ಲೇಖಕರು : ಡಾ|| ಕೆ. ವಿ. ರಾಜೇಶ್ವರಿ
ಪ್ರಕಾಶಕರು : ಸಪ್ನ ಬುಕ್ ಹೌಸ್
ಪ್ರಥಮ ಮುದ್ರಣ : 2022 ನವೆಂಬರ್
ಪುಟಗಳು : 235
ಬೆಲೆ : 180 ರೂ.
'ಗಗನ ಕುಸುಮವ ಅರಸಿ' ಕಾದಂಬರಿಯಲ್ಲಿ ಪಿತೃವಾಕ್ಯ ಪರಿಪಾಲಕನಾದ ರಾಮನಂತಹ ಮಗ ಕಲಿಯುಗದಲ್ಲಿಯೂ ಕಾಣಸಿಗುತ್ತಾನೆ. ಅವನೇ ರಾಜೇಶ್.
ರಾಜೇಶ್ ಹಾಗೂ ರಶ್ಮಿ ಇಬ್ಬರೂ ಪರಸ್ಪರ ಪ್ರೀತಿಸುತ್ತಿದ್ದರು. ಈ ವಿಚಾರವನ್ನು ರಾಜೇಶ್ ತನ್ನ ತಂದೆಗೆ ಹೇಳಬೇಕಿತ್ತು, ರಶ್ಮಿಯ ಮನೆಯಲ್ಲಿ ಅದಾಗಲೇ ಈ ವಿಚಾರ ತಿಳಿದಿತ್ತು. ರಾಜೇಶ್ ತಂದೆಗೆ ತಮ್ಮ ಪ್ರೀತಿಯ ವಿಚಾರವನ್ನು ಹೇಳಲು ಸೂಕ್ತ ಸಮಯಕ್ಕಾಗಿ ಕಾಯುತ್ತಿದ್ದ. ಆ ಸಮಯವು ಇನ್ನೇನು ಹತ್ತಿರದಲ್ಲಿಯೇ ಇತ್ತು. ರಾಜೇಶನ ತಂದೆ ರಾಮಮೂರ್ತಿ ತಮ್ಮ ಗೆಳೆಯನ ಮಗಳ ವಿವಾಹಕ್ಕೆ ಬರುವವರಿದ್ದರು.
ಸದಾಶಿವ ಹಾಗೂ ಸರಸ್ವತಿ ದಂಪತಿಗಳಿಗೆ ನಾಲ್ವರು ಹೆಣ್ಣು ಮಕ್ಕಳು. ಹಿರಿಯವಳು ವನಜಾ. ಈಗ ಅವಳ ಮದುವೆಯೇ ನಿಶ್ಚಯವಾಗಿದ್ದದ್ದು. ಎಲ್ಲ ರೀತಿಯಲ್ಲಿಯೂ ವರಸ್ವಾಮ್ಯ ಕೂಡಿ ಬಂದು.. ಒಪ್ಪಿಗೆಯ ಜೊತೆಗೆ ವಿವಾಹ ನಿಶ್ಚಯವಾಗುವ ಸಂದರ್ಭದಲ್ಲಿ ವರ ಶ್ರೀಕಾಂತನ ತಂದೆಯಿಂದ ಇದ್ದದ್ದು ಏಕೈಕ ಕಂಡೀಶನ್. ವನಜಾ ಕೆಲಸಕ್ಕೆ ಹೋಗುವ ಹೆಣ್ಣುಮಗಳಲ್ಲವಾದ್ದರಿಂದ ಮನೆಗೆ ಸಂಪಾದನೆಯಾ ಆಗುವುದಿಲ್ಲ ಎಂಬ ವಾದವಿಟ್ಟು ಅವರು ಒಂದು ಲಕ್ಷ ರೂಪಾಯಿ ವರದಕ್ಷಿಣೆ ಕೇಳಿದರು. ಸದಾಶಿವ ಅವರು ತನ್ನ ಗೆಳೆಯ ರಾಮಮೂರ್ತಿ ತನಗೆ ಕೊಡಬೇಕಾದ ಒಂದು ಲಕ್ಷ ರೂಪಾಯಿಯನ್ನು ಕೊಟ್ಟರಾಯಿತು ಎಂದುಕೊಂಡು ಅದಕ್ಕೆ ಒಪ್ಪಿಗೆ ಕೊಟ್ಟಿದ್ದರು. ಆದರೆ, ಹೆಣ್ಣುಮಕ್ಕಳ ಮನಸ್ಸಿನಲ್ಲಿ ಸಂಪೂರ್ಣವಾಗಿ ಈ ವಿಚಾರಕ್ಕೆ ಸಮ್ಮತಿ ಇರಲಿಲ್ಲ. ಅವರೆಲ್ಲರೂ ವರದಕ್ಷಿಣೆಯ ವಿರೋಧವಾಗಿಯೇ ಇದ್ದರು.
ವರದಕ್ಷಿಣೆ ಕೇಳುವುದು ಹಾಗೂ ಕೊಡಲು ಒಪ್ಪುವುದು ಎರಡೂ ತಪ್ಪು ಎಂಬ ಅಭಿಪ್ರಾಯದ ಜೊತೆಗೆ ಸಾಕಷ್ಟು ಚರ್ಚೆಗಳಾಗುತ್ತವೆ. ಮಧ್ಯಮ ವರ್ಗದ ಕುಟುಂಬ, ಜೊತೆಗೆ ನಾಲ್ಕರ ಹೆಣ್ಣುಮಕ್ಕಳ ಮದುವೆಯನ್ನು ದೃಷ್ಠಿಯಲ್ಲಿಟ್ಟುಕೊಂಡ ತಂದೆ-ತಾಯಿ ಒಪ್ಪಿರುತ್ತಾರೆ.
ರಾಮಮೂರ್ತಿ ತನ್ನ ಪತ್ನಿಯ ತೀವ್ರ ಅನಾರೋಗ್ಯದ ಕಾರಣಕ್ಕಾಗಿ ಬಹಳ ಹಿಂದೆಯೇ ಸದಾಶಿವ ಅವರಿಂದ ಹಣವನ್ನು ಸಾಲವಾಗಿ ಪಡೆದಿರುತ್ತಾರೆ. ಬಡ್ಡಿ ಇಲ್ಲದೆ ತೆಗೆದುಕೊಂಡಿದ್ದ ಹಣ. ಅವರಿಗೆ ವಾಪಸು ಕೊಡಬೇಕೆಂದುಕೊಂಡಾಗಲೆಲ್ಲಾ ಒಂದಲ್ಲಾ ಒಂದು ತಾಪತ್ರಯಗಳು ಅಥವಾ ಅವಶ್ಯಕತೆಗಳು ಬಂದು ಹಣ ನೀಡಲು ಆಗಿರುವುದಿಲ್ಲ. ಈಗ ಮತ್ತೊಬ್ಬರಿಂದ ಪಡೆದಾದರೂ ಆ ಹಣ ಕೊಡುತ್ತೇನೆಂದು ನಿಶ್ಚಯಿಸಿ, ಹಣವನ್ನು ಹೊಂದಿಸಿಕೊಂಡು ಹೊರಟರು. ರಾಮಮೂರ್ತಿಯವರು ಮದುವೆಗೆ ಹೊರಟದ್ದು ಮದುವೆಯ ಹಿಂದಿನ ದಿನದಂದು, ಸದಾಶಿವ ಅವರು ಅವರ ಮೇಲೆ ಸಂಪೂರ್ಣ ನಂಬಿಕೆ ಇಟ್ಟು ಕಾಯುತ್ತಾರಾದರೂ ರಾಮಮೂರ್ತಿಯವರು ಹಣದೊಂದಿಗೆ ಮದುವೆ ಮಂಟಪವನ್ನು ತಲುಪುವುದೇ ಇಲ್ಲ.
ವರಪೂಜೆಯ ಹೊತ್ತಿಗೆ ಹಣ ಕೊಡುತ್ತೇನೆಂದು ಒಪ್ಪಿದ್ದರಾದರೂ... ರಾಮುಮೂರ್ತಿಯವರ ಮೇಲೆ ನಂಬಿಕೆ ಇಟ್ಟು ಎಲ್ಲಿಯೂ ಹಣ ಹೊಂದಿಸಲು ಹೋಗಿರಲಿಲ್ಲ. ಈಗ ಆ ಹಣವು ಕೈ ಸೇರದೆ ದಿಕ್ಕೇ ತೋಚದಂತಾಗಿದ್ದರು. ವರನ ತಂದೆ ನಿಷ್ಕರುಣಿಯಂತೆ ವಿವಾಹವನ್ನು ಮುರಿದು ನಡೆದಿದ್ದರು. ಶ್ರೀಕಾಂತನಿಗೆ ವನಜಾಳ ಮೇಲೆ ಮನಸ್ಸಿದ್ದರೂ ತಂದೆಯ ಮಾತು ಮೀರುವಂತಿರಲಿಲ್ಲ.
ಈ ಸಂದರ್ಭದಲ್ಲಿ ಹೃದಯಾಘಾತವಾಗಿ ಸದಾಶಿವ ಅವರು ತೀರಿಹೋಗುತ್ತಾರೆ. ಕಾರಣಾಂತರದಿಂದ ರಾಜೇಶ್ ವಿವಾಹ ಮಂಟಪಕ್ಕೆ ಬಂದಿರುವುದಿಲ್ಲ. ತಂದೆ ಬರಲಿಲ್ಲವೆಂದು ತಿಳಿದು ಹುಡುಕಿಕೊಂಡು ಹೊರಟವನಿಗೆ ರಾಮಮೂರ್ತಿ ಅವರು ಸಿಕ್ಕಿದಾಗ ಅವರ ಪರಿಸ್ಥಿತಿ ಏನಿತ್ತು..? ಆ ಸಂದರ್ಭಕ್ಕೆ ಕಾರಣವೇನು..?
ತನ್ನಿಂದಲೇ ತನ್ನ ಗೆಳೆಯನ ಸಾವು ಸಂಭವಿಸಿ, ಆತನ ಮಗಳ ವಿವಾಹವು ಮುರಿದದ್ದು ತಿಳಿದು ಬಹಳವೇ ನೊಂದಿದ್ದರು. ಮಗನಿಂದ ಒಂದು ಭಾಷೆಯನ್ನು ಪಡೆದರು. ರಾಜೇಶ ಅವಳನ್ನೇ ವಿವಾಹವಾಗಲು ಹೇಳುತ್ತಾರೆ ಎಂದುಕೊಂಡರೆ.. ಅದು ತಪ್ಪು.. ಬದಲಾಗಿ, ನಾಲ್ವರು ಹೆಣ್ಣುಮಕ್ಕಳ ವಿವಾಹವಾಗಿ ಅವರು ಬದುಕು ದಡ ಮುಟ್ಟುವವರೆಗೂ ಆ ಮನೆಗೆ ಸಹಾಯಕನಾಗಿ ಇರಬೇಕೆಂದು.
ಈ ಎಲ್ಲಾ ವಿಚಾರವನ್ನು ರಾಜೇಶ ಸರಸ್ವತಿ ಅವರ ಬಳಿ ಹೇಳಿದಾಗ ಅವರಿಂದ ಬಂದ ಪ್ರತಿಕ್ರಿಯೆ ಏನು..? ತನ್ನ ಗಂಡನ ಸಾವಿಗೆ ಕಾರಣರಾದವರ ಮಗನನ್ನು ಆಕೆ ಯಾವ ದೃಷ್ಟಿಯಿಂದ ನೋಡಿದರು..? ನಾಲ್ವರು ಹೆಣ್ಣು ಮಕ್ಕಳು ಆ ಪರಿಸ್ಥಿತಿಯಲ್ಲಿ ರಾಜೇಶನನ್ನು ಹೇಗೆ ಭಾವಿಸಿದರು..?
ಸದಾಶಿವ ಅವರ ಸಾವಿನ ನಂತರ ಆತನ ಕಡೆಯ ಬಂಧುಗಳಾಗಲಿ ಅಥವಾ ಸರಸ್ವತಿ ಅವರ ಕಡೆಯ ಬಂಧುಗಳಾಗಲಿ ಯಾರೂ ಇವರ ನೆರವಿಗೆ ನಿಂತಿರಲಿಲ್ಲ. ಬದಲಾಗಿ ' ಆ ಹೆಣ್ಣುಮಕ್ಕಳು ವೃದ್ಧ ಕನ್ಯೆಯರಾಗಿಯೇ ಸಾಯುತ್ತಾರೆ' ಎಂಬ ಕುಹಕದ ನುಡಿಗಳನ್ನು ಆಡಿದ್ದರು. ಅದು ಸರಸ್ವತಿಯವರು ಹಾಗೂ ಮಕ್ಕಳ ಮೇಲೆ ಪರಿಣಾಮ ಬೀರಿದ್ದು ಹೇಗೆ..?
ರಾಜೇಶ ಹಾಗೂ ರಶ್ಮಿಯ ನಡುವೆ ಇದೇ ವಿಚಾರಕ್ಕೆ ಭಿನ್ನಾಭಿಪ್ರಾಯ ಬಂದು ಅವರಿಬ್ಬರ ಪ್ರೇಮ ಮುರಿಯುತ್ತದೆ. ಇದಕ್ಕೆ ರಾಜೇಶನೇ ಕಾರಣ ಎಂದುಕೊಂಡರೆ ಅದು ತಪ್ಪಾಗುತ್ತದೆ. ಬದಲಾಗಿ, ರಶ್ಮಿಯ ತಂದೆ-ತಾಯಿಯ ಚಿತಾವಣೆ ಬೇರೆಯೇ ಇತ್ತು. ಇಲ್ಲಿ ರಶ್ಮಿಯನ್ನು ಮುಗ್ದೆ ಎನ್ನಬೇಕೇ ಅಥವಾ ಮೋಸಗಾತಿ ಎನ್ನಬೇಕೇ ಅಥವಾ ಸಮಯ ಸಾಧಕಿ ಎನ್ನಬೇಕೇ ನೀವೇ ಓದಿ ನೋಡಿ.
ಹೆಣ್ಣುಮಕ್ಕಳೇ ಗಂಡು ಮಕ್ಕಳಂತೆ ದುಡಿಯಲು ನಿಂತರೂ.. ಕೆಲವೊಂದು ವಿಚಾರಗಳಿಗೆ ರಾಜೇಶನ ನೆರವು ಬೇಕೆಂಬ ಸಂದರ್ಭಗಳು ಒದಗಿದವು. ಅಂತಹ ಸಮಯದಲ್ಲಿ ರಾಜೇಶನ ನಡೆ ಹೇಗಿತ್ತು..?
ತಂದೆಗೆ ಕೊಟ್ಟ ಮಾತಿನಂತೆ ನಡೆಯುವ ಅನಿವಾರ್ಯತೆ ಇಲ್ಲದಿದ್ದರೂ.. ರಾಜೇಶ ಬದುಕಿಲ್ಲದ ತನ್ನ ತಂದೆಯನ್ನು ತಾನು ಕೊಟ್ಟ ವಚನವನ್ನು ಪೂರ್ಣಗೊಳಿಸುವ ಮೂಲಕ ಬದುಕಿಸಿಕೊಳ್ಳುವ ಪ್ರಯತ್ನ ಮಾಡುತ್ತಾನೆ. ಬಹುಶಃ ಆತ ರಾಮಮೂರ್ತಿಯವರ ಮಾತನ್ನು ಪಾಲಿಸದೆ ಇದ್ದಿದ್ದರೆ ಏನಾಗುತ್ತಿತ್ತು..? ಇದಕ್ಕೆ ರಾಮಮೂರ್ತಿಯವರ ಇಬ್ಬರು ಹೆಣ್ಣು ಮಕ್ಕಳ ಪ್ರತಿಕ್ರಿಯೆ ಏನಿತ್ತು..?
ಇಲ್ಲಿ ರಾಜೇಶ್ ನಿಗೆ ರಶ್ಮಿ ಮಾತ್ರ ಗಗನ ಕುಸುಮವಾದಳೇ ? ಮತ್ತಾವ ಪ್ರಸಂಗ ಆತನನ್ನು ಹಾಗೆ ಯೋಚಿಸುವಂತೆ ಮಾಡುತ್ತದೆ..?
ಈ ಕಾದಂಬರಿಯ ಅಂತ್ಯ ಸುಖಾಂತ್ಯವೇ ಅಥವಾ ದುಃಖಾಂತ್ಯವೇ ಅಥವಾ ಎರಡನ್ನು ಮೀರಿದ ವಿಭಿನ್ನ ಅಂತ್ಯವೇ ನೀವೇ ಓದಿ ನೋಡಿ.
ಈ ಕಾದಂಬರಿಯಲ್ಲಿ ತಂದೆ ಮಕ್ಕಳ ಬಾಂಧವ್ಯ, ತಾಯಿ ಮಕ್ಕಳ ಅನುಬಂಧ, ಹೆಣ್ಣುಮಕ್ಕಳ ಧೈರ್ಯ,ಸ್ಥೈರ್ಯ, ಯಾವುದಕ್ಕೂ ಜಗ್ಗದೆ, ಸಮಾಜದ ಕುಹಕಗಳಿಗೆ ತಲೆಕೆಡಿಸಿಕೊಳ್ಳದೆ, ಗಟ್ಟಿಯಾಗಿ ನಿಲ್ಲುವ ಹೆಣ್ಣುಮಕ್ಕಳ ಗಟ್ಟಿತನ ಇಷ್ಟವಾಗುತ್ತದೆ.
~ವಿಭಾ ವಿಶ್ವನಾಥ್
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ