ಭಾನುವಾರ, ಏಪ್ರಿಲ್ 26, 2026

ಗಗನವೂ ಎಲ್ಲೊ ಭೂಮಿಯೂ ಎಲ್ಲೊ (ಪುಸ್ತಕ ಯಾನ - 400)


ಪುಸ್ತಕದ ಶೀರ್ಷಿಕೆ : ಗಗನವೂ ಎಲ್ಲೊ ಭೂಮಿಯೂ ಎಲ್ಲೊ

ಲೇಖಕರು : ಕೆ. ವಿ ರಾಜೇಶ್ವರಿ

ಪುಟಗಳು : 138

(ಉಳಿದ ವಿವರಗಳು ಲಭ್ಯವಿಲ್ಲ)


ಆಫೀಸಿನಲ್ಲಿ ರಜನಿ ಇಲ್ಲದೆ ಕರುಣಾ ಒಬ್ಬಂಟಿಯಾಗಿದ್ದಳು. ರಜನಿ ತನ್ನ ತಂಗಿಯ ಬಾಣಂತನ ಎಂದು ಮೂರು ತಿಂಗಳು ರಜೆ ಪಡೆದು ಅವಳ ಬದಲಿಗೆ ತಾತ್ಕಾಲಿಕವಾಗಿ ಮತ್ತೊಬ್ಬರನ್ನು ನೇಮಿಸಿ ಹೊರಟಿದ್ದಳು. ಅವಳು ಬರುವಷ್ಟರಲ್ಲಿ ಆಫೀಸಿನಲ್ಲಿ ಒಂದು ದೊಡ್ಡ ಬದಲಾವಣೆಯಾಗಿತ್ತು. 


ಮೊದಲಿದ್ದ ಡೈರೆಕ್ಟರ್ ಗೆ ಟ್ರಾನ್ಸ್ಫರ್ ಆಗಿ ಹೊಸ ಡೈರೆಕ್ಟರ್ ಬಂದಿದ್ದರು. ಅಷ್ಟೇ ಆಗಿದ್ದರೆ ಅದರಲ್ಲಿ ಏನೂ ಸ್ವಾರಸ್ಯವಿರುತ್ತಿರಲಿಲ್ಲ. ಆದರೆ, ಈಗ ಬಂದಿದ್ದವರು ತುಂಬಾ ಕಟ್ಟುನಿಟ್ಟಿನ ಮನುಷ್ಯ ಎಂಬ ವದಂತಿ ಹಬ್ಬಿತ್ತು. 


ಹೊಸದಾಗಿ ಬಂದಿದ್ದವರು ನಾಗರಾಜ್. ದಕ್ಷ ಹಾಗೂ ಪ್ರಾಮಾಣಿಕ ಅಧಿಕಾರಿ. ಅನ್ಯಾಯ, ಅಕ್ರಮ, ಮೈಗಳ್ಳತನಗಳನ್ನು ಸಹಿಸುತ್ತಿದ್ದವರಲ್ಲ. ವಯಸ್ಸಿನಲ್ಲಿ ಚಿಕ್ಕವರಾದರೂ.. ಕೆಲಸದಲ್ಲಿ ದಕ್ಷರಾಗಿದ್ದವರು. ಹೆಚ್ಚು ಮಾತನಾಡುವವರಲ್ಲ. ಮಾತಿಗಿಂತ ಕೃತಿಯ ಮೇಲೆ ಹೆಚ್ಚು ವಿಶ್ವಾಸವಿಟ್ಟಿದ್ದವರು. ಅಷ್ಟೇ ಅಲ್ಲದೆ.. ಕಷ್ಟದ ದುಡಿಮೆಯಿಂದ ಮಾತ್ರವೇ ಎಲ್ಲವನ್ನು ಸಾಧಿಸಬಹುದು ಎನ್ನುವ ವಿಶ್ವಾಸವಿಟ್ಟಿದ್ದ ಮನುಷ್ಯ. 


ಆದರೆ, ಹೊಸಬರು ಬಂದಾಗ.. ಹಳೆಯವರು ಹಾಗೂ ಹೊಸಬರ ನಡುವೆ ತುಲನೆ ಮಾಡುವುದು ಎಲ್ಲರಿಗೂ ಸರ್ವೇಸಾಮಾನ್ಯ. ಹಳೇ ಡೈರೆಕ್ಟರ್ ಆಗಿದ್ದವರು ಅಡ್ವಾನ್ಸ್ ಅಥವಾ ಪೇಮೆಂಟ್ ಗೆ ಯಾವತ್ತು ತಕರಾರು ಮಾಡಿದವರಲ್ಲ. ಅಹಂಕಾರವಿರಲಿಲ್ಲ. ಯಾರಿಗೂ ಬೈದವರಲ್ಲ, ತೊಂದರೆ ಮಾಡಿದವರೂ ಅಲ್ಲ. ರಜೆ ಕೇಳಿದರೆ ಸುಲಭವಾಗಿ ಮಂಜೂರಾಗುತ್ತಿತ್ತು. ದಿನದ ಹಾಜರಾತಿಯಲ್ಲಿ 15 ನಿಮಿಷ ರಿಯಾಯಿತಿ ಕೊಡುತ್ತಿದ್ದರು. ಹೀಗೆ ಹಳೆಯ ಹಾಗೂ ಹೊಸ ಡೈರೆಕ್ಟರ್ ರವರ ಗುಣಗಾನವಾಗುತ್ತಿತ್ತು. ಸುಮಾರು ಹತ್ತು ವರ್ಷದಿಂದ ಅವರೇ ಡೈರಕ್ಟರ್ ಆಗಿದ್ದರಿಂದ ಕೆಲಸಗಳು ಅಡೆತಡೆಯಿಲ್ಲದೆ ನಡೆಯುತ್ತಿದ್ದವು. 


ನಾಗರಾಜ್ ಪ್ರತಿಯೊಂದು ಸೆಕ್ಷನ್ನಿನ ಕೆಲಸದ ಬಗ್ಗೆ ತಿಳಿದುಕೊಂಡು, ಸಂಶಯಗಳನ್ನು ನಿವಾರಿಸಿಕೊಂಡು ನಂತರ ಸಮಸ್ಯೆಗಳಿಗೂ ಪರಿಹಾರವನ್ನು ಕೊಟ್ಟಾಗ ಎಲ್ಲರಿಗೂ ಖಾತ್ರಿಯಾಗಿತ್ತು. ಈತ ವಯಸ್ಸಿನಲ್ಲಿ ಚಿಕ್ಕವರಾದರೂ ಜ್ಞಾನದಲ್ಲಿ ಹಿರಿಯ ಎಂದು. ನಿಯಮಾವಳಿಗಳನ್ನು ನೋಡಿ ಅದಕ್ಕೆ ತಕ್ಕಂತೆ ಕೆಲಸ ಮಾಡುತ್ತಿದ್ದರು. 


ಲೋನ್ ಮತ್ತು ಫಂಡ್ ಸೆಕ್ಷನ್ನಿನ ಕೆಲಸದ ಬಗ್ಗೆ ತಪಾಸಣೆ ಆರಂಭಿಸಿದಾಗ ಅಲ್ಲಿನ ಗುಮಾಸ್ತೆ ನೀತಾ ವೈಯಕ್ತಿಕ ಜಗಳದಿಂದ ಒಬ್ಬರ ಅರ್ಜಿಯನ್ನು ಹರಿದು ಹಾಕಿದ್ದರು. ಅದರ ಕುರಿತು ತಿಳಿದಾಗ ತೆಗೆದುಕೊಂಡ ಕಟ್ಟನಿಟ್ಟಿನ ಕ್ರಮ ಕೈಗೊಂಡದ್ದು ಇವರ ಬಗ್ಗೆ ಮತ್ತಷ್ಟು ಭಯ ಮೂಡಿಸಿತ್ತು. ನೀತಾಳಂತೆ ಮೂರ್ನಾಲ್ಕು ಜನರಿಗೆ ಅಂತಹ ದೇಶ ಸಿಕ್ಕಾಗ ಎಲ್ಲರೂ ತಮ್ಮ ತಮ್ಮ ಕೆಲಸದಲ್ಲಿ ಅಚ್ಚುಕಟ್ಟಾಗಿ ತೊಡಗಿಸಿಕೊಂಡರು. ಲಂಚ ಕೇಳುವವರೆಗೂ ಇವರೆಂದರೆ ಸಿಂಹ ಸ್ವಪ್ನ ಎಂಬಂತಾಯಿತು. 


ಆದರೆ, ತಮ್ಮ ಕೆಲಸಕ್ಕೆ ಬರುವಾಗ ಹತ್ತು- ಹದಿನೈದು ನಿಮಿಷಗಳ ರಿಯಾಯಿತಿಯನ್ನೂ ಒಪ್ಪುತ್ತಿರಲಿಲ್ಲ. ಸಮಯಕ್ಕಿಂತ ಐದು ನಿಮಿಷ ಮುಂಚೆಯೂ ಬಿಡುವಂತಿರಲಿಲ್ಲ. ಕಟು ಮಾತುಗಳಿಂದಲೇ ತಪ್ಪನ್ನು ತೋರಿಸುತ್ತಿದ್ದರು. ಇವರ ಮೇಲಿನ ಭಯವೇ ಎಷ್ಟೋ ಬಾರಿ ಕೆಲಸಗಾರರು ತಪ್ಪುವಂತೆ ಮಾಡುತ್ತಿತ್ತು. ಸಿಕ್ ಲೀವ್ ಗಳನ್ನು ಪರಿಶೀಲನೆ ಮಾಡಿಯೇ ಕೊಡುತ್ತಿದ್ದದ್ದು. ರಜೆ ಅಷ್ಟು ಸುಲಭವಾಗಿ ಮಂಜೂರಾಗುತ್ತಿರಲಿಲ್ಲ. 


ಮೊದಲು ಅವರ ಪ್ರಾಮಾಣಿಕ ಕೆಲಸವನ್ನು ಮೆಚ್ಚಿಕೊಂಡವರೇ ಈಗ ಅವರ ಕಟ್ಟುನಿಟ್ಟಿನ ಕ್ರಮದಿಂದ ಆತನನ್ನು 'ಹಿಟ್ಲರ್' ಎಂದು ಕರೆಯುತ್ತಾ ದ್ವೇಷಿಸತೊಡಗಿದರು. 


ರಜನಿ ಆಫೀಸಿಗೆ ಬರುವಷ್ಟರಲ್ಲಿ ಇಷ್ಟು ಬದಲಾವಣೆಗಳಾಗಿದ್ದವು. ರಜನಿ ವಿಧವೆ, ಅಲ್ಲದೆ ಒಂದು ಮಗುವಿನ ತಾಯಿ. ವಯಸ್ಸಾದ ತಾಯಿಯನ್ನು ನೋಡಿಕೊಂಡು ಒಬ್ಬಂಟಿಯಾಗಿ ಎಲ್ಲವನ್ನೂ ಸರಿಪಡಿಸಿ ಆಕೆ ಬರುವಷ್ಟರಲ್ಲಿ ತಡವಾಗುತ್ತಿತ್ತು. ಅಲ್ಲದೆ, ಆಕೆಯೇ ನಾಗರಾಜ್ ಹೇಳಿದ ಡಿಕ್ಟೇಷನ್ ಗಳನ್ನು ಟೈಪ್ ಮಾಡಬೇಕಿದ್ದರಿಂದ ತಪ್ಪು ನುಸುಳಿಯೇ ಬಿಡುತ್ತಿದ್ದವು. ಕಟುಮಾತುಗಳನ್ನು ಕೇಳಬೇಕಾಗಿಯೇ ಬರುತ್ತಿತ್ತು. ತನ್ನ ತಾಯಿಗೆ ಸೀರಿಯಸ್ ಎಂದಾಗಲೂ ಬೇಗ ಕಳುಹಿಸಲು ಪರ್ಮಿಷನ್ ಕೊಡಲಿಲ್ಲ  ಅಲ್ಲದೆ, ಅವರು ತೀರಿಕೊಂಡಾಗ ದುಃಖದಲ್ಲಿ ರಜಾ ಅರ್ಜಿಯನ್ನು ಕೊಡಲು ಮರೆತು ಹೋದಾಗ ಆಕೆಗೆ ಬಂದದ್ದು ಸಸ್ಪೆನ್ಷನ್ ಆರ್ಡರ್. 


ಡೈರೆಕ್ಟರ್ ನ ಈ ನೀತಿಯನ್ನು ಖಂಡಿಸಿ ಯೂನಿಯನ್ ಲೀಡರ್ ಗಳು ಹಾಗೂ ಕಾರ್ಮಿಕರೆಲ್ಲರೂ ಸೇರಿ ವಿಭಿನ್ನವಾಗಿ ವಿರೋಧಿಸಲು ಶುರು ಮಾಡಿದರು. ಕರ್ತವ್ಯಕ್ಕೆ ಚ್ಯುತಿ ಬಾರದಂತೆ ಆ ವಿಭಿನ್ನವಾದ ಪ್ರತಿಭಟನೆ ಹೇಗಿತ್ತು..? ಇದಕ್ಕೆಲ್ಲಾ ರಜನಿ ಕಾರಣಳೇ..? 


ಆ ಪ್ರತಿಭಟನೆಯ ಕಾರಣವನ್ನು ಕೇಳಿದ ನಾಗರಾಜನಿಗೆ ಹೇಳಬೇಕಿದ್ದ ಮಾತುಗಳನ್ನು ಹೇಳಲು ಸಾಧ್ಯವಾಗದೆ ಹೋದದೇಕೆ..? ನಾಗರಾಜನ ಮನಸ್ಥಿತಿ ಏನಿತ್ತು..?


ಪ್ರತಿಭಟನೆ ನಡೆದ ಮರುದಿನವೇ ನಾಗರಾಜ್ ತನ್ನ ತಾಯಿ ಕೊಟ್ಟ ಟೆಲಿಗ್ರಾಂನಿಂದ ಊರಿಗೆ ಹೋಗಬೇಕಾಗಿ ಬರುತ್ತದೆ. ಅವರ ಮನೆಯ ಪರಿಸ್ಥಿತಿ ಹೇಗಿತ್ತು..?


ಆಫೀಸ್ ನಲ್ಲಿ ಮಾತ್ರವಲ್ಲದೆ,ಮನೆಯಲ್ಲಿಯೂ ತನ್ನ ತಂಗಿ ಜಲಜಾಳಿಂದ ಆತ ಕಟು ಮನಸ್ಥಿತಿಯವನು ಎಂಬ ಮಾತು ಕೇಳಲು ಕಾರಣವೇನು..? 


ಆಫೀಸು ಹಾಗೂ ಮನೆಯ ಪರಿಸ್ಥಿತಿ ಎರಡು ಸೇರಿ ನಾಗರಾಜನನ್ನು ಜರ್ಜರಿತವಾಗಿಸಿದಾಗ ಸಹಾಯಕ್ಕೆ ನಿಂತವರಾರು..?


ಮುಂದಿನ ದಿನಗಳಲ್ಲಿ ಆತನ ಕಟು ವರ್ತನೆ ಬದಲಾಯಿತೇ ಅಥವಾ ಇದು ಮತ್ತಷ್ಟು ಕಠಿಣವಾಯಿತೇ..?


ಕೆಲಸದ ಕಟ್ಟುನಿಟ್ಟು, ಪ್ರಾಮಾಣಿಕತೆ ಜೊತೆಗೆ ಮಾನವೀಯತೆ ಎಷ್ಟಿರಬೇಕು ಎಂದು ಹೇಳುವ ಕಾದಂಬರಿ ಇದು. ಈ ಕಾದಂಬರಿಯ ಶೀರ್ಷಿಕೆ ಮತ್ತೊಂದು ಕಥೆಯನ್ನೇ ಹೇಳುತ್ತದೆ. ಇಲ್ಲಿ ಗಗನ ಹಾಗೂ ಭೂಮಿಯಂತಿದ್ದವರು ಯಾರು..? ಅಂತಹ ಎರಡು ಮನಸ್ಥಿತಿಗಳು ಒಂದಾಗಲು ಸಾಧ್ಯವೇ..? ಓದಿ ನೋಡಿ.


ಮನುಷ್ಯನ ಮನಸ್ಥಿತಿ, ಪರಿಸ್ಥಿತಿ, ಆತ ಬೆಳೆದು ಬಂದ ವಾತಾವರಣ, ವೈಯಕ್ತಿಕ ಸ್ಥಿತಿಗತಿಗಳು ಎಲ್ಲವೂ ಮನುಷ್ಯನನ್ನು ರೂಪಿಸುತ್ತವೆ. ಕಷ್ಟಗಳು ಅವರನ್ನು ಮೆದುವಾಗಿಸಬಹುದು ಅಥವಾ ಮತ್ತಷ್ಟು ಕಠಿಣವಾಗಿಸಲುಬಹುದು. ಅದು ಆಯಾ ಮನುಷ್ಯನ ಮೇಲೆ ಅವಲಂಬಿತ. ಆದರೆ, ತಿದ್ದಿಕೊಳ್ಳುವ ಮನಸ್ಥಿತಿ ಇದ್ದವರು ಮಾತ್ರ ಬದಲಾಗಬಲ್ಲರು. ಅಂತಹ ಬದಲಾವಣೆ ಅಷ್ಟು ಸುಲಭವಲ್ಲ. ಸಮಾಜದ ನಾನಾ ಮುಖಗಳ ಚಿತ್ರಣವನ್ನು ತೋರಿಸುವ ಕಾದಂಬರಿ ಇದು.

~ವಿಭಾ ವಿಶ್ವನಾಥ್

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ