ಭಾನುವಾರ, ಏಪ್ರಿಲ್ 26, 2026

ಮಿಲೇನಿಯಲ್ ಅಮ್ಮ (ಪುಸ್ತಕ ಯಾನ - 365)


ಪುಸ್ತಕದ ಶೀರ್ಷಿಕೆ : ಮಿಲೇನಿಯಲ್ ಅಮ್ಮ

ಲೇಖಕರು : ಮೇಘನಾ ಸುಧೀಂದ್ರ

ಪ್ರಕಾಶಕರು : ಹರಿವು ಬುಕ್ಸ್

ಪ್ರಥಮ ಮುದ್ರಣ : 2025

ಪುಟಗಳು : 135

ಬೆಲೆ : 180 ರೂ.


ಜಯನಗರದ ಹುಡುಗಿ ಎಂಬ ಪುಸ್ತಕದಿಂದ ಪ್ರಕಟಿತ ಪುಸ್ತಕಲೋಕಕ್ಕೆ ಕಾಲಿಟ್ಟ ಇವರು ಲಿಪಿಯ ಪತ್ರಗಳು, #AI ಕಥೆಗಳು, ಬೆಂಗಳೂರು ಕಲರ್ಸ್, ಪ್ರೀತಿ ಗೀತಿ ಇತ್ಯಾದಿ, ಪಾಥೇರಸ್, ಅಂಗಳದಿಂದ ಬೈನರಿವರೆಗೆ ಎಂಬ ಪುಸ್ತಕಗಳನ್ನು ಪ್ರಕಟಿಸಿದ್ದಾರೆ. ಇವರ ಮುಂದಿನ ಪುಸ್ತಕಕ್ಕಾಗಿ ಕಾಯುವ ನನಗೆ ಇವರ ಸರಳ, ಸುಂದರ ಬರಹಗಳು ಇಷ್ಟ. ಇದೀಗ ಹೊಸ ತಲೆಮಾರಿನ ಅಮ್ಮಂದಿರ ಅಂದರೆ ಈಗಿನ ಹೊಸ ತಾಯಂದಿರ ದೃಷ್ಟಿಕೋನ, ಭಾವನೆಗಳು, ಸವಾಲುಗಳು ಎಲ್ಲವನ್ನೂ ಬಿಡಿಸಿಟ್ಟಿದ್ದಾರೆ. ನಾನೂ ಇದೇ ಘಟ್ಟದಲ್ಲಿರುವುದರಿಂದ ಪುಸ್ತಕ ಬಹಳವೇ ಆಪ್ತವಾಯಿತು. 


ಪ್ರತಿ ತಾಯ್ತನವೂ ವಿಭಿನ್ನ. ಅವರವರ ಅನುಭವ ಹೊಸದ್ದೇನನ್ನೋ ಕಲಿಸಿಕೊಡುತ್ತವೆ. ಆದರೆ, ಇಂತಹ ಸವಾಲುಗಳು ಎದುರಾದರೆ ಅವುಗಳನ್ನು ಎದುರಿಸುವ ರೀತಿ, ಹೊಳಹುಗಳು, ಕಿವಿಮಾತಿನಂತಹ ಅನುಭವದ ಮಾತುಗಳು, ಭಾವನೆಗಳು ಎಲ್ಲವೂ ಇಲ್ಲಿವೆ. ಅದರಲ್ಲೂ ಇಲ್ಲಿ ಅವಳಿ ಮಕ್ಕಳ ಗರ್ಭಾವಸ್ಥೆಯಿಂದ ಪೋಷಣೆಯವರೆಗೂ ತಮ್ಮ ಅನುಭವ ಕಥನವನ್ನು ತೆರೆದಿಟ್ಟಿದ್ದಾರೆ. 


ತಾಯ್ತನ ಸ್ವಲ್ಪ ತಡವಾದರೆ ಪ್ರತಿ ಕಾರ್ಯಕ್ರಮದಲ್ಲಿಯೂ ಸಿಕ್ಕ ಹೆಚ್ಚಿನವರು ಗುಡ್ ನ್ಯೂಸ್ ಯಾವಾಗ ಎಂಬ ಪ್ರಶ್ನೆಯನ್ನು ಕೇಳುತ್ತಲೇ ಇರುತ್ತಾರೆ. ಈ ಪ್ರಶ್ನೆ ಹುಟ್ಟಿಸುವ ಭಾವದ ಹಿಂದಿನ ಆಲೋಚನೆಗಳು ಹಾಗೂ ಅದರ ಹಿಂದೆ ಇರಬಹುದಾದ ಕಾರಣಗಳು ನನ್ನ ಆಲೋಚನೆಗೂ ಸಾಕಷ್ಟು ಹೋಲಿಕೆಯಾದವು.


ಇನ್ನು ಮುಂದಿನ ಹಂತದಲ್ಲಿ ಆಸ್ಪತ್ರೆಯ ಟೆಸ್ಟುಗಳು, ಸ್ಕ್ಯಾನ್ ಗಳು ಎಂದು ವಿಭಿನ್ನ ಅನುಭವವನ್ನೇ ಕೊಡುವುದು ಹೌದು. ಕೆಲವೊಮ್ಮೆ ಮುಜುಗರ, ಕೆಲವೊಮ್ಮೆ ಕೋಪ ಹೀಗೆ ಹಲವಾರು ಭಾವಗಳು. ಅದರ ಜೊತೆಗೆ ತಾಯಂದಿರಂತೂ ನಮ್ಮ ಕಾಲದಲ್ಲಿ ಹೀಗಿರಲಿಲ್ಲ.. ಇಷ್ಟು ಟೆಸ್ಟ್ ಗಳಿರಲಿಲ್ಲ ಎಂದು ಹೇಳುತ್ತಿರುವುದು ಹೌದಾದರೂ.. ಈಗಿನ ಕಾಲದ ಸ್ಕ್ಯಾನಿಂಗ್ ಗಳನ್ನು, ಟೆಸ್ಟ್ ಗಳನ್ನು ಅಲ್ಲಗಳೆಯಲಂತೂ ಸಾಧ್ಯವಿಲ್ಲ. ಮಕ್ಕಳ ಬರುವಿಕೆಯ ತಯಾರಿಗೆ ಮುಖ್ಯವಾದ ಪೂರ್ವತಯಾರಿಗಳನ್ನು ಹೇಳುತ್ತಾರೆ. ಈ ಸಂದರ್ಭದಲ್ಲಿನ ಬಯಕೆ, ಸುಸ್ತು ಹಾಗೂ ದೈಹಿಕವಾಗಿ ಆಗುವ ಬದಲಾವಣೆಗಳು.. ಇದರ ಜೊತೆಜೊತೆಗೆ ಹೊಂದಿಕೊಂಡು ಹೋಗುವ ಅಥವಾ ಹೊಂದಿಸಿಕೊಳ್ಳುವ ಪ್ರೀತಿಯ ರೀತಿಯೂ ಇಲ್ಲಿದೆ.


ತಾಯ್ತನದ ಮುಖ್ಯಘಟ್ಟ ಹೆರಿಗೆ. ಈಗ ವಜೈನಲ್ ಡೆಲಿವರಿ ಅಥವಾ ಸಿ-ಸೆಕ್ಷನ್ ಅಂದರೆ ಸಿಸೇರಿಯನ್ ಅಥವಾ ನಾರ್ಮಲ್ ಎಂಬುದು ವೈದ್ಯರು ತಾಯಿಯ ಆರೋಗ್ಯವನ್ನು ಹಾಗೂ ಆಗಿನ ಪರಿಸ್ಥಿತಿಯನ್ನು ನೋಡಿಕೊಂಡು ತೀರ್ಮಾನಿಸುತ್ತಾರಾದರೂ.. ನೋಡುವವರ ಕಣ್ಣಲ್ಲಿ ಹಾಗೂ ಹೆರಿಗೆಯಾದ ನಂತರ ನೋಡಲು ಬಂದವರ ಮಾತುಗಳಲ್ಲಿ ವ್ಯಕ್ತವಾಗುವ ನೋಟ ಹಾಗೂ ಭಾವಗಳು ಇಲ್ಲಿ ಹತ್ತಿರವೆನಿಸುತ್ತದೆ. ಎರಡೂ ರೀತಿಯ ಡೆಲಿವರಿಗಳಲ್ಲಿಯೂ ಅದರದ್ದೇ ಆದ ಕಷ್ಟಗಳಿವೆ.


ಸಾಂಪ್ರದಾಯಿಕ ಬಾಣಂತನ ಹಾಗೂ ಈಗಿನ ಕಾಲದಲ್ಲಿ ವೈದ್ಯರು ನೀಡುವ ಸಲಹೆಗಳಿಗೂ ಬಹಳ ವ್ಯತ್ಯಾಸಗಳಿವೆ. ಅದರಲ್ಲಿಯೂ ಈಗಿನ ತಾಯಂದಿರಿಗೆ ಅಮ್ಮ, ಅಜ್ಜಿಯರ ಅನುಭವದ ಮಾತನ್ನು ಪಾಲಿಸುವುದೋ ಅಥವಾ ವೈದ್ಯರ ಸಲಹೆಯಂತೆ ಮಕ್ಕಳನ್ನು ಲಾಲಿಸುವುದೋ ಎಂಬ ದ್ವಂದ್ವ ಕಾಡುವುದಂತೂ ಹೌದು. ಇಲ್ಲಿ ಕೆಲವೊಮ್ಮೆ ಅನುಭವಿಗಳ ಮಾತು ಗೆದ್ದರೆ ಕೆಲವೊಮ್ಮೆ ವೈದ್ಯರ ಮಾತು ಗೆಲ್ಲುತ್ತದೆ. ಅಂತಹ ವಿಚಾರಗಳು ಇಲ್ಲಿ ವ್ಯಕ್ತವಾಗಿವೆ. 


ಗರ್ಭಿಣಿಯಾಗಿರುವ ಸಮಯದಲ್ಲಿ ಮನಸ್ಸನ್ನು ಆದಷ್ಟು ಶಾಂತವಾಗಿಟ್ಟುಕೊಳ್ಳಲು ಹಾಗೂ ಭಾವನೆಗಳನ್ನು ಹೊರ ಹಾಕಿ ಹಗುರವಾಗಲು, ಟೆನ್ಶನ್ ಹಾಗೂ ಸ್ಟ್ರೆಸ್ ಗಳಿಂದ ಫ್ರೀ ಆಗಲು ವೈದ್ಯರೇ ಕೆಲವೊಮ್ಮೆ ಡೈರಿ ಬರೆಯುವಂತೆ ಸಲಹೆ ಕೊಡುತ್ತಾರೆ. ಆದರೆ, ತಾಯಿಯಾದ ನಂತರವೂ ತಮ್ಮ ಭಾವನೆಗಳನ್ನು ಹೊರ ಹಾಕುವುದು ಬಹಳವೇ ಮುಖ್ಯ. ಆ ಸಮಯದಲ್ಲಿ ಹೇಳುವ ಮಾತುಗಳು, ಕೇಳುವ ಪ್ರತಿ ವಿಚಾರಗಳಿಗೂ ಮೊದಲಿಗೆ ತಾಯಿ ಹೃದಯ ಪ್ರತಿಕ್ರಿಯಿಸುವುದಂತು ಹೌದು. ಬಾಣಂತನದ ಸಮಯದಲ್ಲಿ ವಿಶ್ರಾಂತಿ ಎಷ್ಟು ಮುಖ್ಯವೋ ಬೇಡದ ಭಾವನೆಗಳನ್ನು ದೂರವಿಡಲು ಹಾಗೂ ಮನಸ್ಸನ್ನು ಪ್ರಶಾಂತವಾಗಿರಿಸಿಕೊಳ್ಳುವುದು ಅಷ್ಟೇ ಮುಖ್ಯವಾಗುತ್ತದೆ. ಮಗುವಿನ ಆರೋಗ್ಯದಷ್ಟೇ ತನ್ನ ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಅತ್ಯಗತ್ಯ. ಬಾಣಂತಿ ಸನ್ನಿಯಂತಹಾ ಸಮಸ್ಯೆಯನ್ನು ದೂರವಿಡಬಹುದು. ಲೇಖಕಿ ಫೀಡ್ ಮಾಡುವ ಸಮಯದಲ್ಲಿ ಡಿಸ್ಟ್ರೆಸ್ ಟೈಮ್ ಎಂದು ಕೈಯಲ್ಲಿ ಪುಸ್ತಕ, ಮೊಬೈಲ್ ಮತ್ತು ಆಂಟಿ ಸ್ಟ್ರೆಸ್ ಬಾಲ್ ಹಿಡಿದುಕೊಳ್ಳುವ ಕುರಿತು ಉಲ್ಲೇಖಿಸುತ್ತಾರೆ. ಇದು ನಿಜಕ್ಕೂ ಪರಿಣಾಮಕಾರಿ.


ಈ ಜನರೇಶನ್ ನಲ್ಲಿ ಕೆಲಸಕ್ಕೆ ಹೋಗುವ ಅಮ್ಮಂದಿರೇ ಹೆಚ್ಚು. ಕೆಲವೊಮ್ಮೆ ತಮ್ಮ ಕೆರಿಯರ್ ನಿಂದ ಬ್ರೇಕ್ ತೆಗೆದುಕೊಂಡರೆ, ಕೆಲವರು ಮೆಟರ್ನಿಟಿ ಲೀವ್‌ಗಳನ್ನು ತೆಗೆದುಕೊಂಡಿರುತ್ತಾರೆ. ಅಂತಹವರು ಮಗು, ಕೆಲಸ ಎರಡನ್ನು ಬ್ಯಾಲೆನ್ಸ್ ಮಾಡುವುದು ಅಷ್ಟೇ ಮುಖ್ಯವಾಗುತ್ತದೆ. ಹಾಗಾಗಿ ಹಿಂದಿನಂತೆ ಪೂರ್ಣ ವಿಶ್ರಾಂತಿಯ ಬದಲು ಕೆಲಸ ಮಾಡಲು ತಯಾರಿ ಮಾಡಿಕೊಳ್ಳಲು   ಚಿಕ್ಕ ಪುಟ್ಟ ಚಟುವಟಿಕೆಯನ್ನು ಶುರು ಮಾಡುತ್ತಾ ತಮ್ಮನ್ನು ತಾವೇ ತಯಾರಿ ನಡೆಸಿರುತ್ತಾರೆ. ಇದೆಲ್ಲದಕ್ಕೂ ಕುಟುಂಬದ ಸಹಕಾರ ಮುಖ್ಯ. ಈ ಕುರಿತು ಕೆಲವೊಮ್ಮೆ ಅಮ್ಮಂದಿರಿಗೆ ಗಿಲ್ಟ್ ಕಾಡಬಹುದು. ಇದರ ಪ್ರಸ್ತಾಪವೂ ಇದೆ.


ಇದು ಮಿಲೇನಿಯಲ್ ಜನರೇಶನ್. ಆದ್ದರಿಂದ ಗೂಗಲ್ ಮಾಡಿ, ಪುಸ್ತಕಗಳನ್ನು ಓದಿ, ಯೂಟ್ಯೂಬ್ ನೋಡಿ ವ್ಲಾಗ್ ಗಳನ್ನು ನೋಡಿ.. ಹೀಗೆ ಹಲವಾರು ಅನುಭವಗಳ ಊಟೆಗಳನ್ನೇ ಕಟ್ಟಿಕೊಂಡರೂ.. ಹೊಸದೊಂದು ಸವಾಲಂತೂ ಇದ್ದೇ ಇರುತ್ತದೆ. ನಮ್ಮ ತಾಯಂದಿರ ಕಾಲದಲ್ಲಿ ಇದೇನು ಇರದಿದ್ದರೂ ಅವರು ಹೇಗೆ ಸಂಭಾಳಿಸಿದರು ಎನ್ನುವ ಆಲೋಚನೆಯೂ ಹುಟ್ಟುತ್ತದೆ. ಹಾಗೆಂದು, ಎಷ್ಟೋ ಬಾರಿ ಗೂಗಲ್ ಮಾಡಿ ನೋಡಿದ ವಿಚಾರಗಳು ಹೆಚ್ಚು ಆತಂಕ ಹುಟ್ಟಿಸುವುದು ನಿಜ. ಅಂತಹ ಸಂದರ್ಭದಲ್ಲಿ ಇದೆಲ್ಲಕ್ಕಿಂತ ಆ ಕಾಲವೇ ಚಂದವಿತ್ತೇನೋ ಎಂಬ ಭಾವ ಹುಟ್ಟುತ್ತಿದ್ದದ್ದೂ ಹೌದು. ಅಂತಹ ಕೆಲ ಪ್ರಸಂಗಗಳು ಇಲ್ಲಿವೆ.


ತಾಯ್ತನದ ಅವಧಿಯಲ್ಲಿ ಸಪೋರ್ಟ್ ಸಿಸ್ಟಮ್ ಎಷ್ಟು ಮುಖ್ಯ ಎಂಬ ಅರಿವಿನ ಜೊತೆಗೆ, ಈಗಿನ ಇನ್ಫ್ಲುಯೆನ್ಸರ್  ಗಳ ಕುರಿತು ಹೇಳುತ್ತಾರೆ. ಇನ್ನು ಈ ಎಲ್ಲಾ ಹಂತಗಳನ್ನೂ ದಾಟಿ ಮುಂದೆ ಹೊರಟರೆ.. ಮಕ್ಕಳನ್ನು ಸಾಕುವ ಸಂದರ್ಭದಲ್ಲಿ ಬರುವ ಸವಾಲುಗಳು, ಅದಕ್ಕಿಂತ ಹೆಚ್ಚಾಗಿ ತಾಯಂದಿರಾಗಿ ನಮ್ಮ ಆಲೋಚನೆಗಳು, ಕೆಲವೊಮ್ಮೆ ಗಿಲ್ಟ್ ಕಾಡುವ ಸಂದರ್ಭಗಳು ಹೀಗೆ ಎಲ್ಲವನ್ನು ತೆರೆದಿಡುತ್ತಾರೆ. 


ಒಂದು ಮಗುವಿನ ಪಾಲನೆ-ಪೋಷಣೆಗೂ ಅವಳಿ ಮಕ್ಕಳ ಪಾಲನೆ-ಪೋಷಣೆಗೂ ಬಹಳ ವ್ಯತ್ಯಾಸವಿದೆ. ಅದರಲ್ಲಿಯೂ ಮುಖ್ಯವಾಗಿ ಬಹಳಷ್ಟು ತಾಳ್ಮೆ ಬೇಕೇ ಬೇಕು. ಇಲ್ಲಿ ಲೇಖಕಿಯ ಅವಳಿ ಮಕ್ಕಳ ತಾಯ್ತನದ ಅನುಭವದ ನೋಟ ಸಿಗುತ್ತದೆ.


ಸುಖದ ಸುಪ್ಪತ್ತಿಗೆಯಲ್ಲಿ ಬೆಳೆದ ಮಿಲೇನಿಯಲ್ ಜನರೇಶನ್ ನವರಿಗೆ ನಮ್ಮ ಮಕ್ಕಳು ಆದಷ್ಟು ಸ್ವಲ್ಪ ಸಿಂಪಲ್ ಆಗಿ ಬೆಳೆಯಲಿ ಎನ್ನುವ ಅಭಿಲಾಷೆ. ಇದನ್ನು ನಾನು ಒಪ್ಪುತೇನಾದರೂ.. ಮಧ್ಯಮ ವರ್ಗದಲ್ಲಿ ಬೆಳೆದ ಮಿಲೇನಿಯಲ್ ಜನರೇಶನ್ ರವರು ನಮಗೆ ಸಿಗದ ಸವಲತ್ತುಗಳು ಅವರಿಗೆ ಸಿಗಲಿ ಎಂದು ಶ್ರಮಿಸುತ್ತೇವೆ ಎಂಬುದೂ ಅಷ್ಟೇ ನಿಜ. 


"ನಾನು ಮಿಲೇನಿಯಲ್ ಅಮ್ಮ ನಾನು. ಎಲ್ಲವನ್ನು ಬ್ಯಾಲೆನ್ಸ್ ಮಾಡ್ತೀನಿ. ಕೆಲವೊಮ್ಮೆ ತಪ್ಪು ಮಾಡುತ್ತೇನೆ. ಹಾಗೆಯೇ, ಎಲ್ಲವನ್ನು ಕಲಿಯುತ್ತೇನೆ. ಎಂಬುದೇ ಒಂದು ದೊಡ್ಡ ಮಂತ್ರ" ಎನ್ನುತ್ತಾರೆ ಲೇಖಕಿ. ಇದಂತೂ ಬಹಳ ಅವಶ್ಯಕ ಮಂತ್ರ. ಸೂಪರ್ ಮಾಮ್ ಆಗಲೇ ಬೇಕಿಲ್ಲ. ಆದರೆ, ನಮ್ಮ ಪುಟ್ಟ ಜೀವದ ಕಾಳಜಿ ಮಾಡುವ ಹಾಗೂ ಅವರಿಗೆ ಶಕ್ತಿ ತುಂಬುವ ಅಮ್ಮನಾಗಲೇಬೇಕು. 


ಶ್ರೀಕಲಾ ಅವರ ಬಾಳಂತಿ ಪುರಾಣ ಹಾಗೂ ಅನುಪಮಾ ನಿರಂಜನ ಅವರ ತಾಯಿ - ಮಗು ಪುಸ್ತಕವನ್ನಷ್ಟೇ ಓದಿದವಳಿಗೆ ಈ ವಿಚಾರದಲ್ಲಿ ಸಿಕ್ಕ ಮತ್ತೊಂದು ಪುಸ್ತಕ ಇದು. ಈ ಜನರೇಶನ್ ನಲ್ಲಿ ತಾಯಿಯಾಗುವವರು ಹಾಗೂ ತಾಯಿಯಾಗಿರುವವರಿಗೆ ಈ ಓದು ಆಪ್ತ ಭಾವ ನೀಡುವುದಂತೂ ನಿಜ. ಕೆಲವೊಮ್ಮೆ ಸಂಗಾತಿಯ ಜೊತೆ ಇಷ್ಟೆಲ್ಲಾ ಭಾವಗಳನ್ನು ಹಂಚಿಕೊಳ್ಳಲು ಅಸಾಧ್ಯ ಎನಿಸುವವರು ಈ ಪುಸ್ತಕವನ್ನು ಅವರಿಗೆ ಓದಲು ನೀಡಬಹುದು. 


ತಾಯ್ತನದ ದಿನಗಳ ಹಲವು ಆಲೋಚನೆಗಳು, ಹಲವು ಮಜಲುಗಳು ಹಾಗೂ ಹಲವಾರು ಅನುಭವಗಳ ಸಮಗ್ರ ರೂಪ ಇಲ್ಲಿದೆ. ಓದದವರು ಓದಿ ನೋಡಿ. ಮಿಲೇನಿಯಲ್ ಅಮ್ಮಂದಿರಿಗಂತೂ ಅತ್ಯಾಪ್ತವಾಗುತ್ತದೆ. 


~ವಿಭಾ ವಿಶ್ವನಾಥ್

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ