ಪುಸ್ತಕದ ಶೀರ್ಷಿಕೆ : ಯವನವಿಜೇತ ಚಂದ್ರಗುಪ್ತ
ಮೂಲ ಲೇಖಕರು : ಪಂ. ದೀನದಯಾಳ ಉಪಾಧ್ಯಾಯ
ಅನುವಾದ : ಶಿವರಾಮು
ಪ್ರಕಾಶಕರು :ರಾಷ್ಟ್ರೋತ್ಥಾನ ಸಾಹಿತ್ಯ
ಪ್ರಥಮ ಮುದ್ರಣ : 1969
ಮರು ಮುದ್ರಣ : 2023
ಪುಟಗಳು : 70
ಬೆಲೆ : 55 ರೂ.
ಇಂದಿನ ಎಳೆಯ ಪೀಳಿಗೆಯನ್ನು ದೃಷ್ಟಿಯಲ್ಲಿರಿಸಿಕೊಂಡು ಪ್ರಕಟಿಸಿರುವ ಹೊತ್ತಿಗೆ ಇದು ಎನ್ನುತ್ತಾ.. ಚಿಕ್ಕ ವಯಸ್ಸಿನಿಂದಲೂ ಮಕ್ಕಳಲ್ಲಿ ದೇಶಪ್ರೇಮ, ಸತ್ಯ, ಚರಿತ್ರೆಯ ಅರಿವು, ಅಭಿಮಾನವನ್ನು ಬೆಳೆಸಬೇಕಾಗಿರುವುದು ರಾಷ್ಟ್ರೀಯ ಶಿಕ್ಷಣದ ಪ್ರಮುಖವಾದ ಅಂಗ ಎನ್ನುತ್ತಾರೆ ಪ್ರಕಾಶಕರು.
ಈ ಕೃತಿಯ ಮೂಲ ಲೇಖಕರಾದ ಪಂಡಿತ ದೀನದಯಾಳ ಉಪಾಧ್ಯಾಯರು ಸುಪ್ರಸಿದ್ಧ ಸಮಾಜ ಚಿಂತಕರು, ಇತಿಹಾಸಜ್ಞ ಹಾಗೂ ಲೇಖಕರು.
ಚಂದ್ರಗುಪ್ತ ಮತ್ತು ಚಾಣಕ್ಯರು ಭವ್ಯ ಸಾಮ್ರಾಜ್ಯದ ಕನಸು ಕಂಡು ಹೊರಟಿದ್ದವರು. ಅದನ್ನು ಇಬ್ಬರೂ ಸೇರಿ ಪೂರ್ಣಗೊಳಿಸಿದರು. ಒಬ್ಬರು ತಮ್ಮ ಅಜೇಯ ಬಾಹುಬಲದಿಂದ, ಮತ್ತೊಬ್ಬರು ತಮ್ಮ ಪ್ರಚಂಡ ಬುದ್ಧಿಬಲದಿಂದಲೂ ಅದನ್ನು ನನಸು ಮಾಡಿದವರು. ಅಲಿಕ ಸುಂದರನ ಆಕ್ರಮಣಕ್ಕೆ ಭಾರತದಲ್ಲಿ ಅಲ್ಲೋಲಕಲ್ಲೋಲ ಉಂಟಾದಾಗ, ಭಾರತದಲ್ಲಿ ಒಗ್ಗಟ್ಟಿಲ್ಲದೆ ಹರಿದು ಹಂಚಿ ಹೋಗಿದ್ದಾಗ, ಚಂದ್ರಗುಪ್ತ ಹಾಗೂ ಚಾಣಕ್ಯರು ಹೇಗೆ ಆಲೋಚಿಸಿದರು ಹಾಗೂ ಅದನ್ನು ಹೇಗೆ ಕಾರ್ಯರೂಪಕ್ಕೆ ತಂದರು ಎಂಬುದನ್ನು ನಾವಿಲ್ಲಿ ಕಾಣಬಹುದು.
ಅದಕ್ಕೂ ಮೊದಲು ಚಂದ್ರಗುಪ್ತನ ಆಡಳಿತ ಹೇಗಿತ್ತು ಎಂಬ ಕೆಲ ವಿಚಾರಗಳು ಹೀಗಿವೆ :
ಪಾಟಲಿಪುತ್ರ ಚಂದ್ರಗುಪ್ತ ಮೌರ್ಯನ ರಾಜಧಾನಿ. ಅದು ಜಗತ್ತಿನ ಆಗಿನ ಪ್ರಮುಖ ನಗರಗಳಲ್ಲೊಂದಾಗಿತ್ತು. ಜಗತ್ತಿನ ಎಲ್ಲಾ ರಾಷ್ಟ್ರಗಳ ರಾಜದೂತರು ಚಂದ್ರಗುಪ್ತನ ಆಸ್ಥಾನದಲ್ಲಿರುತ್ತಿದ್ದರು. ಸಾಮ್ರಾಟನೇ ಆಗಾಗ ಸಾಮ್ರಾಜ್ಯ ಸಂಚಾರ ಕೈಗೊಳ್ಳುತ್ತಿದ್ದ. ಸ್ವಚ್ಛತೆಗೆ ಕಟ್ಟುನಿಟ್ಟಾದ ಕ್ರಮವಿತ್ತು. ಮನೆಗಳನ್ನು ಪೂರ್ವಯೋಜನೆಯಂತೆಯೇ ಕಟ್ಟಬೇಕಿತ್ತು. ಅದಕ್ಕೆ ಮೊದಲು ಆರೋಗ್ಯಾಧಿಕಾರಿಯಿಂದ ಅನುಮತಿ ಪಡೆಯಬೇಕಿತ್ತು. ಮೌರ್ಯರ ಕಾಲದಲ್ಲಿ ಹೆದ್ದಾರಿಗಳ ಇಬ್ಬದಿಗಳಲ್ಲಿಯೂ ಇದ್ದ ಸಾಲುಮರಗಳು, ಯಾತ್ರಿಕರು ತಂಗಲು ಧರ್ಮಶಾಲೆಗಳು, ಬಾವಿಗಳು ಹಾಗೂ ನಿರಾತಂಕವಾದ ವ್ಯಾಪಾರ-ವಹಿವಾಟುಗಳು, ಯೋಗ್ಯನ್ಯಾಯದ ಪದ್ಧತಿ, ಜ್ಞಾನ ಹಾಗೂ ವಿದ್ಯಾಪ್ರಸಾರದ ಕಡೆಗೆ ವಿಶೇಷ ಗಮನವಿದ್ದ ದಿನಗಳು, ತಕ್ಷಶಿಲಾ ಹಾಗೂ ನಲಂದಾ ವಿಶ್ವವಿದ್ಯಾಲಯಗಳು ಲೋಕ ಪ್ರಸಿದ್ಧವಾಗಿದ್ದ ದಿನಗಳು. ಹೀಗೆ ಚಂದ್ರಗುಪ್ತನ ಆಡಳಿತ ವ್ಯವಸ್ಥೆಯಲ್ಲಿ ಏನೊಂದೂ ಕುಂದು-ಕೊರತೆಗಳಿಲ್ಲದೆ ಆದರ್ಶವಾಗಿತ್ತು ಎಂದು ಪಾಶ್ಚಾತ್ಯ ವಿದ್ವಾಂಸರು ಸಹ ಬಾಯಿ ತುಂಬಾ ಹೊಗಳಿದ್ದಾರೆ. ಸೆಲ್ಯುಕಸನ ರಾಯಭಾರಿಯಾಗಿದ್ದ ಮೆಗಸ್ತನಿಸನಂತು ತುಂಬಾ ಸುಂದರವಾಗಿ ಹೇಳಿದ್ದಾನೆ.
ಆದರೆ ಈ ದಿನಗಳು ಬರಲು ಅಷ್ಟು ಸುಲಭವಿರಲಿಲ್ಲ.
ಮಗಧದ ಆಗಿನ ರಾಜಧಾನಿ ಕುಸುಮಪುರ ಈಗಿನ ಪಟ್ನಾ. ಆಗ ಮಹಾಪದ್ಮಾನಂದರು ಆಳುತ್ತಿದ್ದರು. ರಾಜಭಂಡಾರದಲ್ಲಿ ಮಹಾಪದ್ಮ ವರಹಗಳಿದ್ದುದರಿಂದಲೇ ಅವನಿಗೆ ಮಹಾಪದ್ಮಾನಂದ ಎಂದು ಹೆಸರಾಯಿತು. ಮಹಾಪದ್ಮ ಎಂದರೆ ಏನು ಎಂದು ನೀವೇ ಓದಿ ನೋಡಿ.
ಈ ಸಾಮ್ರಾಜ್ಯದಲ್ಲಿ ಇದ್ದವನೇ ಚಂದಗುಪ್ತ. ಆಗ ಆತ ಆ ಸಾಮ್ರಾಜ್ಯದ ಸಾಮಾನ್ಯ ಸೈನಿಕನಷ್ಟೇ. ಆ ಸಂಧರ್ಭದಲ್ಲಿ ಧನಾನಂದನ ಆಡಳಿತ. ಅದು ಬಹಳವೇ ಕೆಟ್ಟಿತ್ತು. ಮಗಧದ ರಾಜನನ್ನೇ ಬದಲಾಯಿಸಿ ಬಿಡೋಣ ಎಂದು ಸೈನಿಕರು ಮಾತನಾಡುತ್ತಿದ್ದ ಸಂದರ್ಭ. ಚಂದ್ರಗುಪ್ತನೇ ನಮ್ಮ ಮಹಾರಾಜ ಎನ್ನುವ ಜಯಘೋಷವೂ ಅಲ್ಲಿತ್ತು. ಅದೇ ಸಮಯಕ್ಕೆ ಬಂದಿದ್ದು ಅಮಾತ್ಯರಾಕ್ಷಸ.
ಗ್ರೀಕರನ್ನು ಸೋಲಿಸಲು ಚಂದ್ರಗುಪ್ತನಂತಹ ಸಾಹಸಿ ಹಾಗೂ ಪರಾಕ್ರಮಿ ರಾಜನ ಅಗತ್ಯವಿದ್ದಂತೆಯೇ.. ಅಮಾತ್ಯರಾಕ್ಷಸನಂತಹ ರಾಜಕಾರಣ ಕುಶಲನಾದ ಮಂತ್ರಿಯ ಅಗತ್ಯವೂ ಇತ್ತು.
ಅಮಾತ್ಯ ರಾಕ್ಷಸನಿಗೆ ರಾಜನ ಮೇಲೆ ಬಹಳವೇ ನಿಷ್ಠೆ. ಆದರೆ, ಧನಾನಂದನ ಬಗ್ಗೆ ,ಆತನ ಆಡಳಿತದ ಬಗ್ಗೆ ಪ್ರಜೆಗಳೆಲ್ಲರೂ ಬೇಸತ್ತಿದ್ದರು. ಚಂದ್ರಗುಪ್ತನನ್ನೇ ತಮ್ಮ ರಕ್ಷಕನೆಂದು ಭಾವಿಸಿದ್ದರು. ಈ ಸಂದರ್ಭದಲ್ಲಿ ಅಮಾತ್ಯರಾಕ್ಷಸ ಆತನನ್ನು ಸೆರೆಗೆ ತಳ್ಳಿದ. ಆದರೆ, ಚಂದ್ರಗುಪ್ತ ಸೆರೆಮನೆಯಿಂದ ತಪ್ಪಿಸಿಕೊಂಡು ಹೊರನಡೆದಾಗಿತ್ತು.
"ಶಸ್ತ್ರ ಬಲಕ್ಕಿಂತ ಮನೋಬಲ ದೊಡ್ಡದು. ಆತ್ಮವಿಶ್ವಾಸವಿದ್ದವನೇ ಹೆಚ್ಚು ಶಕ್ತಿಶಾಲಿ." ಎನ್ನುತ್ತಿದ್ದ ಚಂದ್ರಗುಪ್ತ.
ತಕ್ಷಶಿಲೆಯಲ್ಲಿ ಅಮಾತ್ಯರಾಕ್ಷಸ ಅಥವಾ ಕಾತ್ಯಾಯನ ಹಾಗೂ ವಿಷ್ಣುಗುಪ್ತ ಅಥವಾ ಚಾಣಕ್ಯ ಇಬ್ಬರೂ ಸಹಪಾಠಿಯಾಗಿದ್ದವರು. ಚಾಣಕ್ಯನದ್ದು ತೀಕ್ಷ್ಣ ಬುದ್ಧಿಶಕ್ತಿ. ಆತ ಚುರುಕು ಆದರೆ, ದೇಹ ಸೌಂದರ್ಯದಲ್ಲೊಂದು ಕೊರತೆಯಿತ್ತು. ಆದರೆ, ಇವರಿಬ್ಬರೂ ಜೀವದ ಗೆಳೆಯರು. ಇವರಿಬ್ಬರಿಗೂ ರಾಷ್ಟ್ರಭಕ್ತಿ ಹೆಚ್ಚು. ಶಿಕ್ಷಣ ಪೂರೈಸಿದ ಮೇಲೆ ಅಮಾತ್ಯರಾಕ್ಷಸನು ರಾಜ್ಯದ ಮಂತ್ರಿ ಪದವಿಗೇರಿದರೆ, ಚಾಣಕ್ಯ ಎಲ್ಲ ಜನಸಂದಣಿಯಿಂದ ದೂರವಾಗಿ ಸರಳ ಕುಟೀರದಲ್ಲಿ ನೆಲೆಸಿದ.
ಹೀಗೆ ನೆಲೆಸಿದ್ದ ಚಾಣಕ್ಯ ಮತ್ತೆ ಮಗದಕ್ಕೆ ಬರಲು ಕಾರಣವೇನು..? ಆತ ಅಮಾತ್ಯರಾಕ್ಷಸನನ್ನು ಭೇಟಿಯಾಗಲಿಲ್ಲವೇ..? ಇಬ್ಬರ ಅಭಿಪ್ರಾಯಗಳು ಏನಿದ್ದವು..? ಗ್ರೀಕರ ಆಕ್ರಮಣ ಭಾರತದ ಮೇಲಾಗುತ್ತಿದ್ದಾಗ ಅದನ್ನು ತಡೆಯಲು ಚಾಣಕ್ಯ, ಚಂದ್ರಗುಪ್ತ ಜೊತೆಯಾದರೆ ಅಮಾತ್ಯರಾಕ್ಷಸ ಚಂದ್ರಗುಪ್ತನನ್ನು ಸೆರೆಗೆ ಹಾಕಿದ್ದೇಕೆ..? ನೀವೇ ಓದಿ ನೋಡಿ.
ರಾಷ್ಟ್ರದ ಹಿತದಲ್ಲಿಯೇ ತನ್ನ ಹಿತವೂ ಅಡಗಿದೆ ಎಂಬ ಸರಳ ಸಂಗತಿಯೂ ತಿಳಿಯದ ನಂದನ ಅವನತಿಗೂ ಮುನ್ನ ಚಾಣಕ್ಯನ ಜೊತೆಗೆ ಆದ ಮಾತುಕತೆ ಏನು? ಚಾಣಕ್ಯನ ಜೊತೆಗೆ ನಂದನ ವರ್ತನೆ ಹೇಗಿತ್ತು..?
ರಾಜನಿರುವುದು ರಾಷ್ಟ್ರಕ್ಕಾಗಿಯೇ ಹೊರತು ರಾಜನಿಗಾಗಿ ರಾಷ್ಟ್ರವಲ್ಲ. ರಾಷ್ಟ್ರ ಹಾಗೂ ದೇಶಭಕ್ತಿಗೆ ಪೋಷಕನಾಗುವುದೇ ನಿಜವಾದ ರಾಜಭಕ್ತಿ. ಹಾಗಿಲ್ಲವಾದರೆ ಅದು ತೀರಾ ಪಾಪಕರ, ತ್ಯಜ್ಯ ಎನ್ನುವ ಚಾಣಕ್ಯನ ಮಾತು ಅಡಿಗಡಿಗೆ ದೇಶಪ್ರೇಮವನ್ನು ಬಿಂಬಿಸುತ್ತದೆ.
ಚಾಣಕ್ಯ ಮತ್ತು ಚಂದ್ರಗುಪ್ತರು ಒಂದಾಗಿ ಅಲಿಕಸುಂದರನನ್ನು ಭಾರತದಿಂದ ಓಡಿಸಿದ್ದು ಮಾತ್ರವಲ್ಲದೆ, ಅವನ ಸೇನೆಯನ್ನು ಬಹುಮಟ್ಟಿಗೆ ನಾಶಪಡಿಸುತ್ತಾರೆ. 'ನಾನು ಭಾರತದ ಮೇಲೆ ಆಕ್ರಮಣ ಮಾಡಿದ್ದು ಜೀವನದಲ್ಲಿ ಎಲ್ಲಕ್ಕಿಂತ ದೊಡ್ಡ ತಪ್ಪಾಯಿತು' ಎಂದು ಅವನು ಹೇಗೋ ಜೀವ ಉಳಿಸಿಕೊಂಡು ಗ್ರೀಕ್ ಸೇರುತ್ತನಾದರೂ.. ತನ್ನ ಸೇನಾಧಿಪತಿಯಾಗಿದ್ದ ಸೆಲೆಯೂಕ ಭಾರತ ಗೆಲ್ಲುವ ತನ್ನ ಹಿರಿದಾಸೆ ಪೂರೈಸಬೇಕೆಂದು ಪ್ರತಿಜ್ಞೆ ಮಾಡಿಸಿಕೊಳ್ಳುತ್ತಾನೆ.
ಇದರ ಪರಿಣಾಮ ಚಂದ್ರಗುಪ್ತ ಹಾಗೂ ಚಾಣಕ್ಯರಿಗೆ ತಿಳಿದಿತ್ತು. ನಂದ ಹಾಗೂ ಮೊದಲು ಗ್ರೀಕರಿಗೆ ಸಹಾಯ ಮಾಡಿ ಈಗ ಭಾರತದ ಸಾಮ್ರಾಟನಾಗಲು ಹೊರಟಿದ್ದ ಪರ್ವತಕ ಜೊತೆಗೆ ಸೆಲೆಯೂಕ ಹೀಗೆ ಎಲ್ಲರನ್ನೂ ನಿವಾರಿಸಿ ಚಾಣಕ್ಯ ಚಂದ್ರಗುಪ್ತನನ್ನು ಸಾಮ್ರಾಟನನ್ನಾಗಿಸಲು ಗಟ್ಟಿಯಾಗಿ ನಿಲ್ಲುತ್ತಾನೆ.
"ಸಾಮ್ರಾಟ ಆಗುವುದಕ್ಕೂ, ಬಿಡುವುದಕ್ಕೂ ನೀನಾರು? ಇಂದು ದೇಶಕ್ಕೆ ಅಗತ್ಯವಿದ್ದರೆ ಸಾಮ್ರಾಟನೂ ಆಗಬೇಕು. ನಾಳೆ ಭಿಕ್ಷುಕನಾಗಬೇಕಾಗಿ ಬಂದರೆ ಅದಕ್ಕೂ ಸಿದ್ಧನಾಗಬೇಕು" ಎಂದು ಎಚ್ಚರಿಕೆ ಹೇಳಿಯೇ ಆತನನ್ನು ಸಿದ್ಧಗೊಳಿಸುತ್ತಾನೆ.
"ದೇಶದೆದಿರು ವೈಯಕ್ತಿಕ ಸ್ವಾರ್ಥಕ್ಕೆ ನಾನೇನೂ ಮಹತ್ವ ನೀಡಿಲ್ಲ. ಆದರೆ ಸರ್ವಾಂಗ, ಪರಿಪೂರ್ಣ ದೇಶಭಕ್ತಿಯ ಕಲ್ಪನೆ ಇದುವರೆಗೂ ನನಗೆ ಹೊಳೆದೇ ಇರಲಿಲ್ಲ. ಇದೊಂದು ಹೊಸಪಾಠ." ಎನ್ನುವ ಚಂದ್ರಗುಪ್ತನಿಗೆ ನಿಜವಾದ ದಾರಿದೀಪವಾಗುವುದು ಚಾಣಕ್ಯ.
ಮುಂದೆ ಪರ್ವತಕನನ್ನು ನಿವಾರಿಸಿ, ಸೆಲೆಯೂಕನನ್ನು ಹಿಮ್ಮೆಟ್ಟಿಸಿ, ಉತ್ತರ-ದಕ್ಷಿಣ, ಪೂರ್ವ-ಪಶ್ಚಿಮಗಳಲ್ಲಿನ ಇಡೀ ಭಾರತವನ್ನು ಒಂದೇ ಸೂತ್ರದಲ್ಲಿ ಬೆಸೆಯುವ ಚಾಣಕ್ಯ ಹಾಗೂ ಚಂದ್ರಗುಪ್ತರ ಉದ್ದೇಶ ಕೇವಲ 12 ವರ್ಷದೊಳಗೆ ಪೂರ್ಣವಾಗುತ್ತದೆ. ಸಿಂಹಾಸನವೇರಿದ ಚಂದ್ರಗುಪ್ತ ಹೇಗಿದ್ದ..? ಸೋತ ರಾಜರನ್ನು ಹೇಗೆ ನಡೆಸಿಕೊಳ್ಳುತ್ತಿದ್ದ..? ದೇಶದ ಹಿತ ಮತ್ತು ಗೌರವಗಳನ್ನು ಹೀಗೆ ಚಿಂತಿಸುತ್ತಿದ್ದ ಓದಿ ನೋಡಿ.
ಇಲ್ಲಿ ಚಕ್ರವರ್ತಿ ಚಂದ್ರಗುಪ್ತ ಹಾಗೂ ಮಂತ್ರಿ ಚಾಣಕ್ಯರಿಗಿಂತ ಹೆಚ್ಚಾಗಿ ಇಬ್ಬರು ಅಪರಿಮಿತ ದೇಶಭಕ್ತರನ್ನು ಕಾಣಬಹುದಾಗಿದೆ. ಮಕ್ಕಳಲ್ಲಿ ದೇಶಭಕ್ತಿ ತುಂಬಿಸಲು ಒಂದು ಒಳ್ಳೆ ಪುಸ್ತಕವಿದು.
(ಇಲ್ಲಿ ಅಲೆಕ್ಸಾಂಡರ್ ನನ್ನು ಅಲಿಕಸುಂದರ ಎಂದು ಸಂಬೋದಿಸಿದ್ದಾರೆ. ಸ್ಥಳ ಹಾಗೂ ವ್ಯಕ್ತಿಗಳ ಹೆಸರನ್ನು ಅಲ್ಲಿರುವಂತೆಯೇ ಉಲ್ಲೇಖಿಸಿದ್ದೇನೆ.)
~ವಿಭಾ ವಿಶ್ವನಾಥ್
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ