ಮಹಾಭಾರತವೆನ್ನುವ ಸಾಗರದಲ್ಲಿ ಹಲವಾರು ತಂದೆಯರು ಕಂಡರೂ ನನಗೆ ತಂದೆಯಾಗಿ ಇಷ್ಟವಾಗುವ ಪಾತ್ರ ದ್ರೋಣಾಚಾರ್ಯ.
ಮಹಾಭಾರತದ ಕಥೆಗಳು ಹಲವಾರು ಬಗೆಯಲ್ಲಿ ಚಿತ್ರಿತವಾಗಿವೆ. ಒಂದೊಂದು ಮೂಲಗಳು ಕೆಲವು ಪ್ರಸಂಗಗಳನ್ನು ವಿಭಿನ್ನವಾಗಿ ಹೇಳುತ್ತವೆ. ಮೂಲ ಮಹಾಭಾರತದ ಪ್ರಸಂಗ ಹಾಗೂ ಬೇರೆ ಬೇರೆ ಪುಸ್ತಕಗಳ ಪ್ರಸಂಗಗಳನ್ನು ನನ್ನ ಓದಿನ ಸೀಮಿತ ಪರಿಧಿಯಲ್ಲಿ ಇಲ್ಲಿ ಉಲ್ಲೇಖಿಸಿದ್ದೇನೆ.
ಉಗ್ರ ತಪಸ್ಸಿನಿಂದ ಪಡೆದ ಮಗ ಅಶ್ವತ್ಥಾಮ :
ದ್ರೋಣರು ಉಗ್ರವಾದ ತಪಸ್ಸು ಮಾಡಿ ಪರಮೇಶ್ವರನ ಕೃಪೆಯಿಂದ ಮಗನನ್ನು ಪಡೆದುಕೊಳ್ಳುತ್ತಾರೆ. ಪರಮೇಶ್ವರನ ಅಂಶವೇ ಅಶ್ವತ್ಥಾಮ ಎಂದು ಹೇಳಲಾಗುತ್ತದೆ. ಹುಟ್ಟುವಾಗಲೇ ಮಣಿಯಿಂದ ಅಲಂಕೃತವಾದ ತಲೆ, ಪರಮೇಶ್ವರನ ವಾಹನವಾದ ನಂದಿಯನ್ನು ಹೋಲುವಂತಹ ನಡೆ-ನುಡಿ ಇತ್ತು ಎನ್ನುತ್ತಾರೆ.
ಗರುಡ ಸಮಾನವಾದ ದೇಹಶಕ್ತಿ, ಚಂದ್ರನಿಗೆ ಸರಿಸಮವಾದ ಸೌಮ್ಯತ್ವ, ಸೂಕ್ಷ್ಮವಾದ ಉಗುರು ಹೀಗೆ ಹಲವಾರು ವಿಶೇಷವಾದ ಗುಣಗಳನ್ನು ಹೊಂದಿದ್ದವನು ಅಶ್ವತ್ಥಾಮ. ಅಲ್ಲದೆ, ಆತ ಹುಟ್ಟಿದಾಗ ಕುದುರೆಯಂತೆ ಕೆನೆದಿದ್ದರಿಂದ ಆತನಿಗೆ 'ಅಶ್ವತ್ಥಾಮ ' ಎಂದು ಹೆಸರಿಡಲು ಆಶರೀರವಾಣಿಯಾಯಿತು ಎಂದು ಉಲ್ಲೇಖವಿದೆ. ಈ ಎಲ್ಲಾ ಅಂಶಗಳು ಆತ ದೈವಾಂಶ ಸಂಭೂತ ಎಂಬುದನ್ನು ತೋರುತ್ತವೆ.
ತನ್ನ ಮಗು ವಿಶೇಷ ಶಕ್ತಿಗಳನ್ನು ಹೊಂದುವುದು ತಂದೆಯ ಆಸೆ. ಹಾಗೆ ತನ್ನ ಮಗುವಿನ ಹುಟ್ಟನ್ನೇ ವಿಶೇಷವಾಗಿಸಿದ ತಂದೆ ದ್ರೋಣರು.
******************
ತಂದೆಯೇ ಗುರುವಾಗಿ :
ಅಶ್ವತ್ಥಾಮ ಮುಂದೆ ಪ್ರಾಪ್ತ ವಯಸ್ಕನಾಗುವಷ್ಟರಲ್ಲಿ ವೇದ, ಶಾಸ್ತ್ರ, ಇತಿಹಾಸ, ಪುರಾಣ, ಧನುರ್ವಿದ್ಯೆ ಹೀಗೆ ಎಲ್ಲದರಲ್ಲಿಯೂ ತಂದೆಯಿಂದಲೇ ಶಿಕ್ಷಣ ಪಡೆದು ಪಾರಂಗತನಾಗುತ್ತಾನೆ. ದ್ರೋಣರು ಒಂದು ಹೆಜ್ಜೆ ಮುಂದೆ ಹೋಗಿ ಯಾರಿಗೂ ಕಲಿಸದ ಬ್ರಹ್ಮಾಸ್ತ್ರದ ಪ್ರಯೋಗವನ್ನು ತಮ್ಮ ಮಗನಿಗೆ ಧಾರೆ ಎರೆಯುತ್ತಾರೆ.
ತಂದೆಯೇ ಗುರುವಾಗುವುದು ಸುಲಭವಲ್ಲ. ಮಗ ಎಂಬ ಮಮತೆ ಆತನ ತಪ್ಪಿಗೆ ಶಿಕ್ಷೆ ನೀಡದಿರುವಂತೆ ತಡೆಯಬಹುದು. ಆದರೆ, ಗುರುವಾದಾಗ ಅದನ್ನು ಬದಿಗೊತ್ತಿ ಮಗನ ಅಭ್ಯುದಯದ ಪ್ರತಿಯೊಂದು ಹಂತದಲ್ಲಿಯೂ ಆತನ ಯೋಗಕ್ಷೇಮ ಹಾಗೂ ನೈಪುಣ್ಯತೆಗಾಗಿ ದುಡಿಯುವ ತಂದೆಯಾಗಿ ದ್ರೋಣಾಚಾರ್ಯರು ಕಾಣುತ್ತಾರೆ.
******************
ಮಗನ ಹಾಲಿಗಾಗಿ ಅಪಮಾನವೆಂಬ ಹಾಲಾಹಲವನ್ನೇ ನುಂಗಿದ ದ್ರೋಣರು :
ಅಶ್ವತ್ಥಾಮ ತನಗೆ ಹಾಲು ಬೇಕು ಎಂದಾಗಲೆಲ್ಲಾ ತಾಯಿ ಕೃಪಿ ಅಕ್ಕಿಹಿಟ್ಟಿನ ನೀರನ್ನು ಕದಡಿ ಹಾಲು ಎಂದು ಕೊಡುತ್ತಿರುತ್ತಾಳೆ. ಆದರೆ, ಗೆಳೆಯರ ಜೊತೆಯಲ್ಲಿ ಒಮ್ಮೆ ಆತ ನಿಜವಾದ ಹಾಲು ಕುಡಿದು ಬಂದು ತನ್ನ ತಾಯಿ ಕೊಡುವುದು ಆಕಳ ಹಾಲಲ್ಲ ಎಂಬ ಸತ್ಯವನ್ನು ತಿಳಿದು ಮನೆಯಲ್ಲಿ ರಾದ್ಧಾಂತ ಮಾಡುತ್ತಾನೆ. ಇದು ಕೆಲವು ಕಡೆ ಉಲ್ಲೇಖವಾಗಿರುವ ಕಥೆ.
ಮತ್ತೆ ಕೆಲವು ಪುಸ್ತಕಗಳಲ್ಲಿ ಪಾಂಡವರು ಹಸ್ತಿನಾಪುರಕ್ಕೆ ಬರುವ ಮುನ್ನ.. ಅಲ್ಲಿಯೇ ವಾಸವಿದ್ದ ಕೌರವರ ಜೊತೆಯಲ್ಲಿ ಆಟವಾಡುತ್ತಿದ್ದ ಅಶ್ವತ್ಥಾಮ ಅವರು ಹಾಲು ಕುಡಿಯಲು ಮನೆಗೆ ಹೋದಾಗಲೆಲ್ಲಾ ಈತನೂ ಹಾಲು ಕುಡಿಯಲೆಂದು ಮನೆಗೆ ಬರುತ್ತಿರುತ್ತಾನೆ. ಅಶ್ವತ್ಥಾಮ ಕುಡಿಯುತ್ತಿರುವುದು ಹಾಲಲ್ಲ ಎಂದು ತಿಳಿದ ದುರ್ಯೋಧನ ಅಶ್ವತ್ಥಾಮನಿಗೆ ಒಂದು ದಿನ ಬಾದಾಮಿ ಹಾಲನ್ನು ಕುಡಿಸುತ್ತಾನೆ. ತನ್ನ ಮನೆಯಲ್ಲಿ ತಾಯಿ ಕೊಡುತ್ತಿರುವುದು ನಿಜವಾದ ಹಾಲಲ್ಲವೆಂಬ ಸತ್ಯವನ್ನು ಅರಿಯುತ್ತಾನೆ. ದುರ್ಯೋಧನನಿಗೆ ಇದು ಗೊತ್ತಿದ್ದೇ ಮನಸ್ಸಿನಲ್ಲಿ ಕಳಂಕವಿರುವ ಹಾಲಾಹಲವನ್ನು ಇಟ್ಟುಕೊಂಡು ಕುಡಿಯಲು ಹಾಲು ಕೊಟ್ಟು ಸ್ವಾರ್ಥ ಸಾಧಿಸಿಕೊಂಡ ದುರ್ಯೋಧನ ಎಂದು ಹೇಳುತ್ತಾರೆ. ಅಂದಿನಿಂದಲೇ ಅವರಿಬ್ಬರ ಸ್ನೇಹ ಬೆಳೆಯಿತು ಎಂಬ ಉಲ್ಲೇಖವೂ ಇದೆ.
ಆದರೆ, ಈ ಎರಡು ರೀತಿಯ ಪ್ರಸಂಗಗಳು ದ್ರೋಣರ ಮನೆಯ ಪರಿಸ್ಥಿತಿಯನ್ನು ಹೇಳುತ್ತವೆ. ಭರದ್ವಾಜ ಪುತ್ರರಾದ ದ್ರೋಣರು ಮುಖ್ಯಬ್ರಾಹ್ಮಣ ಧರ್ಮವನ್ನು ಪಾಲನೆ ಮಾಡುತ್ತಾ ಬದುಕುತ್ತಿದ್ದವರ. ಸಂಪತ್ತನ್ನು ಕೂಡಿಡುತ್ತಾ ಇರಲಿಲ್ಲ. ಮತ್ತೊಬ್ಬರಿಂದ ದಾನವಾಗಿ ಸ್ವೀಕರಿಸುತ್ತಲೂ ಇರಲಿಲ್ಲ. ತುಂಬಾ ನಿರ್ಮಲವಾದ ಶಿಲೋಂಛ ವೃತ್ತಿಯನ್ನು ಅವಲಂಬಿಸಿದ್ದರು. ಈ ಹಾಲಿನ ಪ್ರಸಂಗದಿಂದ ತುಂಬಾ ನೊಂದ ದ್ರೋಣರನ್ನು ಕೃಪಿ ಒತ್ತಾಯಿಸಿದ್ದರಿಂದ, ಅದಕ್ಕೂ ಮಿಗಿಲಾಗಿ ಮಗನ ನೋವನ್ನು ನೋಡಲಾಗದೆ.. ತಮ್ಮ ಸ್ವಾಭಿಮಾನವನ್ನು ಬದಿಗೊತ್ತಿ ಅವರು ಒಂದು ನಿಶ್ಚಯಕ್ಕೆ ಬರುತ್ತಾರೆ.
ಆಗ ಅವರು ದೇವರ ಅವತಾರವೇ ಆದ ಪರಶುರಾಮನ ಬಳಿಗೆ ಬಂದು ಬೇಡುತ್ತಾರೆ. ಆದರೆ, ಅವರು ಬೇಡಿದ್ದು ಮಗನ ಬದುಕನ್ನು ಹಸನಾಗಿಸಲು ಉಪಯೋಗವಾಗುವ ವಿದ್ಯೆಯನ್ನು.
(ಆದರೆ, ಪರಶುರಾಮರು ಕುರುಕ್ಷೇತ್ರದಲ್ಲಿ ಮನುಷ್ಯ ರೂಪದ ದೇವತೆಗಳ ವಿಮೋಚನೆ ಅಯೋನಿಜರಾದ ದ್ರೋಣರು ಹಾಗೂ ಅವರ ಮಗ ದೈವಾಂಶಸಂಭೂತ ಅಶ್ವತ್ತ್ತಾಮರಿಂದಾಗಲಿ ಎಂಬ ಉದ್ದೇಶದಿಂದ ವಿದ್ಯೆ ಕಲಿಸುತ್ತಾರೆ)
ಮುಂದೆ, ಈ ವಿದ್ಯೆಯು ಅವರನ್ನು ಕೌರವ - ಪಾಂಡವರ ಗುರುವನ್ನಾಗಿಸುತ್ತದೆ.
ಭೀಷ್ಮರು ಸಹ ಪರಶುರಾಮರ ಶಿಷ್ಯರೇ ಆಗಿದ್ದರೂ.. ದ್ರೋಣರು ಬ್ರಾಹ್ಮಣರಾದುದರಿಂದ ಅವರ ಮುಖೇನ ವಿದ್ಯೆ ಕಲಿಸಲು ಇಚ್ಚಿಸುತ್ತಾರೆ. ಆದರೆ, ಈ ಪ್ರಸಂಗಕ್ಕೂ ಮುನ್ನ ಮತ್ತೊಂದು ಘಟನೆ ನಡೆಯುತ್ತದೆ. ಪರಶುರಾಮನಿಂದ ವಿದ್ಯೆ ಪಡೆದ ನಂತರ ಅವರಿಗೆ ನೆನಪಾಗುವುದು ಗೆಳೆಯ ದ್ರುಪದ.
ತಮ್ಮ ತಂದೆ ಭರದ್ವಾಜರಿಂದ ಇಬ್ಬರೂ ಒಟ್ಟಿಗೆ ವಿದ್ಯೆ ಕಲಿತವರು. ' ಅರ್ಧ ರಾಜ್ಯ ನೀಡುತ್ತೇನೆ ' ಎಂದು ದ್ರುಪದ ನೀಡಿದ್ದ ವಚನವನ್ನು ನೆನಪಿಸಿಕೊಂಡು ಆತನ ರಾಜಸಭೆಗೆ ಬಂದಾಗ ಆತ ದ್ರೋಣರಿಗೆ ಅಪಮಾನ ಮಾಡುತ್ತಾನೆ. ಆತ ಸುಮ್ಮನೆ ನಿರಾಕರಿಸಿದ್ದರೂ ಆಗುತ್ತಿತ್ತೇನೋ.. ಆದರೆ, "ದರಿದ್ರನೆಂತು ರಾಜನಿಗೆ ಗೆಳೆಯನಾದಾನು..?" ಎನ್ನುತ್ತಾ ತುಂಬಿದ ರಾಜಸಭೆಯಲ್ಲಿ ಅವಮಾನಿಸುತ್ತಾನೆ. ದ್ರೋಣರು ಇಷ್ಟೆಲ್ಲಾ ಅಪಮಾನವನ್ನು ಮಾಡಿಸಿಕೊಳ್ಳುವ ಹಾಗೂ ಸಹಿಸಿಕೊಳ್ಳುವ ಕಾರಣವಿದ್ದದ್ದು ಮಗನಿಗಾಗಿಯೇ ಎಂದರೂ ತಪ್ಪಾಗಲಾರದು.
ಅಲ್ಲಿಂದ ಅಪಮಾನಿತರಾಗಿ ಬಂದವರಿಗೆ ಗುರುವಾಗುವ ಸಂದರ್ಭ. ಭೀಷ್ಮರ ಒಪ್ಪಿಗೆಯ ನಂತರ ಕೌರವ ಹಾಗೂ ಪಾಂಡವರಿಗೆ ಗುರುಗಳಾಗಿ ಅಂದು ರಾಜಸಭೆಯಲ್ಲಿ ಮಾಡಿದ ಪ್ರತಿಜ್ಞೆಯಂತೆಯೇ ತಮ್ಮ ಶಿಷ್ಯರಿಂದಲೇ ಆತನನ್ನು ಹೆಡೆಮುರಿ ಕಟ್ಟಿಸುವುದು ಮತ್ತೊಂದು ಕಥೆ.
ಮಕ್ಕಳ ಅಭ್ಯುದಯಕ್ಕಾಗಿ ಎಷ್ಟೆಲ್ಲಾ ಕಷ್ಟ ಬಂದರೂ.. ಏನೇ ಅಪಮಾನವಾದರೂ.. ಎಷ್ಟೇ ನೋವು ಬಂದರೂ.. ಅದನ್ನೆಲ್ಲ ನುಂಗಿ, ಅದನ್ನು ದಾಟಿ ನಿಲ್ಲುವುದು ಸುಲಭವಲ್ಲ. ಅದು ಒಬ್ಬ ತಂದೆಗೆ ಮಾತ್ರ ಸಾಧ್ಯ. ಅಂತಹ ತಂದೆಯಾಗಿ ಮುಂಚೂಣಿಯಲ್ಲಿ ನಿಲ್ಲುತ್ತಾರೆ ದ್ರೋಣರು.
******************
ಮಗನಿಗೆ ವೈಭೋಗದ ಜೀವನಕ್ಕೆ ಅನುವು ಮಾಡಿಕೊಟ್ಟ ತಂದೆ :
ರಾಜವಂಶಸ್ಥರಿಗೆ ಮಾತ್ರ ತಾನು ವಿದ್ಯೆ ಕಲಿಸುತ್ತೇನೆ ಎನ್ನುವ ದ್ರೋಣರು ತಮ್ಮ ಮಗನಿಗೆ ಅವರೆಲ್ಲರ ಜೊತೆಗೆ ಕಲಿಸುತ್ತಾ.. ಯಾರಿಗೂ ಕಲಿಸದ ವಿದ್ಯೆಯಾದ ಬ್ರಹ್ಮಾಸ್ತ್ರದ ಪ್ರಯೋಗವನ್ನು ಕಲಿಸುತ್ತಾರೆ.
ರಾಜಮನೆತನದ ಮಕ್ಕಳೊಂದಿಗೆ ಬೆಳೆಯುವ ಅಶ್ವತ್ಥಾಮನ ವೈಭೋಗದ ಜೀವನದ ಕಾರಣವೂ ಅವರ ತಂದೆಯೇ..
******************
ಶಿಷ್ಯರನ್ನೂ ಮಕ್ಕಳಂತೆಯೇ ಕಂಡ ಪಿತೃಸ್ವರೂಪಿ ಗುರು :
ಎಲ್ಲರೂ ತಮ್ಮತಮ್ಮ ಮಕ್ಕಳನ್ನು ಅಪರಿಮಿತವಾಗಿ ಪ್ರೀತಿಸುತ್ತಾರೆ. ಆದರೆ, ಶಿಷ್ಯರನ್ನು ಸಹ ತಮ್ಮ ಮಕ್ಕಳಂತೆಯೇ ಪ್ರೀತಿಸುವ ಗುರು ವಿರಳ. ಅಂತಹ ವ್ಯಕ್ತಿ ಗುರು ದ್ರೋಣರು. ಅದರಲ್ಲಿಯೂ.. ಅರ್ಜುನನನ್ನು ತನ್ನ ಮಗನಂತೆಯೇ ಕಂಡ ಅವರು ಅಶ್ವತ್ಥಾಮನಿಗೆ ಅದೆಷ್ಟು ಪ್ರೀತಿ ನೀಡಿರಬೇಡ..!
******************
ಮಗನ ಮೇಲಿನ ವ್ಯಾಮೋಹವೇ ತಡೆಯಾದದ್ದು :
ಎಷ್ಟೋ ಬಾರಿ ಪಾಂಡವರ ಪರ ನಿಲ್ಲಬೇಕೆಂದುಕೊಂಡರೂ.. ಅಶ್ವತ್ಥಾಮ ಕೌರವರ ಪಕ್ಷದಲ್ಲಿದ್ದುದರಿಂದ ಹಾಗೂ ಅಶ್ವತ್ಥಾಮ ದುರ್ಯೋಧನನ ಕೃಪಾಕಟಾಕ್ಷದಲ್ಲಿದ್ದುದರಿಂದ ಆತ ಅಲ್ಲಿಂದ ಹೊರಬರಲು ಸಾಧ್ಯವಾಗುವುದಿಲ್ಲ. ತಾವು ಮಗನಿದ್ದ ಪಕ್ಷದಲ್ಲಿಯೇ.. ಮಗನ ಅಭ್ಯುದಯಕ್ಕಾಗಿಯೇ, ಮಗನ ಕಾವಲಾಗಿ ನಿಲ್ಲುವ ತಂದೆಯಾಗಿ ಮೌನವಾಗಿದ್ದುಕೊಂಡೇ ಬೆಂಬಲಿಸುವಂತಾಗಿ ಎಷ್ಟೋ ಅನರ್ಥಗಳಿಗೆ ಕಾರಣವಾಗಿ ಬಿಡುವುದು ವಿಪರ್ಯಾಸ.
******************
ಮಗನ ಮೇಲಿನ ಮಮಕಾರವೇ ಉರುಳಾಗಿ :
ಮಗನನ್ನು ಅಪರಿಮಿತವಾಗಿ ಪ್ರೀತಿಸುತ್ತಿದ್ದ ತಂದೆಯಾಗಿದ್ದ ದ್ರೋಣರ ಪಾಲಿಗೆ ಅದೇ ಮಮತೆ ಸಾವಿನ ಹಾದಿ ತೋರಿದ್ದು ವಿಪರ್ಯಾಸ.
ಕುರುಕ್ಷೇತ್ರ ಯುದ್ಧದಲ್ಲಿ ದ್ರೋಣರು ತಮ್ಮ ಪರಾಕ್ರಮದಿಂದ ವಿಜಯ ಸಾಧಿಸುತ್ತಿರುವ ಸಂದರ್ಭದಲ್ಲಿ ಅವರನ್ನು ಗೆಲ್ಲಲು ಇದ್ದದ್ದು ಒಂದೇ ಮಾರ್ಗ. ಅದು ಅವರನ್ನು ಕುಗ್ಗಿಸುವುದು. ಅದಕ್ಕಾಗಿ ಪಾಂಡವರು ಕೃಷ್ಣನ ಸಲಹೆಯ ಮೇರೆಗೆ ಅನುಸರಿಸಿದ ತಂತ್ರ "ಅಶ್ವತ್ಥಾಮಃ ಹತಃ ಕುಂಜರಃ " ಎಂದು ಸತ್ಯಸಂಧ ಧರ್ಮರಾಯನ ಬಾಯಿಯಿಂದ ಹೇಳಿಸಿ ಕುಂಜರ (ಆನೆ) ಎಂಬ ಶಬ್ದ ಬರುವುದರೊಳಗೆ ಶಂಖನಾದ ಮಾಡಿ ದ್ರೋಣರಿಗೆ ತಮ್ಮ ಮಗ ಅಶ್ವತ್ಥಾಮನೇ ಸತ್ತು ಹೋದ ಎಂಬ ಭಾವ ಹುಟ್ಟಿಸುವುದು. ಈ ತಂತ್ರ ಸಫಲವೂ ಆಗುತ್ತದೆ.
ಕೆಲವು ಉಲ್ಲೇಖಗಳ ಪ್ರಕಾರ.. ದ್ರೋಣಾಚಾರ್ಯರು ಈ ವಿಚಾರವನ್ನು ದೃಢಪಡಿಸಿಕೊಳ್ಳಲು ತಮ್ಮ ದೇಹವನ್ನು ಬಿಟ್ಟು ಸೂಕ್ಷ್ಮರೂಪದಿಂದ ಹೊರಹೋದಾಗ ಅವರ ದೇಹವನ್ನು ದೃಷ್ಟದ್ಯುಮ್ಯ ಕತ್ತರಿಸುತ್ತಾನೆ ಎಂದಿದ್ದರೆ..
ಮತ್ತೆ ಕೆಲವು ಉಲ್ಲೇಖಗಳಲ್ಲಿ ದ್ರೋಣಾಚಾರ್ಯರು ಈ ವಿಚಾರ ತಿಳಿದು ದುಃಖದಲ್ಲಿ ಕುಸಿದು ಶಸ್ತ್ರತ್ಯಾಗ ಮಾಡಿದಾಗ, ಹಿಂದಿನಿಂದ ಬಂದ ದೃಷ್ಟದ್ಯುಮ್ನ ಅವರನ್ನು ಕೊಲ್ಲುತ್ತಾನೆ ಎಂದಿದೆ. ಒಟ್ಟಿನಲ್ಲಿ ಮಗನ ಮೇಲಿನ ಮಮತೆಯೇ ಅವರ ಪಾಲಿನ ಉರುಳಾಗುತ್ತದೆ.
ಮಗನಿಂದ ತಂದೆಯ ಅಂತ್ಯಕ್ರಿಯೆ ನಡೆಯಬೇಕು. ಆದರೆ, ಮಗನ ಮೇಲಿನ ಮೋಹವೇ ತಂದೆಗೆ ಅಂತ್ಯ ತಂದದ್ದು ದುರಂತ.
******************
ನನ್ನ ಪ್ರಕಾರ ತಂದೆ ಎಂಬುದು ಪರಿಪೂರ್ಣ ಪಾತ್ರವಲ್ಲ. ಬದಲಾಗಿ, ತಂದೆಯಾದಾಗಿನಿಂದಲೂ ಪರಿಪೂರ್ಣತೆಯತ್ತ ಹೆಜ್ಜೆ ಹಾಕುವ ಪಾತ್ರ. ಪ್ರತಿಬಾರಿಯೂ ಮಕ್ಕಳ ವಿಜಯಕ್ಕಾಗಿ, ಅಭ್ಯುದಯಕ್ಕಾಗಿ, ಅವರ ಕ್ಷೇಮಕ್ಕಾಗಿ ಟೊಂಕ ಕಟ್ಟಿ ನಿಲ್ಲುವ.. ನಿರ್ಮಲ ಅಂತಃಕರಣದ ಜೀವ. ಅದಕ್ಕಾಗಿ ಮತ್ತೊಬ್ಬರ ಒಳಿತು - ಕೆಡುಕುಗಳಿಗಿಂತಲೂ ತಮ್ಮ ಮಕ್ಕಳ ಭವಿಷ್ಯದ ಕುರಿತು ಹೆಚ್ಚಿನ ಆಸ್ಥೆ. ತಂದೆಗೆ ಅದಷ್ಟೇ ಮುಖ್ಯವಾಗಿರುತ್ತದೆ. ಇಂದಿಗೂ ಇಂತಹ ಕೆಲವು ತಂದೆಯರನ್ನು ಕಾಣಬಹುದಾಗಿದೆ. ತಾವು ಪಟ್ಟ ಕಷ್ಟ ತಮ್ಮ ಮಕ್ಕಳಿಗೆ ಬರಬಾರದು, ತಿಳಿಯಬಾರದು ಎಂದೇ ಆಶಿಸುವ ತಂದೆಯರು ಇವರು. ದ್ರೋಣರು ಇಂತಹ ತಂದೆಯ ಪ್ರತೀಕವಾಗಿ ನಿಲ್ಲುತ್ತಾರೆ. ಮಗನ ಮೇಲಿನ ವ್ಯಾಮೋಹದ ಬದಲಾಗಿ ಮಗನಿಗೆ ಇನ್ನಷ್ಟು ತಿಳಿ ಹೇಳಿ ಆತನ ಸರಿ - ತಪ್ಪುಗಳನ್ನು ವಿಮರ್ಶಿಸುವ ನಿಷ್ಠುರ ತಂದೆಯಾಗಿದ್ದರೆ.. ಮತ್ತಷ್ಟು ಪರಿಪೂರ್ಣರಾಗಿರುತ್ತಿದ್ದರು ಎಂಬುದರಲ್ಲಿ ಸಂದೇಹವಿಲ್ಲ. ಆದರೆ, ಮಗನಿಗಾಗಿಯೇ ತಮ್ಮ ಜೀವನವನ್ನೇ ಮುಡಿಪಿಟ್ಟ ತಂದೆಯಾಗಿ, ಕರ್ತವ್ಯದ ಜೊತೆಗೆ ಅಪರಿಮಿತ ಪ್ರೇಮವನ್ನು ತೋರುವ ತಂದೆಯಾಗಿ ದ್ರೋಣರು ನನ್ನ ಮನಸ್ಸಿನಲ್ಲಿ ಸದಾ ಚಿರಂಜೀವಿ.
(ಆಕರ ಗ್ರಂಥಗಳು:
೧. ಚಿರಂಜೀವಿಗಳು - ಡಿ. ಕೃಷ್ಣ ಐಯ್ಯಂಗಾರ್
೨. ಮಹಾಭಾರತ - ಡಾ. ವಿಜಯಾ ಸುಬ್ಬರಾಜ್
೩. ಮಹಾಭಾರತದ ಶಾಪಗಳು (ಸಂಪುಟ ೨) - ಶ್ರೀಪಾದ ರಘುನಾಥ ಭಿಡೆ
೪. ಮಹಾಭಾರತ ತಾತ್ಪರ್ಯ ನಿರ್ಣಯ - ಡಾ || ವ್ಯಾಸನಕೆರೆ ಪ್ರಭಂಜನಾಚಾರ್ಯ)
~ವಿಭಾ ವಿಶ್ವನಾಥ್
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ