ಭಾನುವಾರ, ಏಪ್ರಿಲ್ 26, 2026

ಭಾರತದ ಜನಪದ ಕಥೆಗಳು (ಪುಸ್ತಕ ಯಾನ - 364)


ಪುಸ್ತಕದ ಶೀರ್ಷಿಕೆ : ಭಾರತದ ಜನಪದ ಕಥೆಗಳು

ಸಂಗ್ರಹ : ತ್ರಿಮೂರ್ತಿ

ಪ್ರಕಾಶಕರು : ವಾಸನ್ಸ್ ಪಬ್ಲಿಕೇಶನ್ಸ್

ಪ್ರಥಮ ಮುದ್ರಣ : 2010

ಪುಟಗಳು : 156

ಬೆಲೆ : 30 ರೂ.


ಜನರ ಬಾಯಿಯಿಂದ ಬಾಯಿಗೆ ಹರಡಿ.. ಕಥೆಗಳು ಆಯಾ ಪ್ರದೇಶಗಳು ಹಾಗೂ ಸಂಸ್ಕೃತಿಗಳಿಗೆ ತಕ್ಕಂತೆ ಬದಲಾಗುವ ಜನಪದ ಕಥೆಗಳಾದರೂ ಅವುಗಳು ಹೇಳುವ ನೀತಿ ಎಲ್ಲರಿಗೂ.. ಎಲ್ಲ ಕಾಲಕ್ಕೂ ಹೊಂದುವಂತಿರುತ್ತದೆ. ಈ ಕಥಾ ಸಂಕಲನದಲ್ಲಿ ಕರ್ನಾಟಕ, ಆಂಧ್ರ, ಕೇರಳ, ಬಂಗಾಳಿ, ಮಹಾರಾಷ್ಟ್ರ, ಪಂಜಾಬಿ, ಕಾಶ್ಮೀರಿ, ತಮಿಳುನಾಡು, ಅಸ್ಸಾಂ, ರಾಜಸ್ಥಾನ, ಗೋವಾ, ಮಧ್ಯಪ್ರದೇಶ, ಕೊಂಕಣ ಹೀಗೆ ವಿವಿಧ ಭಾಗಗಳ ಹಾಗೂ ಮಲಯಾಳಂ, ಗುಜರಾತಿ, ಓರಿಯಾ, ತೆಲುಗು, ಹಿಂದಿ, ಮರಾಠಿ ಈ ಭಾಷೆಗಳ ಕಥೆಗಳಿವೆ. 


ಈ ಕಥೆಗಳಲ್ಲಿ ನಾನು ಗಮನಿಸಿದಂತೆ ಬುದ್ಧಿವಂತಿಕೆ ಪ್ರಮುಖ ಅಂಶವಾಗಿ ಕಾಣುತ್ತದೆ. ಇದಕ್ಕೆ ವಯೋಮಾನದ ಮಿತಿ ಇಲ್ಲ. ಇದರಲ್ಲಿ ಚಿಕ್ಕವರೆಲ್ಲ ಕೋಣರೆಲ್ಲ ಎಂಬಂತೆ ಕೆಲವೊಮ್ಮೆ ದೊಡ್ಡವರಿಗೆ ಬಿಡಿಸಲಾಗದ ಸಮಸ್ಯೆಗಳನ್ನು ಚಿಕ್ಕವರು ಬಿಡಿಸಿದ್ದೂ ಇದೆ. ಬುದ್ದಿವಂತರಿಗೆ ಅರಿವಾಗದ ಸಮಸ್ಯೆಗಳನ್ನು ಓದದವರು ಬಿಡಿಸಿದ್ದೂ ಇದೆ. ಇಲ್ಲಿ ಬುದ್ಧಿವಂತಿಕೆಯ ಜೊತೆಗೆ ನೀತಿಯೂ ಇದೆ. ಇಲ್ಲಿ ಪ್ರಾಮಾಣಿಕತೆಯಿದೆ. ಭಾಂಧವ್ಯವಿದೆ. ತಾಳ್ಮೆಯಿದ ಹೀಗೆ ಬದುಕಿಗೆ ಬೇಕಾದ ಹಾಗೂ ಬದುಕಬೇಕಾದ ರೀತಿಯಿದೆ. ಇಲ್ಲಿ ಕೇವಲ ಮನುಷ್ಯ ಪ್ರಪಂಚದ ಕಥೆಗಳು ಮಾತ್ರವಲ್ಲದೆ, ಪ್ರಾಣಿ ಪ್ರಪಂಚದ ಕಥೆಗಳು ಜೊತೆಗೆ ರಾಕ್ಷಸರು, ಪಿಶಾಚಿಗಳು ಇರುವಂತಹ ಕಾಲ್ಪನಿಕ ಕಥೆಗಳೂ ಇವೆ. ಆದರೆ, ಬುದ್ಧಿವಂತಿಕೆಯಿಂದ ಅಂತಹ ಸಂದರ್ಭಗಳನ್ನು ಜಯಿಸುವ ಉಪಾಯಗಳು ಪ್ರಮುಖವಾಗಿ ಕಾಣುತ್ತವೆ.


ಇಲ್ಲಿರುವ ಜನಪದ ಕಥೆಗಳೇ ಅಲ್ಪಸ್ವಲ್ಪ ಬದಲಾವಣೆಗಳೊಂದಿಗೆ ಬೇರೆ ರೀತಿಯಲ್ಲಿ ಹೇಳಲ್ಪಟ್ಟಿರುವುದನ್ನು ಕೇಳಿದ್ದೇನೆ ಹಾಗೂ ಓದಿದ್ದೇನೆ. ಈ ಕಥಾಸಂಕಲನದಲ್ಲಿ 34 ಜನಪದ ಕಥೆಗಳಿವೆ. ಮುಖಪುಟ ನೋಡಿದಾಗ ಇದು ಮಕ್ಕಳ ಕಥಾ ಸಂಕಲನ ಎಂದು ಭಾಸವಾದರೂ.. ಇಲ್ಲಿನ ಕಥೆಗಳು ಎಲ್ಲಾ ವಯೋಮಾನದವರಿಗೂ ಸೂಕ್ತವಾಗಿದೆ. ಭಾಷೆ ಸರಳವಾಗಿದೆ. ನನಗಿಷ್ಟವಾದ ಕೆಲವು ಕಥೆಗಳನ್ನು ವಿಶ್ಲೇಷಿಸುವ ಪ್ರಯತ್ನ ಮಾಡುತ್ತೇನೆ. 


ಚಿಟಿಕೆ ಚಪ್ಪರ :

ಇದು ಕರ್ನಾಟಕದ ಜನಪದ ಕಥೆ. ಮೊಮ್ಮಗನನ್ನು ಪಾರು ಮಾಡಲು ಅಜ್ಜಿಯೊಬ್ಬಳು ಕಾಳಿಕಾದೇವಿಗೆ ಹರಕೆ ಹೊತ್ತುಕೊಳ್ಳುತ್ತಾಳೆ. ಅದರ ಪ್ರಕಾರ ಕಾಳಿಕಾದೇವಿಯ ಗುಡಿಯ ಮುಂದೆ ಚಿಟಿಕೆ ಚಪ್ಪರ ಹಾಕಿಸಿ, ಎಂಟು ಕಾಲಿನ ಪ್ರಾಣಿಬಲಿ ಕೊಡುತ್ತೇನೆ ಎಂಬ ಹರಕೆ ಅದು. ಅಜ್ಜಿಯ ಬುದ್ಧಿವಂತಿಕೆಯಿಂದ ಹರಕೆ ನೆರವೇರುತ್ತದೆ. ಚಿಟಿಕೆ ಚಪ್ಪರ ಯಾವುದು ಹಾಗೂ ಎಂಟು ಕಾಲಿನ ಪ್ರಾಣಿಬಲಿ ಯಾವುದೆಂದು ಊಹಿಸಬಲ್ಲಿರಾ..?


ಚಿರತೆ ಬಾಲ ಹಿಡಿಯುವುದು :

ಇದು ಕೇರಳದ ಜನಪದ ಕಥೆ. ಮಲಯಾಳಂನಲ್ಲಿ ಬಾಲ ಹಿಡಿಯುವುದು ಎಂಬ ಮಾತಿನ ಪ್ರಯೋಗ ರೂಢಿಯಲ್ಲಿರುವುದರ ಹಿಂದೆ ಇರುವ ಕಥೆ ಇದು. ಅಷ್ಟಕ್ಕೂ ಚಿರತೆ ಬಾಲ ಹಿಡಿಯುವುದಾದರೂ ಏಕೆ ಓದಿ ನೋಡಿ. 


ಸುಖು ದುಃಖು :

ಇದು ಬಂಗಾಳಿ ಜನಪದ ಕಥೆ. ಹೆಸರಿಗೆ ತಕ್ಕಂತೆ ಇದ್ದುದರಲ್ಲಿ ಸುಖ ಪಡುವ ಹಾಗೂ ಪರೋಪಕಾರಿಯಾಗಿರುವ ಸುಖು ಹಾಗೂ ಸುಖುವನ್ನು ನೋಡಿ ಅವಳಂತೆಯೇ ಮಾಡಲು ಹೋಗಿ, ಅದಕ್ಕಿಂತ ಹೆಚ್ಚಿನದನ್ನು ಆಶಿಸಿ, ಪರೋಪಕಾರವನ್ನು ಮಾಡದೆ ಫಲ ಬಯಸಲು ಹೋಗಿ.. ದುರಾಸೆಯಿಂದ ದುಃಖಕ್ಕೆ ಸಿಲುಕುವ ದುಃಖು. ಇವರಿಬ್ಬರ ತಾಯಂದಿರು ಇವರನ್ನು ಬೆಳೆಸಿದ ಪರಿ ಮಕ್ಕಳನ್ನು ಹೇಗೆ ಬೆಳೆಸಿದರೆ ಅವರು ಹೇಗೆ ಬೆಳೆಯುತ್ತಾರೆ ಎಂಬ ನೀತಿಯನ್ನು ಹೇಳುತ್ತದೆ. ಅಲ್ಲದೆ, ಪರೋಪಕಾರಕ್ಕೆ ಆಶಿಸದೆಯೇ ಸಿಗುವ ಪ್ರತಿಫಲದ ಕಥೆ ಇದು. 


ಜಾಣತನ ಮಾರಾಟಕ್ಕಿದೆ :

ಗುಜರಾತಿ ಭಾಷೆಯ ಜನಪದ ಕಥೆ ಇದು. ವಿದ್ಯೆಯಿಂದ, ತನ್ನ ಜಾಣತನದಿಂದ.. ಒಂದು ವೃತ್ತಿ ಹಿಡಿದು ಸಂಪಾದಿಸುವ ದೃಶ್ಯ ಸಾಮಾನ್ಯವಾಗಿದ್ದರೂ.. ಇಲ್ಲಿ ಜಾಣತನವನ್ನೇ ಮಾರುವ ಅಂಗಡಿಯಲ್ಲಿಟ್ಟು ಸಲಹೆಗಳನ್ನು ನೀಡಿ ಜಾಣನಾದ ಹುಡುಗನೊಬ್ಬ ಮಂತ್ರಿ ಪಟ್ಟಕ್ಕೇರಿದ ಕಥೆ ಕಾಣುತ್ತದೆ. 


ಸಾವಿಗಂಜುವರೇ :

ಇದು ಗೋವಾ ಪ್ರಾಂತ್ಯದ ಜನಪದ ಕಥೆ. ಬೆಸ್ತರಿಗೆ ಸಮುದ್ರವೇ ಮನೆಯಂತೆ. ಎಷ್ಟೋ ಬಾರಿ ತಂದೆ ಸಮುದ್ರಕ್ಕೆ ಹೋಗಿ ಕಾಣೆಯಾದ ಅಥವಾ ಸತ್ತ ಮರುದಿನವೇ ಮಗ ಅದೇ ಕಡಲಿಗಿಳಿಯಬೇಕಾಗಿ ಬರುತ್ತದೆ. ಹಾಗೆಂದು, ಅವರು ಕರ್ತವ್ಯ ವಿಮುಖರಾಗಲು ಸಾಧ್ಯವಿಲ್ಲ. ಅದು ಮನೆಯಲ್ಲಿನ ಬಡತನದ ಕಾರಣಕ್ಕೂ ಆಗಿರಬಹುದು ಅಥವಾ ಅವರು ಸಾವನ್ನು ಸ್ವೀಕರಿಸುವ ರೀತಿಯೂ ಅದಾಗಿರಬಹುದು. ಆದರೆ, ಹೊರಗಿನವರಿಗೆ ಇದು ಪ್ರಶ್ನೆಯಂತೆ ಕಾಣಬಹುದು. ಹೀಗೆ ಜಮೀನ್ದಾರನ ಮಗನೊಬ್ಬ "ಸಮುದ್ರದಲ್ಲೇ ಸಾಯುತ್ತೇವೆ ಎಂದು ಬಲ್ಲಿರಾದರೂ.. ಮತ್ತೆ ಮತ್ತೆ ಕಡಲಿಗೆ ಹೋಗುತ್ತೀರಲ್ಲಾ..?" ಎಂದು ಕೇಳಿದ್ದಕ್ಕೆ ಆತನಿಗೆ ಸಿಕ್ಕ ಉತ್ತರವೇನು..?

ಇಲ್ಲಿನ ಉತ್ತರದಲ್ಲಿ ನಶ್ವರತೆಯ ಬದಲಾಗಿ ವಾಸ್ತವತೆಯ ಅರಿವಿದೆ.


ಕಾಲದ ಬೆಲೆ :

ಇದು ತಮಿಳುನಾಡಿನ ಜನಪದ ಕಥೆ. ಪಾಂಡ್ಯ ರಾಜ ಹಾಗೂ ಆತನ ಮಂತ್ರಿ ತೊಂಡೈಮಾನನನ್ನು ಚರ್ಚೆಯಲ್ಲಿ.. ಮಂತ್ರಿಯು "ಮನುಷ್ಯ ಎಷ್ಟೇ ಯತ್ನಿಸಿದರೂ.. ಕಾಲದ ಮಹತ್ವದಿಂದಷ್ಟೇ ಏಳಿಗೆ ಹೊಂದಬಲ್ಲ" ಎಂದು ಹೇಳಿದರೆ, ರಾಜ "ಒಬ್ಬ ಮನುಷ್ಯ ತನ್ನ ಸ್ವಂತ ಪ್ರಯತ್ನದಿಂದ ಏನು ಬೇಕಾದರೂ ಸಾಧಿಸಬಲ್ಲ, ಆತ್ಮಶಕ್ತಿಯಿಂದ ಸಾಧಿಸಲಾಗದ ಕೆಲಸ ಯಾವುದೂ ಇಲ್ಲ." ಎನ್ನುತ್ತಾನೆ. 

ತಮ್ಮ ತಮ್ಮ ಈ ವಾದಕ್ಕೆ ಅವರಿಗೆ ಅರಿವಿಲ್ಲದಂತೆ ಆ ರಾಜ್ಯದ ಇಬ್ಬರು ಪ್ರಜೆಗಳು ಪಾತ್ರಧಾರಿಗಳಾಗುತ್ತಾರೆ ಈ ವಾದದಲ್ಲಿ ಗೆದ್ದದ್ದು ಯಾರು ನೀವೇ ಓದಿ ನೋಡಿ. 


ಕುರುಬನ ಜಾಣತನ :

ಇದು ಮಧ್ಯಪ್ರದೇಶದ ಜನಪದ ಕಥೆ. ರಾಜ ತಾನೇನು ಆಲೋಚಿಸುತ್ತಿದ್ದೇನೆ ಎಂದು ಹೇಳುವಂತೆ ಮಂತ್ರಿಗೆ ಸವಾಲೆಸಿದಾಗ.. ಆತ ಚಿಂತಾಕ್ರಾಂತನಾಗಿರುವಾಗ ಆತನ ಮಗಳು ಕೊಟ್ಟ ಸಲಹೆಯಂತೆ ಕುರುಬನನ್ನು ರಾಜನ ಮುಂದೆ ತಂದು ನಿಲ್ಲಿಸುತ್ತಾನೆ. ಮಂತ್ರಿಗೆ ಪರಿಹರಿಸಲಾಗದ ಸಮಸ್ಯೆಯನ್ನು ಕುರುಬ ತನ್ನದೇ ರೀತಿಯಲ್ಲಿ ಬಿಡಿಸುತ್ತಾನೆ. ರಾಜನ ವ್ಯಾಖ್ಯಾನಕ್ಕೂ.. ಕುರುಬನ ವ್ಯಾಖ್ಯಾನಕ್ಕೂ.. ಅಜಗಜಾಂತರ ವ್ಯತ್ಯಾಸವಿದ್ದರೂ ಕುರುಬನ ಜಾಣತನ ವ್ಯಕ್ತವಾಗಿರುವ ಪರಿ ಇಷ್ಟವಾಗುತ್ತದೆ. 

ಸಮಸ್ಯೆಯ ನೋಟ ವಿಭಿನ್ನವಾದರೂ.. ಅದನ್ನು ಬಿಡಿಸುವ ಜಾಣ್ಮೆಯ ನೋಟವು ವಿಭಿನ್ನವಾಗಿ ಕಾಣುವ ಕತೆಯಿದು. 


ಜಗತ್ತು ದೈವಾಧೀನ :

ಇದು ಆಂಧ್ರದ ಜನಪದ ಕಥೆ. ಜಗತ್ತು ರಾಜಾಧೀನವೆಂದು ಒಬ್ಬ ಹೊಗಳಿದರೆ.. ಇನ್ನೊಬ್ಬ ಜಗತ್ತು ದೈವಾಧೀನವೆಂದು ಹೊಗಳುತ್ತಾನೆ. ಇದನ್ನು ಕೇಳಿಸಿಕೊಂಡ ರಾಜ ರಾಜಾಧೀನವೆಂದು ಹೊಗಳಿದವನಿಗೆ ಉಪಕಾರ ಮಾಡಲು ಮುಂದಾಗುತ್ತಾನೆ. ಆದರೆ, ದೈವದ ಚಿಂತನೆ ಏನಿತ್ತು..? ಇದರ ಪೂರ್ಣ ಪ್ರತಿಫಲ ಪಡೆದವರು ಯಾರು..? ಜಗತ್ತು ದೈವಾಧೀನವೋ ರಾಜಾಧೀನವೋ ನೀವೇ ನೋಡಿ. 


ಬ್ರಹ್ಮನ ಸೋಲು :

ಇದು ಗುಜರಾತಿ ಜನಪದ ಕಥೆ. ಆಗಷ್ಟೇ ಹುಟ್ಟಿದ ಮಕ್ಕಳಿಗೆ ಬ್ರಹ್ಮ ತನ್ನ ಲೇಖನಿಯಿಂದ ಹಣೆಬರಹವನ್ನು ಬರೆಯುತ್ತಾನೆ ಎಂಬ ನಂಬಿಕೆ ಇದೆ. ಅಂತಹ ಬ್ರಹ್ಮ ಬರಹವನ್ನು ತಿಳಿದ ಋಷಿಯ ಶಿಷ್ಯ.. ತನ್ನ ಗುರುಗಳ ಮಕ್ಕಳ ಕೆಟ್ಟದಾದ ಹಣೆಬರಹವನ್ನು ಅವರಿಗೆ ಅನುಕೂಲಕರವಾಗುವಂತೆ, ಬದಲಾಯಿಸಿ ಬ್ರಹ್ಮನನ್ನೇ ಸೋಲಿಸಿದ ಬುದ್ಧಿವಂತಿಕೆಯ ಕಥೆ ಇಲ್ಲಿದೆ. 


ಎಲ್ಲರೂ ಅಂಥವರಲ್ಲ :

ಇದು ಹಿಂದಿಯ ಜನಪದ ಕಥೆ. ಗುಣವತಿ ಎನ್ನುವ ರಾಜನ ಮಗಳು ಬೇಟೆಯಾಡಲು ಕಾಡಿಗೆ ಹೋಗಿದ್ದಾಗ ಅಲ್ಲಿ ಕಾಳ್ಗಿಚ್ಚು ಹಬ್ಬಿದಾಗ ಕಂಡ ದೃಶ್ಯ, ಆಕೆಗೆ ಗಂಡು ಜಾತಿಯ ಮೇಲೆ ಸಿಟ್ಟು ಬರುವಂತೆ ಮಾಡಿ ತಾನು ವಿವಾಹವಾಗಲಾರೆ ಎನ್ನುವ ನಿರ್ಧಾರ ತಳೆಯುವಂತೆ ಮಾಡಿತು. ಆದರೆ, ಅದು ಎಲ್ಲಿಯವರೆಗೆ..? ಅವಳ ಆ ನಿರ್ಧಾರ ಬುಡಮೇಲಾಗುವಂತೆ ಬದಲಾದ ಪ್ರಸಂಗವಾದರೂ ಏನು..? ಇಲ್ಲಿ ಗಂಡು ಅಥವಾ ಹೆಣ್ಣಿನ ದ್ವೇಷವಲ್ಲ. ಬದಲಾಗಿ ಅವರು ಆ ಸಂದರ್ಭದಲ್ಲಿ ನಡೆದುಕೊಳ್ಳುವ ರೀತಿಯ ಚಿತ್ರಣವಿದೆ. ಎಲ್ಲರೂ ಒಳ್ಳೆಯವರಲ್ಲ. ಹಾಗೆಯೇ ಎಲ್ಲರೂ ಕೆಟ್ಟವರಲ್ಲ ಎನ್ನುವ ಸಂದೇಶ ಕಾಣುತ್ತದೆ. 


ಇಂತಹ ಹಲವಾರು ಚಂದದ ಹಾಗೂ ನೀತಿಯುಕ್ತ ಜನಪದ ಕಥೆಗಳು ಇಲ್ಲಿವೆ. ಇದರ ಸವಿಯನ್ನು ನೀವೇ ಓದಿ ನೋಡಿ.


~ವಿಭಾ ವಿಶ್ವನಾಥ್

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ