ಪುಸ್ತಕದ ಶೀರ್ಷಿಕೆ : ಹೆತ್ತವರೇ, ಮಕ್ಕಳ ಬಗ್ಗೆ ಕಾಳಜಿ ವಹಿಸಿ
ಲೇಖಕರು : ಡಾ. ಮಹಾಬಲೇಶ್ವರ ರಾವ್
ಪ್ರಕಾಶಕರು : ಸಾವಣ್ಣ ಎಂಟರ್ಪ್ರೈಸಸ್
ಪ್ರಥಮ ಮುದ್ರಣ : 2015
ನಾಲ್ಕನೇ ಮುದ್ರಣ: 2021 (ನನ್ನ ಓದಿಗೆ ಸಿಕ್ಕಿದ್ದು)
ಪುಟಗಳು : 200
ಬೆಲೆ : 200 ರೂ.
ಮಕ್ಕಳ ಪಾಲನೆ ಹಾಗೂ ಪೋಷಣೆ ಸಣ್ಣ ವಿಚಾರವಲ್ಲ. ಗಿಡವಾಗಿ ಬಗ್ಗದ್ದು ಮರವಾಗಿ ಬಗ್ಗೀತೇ..? ಎಂಬಂತೆ ಮಕ್ಕಳನ್ನು ತಿದ್ದುವಿಕೆ ಹಾಗೂ ಅವರ ವ್ಯಕ್ತಿತ್ವವನ್ನು ಪೋಷಿಸುವ ಕೆಲಸ ಚಿಕ್ಕಂದಿನಲ್ಲಿಯೇ ಆಗಬೇಕು. ಆದರೆ, ಇದರ ಜೊತೆಗೆ ನನಗನ್ನಿಸುವುದು, ಪ್ರತಿಯೊಂದು ಮಗುವೂ ವಿಭಿನ್ನ ಹಾಗೂ ಓದಿನ ಎಲ್ಲಾ ಜ್ಞಾನವನ್ನು ನಾವು ಮಕ್ಕಳ ಮೇಲೆ ಪ್ರಯೋಗಿಸಲಾಗದು ಎನ್ನುವುದು ಹೌದಾದರೂ.. ನಮಗೆ ಅರಿಯದ ಮಕ್ಕಳ ವ್ಯಕ್ತಿತ್ವದ ವಿಚಾರಗಳು ಹಾಗೂ ಸೂಕ್ಷ್ಮ ರೀತಿಯ ಗಮನಿಸುವಿಕೆಯ ಅಂಶಗಳನ್ನು ನಾವು ಈ ಪುಸ್ತಕದಿಂದ ಪಡೆದುಕೊಳ್ಳಬಹುದು. ಸಂಪೂರ್ಣವಾಗಿ ಇಲ್ಲಿನ ಎಲ್ಲವನ್ನೂ ನಾವು ಪಾಲಿಸಲಾಗದಿದ್ದರೂ.. ಪೋಷಕರಾಗಿ ನಾವು ತಿದ್ದಿಕೊಳ್ಳಬಹುದಾದ ಹಾಗೂ ಅನುಸರಿಸಬಹುದಾದ ವಿಚಾರಗಳನ್ನು ಕಲಿಯಬಹುದು.
ನಮಗೆ ಗೊತ್ತಿಲ್ಲದೆಯೇ ನಮ್ಮ ಕೆಲವು ಶಬ್ದಗಳು, ನಡೆಗಳು ಮಕ್ಕಳ ಮೇಲೆ ಪರಿಣಾಮ ಬೀರಬಹುದು. ಅಂತಹ ವಿಚಾರಗಳನ್ನು ತಿದ್ದಿಕೊಳ್ಳಬಹುದು. ಪೇರೆಂಟಿಂಗ್ ಪ್ರತಿ ಜನರೇಶನ್ ಗೆ ಮಾತ್ರವಲ್ಲ ಪ್ರತಿ ಕ್ಷಣಕ್ಕೂ ಅಪ್ಡೇಟ್ ಆಗುತ್ತದೆ.
ಶ್ರೀ ಕೃಷ್ಣಶಾಸ್ತ್ರಿ ಬಾಳಿಲ ಅವರು ಜಿನೋ ಅವರ 'ಟೀಚರ್ ಅಂಡ್ ಚೈಲ್ಡ್' ಕೃತಿಯನ್ನು 1997ರಲ್ಲಿ 'ಶಿಕ್ಷಕ-ವಿದ್ಯಾರ್ಥಿ' ಎಂಬ ಹೆಸರಿನಲ್ಲಿ ಕನ್ನಡಕ್ಕೆ ರೂಪಾಂತರ ಮಾಡಿದರು. ಆ ಬಳಿಕ ಲೇಖಕರು ಜಿನೋ ಅವರ 'ಬಿಟ್ವೀನ್ ಪೇರೆಂಟ್ ಅಂಡ್ ಚೈಲ್ಡ್' ಹಾಗೂ 'ಬಿಟ್ವೀನ್ ಪೇರೆಂಟ್ ಅಂಡ್ ಟೀನೇಜರ್' ಎಂಬ ಕೃತಿಗಳನ್ನು ಓದಿ ಮುಖ್ಯ ವಿಚಾರಧಾರೆಗಳನ್ನು ಪ್ರತಿಪಾದಿಸುವ ಪ್ರಯತ್ನ ಮಾಡಿದ್ದಾರೆ. ಇದು ಅನುವಾದ ಅಥವಾ ಭಾವಾನುವಾದವಲ್ಲ. ಅದನ್ನು ನಮ್ಮ ದೇಶದ ಸಂಸ್ಕೃತಿ, ಜೀವನಶೈಲಿ ಹಾಗೂ ಮೌಲ್ಯವರ್ಧನೆಗೆ ಹೊಂದುವಂತಹ ವಿಚಾರಗಳನ್ನು ಕಟ್ಟಿಕೊಟ್ಟಿರುವ ಪುಸ್ತಕ.
ಕೆಲವೊಮ್ಮೆ ಪಾಲಕರು ಹಾಗೂ ಮಕ್ಕಳ ನಡುವೆ 'ಎಲ್ಲಿಗೆ ಹೋಗಿದ್ದೆ' ಎಂದಾಗ 'ಹೊರಗಡೆ' ಎನ್ನುತ್ತಾರೆ. ನಂತರ 'ಏನು ಮಾಡಿದೆ, ಯಾಕೆ ಹೋಗಿದ್ದೆ..?' ಎಂದಾಗ 'ಏನಿಲ್ಲ. ಸುಮ್ಮನೆ..' ಎಂಬ ಮಕ್ಕಳ ಉತ್ತರ ಸಿಗಬಹುದು. ಇಂತಹ ಸಂಭಾಷಣೆಗಳು ನಿರರ್ಥಕ. ಮಕ್ಕಳು ಹೆತ್ತವರಿಗೆ ಸರಿಯಾದ ಉತ್ತರ ನೀಡದಿರುವುದು ಅಥವಾ ಜೊತೆ ಕೂತು ಮಾತನಾಡುವುದನ್ನು ತಪ್ಪಿಸಿಕೊಳ್ಳುವುದನ್ನು ಮಾಡುವುದು ಅವರಿಂದ ಭಾವಸ್ಪಂದನ ಸಿಗದಿದ್ದಾಗ. ಕೆಲವೊಮ್ಮೆ ಪೋಷಕರ ಅತಿಕಾಳಜಿ ಅಥವಾ ತಿದ್ದುವ ನಡವಳಿಕೆ ಅವರಿಗೆ ಇಷ್ಟವಾಗದಿರಬಹುದು. ಪೋಷಕರಲ್ಲಿ ಕಾಳಜಿ ಇದ್ದರೂ.. ಮಕ್ಕಳ ನಡವಳಿಕೆಯನ್ನು ಸುಧಾರಿಸುವುದಕ್ಕೂ ಮೊದಲು ಅವರ ಭಾವನೆಗಳ ಅನುಸಂಧಾನವಾಗಬೇಕು.
ಕೆಲವು ಪೋಷಕರು ಅವರ ಪೋಷಕರ ಜೊತೆಗೆ ತಮ್ಮ ಭಾವನೆಗಳನ್ನು ಪರಸ್ಪರ ಹಂಚಿಕೊಳ್ಳುವಂತಹ ವಾತಾವರಣದಲ್ಲಿ ಬೆಳೆದು ಬಂದಿರುವುದಿಲ್ಲ. ಹಾಗಾಗಿ ಮಕ್ಕಳ ಭಾವನೆಗಳು ಅರಿವಿರುವುದಿಲ್ಲ. ಹಾಗಾಗಿ ಅರಿವು ಮತ್ತು ಭಾವಸ್ಪಂದನ ಅತ್ಯಗತ್ಯ.
ನಾವು ಎಷ್ಟೋ ಬಾರಿ ಮಕ್ಕಳಿಗೆ ಕನೀನು ಜಾಣ ಕಂದ' , 'ಮುದ್ದು ಬಂಗಾರ' ಎಂದೆಲ್ಲಾ ಬೆಲೆಕಟ್ಟಿ ತೀರ್ಪು ನೀಡುವ ರೀತಿಯಲ್ಲಿ ಹೊಗಳಿಬಿಡುತ್ತೇವೆ. ಆ ಹೊಗಳುವಿಕೆ ತಪ್ಪು ಎನ್ನುತ್ತಾರೆ. ಇದು ಏಕೆ..? ಓದಿ ನೋಡಿ. ಹಾಗಾದರೆ ಮಕ್ಕಳನ್ನು ಹೊಗಳಬಾರದಾ..? ಮಕ್ಕಳನ್ನ ಹೊಗಳಿದರೆ ಅವರ ಆತ್ಮವಿಶ್ವಾಸ ವೃದ್ಧಿಸುತ್ತದೆ ಹಾಗೂ ಅವರ ಭದ್ರತೆಯ ಭಾವನೆಗಳು ಬಲಿಯುತ್ತವೆ ಎಂದು ನಂಬಿರುವ ಪೋಷಕರ ನಂಬಿಕೆ ಇದಕ್ಕೆ ವ್ಯತಿರಿಕ್ತವೇ ಓದಿ ನೋಡಿ.
ಮಕ್ಕಳಿಗೆ ಹಣೆಪಟ್ಟಿ ಕಟ್ಟಬಾರದು ಅಥವಾ ಅವರ ಬೆಲೆ ಕಟ್ಟಬಾರದು ಎನ್ನುವ ಸಂದೇಶ ಕೂಡ ಇಲ್ಲಿದೆ.
ಪೋಷಕರು ಕೊಡುವ ಭರವಸೆಗಳು, ಕೆಲವೊಮ್ಮೆ ಸುಳ್ಳು ಹೇಳಲು ಕೊಡುವ ಪ್ರೋತ್ಸಾಹ, ತೋರುವ ಆಮಿಷಗಳು ಮಕ್ಕಳ ಬೆಳವಣಿಗೆಯ ಹಂತಕದಲ್ಲಿ ಮಾರಕವಾಗುವುದೇಕೆ..?
ಮಕ್ಕಳು ಸುಳ್ಳು ಹೇಳಿದಾಗ ಮಕ್ಕಳನ್ನು ತನಿಖೆ ಮಾಡುವುದಕ್ಕಿಂತ ನಿರೋಧ ಮೇಲು ಅನ್ನುತ್ತಾರೆ. ಸುಳ್ಳಿಗೊಂದು ಸುಳ್ಳು ಪೋಣಿಸಿಕೊಂಡು ಹೋಗುವ ಆ ತನಿಖೆಯಲ್ಲಿ ಮಕ್ಕಳು ಶಿಷ್ಟಾಚಾರವನ್ನು ಮರೆಯಬಹುದು ಅಥವಾ ಕಂಗಾಲಾಗಬಹುದು. ಕೆಲವೊಮ್ಮೆ ಆ ವಿಚಾರಣೆಯಲ್ಲಿ ಒರಟುತನ ಇಣುಕಬಹುದು. ಹಾಗೆಂದು, ಆ ಸುಳ್ಳನ್ನು ಗುರುತಿಸಬಾರದು ಎಂದಲ್ಲ. ಬದಲಾಗಿ ನಮ್ಮ ನಡೆ ಅವರಿಗೊಂದು ಪಾಠದಂತಿರಬೇಕು. ಆ ಸೂಕ್ಷ್ಮ ನಡೆಯ ಸೂಕ್ಷ್ಮತೆ ಇಲ್ಲಿದೆ.
ಜವಾಬ್ದಾರಿಯನ್ನು ಬಲವಂತವಾಗಿ ಹೊರಿಸಲಾಗದು. ಅದು ಅಂತರಂಗದಲ್ಲಿ ಅರಳಬೇಕು. ಮನೆ ಹಾಗೂ ಸಮುದಾಯಗಳು ಬಿಂಬಿಸುವ, ಬೆಳೆಸುವ ಮೌಲ್ಯಗಳ ಆಸರೆಯಲ್ಲಿ ಬೆಳಗಬೇಕು. ಅದಕ್ಕೆ ತಿರುಗಾಟ ಹಾಗೂ ಪಯಣ ಹೇಗಿರಬೇಕು..? ಪಾಲಕರಿಂದ ಮಗುವಿಗೆ ಸಿಗುವ ಖಚಿತ ಸಂದೇಶ ಹೇಗಿರಬೇಕು ಓದಿ ಅರಿಯಿರಿ.
ಮಕ್ಕಳಿಗೆ ಶಿಸ್ತು ಎಂದರೆ ಶಿಕ್ಷೆ ಆಗಬಾರದು. ಒಬ್ಬ ವ್ಯಕ್ತಿ ಎಡವಿ ಬೀಳಬಹುದು... ಹಾಗೆಯೇ ಚೇತರಿಸಿಕೊಂಡು ಮೇಲಿದ್ದು ನಿಲ್ಲಲೂಬಹುದು. ಆ ಸಂದರ್ಭದಲ್ಲಿ ಶಿಕ್ಷೆ ಪರ್ಯಾಯವಾದ ಮಾರ್ಗವಲ್ಲ. ಹೆತ್ತವರ ಇಬ್ಬಂದಿತನದ ನಡವಳಿಕೆ ಹಾಗೂ ಪಾಲಕತ್ವದ ಬೇರುಗಳ ವಿವರ ಇಲ್ಲಿದೆ.
ಮಕ್ಕಳು ಶಾಲೆಗೆ ಹೊರಡುವ ಗಡಿಬಿಡಿಯಲ್ಲಿ ಪೆನ್ನು, ಪುಸ್ತಕ, ಟಿಫನ್ ಬಾಕ್ಸ್, ನೀರಿನ ಬಾಟಲ್ ಯಾವುದಾದರೂ ಒಂದನ್ನು ಮರೆತು ಬಸ್ ಅಥವಾ ರಿಕ್ಷಾ ಕಡೆಗೆ ಗಡಿಬಿಡಿಯಿಂದ ಧಾವಿಸುತ್ತಾರೆ. ಅಂತಹ ಸಂದರ್ಭದಲ್ಲಿ ನೀವು ಅವರನ್ನು ಎಚ್ಚರಿಸುತ್ತೀರಾ ಅಥವಾ ಅವರ ಬೇಜಾರು ಹಾಗೂ ಮರೆವಿನ ಬಗ್ಗೆ ಟೀಕೆಗಳನ್ನು ಮಾಡುತ್ತೀರಾ? ಒಮ್ಮೆ ಪ್ರಶ್ನೆ ಮಾಡಿಕೊಳ್ಳಿ. ಈ ಎರಡು ನಡೆಗಳಲ್ಲಿ ಯಾವುದು ಸರಿ ಎಂದು ಇಲ್ಲಿ ಹೇಳಿದ್ದಾರೆಂದು ಓದಿ.
ಶಾಲೆಯಿಂದ ಮಕ್ಕಳು ಬಂದ ನಂತರ ಪೋಷಕರ ನಡೆ ಹೇಗಿರುತ್ತದೆ ಹಾಗೂ ಅವರು ಉದ್ಯೋಗಕ್ಕೆ ಹೋಗಿ ಬಂದವರಾಗಿದ್ದಲ್ಲಿ ಅವರ ತಲೆಬಿಸಿ ಮಕ್ಕಳ ತಲೆಬಿಸಿಯ ಜೊತೆ ಸೇರಿ ಹೋದರೆ ಅಂತಹ ಸಂದರ್ಭಗಳನ್ನು ತಿಳಿಗೊಳಿಸುವುದು ಅಥವಾ ಅಂತಹ ಸಂದರ್ಭಗಳನ್ನು ತಪ್ಪಿಸುವುದು ಹೇಗೆ ಎಂಬ ವಿಚಾರಗಳು ಇಲ್ಲಿವೆ.
ಕುಟುಂಬದಲ್ಲಿ ಎರಡನೆಯ ಮಗು ಬರುವಾಗ ಹಿರಿಯ ಮಕ್ಕಳಲ್ಲಿ ಬರುವ ಮತ್ಸರ ಸಹಜ. ಅದಕ್ಕೆ ಕಾರಣವೇನು..? ಅಸೂಯೆಯನ್ನು ಹೇಗೆ ನಿವಾರಿಸುವುದು..? ಮಕ್ಕಳಿಬ್ಬರ ಬಳಿ ಹೇಗೆ ನಡೆದುಕೊಳ್ಳಬೇಕು ಎನ್ನುತ್ತಾರೆ..?
"ಪ್ರೀತಿ-ವಾತ್ಸಲ್ಯಕ್ಕೆ ಸಮತಾಭಾವ ಹೊಂದದು." ಎನ್ನುತ್ತಾ ನೀವು ಎಷ್ಟು ಪ್ರೀತಿ ಕೊಡುತ್ತೀರಿ ಎನ್ನುವುದಕ್ಕಿಂತ ಹೇಗೆ ಪ್ರೀತಿಸುತ್ತೀರಿ ಎಂಬುದು ಬಹಳ ಮುಖ್ಯ ಎನ್ನುತ್ತಾರೆ.
ಈ ಎಲ್ಲಾ ವಿಚಾರಗಳಿಗೆ ಉದಾಹರಣೆಗಳು ಮಾತ್ರವಲ್ಲ. ಹಲವಾರು ನೈಜ ಘಟನೆಗಳು ಹಾಗೂ ಅಂತಹ ಪ್ರಕರಣಗಳನ್ನು ಉಲ್ಲೇಖಿಸುತ್ತಾರೆ.
ಇದು ಚಿಕ್ಕಂದಿನಿಂದ ಸ್ವಲ್ಪ ದೊಡ್ಡವರಾಗುವವರೆಗಿನ ವಿಚಾರವಾದರೆ.. ಮುಂದೆ ಬೆಳೆದ ಮಕ್ಕಳ ಜೊತೆಗೆ ಹೇಗೆ ನಡೆದುಕೊಳ್ಳಬೇಕು ಅವರ ಶಿಕ್ಷಣ ಹೇಗಿರಬೇಕು, ಮಾನಸಿಕವಾಗಿ ಹಿಂಜರಿಕೆ ಇಲ್ಲದೆ, ವೈಜ್ಞಾನಿಕ ತಳಹದಿಯಲ್ಲಿ ಹದಿಹರೆಯದವರೊಂದಿಗೆ ಚರ್ಚಿಸುವ ವಿಚಾರಗಳಾವುವು ಎನ್ನುವುದನ್ನು ಪ್ರಸ್ತಾಪಿಸುತ್ತಾರೆ.
ಹರೆಯದ ಮಕ್ಕಳ ತಂದೆ-ತಾಯಿಗಳು ಎಷ್ಟು ಜೋಪಾನವಾಗಿದ್ದರೂ ಸಾಲದು. ಅವರ ಬೌದ್ಧಿಕ ವಿಕಾಸಕ್ಕೆ ಮಾರಕವಾಗುವ ರೀತಿ, ಅವರ ನಡೆಗಳು, ಅವರ ಬಳಿ ಇರುವ ಜನ, ಎಚ್ಚರಿಕೆ ಎಲ್ಲವನ್ನೂ ಮನಮುಟ್ಟುವಂತೆ ಹೇಳಿದ್ದಾರೆ.
ಮಕ್ಕಳಿಗಿಂತಲೂ ಹರೆಯದವರಲ್ಲಿ ಹಠ ಹೆಚ್ಚು. ಜೊತೆಗೆ ನಾನೇ ಸರಿ ಎಂಬ ಭಾವ. ಅಂತಹ ಸಂದರ್ಭದಲ್ಲಿ ಪೋಷಕರು ಅವರ ಮುಂದೆ ಅವರನ್ನೇ ಸರಿ ಎಂದರೆ ಅದಕ್ಕೆ ಸದರ ತೆಗೆದುಕೊಳ್ಳುತ್ತಾರೆ. ಇಲ್ಲವೇ, ಕೆಲವೊಮ್ಮೆ "ನಿಮಗೇನೂ ಗೊತ್ತಿಲ್ಲ. ನೀವು ಹಳೆಯ ಕಾಲದವರು" ಎನ್ನುವ ಮಕ್ಕಳೂ ಇಲ್ಲದ್ದಿಲ್ಲ. ಇಂತಹ ಸಂದರ್ಭದಲ್ಲಿ ಅವರ ಕೋಪ, ಉರಿ ಉರಿ ಕೋಪ, ಪ್ರೇಮ ಪ್ರಕರಣಗಳು ಇವೆಲ್ಲವನ್ನೂ ನಿಭಾಯಿಸುವುದು ಸುಲಭವಲ್ಲ. ಹಾಗೆಂದು, ಕಷ್ಟವೂ ಅಲ್ಲ. ಇವೆಲ್ಲಕ್ಕೂ ದಾರಿದೀಪವಾಗುವ ಕೆಲ ವಿಚಾರಗಳನ್ನು ಹೇಳಿದ್ದಾರೆ.
ಯುವ ದಂಪತಿಗಳು ನಗರದ ಮಧ್ಯದಲ್ಲಿ ದಾರಿ ತಪ್ಪುತ್ತಾರೆ. ಸರ್ಕಲ್ ನಲ್ಲಿ ನಿಂತಿದ್ದ ಪೊಲೀಸ್ ಸಮೀಪ ಹೋಗಿ "ನಾವು ದಾರಿ ತಪ್ಪಿದ್ದೇವೆ" ಎಂದು ಹೇಳುತ್ತಾರೆ. "ಈಗ ನೀವು ಎಲ್ಲಿದ್ದೀರಿ ಎಂಬುದು ನಿಮಗೆ ಗೊತ್ತೇ?" ಎಂದು ಪೊಲೀಸ್ ಕೇಳಿದಕ್ಕೆ "ಹೌದು. ಈ ಸರ್ಕಲ್ ನಲ್ಲಿ ಬರೆದಿದೆಯಲ್ಲ." ಎಂದು ಆ ಸರ್ಕಲ್ ಹೆಸರು ಹೇಳುತ್ತಾರೆ. ಅದಕ್ಕೆ ಪೊಲೀಸ್ ಮಾರ್ಮಿಕವಾಗಿ ಹೇಳುವುದು "ನೀವು ದಾರಿ ತಪ್ಪಿಲ್ಲ. ನಿಮಗೆ ಈಗ ಸರಿಯಾದ ದಾರಿ ತೋರಬೇಕಾಗಿದೆಯಷ್ಟೇ.." ಎಂದು.
ಇಲ್ಲಿ ಹಾಗೆ ಪಾಲನೆ-ಪೋಷಣೆಯ ಪಯಣಕ್ಕೆ ದಾರಿ ತೋರುತ್ತಿದ್ದಾರೆ. ದಿಕ್ಕು-ದಿಸೆ, ಕೌಶಲ್ಯಗಳು ಎಲ್ಲಾ ಮೇಳೈಸಿದ ಮಾತ್ರಕ್ಕೆ ಪಾಲಕರು ಸರಿಯಾದ ರೀತಿಯಲ್ಲಿ ವ್ಯವಹರಿಸುತ್ತಾರೆ ಎಂಬ ಭರವಸೆ ಇಲ್ಲ ಎಂದು, ಮಕ್ಕಳ ನಡೆ ಇಂತಿಷ್ಟೇ ಸರಿ ಎಂದು ಖಡಾಖಂಡಿತವಾಗಿ ಹೇಳಲಾಗದು. ಎಲ್ಲದರ ಜೊತೆಗೆ ಒಂದಿಷ್ಟು ಅದೃಷ್ಟವೂ ಬೇಕು ಎನ್ನುತ್ತಾರೆ. ಅದು ನಿಜವೂ ಹೌದು.
ಧನಾತ್ಮಕ ಓದು. ಖ್ಯಾತ ಚಿಕಿತ್ಸಕ, ಮನೋವಿಜ್ಞಾನಿ ಡಾ. ಹೈಮ್ ಜಿನೋ ಅವರಿಂದ ಪ್ರಭಾವಿತರಾದ ಶಿಕ್ಷಣ ಚಿಂತಕ ಡಾ. ಮಹಾಬಲೇಶ್ವರ ರಾವ್ ಅವರ ಈ ಕೃತಿಯನ್ನು ನೀವ್ಯ ಓದಿ ನೋಡಿ.
~ವಿಭಾ ವಿಶ್ವನಾಥ್
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ