ಪುಸ್ತಕದ ಶೀರ್ಷಿಕೆ : ಸುಬ್ರಹ್ಮಣ್ಯಪುರ
ಲೇಖಕರು : ಕೌಶಿಕ್ ಕೂಡುರಸ್ತೆ
ಪ್ರಕಾಶಕರು : ಸ್ನೇಹ ಬುಕ್ ಹೌಸ್
ಪ್ರಥಮ ಮುದ್ರಣ : 2022
ದ್ವಿತೀಯ ಮುದ್ರಣ : 2024 (ನನ್ನ ಓದಿಗೆ ಸಿಕ್ಕಿದ್ದು)
ಪುಟಗಳು : 128
ಬೆಲೆ : 130 ರೂ.
ಪತ್ತೇದಾರಿ ಕಾದಂಬರಿ ಪ್ರಕಾರದಲ್ಲಿ ಹೆಸರುವಾಸಿಯಾಗಿರುವ ಕೌಶಿಕ್ ಕೂಡುರಸ್ತೆಯವರ ನಾಲ್ಕನೆಯ ಪತ್ತೇದಾರಿ ಕಾದಂಬರಿ. ಮುಖಪುಟ ಹಾಗೂ ಶೀರ್ಷಿಕೆಯನ್ನು ಗಮನಿಸಿದರೆ ಅಲ್ಲಿ ಸರ್ಪಕ್ಕೆ ಸಂಬಂಧಿಸಿದ ಪತ್ತೇದಾರಿ ಕತೆ ಎಂದು ಊಹಿಸಬಹುದಾದರೂ.. ನಾಗರ ಪಂಚಮಿಯ ರಹಸ್ಯ ರಾತ್ರಿ ಎಂಬ ಅಡಿಬರಹ ಮತ್ತಷ್ಟು ಕುತೂಹಲವನ್ನು ಹುಟ್ಟಿಸುತ್ತದೆ.
ಊರಾಚೆಯಿದ್ದ ದೇವಸ್ಥಾನದಿಂದ ಸರಿ ಸುಮಾರು ಅರ್ಧ ಕಿಲೋಮೀಟರ್ ದೂರದಲ್ಲಿ ಗಂಗಮ್ಮಳ ಮನೆಯಿತ್ತು. ಆಕೆ ಮದುವೆಯಾದ ಮೂರು ವರ್ಷಕ್ಕೆ ಗಂಡ ತೀರಿಕೊಂಡಿದ್ದ. ಇದ್ದ ಒಬ್ಬನೇ ಮಗ ವಿಷ್ಣು ಮುಂಬೈನಲ್ಲಿ ಪಬ್ ನಲ್ಲಿ ಕೆಲಸ ಮಾಡುತ್ತಿದ್ದ. ಸುಬ್ರಮಣ್ಯಪುರದಲ್ಲಿ ನಾಗರ ಪಂಚಮಿಯ ಸಂಭ್ರಮ ಕಳೆದು ಕಗ್ಗತ್ತಲ ರಾತ್ರಿಯಲ್ಲಿ ಆ ಸುರಿವ ಮಳೆಯಲ್ಲಿ ತನ್ನನ್ನು ಹಿಂಬಾಲಿಸುತ್ತಿದ್ದ ಮುಸುಕುಧಾರಿಗಳಿಂದ ತಪ್ಪಿಸಿಕೊಳ್ಳಲು, ಮಳೆಯನ್ನು ಲೆಕ್ಕಿಸದೆ ಓಡುತ್ತಿದ್ದ ಗಂಗಮ್ಮ ಗರ್ಭಗುಡಿಯೊಳಗೆ ಹೊಕ್ಕು ಸುಬ್ರಹ್ಮಣ್ಯ ಸ್ವಾಮಿಯನ್ನು ತನ್ನನ್ನು ಕಾಪಾಡುವಂತೆ ಬೇಡಿಕೊಂಡು.. ತನ್ನ ಮೈಮೇಲಿದ್ದ ಒಡವೆಯನ್ನೆಲ್ಲ ಕಳಚಿ ಗಂಟು ಕಟ್ಟಿಟ್ಟಳು.
ಮುಂಬೈನಿಂದ ಹಿಂದಿರುಗುವ ತನ್ನ ಮಗನಿಗೆ ಈ ಚಿನ್ನದ ಒಡವೆಗಳನ್ನು ತಲುಪಿಸುವುದು ಹೇಗೆ ಎಂದು ಚಿಂತಿಸುತ್ತಿದ್ದವಳಿಗೆ ಸುಬ್ರಮಣ್ಯಪುರದಲ್ಲಿ ಭಿಕ್ಷೆ ಬೇಡಿಕೊಂಡು ಬದುಕು ಸಾಗಿಸುತ್ತಿದ್ದ ಉಚ್ಚೆಮಲ್ಲಿ ಕಾಣಿಸಿದ್ದ. ಆತನ ಕೈಯಲ್ಲಿ ಚಿನ್ನದೊಡವೆಯ ಗಂಟನ್ನು ಇಟ್ಟು ನಾಳೆ ತಾನು ಬಂದು ಅದನ್ನು ತೆಗೆದುಕೊಳ್ಳದಿದ್ದರೆ.. ಮಗನಿಗೆ ತಲುಪಿಸುವ ಜವಾಬ್ದಾರಿಯನ್ನು ಕೊಟ್ಟುಬಿಟ್ಟಳು. ಅದರ ಜೊತೆಗೆ ಸುಬ್ರಹ್ಮಣ್ಯಸ್ವಾಮಿಯ ಮೇಲೆ ಆಣೆಯನ್ನು ಮಾಡಿಸಿಕೊಂಡು ಅಲ್ಲಿಂದ ಹೊರಟುಬಿಟ್ಟಳು.
ಮುಸುಕುಧಾರಿಗಳಿಗೆ ಗಂಗಮ್ಮನ ಮನೆಯನ್ನು ಉಚ್ಚೆಮಲ್ಲಿಯೇ ತೋರಿಸಿದ್ದ. ಅದಕ್ಕೆ ಕಾರಣ ಚಿನ್ನದ ದುರಾಸೆಯೇ..?!
ಆತ ಸುಬ್ರಹ್ಮಣ್ಯಸ್ವಾಮಿಯ ಮೇಲೆ ಮಾಡಿದ್ದ ಆಣೆಯ ಭಯವಿರಲಿಲ್ಲವೇ..?
ಆ ಊರಿಗೆ ಇದ್ದ ಇತಿಹಾಸವೇ ಭವ್ಯವಾಗಿತ್ತು.
ನಾಗರಪಂಚಮಿಯ ಮಾರನೆಯ ದಿವಸ ಗಂಗಮ್ಮನ ಸಾವು ಸುಬ್ರಮಣ್ಯಪುರದಲ್ಲಿ ಭೀತಿ ಹುಟ್ಟಿಸಿತು. ಅದಕ್ಕೆ ಕಾರಣ ಸಾವಿರಾರು ಹಾವುಗಳಿಗೆ ಆಶ್ರಯ ನೀಡಿ ಪ್ರತಿನಿತ್ಯ ಸುಬ್ರಹ್ಮಣ್ಯಸ್ವಾಮಿಯನ್ನು ಆರಾಧಿಸುವ ಸುಬ್ರಮಣ್ಯಪುರದಲ್ಲಿ ಹಾವು ಕಚ್ಚಿ ಸತ್ತ ಮೊದಲನೆಯ ಪ್ರಕರಣವೇ ಅದಾಗಿದ್ದು ವಿಪರ್ಯಾಸ. ಅದಕ್ಕೆ ಕಾರಣವೇನು..?
ಸರ್ಪಗಳೆಂದರೆ ಭಯಪಡುವ ಬೇರೆಯವರಿಗೆ ಸುಬ್ರಮಣ್ಯಪುರ ಒಂದು ಅಚ್ಚರಿಯ ಊರು. ಆ ಊರಿನಲ್ಲಿ ಸರ್ಪಗಳು ದೈನಂದಿನ ಬದುಕಿನ ಭಾಗವೇ ಆಗಿ ಹೋಗಿದ್ದವು. ಇದುವರೆಗೂ ಯಾರಿಗೂ ಹಾವು ಕಚ್ಚಿ ಸತ್ತಿರಲಿಲ್ಲ. ಇದು ವೈಜ್ಞಾನಿಕತೆಗೆ ಸವಾಲಾಗಿದ್ದೂ ಹೌದು. ಸುಬ್ರಮಣ್ಯಪುರದಲ್ಲಿ ಇದೊಂದೇ ಅಲ್ಲದೆ, ಹಲವಾರು ವಿಶೇಷಗಳು ಸಹ ಇದ್ದವು.
ಆ ಊರಿನಲ್ಲಿ ನಡೆದ ಒಂದು ಘಟನೆ ಆ ಊರಿಗೆ ಗರುಡ ಚಿನ್ಹೆಗಳನ್ನು ಹೊತ್ತ ನಿಧಿಯನ್ನು ತಂದಿತ್ತು. ಮಾಂತ್ರಿಕ ರುದ್ರಾಸುರ ಸೂಚಿಸಿದಂತೆ ಅಲ್ಲಿ ಗರುಡ ದೇವಾಲಯ ತಲೆಯೆತ್ತಿತ್ತು. ಅದರ ಜೊತೆಗೆ ಆ ನಿಧಿ ಅಲ್ಲಿ ಭದ್ರವಾಗಿತ್ತು. ಆ ನಿಧಿ ಬಳಕೆಯಾಗುತ್ತಿದ್ದದ್ದು ಹೀಗೆ.. ಸುಬ್ರಮಣ್ಯಪುರದಲ್ಲಿ ಯಾರಾದರೂ ಸತ್ತ ದಿನದಂದು ಮಾತ್ರ ಪೆಟ್ಟಿಗೆಯಿಂದ ಬಂಗಾರದ ನಾಣ್ಯವನ್ನು ಹೊರತೆಗೆದು ಸತ್ತವರ ದೇಹದೊಳಗೆ ಅದನ್ನು ಸೇರಿಸಿ ಮಣ್ಣು ಮಾಡುವ ಹೊಸ ಪದ್ದತಿ ಅಂದಿನಿಂದ ಆಚರಣೆಗೆ ಬಂದಿತ್ತು. ಈ ಪ್ರಕ್ರಿಯೆಗೆ ನೂರು ವರ್ಷಗಳ ಇತಿಹಾಸವಿತ್ತು. ಗಂಗಮ್ಮನ ಅಂತ್ಯಕ್ರಿಯೆಯು ಇದೇ ಪದ್ಧತಿಯಲ್ಲಿ ಆಗುವುದರಲ್ಲಿತ್ತು.
ಮುಂಬೈಯಲ್ಲಿದ್ದ ಗಂಗಮ್ಮನ ಮಗ ವಿಷ್ಣುವಿಗೆ ವಿಚಾರ ಮುಟ್ಟಿಸಿದ್ದರಾದರೂ.. ಆತ ಬರುವಷ್ಟರೊಳಗೆ ಅಂತ್ಯಕ್ರಿಯೆ ನಡೆದಾಗಿತ್ತು. ಸುಬ್ರಮಣ್ಯಪುರದ ಹಿರಿಮನೆತನದ ರಾಮೇಗೌಡರಿಗೆ ಹಾಗೂ ಗಂಗಮ್ಮನಿಗೆ ಇದ್ದ ಸಂಬಂಧ ಊರಿಗೇ ಗೊತ್ತಿತ್ತು. ಎಲ್ಲರಿಗೂ ಭೀತಿ ಹುಟ್ಟಿಸಿದ್ದ ಜೊತೆಗೆ ಹಲವಾರು ವಿಚಾರಗಳು ಇದ್ದುದರಿಂದ ವಿಷ್ಣು ಬರುವ ಮೊದಲೇ ಮಣ್ಣು ಮಾಡಲಾಗಿತ್ತು. ಅರ್ಧರಾತ್ರಿಯಲ್ಲಿ ಬಂದ ವಿಷ್ಣುವಿಗೆ ಆ ವಿಷಯ ಹೇಳಿದವರಾರು..??
ಆ ವಿಷಯ ಹೇಳಿದವರೇ ಸೂಚಿಸಿದಂತೆ ತಾಯಿಯ ಹೆಣವನ್ನು ಮತ್ತೆ ಗುಂಡಿಯಿಂದ ಹೊರತೆಗೆದು ನೋಡೋಣ ಎಂದುಕೊಂಡು ಅಲ್ಲಿ ಹೋದರೆ ಗಂಗಮ್ಮನ ಹೆಣ ಅಲ್ಲಿರಲಿಲ್ಲ. ಅನುಮಾನದಿಂದ ಹಾಗೂ ದುಃಖದಿಂದ ಪೊಲೀಸ್ ಸ್ಟೇಷನ್ ಗೆ ಹೋಗಿ ಅಲ್ಲಿ ಇನ್ಸ್ಪೆಕ್ಟರ್ ವಿಕ್ರಂ ಗೆ ದೂರು ನೀಡಿದ ವಿಷ್ಣು.
ಮರುದಿನ ರಾಮೇಗೌಡರ ಮನೆಗೆ ಈ ವಿಚಾರವನ್ನು ಚರ್ಚಿಸಲು ಹೋದಾಗ ಅಲ್ಲಿನ ಪರಿಸ್ಥಿತಿ ಬೇರೆ ಇತ್ತು. ಅವರ ಪತ್ನಿ ಜಾನಕಿ ಹಾಗೂ ಮಗ ಭಾಸ್ಕರನಿಗೆ ಇವನನ್ನು ಕಂಡರೆ ಆಗುತ್ತಿರಲಿಲ್ಲ. ಮಗಳು ನೇಹ ಬೆಂಗಳೂರಿಗೆ ಹೋಗಿ ಅಂದು ಊರಿಗೆ ವಾಪಸ್ ಬಂದಿದ್ದಳು. ನೇಹ ಜೊತೆಗೆ ಆಕೆಯ ಇಬ್ಬರು ಸ್ನೇಹಿತರೂ ಬಂದಿದ್ದರು. ಅವರಿಬ್ಬರು ಆಕೆಯ ಪ್ರಾಜೆಕ್ಟ್ ಮೇಟ್ ಗಳಾದ ನವೀನ ಹಾಗೂ ರಾಹುಲ್. ಇವರೆಲ್ಲರೂ ಸುಬ್ರಮಣ್ಯಪುರದ ವೈಶಿಷ್ಟ್ಯ ಮತ್ತು ಸಾವಿರಾರು ಸರ್ಪಗಳು ವಾಸಿಸುತ್ತಿರುವ ಅಚ್ಚರಿಯ ಕುರಿತಾದ ಪ್ರಾಜೆಕ್ಟ್ ಮಾಡುತ್ತಿದ್ದರು. ತನ್ನ ಅಮ್ಮ ಹಾಗೂ ಅಣ್ಣನಂತೆ ನಡೆದುಕೊಳ್ಳದ ಸ್ನೇಹ ಆತನೊಡನೆ ಸ್ನೇಹದಿಂದ ಮಾತನಾಡಿದಳು.
ಅಂದು ಚರ್ಚಿಸಿದಂತೆಯೇ ಆಗಿದ್ದರೆ.. ನಿಧಿಯಾಸೆಗೆ ಹೆಣವನ್ನು ಗುಂಡಿನಿಂದ ಹೊರ ತೆಗೆದಿದ್ದರೆ ಬಂಗಾರವನ್ನು ತೆಗೆದುಕೊಂಡು ಹೆಣವನ್ನು ಅಲ್ಲಿಯೇ ಬಿಟ್ಟಿರಬೇಕಿತ್ತು. ಹಾಗಿದ್ದರೆ ಗಂಗಮ್ಮನ ಹೆಣ ಕಾಣೆಯಾಗಿದ್ದರ ಹಿಂದಿನ ಮರ್ಮವೇನು..?
ವಿಷ್ಣುವಿಗೆ ಊರಿನಲ್ಲಿ ನಡೆದ ಒಂದು ಚರ್ಚೆಯಿಂದ ಗೌಡರ ಮಗ ಭಾಸ್ಕರ ಹಾಗೂ ಗಂಗಮ್ಮಳಿಗೂ ಆಗಾಗ ಜಗಳವಾಗುತ್ತಿದ್ದ ವಿಚಾರ ತಿಳಿದಿತ್ತು. ಒಂದೆರಡು ಸಲ ಭಾಸ್ಕರ ಆಕೆಯ ಮೇಲೆ ಕತ್ತಿ ಹಿಡಿದುಕೊಂಡು ಹೋದ ವಿಚಾರವೂ ತಿಳಿದು, ಆತನ ಮೇಲೆ ಅನುಮಾನ ಹೆಚ್ಚಾಯಿತು. ಮರುದಿನವೇ ರಾಮೇಗೌಡರ ತೋಟದ ಮನೆಯ ಹಿಂದೆ ಗಂಗಮ್ಮಳ ಹೆಣ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಇನ್ಸ್ಪೆಕ್ಟರ್ ವಿಕ್ರಂ ಹೆಣವನ್ನು ಫೋರೆನ್ಸಿಕ್ ಲ್ಯಾಬ್ ಗೆ ಕಳುಹಿಸಿದಾಗ ಬಂದ ಫಲಿತಾಂಶ ಇನ್ನೂ ಅಚ್ಚರಿಗೆ ದೂಡಿತು. ಅಲ್ಲದೆ ವಿಷ್ಣುವಿಗೆ ದುಃಖವನ್ನೂ ಹೆಚ್ಚಿಸಿತ್ತು. ಗಂಗಮ್ಮಳ ಹೆಣದ ಮೇಲೆ ಕತ್ತರಿಸಿದ ಗಾಯದಳಿದ್ದವು ಜೊತೆಗೆ ಹೆಣದ ಮೇಲೆ ಅತ್ಯಾಚಾರವಾಗಿತ್ತು. ಆ ಕೃತ್ಯ ಎಸಗಿದ ವಿಕೃತ ಮನಸ್ಸಿನ ವ್ಯಕ್ತಿ ಯಾರು..?
ಭಾಸ್ಕರನ ಮೇಲೆ ಮಾತ್ರವಲ್ಲದೆ.. ಊರಿನಲ್ಲಿ ಭಿಕ್ಷೆ ಬೇಡಿ ಬಾಳುತ್ತಿದ್ದ ಉಚ್ಚೆಮಲ್ಲಿಯ ಮೇಲೂ ಅನುಮಾನ ಶುರುವಾಗಿತ್ತು. ಆದರೆ ಆತ ಕಾಣೆಯಾಗಿದ್ದ. ಅದಕ್ಕೆ ಕಾರಣವೇನಿತ್ತು..? ಗಂಗಮ್ಮ ಕೊಟ್ಟ ಒಡವೆಯ ಗಂಟು ಏನಾಯಿತು..?
ಇದನ್ನು ಮಾಡಿದ್ದು ಭಾಸ್ಕರನೇ ಅಥವಾ ಉಚ್ಚೆಮಲ್ಲಿಯೇ ಎಂದು ಶುರುವಾದ ಅನುಮಾನ ಭಾಸ್ಕರ ಅಪರಾಧಿಯಲ್ಲವೆಂದು ಸಾಬೀತುಪಡಿಸಿದರೆ.. ಉಚ್ಚೆಮಲ್ಲಿ ಹೊಳೆಯಲ್ಲಿ ಹೆಣವಾಗಿ ತೇಲುತ್ತಿದ್ದ. ಹಾಗಾದರೆ ಇದಕ್ಕೆ ಕಾರಣವೇನು..?
ಗಂಗಮ್ಮಳ ಸಾವು ಹಾವಿನ ವಿಷದಿಂದಲೇ ಆಗಿದ್ದರೂ.. ಪೋಸ್ಟ್ ಮಾರ್ಟಂನ ಪ್ರಕಾರ ಅದು ಹಾವು ಕಚ್ಚಿದ್ದರಿಂದ ಆಗಿದ್ದಲ್ಲ. ಹಾಗಾದರೆ ಆ ಕೊಲೆ ಮಾಡಿದ್ದು ಯಾರು ಹಾಗೂ ಅದಕ್ಕೆ ಕಾರಣವೇನಿತ್ತು..? ಇದಕ್ಕೂ ಗೌಡರಿಗೂ ಯಾವುದಾದರೂ ಸಂಬಂಧವಿತ್ತೇ ಎಂದು ಯೋಚಿಸುವಷ್ಟರಲ್ಲಿಯೇ ರಾಮೇಗೌಡರ ಸಾವಾಗುತ್ತದೆ. ಅದೂ ಸಹ ಗಂಗಮ್ಮನ ಸಾವಿನ ರೀತಿಯಲ್ಲಿಯೇ..! ಹಾಗಾದರೆ ಇದೆಲ್ಲದರ ಹಿಂದೆ ಇದ್ದ ಕಾಣದ ಕೈ ಯಾವುದು..? ಎಲ್ಲದಕ್ಕೂ ಉತ್ತರ ತಿಳಿಯಲು ಓದಿ ಸುಬ್ರಹ್ಮಣ್ಯಪುರ ಕಾದಂಬರಿಯನ್ನು.
ಊಹಿಸಲು ಸಾಧ್ಯವಾಗದ ರೀತಿಯಲ್ಲಿಯೇ ಕಥೆಯನ್ನು ಕಟ್ಟಿಕೊಡುತ್ತಾ ಸಾಗುತ್ತಾರೆ ಲೇಖಕರು. ಸುಬ್ರಮಣ್ಯಪುರದಲ್ಲಿ ನಾಗರ ಪಂಚಮಿಯಂದು ನಡೆದ ರಹಸ್ಯ ರಾತ್ರಿಯಿಂದ ಶುರುವಾದ ಕಥೆ ಕುತೂಹಲ ಮೂಡಿಸುತ್ತಲೇ ಓದಿಸಿಕೊಂಡು ಹೋಗುತ್ತದೆ.
~ವಿಭಾ ವಿಶ್ವನಾಥ್
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ