ಭಾನುವಾರ, ಏಪ್ರಿಲ್ 26, 2026

ಎಲಿಪ್ಯಾಡ್ (ಪುಸ್ತಕ ಯಾನ - 357)


ಪುಸ್ತಕದ ಶೀರ್ಷಿಕೆ : ಎಲಿಪ್ಯಾಡ್ 

ಲೇಖಕರು : ಭಗೀರಥ 

ಪ್ರಕಾಶಕರು : ಟೋಟಲ್ ಕನ್ನಡ 

ಪ್ರಥಮ ಮುದ್ರಣ : 2025

ಪುಟಗಳು : 140

ಬೆಲೆ : 100 ರೂ. 


ಇದು ಭಗೀರಥ ಅವರ ಎರಡನೇ ಕಾದಂಬರಿ. ಮೊದಲ ಕಾದಂಬರಿ ಅಮೀಬಾ. ಅಮೀಬಾ ಕಾದಂಬರಿಗಿಂತ ಈ ಕಾದಂಬರಿ ಇಷ್ಟವಾಯಿತು. ಸೂಕ್ಷ್ಮವಾದ ಕಥಾವಸ್ತುವನ್ನು ವಿಶಿಷ್ಟವಾಗಿ ಕಟ್ಟಿಕೊಟ್ಟಿರುವ ಕಾದಂಬರಿಯ ಮುಖಪುಟ ಹಾಗೂ ಶೀರ್ಷಿಕೆಯ ಡಿಸೈನ್ ಹಾಗೂ ಅರ್ಪಣೆ ನೋಡಿದಾಗ ಕಥಾವಸ್ತು ಇದಾಗಿರಬಹುದೇ ಎಂಬ ಊಹೆ ಬಂದರೂ.. ಅದೆಲ್ಲವನ್ನೂ ಮೀರಿದ ಘಟನಾವಳಿಗಳು ಇಲ್ಲಿವೆ. ಹೊಸ ರೀತಿಯ ವೆಬ್ ಸೀರಿಸ್ ಅನ್ನು ನೋಡಿದ ಅನುಭವವಾಗುತ್ತದೆ. 


"ಪ್ರಾಣಿಗಳೇ ಗುಣದಲ್ಲಿ ಮೇಲು" ಎನ್ನುವ ಮಾತು ಮತ್ತೊಮ್ಮೆ ಸತ್ಯವೆಂದು ಭಾಸವಾಗುವಂತಹ ಕಥೆ ಇದು. ಅಲ್ಲದೇ,ಆನೆ ಎಂದಾಕ್ಷಣ ಗಜಗಾಂಭೀರ್ಯ ಎಂಬ ಪದವೇ ನೆನಪಾಗುವಾಗ ಅದಕ್ಕೆ ಹೊರತಾದ ಮಗುವಿನಂತಹ ಮುಗ್ಧತೆ ಹಾಗೂ ಸ್ನೇಹಮಯಿಯಾಗಿ ಅರ್ಜುನ ಇಲ್ಲಿ ಕಾಣುತ್ತಾನೆ. ನಾವು ನೀಡಿದ ಪ್ರೀತಿ ಹಾಗೂ ಸ್ನೇಹ ಪ್ರಾಣಿಗಳ ಮೂಲಕ ಮತ್ತೆ ನಮಗೆ ಮರಳಿ ದಕ್ಕುವ ಪರಿ ಸೆಳೆಯುತ್ತದೆ. 


ಇದು ಕರ್ನಾಟಕದ ಹೊಕ್ಕಳು ಭಾಗದಲ್ಲಿರುವ ಯಲವಳ್ಳಿ ಎಂಬ ಕಾಲ್ಪನಿಕ ಭಾಗದಲ್ಲಿ ನಡೆಯುವ ಕತೆ. ಹಳ್ಳಿಯ ಚಿತ್ರಣ ಇಲ್ಲಿ ಆ ಊರಿನ ಸಮಸ್ಯೆಯ ಜೊತೆಗೆ ಚಿತ್ರಿತವಾಗಿದೆ. ಹಳ್ಳಿಗಳ ಅಭಿವೃದ್ಧಿಯಾಗಬೇಕಾದಲ್ಲಿ ಹಳ್ಳಿಯವರ ಸಹಕಾರ ಎಷ್ಟು ಮುಖ್ಯವಾಗುತ್ತದೆ ಎಂಬುದರ ಜೊತೆಗೆ ಆ ಬದಲಾವಣೆಗೆ ಕಾರಣವಾಗುವಂತಹ ಘಟನೆಗಳ ಸರಮಾಲೆ ಇಲ್ಲಿದೆ. ಹಳ್ಳಿ ಎಂದು ಉಪೇಕ್ಷೆ ಮಾಡದೆ ದಿಲ್ಲಿಯಿಂದ ಹಳ್ಳಿಯನ್ನು ತಲುಪಿದ ಕಥೆಯನ್ನು ಕಾಣಬಹುದು. 


ಯುಗದ ಆದಿಯಾಗಬೇಕಾಗಿದ್ದ ಯುಗಾದಿ ಯಲವಳ್ಳಿಯ ಪಾಲಿಕೆ ಶಾಪವಾಗುವ ಪ್ರಸಂಗದಿಂದ ಶುರುವಾಗುವ ಕಥೆ ಇದು. ಬುಡಬುಡಿಕೆ ಚೌಡ ಹೇಳಿದ ಹಾಲಕ್ಕಿಯ ಶಕುನ ಎಷ್ಟು ನಿಜವಾಯಿತು..? ಇದು ಮೂಢನಂಬಿಕೆ ಇರಬಹುದಾ ಎಂದುಕೊಳ್ಳುವಷ್ಟರಲ್ಲಿ ಅತೀಂದ್ರಿಯ ಶಕ್ತಿಯ ಪ್ರಭಾವವೇ ಇರಬಹುದಾ ? ಎಂಬ ಪ್ರಶ್ನೆ ಮೂಡುತ್ತದೆ. ಹೀಗೆ ಯುಗಾದಿಯ ಆಚರಣೆಯೇ ನಿಂತು ಹೋದ ಆ ಊರಿನಲ್ಲಿ ಮುಂದಿನ ತಲೆಮಾರುಗಳಲ್ಲಿ ನಡೆಯುವ ಘಟನಾವಳಿ ಇಲ್ಲಿದೆ. ಊರಿನ ಇತಿಹಾಸವೇ ಬದಲಾಗುವ ಹಾಗೂ ಊರಿನ ರೂಪುರೇಷೆಯೇ ಬದಲಾಗುವ ಘಟನೆಗಳಿಗೆ ಕಾಲವೇ ಕೂಡಿ ಬರಬೇಕೇನೋ..


ಕಪ್ಪಣ್ಣ ಹಾಗೂ ಬಕುಳಾದೇವಿಯವರ ವಿಚಿತ್ರ ದಾಂಪತ್ಯದ ನೋಟವನ್ನು ನೋಡುತ್ತಿರುವಾಗಲೇ.. ಕಪ್ಪಣ್ಣನ ಸಾವಿನ ಸಂದರ್ಭದಲ್ಲಿ ಗುರುರಾಜರ ಕೃಷ್ಣಾವತಾರದ ಹರಿಕತೆ ನಡೆಯುತ್ತಿರುತ್ತದೆ. ಆದರೆ, ಇದು ಕಪ್ಪಣ್ಣನ ಸಾವಿನ ಕಾರಣಕ್ಕೆ ಎಮ್ದುಕೊಳ್ಳುತ್ತಿರುವಾಗ ಅದಕ್ಕಿಂತಲೂ ಮುಖ್ಯವಾಗಿ ಕಾಣುವುದು ರಾಣಿಯ ಬಸುರಿ ಬಯಕೆ. ಹಾಗೆಂದು, ರಾಣಿ ಕಪ್ಪಣ್ಣನ ಕುಟುಂಬದವಳಲ್ಲ. ರಾಣಿ ಯಲವಳ್ಳಿಯ ಸೊಸೆಯಷ್ಟೇ..!


ನಂತರ, ಕಥೆಯಲ್ಲಿ ಮುಖ್ಯಪಾತ್ರವಾಗಿ ಕಾಣಿಸಿಕೊಳ್ಳುವ ಅರ್ಜುನನ ಜೊತೆಗೆ ರಾಣಿಯ ಬೆಸುಗೆ ಬೆಳೆದು ಇನ್ನೂ 9 ತಿಂಗಳಷ್ಟೇ ಆಗಿರುತ್ತದೆ. ಆದರೆ, ಅದು ಬಿಡಿಸಲಾಗದ ಗಟ್ಟಿ ಬಾಂಧವ್ಯ. ರಾಣಿ ಆ ಊರಿಗೆ ಸೊಸೆಯಾಗಿ ಕಾಲಿಟ್ಟು 9 ತಿಂಗಳಷ್ಟೇ.. ಬಿಜಾಪುರದ ಲಚ್ಯಾಣದಿಂದ ಯರವಳ್ಳಿಯ ಅಮೋಘವರ್ಷ ನೃಪತುಂಗನ ಪತ್ನಿಯಾಗಿ ಬಂದವಳು ರಾಣಿ. ಕಥೆಯಲ್ಲಿ ಆಗಾಗ ರಾಣಿಯ ಭಾಷೆಯಲ್ಲಿ ಮರಾಠಿಯ ಬಂದು ಹೋಗುತ್ತದೆ. ಮಾತೃಭಾಷೆ ಕನ್ನಡವೇ ಆದರೂ.. ಆಕೆಯ ಊರಿನಲ್ಲಿದ್ದ ಮರಾಠಿಯ ಪ್ರಭಾವದಿಂದ ಮನಸ್ಸಿನಲ್ಲಿ ಮೂಡುತ್ತಿದ್ದ ಮಾತುಗಳು ಭಾಷೆಗಳು ಬೆರೆಯುವ ಪ್ರಕ್ರಿಯೆಯನ್ನು, ಮನುಷ್ಯ ಭಾಷೆಯನ್ನು ತನ್ನದಾಗಿಸಿಕೊಳ್ಳುವ ಬಗೆಯನ್ನು ಚಂದವಾಗಿ ಹಿಡಿದಿಟ್ಟಿದ್ದಾರೆ ಲೇಖಕರು.


ಸಾಕವ್ವ ತುಂಗನ ತಾಯಿ. ಆತನಿಗೆ ಅಮೋಘವರ್ಷ ನೃಪತುಂಗನೆಂದು ಹೆಸರಿಡಲು ಕಾರಣವೇನು..? ತಂದೆ ಇಲ್ಲದ ಮಗನನ್ನು ಎದೆ ಎತ್ತರಕ್ಕೆ ಬೆಳೆಸಿದ್ದವಳು. ಈಗ ಸೊಸೆಯನ್ನು ಹುಡುಕಿ ಹೊರಟಿದ್ದಳು. ಗಂಡ, ಮೂರು ಮಕ್ಕಳನ್ನು ಕಳೆದುಕೊಂಡಿದ್ದವಳಿಗೆ ಸಿಕ್ಕಿದ್ದು ಆಕೆಯಂತೆಯೇ ನೊಂದ ಜೀವ ಮಂಜಕ್ಕ. ಮಂಜಕ್ಕನ ಮಗಳು ರಾಣಿಯೇ ಮುಂದೆ ಆಕೆಯ ಸೊಸೆಯಾಗುತ್ತಾಳೆ. ಕ್ಷಿಪ್ರವಾಗಿಯೇ ಮದುವೆಯಾದರೂ.. ಮೂರು ತಾಳಿಗಳ ಸುಮಂಗಲಿಯ ಭಾಗ್ಯವನ್ನು ರಾಣಿಗೆ ಕರುಣಿಸುವ ಮಂಜವ್ವ ಹಾಗೂ ಸಾಕವ್ವರ ಮನಸ್ಸಿನಲ್ಲಿ ಏನಿತ್ತು..? ಮದುವೆಯಾಗಿ ಬಂದವಳಿಗೆ ಯಲವಳ್ಳಿಯ ದೇವತೆಯ ಕೃಪಾಕಟಾಕ್ಷ ಮಾತ್ರವಲ್ಲದೆ, ಮೂಕ ಜೀವಿ ಅರ್ಜುನನ ಸ್ನೇಹವೂ ದೊರೆಯುತ್ತದೆ. ಇನ್ನೇನು ಎಲ್ಲವೂ ಸುಸೂತ್ರವಾಯಿತು ಎಂದುಕೊಳ್ಳುವಷ್ಟರಲ್ಲಿ ಬೀಗಿತಿಯರಿಬ್ಬರೂ ಮಕ್ಕಳೊಡನೆ ಬದುಕುವ ಸೌಭಾಗ್ಯವನ್ನು ಕಳೆದುಕೊಳ್ಳುತ್ತಾರೆ. 


ಅಮ್ಮನನ್ನು, ಅಮ್ಮನಂತಹ ಅತ್ತೆಯನ್ನು ಕಳೆದುಕೊಂಡ ರಾಣಿಗೆ ಪತಿ ತುಂಗನಿಗಿಂತ ಹೆಚ್ಚು ಆಸರೆಯಾದ ಜೀವ ಗಜರಾಜ ಅರ್ಜುನ. ಅರ್ಜುನನ ಮಾವುತ ಕೋಗಿಲೆ ಅಣ್ಣನಂತೆಯೇ ಆಕೆಯನ್ನು ನೋಡಿಕೊಳ್ಳುವ ಪರಿ, ಒಂದು ನಿಷ್ಕಲ್ಮಶ ಬಾಂಧವ್ಯದ ಪರಿಚಯ ಮಾಡಿಸುತ್ತದೆ. ದಿನ ಕಳೆದಂತೆ ಗಂಡ ತುಂಗನ ಸಕಲ ಗುಣಗಳ ಪರಿಚಯವಾಗುವಾಗ ರಾಣಿ ತಾಯಿಯಾಗುವ ಹಂತದಲ್ಲಿರುತ್ತಾಳೆ. 


ತುಂಗನ ರಾತ್ರೋರಾತ್ರಿ ಕಳ್ಳತನದೊಂದಿಗೆ ಓಸಿ ಲಾಟರಿಯ ಮುಖ ಪರಿಚಯವಾಗುತ್ತದೆ. ಹಳ್ಳಿಯಲ್ಲಿ ಜನರನ್ನು ಹೆಚ್ಚು ಹಾಳು ಮಾಡುವುದು ಸಾರಾಯಿ ಎಂದುಕೊಂಡಿದ್ದವಳಿಗೆ ಇದನ್ನು ಓದಿದ ನಂತರ ಮಟ್ಕಾ ನಂದೇಯ ಕರಾಳಛಾಯೆ ಜನಜೀವನವನ್ನು ಅಸ್ತವ್ಯಸ್ತಗೊಳಿಸುತ್ತಿರುವುದು ಕಾಣುತ್ತದೆ. ಇದಕ್ಕೆ ತುಂಗ ಬಲಿ ಕೊಟ್ಟದ್ದು ರಾಣಿ ಮಗುವನ್ನು ಸಾಕಲು ಕಟ್ಟಿಕೊಂಡಿದ್ದ ಕನಸನ್ನು ಅರ್ಥಾತ್ ಅವಳ ಕೊರಳಲ್ಲಿದ್ದ ಚಿನ್ನದ ಮಾಂಗಲ್ಯದ ಸರವನ್ನು. 


ಹೆಚ್ಚುಕಮ್ಮಿ ಇದೇ ಸಂದರ್ಭದಲ್ಲಿ ಊರಿನ ಪ್ರಮುಖ ವ್ಯಕ್ತಿ ಮೈಲಾರಪ್ಪ ತೀರಿಕೊಂಡರೆಂಬ ಸುದ್ದಿ ಕೇಳಿ ಅಲ್ಲಿಗೆ ಹೋದಾಗ ಅಲ್ಲಿ ಕಂಡ ಚಿತ್ರಣವೇ ಬೇರೆ. ಅದೇನು..? ಅಂತಹ ಪದ್ಧತಿಯನ್ನು ಅವರು ಅನುಸರಿಸಿದ್ದೇಕೆ..?


ಊರಿನವರೆಲ್ಲರೂ ಅದುವರೆಗೂ ಊರಿನಲ್ಲಿ ಪಾಯಖಾನೆ ಇರದೆ, ಊರಿನಲ್ಲಿದ್ದ ಎಲಿಪ್ಯಾಡನ್ನೇ ಬಹಿರ್ದೆಸೆಗೆ ಉಪಯೋಗಿಸುತ್ತಿರುವಾಗ.. ದೆಹಲಿಯಿಂದ ಅಚಾನಕ್ಕಾಗಿ ಎಲಿಪ್ಯಾಡ್ ಗೆ ಬಂದಿಳಿದ ಸಚಿವೆ ಗುಲ್ಮೊಹರ್ ಶಿಂಧೆ. ಆಕೆ ಅಲ್ಲಿಂದ ಇಲ್ಲಿಗೆ ಬರಲು ಕಾರಣವಾದ ಪ್ರಕರಣವಾದರೂ ಏನು..? ಆ ಪ್ರಕರಣ ಯಲ್ಲವಳ್ಳಿಗರ ಪಾಲಿಕೆ ದುಃಸ್ವಪ್ನವಾದದ್ದಾದರೂ ಏಕೆ..?


ಊರಿನ ಸ್ವಚ್ಛತೆಯನ್ನು ಕಾಪಾಡಲು ಪಾಯಖಾನೆ ಕಟ್ಟಿಸಲು ಹೊರಟಾಗ ಮೈಲಾರಪ್ಪ ಹಾಗೂ ಕುಟುಂಬದವರಿಂದ ಶುರುವಾದ ವಿರೋಧ ಊರಿನಲ್ಲೆಲ್ಲ ಪಸರಿಸಿದ್ದೇಕೆ..? ಅದರ ಪರಿಣಾಮವೇನು..?


ಇದರಲ್ಲೆಲ್ಲಾ ಅರ್ಜುನನದ್ದು ಪ್ರಮುಖ ಪಾತ್ರ. ಪ್ರತಿಯೊಂದು ಘಟನೆಯೂ ಅರ್ಜುನನ ಇರುವಿಕೆಯನ್ನು ಒಳಗೊಂಡಿದೆ. ಮನುಷ್ಯರೇ ಅರ್ಥಮಾಡಿಕೊಳ್ಳಲಾಗದ್ದನ್ನು ಮೂಕಜೀವಿಯಾದ ಅರ್ಜುನ ಸಮರ್ಥವಾಗಿ ಅರ್ಥಮಾಡಿಕೊಳ್ಳುತ್ತಾನೆ. 


ಮುಂದೆ, ಊರಿನಲ್ಲಿ ಕಟ್ಟಿಸಬೇಕಾದ ಪಾಯಖಾನೆಗಳ ಕಥೆ ಏನಾಯ್ತು..? ರಾಣಿಯ ಹೆರಿಗೆಗೆ ಅರ್ಜುನ ಸಹಾಯಕನಾದನೇನು..? ಆಕೆ ಬಸುರಿಯಾಗಿದ್ದಾಗ ಆಕೆಯ ಪುಟ್ಟ ಆಸೆಯನ್ನು ನೆರವೇರಿಸಲು ಆತ ತನ್ನ ಅನಾರೋಗ್ಯವನ್ನು ಲೆಕ್ಕಿಸದೆ ಸುತ್ತಿ ಅದನ್ನು ನೆರವೇರಿಸಿದ ಪ್ರಸಂಗವಂತೂ ಮನಮಿಡಿಯುವಂತಿದೆ. ರಾಣಿ ಮಗುವಿನ ಬಗ್ಗೆ ಕಂಡ ಕನಸು ಏನಾಯಿತು..? ತುಂಗನ ಬಗ್ಗೆ ಅವಳಿಗಿದ್ದ ಅಭಿಪ್ರಾಯ ಬದಲಾಯಿತೇ..? ತುಂಗನ ಓಸಿ ಲಾಟರಿಯ ಆಸೆ ದುರಾಸೆಯಾಯಿತೇ ಅಥವಾ ಅಳಿಯಿತೇ..?


ಈ ಕಾದಂಬರಿಯಲ್ಲಿ ಮತ್ತೊಂದು ವಿಭಿನ್ನವಾದ ಪಾತ್ರ ಸುಲೋಚನಳದ್ದು. ಊರಿನವರ ದೃಷ್ಟಿಯಲ್ಲಿ ಕೀಳಾಗಿದ್ದ ಸುಲೋಚನ ಬದಲಾದ ಬಗ್ಗೆ ಅಚ್ಚರಿ ಹುಟ್ಟಿಸುತ್ತದೆ. ಜೊತೆಗೆ ಆಕೆ ಹೇಳುವ ಅಕ್ಕಮಹಾದೇವಿಯ ವಚನಗಳು ಸೆಳೆಯುತ್ತವೆ. 


ಊರಿನವರಿಗಿತ್ತಿದ್ದ ಅಡ್ಡ ಹೆಸರುಗಳು ತುಂಟತನವನ್ನು ತೋರುತ್ತವೆ. ಬುಡುಬುಡುಕೆ ಶಾಸ್ತ್ರದವರು ಹೇಳುವ ಒಗಟಿನಂತಹ ಮಾತನ್ನು ಬಿಡಿಸುವ ಸಂದರ್ಭಗಳು ಹಾಗೂ ಪ್ರಸಂಗಗಳು ಇಷ್ಟವಾದವು. 


ಇದೆಲ್ಲದರ ಜೊತೆಗೆ ಸಾಕಷ್ಟು ಬದಲಾವಣೆಗಳನ್ನು ಧನಾತ್ಮಕವಾಗಿ ತೋರುವ ಕಾದಂಬರಿಯ ಅಂತ್ಯ ಊಹಿಸಲು ಕಷ್ಟವಾಗುವ ಪುಟ್ಟಪುಟ್ಟ ಅಂಶಗಳನ್ನು ಒಳಗೊಂಡಿದೆ. ಇದನ್ನು ತಿಳಿಯಲು ನೀವೇ ಈ ಕಾದಂಬರಿಯನ್ನು ಓದಿ ನೋಡಿ. 


ಕಾದಂಬರಿ ಓದಿ ಮುಗಿದ ನಂತರ ಕಾಡುವುದು ಅರ್ಜುನನ "ಪಾಏಏಏಏಏಏಏ".


ಕಾದಂಬರಿಯ ವಿಶ್ವಾಸಪೂರ್ವಕ ಪ್ರತಿ ನೀಡಿ ಒಂದೊಳ್ಳೆ ಕತೆ ಓದಲು ಅನುವು ಮಾಡಿಕೊಟ್ಟ ಲೇಖಕರಾದ ಭಗೀರಥ ಅವರಿಗೆ ಧನ್ಯವಾದಗಳು. ಮತ್ತಷ್ಟು ಚಂದದ ಪುಸ್ತಕಗಳು ನಿಮ್ಮಿಂದ ಹೊರಬರಲಿ ಎಂದು ಹಾರೈಸುವೆ. 


~ವಿಭಾ ವಿಶ್ವನಾಥ್

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ