ಪುಸ್ತಕದ ಶೀರ್ಷಿಕೆ : ಹೊಯ್ಸಳರ ಇತಿಹಾಸ
ಲೇಖಕರು : ಎ ಎಸ್ ನಂಜುಂಡಸ್ವಾಮಿ
ಪ್ರಕಾಶಕರು : ಸಮಾಜ ಪುಸ್ತಕಾಲಯ, ಧಾರವಾಡ
ಪ್ರಥಮ ಮುದ್ರಣ : 1970
ಪುಟಗಳು : 120
ರಾಣಿ ಶಾಂತಲೆ ಹಾಗೂ ವಿಷ್ಣುವರ್ಧನರ ಕುರಿತ ಐತಿಹಾಸಿಕ ಕಾದಂಬರಿಗಳನ್ನು ಓದಿದಾಗ ಹಾಗೂ ನಮ್ಮ ಜಿಲ್ಲೆಯಲ್ಲಿರುವ ಬೇಲೂರು, ಹಳೇಬೀಡಿನ ಹೊಯ್ಸಳರ ದೇವಾಲಯಗಳನ್ನು ನೋಡಿದಾಗ.. ಹೊಯ್ಸಳರ ಇತಿಹಾಸದ ಕುರಿತಾಗಿ ಹೆಚ್ಚಿನ ಮಾಹಿತಿ ತಿಳಿದುಕೊಳ್ಳಲು ಹೊರಟಾಗ ಸಿಕ್ಕ ಪುಸ್ತಕವಿದು. ಹೊಯ್ಸಳರ ಇತಿಹಾಸಕ್ಕೆ ಒಂದು ಮುನ್ನುಡಿಯಂತೆ ಈ ಪುಸ್ತಕವನ್ನು ಓದಬಹುದು. ಹಲವಾರು ವಿಶೇಷ ವಿಚಾರಗಳು ಇದರಿಂದ ತಿಳಿದುಬಂದವು. ಈ ಪುಸ್ತಕದಲ್ಲಿ ಮುಖ್ಯವಾಗಿ ಶಾಸನಾಧಾರಿತ ಮಾಹಿತಿಗಳನ್ನು ಆದರಿಸಿ ಇತಿಹಾಸವನ್ನು ಕಟ್ಟಿಕೊಟ್ಟಿದ್ದಾರೆ. ಹೊಯ್ಸಳರ ಕಾಲದ ಶಾಸನಗಳು ತಂಜಾವೂರಿನಿಂದ ಹಿಡಿದು ಸೊಲ್ಲಾಪುರದವರೆಗೂ.. ಕೊಡಗಿನಿಂದ ಹಿಡಿದು ಪೂರ್ವ ಕರಾವಳಿಯಲ್ಲಿನ ದಕ್ಷಿಣ ಆರ್ಕಾಟ್ ಜಿಲ್ಲೆಯವರೆಗೂ ದೊರೆತಿವೆ.
"ಹೊಯ್ಸಳರು ಅಪ್ಪಟ ಕನ್ನಡಿಗರು. ಅವರ ಕನ್ನಡತನದ ಬಗ್ಗೆ ಯಾವ ಅನುಮಾನಕ್ಕೂ.. ವಿವಾದಕ್ಕೂ ಆಸ್ಪದವೇ ಇಲ್ಲ. ಅಷ್ಟೇ ಅಲ್ಲ, ಕನ್ನಡಿಗರ ಹೃದಯದಲ್ಲಿ ಕನ್ನಡಿಗ ಎಂಬ ಅಭಿಮಾನವನ್ನು ಒಪ್ಪಿಸಿದ ಶ್ರೇಯಸ್ಸು ಹೊಯ್ಸಳರಿಗೆ ಸಲ್ಲಬೇಕು." ಎನ್ನುತ್ತಾರೆ ಲೇಖಕರು
"ಹೊಯ್ಸಳರ ಓಲಗದಲ್ಲಿ ಕನ್ನಡ ಅಭಿಮಾನದ ಹೊಸ ಸ್ಪೂರ್ತಿಯು ಮೈದೋರದಿದ್ದರೆ.. ಸ್ವಲ್ಪ ಅವಧಿಯಲ್ಲಿಯೇ ಕರ್ಣಾಟಕ ನಿಜವಾಗಿಯೂ ಹೇಳಹೆಸರಿಲ್ಲದಂತಾಗುತ್ತಿತ್ತು ಎಂಬುದಕ್ಕೆ ಸಂದೇಹವಿಲ್ಲ." ಎನ್ನುತ್ತಾರೆ ಶ್ರೀ ಶಂ. ಬಾ. ಜೋಶಿಯವರು.
*************************
ಹೊಯ್ಸಳರ ಉಗಮ :
ಹೊಯ್ಸಳರು ಸಹ ಗುಡ್ಡಗಾಡು ಜನಾಂಗದ ಅಧಿಪತಿಗಳಾಗಿ ತಮ್ಮ ಜೀವನಯಾತ್ರೆಯನ್ನು ಆರಂಭಿಸಿರಬೇಕೆಂದು ಇತಿಹಾಸ ಹಾಗೂ ಸಂಶೋಧಕರು ತರ್ಕಿಸಿದ್ದಾರೆ ಎನ್ನುತ್ತಾ 'ಮಲೆಪರೊಳ್ಗಂಡ' ಎಂಬ ಬಿರುದನ್ನು ಧರಿಸಿದ್ದ ಗುಡ್ಡಗಾಡು ಜನರೇ ಮೂಲದವರು ಎನ್ನುತ್ತಾರೆ.
ಶ್ರವಣಬೆಳಗೊಳದ ಶಾಸನದಲ್ಲಿ ಉಲ್ಲೇಖಿಸಿರುವ ಮಾಹಿತಿಯನ್ನು ಗಮನಿಸುವುದಾದರೆ.. ಪೌರಾಣಿಕ ವಂಶಾವಳಿಯ ಪ್ರಕಾರ ನಹುಷನ ಮಗ, ಯಯಾತಿಯ ಮಗನಾದ ಯದುವಿನ ವಂಶದಲ್ಲಿ ಜನಿಸಿದ ಪ್ರಖ್ಯಾತ ಸಳನೇ ಹೊಯ್ಸಳ ಸಂತತಿಯ ಮೂಲಪುರುಷ ಎನ್ನುತ್ತಾರೆ.
ಮಂಡ್ಯ ಜಿಲ್ಲೆಯ ಬಸರಾಳು ಬಳಿ ದೊರೆತ ದಾಖಲೆಯೊಂದು ಹೊಯ್ಸಳ ಎಂಬ ಹೆಸರು ಬಂದ ಬಗೆಯನ್ನು ಬಣ್ಣಿಸಿದೆ. ಶಶಾಕಪುರದ ವಾಸಂತಿಕಾ ದೇವಾಲಯದ ಅಂಗಳದಲ್ಲಿ ಮುನಿಯೊಬ್ಬರ ಮೇಲೆ ಹುಲಿಯೊಂದು ಹಾರಿ ಬಂದಾಗ ಸಳ ಗುರುವಿನ ಆದೇಶದಂತೆ ಹುಲಿಯನ್ನು ಸಂಹರಿಸುತ್ತಾನೆ. 'ಹೊಯ್ ಸಳ' ಎಂಬ ಆದೇಶವೇ ಹೊಯ್ಸಳ ಎಂಬ ಹೆಸರಿಗೆ ಕಾರಣವಾಗಿದೆ ಎನ್ನುತ್ತಾರೆ. ಅದೇ ತಾಲೂಕಿನ ಮತ್ತೊಂದು ಶಾಸನದ ಪ್ರಕಾರ ಸುದತ್ತನು ತನ್ನನ್ನು ರಕ್ಷಿಸಿದ ಸಳನಿಗಾಗಿ ಪದ್ಮಾವತಿ ದೇವತೆಯಿಂದ ರಾಜ್ಯವನ್ನು ಪಡೆದ ಎಂದು ಹೇಳುತ್ತಾರೆ. ಬೆಂಗಳೂರಿನ ತಾಮ್ರಶಾಸನ ಹಾಗೂ ನಾಗಮಂಗಲ ಮತ್ತು ಬೇಲೂರಿನ ಶಾಸನವೂ ಬೇರೆಯದೇ ಕಥೆಗಳನ್ನು ಹೇಳುತ್ತವೆ.
*************************
ಹೊಯ್ಸಳ ರಾಜರ ಚರಿತ್ರೆ :
ಶಕೆ 995ರ ಬೆಳಿಗ್ಗೆ ಶಶಾಕಪುರ ಅಥವಾ ಸೊಸೆಯೂರಿನಲ್ಲಿ ನೆಲೆಸಿದ್ದ ಹೊಯ್ಸಳ ಅರಸರು ಕಲ್ಯಾಣಿಯ ಚಾಲುಕ್ಯರ ಮಾಂಡಲೀಕರಾಗಿದ್ದು, ವಿಷ್ಣುವರ್ಧನನ ಆಳ್ವಿಕೆಯ ಕಾಲದಲ್ಲಿ ಸ್ವಾತಂತ್ರ್ಯ ರಾಜರೆನಿಸಿದರು. ಮೊದಲು ಸೊಸೆಯೂರು ನಂತರ ದೋರಸಮುದ್ರ ರಾಜಧಾನಿಯಾದವು. ಮೊದಲಿನ ಅರಸರು ಜೈನ ಮತಾವಲಂಬಿಗಳಾಗಿದ್ದು, ಬಿಟ್ಟಿದೇವನ ಒಲವು ವೈಷ್ಣವ ಧರ್ಮದೆಡೆಗೆ ಹರಿದು ಆತ ವಿಷ್ಣುವರ್ಧನನಾದನು. ಬಲ್ಲಾಳ ಮುಂತಾದ ಅರಸರು ಶೈವ ಧರ್ಮವನ್ನು ಅನುಸರಿಸಿದ್ದರು. ಆದರೆ, ಎಲ್ಲಾ ಮತ ಧರ್ಮಗಳಿಗೂ ಪ್ರೋತ್ಸಾಹವಿದ್ದಿತ್ತು. ಹಳೆಗನ್ನಡ ಅಧಿಕೃತ ಭಾಷೆಯಾಗಿತ್ತು.
ಹತ್ತನೆಯ ಶತಮಾನದ ಅಂತ್ಯದ ವೇಳೆಗೆ ಗಂಗರ ಅವನತಿಯಾದಂತೆಲ್ಲಾ ಹೊಯ್ಸಳರ ಪ್ರಗತಿ ಚುರುಕಾಯಿತು.
ಸಳನಿಂದ ನಾಲ್ಕನೇ ಬಲ್ಲಾಳನವರೆಗೂ ಆಳಿದ ಹೊಯ್ಸಳ ರಾಜರ ಪ್ರತಿಯೊಬ್ಬರ ಆಳ್ವಿಕೆ, ಸುತ್ತಮುತ್ತಲಿನ ರಾಜ್ಯಗಳು, ಅವರು ಪಡೆದುಕೊಂಡ ಬಿರುದುಗಳು ಹಾಗೂ ಕೆಲ ಪ್ರಖ್ಯಾತ ಅರಸರ ಪತ್ನಿಯರು ಹಾಗೂ ಕುಟುಂಬದ ಪರಿಚಯ ಇಲ್ಲಿದೆ. ಅದರಲ್ಲಿ ಬಿಟ್ಟಿದೇವ/ವಿಷ್ಣುವರ್ಧನನ ಇತಿಹಾಸವನ್ನು ಹೆಚ್ಚಾಗಿಯೇ ನೀಡಿದ್ದಾರೆ.
*************************
ಹೊಯ್ಸಳ ರಾಜ್ಯದ ಅವನತಿಗೆ ಕಾರಣಗಳು :
ಹೊಯ್ಸಳರು ತಾವು ಕಟ್ಟಿದ ರಾಜ್ಯವನ್ನು ತಾವೇ ಒಡೆಯಲು ಕಾರಣರಾದರು. ಮುಸ್ಲಿಮರ ದಂಡಯಾತ್ರೆಯು ಕೇವಲ ನಿಮಿತ್ತ ಮಾತ್ರವಾಗಿತ್ತು ಎನ್ನುತ್ತಾರೆ ಲೇಖಕರು.
ವೀರನರಸಿಂಹನ ಕಾಲದಲ್ಲಿ ತಮಿಳು ಸೀಮೆಯಲ್ಲಿ ಆಗುತ್ತಿದ್ದ ಕಚ್ಚಾಟದಲ್ಲಿ ಹೊಯ್ಸಳರು ಭಾಗವಹಿಸಿದ ದಿನವೇ ಹೊಯ್ಸಳರ ಅವನತಿ ಶುರುವಾಯಿತು ಎನ್ನುತ್ತಾರೆ. ಎರಡನೇ ನರಸಿಂಹನ ಆಳ್ವಿಕೆಯ ನಂತರ ಬಂದ ಅರಸರು ವಿಷ್ಣುವರ್ಧನ ಅಥವಾ ಎರಡನೆಯ ಬಲ್ಲಾಳನ ಮಟ್ಟಕ್ಕೆ ಏರಲು ಅಸಮರ್ಥರಾದರು ಹಾಗೂ ಪ್ರಜೆಗಳ ಆದರವನ್ನು ಗಳಿಸಲು ಸಾಧ್ಯವಾಗಲಿಲ್ಲ.
ಎರಡನೆಯ ಬಲ್ಲಾಳ ಹಾಗೂ ಕೆಲವು ಅರಸರು ಮಂತ್ರಾಲೋಚನೆಗಾಗಿ ತಮ್ಮ ಪುತ್ರರು ಹಾಗೂ ಪತ್ನಿಯರನ್ನು ನೇಮಿಸಿಕೊಳ್ಳುತ್ತಿದ್ದರು. ಹೀಗಾಗಿ ಬಂಧುಗಳ ಸಲಹೆ ನಿಷ್ಠೆ ಹಾಗೂ ಉತ್ಸಾಹದಿಂದ ಕೂಡಿರುತ್ತಿತ್ತು. ಆದರೆ, ಮೂರನೇ ಬಲ್ಲಾಳನು ರಾಣಿವಾಸದವರ ಸಹಕಾರವನ್ನು ಆಡಳಿತ ನಿರ್ಮಾಣಕ್ಕೆ ಬಳಸಿಕೊಳ್ಳದೆ ಹೋದದ್ದು ಪ್ರಮಾದವಾಯಿತು ಎನ್ನುತ್ತಾರೆ.
ಮೂರನೇ ಬಲ್ಲಾಳನ ಕಾಲದಲ್ಲಿ ಹೊಯ್ಸಳ ಸಾಮ್ರಾಜ್ಯ ಮುಸಲ್ಮಾನರ ದಂಡಯಾತ್ರೆಗೆ ಗುರಿಯಾಗಿ ರಾಜಧಾನಿಯಾದ ಮಾಡುವ ದೋರಸಮುದ್ರವೇ ನಿರ್ನಾಮವಾಯಿತು. ರಾಜ್ಯದ ಸಿರಿ-ಸಂಪತ್ತುಗಳು ಲೂಟಿಯಾದವು.
ನಾಲ್ಕನೇ ಬಲ್ಲಾಳನ ಕಾಲದಲ್ಲಿ ವಿಜಯನಗರದ ಪ್ರಭಾವದಿಂದ ಹೊಯ್ಸಳ ರಾಜ್ಯದ ಬಹು ಮಂದಿಯ ಒಲವು ಹರಿಹರನ ಕಡೆಗೆದ್ದಿತ್ತು. ನಾಲ್ಕನೇ ಬಲ್ಲಾಳನು ಹರಿಹರನೊಂದಿಗೆ ಘರ್ಷಣೆಗೆ ಸಿದ್ಧವಾಗಿದ್ದರೂ ಅನೇಕ ಪ್ರಜೆಗಳು ಯಾರ ಹಂಗಿಗೂ ಬೀಳದೆ ಸ್ವತಂತ್ರರಾಗಲು ಬಯಸಿದರು. ಹೊಯ್ಸಳ ಅಧಿಕಾರಿಗಳು ವಿಜಯನಗರದ ಅರಸರಿಗೆ ನಿಷ್ಠೆ ತೋರಿಸುತ್ತಾ ಹೋದಂತೆ ಹೊಯ್ಸಳ ಸಾಮ್ರಾಜ್ಯದ ಪತನವಾಗುತ್ತಾ ವಿಜಯನಗರ ಸಾಮ್ರಾಜ್ಯ ವಿಸ್ತರಣೆಯಾಯಿತು.
*************************
ಹೊಯ್ಸಳರ ರಾಜ್ಯಭಾರ ಕ್ರಮ :
ಹೊಯ್ಸಳರ ರಾಜ್ಯಭಾರದಲ್ಲಿ ಹಲವಾರು ಬಾರಿ ಬಲಶಾಲಿ ಸಾಮಂತರು ಹಾಗೂ ಶ್ರೀಮಂತ ವರ್ಗದವರ ವಿರೋಧವನ್ನು ಅರಸರು ಎದುರಿಸಬೇಕಾಗಿ ಬರುತ್ತಿತ್ತು. ಜನಪದವೂ ಅರಸನಿಗೆ ಪ್ರತಿಕೂಲವಾಗಿ ತಿರುಗಿ ಬೀಳುವ ಸಂದರ್ಭದಲ್ಲಿ ಪಂಚ ಪ್ರಧಾನರೆಂಬ ಮಂತ್ರಿಮಂಡಲ ರಾಜನು ಸ್ವಚ್ಛಂದವಾಗಿ ವರ್ತಿಸದಂತೆ ಕಡಿವಾಣ ಹಾಕುತ್ತಿದ್ದರು. ಹೊಯ್ಸಳ ಅರಸೊತ್ತಿಗೆಯು ಅನುವಂಶಿಕವಾಗಿಯೇ ಬರುತ್ತಿತ್ತು. ಹಾಗಾಗಿ ಅವಿಭಕ್ತ ಕುಟುಂಬದ ಪುತ್ರಸಂತಾನಕ್ಕೆಲ್ಲ ರಾಜ ಪದವಿಯ ಮೇಲೆ ಹಕ್ಕಿರುತ್ತಿತ್ತು. ಹೊಯ್ಸಳರ ಆಳ್ವಿಕೆಯ ಸುಭದ್ರತೆಗಾಗಿ ಎಲ್ಲ ಮತ ಧರ್ಮಗಳಿಗೂ ಸಮಾನ ಪುರಸ್ಕಾರ ನೀಡಬೇಕಾಗಿ ಬಂದಿತು. ಅನೇಕ ಹೊಯ್ಸಳ ರಾಣಿಯರು ಆಡಳಿತದಲ್ಲಿ ಭಾಗವಹಿಸುತ್ತಿದ್ದ ನಿದರ್ಶನಗಳಿವೆ.
ಉದಾಹರಣೆಗೆ ವಿಷ್ಣುವರ್ಧನನು ದತ್ತಿಯೊಂದನ್ನು ಬಿಟ್ಟುಕೊಟ್ಟ ಸಂದರ್ಭದಲ್ಲಿ ಪಂಚಪ್ರಧಾನರಲ್ಲದೆ ಪಟ್ಟಮಹಾದೇವಿ ಶಾಂತಲಾ ದೇವಿಯೂ ಹಾಜರಿದ್ದಳು. ಅವನ ಮತ್ತೋರ್ವ ಪತ್ನಿಯಾದ ಬೊಮ್ಮಲೆ ಆಸಂಧಿ ಎಂಬ ಪ್ರಾಂತ್ಯವನ್ನು ಆಳುತ್ತಿದ್ದಳು.
ಎರಡನೆಯ ಬಲ್ಲಾಳನ ಕಿರಿಯ ರಾಣಿ ಅಭಿನವ ಕೇತಲದೇವಿಯು ಕುಂದವಾಡದಲ್ಲಿ ಪ್ರತಿ ಬುಧವಾರವೂ ಸಂತೆಯನ್ನು ವ್ಯವಸ್ಥೆ ಮಾಡುವಂತೆ ಅಲ್ಲಿನ ಗೌಡರಿಗೂ, ಸೆಟ್ಟಿಗಳಿಗೂ ನೀಡಿದ ಆದೇಶವನ್ನು ದಾವಣಗೆರೆಯ ಶಾಸನದಲ್ಲಿ ಗಮನಿಸಬಹುದು.
ಹೊಯ್ಸಳ ಅರಸರ ಪ್ರಾಣ ರಕ್ಷಣೆಗೆ ಗರುಡರು ಎಂಬ ಆದರ್ಶ ವ್ಯಕ್ತಿಗಳ ಕುರಿತು ಹೇಳುತ್ತಾರೆ. ವೀರ ಬಲ್ಲಾಳನ ಮರಣ ನಂತರ ಗರುಡರೆಲ್ಲರೂ ಪ್ರಾಣಾರ್ಪಣೆ ಮಾಡಿದ ಸಂಗತಿಯನ್ನು ತಿಳಿಸುವ ಶಾಸನವೂ ಅವರನ್ನು ಲೆಂಕಿಗಳು ಎಂದು ಸಂಬೋಧಿಸಿದೆ.
ಹೀಗೆ ಹೊಯ್ಸಳರ ಕಾಲದಲ್ಲಿ ಇದ್ದ ಪ್ರತಿಯೊಬ್ಬ ಅಧಿಕಾರಿಗಳು, ಸಾಮಂತರು, ಆಸ್ತಿಪಾಸ್ತಿಗಳು, ನ್ಯಾಯತೀರ್ಮಾನ, ಅರಮನೆಯ ವಹಿವಾಟು, ಮಂತ್ರಿಮಂಡಲ, ಅಧಿಕಾರಿ ವರ್ಗ, ಸೈನ್ಯ, ಆಡಳಿತ ಪ್ರಾಂತ್ಯ, ಆಡಳಿತ ತೆರಿಗೆ ಎಲ್ಲದರ ಚಿತ್ರಣವಿಲ್ಲಿದೆ.
*************************
ಹೊಯ್ಸಳರ ಧಾರ್ಮಿಕ ಪರಿಸ್ಥಿತಿ :
ಹೊಯ್ಸಳಕ ಸಾಮ್ರಾಜ್ಯದಲ್ಲಿ ಜೈನ, ಬೌದ್ಧ, ಶೈವ ಮತ್ತು ವೈಷ್ಣವ ಧರ್ಮಗಳು ಅಸ್ತಿತ್ವದಲ್ಲಿದ್ದವು. ಶಿವ ಮತ್ತು ವಿಷ್ಣುವಿನ ನಡುವೆ ಇರುವ ಭೇದವನ್ನು ತೊಡೆದು ಹಾಕಲು ಪ್ರಯತ್ನಿಸಿದ ದೃಷ್ಟಾಂತಗಳು ಇಲ್ಲಿವೆ. ಕ್ರಿ.ಶ 124ರ ದಾವಣಗೆರೆ ಶಾಸನವು ಹರಿಹರೇಶ್ವರ ದೇವಾಲಯದ ಕುರಿತು ಹೇಳುತ್ತದೆ. ಯೋಧರು, ಸಿಂಪಿಗರು, ಬ್ರಾಹ್ಮಣರು, ಅಂಗರಕ್ಷಕರು ಹೀಗೆ ಪ್ರಜೆಗಳಿಂದಲೂ ಆ ಕಾಲದಲ್ಲಿ ದೇವಾಲಯಗಳು ಬಸದಿಗಳು ನಿರ್ಮಾಣವಾಗುತ್ತಿದ್ದವು. ದೇವಾಲಯಗಳ ಜೀರ್ಣೋದ್ಧಾರಗಳಾದವು. ಭೂದಾನ, ದತ್ತಿಗಳು ಇವುಗಳನ್ನು ಸಾಮಾನ್ಯರೂ ಸಹ ಪ್ರೇರಿತರಾಗಿ ಮಾಡುತ್ತಿದ್ದ ವಿಚಾರಗಳು ತಿಳಿಯುತ್ತವೆ. ಹಲವಾರು ಶಾಸನಗಳ ಉಲ್ಲೇಖಗಳನ್ನು ಕಾಣಬಹುದಾಗಿದೆ.
*************************
ಹೊಯ್ಸಳರ ಕಾಲದ ಸಾಮಾಜಿಕ ಮತ್ತು ಆರ್ಥಿಕ ಪರಿಸ್ಥಿತಿ :
ಹೊಯ್ಸಳರ ಕಾಲದಲ್ಲಿ ಕುಟುಂಬವು ಸಮಾಜದ ಆಧಾರಸ್ತಂಭವಾಗಿತ್ತು. ವರ್ಣಾಶ್ರಮ ಧರ್ಮವು ಕಟ್ಟುನಿಟ್ಟಾಗಿ ಜಾರಿಗೆ ಬಂದ ಪ್ರಸಂಗಗಳನ್ನು ಕಾಣಬಹುದು. ಹೊಯ್ಸಳ ಅರಸರು ಶ್ರೀಮಂತರು ಬಹು ಪತ್ನಿವಲ್ಲಭರಾಗಿದ್ದರು. ಒಂದನೆಯ ನರಸಿಂಹನಿಗೆ 384 ಮಂದಿ ಪತ್ನಿಯರು, ಉಪಪತ್ನಿಯರು ಇದ್ದರೆಂದು ಬೇಲೂರಿನ ಶಾಸನವೊಂದು ಹೇಳುತ್ತದೆ.
ಹೊಯ್ಸಳರ ಕಾಲದ ಮಹಿಳೆಯರಿಗೆ ಸಮಾಜದಲ್ಲಿ ಗೌರವವಿದ್ದಿತ್ತು ಧಾರ್ಮಿಕ ವ್ಯವಹಾರಗಳನ್ನು ನಡೆಸುತ್ತಿದ್ದ ಸ್ತ್ರೀಯರನ್ನು ಕಾಣಬಹುದಾಗಿದೆ. ಹೊಯ್ಸಳರ ಕಾಲದಲ್ಲಿ ಕೆಲವೊಮ್ಮೆ ಸ್ತ್ರೀಯರ ಸಹಗಮನ ಪದ್ಧತಿಯು ಇದ್ದುದನ್ನೂ ಕಾಣಬಹುದು.
ಈಗಿನಂತೆಯೇ ಹಲವಾರು ವೃತ್ತಿಗಳು ಗುಡಿ ಕೈಗಾರಿಕೆಗಳು, ವಾಣಿಜ್ಯ ಬೆಳೆಗಳು ಇದ್ದವು. ಕಾರ್ಮಿಕರಿಗೆ ಕೊಡಬೇಕಾದ ವೇತನವನ್ನು ಸಾಮಾನ್ಯವಾಗಿ ಧಾನ್ಯ ರೂಪದಲ್ಲಿ ಕೊಡುತ್ತಿದ್ದರು. ಆದರೆ, ನಾಣ್ಯಗಳು ಚಲಾವಣೆಯಲ್ಲಿದ್ದವು. ಗದ್ಯಾಣ, ಪಣ, ಅರ್ಧಪಣ, ಹೊನ್ ಮುಂತಾದ ಶಬ್ದಗಳನ್ನು ಶಾಸನಗಳಲ್ಲಿ ಗಮನಿಸಬಹುದು. ಹೊಯ್ಸಳರ ನಾಣ್ಯಗಳ ಮೇಲ್ಮುಖದಲ್ಲಿ ಶಾರ್ದೂಲದ ಚಿತ್ರವಿದ್ದು.. ಸೂರ್ಯ, ಚಂದ್ರರ ನಡುವೆ ಮತ್ತೊಂದು ಪುಟ್ಟ ಹುಲಿಯ ಚಿತ್ರವಿದೆ. ಹಿಂಭಾಗದಲ್ಲಿ ಹಳೆಗನ್ನಡ ಅಕ್ಷರದಲ್ಲಿ ಶ್ರೀ ತಲಕಾಡುಗೊಂಡ, ಶ್ರೀ ನೊಳಂಬವಾಡಿಗೊಂಡ, ಶ್ರೀ ಮಲಪರೋಳ್ಗಂಡ ಎಂಬ ಬಿರುದುಗಳನ್ನು ಒಳಗೊಂಡಿವೆ. ಎಲ್ಲಾ ನಾಣ್ಯಗಳ ಮೇಲ್ಮುಖದಲ್ಲಿ ಶಾರ್ದೂಲವಿದ್ದರೂ.. ಹಿಂಭಾಗದಲ್ಲಿ ಒಂದೊಂದು ನಾಣ್ಯದಲ್ಲಿ ಒಂದೊಂದು ರೀತಿಯ ಮಾನವಾಕೃತಿಗಳಿವೆ.
*************************
ಹೊಯ್ಸಳರ ಕಾಲದಲ್ಲಾದ ಶೈಕ್ಷಣಿಕ ಹಾಗೂ ಸಾಹಿತ್ಯ ಪ್ರಗತಿ :
ಹೊಯ್ಸಳರ ಕಾಲದಲ್ಲಿ ಹಿಂದೂಗಳಿಗೆ ಅಗ್ರಹಾರಗಳು, ಕಟ್ಟಿಕಗಳು, ಬ್ರಹ್ಮಪುರಿಗಳು, ಮಠಗಳು ಮತ್ತು ದೇವಾಲಯಗಳು ವಿದ್ಯಾರ್ಥಿ ಕೇಂದ್ರಗಳಾಗಿದ್ದವು. ವೃತ್ತಿಶಿಕ್ಷಣವು ಅನುವಂಶಿಕವಾಗಿ ದೊರೆಯುತ್ತಿತ್ತು. ಆಯುರ್ವೇದ, ಪಶುವೈದ್ಯ, ಗಣಿತಶಾಸ್ತ್ರ, ಗಜಶಾಸ್ತ್ರಗಳಲ್ಲಿ ಗಣನೀಯ ಪ್ರಮಾಣದ ಪ್ರಗತಿಯಾಗಿತ್ತು.
ಸಾಹಿತ್ಯದ ವಿಚಾರಗಳನ್ನು ಗಮನಿಸುವುದಾದರೆ ನಾಗಚಂದ್ರನ ಸಮಕಾಲೀನನಾದ ನಯಸೇನನು ಧರ್ಮಾಮೃತವೆಂಬ ಕಾವ್ಯವನ್ನು ಬರೆದನು. ಶುದ್ಧ ಕನ್ನಡದ ಬಳಕೆಗೆ ಹೆಸರುವಾಸಿಯಾದನು. ರಾಮಚಂದ್ರಚರಿತ ಮತ್ತು ಮಲ್ಲಿನಾಥ ಪುರಾಣ ಬರೆದ ನಾಗಚಂದ್ರನು ಒಂದನೆಯ ಬಲ್ಲಾಳನ ಆಸ್ಥಾನದಲ್ಲಿದ್ದನು. ಶ್ರೀ ರಾಮಾನುಜಾಚಾರ್ಯರು, ಶ್ರೀ ಮದ್ವಾಚಾರ್ಯರು, ಜೈನ ವಿದ್ವಾಂಸ ಬಾಲಚಂದ್ರ ಹೀಗೆ ಹಲವಾರು ಮಹನೀಯರು, ಸಾಹಿತಿಗಳು ಉಲ್ಲೇಖನೀಯ.
*************************
ಹೊಯ್ಸಳರ ಕಲಾ ಪ್ರೇಮ :
12ನೇ ಶತಮಾನದಲ್ಲಿದ್ದ ಚಿರಘಟ್ಟ ಎಂಬ ಕಲಾವಿದನೋರ್ವ ಒಂದೇ ಓಲೆಗರಿಯ ಮೇಲೆ ವಿರಾಟಪರ್ವದ ಇಡೀ ಗೋಗ್ರಹಣ ಪ್ರಕರಣವನ್ನು ಚಿತ್ರಿಸಿ ಹೊಯ್ಸಳರ ಮೆಚ್ಚುಗೆಗೆ ಪಾತ್ರರಾಗಿದ್ದರು.
ಬೇಲೂರು, ಹಳೇಬೀಡು, ಸೋಮನಾಥಪುರ, ತಲಕಾಡು, ಸೊಸೆಯೂರು, ದೊಡ್ಡಗದ್ದವಳ್ಳಿ, ಕೋರಮಂಗಲ, ಅಮೃತಪುರ, ಹಾರನಹಳ್ಳಿ, ನುಗ್ಗೆಹಳ್ಳಿ, ಜಾವಗಲ್, ಬಸರಾಳು, ಆನೆಕೊಂಡ ಮುಂತಾದ ಊರುಗಳಲ್ಲಿರುವ ದೇವಾಲಯಗಳು ಹೊಯ್ಸಳ ಶೈಲಿಯ ಶಿಲ್ಪಕಲೆಗೆ ಚಿರಸ್ಮರಣೀಯವಾಗಿವೆ. ಹೊಯ್ಸಳ ಶೈಲಿಯ ದೇವಾಲಯಗಳು ಸಾಮಾನ್ಯವಾಗಿ ಜಗಲಿ ಮಾದರಿಯ ವೇದಿಕೆಯ ಮೇಲೆ ನಕ್ಷತ್ರಕಾರವಾಗಿ ನಿರ್ಮಿಸಲ್ಪಟ್ಟಿವೆ. ಕಟ್ಟಡದ ರಚನೆಗಾಗಿ ನುಣುಪಾದ ಬಳಪದ ಕಲ್ಲುಗಳನ್ನು ಬಳಸಲಾಗಿದ್ದು, ಸೂಕ್ಷ್ಮವಾದ ಕುಸುರಿ ಕೆಲಸ ಮಾಡುವುದಕ್ಕೆ ಸಾಧ್ಯವಾಗಿತ್ತು ಹಾಗೂ ಶಿಲ್ಪಿಗಳು ವಿಗ್ರಹಗಳ ಮೇಲೆ ತಮ್ಮ ಹೆಸರುಗಳನ್ನು ಎತ್ತಿರುವುದು ಹೊಯ್ಸಳರ ಕಾಲದ ವೈಶಿಷ್ಟ್ಯವೆನ್ನುತ್ತಾರೆ.
ಬಳ್ಳಿಗಾವಿಯ ತ್ರಿಕೂಟಾಚಲ ಮಾದರಿಯ ದೇವಾಲಯವಾದ ಕೇದಾರೇಶ್ವರ ದೇವಾಲಯ, ಸೊಸೆಯೂರಿನ ವಾಸಂತಿಕಾ ದೇವಾಲಯದ ಸಪ್ತಮಾತೃಕೆಯರು, ದೊಡ್ಡಗದ್ದವಳ್ಳಿಯ ಲಕ್ಷ್ಮಿದೇವಿಯ ದೇವಾಲಯ, ಬೇಲೂರು ಹಳೇಬೀಡುಗಳಲ್ಲಿನ ಕುಸುರಿ ಕೆತ್ತನೆಯ ಕೆಲಸ ಇವೆಲ್ಲವೂ ಹೊಯ್ಸಳರ ಕಲಾಪ್ರೇಮಕ್ಕೆ ಸಾಕ್ಷಿಯಾಗಿ ನಿಲ್ಲುತ್ತವೆ.
ಭವ್ಯವಾದ ಇತಿಹಾಸವುಳ್ಳ ಹೊಯ್ಸಳರ ಬೆರಳೆಣಿಕೆಯಷ್ಟು ಸಂಗತಿಗಳನ್ನಷ್ಟೇ ಇಲ್ಲಿ ಉಲ್ಲೇಖಿಸಿದ್ದೇನೆ. ಲೋಕೋಪಕಾರಿ ಕಾರ್ಯಗಳು, ದಾನ-ಧರ್ಮ, ಕಲಾದೃಷ್ಟಿ ಹೀಗೆ ಹಲವಾರು ವೈಶಿಷ್ಟಗಳನ್ನು ಹೊಂದಿರುವ ಹೊಯ್ಸಳರ ಹೆಚ್ಚಿನ ಇತಿಹಾಸವನ್ನು ನೀವೇ ಓದಿ ನೋಡಿ.
~ವಿಭಾ ವಿಶ್ವನಾಥ್
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ