ಪುಸ್ತಕದ ಶೀರ್ಷಿಕೆ : ಕೀಲುಗೊಂಬೆ
ಲೇಖಕರು : ತ್ರಿವೇಣಿ
ಪ್ರಕಾಶಕರು : ಭಾರತೀ ಪ್ರಕಾಶನ
ಮರು ಮುದ್ರಣ : 2025
ಪುಟಗಳು : 158
ಬೆಲೆ : 140 ರೂ.
ಹೆಣ್ಣಿನ ಮನಸ್ಸಿನ ಭಾವನೆಗಳನ್ನು ಶಕ್ತವಾಗಿ ಬಿಂಬಿಸುವಲ್ಲಿ ತ್ರಿವೇಣಿಯವರ ಕಾದಂಬರಿಗಳು ಗೆದ್ದಿವೆ. ಕೀಲುಗೊಂಬೆ ಆ ಕಾಲಘಟ್ಟಕ್ಕೆ ಮಾತ್ರವಲ್ಲ.. ಇಂದಿನ ದಿನಗಳಿಗೂ ಹೊಂದುವ ಕಾದಂಬರಿ.
ಹೆಣ್ಣನ್ನು ಕೀಲುಗೊಂಬೆ ಆಡಿಸಿದಂತೆ ಆಡಿಸುತ್ತಾ ಆಕೆಯ ಮನಸ್ಸಿನ ಭಾವನೆಗಳನ್ನು ಪರಿಗಣಿಸದೆ, ತನ್ನಿಷ್ಟಕ್ಕೆ ಬೇಕಾದಂತೆ, ತನ್ನ ಆಸೆ-ಆಕಾಂಕ್ಷೆಗಳನ್ನು ತೀರಿಸಿಕೊಳ್ಳಲು ಮಾತ್ರ ಬಳಸುವ ಗಂಡಿನ ದಬ್ಬಾಳಿಕೆಯ ನೋಟವಿದ್ದಂತೆ.. ಆಕೆಯನ್ನು ಅರ್ಥ ಮಾಡಿಕೊಳ್ಳುವ ಮತ್ತೊಂದು ಗಂಡು ಸಹ ಕಾಣಿಸುತ್ತಾನೆ. ಒಂದು ಪಾತ್ರ ಗಂಡನದ್ದಾದರೆ ಮತ್ತೊಂದು ಮಗನದ್ದು.
ಚಿಕ್ಕ ವಯಸ್ಸಿನಲ್ಲಿಯೇ ಗಂಡನನ್ನು ಕಳೆದುಕೊಂಡು, ಇದ್ದೊಬ್ಬ ಮಗನನ್ನೇ ಸರ್ವಸ್ವವೆಂದು ಭಾವಿಸಿ ತುಂಬು ಸಂಸಾರದಲ್ಲಿ ಮೂಕವೇದನೆ ಸಹಿಸುತ್ತಾ ಬದುಕಿದ್ದ ನಂಜಕ್ಕನನ್ನು ಈಗ ಮಗ-ಸೊಸೆ ಚೆನ್ನಾಗಿಯೇ ಆದರಿಸುತ್ತಿದ್ದರು. ರತ್ನ ಹಾಗೂ ವೆಂಕಟೇಶಯ್ಯನವರಿಗೆ ನಾಲ್ಕು ಜನ ಮಕ್ಕಳಿದ್ದು ಈ ಐದನೆಯ ಮಗುವಾಗುವುದರಲ್ಲಿತ್ತು. ಹಿರಿಯವಳೇ ಸೀತೆ. ಇದು ಮುಖ್ಯವಾಗಿ ಸೀತೆಯ ಕಥೆಯೇ ಎನ್ನಿಸಿದರೂ.. ಸೀತೆಯಂತೆ ವನವಾಸವನ್ನು ಅನುಭವಿಸುತ್ತಿದ್ದ ಆಕೆಯ ಕಷ್ಟಗಳೇನೂ ಕಡಿಮೆ ಇರಲಿಲ್ಲ.
ಸೀತೆಗೆ 12 ವರ್ಷ ತುಂಬುತ್ತಿದ್ದಂತೆ ನಂಜಕ್ಕನ ಒತ್ತಾಯ ಶುರುವಾದರೂ.. ವೆಂಕಟೇಶಯ್ಯನವರಿಗೆ ಅವಳನ್ನು ಹೈಸ್ಕೂಲು ಓದಿಸದೆ ವಿವಾಹ ಮಾಡುವ ಮನಸ್ಸಿರಲಿಲ್ಲ
ಲಾವಣ್ಯವತಿ ಸೀತೆಗೆ ಗಂಡು ಹುಡುಕುವುದು ಕಷ್ಟವಿಲ್ಲ ಎಂದು ವೆಂಕಟೇಶಯ್ಯನವರು ಭಾವಿಸಿದ್ದರೂ ಆಕೆಯ ಮದುವೆ ಅಷ್ಟು ಸುಲಭವಿರಲಿಲ್ಲ. ಅದಕ್ಕೆ ಕಾರಣ ವರದಕ್ಷಿಣೆ. ಈ ಬಿಸಿ ತಾಗುತ್ತಿದ್ದಂತೆಯೇ ವೆಂಕಟೇಶಯ್ಯನವರ ಪ್ರಯತ್ನ ಜೋರಾಗಿಯೇ ಸಾಗಿತು. ಒಂದು ವರ್ಷದ ಸತತ ಪ್ರಯತ್ನದ ನಂತರ ತುಂಬು ಕುಟುಂಬದ ಲಾಯರ್ ಮನೆಗೆ ಸಂಬಂಧ ಕೂಡಿಬಂದಿತ್ತು. ಹೈಸ್ಕೂಲು ಮೇಷ್ಟ್ರಾಗಿದ್ದ ನರಸಿಂಹಯ್ಯ ಸೀತೆಗೆ ವರನಾಗಿ ಸಿಕ್ಕಿದ್ದ. ತುಂಬು ಕುಟುಂಬಕ್ಕೆ ಸೀತೆಯನ್ನು ಕಳಿಸುವುದು ತಾಯಿಗೆ ಅಷ್ಟಾಗಿ ಇಷ್ಟವಿಲ್ಲದಿದ್ದರೂ ಪರಿಸ್ಥಿತಿಯ ಪ್ರಭಾವದಿಂದ ವಿವಾಹ ನೆರವೇರಿತು.
ವಯಸ್ಸಿನ ಅಂತರವಿದ್ದುದು ಹೌದಾದರೂ.. ನರಸಿಂಹಯ್ಯ ಬಯಸುತ್ತಿದ್ದುದು ಪತ್ನಿ ತನಗೆ ವಿಧೇಯಳಾಗಿ ಇರಬೇಕೆಂದು. ತನ್ನ ಮನಸ್ಸಿನ ಆಸೆಗಳನ್ನು ಅವಳಿಗೆ ಅರ್ಥ ಮಾಡಿಸುವ ಬದಲಾಗಿ ಕಟುವಾಗಿ ನಡೆದುಕೊಂಡಿದ್ದ. ಮೊದಲ ಭೇಟಿಯಲ್ಲಿಯೇ ನರಸಿಂಹಯ್ಯನ ನಡೆ ಸೀತೆಗೆ ಭಯ ಮೂಡಿಸಿತ್ತು. ಎರಡು ವರ್ಷದ ನಂತರ ದಾಂಪತ್ಯ ಶುರುವಾದರೂ.. ಅಷ್ಟು ತಿಳುವಳಿಕೆ ಇಲ್ಲದ ಸೀತೆಗೆ ಹಿಂಸೆಯಾಗಿತ್ತು. ಪಶುವಾಗಿದ್ದವನ ಮುಂದೆ ಅವಳು ಪರಾಜಿತಳಾಗಿದ್ದಳು. ಆಗ ಶುರುವಾದ ಹಿಂಸೆ ಮುಂದುವರಿಯುತ್ತಲೇ ಹೋಯಿತು. ತಂದೆಯ ಮನೆಯಲ್ಲೂ ತಿಳುವಳಿಕೆ ನೀಡದೆ, ಗಂಡ ಪ್ರೀತಿಯಿಂದ ನೋಡಿಕೊಳ್ಳದೆ ಸೀತೆಗೆ ಸಂಸಾರವೆಂದರೆ ಗಂಡ ಹೇಳಿದ್ದು ಕೇಳುವುದಷ್ಟೇ ಆಯ್ತು.
ಸೀತೆ ಗಂಡನ ಮನೆಗೆ ಹೋದಾಗ ಅಲ್ಲಿ ತುಂಬಿದ ಕುಟುಂಬದ ಜೊತೆ ವಾಸ ಮಾಡಬೇಕಾಗಿ ಬಂದಿತು. ಬೆಳಿಗ್ಗೆಯಿಂದ ರಾತ್ರಿವರೆಗೂ ದುಡಿತ. ತಾಯಿಯ ಮನೆಯಲ್ಲಿ ಯಾವ ಕೆಲಸವನ್ನೂ ಮಾಡಿ ಅಭ್ಯಾಸವಿರಲಿಲ್ಲ. ಅಮ್ಮ ಹಾಗೂ ಅಜ್ಜಿ ಹೇಳಿದ ಕೆಲಸವನ್ನಷ್ಟೇ ಮಾಡಿದ್ದು. ಮೊದಲಿಗೆ ಕಷ್ಟವಾದರೂ ಕಾವೇರಮ್ಮನಂತಹ ಅತ್ತೆ ಸಿಕ್ಕಿದ್ದು ಅವಳ ಪಾಲಿಗೆ ನೆಮ್ಮದಿ. ಕಾವೇರಮ್ಮನ ಆರೈಕೆ ಹಿಡಿಸದ್ದು ಆ ಮನೆಯಲ್ಲಿ ಕಾವೇರಮ್ಮನ ಓರಗಿತ್ತಿ ಜಾನಕಿಗೆ ಮಾತ್ರವೇ.. ಉಳಿದವರೆಲ್ಲರೂ ಜಾನಕಿಯನ್ನು ಪ್ರೀತಿಯಿಂದಲೇ ನೋಡಿಕೊಳ್ಳುತ್ತಿದ್ದರು.
ಆದರೆ, ನರಸಿಂಹಯ್ಯನ ವರ್ತನೆ ಅವಳ ಪಾಲಿಗೆ ನುಂಗಲಾರದ ತುತ್ತು. ಇತರರ ಪಾಲಿಗೆ ಆಕೆ ಚೆನ್ನಾಗಿ ಕಾಣಬಾರದು ಎಂಬ ಆತನ ಸಿಡಿಮಿಡಿ ಹೊರಗೆ ಕರೆದುಕೊಂಡು ಹೋಗದೆ ಆಕೆ ಕೇವಲ ಸ್ವತ್ತು ಎಂಬಂತೆ ನಡೆದುಕೊಳ್ಳುವ ಪರಿ, ಇದೆಲ್ಲದರ ನಡುವೆ ಸೀತೆ ಮನೆ ಕೆಲಸಗಳನ್ನು ಒಂದೊಂದಾಗಿ ಹಚ್ಚಿಕೊಂಡು ಅತ್ತೆಯ ಮನೆಗೆ ಹೊಂದಿಕೊಳ್ಳುವಷ್ಟರಲ್ಲಿ ಗರ್ಭ ನಿಂತಿತ್ತು. ಆದರೆ, ಮನೆಯಲ್ಲಿ ನಡೆದ ಒಂದು ಘಟನೆಯಿಂದ ಆ ಕನಸು ಕಮರಿ ಹೋಗಿತ್ತು.
ತಂಗಿಯ ಮದುವೆಗೂ ಬೇಗ ಹೋಗಲು ಗಂಡನ ಅನುಮತಿ ಸಿಗಲಿಲ್ಲ. ಅದಾದ ನಂತರ ಒಂದು ವಾರ ತಾಯಿಯ ಮನೆಯಲ್ಲಿರುವಷ್ಟರಲ್ಲಿ ನರಸಿಂಹಯ್ಯನವರ ಕಾಗದ ಆತನಿಗೆ ವರ್ಗವಾದ ಸುದ್ದಿ ತಂದಿತ್ತು. ಅತ್ತೆಯ ಮನೆಯಲ್ಲಿಯಾದರೂ ಅವರ ಪ್ರೀತಿಯ ಒಡನಾಟವಿತ್ತು. ಈಗ ಅದೂ ತಪ್ಪಿ ಹೋಗಿ ತುಮಕೂರಿನಲ್ಲಿ ಒಂಟಿಯಾಗಿರುವ ಪರಿಸ್ಥಿತಿ. ತುಂಬಿದ ಮನೆಯಲ್ಲಿದ್ದವಳಿಗೆ ಈಗ ಒಂಟಿತನ ಕಾಡುತ್ತಿತ್ತು. ಹೆಣ್ಣಿಗೂ ಹೃದಯವಿದೆ. ಗಂಡನ ಪ್ರೀತಿ, ವಿಶ್ವಾಸ, ಸ್ನೇಹವನ್ನು ಬಯಸುತ್ತಾಳೆ ಎಂಬ ಯೋಚನೆಯೂ ಇಲ್ಲದ ನರಸಿಂಹಯ್ಯನ ಜೊತೆಯಲ್ಲಿ ಬದುಕುತ್ತಿದ್ದ ಸೀತೆಗೆ ಮುಂದೆ ಮಗ ಹುಟ್ಟಿದ. ಅವನೇ ಮಧುಸೂದನ. ಅವನು ಹುಟ್ಟಿ ಇಬ್ಬರು ಉಳಿದದ್ದೇ ಹೆಚ್ಚು. ಹಾಗೂ ಹೀಗೂ ಸೀತೆ ತಾಯಿಯ ಮನೆಯಲ್ಲಿ ಸುಧಾರಿಸಿಕೊಂಡು ಮರಳಿ ಬಂದಳು. ತಾಯಿಯ ಮನೆಯ ವಾಸ ಅವಳಿಗೆ ಶಕ್ತಿಯನ್ನು ಚೈತನ್ಯವನ್ನು ನೀಡಿತ್ತು. ಆದರೆ ನಿರಂತರ ಬಸಿರು, ಗರ್ಭಪಾತ ಮತ್ತೆ ಆಕೆಯನ್ನು ಹಣ್ಣು ಮಾಡಿದ್ದು ಹೌದು.
ನರಸಿಂಹಯ್ಯನಿಗೆ ಕೇವಲ ಹೆಂಡತಿಯ ಮೇಲೆ ಮಾತ್ರವಲ್ಲ ಮಗುವಿನ ಮೇಲೆಯೂ ಪ್ರೀತಿ ಮೂಡಲಿಲ್ಲ. ದೊಡ್ಡವನಾಗುತ್ತಾ ಬಂದಂತೆ ಮಧುವಿಗೆ ತಂದೆಯ ಮನಸ್ಸು ತಿಳಿಯುತ್ತಾ ಬಂದಿತ್ತು. ತಾಯಿಯ ಮೇಲಿನ ಒರಟು ವರ್ತನೆ ನೋಡಿ ತಂದೆಯನ್ನು ಕಂಡರೆ ಅವನಿಗೆ ಪ್ರೀತಿ, ವಿಶ್ವಾಸ ಹುಟ್ಟಲಿಲ್ಲ. ವಂಶೋದ್ಧಾರಕ್ಕಾಗಿ, ಸತ್ತ ಮೇಲೆ ತನಗೆ ಗತಿ ನೀಡುವುದಕಷ್ಟೇ ಆತನಿಗೆ ಮಗನ ಅವಶ್ಯಕತೆ ಇದ್ದದ್ದು. ಸ್ಕಾಲರ್ಶಿಪ್ಪಿನಲ್ಲಿ ಓದುತ್ತಾ ತನ್ನದೇ ವ್ಯಕ್ತಿತ್ವ ಬೆಳೆಸಿಕೊಂಡವನಿಗೆ ಅಮ್ಮನೇ ಎಲ್ಲವೂ. ಆದರೆ, ಅಮ್ಮನ ಕಷ್ಟವನ್ನು ನೋಡಲಾರ.
ಒಂದು ಸಂದರ್ಭದಲ್ಲಿ ರೋಹಿಣಿ ಸೀತಮ್ಮನಿಗೆ ಸಹಾಯಕಳಾಗಿ ಬಂದಳು. ಓದಿದ್ಧ ಆಕೆ ತನ್ನ ಕೆಲಸ ಮುಗಿಸಿಕೊಂಡು ಮನೆಯನ್ನು ಚೊಕ್ಕಟ ಮಾಡುತ್ತಿದ್ದದ್ದು, ಪುಸ್ತಕ ಓದುತ್ತಿದ್ದದ್ದು, ಕುಶಲ ಕಲೆಗಳು ಹಾಗೂ ತನ್ನ ವ್ಯಕ್ತಿತ್ವದಿಂದ ಗೌರವ ಗಳಿಸಿಕೊಂಡಳು. ಸೀತಮ್ಮನಿಗಂತೂ ಆಕೆ ಗೆಳತಿಯಂತೆಯೇ ಆದಳು.
ತಾಯಿಯಂತೆ ಮೃದು ಸ್ವಭಾವದವನಾಗಿದ್ದ ಮಧು ಸಮಯ ಬಂದಾಗ ಅಷ್ಟೇ ಒರಟನೂ ಆಗಬಹುದಾದ ಕೆಲ ಸಂದರ್ಭಗಳೂ ಇದ್ದವು. ರೋಹಿಣಿ ಹಾಗೂ ಮಧುವಿನ ವಯಸ್ಸು ಇಬ್ಬರಲ್ಲಿಯೂ ಸ್ನೇಹ ಮೂಡಿಸಿತ್ತಾದರೂ ಕೆಲವೊಮ್ಮೆ ಇಬ್ಬರಲ್ಲಿಯೂ ಭಿನ್ನಾಭಿಪ್ರಾಯವನ್ನು ಮೂಡಿಸಿದ್ದೂ ಇದೆ.
ಮಧುವಿನ ಪರೀಕ್ಷೆಯ ಸಂದರ್ಭದಲ್ಲಿಯೇ ಸೀತಮ್ಮ ಆಸ್ಪತ್ರೆಗೆ ಸೇರಬೇಕಾಗಿ ಬಂದಿತು. ಎಲುಬಿನ ಗೂಡಾದ ಅವಳ ಮೇಲೆ ನರಸಿಂಹಯ್ಯ ಇನ್ನೂ ಅಧಿಕಾರ ಚಲಾಯಿಸುವುದು ನಿಂತಿರಲಿಲ್ಲ. ಸೀತಮ್ಮ ಮನೆಗೆ ಬಂದು ಸೇರಿದರಾದರೂ ರೋಹಿಣಿಗೆ ಮದುವೆ ಗೊತ್ತಾಗಿತ್ತು. ಅವಳ ಜಾಗಕ್ಕೆ ಭಾಗಮ್ಮ ಬಂದರಾದರೂ ಅಷ್ಟು ಆಪ್ತತೆ ಬರಲಿಲ್ಲ.
ಸೀತಮ್ಮನ ಪರಿಸ್ಥಿತಿಯಂತೂ ತೀರ ಹದಗೆಟ್ಟು ಸಾವು-ಬದುಕಿನ ಜೊತೆ ಹೋರಾಡಿ ಆಸ್ಪತ್ರೆಯ ಸ್ಪೆಷಲ್ ವಾರ್ಡ್ ನ ವಾಸ ಶುರುವಾಗಿತ್ತು. ಈ ಆಸ್ಪತ್ರೆ ವಾಸದಲ್ಲಿ ಹಲವಾರು ರೋಗಿಗಳು ಹಾಗೂ ಹಲವಾರು ವ್ಯಕ್ತಿತ್ವಗಳ ವಿಭಿನ್ನತೆಯ ಅನಾವರಣವಾಗುತ್ತದೆ. ಆ ಕಾಲಕ್ಕೆ ಮಧುರವಾಣಿಯ ಪಾತ್ರ ತೀರ ಮುಂದುವರೆದ ಎನ್ನುವಂತೆನಿಸಿದರೂ.. ಇಂದಿನ ಕಾಲಕ್ಕೆ ಇಂತಹ ಮಧುರವಾಣಿಯರು ಹಲವಾರು ಜನರು ಕಾಣಸಿಗುತ್ತಾರೆ.
ಕೆಲವೊಮ್ಮೆ ಮಧುರವಾಣಿಯ ಮಾತುಗಳು ಒರಟಾಗಿದ್ದರೂ.. ಅವಳು ಸತ್ಯವನ್ನೇ ಹೇಳುತ್ತಿದ್ದಳು. ಗಂಡ-ಹೆಂಡಿರ ಅನ್ಯೋನ್ಯತೆ, ಮುಕ್ತ ಮಾತುಕತೆ, ಮಕ್ಕಳ ಭವಿಷ್ಯದ ಯೋಚನೆ ಇಷ್ಟವಾಗುತ್ತದೆ. ಮಧುರವಾಣಿ ಹಾಗೂ ವಿಶ್ವನಾಥರ ದಾಂಪತ್ಯದಂತೆ ತನ್ನ ತಂದೆ-ತಾಯಿಯರೂ ಇರಬಾರದೇ ಎಂದು ಮಧುಸೂದನನಿಗೆ ಅನ್ನಿಸಿದ್ದೂ ಹೌದು.
ಗಂಡು ಮಗುವಿನ ನಿರೀಕ್ಷೆಯಲ್ಲಿರುವವರಿಗೆ ಹೆಣ್ಣು ಹುಟ್ಟಿದ್ದು, ಮಡಿ ಹೆಂಗಸಿಗೆ ಮಗುವಾದದ್ದು, ಸುಭದ್ರಮ್ಮನ ದೊಡ್ಡತನ ಹೀಗೆ ಸೀತಮ್ಮ ಆಸ್ಪತ್ರೆಗೆ ಸೇರಿದ ಎರಡೂವರೆ ತಿಂಗಳಲ್ಲಿ ವಿವಿಧ ಸ್ವಭಾವದ ಹೆಂಗಸರನ್ನು ನೋಡಿದ್ದರು. ಲೇಖಕಿ ಅವರ ಕಣ್ಣಿನಲ್ಲಿ ನಮಗೂ ಅದೆಲ್ಲದರ ದರ್ಶನ ಮಾಡಿಸುತ್ತಾರೆ.
ಸೀತಮ್ಮನ ಮುಂದಿನ ಭವಿಷ್ಯ ಏನಾಯ್ತು..? ನರಸಿಂಹಯ್ಯ ಬುದ್ಧಿ ಕಲಿತನೇ..? ಮಧುಸೂದನನ ಮುಂದಿನ ಜೀವನ ಹೇಗಿತ್ತು..? ಆತನ ಆಲೋಚನೆಗಳೇನು..? ಎಲ್ಲವನ್ನೂ ತಿಳಿಯಲು ಓದಿ ಕೀಲುಗೊಂಬೆ ಕಾದಂಬರಿಯನ್ನು
ಹೆಣ್ಣನ್ನು ಕೀಲುಗೊಂಬೆಯಂತೆ ಆಡಿಸುವ ಗಂಡನ್ನು ನೋಡಿ, ಅದೇ ವಾತಾವರಣದಲ್ಲಿದ್ದರೂ.. ಅದನ್ನು ಧಿಕ್ಕರಿಸುವ ಹಾಗೂ ತನ್ನದೇ ಆಲೋಚನೆ ಬೆಳೆಸಿಕೊಳ್ಳುವ ಮಧುಸೂದನನ ಪಾತ್ರ ಇಷ್ಟವಾಗುತ್ತದೆ. ಎಲ್ಲಕ್ಕಿಂತಲೂ ಮಧುರವಾಣಿಯ ಪಾತ್ರ ಮನಸ್ಸಿನಲ್ಲುಳಿಯಿತು.
~ವಿಭಾ ವಿಶ್ವನಾಥ್
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ