ಪುಸ್ತಕದ ಶೀರ್ಷಿಕೆ : ಚಾಂದಬೀ ಸರಕಾರ
ಲೇಖಕರು : ಚಂದ್ರಶೇಖರ ಕಂಬಾರ
ಪ್ರಕಾಶಕರು : ಅಂಕಿತ ಪುಸ್ತಕ
ಪ್ರಥಮ ಮುದ್ರಣ : 2021
ಪುಟಗಳು : 124
ಬೆಲೆ : 150 ರೂ.
ಕವಿ ಹೃದಯದ ಕಂಬಾರರು ಕಥಾನಕವನ್ನು ನಿರೂಪಿಸುವಾಗ ಕಥಾವಸ್ತುವಿನ ಜೊತೆಗೆ ಕಥೆಯ ರಸಾನುಭವಕ್ಕೆ ಚೆಂದದ ಭಾಷೆಯನ್ನು ಬಳಸಿದ್ದಾರೆ. ಸಾಮಾಜಿಕ ಸಮಸ್ಯೆಯೊಂದರ ಕಾಲಘಟ್ಟ ಜೊತೆಗೆ ದುಷ್ಟ ಶಕ್ತಿಯನ್ನು ಮೀರಿ ನಿಲ್ಲಲು ಶಿಷ್ಟಶಕ್ತಿಗಳ ಒಂದಾಗುವಿಕೆ, ಇದೆಲ್ಲದರ ಜೊತೆಗೆ ಹಳ್ಳಿಯ ಹಾಗೂ ಜಾನಪದ ನಂಬಿಕೆಯನ್ನು ಮಿಸಳಿತಗೊಳಿಸಿ ಕಟ್ಟಿಕೊಟ್ಟಿರುವ ಕಾದಂಬರಿ ಇದು.
ದೇವರಾಜ ಅರಸು ಅವರು ಜಾರಿಗೆ ತಂದ ಕರ್ನಾಟಕ ಭೂಮಸೂದೆಯ ಕಾಲಘಟ್ಟದ ಕಥೆ ಇಲ್ಲಿದೆ. ಇದರ ಜೊತೆಗೆ ಬಯಲಾಟ ಹಾಗೂ ಆಟ ಪ್ರಯೋಗಿಸುತ್ತಲೇ ಕಥೆಯಾದ ಚಾಂದಬೀ ಕುರಿತು ಹೇಳುತ್ತಾರೆ.
ಬಯಲಾಟಗಳಲ್ಲಿ ಕಂಪನಿ ನಾಟಕಗಳಿಗೆ ಸರಿಸಮವಾಗಿ ವ್ಯಾವಹಾರಿಕವಾಗಿ ಯಶಸ್ವಿಯಾದ ಬಯಲಾಟವೆಂದರೆ ಶ್ರೀ ಕೃಷ್ಣ ಪಾರಿಜಾತವೊಂದೇ. ಶ್ರೀಕೃಷ್ಣ ಪಾರಿಜಾತ ಪ್ರದರ್ಶನಕ್ಕೆ ಎರಡು ಮೂರು ತಂಡಗಳಿದ್ದವು ಅಷ್ಟೇ. ಇದು ಹವ್ಯಾಸಿ ಕಲಾವಿದರಿಂದ ಆಗುವ ಕೆಲಸವಲ್ಲ. ಬದಲಾಗಿ ಪೂರ್ವ ತಯಾರಿ, ನುರಿತ ಕಲಾವಿದರು, ಮಹಾಭಾರತ ಮತ್ತು ಭಗವದ್ಗೀತೆಗಳ ದಟ್ಟ ಪರಿಚಯದೊಂದಿಗೆ ಶಾಸ್ತ್ರೀಯ ಸಂಗೀತದ ಜ್ಞಾನವಿರುವ ತಂಡ ಇಲ್ಲವೇ ಕನಿಷ್ಠ ಉಸ್ತಾದ ನಿಗಾದರೂ ಇದೆಲ್ಲದರ ಪರಿಚಯವಿರಬೇಕು. ಇಂತಹ ತಂಡದಲ್ಲಿ ಕಲಾವಿದೆಯಾಗಿದ್ದ.. ದೇವದಾಸಿಯಾಗಿ ಹುಟ್ಟಿ, ರಾಣಿಯಾದಾಗ ತನ್ನ ಪರಿಸರವನ್ನು ಸಂಸ್ಕರಿಸಿದ ಚಾಂದಬೀ ಸಂಕ್ರಮಣವನ್ನು ಸೂಚಿಸುತ್ತಾಳೆ. ಚಾಂದಬೀಯನ್ನು ಪ್ರತ್ಯಕ್ಷವಾಗಿ ಕಂಡಿದ್ದವರು ಲೇಖಕರು. ತಿಳಿದಷ್ಟು ಕಥೆಯ ಜೊತೆ ಚಾಂದಬೀಯನ್ನು ಕಟ್ಟಿಕೊಡುವ ಬಹಳ ವರ್ಷಗಳ ಕನಸೊಂದು ಅವರ ಈ ಕಾದಂಬರಿಯ ಮೂಲಕ ನನಸಾಗಿದೆ.
ಶಿವಾಪುರದ ಬಲದೇವ ನಾಯಕ ಹಿರಿಯರಿಂದ ಬಂದ ಜಮೀನು ಪದ್ಧತಿಯ ಒಡೆಯನಾಗಿದ್ದವನು. ಒಡೆಯನಾದರೂ ಕುಳಿತುಕೊಳ್ಳದೆ.. ಎಲ್ಲರಂತೆ ಅಥವಾ ಎಲ್ಲರಿಗಿಂತಲೂ ಹೆಚ್ಚಾಗಿ ಕೆಲಸ ಮಾಡುತ್ತಿದ್ದವನು. ಬೆಳಿಗ್ಗೆ ಎದ್ದರೆ ರಾತ್ರಿ ಮಲಗುವ ತನಕ ಆತನಿಗೆ ಕೆಲಸಗಳು ಕಾಣುತ್ತಿದ್ದವು. ಅಷ್ಟೇ ಕಟ್ಟುನಿಟ್ಟಾಗಿ ಕೆಲಸ ಮಾಡಿಸುತ್ತಲೇ ಗೇಣಿಯನ್ನು ಬಿಡದಂತೆ ವಸೂಲಿ ಮಾಡುತ್ತಿದ್ದ.
ಒಮ್ಮೆ ಸಮೃದ್ಧವಾಗಿ ಬೆಳೆದಿದ್ದ ಅವನ ಮೆಣಸಿನ ಹೊಲದಿಂದ ಹೇಳದೆ, ಕೇಳದೆ ಮೆಣಸಿನಕಾಯಿ ಕೊಯ್ದುಕೊಂಡು ಉ ಡಿ ತುಂಬಿಕೊಂಡ ಕೂಲಿ ಹೆಣ್ಣನ್ನು ಕಂಡು.. ಕಳ್ಳತನವನ್ನು ಕ್ಷಮಿಸದೆ, ಕಸಿದು ಕಳುಹಿಸುವಾಗ ಆಕೆ ಹೇಳಿದ ಮಾತೊಂದು ಆತನ ಮನದಲ್ಲಿ ಗಟ್ಟಿಯಾಗಿ ನಿಂತಿತ್ತು.
ಆಕೆ ಹೇಳಿದಂತಹ ಶಾಪದಂತಹ ಮಾತು ನಿಜವೇ ಅನ್ನಿಸಿತ್ತು ಅವನಿಗೆ. ಅದಾದ ನಂತರ.. ಆತ ಮದುವೆಯಾಗಬೇಕೆಂದು ಮನಸ್ಸು ಮಾಡಿ ತನಗೆ ತಕ್ಕಂತಹ ಹೆಣ್ಣನ್ನು ಹುಡುಕಲು ಶುರು ಮಾಡಿದ. ಅಷ್ಟಕ್ಕೂ.. ಕೂಲಿ ಆಳು ಆಡಿದ, ಹಸಿಗೋಡೆಯಲ್ಲಿ ಹರಳು ನೆಟ್ಟಂತಹ ಮಾತಾದರೂ ಏನು..?
ಮನೋಳಿಯ ಅಯ್ಯಾ ಸರಕಾರನ ಮಗಳು ಕಾವೇರಮ್ಮ ಆತನ ಮನಸ್ಸು ಜೊತೆಗೆ ಮನೆಯನ್ನು ತುಂಬಿದಳು. ಆದರೆ, ಕಾವೇರಮ್ಮನಿಗೆ ರಾಜಮನೆತನದ ಧಿಮಾಕು ಜೊತೆಗೆ ಪ್ರದರ್ಶಕ ಬುದ್ಧಿಯ ಕನಸಿತ್ತು. ಹಾಗಿದ್ದ ಆಕೆಗೆ ಶಿವಪುರದ ವಾಡೆ ಚಿಕ್ಕದಾಗಿ ಕಂಡಿತ್ತು. ಸಿರಿವಂತಿಕೆಯಲ್ಲಿ ಮೆರೆಯಬೇಕೆನ್ನುವ ಗತ್ತು ತೋರಿಸಬೇಕೆನ್ನುವ ಪತ್ನಿ ಹಾಗೂ ಮೈಮುರಿದು ದುಡಿಯುತ್ತಾ ಕಷ್ಟಜೀವಿಯಾಗಿದ್ದ ಗಂಡ ಇವರ ದಾಂಪತ್ಯ ಜೀವನ ಚೆನ್ನಾಗಿಯೇ ಸಾಗಿತ್ತು. ಮಗಳಿಗೆ ಕಷ್ಟವಾಗಬಾರದೆಂದು ತಂದೆಯೇ ಆಕೆಗೆ ಬೇಕಾದ ಅನುಕೂಲ ಮಾಡಿಸಿಕೊಟ್ಟಿದ್ದರು. ಬಲದೇವ ನಾಯಕ ತೋಟದಲ್ಲಿ ಕಟ್ಟಿಸಿದ 'ವಿಲಾಸ್ ಖಾನಾ'ವನ್ನು ಆಕೆ ನೋಡಲೇ ಇಲ್ಲ.
ಐದು ವರ್ಷದ ದಾಂಪತ್ಯ ಜೀವನದಲ್ಲಿ ಆಕೆ ಗರ್ಭಿಣಿಯಾದಳೆಂದು ಸಂತೋಷಪಡುವಷ್ಟರಲ್ಲಿಯೇ ಹಿಂದೆಯೇ ಗರ್ಭಪಾತ. ಹೀಗೆ ಮೂರು ಗರ್ಭಪಾತವಾದಾಗ ಭವಿಷ್ಯವಾಣಿ, ಜ್ಯೋತಿಷ್ಯ, ಮಂತ್ರ-ಮಾಟ, ಯಜ್ಞ-ಯಾಗ ಎಲ್ಲವೂ ಕಾವೇರಮ್ಮನಿಂದ ನಡೆದು ಹೋಗಿದ್ದವು. ದಾಂಪತ್ಯದಲ್ಲಿ ವಿರಸ ಶುರುವಾಗಿತ್ತು. ತನಗಂಟಿದ ಅನಿಷ್ಟಕ್ಕೆ ಗಂಡನ ದುರ್ದೈವವೇ ಕಾರಣವೆಂದು ಆಲೋಚಿಸುತ್ತಿದ್ದವಳಿಗೆ ಕೊರವಂಜಿಯ ನುಡಿಯೊಂದು ಆಕೆ ತವರಿಗೆ ಹೋಗುವಂತೆ ಮಾಡಿತು. ಕೊರವಂಜಿಯ ಮಾತಿನಂತೆ ಮಗು ಉಳಿಯಿತು. ಆದರೆ, ಮಗುವನ್ನು ತಂದೆ ಮುಟ್ಟುವಂತಿರಲಿಲ್ಲ. ಕೊರವಂಜಿಯ ನುಡಿಯಾದರೂ ಏನಿತ್ತು..?
ಕೃಷ್ಣಾ ಹುಟ್ಟಿದ ಎರಡು ತಿಂಗಳ ಹೊತ್ತಿಗೆ ಕಾವೇರಮ್ಮ ತೀರಿ ಹೋದಳು. ಆಕೆಯ ತಂಗಿ ಸೀತಾ ಲಕ್ಷ್ಮಿ ಮಗುವನ್ನು ಅಕ್ಕರೆಯಿಂದ ನೋಡಿಕೊಳ್ಳುತ್ತಿದ್ದಳಾದರೂ ಬಲದೇವ ನಾಯಕ ಅವಳನ್ನು ಮದುವೆಯಾಗಲು ಒಪ್ಪಲಿಲ್ಲ. ಇತ್ತ ಮನೆ ತುಂಬಾ ಜನ ಇದ್ದರೂ ಕೃಷ್ಣಾ ಒಂಟಿಯಾದಂತೆ.. ಅಲ್ಲಿ ಜೊತೆಯಿಲ್ಲದ ಬಲದೇವ ನಾಯಕ ಒಂಟಿಯಾದ.
ಈ ಸಂದರ್ಭದಲ್ಲಿಯೇ ಕೃಷ್ಣಪಾರಿಜಾತವನ್ನು ನೋಡಿದ ಬಲದೇವನಾಯಕನ ಮನಸ್ಸು ತುಂಬಿದ್ದು ಚಾಂದಬೀ. ಚಾಂದಬೀಯ ಹಿನ್ನೆಲೆ, ಆಕೆಯ ವೈವಾಹಿಕ ಜೀವನವಿದ್ದರೂ ಅದು ಸಫಲವಾಗಿರಲಿಲ್ಲ. ಅಲ್ಲದೆ, ಅವಳ ಸಂತಾನವೂ ಉಳಿಯಲಿಲ್ಲ. ಆಕೆಯ ಬದುಕಿನ ಸೂಕ್ಷ್ಮ ವಿಚಾರಗಳು ತಿಳಿದಿದ್ದರೂ ಬಲದೇವ ನಾಯಕ ಆಕೆಯನ್ನು ಪತ್ನಿಯಾಗಿ ಸ್ವೀಕರಿಸುತ್ತಾನೆ. ಚಾಂದಬೀಯ ಹಿನ್ನೆಲೆ ಹಾಗೂ ಆಕೆಯ ಬಯಲಾಟದ ವೈಖರಿಯನ್ನು ಓದಿ ನೋಡಿ.
ಇತ್ತ ಎರಡನೆಯ ಮದುವೆಯ ಸಮಾರಂಭವನ್ನು ಬಲದೇವ ನಾಯಕ ಅದ್ದೂರಿಯಲ್ಲಿ ಆಚರಿಸಿದರೆ, ಮನೋಳಿಯ ವಾಡೆಯಲ್ಲಿ ಅದನ್ನು ಕರಾಳ ದಿನವೆಂದೇ ಆಚರಿಸಿದರು. ವಾಡೆಗೆ ಬೀಗ ಬಿದ್ದಿತ್ತು. ತಲೆಕೆಡಿಸಿಕೊಳ್ಳದ ನಾಯಕ ಹಾಗೂ ಚಾಂದಬೀ ಇಬ್ಬರೂ ವಿಲಾಸ ಖಾನಾದಲ್ಲಿ ವಾಸ್ತವ್ಯ ಹೂಡಿದರು. ಆಕೆಯ ಜೊತೆಗಾತಿಯಾಗಿ ಜೊತೆಯಾದದ್ದು ಗಜಲಿಂಗವ್ವ. ಬಲದೇವ ನಾಯಕನ ಮಗನ ಹೆಸರು ಕೃಷ್ಣಾ ಎಂದು ತಿಳಿದಾಗ ಚಾಂದಬೀ ಕನಸಿಗೆ ರೆಕ್ಕೆಗಳು ಮೂಡಿದ್ದವು. ಅದರ ಹಿನ್ನೆಲೆಯಲ್ಲಿ ಆಕೆಯ ಮಾತೃತ್ವದ ಹಂಬಲ ಎಷ್ಟೆಂಬುದು ಅರಿವಾಗುತ್ತದೆ.
ವಿಲಾಸ ಖಾನಾದಲ್ಲಿ ಬೇಕಾದಷ್ಟು ಆಳುಗಳಿದ್ದರು ಅವರೆಲ್ಲರೂ ಆಕೆಯನ್ನು ಚಾಂದಬೀ ಸರಕಾರ ಎಂದೇ ಕರೆಯತೊಡಗಿದರು. ಇವರೆಲ್ಲ ತನಗೆ ಚೇಷ್ಟೆ ಮಾಡುತ್ತಿರಬಹುದು ಎಂದು ಆಕೆ ತನ್ನ ಗಂಡನ ಬಳಿ ಹೇಳಿದಾಗ ಈ ಮನೆತನದ ಸೊಸೆಯಂದಿರೆಲ್ಲ ಸರಕಾರಗಳೇ ಎಂದನು. ತನಗೆ ಹಾಗೆ ಕರೆಯಬಾರದೆಂದು ಹೇಳಿದಾಗ ಬಂದ ಪ್ರತಿಕ್ರಿಯೆಯೇನು..?
ಆ ಹೆಸರಿನ ಘನತೆಗೆ ತಕ್ಕಂತೆ ಆಕೆ ತೆಗೆದುಕೊಳ್ಳುತ್ತಿದ್ದ ತೀರ್ಮಾನಗಳು ಹಾಗೂ ಹೊಣೆಗಳನ್ನು ಕಂಡಾಗ ಆಕೆಗೆ ಆ ಪದ ಎಷ್ಟು ಒಪ್ಪುತ್ತದೆಂದು ಅರಿವಾಗುತ್ತದೆ.
ಶಿವಾಪುರದ ಹೊರಗಿನ ಪ್ರದೇಶಗಳಲ್ಲಿ ಕಳ್ಳ ಭಟ್ಟಿಯ ಹಾವಳಿಯಿಂದ ಉಂಟಾದ ಉಪದ್ವಾಪಗಳು ಏನಿದ್ದವು..? ಇದರಲ್ಲಿ ಅಯ್ಯಾ ಸರಕಾರ ಹಾಗೂ ಬಡ್ಡಿ ಬಂಗಾರಮ್ಮನ ಪಾತ್ರಗಳು ಏನಿದ್ದವು..?
ಚಾಂದಬೀ ಕಾಡಿನ ದೃಶ್ಯ ನೋಡುವಾಗ ಅಲ್ಲಿದ್ದ ಸಂಪಿಗೆ ಮರ ಆಕೆಯನ್ನು ಸೆಳೆದಿತ್ತು. ಸೊಗಸಾಗಿ ಆಕ್ರಮಿಸಿಕೊಂಡ ಸಂಪಿಗೆ ಮರಕ್ಕೆ ಬಹಳ ದೊಡ್ಡ ಇತಿಹಾಸವೇ ಇತ್ತು. ಅಲ್ಲದೇ ಗೌರವವೂ ಇತ್ತು. ಮನೆತನದ ಪದ್ಧತಿಯಂತೆ ಅದಕ್ಕೆ ಪೂಜೆಯೂ ಸಲ್ಲಬೇಕಿತ್ತು. ಅಂತಹ ಒಂದು ಶುಭ ಸಂದರ್ಭದಲ್ಲಿ ಚಾಂದ ಬೀಗೆ ಊರಿನಲ್ಲಿ ಹೆಣ್ಣುಮಕ್ಕಳಿಗಾಗಿ ಶಾಲೆಯೊಂದನ್ನು ತೆರೆಯುವ ಕನಸು ಸಿಕ್ಕಿದ್ದು.
ಕಾವೇರವ್ವ ಕನ್ನಡ ಹೆಣ್ಣು ಮಕ್ಕಳ ಶಾಲೆ ಎಂದು ಹೆಸರಿಡಬೇಕೆಂದು, ಅದರ ಉದ್ಘಾಟನೆಗೆ ಮನೋಳಿಯ ಅಯ್ಯಾ ಸರಕಾರನನ್ನು ಆಮಂತ್ರಿಸಬೇಕೆಂದು.. ಈ ವಿಷಯದಲ್ಲಿ ಬೆಳಗಾವಿಯ ಡಿ.ಸಿ ಸಾಹೇಬರು ಮುಂದೆ ನಿಂತು ಎಲ್ಲದಕ್ಕೂ ಸರಿಯಾದ ಮಾರ್ಗದರ್ಶನ ನೀಡಬೇಕೆಂಬ ದಂಪತಿಗಳ ಕನಸು ಏನಾಯಿತು..?
ಮನೋಳಿಯ ವಾಡೆಯಲ್ಲಿ ಚಾಂದಬೀಯನ್ನು ಕಾಣುತ್ತಿದ್ದ ಬಗೆ ಹೇಗಿತ್ತು..? ಈ ಪ್ರಸ್ತಾಪವನ್ನು ಹೊತ್ತು ಹೋದ ಬಲದೇವ ನಾಯಕನಿಗೆ ಸಂದ ಮರ್ಯಾದೆ ಏನು..? ಸೀತಾಲಕ್ಷ್ಮಿಯ ವಿವಾಹದ ಸಂದರ್ಭ ನಡೆದ ಘಟನೆ ಮನೋಳಿಯ ವಾಡೆಯಲ್ಲಿ ಪ್ರತಿಬಿಂಬಿತವಾಗಿದ್ದು ಹೇಗೆ..?
ಬಡ್ಡಿ ಬಂಗಾರಮ್ಮನ ವೈವಾಹಿಕ ಬದುಕು ಹೇಗಿತ್ತು..? ಆಕೆಯ ಮಗಳು ಚಾಂದಬೀಯನ್ನು ಆಶ್ರಯಿಸಿ ಬಂದಾದರೂ ಏಕೆ..? ಅಯ್ಯಾ ಸರ್ಕಾರನ ಬಲಗೈಯಂತಿದ್ದ ಬಡ್ಡಿ ಬಂಗಾರಮ್ಮನ ಅವಸಾನ ಹೇಗಾಯಿತು?
ಇಲ್ಲಿ ಕೃಷ್ಣಾನ ವ್ಯಕ್ತಿತ್ವ ಬಹಳ ಇಷ್ಟವಾಗುತ್ತದೆ. ಮಗನಂತೆಯೇ ಕಂಡ ತಾಯಿಗೆ ಅಷ್ಟೇ ಗೌರವ, ಆದರವನ್ನು ನೀಡುವ ಕೃಷ್ಣ ಸೇವಾ ಮನೋಭಾವವನ್ನು ಬೆಳೆಸಿಕೊಂಡದ್ದು ಹೇಗೆ..? ಆತ ಬೆಳೆದ ಪರಿಸರ ಹೇಗಿತ್ತು..? ಆತ ತನ್ನ ತಂದೆ ಹಾಗೂ ಶಿವಾಪುರವನ್ನು ಬಂದು ಸೇರಿದ್ದು ಹೇಗೆ..? ಕೃಷ್ಣಾ ಶಿವಾಪುರದ ಮುಂದಿನ ಪೀಳಿಗೆಯ ನಾಯಕನಾಗುವ ಎಲ್ಲಾ ಯೋಗ್ಯತೆಯನ್ನು ಹೊಂದಿದ್ದಾನೆ ಎನ್ನಿಸಿತು.
ದೇವದಾಸಿ ಕುಲದ ಹೆಣ್ಣುಗಳು ಊರ ಸಮುದಾಯವನ್ನೇ ಅಭಿವೃದ್ಧಿಯ ಹಾದಿಯಲ್ಲಿ ನಡೆಸಲು ಹೊರಟಾಗ ಆ ಹಾದಿಯಲ್ಲಿ ಕಲ್ಲು-ಮುಳ್ಳಿನಂತೆ ಕ್ರೌರ್ಯ, ಕುತಂತ್ರಗಳು ಇದ್ದಂತೆಯೇ.. ಆ ಕೆಲಸಕ್ಕೆ ಅಡಿಪಾಯವಾಗಿ ನಿಲ್ಲುವ ಮಕ್ಕಳೂ ಇದ್ದರು. ಹಳ್ಳಿಯ ತಾಯಿಯಾಗುವ ಚಾಂದಬೀ ಸರಕಾರ ಇಲ್ಲಿ ಹೊರಗಿನ ದುಷ್ಟ ಶಕ್ತಿಗಳೊಂದಿಗೆ ಹೋರಾಡಿದ್ದು ಹೇಗೆ..? ಅಂತ್ಯ ಕೊಂಚ ಸಿನಿಮೀಯವೆನ್ನಿಸಿತು ನನಗೆ.
ಇಲ್ಲಿ ಶಿವಾಪುರದ ಬೃಹತ್ ಹಳೆಯ ಸಂಪಿಗೆ ಮರ, ಗಜಲಿಂಗವ್ವ, ಜೋಗತಿಯರು, ಮರದವ್ವನ ಜಾನಪದದ ದೃಶ್ಯಗಳು ಕಣ್ಣಿಗೆ ಕಟ್ಟುವಂತಿವೆ.
ಭೂತಕಾಲದ ನೆರಳು ಭವಿಷ್ಯದ ಹಾದಿಯ ಮೇಲೆ ಬೀಳಬಾರದೆಂದರೆ ಅದಕ್ಕೆ ಮನುಷ್ಯನಲ್ಲಿನ ಪ್ರಜ್ಞೆ ಗಟ್ಟಿ ಇರಬೇಕು. ನಿಲುವು ಸ್ವಸ್ಥವಾಗಿರಬೇಕು. ಎಲ್ಲವನ್ನೂ ಎದುರಿಸಿ ನಿಲ್ಲುವ ತಾಕತ್ತಿರಬೇಕು. ಹೆಣ್ಣು ಮನಸ್ಸು ಮಾಡಿದರೆ ಎಷ್ಟು ಅಭಿವೃದ್ಧಿ ಮಾಡಬಲ್ಲಳು ಎನ್ನುವುದನ್ನು ಸಮರ್ಥವಾಗಿ ಕಟ್ಟಿಕೊಡುವ ಕಾದಂಬರಿಯಿದು.
~ವಿಭಾ ವಿಶ್ವನಾಥ್
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ