ಭಾನುವಾರ, ಏಪ್ರಿಲ್ 26, 2026

ಸುಬ್ಬಣ್ಣ (ಪುಸ್ತಕ ಯಾನ - 416)


ಪುಸ್ತಕದ ಶೀರ್ಷಿಕೆ : ಸುಬ್ಬಣ್ಣ

ಲೇಖಕರು : ಶ್ರೀನಿವಾಸ

ಪ್ರಕಾಶಕರು : ಮಾಸ್ತಿ ವೆಂಕಟೇಶ ಅಯ್ಯಂಗಾರ್ ಕಾರ್ಯಾಲಯ ಟ್ರಸ್ಟ್

ಪ್ರಥಮ ಮುದ್ರಣ : 1928

20 ನೇ ಮುದ್ರಣ : 2024 ಮಾರ್ಚ್ (ನನ್ನ ಓದಿಗೆ ಸಿಕ್ಕಿದ್ದು)

ಪುಟಗಳು : 123

ಬೆಲೆ : 120 ರೂ.


ಶ್ರೀನಿವಾಸ ಎಂಬ ಅಂಕಿತನಾಮದಲ್ಲಿ ಬರೆಯುವ ಮಾಸ್ತಿ ವೆಂಕಟೇಶ ಅಯ್ಯಂಗಾರ್ ಅವರ ಕಥೆಗಳ ಸೊಗಸೇ ಸೊಗಸು. ಸುಬ್ಬಣ್ಣ ನೀಳ್ಗತೆಯಂತೂ ಬಹಳ ಬಹಳ ಪ್ರಸಿದ್ಧಿ ಹೊಂದಿದ ಕಥೆ. ಇದು ಪ್ರಬುದ್ಧ ಕರ್ನಾಟಕದಲ್ಲಿಯೂ ಪ್ರಕಟವಾಗಿತ್ತು. 


ಈ ಕಥೆ ಹುಟ್ಟಿದ ಸಂದರ್ಭವನ್ನು ಹೀಗೆ ಹೇಳುತ್ತಾರೆ. ಮಾಸ್ತಿಯವರ ಮಿತ್ರರಾದ ನವರತ್ನ ರಾಮರಾಯರು ತಮ್ಮ ಪರಿಚಯದ ಒಬ್ಬ ವೃದ್ಧ ಗಾಯಕರ ಕಡೆಯ ದಿನಗಳನ್ನು ಇವರಿಗೆ ವರ್ಣಿಸಿ ಹೇಳುತ್ತಿದ್ದರಂತೆ. ಅವರು ಹೀಗೆ ವರ್ಣಿಸಿದ ವ್ಯಕ್ತಿಯೇ ಈ ಕಥೆಯ ನಾಯಕ. ರಾಮರಾಯರೇ ಆ ವೃದ್ಧರನ್ನು ಕುರಿತ ಕಥೆಯೊಂದನ್ನು ಬರೆಯಬೇಕೆಂದು ಉದ್ದೇಶಿಸಿದ್ದರು. ಮಾಸ್ತಿಯವರಿಗೆ ಆ ಕಥಾವಸ್ತುವಿನ ಮೇಲೆ ಆಸೆ ಇದೆ ಎಂಬ ಯೋಚನೆಯಿಂದಲೂ ಹಾಗೂ ಇತರ ಕಾರಣದಿಂದಲೂ ಅವರು ತಮ್ಮ ಉದ್ದೇಶವನ್ನು ಬಿಟ್ಟು ಆ ಗಾಯಕನನ್ನು ಕಥೆಯಲ್ಲಿ ತೋರಿಸುವ ಕೆಲಸವನ್ನು ಇವರಿಗೆ ನೀಡುತ್ತಾರೆ. ಹೀಗೆ ಜೀವನದ ಸಂಪೂರ್ಣ ಚಿತ್ರವೊಂದನ್ನು ಕಲ್ಪಿಸುವ ಹಾಗೂ ಕಟ್ಟಿಕೊಡುವ ಪ್ರಯತ್ನದಲ್ಲಿ ಈ ಕಥೆ ಹುಟ್ಟಿತು ಎಂದಿದ್ದಾರೆ. 


ನಾರಾಯಣ ಶಾಸ್ತ್ರಿಗಳಿಗೆ ಮೂವರು ಹೆಣ್ಣು ಮಕ್ಕಳ ನಂತರ ಗಂಡು ಮಗ ಹುಟ್ಟಿದ್ದನು. ಶಾಸ್ತ್ರಿಗಳ ಯಜಮಾನಿಗೆ ಹಾಗೂ ಅವರಿಗೂ ಈ ಪುತೋತ್ಸವದಿಂದ ಬಹಳ ಖುಷಿಯೇ ಆಗಿತ್ತು. ಸಂಸ್ಕೃತದಲ್ಲಿ ಪಾರಂಗತರಾಗಿದ್ದ ನಾರಾಯಣ ಶಾಸ್ತ್ರಿಗಳ ಮಗ ಸುಬ್ರಮಣ್ಯ ಶಾಸ್ತ್ರಿ ಆಗಲಿಲ್ಲ. ಬದಲಾಗಿ ಸುಬ್ಬಣ್ಣನಾದ. ಏಕೆಂದರೆ, ಆತನಿಗೆ ಸಂಸ್ಕೃತಕ್ಕಿಂತಲೂ ಹೆಚ್ಚಿನ ಆಸಕ್ತಿ ಹುಟ್ಟಿದ್ದು ಸಂಗೀತದ ಮೇಲೆ ನ ಹೀಗೆ ಆತನ ಬಾಲ್ಯದ ದಿನಗಳು ಹಾಗೂ ಆತ ಅರಮನೆಗೆ ಹೋದಾಗ ಮಹಾರಾಜರ ಸನ್ನಿಧಾನದಲ್ಲಿ ಆದ ಮಾತುಕತೆಯೊಂದು ಆತನನ್ನು ಸಂಗೀತದಡೆಗೆ ಮತ್ತಷ್ಟು ಆಸಕ್ತಿ ಹೊಂದುವಂತೆ ಮಾಡಿದ ಪ್ರಸಂಗವನ್ನು ಹೇಳುತ್ತಾರೆ. ಅದೇನು ನೀವೇ ಓದಿ ನೋಡಿ. 


ತಂದೆಗೆ ಮಗ ಸಂಸ್ಕೃತ ಕಲಿತರೆ ಸಂತಸವಾಗುತ್ತಿತ್ತು ಜೊತೆಗೆ ಅಂದಿನ ಸಂಪಾದನೆಗೂ ದಾರಿಯಾಗುತ್ತಿತ್ತು. ಆದರೆ, ಹಾಗಗಲಿಲ್ಲ. ಸಂಗೀತ ಕಲಿಯುವ ಆತನ ಆಲೋಚನೆ ಹಾಗೂ ಧೈರ್ಯ ಆತನನ್ನು ಹಿರಿಯರಿಗೂ ಹೇಳದಂತೆ ತನ್ನ ಗುರಿಯಡೆಗೆ ಸಾಗುವ ಹಾದಿಯನ್ನು ಕಂಡುಕೊಂಡ ಬಗೆಯೇ ವಿಭಿನ್ನ. ಆತ ವಾರಸ್ತ್ರೀಯರಿಗೆ ಸಂಗೀತ ಹೇಳಿ ಸಂಪಾದಿಸಬಹುದಾಗಿದ್ದರೂ.. ಹಾಗೆ ಮಾಡದಕ್ಕೆ ಕಾರಣವೇನು ಓದಿ ತಿಳಿಯಿರಿ.


ಸುಬ್ಬಣ್ಣನಿಗೆ ಮದುವೆಯಾಗಿದ್ದು.. ಆತನ ಪತ್ನಿಯನ್ನು ಇಲ್ಲಿ ಲಲಿತಾ ಎಂದು ಗುರುತಿಸುತ್ತಾರೆ. ಲಲಿತಮ್ಮನನ್ನು ಪೂಜ್ಯ ರೀತಿಯಲ್ಲಿ ಹಾಗೂ ಗೌರವಯುತವಾಗಿ ಕಾಣುವ ಸುಬ್ಬಣ್ಣನವರು ತಮ್ಮ ಯೌವ್ವನದ ದಿನಗಳಲ್ಲಿ ಪತ್ನಿಯೊಡನೆ ಹೊಂದಾಣಿಕೆಯಲ್ಲಿ ಇದ್ದರೇ..? ಅವರ ದಾಂಪತ್ಯ ಜೀವನ ಹೇಗಿತ್ತು..? ಅತ್ತೆ-ಸೊಸೆಯರ ನಡುವೆ ಸಂಬಂಧ ಯಾವ ರೀತಿ ಇತ್ತು..? ಇದೆಲ್ಲವನ್ನೂ ಕಟ್ಟಿಕೊಡುತ್ತಲೇ ಸುಬ್ಬಣ್ಣನ ಯೌವ್ವನದ ದಿನಗಳು, ಅಂದಿನ ಸಂಗೀತಾಭ್ಯಾಸ, ಮನೆಯಲ್ಲಿನ ರಸಕಸಿಗಳು, ಮನೆಯಲ್ಲಿಯ ತಂದೆಯ ಸಂಪಾದನೆಯಲ್ಲಿ ಇಡೀ ಕುಟುಂಬವೆಲ್ಲವೂ ಬದುಕಬೇಕಾದಾಗ ಆತನ ತಾಯಿ ಆತನನ್ನು ಹಾಗೂ ಸೊಸೆ, ಮೊಮ್ಮಗನನ್ನು ನೋಡಿದ ರೀತಿ ಎಲ್ಲವೂ ಇಲ್ಲಿದೆ. 


ತಂದೆ-ತಾಯಿ, ಹುಟ್ಟಿದ ಊರು ಎಲ್ಲವನ್ನು ತೊರೆದು ಹೊರಟ ಸುಬ್ಬಣ್ಣ ಹೆಂಡತಿ-ಮಕ್ಕಳೊಡನೆ ಹೋಗಿದ್ದಾದರೂ ಎಲ್ಲೆಲ್ಲಿಗೆ..? ಹೋಗಿ ಸೇರಿದ ಕಲಕತ್ತೆಯಲ್ಲಿನ ಜೀವನ ಆತನಿಗೆ ಕಲಿಸಿದ್ದೇನು..? ನೀಲಾಸಾನಿಯ ಋಣವನ್ನು ತೀರಿಸಿದ ಬಗೆ ಹೇಗೆ..?


"ಮನುಷ್ಯನು ಆಯಸ್ಸನ್ನು ಎಲ್ಲಿ ಬೇಕಾದರೂ ಕಳೆಯಬಹುದು; ಅದಕ್ಕೆ ಅವನು ಕಷ್ಟ ಪಡಬೇಕಾದುದಿಲ್ಲ. ಕಷ್ಟವಿರುವುದೆಲ್ಲಾ ಸರಿಯಾದ ರೀತಿಯನ್ನು ಹುಡುಕುವುದರಲ್ಲಿ."


ಸುಬ್ಬಣ್ಣನ ಯೌವ್ವನ ಹೇಗೆ ಕಳೆಯಿತು..? ಆತ ಕಷ್ಟಪಟ್ಟನೆ ಅಥವಾ ಕಷ್ಟ ಕೊಟ್ಟನೇ ?


ಇಲ್ಲಿ ಎಲ್ಲಕ್ಕಿಂತಲೂ ಸುಬ್ಬಣ್ಣನ ವೃದ್ಧಾಪ್ಯದ ದಿನಗಳನ್ನು ಹೆಚ್ಚು ಚಿತ್ರಿಸಲಾಗಿದೆ. ಅದರಲ್ಲಿಯೂ ಅವರು ತೊರೆಯಪುರದಲ್ಲಿ ಪಿಟೀಲು ನೋಡಿಸುವ ರೀತಿಯನ್ನು ಹೇಳುತ್ತಾರೆ. 


"ಅವರು ತೊರೆಯಪುರದಲ್ಲಿ ದೇವಸ್ಥಾನದಲ್ಲಿ ನುಡಿಸುವಾಗ ಅದನ್ನು ನಾನು ಕೇಳಿದ್ದೇನೆ. ಇತರರು ಪಿಟೀಲು ಬಾರಿಸುವುದನ್ನೂ ಕೇಳಿದ್ದೇನೆ. ಎರಡಕ್ಕೂ ಇದ್ದ ವ್ಯತ್ಯಾಸವನ್ನು ಒಂದು ಮಾತಿನಲ್ಲಿ ಹೇಳಬಹುದು. ಅವರು ನುಡಿಸುವುದು ಆಪ್ತನಲ್ಲಿ ಹೇಳುವ ಮನಸ್ಸಿನೊಳಗಣ ಮಾತಿನಂತೆ; ಇತರರು ಬಾರಿಸುವುದು ಸಭೆಯಲ್ಲಿ ಕೊಡುವ ಉಪನ್ಯಾಸದಂತೆ." 


ಹೀಗಿದ್ದ ಸುಬ್ಬಣ್ಣನವರು ಒಂದು ಬಾರಿ ಪಿಟೀಲನ್ನೇ ತ್ಯಜಿಸಲು ಹೋಗುತ್ತಾರೆ. ಅದಕ್ಕೆ ಕಾರಣವಾದ ಪ್ರಸಂಗವೇನು..?


ಸುಬ್ಬಣ್ಣನ ವೃದ್ಧಾಪ್ಯದ ದಿನಗಳಲ್ಲಿ ಅವರನ್ನು ವೈರಾಗ್ಯ ಹೊಂದಿದ ಸುಬ್ಬಣ್ಣ ಎನ್ನುವುದಕ್ಕಿಂತಲೂ.. ಮಾಗಿದ ಹಾಗೂ ಮಾಗುತ್ತಿರುವ ವ್ಯಕ್ತಿಯೊಬ್ಬನನ್ನು ಕಾಣುತ್ತೇವೆ. 


ಸಂಗೀತ ಸಾಧನೆ ಹೌದು. ಸಂಗೀತ ನಮ್ಮ ಮನಸ್ಸಿಗೆ ಮಾತ್ರವಲ್ಲ, ಕೇಳುವವರ ಮನಸ್ಸಿಗೆ ಹಿತ ನೀಡಿ ತಂಪೆರೆಯುವುದೂ ಹೌದು. ಸುಬ್ಬಣ್ಣನವರ ಸಂಗೀತ ಯಾವ ರೀತಿಯಲ್ಲಿ ಉಪಯೋಗವಾಯಿತು..? ಸುಬ್ಬಣ್ಣನ ಮೇಲೆ ಪ್ರಭಾವ ಬೀರಿದ ವ್ಯಕ್ತಿಗಳು ಹಾಗೂ ಆತನ ಜೀವನದಲ್ಲಿ ನಡೆದ ಘಟನೆಗಳು ಸಂಗೀತದ ಮೇಲೆ ಬೀರಿದ ಪ್ರಭಾವವೇನಿತ್ತು..? 


ಸುಬ್ಬಣ್ಣನವರ ಸಂಗೀತದ ಪಾಂಡಿತ್ಯ ಮಾತ್ರವಲ್ಲ ಇಲ್ಲಿ ಅವರ ಮಾತಿನ ಚಾಕಚಕ್ಯತೆಯನ್ನೂ ಗಮನಿಸಬಹುದು. 


ಓದಲೇಬೇಕಾದ ಈ ನೀಳ್ಗತೆಯನ್ನು ಓದದೇ ತಪ್ಪಿಸಿಕೊಳ್ಳಬೇಡಿ. ಮಾಸ್ತಿಯವರ ಈ ಕತೆಯನ್ನು ತಪ್ಪದೇ ಓದಿ ನೋಡಿ. 


~ವಿಭಾ ವಿಶ್ವನಾಥ್

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ