ಪುಸ್ತಕದ ಶೀರ್ಷಿಕೆ : ನೀಲಿಮಾ ತೀರ
ಲೇಖಕರು : ಶಾಂತದೇವಿ ಕಣವಿ
ಪ್ರಕಾಶಕರು : ಸ್ನೇಹ ಪ್ರಕಾಶನ
ಪ್ರಥಮ ಮುದ್ರಣ : 1992
ಪುಟಗಳು : 122
ಇದು ಶಾಂತದೇವಿ ಕಣವಿ ಅವರ ಆರನೇ ಕಥಾಸಂಕಲನ. ಇದರಲ್ಲಿ ಒಟ್ಟು 12 ಕಥೆಗಳಿವೆ. ಇಲ್ಲಿ ಪ್ರಕಟವಾಗಿರುವ ಕೆಲ ಕತೆಗಳು ಸುಧಾ, ತರಂಗ ಹಾಗೂ ಪ್ರಜಾವಾಣಿ, ಉದಯವಾಣಿ ವಿಶೇಷಾಂಕಗಳಲ್ಲಿ ಪ್ರಕಟವಾಗಿವೆ.
ಒಂದು ಮೂಗುತಿಯ ಕಥೆ : ಅಶಿಕ್ಷಿತೆಯಾಗಿದ್ದರೂ ಸುಂದರ ಮನಸ್ಸಿನ ಮಾನವ್ವ, ಬೇರೆ ಗಂಡಸರ ಮುಂದೆ ಮುಖ ಎತ್ತದೆ ಮೈತುಂಬ ಸೆರಗು ಹೊದ್ದು, ತಲೆ ತಗ್ಗಿಸಿ ನೆಲ ನೋಡುತ್ತಾ ಬದಿಗೆ ಸರಿದು ನಿಲ್ಲುವ ಹೆಂಗಸು. ಆದರೆ, ಅಂದು ಕಿವಿಯಿಂದ ಕೇಳಬಾರದ, ಬಾಯಿಂದ ಬರಬಾರದ ಬೈಗುಳಗಳನ್ನೆಲ್ಲ ಸುರಿಸುತ್ತಿದ್ದಳು. ಅದಕ್ಕೆ ಕಾರಣ ಕುಡುಕ ಗಂಡ ನಿಂಗಪ್ಪ ತನ್ನ ಮೂಗುತಿಯನ್ನು ಕದ್ದೊಯ್ದದ್ದು . ಜೋಳದ ಕಾಳಿನಷ್ಟು ದೊಡ್ಡ ಬಂಗಾರದ ಮೂಗುತಿಯದು. ಮಗಳ ಮದುವೆಗೆ ಆ ಮೂಗುತಿಯನ್ನು ಅವಳಿಗೆ ನೀಡುತ್ತೇನೆಂದು ಇಟ್ಟುಕೊಂಡಿದ್ದ ಹೋಗುತಿ ಕಳುವಾಗಿತ್ತು. ಅದನ್ನು ಆತ ಗೆಳತಿ ಮಲ್ಲಿಗೆ ಕೊಟ್ಟಿದ್ದಾನೆಂದು ಹೋಗಿ ಅವಳ ಬಳಿ ಸಿಗದೇ ದೊಡ್ಡ ರಾದ್ದಾಂತವೇ ಆಗಿತ್ತು. ಮುಂದೆ, ಆ ಮಲ್ಲಿ ಹಾಗೂ ತನ್ನ ಗಂಡನ ಗಂಡು ಮಗುವನ್ನು ಮಾನವ್ವ ಸಾಕುವ ಪರಿಸ್ಥಿತಿ ಎದುರಾದಾಗ ಆಕೆ ಮಗುವನ್ನು ಸಾಕಲು ಒಪ್ಪಿದಳೇ ಓದಿ ನೋಡಿ.
ಎರಡು ಧ್ರುವಗಳೇ: ಪ್ರಕಾಶಕನಿಂದ ಮುಂಗಡ ಹಣ ತೆಗೆದುಕೊಂಡು ಅಂತೂ ಇಂತೂ ಕಾದಂಬರಿ ಬರೆಯುವಷ್ಟರಲ್ಲಿ ಹಣ ಖರ್ಚಾಗಿತ್ತು. ಈಗ ಅವನ ಗತ ಜೀವನದ ನೆನಪಾಗುತ್ತಿತ್ತು. ಮೊದಲ ಪತ್ನಿ ಸುಪ್ರಿಯಾ ಈಗ ಕಿರಣ ಮನೋಹರ ಆಗಿದ್ದಳು. ಅವಳು ಎಂದು ಗೊತ್ತಿಲ್ಲದೆಯೇ ಆಕೆಯ ಸಂಗೀತ ಕಚೇರಿಗೆ ಹೋಗಿದ್ದ. ಈಗಿನ ಸುಪ್ರಿಯಾಳಿಗೂ ಅಂದಿಗೂ ಇದ್ದ ವ್ಯತ್ಯಾಸಗಳು ಆತನಿಗೆ ಕಂಡದ್ದು ಹೇಗೆ ಓದಿ ನೋಡಿ.
ಮತ್ತದೇ ರಾಗ : ಮಧುಮತಿಗೆ ಅಮ್ಮನಂತೆಯೇ ಸಂಗೀತವೆಂದರೆ ಹುಚ್ಚು. ಬೆಳಿಗ್ಗೆ, ಸಂಜೆ ಶ್ರದ್ದೆಯಿಂದ ತನ್ಮಯಳಾಗಿ ಹಾಡುವಾಗ ಇಂದಿರಾಳಿಗೆ ನಾಳೆ ಮದುವೆಯಾದ ಮೇಲೆ ಅವಳ ಗಂಡನಿಗೂ ಸಂಗೀತದ ಬಗ್ಗೆ ಒಲವಿರಬೇಕು, ಇಲ್ಲವಾದರೆ ತನ್ನಂತೆಯೇ ಇತಿಹಾಸದ ಪುನರಾವರ್ತನೆಯಾಗುತ್ತದೆ ಎನ್ನುವ ಭಯ. ಅಷ್ಟಕ್ಕೂ ಇಂದಿರಾ ಬದುಕಿನಲ್ಲಿ ಆಗಿದ್ದೇನು..? ಮಧುಮತಿಯ ಭವಿಷ್ಯ ಹೇಗಿತ್ತು..?
ಹರಕೆ : ಪಾರವ್ವ ತನ್ನ ಮಗ ಈರಪ್ಪನಿಗೆ ದೇವರಿಗೆ ಮೀಸಲು ತುಪ್ಪ ಕೊಟ್ಟು ಬರಲು ಹೇಳಿದಾಗ ಅವನು ಸುಡು ಬಿಸಿಲಿನಲ್ಲಿ ಅಷ್ಟು ದೂರ ನಡೆಯಲಾಗುವುದಿಲ್ಲವೆಂದೂ.. "ಕಲ್ಲು ದೇವರು ತಿನ್ನುತ್ತಾನೇನೂ, ಉಣತಾನೇನೂ..? ನಮಗೆ ನೀಡಿದರೆ ನಾವೇ ಉಂಡೆವೂ ಆ ಮೀಸಲು ತುಪ್ಪ" ಎನ್ನುವಂತಹ ಮಾತನಾಡಿದಾಗ ತನ್ನ ಗಂಡನೂ ಭಯ-ಭಕ್ತಿಯಿಲ್ಲದೆ, ದೇವರಿಗೆ ನಡೆದುಕೊಳ್ಳದೆ ಸತ್ತದ್ದು ನೆನಪಾಯಿತು. ಪಾರವ್ವ ತಾನೇ ದೇವರಿಗೆ ಒಯ್ಯುವ ತುಪ್ಪ ತೆಗೆದುಕೊಂಡು, ಆತನಿಗೆ ಬಾಡಿಗೆ ಸೈಕಲ್ ಕೊಡಿಸಿ ಹಾಲು ಕೊಡುವ ಮನೆಗೆ ಹಾಲು ಕೊಟ್ಟು ಬರಲು ಹೇಳಿ ಹೊರಟವಳಿಗೆ ಬಂದಾಗ ಕಾಯುತ್ತಿದ್ದ ಸುದ್ದಿ ಏನು..?
ನೀಲಿಮಾ ತೀರ : ಮಳೆಗಾಲದಲ್ಲಿ ಬೋರ್ಗರೆಯುವ ಕಡಲು ಹಾಗೂ ಅದನ್ನು ಮೀರಿಸುವಂತೆ ಬರುತ್ತಿದ್ದ ಮುಗಿಲ ಶಬ್ದದಲ್ಲಿಯೂ ಅಪ್ಪನನ್ನು ಕಾಯುತ್ತಿದ್ದಳು ಬೇಬಿ. ಅವಳ ಹೆಸರು ನೀಲಿಮಾ. ನೀಲಿ ಕಡಲು, ನೀಲಿ ಮುಗಿಲು ನೋಡುತ್ತಾ ಬೆಳೆದಿದ್ದವಳು. ನೀಲಿ ಬಣ್ಣದ ಅಂಗಿಯೇ ಬೇಕಿತ್ತವಳಿಗೆ. ಬೇರೆ ಬಣ್ಣದ ಅಂಗಿ ಎಂದರೆ ಒಪ್ಪುತ್ತಿರಲಿಲ್ಲ. ಹೀಗಿದ್ದ ಸಂದರ್ಭದಲ್ಲಿ ಭೂಕಂಪವಾಗುತ್ತಿದೆಯೇನೋ ಎನ್ನುವ ಶಬ್ದ ಕೇಳಿದಾಗ ಟ್ರೈನ್ ಡಬ್ಬಿಗಳು ಕಡಲಿಗೆ ಬೀಳುತ್ತಿದ್ದವು. ಆ ಸಂದರ್ಭದಲ್ಲಿ ಲೀನಾ ಮತ್ತು ಜೋಸೆಫರಿಂದ ಬೇಬಿ ದೂರಾಗಿದ್ದಳು. ನೀಲಿಮಾ ಹೋಗಿದ್ದಾದರೂ ಎಲ್ಲಿಗೆ..? ಟ್ರೈನ್ ಅಪಘಾತವಾಗಿ ಒಂದು ವರ್ಷ ಕಳೆದ ಮೇಲೆ ಅದೇ ದಿನ ಗೋಪಿ ಬೇಬಿಯನ್ನು ಹುಡುಕುತ್ತಾ ಬಂದ. ಅವನಿಗೆ ಸಿಕ್ಕ ಸಮಾಚಾರವೇನು..? ಓದಿ ನೋಡಿ.
ಅಂತ್ಯ ಸಂಸ್ಕಾರ : ಅನಾಥ ಮಕ್ಕಳಿಗೆ ಹೊಟ್ಟೆ ತುಂಬಾ ಊಟ ಹಾಕಲು ಹೇಳಿ ತನಗೆ ಬೇರಾವ ಪೂಜೆ ಪುನಸ್ಕಾರ, ತಿಥಿ, ಗಣರಾಧನೆಯೂ ಬೇಡ ಎಂದು ಹೇಳಿದ ಅಮ್ಮನ ಮಾತಿನಂತೆಯೇ ಮಾಡುತ್ತಿದ್ದರು.
"ಹೊಟ್ಟೆ ತುಂಬಿದವರಿಗೆ ಹಾಕುವುದಕ್ಕಿಂತ ಹಸಿದವರಿಗೆ ಉಣಿಸುವುದು ಒಳ್ಳೆಯದು. ಅದು ಶ್ರೀಮಂತಿಕೆಯ ಅಹಂಕಾರದಿಂದ ಅಲ್ಲ, ಮಾನವ ಧರ್ಮ ಅಂತ ನಾನು ತಿಳಿದುಕೊಂಡಿದ್ದೇನೆ" ಎಂದು ವಿಲ್ ಅನ್ನು ಮಾಡಿ ಇಟ್ಟಿದ್ದ ಸರಸ್ವತಿಯ ಮನಸ್ಸಿನಲ್ಲಿ ತನ್ನ ಅಂತ್ಯಸಂಸ್ಕಾರ ಹೀಗೆಯೇ ಆಗಬೇಕು ಎಂಬ ಯೋಚನೆ ಬಂದ ಹಿನ್ನೆಲೆ ಹಾಗೂ ಅವರ ಆಸೆಯಂತೆ ನಡೆಯಲು ಹೋದಾಗ ಉಂಟಾದ ಸಮಸ್ಯೆ, ಎಲ್ಲವನ್ನೂ ಮೀರಿ ಆಕೆಯ ಅಂತ್ಯ ಸಂಸ್ಕಾರ ನಡೆಯುತ್ತಿದ್ದದ್ದು ಹೇಗೆ ಓದಿ ನೋಡಿ.
ಚಿತ್ರ : ಒಂದು ದಿನ ಸ್ನಾನ ಮಾಡಿ ಹೊರಗೆ ಬರುತ್ತಿದ್ದಳು ಹಾಗೆಯೇ ಪ್ರಜ್ಞೆ ತಪ್ಪಿ ಬಿದ್ದು ಬಿಟ್ಟಿದ್ದಳು. ಬಲಗಡೆಯ ಸ್ವಾಧೀನ ತಪ್ಪಿತ್ತು. ಹೀಗೆ ಅರ್ಧಾಂಗಿಯಾದವಳನ್ನು ನೋಡಿಕೊಳ್ಳಲು ಮಗಳು ಅನುರಾಧಾ ಬಂದಿದ್ದಳು. ಮೀನಾಕ್ಷಮ್ಮನವರು ಹೀಗೆ ಮಲಗಿದ್ದ ಸಂದರ್ಭದಲ್ಲಿ ಅನುರಾಧಾ ಹತ್ತಿರವಿದ್ದಷ್ಟು ದಿನ ತಾಯಿಯ ಮಡಿಲಿನಲ್ಲಿ ಮಲಗಿದಂತೆ ನಿಶ್ಚಿಂತಳಾಗಿದ್ದವಳಿಗೆ ಆಕೆಯು ತನ್ನ ಸಂಸಾರವೆಂದು ತಿರುಗಿ ಹೋದಾಗ ಮಗ-ಸೊಸೆಯಿಂದ ಉಪಚಾರ ದೊರೆತದ್ದು ಹೇಗೆ..? ಚೇತರಿಸಿಕೊಂಡಳೆಂದುಕೊಂಡ ಮೀನಾಕ್ಷಿ ಕಣ್ಮುಚ್ಚಿದಾಗ ಕುಂಚವನ್ನು ಕೈಗೆತ್ತಿಕೊಂಡು ಸದಾನಂದ ತನ್ನ ಭಾರವನ್ನು ಕಡಿಮೆ ಮಾಡಿಕೊಂಡನೇ ..?
ನಂಬಿಕೆ : ದೀಪಾಳ ಮನೆಯ ಕೆಲಸಕ್ಕೆ ಬರುತ್ತಿದ್ದ ಪಾರವ್ವನ ಮಗಳು ನಾಗೂಗೆ ಆಕೆ ಹಾಗೂ ವಿಶ್ವಾಸನ ಪ್ರೀತಿಯ ವಿಷಯ ತಿಳಿದಿತ್ತು. ವಿಶ್ವಾಸನದ್ದು ಬೇರೆ ಜಾತಿ, ಹೀಗಾಗಿ ಪ್ರೀತಿ ವಿಚಾರದಲ್ಲಿ ಗುಟ್ಟು ಕಾಪಾಡಬೇಕಿತ್ತು. ನಾಗೂ ದೀಪಾಳಿಗಿಂತ ಎರಡು ವರ್ಷ ಚಿಕ್ಕವಳಾದರೂ ಬುದ್ಧಿವಂತೆ. ದೀಪಾಳಿಗೆ ಈ ಕುರಿತಾಗಿ ಧೈರ್ಯ ತುಂಬುತ್ತಿದ್ದಳು. ಹೀಗಿದ್ದ ಒಂದು ದಿನ ಬಂಗಾರದ ರಿಂಗು ನಾಗುವಿನ ಬುಟ್ಟಿಯಲ್ಲಿ ಸಿಕ್ಕಾಗ ಅಂದೇ ಅವಳಿಗೆ ಆ ಮನೆಯ ಕೆಲಸ ಕೊನೆಯಾಗಿತ್ತು. ಪಾರವ್ವನನ್ನು ಕರೆದು ಲೆಕ್ಕ ಚುಕ್ತಾ ಮಾಡಿ ಆಚೆ ಕಳುಹಿಸಿದ್ದರು. ಮುಂದೆ ಪಾರವ್ವ ಹಾಗೂ ದೀಪಾಳ ಭೇಟಿಯಾದದ್ದು ಆಸ್ಪತ್ರೆಯಲ್ಲಿ.. ಅದು ದೀಪಾಳ ಮಗು ಹೆರಿಗೆಯಲ್ಲಿ ಹೋಗಿದ್ದ ಸಂದರ್ಭದಲ್ಲಿ, ಆಗ ದೀಪಾ ಕ್ಷಮೆ ಕೇಳಿದ್ದೇಕೆ ಓದಿ ನೋಡಿ.
ಲೆಕ್ಕ ಸರಿಹೋಯಿತು : ಪದ್ಮಾ ಎಂದಿಗೂ ಕಚೇರಿಯಲ್ಲಿ ಮತ್ತೊಬ್ಬರಂತೆ ಲಂಚ ತೆಗೆದುಕೊಂಡು ಕೆಲಸ ಮಾಡಿದವಳಲ್ಲ. ಹೀಗಿದ್ದ ಪದ್ಮಾಳೂ ಒಂದು ದಿನ ಮ್ಯಾನೇಜರ್ ನಿಂದ ಒಂದು ಲಕೋಟೆ ಪಡೆದುಕೊಂಡಳು. ಆದರೆ, ಅಷ್ಟೂ ದಿನ ಕಷ್ಟಪಟ್ಟು ಕೆಲಸ ಮಾಡಿದ್ದಕ್ಕೂ.. ಅಂದು ಆಸೆ ಬಿದ್ದು ಹಣ ಪಡೆದದ್ದಕ್ಕೂ ಅವಳ ಮನಸ್ಸಿನ ಮಾತುಗಳು ಹಾಗೂ ಮನೆಯ ಪರಿಸ್ಥಿತಿ ಏನಿತ್ತು..? ಇದರ ಪರಿಣಾಮ ಏನಾಯ್ತು..? ಲೆಕ್ಕ ಸರಿ ಹೋದದ್ದು ಹೇಗೆ ಓದಿ ನೋಡಿ.
ಗುಳದಾಳಿ : "ಕೋಣೆಯಲ್ಲಿ ಇದ್ದ ದೀಪವನ್ನು ಆರಿಸಿ ನಕ್ಷತ್ರಗಳ ಮಿಂಚು, ದೀಪಗಳ ಬೆಳಕು, ಹೂಗಳ ಅಂದ, ಕನಸುಗಳನ್ನೇ ಹಾಸಿ ಹೊದ್ದುಕೊಂಡು ಗಟ್ಟಿಯಾಗಿ ಮುಸುಕು ಬಿಗಿದು ಇನ್ನೂ ಕತ್ತಲಾದಳು ರೋಜಿ."
ಹೀಗೆ ಕತ್ತಲ ಸಾಮ್ರಾಜ್ಯಕ್ಕೆ ರೋಜಿ ಬರಲು ಅವಳ ಬದುಕಿನ ಹಿಂದಿನ ಕಥೆಯೇ ಕಾರಣ. ಅಂದು ಯಾರು ತನ್ನ ಬಳಿ ಬರಬಾರದೆಂದು ಹೇಳಿದ್ದರೂ.. ಬಡಿದ ಬಾಗಿಲಿನಾಚೆ ಇದ್ದ ಮನುಷ್ಯನನ್ನು ಚಿತ್ತ ಚಂಚಲತೆಯಿಂದ ಕರೆಸಿಕೊಂಡಳು. ಆದರೆ, ಬಂದಿದ್ದಾತ ಆಕೆಗೆ ತೀರ ಆಪ್ತನಾಗಿದ್ದ. ಮರುದಿನವೂ ಆತ ಬಂದಾಗ ತೆರೆದುಕೊಂಡ ಅವಳ ಗುಳದಾಳಿಯ ಕಥೆ ಇಲ್ಲಿದೆ.
ದೇವಿ : ಪಾರಕ್ಕ ಹಾಸಿಗೆ ಹಿಡಿದಾಗ ಕೈಕಾಲು ಬಾತುಕೊಂಡಿದ್ದ ಸಂದರ್ಭದಲ್ಲಿ ಮಣ್ಣೂರಿನ ತುಂಬಾ ವಿಚಿತ್ರವಾದ ಸುದ್ದಿ ಚಿತ್ರ-ವಿಚಿತ್ರ ರೂಪ ತಡೆದು ಸುಳಿದಾಡಿತ್ತು. ಪಾರವ್ವ ಸಾಹಿತಿ-ಕಲಾವಿದೆಯಲ್ಲ, ಮಂತ್ರಿ-ಶಾಸಕಳೂ ಅಲ್ಲ. ಮೂರು ಮಕ್ಕಳ ವಿಧವೆ. ಪಾರ ವ್ವನ್ನ ಈ ಪರಿಸ್ಥಿತಿಗೆ ಮಣ್ಣೂರಿನಲ್ಲಿ ಹಲವರು ತಳಮಳಿಸಿದರು. ಆಕೆಯ ಮೈದುನ ಫಕೀರಪ್ಪ ಮಾತ್ರ ಆಕೆಯ ಮೇಲೆ ಸಿಡಿಮಿಡಿಗೊಂಡಿದ್ದ. ಆಕೆಯ ಸಾವನ್ನೇ ಬಯಸುತ್ತಿದ್ದ. ಊರಿನ ದೃಷ್ಟಿಯಲ್ಲಿ ದೇವಿಯಾದ ಪಾರವ್ವನ ಜಡ್ಡು ಕಳೆಯಿತೇ.. ದೇವಿ ಏನಾದಳು..?
ಹರಿದ ಚೂರು ಹೊಂದಿಸಿ.... : ಗೆಳೆಯ ಕಾಶಿನಾಥ ತನಗೆ ಹಣ ಕೊಟ್ಟಿರಲಿಲ್ಲವೆಂದು ಆತನ ಸ್ನೇಹದ ಕುರಿತು ತಪ್ಪು ತಿಳಿದುಕೊಂಡಿದ್ದವನಿಗೆ ದಿನೇಶ ನಿಜ ವಿಷಯ ಹೇಳಿದ್ದ. ಆದರೆ, ಒಂದು ಸಾವಿರ ರೂಪಾಯಿಗೆ ಕಳೆದುಕೊಂಡ ಸ್ನೇಹಿತನನ್ನು ಈಗ ಮತ್ತೆ ಪಡೆಯುವಂತಿರಲಿಲ್ಲ. ಆತ ಸಾಯುವಾಗ ತನ್ನ ಕುರಿತು ಏನೆಲ್ಲಾ ಯೋಚಿಸಿರಬಹುದು ಎನ್ನುತ್ತಾ ಆಲೋಚನೆಯಲ್ಲಿದ್ದ ಒಂದು ಪ್ರಸಂಗ ಇಲ್ಲಿದ್ದರೆ.. ಮತ್ತೊಂದು, ಇಂತಹದ್ದೇ ಸ್ನೇಹ ತಪ್ಪು ತಿಳುವಳಿಕೆಯಿಂದ ನರಳುವಂತಾಗಿತ್ತು. ಅಂತಹ ಸ್ನೇಹ ಚಂದ್ರಶೇಖರನಿಗೆ ತೆಗೆದುಕೊಂಡದ್ದು ಹೇಗೆ..?
ಇಲ್ಲಿ ಎಲ್ಲಾ ರೀತಿಯ ಕಥೆಗಳಿವೆ. ಹೆಚ್ಚಾಗಿ ಮಾನವೀಯತೆಯ ಮಿಡಿತಗಳು ಜೊತೆಗೆ ಭಾವನೆಗಳ ಕಂಪನಗಳು ಸೇರಿ ಹೊಸ ರೀತಿಯ ತಲ್ಲಣವನ್ನೇ ಹುಟ್ಟಿ ಹಾಕುವ ಕಥೆಗಳನ್ನು ಉಣಬಡಿಸುತ್ತದೆ ಈ ಕಥಾಸಂಕಲನ.
~ವಿಭಾ ವಿಶ್ವನಾಥ್
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ