ಕಥೆ : ಬಂದಳಿಕೆ
ಲೇಖಕರು : ಪದ್ಮಾ ಶೆಣೈ
'ಬಂದಳಿಕೆ' ಎಂದರೆ ಮುಖ್ಯವಾಗಿ ಬೇರೆ ಮರಗಳ ಮೇಲೆ ಬೆಳೆಯುವ ಒಂದು ಪರಾವಲಂಬಿ ಬಳ್ಳಿ ಅಥವಾ ಸಸ್ಯ. ಇದು ಆಶ್ರಯ ಪಡೆದ ಮರದಿಂದಲೇ ಪೋಷಕಾಂಶವೆಲ್ಲವನ್ನೂ ಹೀರಿ ಬೆಳೆದಂತೆಲ್ಲಾ ತನಗೆ ಆಶ್ರಯ ಕೊಟ್ಟ ಮರವನ್ನೇ ಪತನಗೊಳಿಸುವ ಸಾಮರ್ಥ್ಯವನ್ನು ಹೊಂದಿರುತ್ತದೆ.
ಸರಸ್ವತಮ್ಮನವರ ಸೊಸೆ ತಮ್ಮ ಮನೆಯ ಹಿಂಭಾಗದಲ್ಲಿ ತೋಟದ ಮೂಲೆಯಲ್ಲಿದ್ದ ಹೆಬ್ಬಲಿಸಿನ ಮರಕ್ಕೆ ಸುತ್ತಿಕೊಂಡು ಬೆಳೆದಿದ್ದ ಮನಿ ಪ್ಲಾಂಟ್ ನ ಒಂದು ತುಂಡನ್ನು ಕಿತ್ತು ಸುಂದರವಾದ ಹೂದಾನಿಯಲ್ಲಿಟ್ಟು ಡ್ರಾಯಿಂಗ್ ರೂಮ್ ನಲ್ಲಿ ಇಟ್ಟಿದ್ದಳು. ಯಾರೇ ಆ ಪರಿಚಿತರು ಬಂದರೂ ಅದನ್ನು ನೋಡಿ ಎಷ್ಟು ಚೆನ್ನಾಗಿದೆ ಎಂದು ಉದ್ಗಾರ ತೆಗೆಯುವಷ್ಟು ಸೊಗಸಾದ ಚಿತ್ರಣವಾಗಿತ್ತು ಅದು.
ಸರಸ್ವತಮ್ಮನವರ ಗೆಳತಿ ಇಂದಿರೆ ಕಾಲೇಜಿನ ನಿವೃತ್ತ ಉಪನ್ಯಾಸಕಿ. ಜೊತೆಗೆ ಸದಭಿರುಚಿಗಳ ಹೆಂಗಸು. ನೆರೆಮನೆಯಲ್ಲಿಯೇ ವಾಸವಾಗಿದ್ದರು. ಆದರೆ, ಈ ಮನಿ ಪ್ಲಾಂಟ್ ಅನ್ನು ಕಂಡವರೇ ಒಂದು ಕ್ಷಣ ನೋಡುತ್ತಾ ನಿಂತರಾದರೂ ಮೆಚ್ಚುಗೆಯ ಮಾತಾಡಲಿಲ್ಲ. ಅಲ್ಲದೆ, ಬಂದಾಗಲೆಲ್ಲಾ ಹೂದಾನಿಗೆ ಬೆನ್ನು ಮಾಡಿಯೇ ಕುಳಿತುಕೊಳ್ಳುತ್ತಿದ್ದರು. ಅದನ್ನವರು ನೋಡಲು ಇಷ್ಟಪಡುವುದಲ್ಲವೆಂಬುದು ಸ್ಪಷ್ಟವಾಗಿತ್ತು.
ಗೆಳೆತನದ ಅರ್ಥೈಸುವಿಕೆ ಜೊತೆಗೆ ಆತ್ಮೀಯತೆಯೂ ಸೇರಿ ಸರಸ್ವತಮ್ಮ ನೇರವಾಗಿಯೇ ಇಂದಿರೆಯನ್ನು ಕೇಳಿದರು.
ಅದಕ್ಕೆ ಉತ್ತರವಾಗಿದ್ದು ಇಂದಿರೆಯ ಗತ ಜೀವನ. ಅದನ್ನು ನೋಡಿದಾಗಲೆಲ್ಲಾ ಆಕೆಗೆ ತನ್ನ ಗತ ಜೀವನದ ಪುಟಗಳೇ ತೆರೆದಂತಾಗುತ್ತಿತ್ತು. ಅಲ್ಲದೆ, ಆ ಬಂದಳಿಕೆಗಳನ್ನು ನೋಡುತ್ತಿರುವಾಗೆಲ್ಲಾ ಅಸಹಾಯಕ ಹೆಣ್ಣುಮಕ್ಕಳ ಜೀವನವೇ ಜ್ಞಾಪಕ ಬರುತ್ತಿತ್ತು. "ಒಂದು ಕಾಲದಲ್ಲಿ ನಾನೂ ಬಂದಳಿಕೆಯೇ ಆಗಿದ್ದೆ. ಗೊತ್ತೇ ?" ಎಂದು ತಮ್ಮ ಆತ್ಮವೃತ್ತಾಂತವನ್ನು ಹರವಿಡುತ್ತಾರೆ.
ಇಂದಿರೆ ಬಹಳ ಬುದ್ಧಿವಂತಳಾಗಿದ್ದರೂ.. ಕಾಲೇಜು ಕಲಿಸಿದರೆ ಆಕೆಗಿಂತ ಹೆಚ್ಚು ಓದಿದ ಗಂಡನ್ನು ತರಲು ಸಾಧ್ಯವಿಲ್ಲವೆಂದು ತಂದೆ-ತಾಯಿ ಮುಂದೆ ಓದಿಸಲಿಲ್ಲ. ತಂದೆಗೆ ಎದುರು ಮಾತನಾಡಿಯೇ ಆಕೆಗೆ ರೂಢಿ ಇರಲಿಲ್ಲ. ಅಣ್ಣನಿಂದಲೂ ಅದಕ್ಕೆ ಸಹಕಾರ ಸಿಗಲಿಲ್ಲ. ಅಕ್ಕಂದಿರೆಲ್ಲರ ಮದುವೆಯಾಗಿ ಆಕೆಗೆ ಮದುವೆಯಾಗುವಷ್ಟರಲ್ಲಿ ಶಾಲೆ ಬಿಟ್ಟು ಮೂರು ವರ್ಷವಾಗಿತ್ತು. ಅಕ್ಕನ ಮದುವೆಯ ಸಂದರ್ಭದಲ್ಲಿ ಆಕೆಯ ವಿವಾಹದ ಕುರಿತು ಪ್ರಶ್ನೆ ಎದ್ದಾಗಲೆಲ್ಲಾ ಆಕೆಗೆ ತಳಮಳಗಳು. ಅಣ್ಣನಿಗೆ ಮದುವೆಯಾಗುವ ಮನಸ್ಸಿದ್ದರೂ ಇಂದಿರೆಯ ಮದುವೆಯಾಗದೆ ಆತ ಮದುವೆಯಾಗುವಂತಿರಲಿಲ್ಲ. ಅದು ಇಂದಿರೆಯ ಮೇಲೆ ಪರಿಣಾಮ ಬೀರುತ್ತಿತ್ತು. ಆತನ ಕೋಪಕ್ಕೆ ಇವಳೇ ಬಲಿಯಾಗುತ್ತಿದ್ದಳು.
"ಹೆಣ್ಣು ತಾನೂ ದುಡಿಯುತ್ತೇನೆ ಎನ್ನುವಾಗ ಬೇಡವೆಂದು ಹತ್ತಾರು ಕಟ್ಟುಪಾಡುಗಳನ್ನು ವಿಧಿಸಿ 'ದುಡಿಯುವ ಗಂಡು' ಎಂದು ಪೂಜೆ ಮಾಡುವವರೊಡನೆ ಏನು ಮಾತು ? ಗಂಡಿಗೆ ಮಾತ್ರ ಮದುವೆ ವಯಸ್ಸು, ಚಿಂತೆ ಸಿಟ್ಟು ಇರುವುದೇ ? ಹೆಣ್ಣು ಕಲ್ಲು ಬಂಡೆಯೇ ? " ಎಂಬ ಆಲೋಚನೆಗಳು ಬರುತ್ತಿದ್ದವು.
ಹೀಗೆ ಬೇಸರಗೊಂಡಾಗಲೆಲ್ಲಾ ಇಂದಿರೆ ತೋಟದಲ್ಲಿ ಕುಳಿತ ಸಂದರ್ಭದಲ್ಲಿ ತೋಟದಲ್ಲಿದ್ದ ಮಾಮರ ಮತ್ತು ಬಂದಳಿಕೆಯ ಮೇಲೆ ದೃಷ್ಟಿ ಹರಿಯುತ್ತಿತ್ತು. ಅಪ್ಪ, ಅಣ್ಣ ಮಾಮರದಂತೆ ಮತ್ತು ತಾನು ಮರದ ಸತ್ವ, ಸಾರವನ್ನು ಹೀರಿ ಬೆಳೆದು ಅವರನ್ನು ಹೀರುತ್ತಿರುವ ಬಂದಳಿಕೆಯಂತೆ ಎನಿಸುತ್ತಿತ್ತು. ಮನೆಯಲ್ಲಿ ಒಂದಗುಳು ಅನ್ನವನ್ನು ತಿನ್ನಬಾರದು ಎಂದೆನಿಸಿದರೂ ಅವಳ ಅಸಹಾಯಕತೆಗೆ ಕಂಬನಿ ಸುರಿಸುವುದಲ್ಲದೆ ಮತ್ತೇನೂ ಮಾಡಲು ಸಾಧ್ಯವಾಗುತ್ತಿರಲಿಲ್ಲ.
ಮುಂದೆ ಆಕೆಗೆ ವಿವಾಹವಾಯಿತಾದರೂ.. ಆ ದಾಂಪತ್ಯ ಸುಖಮಯವಾಗಿರಲಿಲ್ಲ. ಆತ ತನ್ನ ಸುಖವನ್ನಷ್ಟೇ ನೋಡಿಕೊಂಡನು. ಮೊದಲ ಮಗು ಗಂಡು ಮತ್ತು ಎರಡನೆಯದು ಹೆಣ್ಣು. ಎರಡನೇ ಹೆರಿಗೆ ಸಂದರ್ಭದಲ್ಲಿ ಆತನ ವರ್ತನೆ ಇಂದಿರೆಯ ಮನಸ್ಸಿನ ಮೇಲೆ ಮಾಯದ ಗಾಯವನ್ನು ಮಾಡಿತು. ದುರವಸ್ಥೆಯಲ್ಲಿ ಹೇಗೋ ತವರಿನ ಆಶ್ರಯ ಸಿಕ್ಕಿತು. ಆರ್ಥಿಕವಾಗಿ ಸ್ವತಂತ್ರಳಾದರೆ ತನ್ನ ಸಮಸ್ಯೆಗೆ ತಾತ್ಕಾಲಿಕ ಪರಿಹಾರ ಸಿಗುವುದೆಂದು ಅವಳ ನಂಬಿಕೆಯಾಗಿತ್ತು. ಶಾಲೆಯಲ್ಲಿ ನೌಕರಿ ಹಿಡಿದು, ಎಂ ಎ ಮುಗಿಸಿ ಕಾಲೇಜಿನಲ್ಲಿ ಉಪನ್ಯಾಸಕಿಯಾದಳು. ಸ್ವಾಭಿಮಾನದಿಂದ ಬದುಕು ಕಟ್ಟಿಕೊಂಡಳು. ಮಕ್ಕಳನ್ನು ಆತ್ಮವಿಶ್ವಾಸದಿಂದ ಸ್ವತಂತ್ರವಾಗಿ ಬೆಳೆಸಿದಳು. ಈಗ ಅವರ ಸುಖ ದಾಂಪತ್ಯಕ್ಕೂ ಸಾಕ್ಷಿಯಾಗಿದ್ದಾಳೆ.
"ಹೆಣ್ಮಕ್ಕಳನ್ನು ಜರಿಯದೆ, ಸರಿಯಾದ ಶಿಕ್ಷಣ ಕೊಟ್ಟು, ಅವರಲ್ಲಿ ಆತ್ಮವಿಶ್ವಾಸವನ್ನು ತುಂಬುವ ಅಗತ್ಯ ಇಂದು ಎಂದಿಗಿಂತಲೂ ಹೆಚ್ಚಾಗಿಯೇ ಇದೆ." ಎನ್ನುತ್ತಾಳೆ ಇಂದಿರೆ.
"ಕೀಳಿರಿಮೆ, ಪರಾವಲಂಬನ ಹೆಣ್ಣಿನ ಸ್ವಂತಿಕೆಯನ್ನು ನಷ್ಟ ಮಾಡುತ್ತದೆ." ಎನ್ನುತ್ತಲೇ ಹೆಣ್ಣು ದಿಟ್ಟೆಯಾಗುವ ಪರಿಯನ್ನು ಇಂದಿರೆಯ ಮೂಲಕ ಸೊಗಸಾಗಿ ಕಟ್ಟಿಕೊಟ್ಟಿದ್ದಾರೆ ಪದ್ಮಾ ಶೆಣೈ ಅವರು.
1982-83 ರಲ್ಲಿ ಡಾ|| ವೀಣಾ ಶಾಂತೇಶ್ವರ ಅವರು ಸಂಪಾದಿಸಿರುವ 'ಲೇಖಕಿಯರ ಕಥಾಸಂಕಲನ' ಪ್ರಕಟಿತವಾಗಿರುವ ಕತೆ ಇದು.
~ವಿಭಾ ವಿಶ್ವನಾಥ್
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ