಕುಳಿತಾಗ, ಅವಳಿಗೆ ವಿಭೂತಿ ಧರಿಸಿದಾಗ ಇಮ್ಮಡಿಯಾಗುತ್ತಿದ್ದ ತೇಜಸ್ಸು ಆಕೆಯಲ್ಲಿ ವಿಶೇಷತೆಯನ್ನು ತುಂಬುತ್ತಿತ್ತು.
ಎದುರು ಮನೆಯ ಗೌರಮ್ಮ ಒಂದು ದಿನ ಹೀಗೆ ಕೇಳುತ್ತಾರೆ. "ಎಲ್ಲರೂ ಗಂಡು ಬೇಕೆಂದು ಹಂಬಲಿಸಿದರೆ ಹಾಗೂ ಗಂಡು ಹುಟ್ಟಿದಾಗ ಸಂಭ್ರಮ ಪಟ್ಟರೆ, ನೀವು ಹೆಣ್ಣು ಮಗುವನ್ನು ಪಡೆದು ಅನಂದ ಪಡುತ್ತಿರುವಿರಿ" ಎಂದಾಗ
ಸುಮತಿ "ಗಂಡು - ಹೆಣ್ಣಿನಲ್ಲಿ ಅಂತಹ ಹೆಚ್ಚುಗಾರಿಕೆ ಇಲ್ಲವೆಂದು.. ಅಲ್ಲದೆ, ಇಂತಹದ್ದೇ ಮಕ್ಕಳಾಗುವುದು ಮುಖ್ಯವಲ್ಲ. ಅವರು ಒಳ್ಳೆಯವರಾಗಿ ಬಾಳಬೇಕೆಂಬುದು ಮುಖ್ಯ." ಎಂದು ಹೇಳುವುದು ತಾಯಿಯ ವಿಶಾಲ ದೃಷ್ಟಿ ಮನೋಭಾವವನ್ನು ಹೇಳುತ್ತದೆ.
ಮಗುವಿನ ಮುದ್ದುಮುಖ ನೋಡಲೆಂದೇ ಜಂಗಮರು ಮತ್ತೆ ಮತ್ತೆ ಬರುತ್ತಿದ್ದರು. ನಿರ್ಮಲ ಸುಮತಿಯರು ಬೇಸರಗೊಳ್ಳದೆ ಅವರ ಸೇವೆ ಮಾಡುವುದೇ ತಮ್ಮ ಅದೃಷ್ಟವೆಂದು ಭಾವಿಸುತ್ತಾರೆ. ಅವರಲ್ಲಿ ಕೆಲವರು ಕಲ್ಯಾಣಕ್ಕೆ ಹೋಗಿ ಬಂದವರು. ಆಗಲೇ ಭಕ್ತಿ ಭಂಡಾರಿ ಬಸವಣ್ಣ, ಜೇಡರ ದಾಸಿಮಯ್ಯನ ವಚನಗಳನ್ನು ಸುಶ್ರಾವ್ಯವಾಗಿ ಹಾಡಿ ಸೆಳೆಯುತ್ತಿದ್ದರು.
ಮೂರು ವರ್ಷ ಕಳೆಯುವಷ್ಟರಲ್ಲಿಯೇ ಮಹಾದೇವಿ ಉಡುತಡಿಯಲ್ಲಿಯೇ ಮನೆಮಾತಾದಳು. ಯಾರು ಬಾಯಲ್ಲಿ ನೋಡಿದರೂ ಇವಳ ಮಾತೇ..!
"ಯಾವ ಮಹಾರಾಣಿಗೆ ತಾನೇ ಈ ಅದೃಷ್ಟವಿದೆ" ಎಂದು ನಿರ್ಮಲ ಹೇಳಿದಾಗ ಸುಮತಿ "ಯಾವ ಮಹಾರಾಣಿ ಪಟ್ಟವೂ ಬೇಡ. ಎಲ್ಲರ ಪ್ರೀತಿಯ ಆಶೀರ್ವಾದಗಳನ್ನು ಪಡೆದು ನೂರು ಕಾಲ ಸುಖವಾಗಿ ಬದುಕಿದ್ದರೆ ಸಾಕು" ಎನ್ನುತ್ತಾಳೆ.
ಮನೆಯ ಪಕ್ಕದಲ್ಲಿ ಇದ್ದ ಗೆಳತಿಯರು ಗೌರಿ ಹಾಗೂ ಸರಸ್ವತಿಯರ ಜೊತೆಗೆ ಮಹಾದೇವಿಯ ಸ್ನೇಹ ಸಾಗುತ್ತಿತ್ತು. ಗೌರಿಯ ವಿವಾಹ ನಿಶ್ಚಯವಾಗಿದ್ದಾಗ.. ಗೆಳತಿಯರಲ್ಲಿ ಮದುವೆಯ ಮಾತು ಬಂದಾಗ ಮಹಾದೇವಿ ಚೆನ್ನಮಲ್ಲಿಕಾರ್ಜುನನಿಗೆ ಮಾತ್ರವೇ ನಾನು ಒಲಿಯುವುದು ಎಂದು ನಿಶ್ಚಯವಾಗಿದ್ದಳು. ಆಗ ಗೆಳತಿಯರು ಭಗವಂತನನ್ನೇ ಪತಿಯೆಂದು ಭ್ರಮಿಸುವುದು ಅರ್ಥಹೀನ ಎಂದರೂ.. ಅದು ಮಹಾದೇವಿಗೆ ಒಪ್ಪಿತವಾಗಿರಲಿಲ್ಲ.
ಶಿವಪುತ್ರಪ್ಪನ ಬಳಿ ಮೊದಲ ಶಿಕ್ಷಣ ಪಡೆದುಕೊಂಡ ನಂತರದ ದಿನಗಳಲ್ಲಿ ಮಹಾದೇವಿಯ ಜ್ಞಾನಭಂಡಾರ ಮತ್ತಷ್ಟು ಹೆಚ್ಚಿದ್ದು ಗುರುಲಿಂಗ ದೇವರಿಂದ. ಆಕೆ ಲೌಕಿಕ ಬದುಕಿಗಲ್ಲ, ಪಾರಮಾರ್ಥಕ್ಕೆ ಎಂಬುದು ಅವರಿಗೆ ಎಂದು ಅರಿವಾಗಿತ್ತು. ಅವರ ಸಲಹೆಯಂತೆಯೇ ಮಗಳ ಮದುವೆಯ ವಿಷಯದಲ್ಲಿ ನಿರ್ಮಲ ಸುಮತಿಯರು ತಾತ್ಕಾಲಿಕವಾಗಿ ತಟಸ್ಥರಾಗಿದ್ದರು.
ಗೆಳತಿಯರ ಜೊತೆ ಮನೆಯಲ್ಲಿಯೇ ಇರುವಾಗ ಕೌಶಿಕ ರಾಜ ವೈಹಾಳಿ ಹೊರಟಿದ್ದ. ರಾಜ ಪರಿವಾರದ ಮೆರವಣಿಗೆ ಅದೇ ಬೀದಿಯಲ್ಲಿ ಬರುತ್ತಿರುವ ಸಂದರ್ಭದಲ್ಲಿ ಗೆಳತಿಯರ ಒತ್ತಾಯಕ್ಕಾಗಿ ಹೊರಬಂದ ಮಹಾದೇವಿಯ ಚೆಲುವು ಕೌಶಿಕನನ್ನು ಸೆಳೆಯಿತು. ಲಜ್ಜೆ ಇಲ್ಲದ, ಗಾಂಭೀರ್ಯವಿಲ್ಲದ ಆತನ ನಡೆ, ಚಪಲದ ನೋಟ ಮೊದಲ ನೋಟಕ್ಕೆ ಮಹಾದೇವಿಯಲ್ಲಿ ಅಸಹ್ಯ ಹುಟ್ಟಿಸಿತು. ಇದು ಇಕ್ಕಟ್ಟಿಗೆ ಸಿಕ್ಕಿಸಿದ್ದು ಮಂತ್ರಿ ಮಹಾಬಲಯ್ಯನವರನ್ನು. ಇತ್ತ ರಾಜನ ಆಸೆಗೆ ಬೇಡವೆಂದು ಯಾರು ಹೇಳಿದರೂ ಆತ ಕೇಳಲಿಲ್ಲ. ರಾಜವಾಕ್ಯ ಪಾಲಿಸಲು ಮಹಾಬಲಯ್ಯನವರು ಮಹಾದೇವಿಯ ಮನೆಗೆ ಬಂದಾಗ ಶಿವಭಕ್ತರಾದ ಅವರನ್ನು ಒಲಿಸಲು ಮಾಡಿದ ಪ್ರಯತ್ನವೆಲ್ಲ ನಿಷ್ಪಲವಾಯಿತು. ಬಲವಂತವಾಗಿ ಇನ್ನೇನು ಆತ ಮಹಾದೇವಿಯನ್ನು ಪಡೆಯುತ್ತಾನೆ ಎನ್ನುವ ಚಿಂತೆ ಕಾಡುತ್ತಿದ್ದಾಗಲೇ.. ಮಹಾದೇವಿಯೇ ಚಿಂತೆಯನ್ನು ಪರಿಹರಿಸಿದಳು.
ಮಹಾದೇವಿ ಕೌಶಿಕನನ್ನು ಮದುವೆಯಾಗಿದ್ದು ಒಂದು ನಿಬಂಧನೆಯೊಂದಿಗೆ. ಅದಾದ ಮೂರು ತಿಂಗಳ ಕಾಲ ಅವಳ ವ್ರತ. ಆತನ ಮೂರು ತಪ್ಪನ್ನು ಆಯ್ಕೆ ಕ್ಷಮಿಸಿದರೂ.. ಅರಮನೆಯನ್ನು, ಎಲ್ಲವನ್ನೂ ತ್ಯಜಿಸಿ ಕೇವಲ ತನ್ನ ನೀಳ ಕೇಶರಾಶಿಯನ್ನೇ ವಸ್ತ್ರದಂತೆ ಮುಚ್ಚಿ ಹೊರ ನಡೆದಳು.
ಅಮೇಧ್ಯದ ಮಡಿಕೆ, ಮೂತ್ರದ ಕುಡಿಕೆ,
ಎಲುವಿನ ತಡಿಕೆ, ಕೀವಿನ ಹಡಿಕೆ -
ಸುಡಲೀ ದೇಹವ; ಒಡಲುವಿಡಿದು ಕೆಡದಿರು ಚೆನ್ನಮಲ್ಲಿಕಾರ್ಜುನನರಿ ಮರುಳೆ !
ಈ ದಿಟ್ಟ ನಡೆ ಕೇವಲ ಕೌಶಿಕನಿಗೆ ಮಾತ್ರವಲ್ಲದೆ, ಮಹಾಬಲಯ್ಯ, ನಿರ್ಮಲ, ಸುಮತಿ, ಊರಿನ ಜನರು ಎಲ್ಲರಿಗೂ ದಿಗ್ಭ್ರಮೆ ಹುಟ್ಟಿಸಿತ್ತು. ವಸ್ತ್ರ ತ್ಯಾಗದ ಕುರಿತು ಹಲವರಿಗೆ ಅಸಮಾಧಾನವಾಗಿತ್ತು. ಅದು ತಾನೇ ಮಾಡಿದ ನಿರ್ಧಾರ ಹಾಗೂ ಭೂಮಿಗೆ ಬಂದ ಸಹಜ ರೂಪದಲ್ಲೇ ನನ್ನ ಪ್ರಿಯಕರ ಚೆನ್ನಮಲ್ಲಿಕಾರ್ಜುನನ ಬಳಿಗೆ ಹೋಗುತ್ತೇನೆ ಎಂದ ಅಕ್ಕನ ಮಾತು ಎಲ್ಲರನ್ನು ವಿಧಿಯಿಲ್ಲದೆ ಸುಮ್ಮನಿರುವಂತೆ ಮಾಡಿತು. ಅವಳ ಈ ವಿಚಿತ್ರ ನಿರ್ಧಾರ ಎಲ್ಲರಿಗೂ ಆಘಾತವನ್ನು ಉಂಟು ಮಾಡಿದ್ದು ಹೌದು.
ಗಿರಿಯಲಲ್ಲದೆ ಹುಲ್ಲು ಮೊರಡಿಯಲ್ಲಾಡುವುದೆ ನವಿಲು
ಕೊಳಕಲ್ಲದೆ ಕಿರುವಳ್ಳಕ್ಕೆಳಸುವುದೇ ಹಂಸೆ?
ಮಾಮರ ತಳಿತಲ್ಲದೆ ಸರಗೈವುದೆ ಕೋಗಿಲೆ?
ಪರಿಮಳವಿಲ್ಲದ ಪುಷ್ಪಕ್ಕೆಳೆಸುವುದೇ ಭ್ರಮರ?
ಎನ್ನ ದೇವ ಚೆನ್ನಮಲ್ಲಿಕಾರ್ಜುನಂಗಲ್ಲದೆ
ಅನ್ಯಕ್ಕೆಳೆಸುವುದೇ ಎನ್ನ ಮನ?
ಕೇಳಿರೇ ಕೆಳದಿಯರಿರಾ !
ಎನ್ನುತ್ತಾ ಹೊರಟವಳಿಗೆ ತಂದೆ-ತಾಯಿಗಳ ದುಃಖ, ವಾತ್ಸಲ್ಯದ ಸೆಳೆತ, ಗೆಳತಿಯರ ಸ್ನೇಹ, ಮಮಕಾರ, ಊರವರ ಅಕ್ಕರೆ ಇದಾವುದು ಅಲುಗಾಡಿಸಲಿಲ್ಲ. ಊರನ್ನು ದಾಟಿ ಮುಂದೆ ಹೊರಟಾಗ ತನ್ನ ಆರಾಧ್ಯ ದೈವದ ನೆಲೆ ಇರುವ ಶ್ರೀಶೈಲದ ಕಡೆಗೆ ಹೋಗುವ ಮುನ್ನ ಬಸವಣ್ಣ, ಕಲ್ಯಾಣ, ಶಿವಶರಣರ ನೆನಪಾಗಿ ಆ ಮಹನೀಯರನ್ನು ಕಂಡು ಅವರ ಆಶೀರ್ವಾದ ಪಡೆದು ಮುಂದಿನ ಹೆಜ್ಜೆ ಇರುವುದು ಸೂಕ್ತವೆಂದು ನಿರ್ಧರಿಸಿಕೊಂಡಳು.
ಆದರೆ, ಅದು ಸುಗಮವಾದ ದಾರಿಯಲ್ಲ. ಇದರ ಅರ್ಥ ಇದು ಕೇವಲ ದಾರಿಯ ವಿಚಾರವಲ್ಲ. ಹೆಚ್ಚೆಚ್ಚು ಸಂಕಷ್ಟಗಳು ಎದುರಾದವು. ಕ್ರೂರ ಮೃಗಗಳಂತೆ, ಮನುಷ್ಯರ ಕಣ್ಣಿಂದ ಪಾರಾಗುವುದು ಸುಲಭವಾಗಿರಲಿಲ್ಲ. ಇಂತಹ ಸಂದರ್ಭಗಳನ್ನು ಎದುರಿಸಿದ ಮಹಾದೇವಿಯ ಚಿತ್ರಣದ ಜೊತೆಗೆ ಮಹಾದೇವಿ ಅರಮನೆ ತೊರೆದ ನಂತರ ಕೌಶಿಕನ ಮನಸ್ಥಿತಿಯ ಚಿತ್ರಣವೂ ಇಲ್ಲಿದೆ.
ಮಹಾದೇವಿ ತನ್ನ ಮಾತಿನಿಂದಲೇ ಮೃಗ ಸ್ವಭಾವವನ್ನು ತಿದ್ದಿದ ಸಂದರ್ಭವನ್ನು ಓದಿದಾಗ ಬುದ್ದನಿಗೆ ಶರಣಾದ ಅಂಗುಲಿಮಾಲನ ನೆನಪಾಯಿತು.
ಅನುಭವ ಮಂಟಪದ ಮಹಾನೀಯರನ್ನು ಚಿತ್ರಿಸಿರುವ ಪರಿ ಅವರೆಲ್ಲರನ್ನು ಕಣ್ಮುಂದೆ ಬರುವಂತೆ ಮಾಡುತ್ತದೆ. ಆಕೆಗೆ ಅಲ್ಲಿ ಎದುರಾದ ಪರೀಕ್ಷೆಗಳು ಒಂದೆರಡಲ್ಲ. ಅವೆಲ್ಲವನ್ನೂ ದಾಟಿ ಅನುಭವ ಮಂಟಪದಲ್ಲಿ ನಡೆದ ಪ್ರಶ್ನೋತ್ತರಗಳು, ವಚನದ ಮೂಲಕ ನಡೆಯುವ ಅವರುಗಳ ಸಂಭಾಷಣೆಗಳು ಅರ್ಥಪೂರ್ಣವಾಗಿ ಮೂಡಿಬಂದಿದೆ. ಆಯಾ ಸಂದರ್ಭದಲ್ಲಿ ಪೈಪೋಟಿ ಎಂಬಂತೆ ರಚಿತವಾಗಿರುವ ವಚನಗಳ ಸಾರ ಓದಿಯೇ ಅರಿಯಿರಿ.
ಎನ್ನ ಭಕ್ತಿ ಬಸವಣ್ಣನ ಧರ್ಮ,
ಎನ್ನ ಜ್ಞಾನ ಪ್ರಭುದೇವರ ಧರ್ಮ,
ಎನ್ನ ಪರಿಣಾಮ ಚೆನ್ನಬಸವಣ್ಣನ ಧರ್ಮ,
ನಾನು ನಿಮ್ಮೆಲ್ಲರ ಕರುಣದ ಶಿಶು
ಇಂದು ಮಹಾದೇವಿ ಧನ್ಯಭಾವ ಹೊಂದಿದರೆ, ಮಹಾದೇವಿಯಕ್ಕನಿಗೆ ಶರಣು, ಅಕ್ಕಮಹಾದೇವಿಯವರಿಗೆ ಶರಣು ಎಂದು ಶರಣ, ಶರಣೆಯರು ಸಂಭ್ರಮದಿಂದ ಅಪ್ಪಿದ ದೃಶ್ಯ ಕಾಣಬಹುದು.
ಅಕ್ಕಮಹಾದೇವಿ ಅಲ್ಲಿ ಕೆಲಕಾಲವಿದ್ದು ನಂತರ ಶ್ರೀಶೈಲದೆಡೆಗೆ ಸಾಗುವ ಹಾಗೂ ಮಹಾವಿರಾಗಿಣಿಯಾಗುವ ಕಾದಂಬರಿ ಅಕ್ಕನ ಅಜರಾಮರವಾದ ಜೀವಿತಾವಧಿಯನ್ನು ನಮ್ಮ ಕಣ್ಣಿಗೆ ಕಟ್ಟುವಂತೆ ಮಾಡುತ್ತದೆ.
~ವಿಭಾ ವಿಶ್ವನಾಥ್
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ