ಭಾನುವಾರ, ಏಪ್ರಿಲ್ 26, 2026

ಉಳಿದ ವಿವರಗಳು ಲಭ್ಯವಿಲ್ಲ ! (ಪುಸ್ತಕ ಯಾನ - 370)


ಪುಸ್ತಕದ ಶೀರ್ಷಿಕೆ : ಉಳಿದ ವಿವರಗಳು ಲಭ್ಯವಿಲ್ಲ !

ಲೇಖಕರು : ಜೋಗಿ

ಪ್ರಕಾಶಕರು : ಅಂಕಿತ ಪುಸ್ತಕ 

ಪ್ರಥಮ ಮುದ್ರಣ : 2017

ಪುಟಗಳು : 144

ಬೆಲೆ : 120 ರೂ.


ಇದು ಬೆಂಗಳೂರು ಕಥಾಸರಣಿಯಲ್ಲಿ ಇದು ಮೂರನೆಯ ಕೃತಿ. ಜೋಗಿ ಅವರು ಬೆಂಗಳೂರು ಕಥಾಸರಣಿಯನ್ನು ರೂಪಿಸಿರುವರಾದರೂ.. ಅವುಗಳನ್ನು ಸ್ವತಂತ್ರ ಕೃತಿಗಳಾಗಿಯೂ ಓದಬಹುದು. ಮೊದಲನೆಯದು ಕಾದಂಬರಿ ' ಬೆಂಗಳೂರು ' . ಎರಡನೆಯದು ಅನುಭವ ಕಥನ ' ಬಿ ಕ್ಯಾಪಿಟಲ್'.  ಮೂರನೆಯ ಈ ಕೃತಿಯನ್ನು ಕಥಾಸಂಕಲನ ಎನ್ನಬಹುದಾದರೂ ನಗರ ಕಥನ ಎಂದರೆ ಸೂಕ್ತ. 


ಈ ಕಥಾ ಸಂಕಲನದಲ್ಲಿ ಎರಡು ರೀತಿಯ ಕಥೆಗಳನ್ನು ಕಾಣಬಹುದು. 

ನೀಳ್ಗತೆಯ ಮಾದರಿಯಲ್ಲಿ ಅಧ್ಯಾಯಗಳನ್ನು ಹೊಂದಿದ ಕಥೆ 'ಹಾತೊರೆದ ಹಂಬಲಕ್ಕೆ ಹೂವಗಂಧ '


ಮತ್ತೊಂದು 'ಬಿಡಿ ಹೂವು ಮುಡಿದಂತೆ ಬಿದಿಗೆ ಚಂದ್ರ' ಎಂಬ ಶೀರ್ಷಿಕೆಯಲ್ಲಿ ಮೂರು ಬೇರೆ ಬೇರೆಯ ಕಥೆಗಳಿವೆ. 


ಹಾತೊರೆದ ಹಂಬಲಕ್ಕೆ ಹೂವಗಂಧ :

ಇಲ್ಲಿ ಮುಖ್ಯವಾಗಿ ಸುಹಾಸಿನಿ, ರಂಗನಾಥ, ಸುಧಾಕರ ಬಂದರೂ.. ಅಮರ್ತ್ಯ ಮುಖ್ಯವಾಗುತ್ತಾನೆ. ಅಮರ್ತ್ಯನಿಂದ ಶುರುವಾದ ಕಥೆ ಅಮರ್ತ್ಯನಲ್ಲಿಯೇ ಕೊನೆಯಾಗುವಂತೆ ಕುತೂಹಲಕಾರಿಯಾಗಿ ಹಂತ ಹಂತದಲ್ಲಿಯೂ ಬಿಡಿಸಿಟ್ಟಿದ್ದಾರೆ. 


ತನ್ನ ಮೊದಲನೇ ಮಗನಿಗೆ ಅಮರ್ತ್ಯ ಎಂದು ಹೆಸರಿಡಬೇಕು ಎಂಬ ಸುಹಾಸಿನಿಯ ಆಸೆಗೆ ಅವಳ ಗಂಡನ ಮನೆಯವರು ಅವಕಾಶ ಮಾಡಿಕೊಟ್ಟಿರಲಿಲ್ಲ. ಅವಳ ಗಂಡ ಸುಧಾಕರನ ಅಕ್ಕ-ತಂಗಿಯರೆಲ್ಲ ಪಟ್ಟು ಹಿಡಿದು ಸುಹಾಸಿನಿಗೆ ಒಂಚೂರೂ ಇಷ್ಟವಿಲ್ಲದ ರಂಗನಾಥ ಎನ್ನುವ ಹೆಸರಿಟ್ಟರು. ಸುಧಾಕರ ಇದೊಂದು ವಿಷಯವೇ ಅಲ್ಲವೆಂಬಂತೆ ಮುಂದೆ ಬದಲಿಸಿಕೊಂಡರಾಯಿತು ಎಂದು ಹೇಳಿ ಅದನ್ನು ಮರೆತುಬಿಟ್ಟಿದ್ದ. ಇದು ಸುಹಾಸಿನಿಯ ಅಸಹನೆಯ ಶುರುವಷ್ಟೇ.. ಮಗುವಿಗೆ ಹೆಸರಿಡಲು ಸ್ವಾತಂತ್ರ್ಯವಿಲ್ಲದ ಸುಹಾಸಿನಿಯ ಮುಂದಿನ ಬದುಕು ಹೇಗಿರಬಹುದು ಎಂಬುದನ್ನು ಕಲ್ಪಿಸಿಕೊಳ್ಳಲು ಇದು ಅಡಿಪಾಯದಂತೆ ಕಾಣುತ್ತದೆ. 


ಸುಹಾಸಿನಿ ಮನೆ ಬಿಟ್ಟು ಹೊರಟದ್ದು.. ಅದರಲ್ಲಿಯೂ ತನ್ನ ಮಗುವನ್ನು ಬಿಟ್ಟು ಹೊರನಡೆದದ್ದು ಅಚ್ಚರಿ ತರುತ್ತದಾದರೂ ಆಕೆ ತನ್ನನ್ನು ಬಿಟ್ಟು ಹೋಗಿದ್ದು ಒಂದು ಹೆಸರಿಗಾಗಿ ಎಂದು ಕನಸಿನಲ್ಲೂ ಊಹಿಸಿರದ ಸುಧಾಕರನಿಗೆ ಹೇಗನ್ನಿಸಿತು. ಮಗುವನ್ನು ಬಿಟ್ಟು ಸುಹಾಸಿನಿ ನಡೆದದ್ದಾದರೂ ಎಲ್ಲಿಗೆ ಎಂದು ಊಹಿಸಿಕೊಳ್ಳುವಷ್ಟರಲ್ಲಿಯೇ.. ಮಗ ರಂಗನಾಥನಿಗೆ ಆ ವಿಚಾರ ತಿಳಿದಾಗ ಹುಟ್ಟಿದ ಭಾವನೆಗಳು ತೆರೆದುಕೊಳ್ಳುತ್ತವೆ. ಹಾಗೆಂದು, ಸುಧಾಕರನ ಅಕ್ಕ-ತಂಗಿಯರಾರೂ ಅವನ ತಾಪತ್ರಯವನ್ನು ಹೊತ್ತುಕೊಳ್ಳಲು ಸಿದ್ಧವಾಗಿರಲಿಲ್ಲ. ಸುಧಾಕರ ಇಂತಹ ಸೂಕ್ಷ್ಮವನ್ನು ಅರ್ಥ ಮಾಡಿಕೊಂಡಿದ್ದರೆ ಅಥವಾ ಮೊದಲೇ ಗಮನಿಸಿದಿದ್ದರೆ ಸುಹಾಸಿನಿ ಹೊರನಡೆಯುವ ಪ್ರಮೇಯವೇ ಇರುತ್ತಿರಲಿಲ್ಲ ಎಂದು ಕೊಳ್ಳಬಹುದಾದರೂ.. ಅಷ್ಟಕ್ಕೂ.. ಸುಹಾಸಿನಿ ಹೊರನಡೆದದ್ದು ಮಗುವಿಗೆ ಹೆಸರಿಟ್ಟ ಎಷ್ಟೋ ವರ್ಷದ ನಂತರ ಎಂಬುದನ್ನು ಗಮನಿಸಬೇಕು. ಎಂದಿನದ್ದೋ ಕ್ರಿಯೆ ಮತ್ತೆಂದೋ ಪ್ರತಿಕ್ರಿಯೆಯಾಗುವ ಬಗೆಯಾ ಇದು..!?


ಇತ್ತ ಡಾಕ್ಟರ್ ಚಿದಂಬರ ದೇಸಾಯಿ ಹಾಗೂ ವರದರಾಜಯ್ಯನ ಸ್ನೇಹ ತೆರೆದುಕೊಳ್ಳುತ್ತದೆ. ಮದುವೆ ಮಾಡಿಕೊಳ್ಳದ ದೇಸಾಯಿಯರು ಈಗ ಎಪ್ಪತ್ತರ ಅಂಚಿನಲ್ಲಿದ್ದರು. ಅವರಿಗೆ ಅಂಟಿಕೊಂಡಿದ್ದ ಬೆನ್ನು ನೋವಿನ ಕಾರಣ ಅವರಿಗೆ ತಿಳಿದಿತ್ತು. ಅದು ಬೆನ್ನು ಬಿಡದು ಎಂಬ ವಾಸ್ತುವತೆಯ ಅರಿವು ಚೆನ್ನಾಗಿಯೇ ಇತ್ತು. ಈಗ ಅವರ ಸಹಾಯಕ್ಕೆ ಯಾರಾದರೂ ಬೇಕಿತ್ತು. ಇಂತಹ ಸಮಯದಲ್ಲಿ ಒದಗಿ ಬಂದಿದ್ದು ವರದರಾಜಯ್ಯನವರು ಗೊತ್ತು ಮಾಡಿದ ಅಡುಗೆ ಹೆಂಗಸು. ವರದರಾಜಯ್ಯನವರು ಅವರ ಬಾಲ್ಯ ಗೆಳೆಯರೇನಲ್ಲ. ಇವರಿಬ್ಬರ ಸ್ನೇಹ ಚಿಗುರಿದ್ದು ಹೇಗೆ..? ವರದರಾಜಯ್ಯನವರ ಹಿನ್ನೆಲೆ ಏನಿತ್ತು, ದೇಸಾಯಿಯವರು ವಿವಾಹ ಮಾಡಿಕೊಳ್ಳಲು ಹಿಂದೇಟು ಹಾಕಿ ಸುಮ್ಮನಾದ್ದೇಕೆ..? 


ರಂಗನಾಥ ಹರೆಯಕ್ಕೆ ಬರುವಷ್ಟರಲ್ಲಿಯೇ ತಂದೆಯಿಂದ ವಿಮುಖನಾಗಿದ್ದ. ತನ್ನ ಹೆಸರೇ ತನಗೆ ಶತ್ರುವಂತಾಗಿತ್ತು. ತನ್ನ ಹೆಸರು ಅಮರ್ತ್ಯ ಎಂಬುದು ತಲೆಯಲ್ಲಿ ಕುಳಿತು ಒಂದು ವಿಚಿತ್ರ ಸನ್ನಿವೇಶದಲ್ಲಿ ಹೆಸರು ಹೇಳಲೂ ತಡವರಿಸಿ ಪೊಲೀಸರ ಅತಿಥಿಯೂ ಆಗಿದ್ದ. ಇಂತಹ ರಂಗನಾಥನಿಗೆ ಜೊತೆಯಾದದ್ದು ಪಾರ್ವತಿ. ಮುಂದೆ ರಂಗನಾಥನ ಪ್ರಾಣಪಕ್ಷಿ ಹಾರಿಹೋಗಿತ್ತು. ಅದು ಕೊಲೆಯೋ..? ಆತ್ಮಹತ್ಯೆಯೋ..? ಪಾರ್ವತಿಯ ಹಿನ್ನೆಲೆ ಏನಿತ್ತು..? ರಂಗನಾಥ ಹಾಗೂ ಆಕೆ ಜೊತೆಯಾದದ್ದು ಹೇಗೆ ಓದಿ ನೋಡಿ. 


ಸುಹಾಸಿನಿ ಹಾಗೂ ಸುಧಾಕರನ ವಿವಾಹ ಮಾಡಿಸಿದ್ದು ಶಿವಲಿಂಗಯ್ಯ. ಆತ ವಿಚಿತ್ರ ಖಯಾಲಿಯ ಮನುಷ್ಯ. ಮದುವೆ ಮಾಡಿಸುವುದು, ಅಧ್ಯಕ್ಷತೆ ವಹಿಸುವುದು ಆತನ ಖಯಾಲಿಗಳು. ಆತ ಮಾಡಿಸಿದ ಮದುವೆಗಳಾವೂ ಮುರಿಯುತ್ತಿರಲಿಲ್ಲ ಎಂಬುದು ಆತನಿಗೆ ಸಾರ್ಥಕತೆ ತಂದುಕೊಟ್ಟಿದ್ದರೂ.. ಸುಹಾಸಿನಿ ವಿವಾಹ ಮುರಿದು ತನ್ನ ಬಳಿಗೆ ಬಂದಾಗ ಆತನಿಗೆ ಉಂಟಾದ ಜ್ಞಾನೋದಯವೇನು..? ದಾಂಪತ್ಯದ ಅರ್ಥ ಆತನಿಗೆ ಅರಿವಾಯಿತೇ..? ಆತ ಸುಧಾಕರ ಹಾಗೂ ಸುಹಾಸಿನಿಯರನ್ನು ಒಂದುಗೂಡಿಸಲು ಪ್ರಯತ್ನಿಸಲಿಲ್ಲವೇ..? ಸುಹಾಸಿನಿಯ ಭವಿಷ್ಯ ಬದಲಾಯಿತೇ..?


ಇವು ಒಂದಕ್ಕೊಂದು ಸಂಬಂಧವಿಲ್ಲದಂತೆ ಕಂಡರೂ ಒಬ್ಬರ ಬದುಕಿನೊಡನೆ ಒಬ್ಬರಿಗೆ ತಳುಕು ಹಾಕಿಕೊಂಡಿರುವ ಕಥೆಗಳು. ಈ ಎಲ್ಲವೂ ಸೇರಿ ಮಿನಿ ಕಾದಂಬರಿಯಂತೆಯೂ.. ನೀಳ್ಗತೆಯಂತೆಯೂ ಭಾಸವಾಗುತ್ತದೆ.


'ಬಿಡಿಹೂವು ಮುಡಿದಂತೆ ಬಿದಿಗೆ ಚಂದ್ರ' ಇದರಲ್ಲಿ ಮೂರು ವಿಭಿನ್ನ ಕಥೆಗಳಿವೆ. ಈ ಮೂರರಲ್ಲಿಯೂ ಒಂದು ಸಾಮಾನ್ಯ ಅಂಶ ಕಾಣಿಸಿ ಸಿಗುತ್ತದೆ. ಅದೇನೆಂದು ನೀವೇ ಓದಿ ಗುರುತಿಸಿ.


ಬಸವಾರೆಡ್ಡಿಯ ಮೂರನೇ ಮಗ : ಬಸವಾರೆಡ್ಡಿಯ ತನ್ನ ಮೂರನೇ ಮಗ ರಂಜಿತ್ ರೆಡ್ಡಿಯ ಮದುವೆಯನ್ನು ಮೊದಲಿಬ್ಬರ ವಿವಾಹಕ್ಕಿಂತ ವಿಭಿನ್ನವಾಗಿ ಹಾಗೂ ಅದ್ದೂರಿಯಾಗಿ ಮಾಡಿದ್ದ. ಆದರೆ, ಆ ಮದುವೆ ಸಮಾರಂಭದಲ್ಲಿ ನಡೆದ ಒಂದು ಘಟನೆ ಆತನ ನೆಮ್ಮದಿಯನ್ನು ಕೆಡಿಸಿತ್ತು. ಈ ಮದುವೆ ಆತನಿಗೆ ಮನೆಯಲ್ಲಿ ಮಾತ್ರವಲ್ಲದೆ.. ಹೊರಗಡೆಯೂ ವಿಶೇಷ ಗೌರವವನ್ನು ತಂದು ಕೊಟ್ಟಿತ್ತು. ಆತನ ಈ ನಿರ್ಧಾರದ ಹಿಂದೆ ಪರಿಮಳ ಅಯ್ಯರ್ ಇದ್ದಳು. ಹಾಗೆಂದು, ಈ ವಿವಾಹದ ನೆಂಟಸ್ಥಿಕೆಯಲ್ಲ ಈ ಅವನ ಮನಸ್ಥಿತಿಯನ್ನು ಹದಗೆಡಿಸಿದ್ದು ಲೋಕೇಶನ ಒಂದು ಮಾತು. ಆ ಮಾತು ರಂಜಿತ್ ನನ್ನು ಬಸವಾರೆಡ್ಡಿ ಸೂಕ್ಷ್ಮವಾಗಿ ಗಮನಿಸುವಂತೆ ಮಾಡಿತ್ತು. ಆತನ ಗಮನಿಸುವಿಕೆಯಲ್ಲಿ ಅರಿವಾದದ್ದೇನು..? ನಂತರ ಬಸವ ರೆಡ್ಡಿ ಮಾಡಿದ ನಿರ್ಧಾರವೇನು..? ಗಂಡಿನ ಮನದ ತಳಮಳಗಳು ಚಿತ್ರಿತವಾಗಿರುವ ಕಥೆ ಇದು.


ಮೂರು ಸಂಜೆಯ ದೀಪ : ಆತನಿಗೂ ಕೇಶವಪ್ರಸಾದನಿಗೂ 8 ವರ್ಷಗಳ ಅಂತರ. ಕೇಶವಣ್ಣ ಓದಿದಷ್ಟು ಅವನ ಊರಲ್ಲಿ ಯಾರೂ ಓದಿರಲಿಲ್ಲ. ಅಲ್ಲದೆ, ಸಣ್ಣಪ್ರಾಯದಲ್ಲಿಯೇ ಇಡೀ ದೇಶ ಸುತ್ತಿದ್ದ. ವಿವಿಧ ಪ್ರಯೋಗಗಳು, ಸೂಕ್ಷ್ಮ ಗಮನಿಸುವಿಕೆ ಹೀಗೆ ಆತನನ್ನು ವಿಭಿನ್ನ ನೆಲೆಯಲ್ಲಿಯೇ ನಿಲ್ಲಿಸಿದ್ದವು. ಆದರೆ, ಆತನ ಪತ್ನಿ ಶಾಲಿನಿ ಆತನ ಜೊತೆಗಿಲ್ಲದ ಸಂದರ್ಭದಲ್ಲಿ ಆತನ ಪರಿಸ್ಥಿತಿ ಹೆಚ್ಚು ಕಡಿಮೆ ಹುಚ್ಚನಂತೆಯೇ ಇತ್ತು. 

ಆತನನ್ನು ಭೇಟಿ ಮಾಡಲು ಹೋದವನ ಪರಿಸ್ಥಿತಿಯು ಹೆಚ್ಚು ಕಡಿಮೆ ಏಳು ವರ್ಷದಲ್ಲಿ ಕೇಶವಣ್ಣನಂತೆಯೇ ಆಗಿತ್ತು. ಆತ ಹೆಚ್ಚು ಪ್ರೀತಿಸಿದ ಜಾಹ್ನವಿ, ಶಾಲಿನಿಯಾಗಿದ್ದಳು. ಆತನ ಜಾಗದಲ್ಲಿ ಎದುರು ಮನೆಯ ಹುಡುಗ ನಿರಂಜನನಿದ್ಧ. 

"ಸಂಧ್ಯಾ ಸಮಯದಲ್ಲಿ ಎರಡು ಕಾಲಗಳು ಪರಸ್ಪರ ಸಂಧಿಸುತ್ತವೆ. ಕತ್ತಲು ಮತ್ತು ಬೆಳಕು ಎಣೆಯಾಡುತ್ತವೆ. ಮೊದಲ ಸಂಜೆಗೆ ದೀಪ ಮೂಡುತ್ತದೆ. ಎರಡನೆಯ ಸಂಜೆಗೆ ದೀಪ ಬೆಳಗುತ್ತದೆ. ಮೂರನೆಯ ಸಂಜೆಗೆ ದೀಪ ಆರುತ್ತದೆ."

ಇಂತಹ ಮಾತನ್ನಾಡುವ ಕೇಶವಣ್ಣನ ಮಾತುಗಳು ಮೂಡಿಸುವ ಜ್ಞಾನೋದಯವೇ ಬೇರೆ.


ವಿಷಾದ ಯೋಗ : ನಿರ್ಮಲಾ ಜೋಶಿಯನ್ನು ನೋಡಿ ಹತ್ತು - ಹದಿನೈದು ವರ್ಷಗಳೇ ಆಗಿದ್ದ ನಾಗರಾಜ ಈಗ ಆಕೆಯ ಸಂತಾಪಸೂಚಕ ಸಭೆಗೆ ಹೋಗಿ ಮಾತನಾಡಲು ಮನಸ್ಸಿನಲ್ಲಿಯೇ ಟಿಪ್ಪಣಿ ಮಾಡಿಕೊಳ್ಳುತ್ತಿದ್ದ. ಅವರಿಬ್ಬರ ಪರಿಚಯ ಹೇಗಾಯಿತು ಎನ್ನುವುದರಿಂದ ಹಿಡಿದು ಆಕೆಯ ಮಾನವೀಯತೆ, ಸಹಾಯದ ಮನೋಭಾವ ಹೀಗೆ ಹಲವಾರು ಮಾತುಗಳನ್ನಾಡಿದವನಿಗೆ "ತಾನು ಆಡಿದ್ದು ಅವನು ಆಡಬೇಕಾದ ಮಾತುಗಳಲ್ಲ ಎನ್ನುವುದು ಅವನಿಗೆ ಗೊತ್ತಾಗುತ್ತಿತ್ತು. ಆಡಬಹುದಾದ ಮಾತುಗಳನ್ನಷ್ಟೇ ನಾವು ಆಡುತ್ತೇವೆ. ಆಡಬೇಕಾದ ಮಾತುಗಳನ್ನಲ್ಲ. ಅದಕ್ಕೆ ಬದುಕು ಕ್ಲಿಷ್ಟ ಮತ್ತು ಭಯಾನಕ. ಆಡಬೇಕಾದ ಮಾತುಗಳನ್ನು ಆಡುವುದಕ್ಕೆ, ಆಡಿಸುವುದಕ್ಕೆ ಇರುವ ಏಕೈಕ ಸಾಧ್ಯತೆ ಕಾವ್ಯ." ಎಂದು ಆಲೋಚಿಸುತ್ತಿರುವಾಗಲೇ ಶೈಲಜಾ ಮಾತುಗಳು ಕೇವಲ ಅವನಲ್ಲಿ ಮಾತ್ರವಲ್ಲ ಇಡೀ ಸಭೆಯಲ್ಲಿಯೇ ಮೂಡಿಸಿದ ಭಾವವೇ ವಿಚಿತ್ರವಾದುದು. ಅದೇನೆಂದು ನೀವೇ ಓದಿ ನೋಡಿ. 


ಈ ಕೃತಿಯ ಶೀರ್ಷಿಕೆ "ಉಳಿದ ವಿವರಗಳು ಲಭ್ಯವಿಲ್ಲ" ಎನ್ನುವುದಕ್ಕೆ ತಕ್ಕಂತೆಯೇ ಕಥೆಗೆ ಅವಶ್ಯವಿರುವಷ್ಟೇ ವಿವರಗಳನ್ನು ನೀಡುತ್ತಾ.. ಈ ವಿವರಗಳು ಬೇಕಿದ್ದವು ಎನ್ನುವಂತಿರುವಾಗಲೇ ಇನ್ನುಳಿದ ವಿವರಗಳ ಕುರಿತು ಕುತೂಹಲ ಮೂಡಿಸುತ್ತಾ ನಮ್ಮ ಆಲೋಚನಾಶಕ್ತಿಗೆ ಕೆಲಸ ಕೊಡುತ್ತದೆ. ಇದು ಕಥೆಯನ್ನು ಮೆಲುಕು ಹಾಕುವಂತೆ ಮಾಡುವುದೂ ಹೌದು. ಜೊತೆಗೆ, ಜೋಗಿಯವರ ಬರಹದ ಸಿಗ್ನೇಚರ್ ಸ್ಟೈಲ್ ಅನ್ನು ಕಾಣಬಹುದು.


~ವಿಭಾ ವಿಶ್ವನಾಥ್

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ