ಭಾನುವಾರ, ಏಪ್ರಿಲ್ 26, 2026

ಚೈತನ್ಯದ ಪೂಜೆ


ದ.ರಾ. ಬೇಂದ್ರೆಯವರ ನಾಕುತಂತಿ ಸಂಕಲನದಿಂದ ಆಯ್ದ ಕಾವ್ಯದ ಶೀರ್ಷಿಕೆ : ಚೈತನ್ಯದ ಪೂಜೆ


ಚೈತನ್ಯದ ಪೂಜೆ ನಡೆದದ 

ನೋಡ ತಂಗಿ || ಅಭಂಗದ ಭಂಗೀ ||


ಸೌಜನ್ಯ ಎಂಬುದು ಮೊದಲನೆ ಹೂವು

ಅರಳೋಣ ನಾವೂ ನೀವೂ

ಸಾಮರ್ಥ್ಯ ಎಂಬುದು ಬೆಲಪತ್ರಿ 

ಶಿವನಗರ್ಪಿತ ಇರಲಿ ಖಾತ್ರಿ


ಸತ್ಯ ಎಂಬುವ ನಿತ್ಯದ ದೀಪ

ಸುತ್ತೆಲ್ಲಾ ಅವನದೇ ರೂಪ 

ಪ್ರೀತಿ ಎಂಬುವ ನೈವೇದ್ಯ

ಇದು ಎಲ್ಲರ ಹೃದಯದ ಸಂವೇದ್ಯ


ಸೌಂದರ್ಯ ಧ್ಯಾನಾ ಎದೆಯಲ್ಲಿ

ಅಸ್ಪರ್ಶಾ ಚಿನ್ಮಯದಲ್ಲಿ

ಆನಂದಗೀತ ಸಾಮವೇದಾ

ಸರಿಗಮ ನಾದಾ


'ಉದ್ಭವ' 'ಉದ್ಭವ' ಹೇ ಮಂಗಲ ಮೂರ್ತಿ

ಅಲಲಾ ! ಅಹಹಾ ! ಅಮಮಾ !

ಆತ್ಮಾ ಪರಮಾತ್ಮಾ ಅಂತರಾತ್ಮಾ

ಘನವೋ ಘನ ! ನಿಮ್ಮ ಮಹಿಮಾ !


ಇದರ ವಿಶೇಷವೆಂದರೆ ಬೇಂದ್ರೆಯವರು ತಮ್ಮ ಪ್ರಥಮ ಮೊಮ್ಮಗ ಚಿ. ಪ್ರಭಾಕರನ ಧ್ಯಾನಕ್ಕಾಗಿ ರಚಿಸಿದ ಸಾಧನಾಗೀತೆ ಇದು.


ಮಾನವೀಯ ಮೌಲ್ಯಗಳಾದ ಸೌಜನ್ಯ, ಸತ್ಯ ಮತ್ತು ಪ್ರೀತಿಯನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವುದೇ ನಿಜವಾದ 'ಚೈತನ್ಯದ ಪೂಜೆ' ಎಂದು ಬೇಂದ್ರೆಯವರು ಹೇಳುತ್ತಾರೆ. 


ದೇವರಿಗೆ ಮಾಡುವ ಆರಾಧನೆಯಲ್ಲಿ ದೀಪ - ಧೂಪ, ಹೂವು, ಹಣ್ಣು, ನೈವೇದ್ಯ, ಶಿವನಿಗೆ ಪ್ರಿಯವಾದ ಬಿಲ್ವಪತ್ರೆ ಹೀಗೆ ಬಗೆಬಗೆಯ ಧ್ಯಾನ ಇವೆಲ್ಲವೂ ಸೇರಿರುವ ಹಾಗೆ ನಮ್ಮ ನಮ್ಮಲ್ಲಿಯೇ ಇರುವ ಕೆಲವು ಉತ್ತಮ ಗುಣಗಳನ್ನು ಅವುಗಳಿಗೆ ಹೋಲಿಕೆ ಮಾಡುತ್ತಾರೆ. ಇಂತಹ ಚೈತನ್ಯದ ಪೂಜೆ ನಿರಂತರವಾದುದು ಎಂದು ಹೇಳುತ್ತಾರೆ. 


ಸೌಜನ್ಯ ಪೂಜೆಗೆ ಅರ್ಪಿಸುವ ಮೊದಲ ಹೂವು. ನಾವು ಇತರರೊಂದಿಗೆ ಗೌರವ ಮತ್ತು ಮೃದುತ್ವದಿಂದ ವರ್ತಿಸುವುದೇ ದೇವರಿಗೆ ಅರ್ಪಿಸುವ ಶ್ರೇಷ್ಠ ಪುಷ್ಪ. ಸೌಜನ್ಯ ಇತರರನ್ನೂ ಅರಳಿಸುತ್ತದೆ.. ಅಂತೆಯೇ ನಮ್ಮನ್ನೂ..


ನಮ್ಮಲ್ಲಿರುವ ಶಕ್ತಿ- ಸಾಮರ್ಥ್ಯ ಶಿವನಿಗೆ ಸಲ್ಲಿಸುವ ಬಿಲ್ವಪತ್ರೆ ಇದ್ದಂತೆ. ನಮ್ಮ ಸಾಮರ್ಥ್ಯನ್ನು ಅಹಂಕಾರಕ್ಕಾಗಿ ಬಳಸದೆ, ವ್ಯರ್ಥವಾಗಿಸದೆ ಭಗವಂತನಿಗೆ ಅರ್ಪಿಸುವುದೊಳಿತು.


​ಸತ್ಯ ಎಂದಿಗೂ ಆರಿಹೋಗದ ದೀಪ. ಸತ್ಯದ ಹಾದಿಯಲ್ಲಿ ನಡೆಯುವುದೇ ಭಗವಂತನ ಬೆಳಕಿನಲ್ಲಿ ಬದುಕುವುದು. ಆಗ ನಮ್ಮ ಸುತ್ತಲೂ ಭಗವಂತನೇ ಆವರಿಸಿರುತ್ತಾನೆ. ಭಗವಂತನಿಗೆ ನೀಡುವ ನೈವೇದ್ಯವೆಂದರೆ ಶುದ್ಧವಾದ ಪ್ರೀತಿ. ಈ ನೈವೇದ್ಯ ಪ್ರತಿಯೊಬ್ಬರ ಹೃದಯಕ್ಕೂ ತಲುಪುವ ಗುಣವುಳ್ಳದ್ದು.


ಪ್ರಕೃತಿಯಲ್ಲಿರುವ ಮತ್ತು ಮನಸ್ಸಿನಲ್ಲಿರುವ ಸೌಂದರ್ಯದ ಕಡೆಗೆ ಗಮನ ಹರಿಸುವುದೇ ಚೆಂದದ ಧ್ಯಾನ. ಭಗವಂತನನ್ನು ಕುರಿತಾದ ಗೀತೆಗಳು ವೇದಗಳ ಸಮಾನವಾದ ಸರಿಗಮಗಳ ನಾದ. ಇವು ಮನಸ್ಸಿಗೆ ಬಹಳ ಆನಂದವನ್ನು ನೀಡುತ್ತವೆ.


'ಮಂಗಲ ಮೂರ್ತಿ' ಭಗವಂತನ ವ್ಯಾಪ್ತಿಯನ್ನು ಕೊಂಡಾಡುತ್ತಾರೆ. ​ನಮ್ಮ ಒಳಗಿರುವ 'ಆತ್ಮ', ವಿಶ್ವದ 'ಪರಮಾತ್ಮ' ಮತ್ತು ಎಲ್ಲವನ್ನೂ ಬೆಸೆಯುವ 'ಅಂತರಾತ್ಮ' ಒಂದೇ ಆಗಿವೆ ಎನ್ನುತ್ತಾರೆ.

​'ಘನವೋ ಘನ' ಎನ್ನುತ್ತಾ ಭಗವಂತನ ಮಹಿಮೆ ಊಹೆಗೂ ನಿಲುಕದಷ್ಟು ದೊಡ್ಡದು ಮತ್ತು ಅದ್ಭುತವಾದುದು ಎಂಬ ಧನ್ಯತೆಯನ್ನು ತೋರುತ್ತಾರೆ.


ಚೈತನ್ಯ ಪೂಜೆಯ ಅಭಂಗ (ನಿರಂತರತೆ) ವನ್ನು  ಬೇಂದ್ರೆಯವರು ಹೇಳಿದ ಪರಿ ನನಗೆ ದಕ್ಕಿದ್ದು ಹೀಗೆ.

~ವಿಭಾ ವಿಶ್ವನಾಥ್

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ