ಭಾನುವಾರ, ಏಪ್ರಿಲ್ 26, 2026

ಕಾಲ ಹೊರಳಿನ ಚಹರೆ (ಪುಸ್ತಕ ಯಾನ - 418)


ಪುಸ್ತಕದ ಶೀರ್ಷಿಕೆ : ಕಾಲ ಹೊರಳಿನ ಚಹರೆ

ಲೇಖಕರು : ಉಷಾ ನರಸಿಂಹನ್

ಪ್ರಕಾಶಕರು : ವೀರಲೋಕ ಬುಕ್ಸ್

ಪ್ರಥಮ ಮುದ್ರಣ : ನವೆಂಬರ್ 2025 

ಪುಟಗಳು : 144

ಬೆಲೆ : 180 ರೂ.


ಉಷಾ ನರಸಿಂಹನ್ ಅವರ ಈ ಕಥಾ ಸಂಕಲನದಲ್ಲಿ 13 ಕಥೆಗಳಿವೆ. 


ಎನ್. ಸಂಧ್ಯಾರಾಣಿಯವರು ಬರೆದಿರುವ ಮುನ್ನುಡಿಯಲ್ಲಿ ಒಂದು ಮಾತನ್ನು ಉಲ್ಲೇಖಿಸುತ್ತಾರೆ. ಅದು ಕಾರ್ಲ್ ಯಂಗ್ ಅವರ ಮಾತಿನ ಕನ್ನಡ ರೂಪ. "ನರಕಕ್ಕಿಳಿಯದ ಹೊರತು ಯಾವ ಮರವೂ ಸ್ವರ್ಗವನ್ನು ತಾಕುವಂತೆ ಬೆಳೆಯುವುದಿಲ್ಲ." 


ಈ ಕಥಾ ಸಂಕಲನದಲ್ಲಿ ಆಳವಾದ ಬೇರುಗಳು ಹಾಗೂ ವಿಶಾಲವಾದ ರೆಂಬೆಗಳು ಎರಡೂ ಇರುವ ಕಥೆಗಳನ್ನು ಕಾಣಬಹುದು. ಈ ಕಥಾ ಸಂಕಲನದ ಹೆಚ್ಚಿನ ಕಥೆಗಳು ನನಗೆ ಪ್ರಸ್ತುತ ಕಾಲಘಟ್ಟಕ್ಕೆ ಅಪ್ಡೇಟ್ ಆದ ಕಥೆಗಳಂತೆ ಭಾಸವಾದವು. 


ಪಲ್ಲಟ : ಇಂದುವಿಗೆ ಅಮೆರಿಕಾದ ಶ್ರೀಕಾಂತನೊಂದಿಗೆ ಮದುವೆಯಾಗಿತ್ತು. ಡಿವೋರ್ಸ್ ಸಹ ಆಗಿತ್ತು. ಅದಕ್ಕೂ ಮೊದಲು ಇಂದುವಿನ ತಂದೆಯ ಅಕ್ಕ ಸುಶೀಲ ಅವಳ ಮಗ ರಮೇಶನ ಮದುವೆ ಪ್ರಸ್ತಾಪಕ್ಕೆ ಬಂದಾಗ ಇಂದು ನಿರಾಕರಿಸಿದ್ದಳು. ಆತನಿಗೂ ಮದುವೆಯಾಗಿ ಆ ಮದುವೆಯೂ ಮುರಿದು ಬಿದ್ದಿರುವ ಸಂದರ್ಭ. ಆದರೆ, ಈಗ ಸುಶೀಲ ಬಂದದ್ದು ಇಂದುವಿನ ವಿಚಾರವೊಂದನ್ನು ಆಕೆಯ ತಂದೆ-ತಾಯಿಗೆ ತಿಳಿಸಲಿಕ್ಕೆ. ಇಲ್ಲಿ ಪಲ್ಲಟವಾದ ಕಾಲವನ್ನು ಹಾಗೂ ಯೋಚನೆಗಳನ್ನು ಕಾಣಬಹುದು. ಇಂದಿನ ವಿವಾಹಗಳು ಮುರಿದು ಬಿದ್ದಾಗ ನೀಡುವ ವಿಚ್ಛೇದನದ ಕಾರಣಗಳು ಇಂದಿನ ಜೀವನದ ಪದ್ಧತಿಯನ್ನು ಕಾಣಬಹುದು. ಆದರೆ, ಮಕ್ಕಳ ಈ ಅಪ್ಡೇಟೆಡ್ ಬದುಕಿಗೆ ತಂದೆ ತಾಯಿ ಎಷ್ಟು ಹೊಂದಿಕೊಂಡರು..? ಓದಿ ನೋಡಿ.


ಫ್ಯಾಮಿಲಿ ಪೆನ್ಶನ್ : ವರ್ಷದ ಮಗುವನ್ನು ಕಟ್ಟಿಕೊಂಡು ಖತೀಜಾ ತನ್ನ ಗಂಡನ ಪಿಂಚಣಿಗಾಗಿ ಹೋಗಿದ್ದಳು. ಇತ್ತ ಫಾತುಮಾ ಅವಳಿಗಾಗಿ ಕಾಯುತ್ತಿದ್ದಳು. ಇಲಿಯಾಸ್ ಪಾಷಾನ ಮೂರನೇ ಹೆಂಡತಿಯಾಗಿರುವ ಈಕೆಗೆ ಸದ್ಯಕ್ಕೆ ಜೀವನಾಧಾರವೆಂದರೆ ಅದೊಂದೇ. ಮೌಲ್ವಿ ಅವರ ಮಾತೇನಿತ್ತು ..? ಆತನ ಮೊದಲಿಬ್ಬರು ಪತ್ನಿಯರ ಪ್ರತಿಕ್ರಿಯೆ ಏನಿತ್ತು ..? ಖತೀಜಾಳಿಗೆ ಪೆನ್ಷನ್ ಸಿಕ್ಕಿತೇ..?


ನಿರ್ಧಾರ : ಸುನಂದಾಳಿಗೆ ತನ್ನ ಮಗ ಆಫೀಸಿನಲ್ಲಿ ಸಹೋದ್ಯೋಗಿಯಾಗಿದ್ದ ಸಿರೀಶಾಳನ್ನು ಮದುವೆಯಾದಾಗ ಇದ್ದ ಹರ್ಷ ಈಗಿರಲಿಲ್ಲ. ಅದೆಲ್ಲವನ್ನು ಬಿಟ್ಟು.. ಹೇಮಾವತಿ ತೀರದ ಪುಟ್ಟ ಹಳ್ಳಿಗೆ ಸೊಸೆಯಾಗಿ ಬಂದ ಮನೆಯಲ್ಲಿ ವಾಸವಾಗಿದ್ದಳು. ಮಗ-ಸೊಸೆಯ ಬದುಕಿನ ತೀರ್ಮಾನ ತೆಗೆದುಕೊಳ್ಳುವ ಹಕ್ಕು ಇವಳಿಗಿರಲಿಲ್ಲ. ಸುನಂದೆ ತೆಗೆದುಕೊಂಡ ಆಕೆಯ ಬದುಕಿನ ವೈಯಕ್ತಿಕ ತೀರ್ಮಾನಕ್ಕೆ ಮೂಗು ತೂರಿಸಲು ಬಂದ ಮಗ-ಸೊಸೆಗೆ ಆಕೆ ಕೊಟ್ಟ ಉತ್ತರವೇನು..? ಆಕೆ ತನ್ನ ಇಳಿ ವಯಸ್ಸಿನಲ್ಲಿಯೂ ತೆಗೆದುಕೊಂಡ ನಿರ್ಧಾರದ ಜೀವಂತಿಕೆ ಇಲ್ಲಿದೆ. ಮಕ್ಕಳು ಪ್ರೈವೇಟ್ ಬದುಕು ಎನ್ನುವ ಮನಸ್ಥಿತಿಯಲ್ಲಿರುವಾಗ ಹಿರಿಯರು ತಮ್ಮ ಬದುಕನ್ನು ಪ್ರೈವೇಟ್ ಆಗಿಸಿಕೊಳ್ಳುವ ಗಟ್ಟಿ ನಿರ್ಧಾರದ ಮನೋಭಾವವೂ ಇದೆ. ಅಷ್ಟಕ್ಕೂ ಸುನಂದಾ ತೆಗೆದುಕೊಂಡ ನಿರ್ಧಾರವೇನು..?


ಪಾಣಿ ಮಿಸ್ಸಿಂಗ್ : ಯಾರಾದರೂ ಫೋನಿಗೂ ಸಿಗದಂತೆ ಮಿಸ್ಸಿಂಗ್ ಆಗಿದ್ದಾಗ, ಡಿಪ್ರೆಶನ್ ನಲ್ಲಿದ್ದಾಗ, ನೋವು ನಿರಾಸೆಯಲ್ಲಿದ್ದು.. ಭರವಸೆ ಬತ್ತಿ ಹೋಗಿದ್ದಾಗ ಬೇಕಾಗಿರುವುದು ಸಾಂತ್ವನ. ಕೆಲವರು ತಮ್ಮ ನಿರಾಸೆಯನ್ನು ನೋವನ್ನು ದೊಡ್ಡದಾಗಿಸಿಕೊಂಡು ಸ್ವಮರುಕದಿಂದ ವೈಭವಿಕರಿಸಿಕೊಳ್ಳುತ್ತಿದ್ದರೆ, ಇನ್ನು ಕೆಲವರು ತೆಗೆದುಕೊಳ್ಳುವ ನಿರ್ಧಾರ ಆಪ್ತರೆಲ್ಲರಿಗೂ ಜೀವನದಲ್ಲಿ ಮರೆಯಲಾಗದ ನೋವನ್ನು ಉಳಿಸಿ ಹೋಗುತ್ತದೆ. ಇಲ್ಲಿ ಪಾಣಿ ಮಿಸ್ಸಿಂಗ್ ಆದ ಸಂದರ್ಭದಲ್ಲಿ ಬಂದ ಆಲೋಚನೆಗಳು, ಆಪ್ತರು, ಆತನ ಬದುಕು ಎಲ್ಲವೂ ಕಾಣುತ್ತದೆ. ಯುವಜನತೆಯ ಇಂದಿನ ಬದುಕಿನ ಢಾಳಾದ ಚಿತ್ರಣ.


ಭಾನುಮತಿ ಸೋತಾಗ : ಇಲ್ಲಿ ಭಾನುಮತಿಯ ಬದುಕಿನ ವೈಭವ ಆಕೆಯ ಆಪ್ತಳಾದ ದಾಸಿ ಜ್ಯೋತಿರ್ಮತಿ ಮೂಲಕ ಕಾಣ ಸಿಗುತ್ತದೆ. ಭಾನುಮತಿ ಹಾಗೂ ಕರ್ಣ ಪಗಡೆಯಾಡುವ ಚಿತ್ರಣ ಇದು ಎಂದು ಶೀರ್ಷಿಕೆಯ ಮೂಲಕ ಊಹಿಸಬಹುದಾದರೂ... ಭಾನುಮತಿಯ ಭಾವನೆ,ಒಳತೋಟಿಗಳು, ಅಂತರಂಗ ಜ್ಯೋತಿರ್ಮತಿಯ ಮೂಲಕ ಕನ್ನಡಿ ಹಿಡಿದಂತಿದೆ.


ಸೀತೆಗೊಂದು ಪತ್ರ : ಇಲ್ಲಿ ಸೀತೆಗೊಂದು ಪತ್ರ ಬರೆದಿರುವುದು ಊರ್ಮಿಳೆ. ಲಕ್ಷ್ಮಣ ಆಕೆಯನ್ನು ರಾಮನ ಮಾತಿನಂತೆ ಕಾಡಿನಲ್ಲಿ ಬಿಟ್ಟು ಬಂದಾಗ ಊರ್ಮಿಳೆ ಬರೆದಿರುವ ಪತ್ರವಿದು. 

ಇಲ್ಲಿ ಜನಕ ಮಹಾರಾಜ ಹಾಗೂ ರಾಮ ಲಕ್ಷ್ಮಣರ ನಡುವೆ ಇರುವ ಸಂಭಾಷಣೆಯ ಉಲ್ಲೇಖವಿದೆ. ಅಷ್ಟಕ್ಕೂ ಊರ್ಮಿಳೆ ಈ ಪತ್ರವನ್ನು ಸೀತೆಗೆ ತಲುಪಿಸಿದಳೇ..? ಮಾಂಡವಿಯನ್ನು ತನಗಿಂತ ಜಾಣೆ ಎಂದು ಕರೆದ ಊರ್ಮಿಳೆಯ ಮಾತಿನ ಮರ್ಮ ಏನಿದೆ..? ಓದಿ ನೋಡಿ.

"ರಾವಣನಂತವರಿಗೆ ಚೆಲುವೆಯೇ ಬೇಕಿಲ್ಲ. ತನ್ನ ಶೌರ್ಯ ಪ್ರದರ್ಶನಕ್ಕೂ ಗಂಡಸರು ಹೆಣ್ಣು ಮಕ್ಕಳನ್ನು ಉಪಯೋಗಿಸುತ್ತಾರೆ. "

ಹಾಗೂ "ರಾಜಮಾತೆಯರಿಗೆ ರಾಜಮಾತೆಯರಿಗೆ ತಮ್ಮ ಮಕ್ಕಳು ಏನು ಮಾಡಿದರು ಸರಿಯೇ. ಯಾರು ಗಂಡು ಮಕ್ಕಳಿಗೆ ಬುದ್ಧಿ ಹೇಳುವವರಿಲ್ಲ..." ಎನ್ನುವ ಮಾತುಗಳು ಪರಿಸ್ಥಿತಿಯನ್ನು ಪ್ರತಿಫಲಿಸುತ್ತಿವೆ ಎನ್ನಿಸಿತು.


ಮೂಲಾ ನಕ್ಷತ್ರ : "ಆಣ್ ಮೂಲಂ ಅರಸು ಮೂಲಂ, ಪೆಣ್ ಮೂಲಂ ನಿರ್ಮೂಲಂ " ಎಂದು ಅಮ್ಮ ಹೇಳುತ್ತಿದ್ದ ಮಾತುಗಳು, ಮೂಲಾ ನಕ್ಷತ್ರದ ಕುರಿತಾದ ಈ ಮಾತುಗಳಿಂದ ಶುರುವಾಗುವ ಕಥೆ ಅಮ್ಮನನ್ನು ಕಳೆದುಕೊಂಡ ಮಗಳೊಬ್ಬಳ ವಿವಾಹದ ಅಲ್ಲಲ್ಲ ಅವಳ ಬದುಕಿನ ದಿಕ್ಕನ್ನೇ ಬದಲಿಸಿದ ಜಾತಕದ ಕಥೆ. ಅಮ್ಮನ ನಂತರ ಚಿಕ್ಕಮ್ಮ ಬಂದಳಾದರೂ.. ಆಕೆ ಅಮ್ಮನೇ ಎಂಬಷ್ಟು ಪ್ರೀತಿ ತೋರಿಸುತ್ತಾಳೆ. ಆದರೆ, ಭವಿಷ್ಯ ಮಾತ್ರ ಬದಲಾಗುವುದಿಲ್ಲ. ಅದೇಕೆಂದು ಓದಿ ನೋಡಿ.


ಬಿಡುಗಡೆ : ಮೌನ ಎಂದರೆ ಮೂರು ಮಾರು ದೂರವಿರುತ್ತಿದ್ದ ಮಂಜುನಾಥನನ್ನು ಕಂಡು ಮಾಲತಿಗೆ ನಿಜವಾದ ಸಮಸ್ಯೆ ಏನೆಂಬುದೇ ಅರಿವಾಗಿರಲಿಲ್ಲ. ಸಂಬಳಕ್ಕೂ ಮಿಗಿಲಾದ ಸಂಪಾದನೆಯಿತ್ತು. ಆದರೆ ಕೆಲ ದಿನಗಳಿಂದೀಚೆಗೆ ಎಲ್ಲವೂ ಬದಲಾಗಿತ್ತು. ಮನೆ ಬಿಟ್ಟು ಕ್ವಾರ್ಟಸ್ ನಲ್ಲಿ ನೆಲೆ ನಿಂತ ಮೇಲು ನಿಜ ವಿಚಾರ ಗೊತ್ತಾಗಿರಲಿಲ್ಲ. ಆಕೆಯ ತಮ್ಮ ಮಹೇಶ ಆಕೆ ಕರೆಸಿಕೊಳ್ಳದಿದ್ದರೂ ಬಂದು ಬಾವ-ಮೈದುನರು ಮಾತುಕತೆಯಲ್ಲಿ ತೊಡಗಿಯಾಗಿತ್ತು. ಸಮಸ್ಯೆಯ ಸ್ವರೂಪ ಎಂತದ್ದಿತ್ತು.? ಈ ಸಮಸ್ಯೆ ಬಗೆಹರಿಯುತ್ತದೆಯೇ..? ಬಿಡುಗಡೆ ಪಡೆದದ್ದು ಯಾರು..? ಓದಿನೋಡಿ.


ಧರ್ಮಗಳ ಮೀರುತ್ತ.. : ರೋಜ್ ಪೆರೇರಾ ಹುಟ್ಟುಹಬ್ಬಕ್ಕಾಗಿ ಕೃಷ್ಣಮೂರ್ತಿ ಬರುವುದು ರೋಸಿಯ ತಾಯಿ ಸೂಸನ್ ಗೆ ಇಷ್ಟವಿರಲಿಲ್ಲ. ಆದರೆ, ಆಕೆಯ ತಂದೆ ವಿಲಿಯಂ ಇದಕ್ಕೆ ವಿರೋಧ ವ್ಯಕ್ತಪಡಿಸುತ್ತಿರಲಿಲ್ಲ. ವರ್ಷಕ್ಕೊಂದು ದಿನ ಬರುತ್ತಿದ್ದ ಕೃಷ್ಣಮೂರ್ತಿ ಯಾರು..? ಅಷ್ಟಕ್ಕೂ ರೋಸ್ ಹಾಗೂ ಕೃಷ್ಣಮೂರ್ತಿಗೆ ಪರಿಚಯ, ಗೆಳೆತನ ಇದ್ದದ್ದು ಹೇಗೆ..? ಧರ್ಮಗಳನ್ನು ಮೀರುತ್ತಾ ಬೆಳೆದ ಇವರ ಗೆಳೆತನ ಮುಂದೆ ಏನಾಯಿತು..?


ಚಿಗುರಿದ ಕನಸು : ಮನೆ ಬದಲಿಸುವಾಗ ಬಾಡಿಗೆಗಿಂತ ಅಪಾರ್ಟ್ಮೆಂಟ್ ಅನ್ನು ಬಿಟ್ಟು ತನ್ನದೇ ಹೊಸ ಮನೆಗೆ ಹೋಗುವುದಕ್ಕೂ ಮುನ್ನ ಅಲ್ಲಿಂದ ಅಮೂಲ್ಯವಾದುದೇನನ್ನೋ ತೆಗೆದುಕೊಂಡು ಹೋಗುತ್ತಿದ್ದವರಿಗೆ ಆಗ ಆದ ಭ್ರಮನಿರಸನ ಮುಂದೆ ಖುಷಿ ತಂದದ್ದು ಹೇಗೆ..? ವಿಭಿನ್ನವಾದ ಪುಟ್ಟ ಕಥೆ.


ಛೇದ : ವಯಸ್ಸಿನ ಹುಡುಗಿಯಾಗಿದ್ದ ಶಾಲಿನಿ ವಿಷ ಕುಡಿದಿದ್ದಾಗ ರವಿ ಆಕೆಯನ್ನು ಬದುಕಿಸಿದ್ದನು. ಮುಂದೆ ರವಿಗೆ ಕೆಲಸ ಸಿಕ್ಕಿತ್ತು. ಅದೇ ಸಂದರ್ಭದಲ್ಲಿ ಆಕೆ ತನ್ನನ್ನು ಮದುವೆ ಮಾಡಿಕೊಂಡು ಮೆಡಿಕಲ್ ಓದಿಸುವಂತೆ ಆತನಲ್ಲಿ ಅಂಗಲಾಚಿದ್ದಳು. ಎರಡೂ ಮನೆಯವರು ಅವರಿಬ್ಬರ ಜೊತೆಯಲ್ಲಿಯೂ ಸೌಹಾರ್ದ ಇರಿಸಿಕೊಳ್ಳಲಿಲ್ಲ. ಮುಂದೆ ಆಕೆ ವೈದ್ಯಕೀಯ ಮುಗಿಸಿ ಗೈನಕಾಲಜಿಯಲ್ಲಿ ಸ್ಪೆಷಲೈಸೇಶನ್ ಮಾಡಿಕೊಂಡಳು. ಇವರಿಬ್ಬರ ದಾಂಪತ್ಯ ಮುಂದೆ ಯಾವ ಸ್ವರೂಪ ಪಡೆಯಿತು..? ಮನೆಯವರ ಸಹಕಾರ ದೊರೆಯಿತೇ..? ಇಲ್ಲಿ ಬದಲಾದ ಪ್ರೀತಿಯ ಬೇರೊಂದು ಸ್ವರೂಪ ಕಾಣಿಸುತ್ತದೆ.


ಜಡೆ ಬಂಗಾರ : ವೆಂಕಟೇಶನ್ ವಾರಣಾಸಿಯಲ್ಲಿದ್ದ ತಮ್ಮ ಮಗಳು-ಅಳಿಯನ ಮನೆಗೆ ಅವರ 20ನೇ ಆನಿವರ್ಸರಿ ಸಲುವಾಗಿ ಹೊರಟಿದ್ದರು. ಮಗ-ಸೊಸೆ ಅಮೆರಿಕಾ ಸೇರಿಯಾಗಿತ್ತು. ಎಲ್ಲರೂ ವಿಮಾನದಲ್ಲಿ ಹೊರಟಿದ್ದರಾದರೂ ಇವರು ರೈಲಿನಲ್ಲಿ ಹೊರಟಿದ್ದಕ್ಕೆ ಮೊದಲು ಹೇಳಿದ ಕಾರಣಕ್ಕೂ ನಂತರ ಹೇಳಿದ ಕಾರಣಕ್ಕೂ ವ್ಯತ್ಯಾಸವಿತ್ತು. ವೆಂಕಟೇಶನ್ ತನ್ನ ಸಹಪ್ರಯಾಣಿಕ ಗಣೇಶ್ ರಾವ್ ಮೇಲೆ ನಂಬಿಕೆ ಬಂದ ನಂತರ ಅದಕ್ಕೆ ಕಾರಣ ಹೇಳಿದ್ದರು. ಅದಕ್ಕೆ ಜಡೆ ಬಂಗಾರ ಕಾರಣ. ಆ ಕಲಾತ್ಮಕ ಜಡೆ ಬಂಗಾರವನ್ನು ತೋರಿದರೂ ಸಹ. ಇದರ ಹಿನ್ನೆಲೆಯೇನು..? ವೆಂಕಟೇಶನ್ ಅವರ ಸಾವಿಗೆ ಕಾರಣವೇನು ? ಜಡೆ ಬಂಗಾರ ಯಾರ ಪಾಲಾಯಿತು..? ಓದಿ ನೋಡಿ. 

ತಮ್ಮದಲ್ಲದ ವಸ್ತುವಿಗೆ, ಋಣಾವಿಲ್ಲದಿದ್ದಾಗ ಅಥವಾ ಅತಿಯಾಸೆ ಪಟ್ಟು ಮೋಸದಿಂದ ಪಡೆದುಕೊಂಡಾಗ ಏನಾಗುತ್ತದೆ..? ಎಂಬ ಚಿತ್ರಣಗಳು ಇಲ್ಲಿವೆ.


ಮೆಂಟಲ್ ಬ್ಲಾಕ್ : ಪ್ರಿಯಾಳಿಗೆ ತನ್ನ ಟೀಮ್ ಲೀಡರ್ ಸಂದೀಪ್ "ಡೋಂಟ್ ಬ್ರಿಂಗ್ ಯುವರ್ ಹೋಂ ಹಿಯರ್" ಎಂದ ಮಾತು ಮನಸ್ಸಿನಲ್ಲಿ ಉಳಿದಿತ್ತು. ಮನೆ, ಮಗು ಎಲ್ಲವನ್ನೂ ಬದಿಯಲ್ಲಿಟ್ಟು ಕೆಲಸ ಮಾಡುವವಳಿಗೆ ಈ ಮಾತು ತಡೆದುಕೊಳ್ಳಲು ಕಷ್ಟವೇ ಆಗಿತ್ತು. ಅವಳ ತಲೆಯಲ್ಲಿ ರಿಂಗಣಿಸುತ್ತಿದ್ದ ಹಾಗೂ ಕೊರೆಯುತ್ತಿದ್ದ ಮಾತಿನ ಜೊತೆಗೆ ಮನೆಯಲ್ಲಿನ ಪರಿಸರ ಎಲ್ಲವೂ ಸೇರಿ ಆಕೆಯನ್ನು ಹಣ್ಣು ಮಾಡುತ್ತಿದ್ದಾಗ ನಿರೀಕ್ಷಿತ ಸಹಾನುಭೂತಿಯೂ ವ್ಯಕ್ತವಾಗದಿದ್ದಾಗ.. ಎಲ್ಲವನ್ನೂ ತಲೆಯಲ್ಲಿಟ್ಟುಕೊಂಡು, ಕಷ್ಟವನ್ನು ಬದಿಗಿಟ್ಟು, ಕೆಲಸ ಮಾಡುತ್ತಿದ್ದಾಗ ಅವಳಿಗೆ ಉಂಟಾದ ಮೆಂಟಲ್ ಬ್ಲಾಕ್ ಮಾಡಿದ ಪರಿಣಾಮವೇನು..?


ಇಂದಿನ ಕಾಲಘಟ್ಟದ ಕಥೆಗಳಲ್ಲಿ ಇರುವ ಇಂಗ್ಲಿಷ್ ಸಂಭಾಷಣೆಗಳು, ಊರು, ಸಂಪ್ರದಾಯ, ಧರ್ಮಗಳ, ಜನರೇಷನ್ ನ ನಡೆ, ಮಾತುಗಳು ಹೀಗೆ ಪ್ರತಿಯೊಂದು ಡೀಟೇಲಿಂಗ್ ಸಹ ಕಥೆಗಳಲ್ಲಿ ಚೆಂದವಾಗಿ ಚಿತ್ರಿತವಾಗಿದೆ. ಚೆಂದದ ಕಥೆಗಳ ಓದು.

~ವಿಭಾ ವಿಶ್ವನಾಥ್

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ